Sunday, November 22, 2009

ಪ್ರಭಾತ್ ಕಲಾವಿದರು.....


ಪ್ರಭಾತ್ ಕಲಾವಿದರು
'ಪ್ರಭಾತ್' ಎಂಬ ಹೆಸರೇ ಹೇಳುವಂತೆ ಬೆಳಗುವ ಕಲಾವಿದರೇ ಸರಿ....ಕನ್ನಡ ಕಲೆಯನ್ನು ನಾಡಿನಾದ್ಯಂತ ಪಸರಿಸುತ್ತಿರುವ ಕಲಾವೃಂದಕ್ಕೆ ಆತ್ಮೀಯ ಅಭಿನಂದನೆಗಳು. ಇತ್ತೀಚೆಗಷ್ಟೆ ಕುವೈಟಿಗೆ ಆಗಮಿಸಿದ್ದ ಪ್ರಭಾತ್ ಕಲಾವಿದರ ಕಲಾಜೀವನದ ಹಾದಿಯ ಕಿರು ಪರಿಚಯ. ಹಾಗೂ ವಿಶೇಷ ಒಲವುಮೂಡಿಸಿದ ಆ ಕಲಾವೃಂದಕ್ಕೆ ನಮ್ಮ ಪ್ರೀತಿಯ ಕಿರುನುಡಿಯ ಹಣತೆ.
೧೯೩೦ರಲ್ಲಿ ಪ್ರಾರಂಭಗೂಂಡ ಒಂದು ಕಲಾವೃಂದ ಹಲವು ನಾಟಕ, ನೃತ್ಯರೂಪಕಗಳಿಗೆ ಹೆಸರುವಾಸಿಯಾಗಿದ್ದರು. ಈ ಕಲಾವೃಂದವನ್ನು ಗೋಪಿನಾಥ್,ಕರಿಗಿರಿ,ಜೈಸಿಂಹ,ದ್ವಾರಕನಾಥ್ ಎಂಬ ಕಲಾತಪಸ್ವಿಗಳು ತಮ್ಮ ಕಲಾವೃಂದಕ್ಕೆ ಗುರುರಾಜ ವಾದ್ಯವೃಂದ ಮತ್ತು ನಾಟಕ ಮಂಡಳಿ ಎಂಬ ಹೆಸರನ್ನಿಟ್ಟರು. ಇವರು ನಾಟಕ, ನೃತ್ಯ, ಹಾಡುಗಳು ಹಾಗೂ ಹರಿಕಥಾ ವಿಶೇಷತೆಗಳಲ್ಲೂ ಹೆಚ್ಚು ಒಲವಿತ್ತರು. ಮೊದಲು ತುಮಕೂರಿನಲ್ಲಿ ನೆಲೆಗೊಂಡಿದ್ದ ಕಲಾವಿದರು ಹೆಚ್ಚು ಪ್ರೇಕ್ಷಕರನ್ನು ಮನಸೆಳೆಯಲು ಬೆಂಗಳೂರಿಗೆ ಬಂದು ನೆಲೆಸಿದರು ಈ ತಂಡದ ಮೇಲ್ವಿಚಾರಕರಾಗಿ ಗೋಪಿನಾಥ್ ರವರು ತಮ್ಮ ತಂಡವನ್ನು ಮುನ್ನಡೆಸಿದರು. ೧೯೪೨ರಲ್ಲಿ ಪ್ರಭಾತ್ ಕಲಾವಿದರೆಂಬ ಹೆಸರಿಂದ ಮರುನಾಮಕರಣ ಮಾಡಿದರು. ಮೊಟ್ಟ ಮೊದಲು ಭಾರತೀಯ ಸಾಂಸ್ಕೃತಿಕ ನೃತ್ಯವನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೂ ಈ ಕಲಾವಿದರ ಪಾಲಾಗುತ್ತದೆ.

ಚಲನಚಿತ್ರ ಅಭಿನೇತ್ರಿಗಳಾದ ಸಿ.ಆರ್.ಸಿಂಹ, ಶ್ರೀನಾಥ್, ಮಂಜುಳ, ಲೋಕೇಶ್ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದು ಇದೇ ಕಲಾವಿದರ ತಂಡದಿಂದ, ಇವರೆಲ್ಲ ಚಿತ್ರರಂಗದ ಹಾದಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ತಮ್ಮ ನಾಟಕಗಳಲ್ಲಿ ಸುಮಾರು ೨೦ ನಾಟಕಗಳನ್ನು ಸಾದರಪಡಿಸಿದ್ದಾರೆ ಅವುಗಳಲ್ಲಿ ಕೆಲವು ಮೋಹಿನಿ ಬ್ರಹ್ಮಾಸುರ, ಕರ್ನಾಟಕ ವೈಭವ, ಕಿಂದರಿಜೋಗಿ,ರಾಮ ಪ್ರತಿಕ್ಷಾ,ಪುಣ್ಯಕೋಟಿ, ಧರ್ಮಭೊಮಿ, ದಶಾವತಾರ ಮುಂತಾದವುಗಳು. ಇಂತಹ ನೃತ್ಯರೂಪಕ ನಾಟಕ ಪ್ರಸ್ತುತ ಪಡಿಸುವುದು ಅತಿ ಸುಲಭದ ಮಾತಲ್ಲ ಅದಕ್ಕೆ ತಕ್ಕಂತ ವೇದಿಕೆ, ದೀಪಾಲಂಕಾರಗಳ ಪ್ರಭಾವ, ಹಿನ್ನೆಲೆ ಧ್ವನಿಗೆ ತಮ್ಮ ಮಾತು ಹೊಂದಾಣಿಕೆ, ಇವೆಲ್ಲವೂ ಬಲು ಕಷ್ಟದ ಕೆಲಸ ಅದಕ್ಕೆ ತಕ್ಕಂತ ಕಲಾವಿದರು ತಮ್ಮ ಶ್ರದ್ಧೆ ಒಲವೂ ಎಲ್ಲವನ್ನು ವಹಿಸಬೇಕಾಗುತ್ತದೆ. ಇಂತಹ ನೃತ್ಯರೂಪಕಗಳಿಗೆ ಸಾಹಿತ್ಯ,ಸಂಗೀತ ಜೋಡಣೆಗೆಂದೆ ಸಂಗೀತಸಾಹಿತ್ಯ ನಿರ್ಮಾಣಶಾಲೆಯನ್ನು ಪ್ರಭಾತ್ ಕಲಾವಿದರು ಹೊಂದಿದ್ದಾರೆ.ಇದೇ ಕಲಾವಿದರ ಅತಿ ಪ್ರಸಿದ್ಧ ನಾಟಕ ಸಿಂಡ್ರೆಲಾ ಈ ನಾಟಕವು ಸುಮಾರು ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವುದು ಅವರ ಕಲಾ ಪ್ರಬುದ್ಧತೆಯನ್ನು ಹಿಡಿದು ತೋರಿಸುತ್ತದೆ.

