Saturday, May 23, 2009

ಮೌನ-ಕಣ್ಣೀರು

ದುಃಖ ಉಮ್ಮಳಿಸಿ ಕಣ್ಣೀರು ಬರಿಸಿದೆ.
ನೋವ ಕರಗಿಸುವುದೇ ಈ ಕಣ್ಣೀರು...?
ಬೇಸರ ಬರ ಸೆಳೆದು ಮಾತಿಗೆ ಕಡಿವಾಣವಾಗಿದೆ.
ಮೌನ ಮರೆಸುವುದೆ ಈ ಬೇಸರ....?

ಹೃದಯದ ಭಾರ ಇಳಿಸುವುದೇ ಈ ಕಣ್ಣೀರು
ಮನದ ಬೇಸರ ನಿಲ್ಲಿಸುವುದೇ ಈ ಮೌನ
ಕಣ್ಣು ಕಣ್ಣು ಕಲೆತು ಕಣ್ಣೀರಿಗೆ ಶರಣು
ಮಾತು ಮಾತಿಗೆ ಬೆರೆತು ಮೌನಕ್ಕೆ ಮರುಳು

ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ
ವಿಶಾಲ ಮನಕೆ ನಗುವ ಸುಂದರ ಮೊಗಕೆ
ಮೌನದಿ ಮಾತು ಮರೆಮಾಚಿಸುವೇಕೆ

ದುಃಖ ದುಮ್ಮಾನ ಎಲ್ಲರ ಜೀವನದ ಕರಿನೆರಳು
ಅದ ನಿಭಾಯಿಸಲು ಕಲಿಯಬೇಕಿದೆ ಜೀವನದ ತಿರುಳು
ನಿನ್ನ ಕಣ್ಣ ರೆಪ್ಪೆಗೆ ಕರಿನೆರಳು ತಾಕದಿರಲಿ
ಮೌನ ಮನಕೆ ಜೀವನದ ತಿರುಳು ಅರಿತಿರಲಿ

ಮನದ ತುಡಿತಕೆ ಕಣ್ಣಿಗೇಕೆ ಕಣ್ಣೀರ ಸೆಳೆತ
ಮನದ ಮಿಡಿತಕೆ ಮಾತಿಗೇಕೆ ಮೌನದ ತುಳಿತ
ಕಣ್ಣ ನೋಟಕೆ ಕಾಣುವುದೆಲ್ಲವೊ ಹಸಿರ ನಿಸರ್ಗ
ಮೌನ ದೂಡಿ ಮುತ್ತಂತ ಮಾತಾನಾಡಿದೊಡೆ ಅಲ್ಲೇ ಸ್ವರ್ಗ....

23 comments:

Roopa said...

ಮೇಡಂ
ಆರಂಭದಲ್ಲಿ ಕವನ ಮನದ ದುಗುಡ ಹೆಚ್ಚಿಸುತ್ತಿದೆ. ಮೊದಲೇ ಇದ್ದ ಕಾರ್ಮೋಡ ಹೆಪ್ಪುಗಟ್ಟುತ್ತಿದೆ ಎನಿಸುತ್ತಿದ್ದಂತೆ ಅದಕ್ಕೆ ಸಾಂತ್ವಾನ ತೋರುವಂತೆ ಕವನದ ಅಂತ್ಯ ವಿದೆ
ಮನಸಿಗೆ ತಟ್ಟಿ ಕಣ್ಣಲ್ಲಿ ಹೆಪ್ಪು ಗಟ್ಟಿದ್ದ ನೀರನ್ನು ಧುಮ್ಮಿಕ್ಕಲು ಹೇಳಿತು. ಚೆನ್ನಾಗಿದೆ.
ಒಂದಂತೂ ನಿಜ ಮನದ ನೋವು ಹೊರಬರಲು ಕಣ್ಣೆರೆಡೆ ಆಸರೆ ಕಣ್ಣೀರ ಮೂಲಕ

PARAANJAPE K.N. said...

ಕವನ ಚೆನ್ನಾಗಿದೆ. " ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ " ಈ ಪ್ಯಾರಾ ಹಿಡಿಸಿತು.

shivu.k said...

ಮನಸು ಮೇಡಮ್,

ಕವನ ಪ್ರಾರಂಭದಲ್ಲಿ ದುಃಖದಿಂದ ಶುರುವಾಗಿ ನಿದಾನವಾಗಿ ಅದನ್ನು ಹೋಗಲಾಡಿಸುವ ಬಯಕೆಯನ್ನು ವ್ಯಕ್ತಪಡಿಸುತ್ತದೆ...