ಬರಿ ನಾಟಕ ನೃತ್ಯ ಇಷ್ಟಕ್ಕೆ ಮೀಸಲಿಡದೆ ತಮ್ಮ ವೃತ್ತಿಯನ್ನು ಉಡುಗೆ ತೊಡಿಗೆಗಳ ಬಾಡಿಗೆಗೆ ನೀಡುವಿಕೆ, ಸಂಗೀತ ಸಾಮಾಗ್ರಿಗಳು, ವೇದಿಕೆಗೆ ಬಳಸುವ ಸಾಮಗ್ರಿಗಳನ್ನು ಬಾಡಿಗೆಗೆ ನೀಡುತ್ತಲಿದ್ದಾರೆ, ನೃತ್ಯ ತರಬೇತಿಯನ್ನು ಸಹಾ ಹಲವು ಮಕ್ಕಳಿಗೆ ನೀಡುತ್ತಲಿದ್ದಾರೆ.

ಮತ್ತೊಂದು ವಿಶೇಷತೆ ಈ ಕಲಾಕುಟುಂಬದಲ್ಲಿದೆ ಅದೇನಂದರೆ ಅಮೇರಿಕಾ ಅಮೇರಿಕಾ ಖ್ಯಾತಿಯ ತಾರೆ ಹೇಮ ಪಂಚಮುಖಿ, ಹಾಗು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ಹರೀಶ್ ರವರು ಈ ಸಂಸ್ಥೆ ಸ್ಥಾಪಕರೊಬ್ಬರಾದ ಗೋಪಿನಾಥ್ ಅವರ ಮೊಮ್ಮಕ್ಕಳು ಇವರ ಸಾಧನೆಯೂ ಸಹ ಶ್ಲಾಘನೀಯ, ಹೇಮರವರು ಹಲವು ಮಕ್ಕಳಿಗೆ ನೃತ್ಯ ತರಬೇತಿದಾರರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಲಿದ್ದಾರೆ ಮತ್ತು ಹರೀಶ್ ಹಾಗೂ ಅವರ ಪತ್ನಿ ಕಿರುತೆರೆ ಅತಿ ಮುಗ್ಥ, ಸೌಮ್ಯ ಸ್ವರೂಪಿ ದೀಪಶ್ರೀ ದಂಪತಿಗಳಿಬ್ಬರು ಈ ಪ್ರಭಾತ್ ಕಲಾವಿದರ ಬಳಗಕ್ಕೆ ಹೆಮ್ಮೆಯ ಗರಿಗಳಾಗಿದ್ದಾರೆ.

ಕುಟುಂಬವನ್ನೇ ಕಲಾವಂತಿಕೆಯಲ್ಲಿ ಮುಳುಗಿಸಿಕೊಂಡ ಈ ಮನೋಘ್ನ ಅಭಿನೇತ್ರಿಗಳೂಂದಿಗೆ ನಾವುಗಳು ಕಳೆದ ಸಮಯ ನಮ್ಮ ಜೀವನದ ಅತಿ ಸಂತಸದ ಸಮಯ ಹಾಗು ಅವರ ತರಬೇತಿ ಮೇರೆಗೆ ನಾವು ಕಲಿತ ಕಿಂದರಜೋಗಿ ನಾಟಕದ ಪುಟ್ಟ ಪಾತ್ರ ನಮಗೆ ಖುಷಿಕೊಟ್ಟಿದೆ. ಇನ್ನು ಉತ್ತಮವಾಗಿ ಮಾಡಬೇಕಿತ್ತೆಂಬ ಅಭಿಲಾಷೆಯು ಇದೆ.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಸಂತಸ ತರಿಸಿದೆ. ಅವರಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.

ಹರೀಶ್ ಅವರು ನೀಡಿದ ರಾಮ, ವಿಷ್ಣು,ಕಿಂದರಜೋಗಿ ಮುಂತಾದವು..ಎಲ್ಲ ಪಾತ್ರಗಳನ್ನು ನಾವು ಕಣ್ಣಾರೆ ಕಂಡೆವು ಈ ಪಾತ್ರಗಳಿಗೆ ಕಿಂಚಿತ್ತೂ ಕುತ್ತು ಬರದಹಾಗೆ ಆಯಾ ಪಾತ್ರಕ್ಕೆ ಕಳೆತುಂಬಿದ್ದರು.ಇನ್ನು ದೀಪಶ್ರೀರವರು ಸೀತೆಯ ಪಾತ್ರವನ್ನು ಅತಿ ಮುಗ್ಧತೆಯಿಂದ ನಿರ್ವಹಿಸಿದರು ಹಾಗೂ ಪುಣ್ಯಕೋಟಿ ಪಾತ್ರದಲ್ಲಿ ತಾವೇ ಆ ಪುಣ್ಯಕೋಟಿಯೇನೋ ಎಂಬಂತೆ ಆ ಪಾತ್ರದಲ್ಲೇ ಐಕ್ಯರಾಗಿಬಿಟ್ಟಿದ್ದರು...ಅವರು ತಬ್ಬಲಿಕರುವಿನ ತಬ್ಬಿ ಮುದ್ದಾಡಿ ಇತರ ಹಸುಗಳಿಗೆ ಕಂದಮ್ಮನನ್ನು ನೀಡುವಾಗಿನ ದೃಶ್ಯ ಇಂದಿಗೂ ಕಣ್ಣುಕಟ್ಟಿದಂತಿದೆ...ಎಷ್ಟೋ ಮಂದಿ ಪ್ರೇಕ್ಷಕರು ತಾಯಿ ಮಗು ಅಗಲಿಕೆಗಾಗಿ ನೊಂದು ಕಣ್ಣೀರ ಸುರಿಸಿದ್ದು ಉಂಟು ಅಷ್ಟು ಮನೋಘ್ನ ಅಭಿನಯ ದೀಪಶ್ರೀರವರದು.ಇವರಿಬ್ಬರಷ್ಟೆ ಅಲ್ಲ ಅವರೊಂದಿಗೆ ಪಾತ್ರ ನಿರ್ವಹಿಸಿದ್ದ ಕಿಂದರಿಜೋಗಿಯ ಗೌಡ ಹಾಗೂ ಅಲೆಗ್ಸಾಂಡರ್ ಪಾತ್ರಧಾರಿ, ಲಕ್ಷ್ಮಣ,ಜಟಾಯು,ಹುಲಿ, ಕೃಷ್ಣ, ಹಲವು ನೃತ್ಯ ಕಲಾವಿದರೂ ಎಲ್ಲರೂ ಅದೇನು ಅಭಿನಯ ಒಬ್ಬೂಬ್ಬ ಕಲಾವಿದರೂ ೩,೪ ಪಾತ್ರಧಾರಿಗಳಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವಕಳೆ ತುಂಬಿದರು.

ಹರೀಶ್, ದೀಪ ಹಾಗೂ ಎಲ್ಲಾ ಪಾತ್ರ ವೃಂದದವರಿಗೆ ನಮ್ಮ ನಮನಗಳು.

ಕೆಲವು ನಾಟಕದ ಚಿತ್ರಗಳು...


















ಎಷ್ಟೋ ಜನರಿಗೆ ನಮ್ಮಲ್ಲೇ ಇರುವ ಪ್ರತಿಬೆಗಳು ಕಾಣುವುದಿಲ್ಲ, ಇಂತಹ ಕಲಾ ಆರಾಧಕರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಜೊತೆಗೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವುದು ನಮ್ಮ ನಿಲುವು ಸಹ ಆಗಿರಬೇಕು ಅಲ್ಲವೆ..?




Saturday, November 14, 2009

ಮರುಭೂಮಿಯಲ್ಲಿ ಕನ್ನಡವೈಭವ

ರಜತ ಮಹೋತ್ಸವದ ಸಂಭ್ರಮತೆಯ ಸಭಾಂಗಣಕ್ಕೆ ಹೂಕ್ಕುವ ಮುನ್ನವೇ ಎದ್ದು ಕಾಣುತ್ತಿತ್ತು ಒಳಗಿನ ಅದ್ದೂರಿ ಮುಂಭಾಗಿಲ ರಂಗೋಲಿಯಲಿ, ಗಣಪನ ಮೂರ್ತಿ, ಹೆಂಗಳೆಯರ ನಗು ನಗುವಿನೊಂದಿಗೆ ಸಾಂಪ್ರದಾಯಕ ಆಹ್ವಾನ ಎಲ್ಲವೂ ಎಲ್ಲರ ಮನಸಿಗೆ ಸಂತಸ ನೀಡಿತ್ತು, ಹಾಗೆ ಮುಂದೆ ಸಾಗಿದರೆ ಅಲ್ಲೇ ಮಕ್ಕಳ ಸೈನ್ಯ ಕಾದಿತ್ತು ಏನಿದು ಈ ಮಕ್ಕಳು ಹೀಗೆ ತರತರನಾದ ವೇಷಭೂಷಣಗಳಲ್ಲಿ ಮಿಂಚುತ್ತಿರುವರೆಂದು ನೋಡ ನೋಡುತ್ತಲಿದ್ದಂತೆ ಭಾರತದ ರಾಯಭಾರಿಗಳಾದ ಅಜಯ್ ಮಲ್ಹೋತ್ರರವರನ್ನು ಹಾಗೂ ಹಲವಾರು ಗಣ್ಯರ ಆಗಮನ ಕೋರಲು ಈ ಮುದ್ದು ಮಕ್ಕಳು ಕನ್ನಡನಾಡ ಕಲೆ ಸಂಸ್ಕೃತಿಯನ್ನು ತಮ್ಮ ವೇಷಭೂಷಣದಲ್ಲೇ ಬಿಂಬಿಸುತ್ತ ಎಲ್ಲರನ್ನು ಆಹ್ವಾನಿಸಿದರು ಆ ಮೆರವಣಿಗೆ ದಸರಾ ಮೆರವಣಿಗೆಯಂತೆ ಕಂಡದ್ದು ನಿಜವೇ ಸೈ.