ದುಃಖ ದುಮ್ಮಾನ ಎಲ್ಲರ ಜೀವನದ ಕರಿನೆರಳು
ಅದ ನಿಭಾಯಿಸಲು ಕಲಿಯಬೇಕಿದೆ ಜೀವನದ ತಿರುಳು
ನಿನ್ನ ಕಣ್ಣ ರೆಪ್ಪೆಗೆ ಕರಿನೆರಳು ತಾಕದಿರಲಿ
ಮೌನ ಮನಕೆ ಜೀವನದ ತಿರುಳು ಅರಿತಿರಲಿ

ಈ ಸಾಲುಗಳಂತೂ ತುಂಬಾ ಅರ್ಥಗರ್ಭಿತವಾಗಿವೆ...

ಧನ್ಯವಾದಗಳು.

Ittigecement said...

ಮನಸು...

ಸೊಗಸಾದ ಕವನ....

ಹ್ರದಯದಲ್ಲಿ ಹೆಪ್ಪುಗಟ್ಟಿದದ..
ದುಃಖ ಕಣ್ಣೀರಾಗಿ ಬರುವದೇತಕೆ...?
ದುಃಖವಾದಾಗ ಮಾತು ಮೌನವಾಗುವದೇತಕೆ..?

ಕಣ್ಣೀರ ಭಾವಗಳು ಚೆನ್ನಾಗಿ ಚಿತ್ರಿಸಿದ್ದೀರಿ...
ಅದಕ್ಕೆ ಪೂರಕವಾದ ಫೋಟೊ ಕೂಡ ಇಷ್ಟವಾಯಿತು...

ಅಭಿನಂದನೆಗಳು...

ಮನಸು said...

ರೂಪ ಬಹಳ ಧನ್ಯವಾದಗಳು ನಿಮ್ಮ ಅನಿಸಿಕೆಗೆ... ದುಃಖ ಸಾವರಿಸಿಕೊಳ್ಳಲು ಸಾಂತ್ವನ ಮಾಡಿಕೊಳ್ಳಲೇ ಬೇಕಲ್ಲವೆ..? ನಿಜ ನೀವು ಹೇಳೊದು ಮನಸಿನ ಸಮಾಧಾನಕ್ಕೆ ಕಣ್ಣೀರು ಸುರಿಸಿದರೆ ಅದು ಆಸರೆ ಕೂಡ ಆಗುತ್ತೆ.

ಪರಂಜಪೆ ಸರ್
ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ಇರಲಿ.

ಮನಸು said...

ಶಿವು ಸರ್
ಕೆಲವೊಮ್ಮೆ ದುಃಖ ಬಂದು ಆನಂತರ ನಿಧಾನಗತಿಯಲ್ಲಿ ಎಲ್ಲವನ್ನು ಮರೆಯುತ್ತೆವೆ. ದುಃಖ ಬಂದಮೇಲೆ ಅದನ್ನು ನಿವಾರಿಸಿಕೊಳ್ಳಬೇಕಲ್ಲವೆ.ನಿಮ್ಮ ಅನಿಸಿಕೆ, ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು

ಪ್ರಕಾಶಣ್ಣ
ಕಣ್ಣೀರು, ಮೌನ ಎಲ್ಲವೊ ನಮ್ಮ ಹಿಂಬಾಲಕರು ಅಲ್ಲವೆ? ನಿಮ್ಮ ಅನಿಸಿಕೆ, ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು

Prabhuraj Moogi said...

"ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ".. ಈ ಸಾಲು ಎಷ್ಟು ಓದಿದರೂ ಮತ್ತೆಮತ್ತೆ ಓದಬೇಕೆನಿಸುವಷ್ಟು ಸುಂದರವಾಗಿದೆ(ಅದಕ್ಕೆ ಅದು ನನ್ನ ದೆಸ್ಕಟಾಪ್ ಮೇಲಿನ ನೋಟ್ ನಲ್ಲಿ ಸ್ಥಾನ ಆಕ್ರಮಿಸಿದೆ), ಕಣ್ಣಿನ ಬಗ್ಗೆ ಇದಕ್ಕಿಂತ ಚೆನ್ನಾಗಿ ಏನೂ ಬರೆಯಲು ಸಾಧ್ಯವಿಲ್ಲ, ನಿಜಕ್ಕೂ ಈ ನಿಮ್ಮ ಕಲ್ಪನೆ ಅದ್ಭುತ. ಇನ್ನೂ ಹೀಗೆ ಹಲವು ಕವನಗಳ ನಿರೀಕ್ಷೆ ನಮ್ಮೆಲ್ಲರಿಗೆ...