ಮುಖ್ಯ ಅತಿಥಿಗಳೆಲ್ಲ ಆಸೀನರಾಗುತ್ತಲಿದ್ದಂತೆ ಸಮಾರಂಭವು ಕುವೆಂಪುರವರ ನಾಡಗೀತೆ ಭಾರತ ಜನನಿಯ ತನುಜಾತೆ.... ಎಂಬ ಹಾಡಿನಿಂದ ಮೊಳಗುತ್ತಿದ್ದಂತೆ ಎಲ್ಲಿದ್ದರೋ ಬಸವಣ್ಣ, ವಿದ್ಯಾರಣ್ಯ, ರನ್ನ,ಪೊನ್ನ, ಹಿಂದೊ ಕ್ರೈಸ್ತ, ಮುಸಲ್ಮಾನ, ಗೌತಮ, ಹೌಯ್ಸಳ ಎಲ್ಲರೂ ಒಮ್ಮೆಲೆ ಬಂದು ನಮ್ಮಮುಂದೆ ನಿಂತು ಬಿಟ್ಟರು...ಹಾಗೆ ನೆರೆದಿದ್ದ ಸಭಿಕರೆಲ್ಲ ನಾಡಗೀತೆಗೆ ಕೊಟ್ಟ ಗೌರವ ಅಭಿನಂದನಾರ್ಹ... ನಂತರದಿ ಅವಾಹನೆಯನ್ನು (ದೇವರ ಪ್ರಾರ್ಥನೆ) ನೃತ್ಯಗೀತೆಯೊಂದಿಗೆ ಕೂಟದ ಮಕ್ಕಳು ನೆರೆವೇರಿಸಿದರು.ತದನಂತರ ಗಣ್ಯರು ಹಾಗೂ ಕೂಟದ ಕಾರ್ಯಕಾರಿ ಸಮಿತಿಯೂಂದಿಗೆ ಜ್ಯೋತಿಬೆಳಗಿಸಿ ಉಪಕಾರ್ಯಕಾರಿ ಸಮಿತಿ ಸದಸ್ಯ ಸದಸ್ಯೆಯರೆಲ್ಲರೂ ಒಟ್ಟಾಗಿ ಡಿ. ಎಸ್ . ಕರ್ಕಿ ರವರ ಹಚ್ಚೇವು ಕನ್ನಡದ ದೀಪ.... ಹಾಡಿಗೆ ಸೊಡರೊತ್ತುರಜತಮಹೋತ್ಸವದ ವೇದಿಕೆ ಹಾಗೂ ಕನ್ನಡಿಗರ ಮನ-ಮನಗಳಿಗೆ ಒಲವ ಬೆಳಕನು ಹರಿಸಿದರು.
ಇಷ್ಟೆಲ್ಲ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸುಮಾರು ೧೧ ಗಂಟೆ ಇರಬಹುದು ಕರುನಾಡಿಂದ ಬರಬೇಕಾದಂತ ಕರುನಾಡಿನಿಂದ ಬಂದಂತಹ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದಂತಹ ಶ್ರೀ ಗಣೇಶ್ ಕಾರ್ಣೀಕ್ ರವರು ಸಮಾರಂಭಕ್ಕೆ ಮೆರುಗು ನೀಡಿದರು. ಇವರ ಬರುವಿಕೆಯಲ್ಲೆ ಸೂತ್ರದ ಬೊಂಬೆಯಾಟ ನೆಡೆಯುತ್ತಲಿದ್ದು. ವಶವರ್ತಿ(ಸೂತ್ರದ ಬೊಂಬೆಯಾಟ) ನೆರೆದಿದ್ದ ಎಲ್ಲ ಜನರ ಚಪ್ಪಾಳೆ ಗಿಟ್ಟಿಸಿತು.

ಕನ್ನಡ ಕೂಟ ಕುವೈಟ್ ೨೫ ವರ್ಷಗಳು ಸಾಗಿಬಂದ ಹಾದಿಯನ್ನು ದೃಶ್ಯಮಾಲಿಕೆಯಲ್ಲಿ ನಿರೂಪಿಸಿ ನೆರೆದಿದ್ದವರೆಲ್ಲರಿಗೂ ಮರಳು ಮಲ್ಲಿಗೆಯ ಕಂಪು ಸೂಸಿದರು...ತದನಂತರ ವೇದಿಕೆ ಅಲಂಕರಿಸಿದ ಹಳೆ ಬೇರೆಂಬಂತೆ ಕನ್ನಡಕೂಟ ಆರಂಭಿಸಿದ್ದ ಹಾಗು ಮಾಜಿ ಅಧ್ಯಕರುಗಳು ಮತ್ತು ಹೊಸ ಚಿಗುರು ಎಂಬಂತೆ ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಹಾಗೂ ಕರುನಾಡ ಪ್ರತಿನಿಧಿಗಳಾಗಿ ಬಂದಿದ್ದ ಕ್ಯಾಪ್ಟನ್ ಗಣೇಶ್ ಎಲ್ಲರೊ ವೇದಿಕೆಗೊಂದು ಮೆರುಗು ನೀಡಿದರು. ಹಳೆ ಬೇರುಗಳ ಭಾಷಣ ಅವರ ಅನುಭವ ಅವರ ಅಭಿಪ್ರಾಯ ಎಲ್ಲವೂ ಮನಸೂರೆಕೊಂಡಿತು... ನಂತರದಿ ಕ್ಯಾಪ್ಟನ್ ಗಣೇಶ್ ರವರ ಸರದಿ ನೋಡು ನೋಡುತ್ತಲಿದ್ದಂತೆ ಅವರ ಭಾಷಣ ಅವರ ಧ್ಯೇಯ, ಆಸಕ್ತಿ, ಒಲವೂ ಎಲ್ಲವೂ ಮೆಚ್ಚನಾರ್ಹವೆನಿಸಿತು... ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಲಿಟ್ಟು ೩ ವರ್ಷಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಮಾಡುವೂದಿಲ್ಲವೆಂದು ಖಡಾಖಂಡಿತವಾಗಿ ಸಭೆಯಲ್ಲಿ ಸಾರಿ ಹೇಳಿದರೂ ಅದು ಅಲ್ಲದೆ ಅನಿವಾಸಿ ಭಾರತೀಯರಿಂದಾಗುವ ಅನುಕೂಲ, ಅವರುಗಳ ತೊಂದರೆ, ಅನಿವಾಸಿ ಭಾರತೀಯರಿಂದ ದೊರಕುವ ಅನಿಸಿಕೆ ಅಭಿಪ್ರಾಯ, ಕರುನಾಡ ಏಳ್ಗೆಗೆ ಅನಿವಾಸಿ ಭಾರತೀಯರ ಪಾತ್ರ ಎಲ್ಲಕ್ಕೊ ಸ್ಪಂದಿಸುವುದಾಗಿ ಹೇಳಿದರು. ಇವರ ಭಾಷಣ ಮುಗಿಯುತ್ತಿದ್ದಂತೆ ಸ್ಮರಣ ಸಂಚಿಕೆಯನ್ನು ಸಾಂಸ್ಕೃತಿಕ ರೀತಿಯಲ್ಲಿ ಬಿಡುಗಡೆಮಾಡಲಾಯಿತು. ಈ ಕಾರ್ಯಕ್ರಮಗಳೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು ಎಲ್ಲರು ತಮ್ಮ ಊಟ ಮುಗಿಸಿ ಮಧ್ಯಾಹ್ನದ ಕಾರ್ಯಕ್ರಮಗಳತ್ತ ಹೊರಡುವತ್ತಲಿದ್ದಂತೆ ಕ್ಯಾ.ಗಣೇಶ್ ಅವರ ಆಶಯದ ಮೇರೆಗೆ ಮತ್ತೊಮ್ಮೆ ನಾಡಗೀತೆ ಹಾಡುವವರಿಗೆ ಆಹ್ವಾನವಿತ್ತರು.