ಮನಸು said...

ಧನ್ಯವಾದಗಳು ಪ್ರಭು,
ಅಂದಿನಿಂದ gtalk ನಲ್ಲಿ ಈ lines ನೋಡಿದಾಗಿನಿಂದ ಈ ಕವನ ಬ್ಲಾಗ್ ನಲ್ಲಿ ಹಾಕಿ ಎಂದು ಬಹಳಷ್ಟು ಬಾರಿ ಹೇಳಿದ್ದಿರಿ ಆದರೆ ನಾನು ಏಕೋ ಮನಸು ಮಾಡಲೇ ಇಲ್ಲ. ನನಗೆ ಈ ಕವನ ಇನ್ನು ಚೆನ್ನಾಗಿ ಬರಬೇಕಿತ್ತು ಎಂದೆನಿಸುತ್ತಲಿತ್ತು ಅದಕ್ಕೆ ತಡಮಾಡಿದೆ. ಎಲ್ಲರ ಅಭಿಪ್ರಾಯದಿಂದ ಈಗ ಸ್ವಲ್ಪ ಮನಸಿಗೆ ಸಮಾಧಾನವಾಗಿದೆ.
ನಿಮ್ಮ ಪ್ರೋತ್ಸಾಹವೇ ನನಗೆ ಪ್ರೇರಣೆ... ಸದಾ ನಮ್ಮೊಂದಿಗಿರಿ
ವಂದನೆಗಳು

ಜಲನಯನ said...

ಮನದ ತುಡಿತಕೆ ಕಣ್ಣಿಗೇಕೆ ಕಣ್ಣೀರ ಸೆಳೆತ
ಮನದ ಮಿಡಿತಕೆ ಮಾತಿಗೇಕೆ ಮೌನದ ತುಳಿತ
ಮನಸು, ನೀನೇಕೆ ಮಿಡಿವೆ ನೊಂದು
ಎವೆ ತೇವಕೆ ಸೊರಗುವುದೇ ಬೆಂದು
ಕಣ್ಣೀರು ಕರಗಿಸಲಿ ಹೆಪ್ಪುಗಟ್ಟಿಹ ದುಗುಡ
ತೊಯ್ದು ಕೊಚ್ಚಿಹೋಗಲಿ ದುಮ್ಮಾನದ ಬಗ್ಗಡ

ಈ ಸಾಲುಗಳನ್ನು ಸೇರಿಸಿಕೊಳ್ಳಿ..
ಬಹಳ ಚನ್ನಾಗಿ ಮೂಡಿದೆ ನಿಮ್ಮ ಭಾವಮಂಥನ ಅಕ್ಶ್ಕರಗಳಲ್ಲಿ....ಮುಂದುವರೆಯಲಿ..ಮಂಥನ

ಚಂದಿನ said...

"ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ"

ವಾಹ್!!! ಕ್ಯಾ ಬಾತ್ ಹೈ.

- ಚಂದಿನ

ಮನಸು said...

ಧನ್ಯವಾದಗಳು ಅಜಾದ್ ಸರ್,
ಸೇರಿಸಿಕೊಳ್ಳುತ್ತೇನೆ ನೀವು ಕೊಟ್ಟ ಸಾಲುಗಳನ್ನು...

ಚಂದಿನ ಸರ್,
ನಿಮ್ಮ ಮೆಚ್ಚುಗೆಗೆ ನಮ್ಮ ಧನ್ಯವಾದಗಳು
ವಂದನೆಗಳು

raj said...

chendhadha kavana

Sambhrama Washington said...

ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ

Super hagidhe Very Good writing

ಶಿವಪ್ರಕಾಶ್ said...

ಮನಸು ಅವರೇ,
ಮೌನ-ಕಣ್ಣೀರು ಕವನ ತುಂಬಾ ಚನ್ನಾಗಿದೆ.
ಕಣ್ಣಿನ ಚಿತ್ರ ಕೂಡ ಚನ್ನಾಗಿದೆ...
ಧನ್ಯವಾದಗಳು

ಮನಸು said...