ಬೆಳಗಿನ ಸಮಾರಂಭವೇಕೋ ತುಸು ಮಂದಗತಿಯಲ್ಲಿ ಸಾಗುತ್ತಿದೆಯೆಂದೆನಿಸಿತು ಆದರೆ ಅಪರಾಹ್ನದ ಸಮಾರಂಭ ಕ್ಯಾ.ಗಣೇಶ್ ರವರ ಆಸೆಯಂತೆ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಅಲ್ಲದೆ ಅವರೂ ಸಹ ನಮ್ಮೆರಲ್ಲೊಬ್ಬರಾಗಿ ಹಾಡಿದರು ಇವರೊಟ್ಟಿಗೆ ಕುವೈಟ್ ಅತಿಥಿಗಳು ಮಾಜಿ ಹಾಗೂ ಹಾಲಿ ಅಧ್ಯಕ್ಷರು ಕೂಡಿ ನಾಡಗೀತೆ ಸುಸೂತ್ರ ಸುಮಧುರವಾಗಿ ನೆರೆವೇರಿದ ನಂತರ ೨೫ ವರ್ಷಗಳ ಹುಟ್ಟುಹಬ್ಬದ ಸಂಭ್ರವನ್ನು ಸಿಹಿ ಕೇಕ್ ಕತ್ತರಿಸುವ ಮೂಲಕ ಮಧ್ಯಾಹ್ನದ ಮನರಂಜನ ಕಾರ್ಯಕ್ರಮಕ್ಕೆ ಸಿಹಿಸಂತಸದ ಹೊನಲಾಯಿತು. ಇವರೆಲ್ಲರೊಟ್ಟಿಗೆ ಉದಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಅವರ ನುಡಿಮುತ್ತುಗಳು ಸಭೆಗೆ ಕಳೆಯನ್ನು ತರಿಸಿತ್ತು
ಇನ್ನು ಕನ್ನಡಕೂಟದ ಹಿರಿ ಕಿರಿಯರ ಮನರಂಜನಾ ಕಾರ್ಯಕ್ರಮದ ಸಮಯ ಮೂದಲಿಗೆ ಅಷ್ಟಲಕ್ಷ್ಮಿ ರೂಪದ ನೃತ್ಯ
ರೂಪಕವನ್ನು ಕೂಟದ ಹೆಂಗಳೆಯರು ಅತಿ ಉತ್ಸಾಹ, ಮನಪೂರ್ವಕವಾಗಿ ದೇವಿಯನ್ನು ನೆನೆದರೆ ಲಕ್ಷಿ ದಯಪಾಲಿಸದೇ ಇರುತ್ತಾಳೆಯೇ ವೇದಿಕೆಯು ಲಕ್ಷ್ಮಿ ಕಟಾಕ್ಷವಾಗಿ ಮಾರ್ಪಟ್ಟಿತ್ತು, ಲಕ್ಷ್ಮಿ ಬಂದುಹೋಗುತ್ತಲಿದ್ದಂತೆ ಅದೆಲ್ಲಿದ್ದವೋ ಗುಬ್ಬಿಗಳು ನಮ್ಮ ಮುದ್ದು ಚಿಣ್ಣರು ಗುಬ್ಬಿ ಗುಬ್ಬಿ ಎಂದು ಗುಬ್ಬಿಗಳನ್ನೇ ಸಭಾಂಗಣಕ್ಕೆ ಕರೆತಂದುಬಿಟ್ಟಿದ್ದರು ವೇದಿಕೆ ಅಲಂಕರಿಸಿದ ಗುಬ್ಬಿಗಳು ಬಣ್ಣ ಬಣ್ಣದ ದೀಪಗಳು ಜಗಮಗಿಸುವುದ ಕಂಡು ಅಲ್ಲೇ ನಿಂತು ಬಿಟ್ಟಿದ್ದವು ಗುಬ್ಬಿಗಳನ್ನು ಕಂಡ ಹಳ್ಳಿ ಮಕ್ಕಳು ಮತ್ತೊಂದು ಜಾನಪದ ನೃತ್ಯವನ್ನು ಎಲ್ಲರ ಮುಂದಿಟ್ಟು ಹಳ್ಳಿಗೆ ಕರೆದೋಯ್ದರು, ಇನ್ನು ಹಲವು ಮಕ್ಕಳು ನಾವೇನು ಕಮ್ಮಿ ಎಂಬಂತೆ ಕೋಲಾಟದಿ ನೃತ್ಯ ಮಾಡಿ ನಲಿಸಿದರು, ಲಕ್ಷ್ಮಿ, ಗುಬ್ಬಿ, ಹಳ್ಳಿ ಜಾನಪದರು, ಕೋಲಾಟ ಎಲ್ಲವನ್ನು ಕಂಡ ಅದೆಲ್ಲೋ ಇದ್ದ ಎರಡು ನವಿಲುಗಳು ನೃತ್ಯವಾಡುತ್ತ ಬಂದೇ ಬಿಟ್ಟವು ಇನ್ನು ಸ್ವಲ್ಪಹೊತ್ತು ನೃತ್ಯನೋಡೋಣವೆಂದರೆ ತೊಗಲುಗೊಂಬೆಯ ನೃತ್ಯವಾಡಲು ಮಕ್ಕಳ ಹಿಂಡು ಬಂದೇ ಬಿಟ್ಟಿತು...ಇವರನ್ನೆಲ್ಲ ನೋಡಲು ನಾಗರಹೊಳೆಯಲ್ಲಿದ್ದ ಕಾಡುಜನರೂ ಓಡೋಡಿ ಬರುವುದೇ ಅಬ್ಬಾ ಕಾಡುಜನವೆಂದು ಯಾರು ಅವರನ್ನು ಹೇಳುವುದು ಅಷ್ಟು ಮನೋಘ್ನ ನೃತ್ಯವನ್ನು ನೀಡಿ ಕುಣಿದು ಕುಪ್ಪಳಿಸಿದರು.... ಇವರೆಲ್ಲರ ಮಧ್ಯೆ ಕೃಷ್ಣ ಕೊಳನೂದುತ ಸ್ನೇಹ ವೃಂದದೊಂದಿಗೆ ಕುಣಿದುನಲಿದನು, ನಂತರ ಕನ್ನಡದ ಹುಡುಗರೆಲ್ಲ ನಮ್ಮ ಜೀವನ ಕನ್ನಡ ಎಂದು ನೃತ್ಯ ನೀಡಿ ಸಿಳ್ಳೆ ಗಿಟ್ಟಿಸಿದರು, ನಂತರ ನಾದಸ್ವರೂಪದ ಬೆಸುಗೆಯೊಂದಿಗೆ ಹೆಂಗಳೆಯರು ನೃತ್ಯ ನೀಡಿ ಮನತಣಿಸಿದರು, ನೃತ್ಯ ಲೋಕದಿಂದ ಹೊರಬರುತ್ತಿದ್ದ ಹಾಗೇ ಒಂದು ಮುನ್ಸೊಚನೇ ಇಲ್ಲದೆಯೇ ಆಶ್ಚರ್ಯದ ವೇದಿಕೆಯಲ್ಲಿ ಸೃಷ್ಟಿಯಾಗಿತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೂಟದ ಹಾಲಿ ಅಧ್ಯಕ್ಷರಾದ ಶ್ರೀಮತಿ ಶ್ರೀ ಸತೀಶ್ ಚಂದ್ರ ಶೆಟ್ಟಿ ದಂಪತಿಗಳ ೨೫ ವರ್ಷದ ವಿವಾಹ ಮಹೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ದಂಪತಿಗಳಿಗೆ ಬೆರಗು ಮೂಡಿಸಿದರು. ಕೂಟದ ಕಾರ್ಯಕ್ರಮ ಹೇಗಿತ್ತೆಂದರೆ ತವರೂರಲ್ಲಿ ಮದುವೆ ಸಮಾರಂಭ ನೆಡೆದಂತಿತ್ತು ಹೆಂಗಳೆಯರು ಮದುವೆಮನೆಯಲ್ಲಿ ಶಾಸ್ತ್ರಕ್ಕೊಂದು ಉಡುಗೆ ಮುಹೂರ್ತಕ್ಕೂಂದು ಬೆರಗುಗೊಳಿಸೋ ಉಡುಗೆ ಹೀಗೆ ಸಾಂಪ್ರದಾಯಕ ಉಡುಗೆತೂಡುಗೆಯೂಂದಿಗೆ ಸಭಾಂಗಣವನ್ನು ಹೆಣ್ಣುಮಕ್ಕಳು ಅಲಂಕರಿಸಿಬಿಟ್ಟಿದ್ದರು.
ಇತ್ತ ಸಂಜೆಯ ಸವಿ ಸವಿಯಲೂ ಸಭಿಕರೆಲ್ಲರು ನೆರೆದಿದ್ದರೂ ಇತ್ತ ವೇದಿಕೆಯ ಹಿಂಬದಿ ಪ್ರಭಾತ್ ಕಲಾವಿದರು (ಬೆಂಗಳೂರು) ಇವರೊಟ್ಟಿಗೆ ಕನ್ನಡ ಕೂಟದ ಮಕ್ಕಳು ದೊಡ್ಡವರು ಅತಿ ಉತ್ಸಾಹದಿಂದ ಕಾತುರದಿ ವೇದಿಕೆ ಅಲಂಕರಿಸಲು ಕಾದಿದ್ದರು... ಸಂಜೆಯ ಕಾರ್ಯಕ್ರಮ ಕುವೆಂಪುರವರ ಕಿಂದರ ಜೋಗಿ ನೃತ್ಯರೂಪಕ ನಾಟಕ ಪ್ರಾರಂಭವಾಗಿಯಿತು ಏನು ಆ ಹಳ್ಳಿ ಮಕ್ಕಳು ಅಜ್ಜನೊಂದಿಗೆ ಕಥೆ ಹೇಳುವಂತೆ ಕೇಳುತ್ತಲಿದ್ದಂತೆ ಅಜ್ಜ ಆ ಮಕ್ಕಳಿಗೆಲ್ಲಾ ತುಂಗಾ ತೀರದ ಹಳ್ಳಿಗೆ ಕರೆದೂಯ್ದರು ಆ ಹಳ್ಳಿಯ ಜನ ಆ ಜನರಿಗೊಬ್ಬ ಗೌಡ ಸುಂದರ ಊರಿಗೆ ಇಲಿಗಳ ಕಾಟ, ಕಾಟ ತಾಳಲಾರದೆ ಕಿಂದರಜೋಗಿಗೆ ಮೂರೆ, ಕಿಂದರ ಜೋಗಿ ಇಲಿಗಳ ನಾಶಾನಂತರ ಗೌಡನ ದರ್ಪ, ಜಂಭ ಇದಕ್ಕೆ ಕೆಲವು ಹಳ್ಳಿ ಜನ ಪ್ರೋತ್ಸಾಹ, ಕೆಲವರ ಬೈಗುಳ ಮೋಸ ಮಾಡುವನೆಂದು.. ಭಾವಿಸಿ ಬೈಗುಳ ನೆಡೆದಿತ್ತು... ಗೌಡನಲ್ಲಿ ಮುನಿಸಿ ಊರ ಮಕ್ಕಳನ್ನೆಲ್ಲ ಕರೆದೂಯ್ದ ಕಿಂದರಿಜೋಗಿ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಪ್ರಭಾತ್ ಕಲಾವಿದರು ಹಾಗು ಕೂಟದ ಸದಸ್ಯರು ವೇದಿಕೆಯನ್ನು ತುಂಗಾ ತೀರದ ಹಳ್ಳಿಯನ್ನಾಗಿ ಮೂಡಿಸಿಬಿಟ್ಟಿದ್ದರು. ಈ ನೃತ್ಯ ರೂಪಕ ನಾಟಕ ಮುಗಿಯುವ ಹೂತ್ತಿಗೆ ಕಾಫಿ, ಟೀ ಸಮಯವಾಗಿತ್ತು ಎಲ್ಲರೂ ಕಾಫಿ, ಟೀ ಜೊತೆಗೆ ತಿಂಡಿತಿನಿಸು ತಿಂದು ಮುಗಿಸುವಷ್ಟರಲ್ಲೇ ಸಂಜೆಯ ಸಮಾರಂಭವು ಅತಿ ಅದ್ದೂರಿಯಿಂದ ಸಜ್ಜಾಗಿ ಸಭಿಕರೆಲ್ಲರಿಗಾಗಿ ಕಾದಿತ್ತು.

ಹಳ್ಳಿಗೋಗಿದ್ದ ಸಭಿಕರೆಲ್ಲರೂ ಧರ್ಮಭೂಮಿ ಕಡೆಗೊರಟರು, ಅಬ್ಬಾ!!! ಅದೆಂತಹ ನಾಟಕ ಎಲ್ಲರೂ ಈ ನಾಟಕವನ್ನು ನೋಡಲೇಬೇಕು... ಎಲ್ಲರಿಗು ತಿಳಿದಂತೆ ಗ್ರೀಕ್ ದೊರೆ ಅಲೆಗ್ಸಾಂಡರ್ ಅತಿ ಬಲಿಷ್ಟ ಶೌರ್ಯ ದೊರೆ, ಈ ದೊರೆ ಭಾರತದ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ತನ್ನ ಗುರುಗಳಾದ ಅರಿಸ್ಟಾಟಲ್ ಹಾಗು ಅಲೆಗ್ಸಾಂಡರ್ ನಡುವಿನ ಸಂಭಾಷಣೆ ಹಾಗು ಅರಿಸ್ಟಾಟಲ್ ನಮ್ಮ ಭವ್ಯ ಭಾರತ ಬಗೆಗಿದ್ದ ಅತಿಯಾದ ಗೌರವ, ಪ್ರೀತಿ ಎಲ್ಲವನ್ನು ತಿಳಿಸಿ ಅಲೆಗ್ಸಾಂಡರ ರಾಜನಿಗೆ ದಂಡಯಾತ್ರೆಗೆ ಹೋಗುವ ಬದಲು ಶಾಂತಿಯಾತ್ರೆಗೆ ಹೋಗುವಂತೆ ಸೂಚಿಸಿದ್ದರು ಅಂತೆಯೇ ಭರತ ಭೊಮಿಗೆ ಬಂದ ರಾಜ ಹಿಂತಿರುಗಿ ಹೋಗುವಾಗ ಆರೋಗ್ಯ ಏರುಪೇರಿನಿಂದ ಅಸುನೀಗುತ್ತಾನೆ ತಾನು ಸಾಯುವ ಮುನ್ನ ತನ್ನ ದೇಹವನ್ನು ಪೆಟ್ಟಿಗೆಯಲ್ಲಿಡಿ ಆದರೆ ತನ್ನ ಎರಡು ಕೈಗಳನ್ನು ಹೊರಗಿಡಿ ಏಕೆಂದರೆ ನಾನು ೩೩ ವರ್ಷಕ್ಕೆ ಹತ್ತು ಹಲವು ದೇಶಗಳನ್ನು ಗೆದ್ದು ದಿಗ್ವಿಜಯಿಯಾಗಿದ್ದೆ ಆದರೆ ಸತ್ತ ನಂತರ ನನ್ನ ಕೈ ಏನನ್ನೊ ತೆಗೆದುಕೊಂಡೋಗುತ್ತಿಲ್ಲ, ಬರಿಗೈನಲ್ಲಿ ಹೋಗುತ್ತಿರುವೆ ಎಂದು ಎಲ್ಲರಿಗೂ ಸಂದೇಶವನಿತ್ತು ಅವನು ಅಮರನಾದನು... ಇದೆಲ್ಲದರ ಮಧ್ಯೆ ಅರಿಸ್ಟಾಟಲ್ ಭಾರತ ಭೂಮಿಯ ಗಂಗಾ ಜಲ, ರಾಮಾಯಣ, ಮಹಾಭಾರತ, ಕೃಷ್ಣ ಹಾಗೂ ಅವನ ಕೊಳಲ ಪ್ರಾಮುಖ್ಯತೆ, ಭಗವದ್ಗೀತೆಯ ವಿಶೇಷತೆಯನ್ನು ನಮ್ಮ ಮುಂದಿಟ್ಟರು.. ಅಬ್ಬಾ ಎಂತಹ ವೈಭವೋತೀತ ಭರತಖಂಡ ಪರಿಚಯವನ್ನು ನಾಟಕರೂಪದಲ್ಲಿ ನಮ್ಮ ಮುಂದಿಟ್ಟರು ಎಂದೆನಿಸಿತು.