ರಾಜ್,
ಬಹಳ ಧನ್ಯವಾದಗಳು ನಿಮ್ಮ ಅನಿಸಿಕೆಗೆ ಸದಾ ಅನಿಸಿಕೆಗಳು ಬರುತ್ತಲಿರಲಿ.

ಸಂಭ್ರಮ...
ನಿಮ್ಮ ಮೆಚ್ಚುಗೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸದಾ ಬರುತ್ತಲಿರಿ.

ಶಿವಪ್ರಕಾಶ್,
ನಿಮ್ಮ ಅನಿಸಿಕೆಗಳು ಸದಾ ನನಗೆ ಪ್ರೋತ್ಸಾಹದಾಯಕ
ವಂದನೆಗಳು

Unknown said...

ತುಂಬಾ ದಿನಗಳಿಂದ ಬ್ಲಾಗ್ ನೋಡೋಕೆ ಟೈಮ್ ಸಿಕ್ಕಿಲ್ಲ.... ಇವತ್ತು ಓದೋಣ ಅಂದುಕೊಂಡೆ ಆದರೆ ತುಂಬ ಕೆಲಸ ಇರೋದರಿಂದ ಹಿಂದಿನ ಬರಹಗಳನ್ನು ಓದಲು ಸಾಧ್ಯ ವಾಗಲಿಲ್ಲ... ಕವನ ಚೆನ್ನಾಗಿದೆ... ಆದ್ರೆ ಯಾಕೋ ಮುಕೇಶ್ ಕುಮಾರ್ ಥರ ನಿಮ್ಮ ಕವನಗಳು ದುಕ್ಖಮಯವಾಗಿವೆಯಲ್ಲಾ? ... ಉಳಿದ ಲೇಖನಗಳನ್ನು ಓದಲು ಮತ್ತೆ ಬರುವೆ...

ಧರಿತ್ರಿ said...

ಅಕ್ಕಾ..ಕವನದ ಆಶಯ ಚೆನ್ನಾಗಿದೆ. ಥತ್! ನಾನೂನು ಕಣ್ಣಿರು ಬಗ್ಗೆ ಲೇಖನ ಬರೆದಿದ್ದೆ. ಬದುಕಿಗೊಂದು ಸಾಂತ್ವಾನ ಈ ಕವನ..
-ಧರಿತ್ರಿ

ಮನಸು said...

ರವಿಕಾಂತ್,
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು ಹಾಗೆ ಇದು ಮುಕೇಶ್ ಕುಮಾರ್ ತರಹದ ದುಃಖವೇನಲ್ಲಾ, ನನಗೆ ನಾನೇ ಕೇಳಿಕೊಂಡ ಪ್ರಶ್ನೆ ಹಾ ಹಾ ಹಾ... ನೀವು ಬರುತ್ತಲಿರಿ ನಮ್ಮೂಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳುತ್ತಲಿರಿ... ಸಮಯ ಸಿಕ್ಕಾಗ ನಿಮ್ಮ ಭೇಟಿ ಸಾಗಲಿ.
ವಂದನೆಗಳು

ಧರಿತ್ರಿ,
ನಿಮ್ಮ ಲೇಖನ ನೋಡಿದಾಗ ನನ್ನ ಕವನ ನೆನಪಾಯಿತು ... ದುಃಖವೇ ಹಾಗೆ ಯಾವುದಾವುದೋ ಕಾರಣಕ್ಕೆ ದುಃಖ ಬಂದು ಬಿಡುತ್ತೆ ಅಲ್ಲವೇ..? ನಿಮ್ಮ ಅನಿಸಿಕೆ ಸದಾ ಬರಲಿ!!!
ವಂದನೆಗಳು

Dr.Gurumurthy Hegde said...

Manasu,

wonderful, mansina vedane chennagi vyaktavaagide

Anonymous said...

mouna kanniru iverdara arta ille ide thanks

Unknown said...

i like this...

Unknown said...

i like this

Ram...R.j said...

ಅಭಿಮಾನಿಯಾದೆ ನಾ ನಿಮ್ಮ ಕವನಕ್ಕೆ ಅಕ್ಕ...
ಇನ್ನು ಹೆಚ್ಚಿನ ನಿರೀಕ್ಷೆಯಲ್ಲಿ