ತದನಂತರ ದಶಾವತಾರ ನೃತ್ಯರೂಪಕವು ಮನಸೂರೆಗೊಂಡಿತು, ವಿಷ್ಣುವಿನ ದಶ ಅವತಾರಗಳನ್ನು ಪ್ರಭಾತ್ ಕಲಾವಿದರಾದ ಹರೀಶ್ ಸಭಿಕರೆಲ್ಲರಿಗೂ ಅರ್ಥವಾಗುವಂತೆ ಮನಮುಟ್ಟುವಂತೆ ನೃತ್ಯರೂಪಿಸಿದರು. ಕೊನೆಯ ನೃತ್ಯರೂಪಕ ಪುಣ್ಯಕೋಟಿ ಆಹಾ!!! ದಟ್ಟಅಡವಿಯಲ್ಲಿ ಹುಲಿಯ ಬಾಯಿಗೆ ಸಿಕ್ಕಿಕೊಂಡ ಆ ಪುಣ್ಯಕೋಟಿ ಹಸುವಿನ ಮನಕಲಕುವ ದೃಶ್ಯ, ಆ ಕರುವಿನ ತಬ್ಬಲಿತನ ಎದ್ದು ಕಾಣುವಂತೆ ಮನೋಘ್ನ ಅಭಿನಯವನ್ನು ಪ್ರಭಾತ್ ಕಲಾವಿದರಾದ ದೀಪಶ್ರೀಹರೀಶ್ ಹಾಗೂ ಕೂಟದ ಸದಸ್ಯರ ಮಗು ನೀತಾ ತಬ್ಬಲಿಯ ಕರುವಾಗಿ ಬಹಳ ವಿಶೇಷವಾಗಿ ಅಭಿನಯಿಸಿದರು ಪುಣ್ಯಕೋಟಿಯ ನಾಟಕ ನೋಡ ನೋಡುತ್ತಲಿದ್ದ ಹಾಗೆ ಕೆಲವರ ಕಣ್ಣುಗಳು ಒದ್ದೆಯಾದವು....ಪುಣ್ಯಕೋಟಿ ಮರಳಿ ತಾಯಮಡಿಲು ಸೇರುವ ದೃಶ್ಯದೊಂದಿಗೆ ಮನಸು ಹಗುರಾಗಿ ಸಂತಸದಿ ನಾವುಗಳೆಲ್ಲ ಸಭಾಂಗಣ ತೊರೆದು ರಾತ್ರಿ ಊಟಕ್ಕೆ ತೆರೆಳಿದೆವು. ಮೃಷ್ಟಾನ್ನ ಭೋಜನದಿ ಎಲ್ಲರೂ ಊಟ ಸವಿದು ಮನೆಯ ಕಡೆ ಮುಖ ಮಾಡಿದೆವು.

ಪ್ರಭಾತ್ ಕಲಾವಿದರ ನೀಡಿದ ಸುಮಾರು ೨ ಗಂಟೆಯ ಕಾರ್ಯಕ್ರಮಗಳು ಬೆಂಗಳೂರಿನಲ್ಲಾಗಿದ್ದರೆ ಸುಮಾರು ೪೦ ಜನರೂಡಗೂಡಿ ನಿರೂಪಿಸುತ್ತಿದ್ದ ಕಲಾವಿದರು ಇಂದು ಸುಮಾರು ೧೫ ಕಲಾವಿದರೂಂದಿಗೆ ಒಬ್ಬೂಬರು ೩, ೪ ಪಾತ್ರಗಳನ್ನು ಅಭಿನಯಿಸಿ ಅದ್ಭುತ ಅಭಿನೇತ್ರಿಗಳಾಗಿ ನಮ್ಮೆಲ್ಲರಿಗೂ ಮನವನ್ನು ತಣಿಸಿದರು.
ಒಟ್ಟಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ನಮನ, ಮನನ ಎಲ್ಲವೂ ಸರಾಗವಾಗಿ ಯಾವ ಅಡೆತಡೆಯಿಲ್ಲದೆ ನೆರೆವೇರಿತು ಯಾವ ರಾಜಕಾರಿಣಿಗಳಾಗಲಿ, ಚಲನಚಿತ್ರ ತಾರೆಗಳಾಗಲಿ ಯಾರ ಅನುಪಸ್ಥಿತಿಯೂ ಕನ್ನಡಾಂಬೆಯ ವೈಭವೋತೀತ ಹುಟ್ಟುಹಬ್ಬದ ಆಚರಣೆಗೆ ಸ್ವಲ್ಪವೂ ಕುತ್ತುಬರದೆ ಕರುನಾಡ ಸಿರಿ ಮರಳುಗಾಡಿನಲ್ಲಿ ರಾರಾಜಿಸಿತು.
ಈ ಕಾರ್ಯಕ್ರಮಕ್ಕೆ ರುವಾರಿಗಳಾದ ಕಾರ್ಯಕಾರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಹಲವು ಉಪಸಮಿತಿಗಳೆಲ್ಲರಿಗೂ,ಮತ್ತು ಪ್ರಭಾತ್ ಕಲಾವೃಂದದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

Tuesday, November 10, 2009

ಒಟ್ಟಾಗಿ ಬನ್ನಿ...ಹಚ್ಚೋಣ ಕನ್ನಡದ ದೀಪ....


ಕನ್ನಡಾಂಬೆಯ ನೆನೆವ ಮನಗಳು ಪ್ರಪಂಚದಾದ್ಯಂತ ಹರಡಿಹೋಗಿವೆ ಕೆಲವು ಪ್ರಾಂತ್ಯ, ಊರು ಕೇರಿಗಳಲ್ಲಿ ಕನ್ನಡಮ್ಮನಿಗೆಂದೆ ಹಬ್ಬ ಆಚರಣೆಗಳು ನೆಡೆಯುತ್ತಲೇ ಇರುತ್ತವೆ. ಅಂತೆಯೇ ನಾವು ಸಾಗರದಾಚೆ ಕನ್ನಡಮ್ಮನ ನೆನೆದು ಅವಳ ಪ್ರೀತಿಪಾತ್ರರಾಗುವ ಒಂದು ಪುಟ್ಟ ಪ್ರಯತ್ನ...

ಕುವೈಟ್ ಕನ್ನಡಿಗರೆಲ್ಲರು ಒಗ್ಗೂಡಿ ಇದೇ ನವೆಂಬರ್ ೧೩ರಂದು ಅಮೇರಿಕನ್ ಇಂಟರ್-ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಉತ್ಸವ ನೆರೆವೇರಲಿದೆ ಈ ಸಮಾರಂಭಕ್ಕೆ ಅಭೂತಪೂರ್ವ ರೀತಿಯಲ್ಲಿ ಎಲ್ಲಾ ಮಕ್ಕಳು, ಹಿರಿ-ಕಿರಿಯರೆಲ್ಲರೂ ತಮ್ಮದೇ ಆದಂತಹ ಮನರಂಜನಾ ಕಾರ್ಯಕ್ರಮಕ್ಕೆ ಮೆರುಗು ನೀಡಲು ಸಜ್ಜಾಗಿದ್ದಾರೆ.

ಈ ಬಾರಿ ಅತಿ ಆಸಕ್ತಿದಾಯಕ ಎಂದರೆ ಕುವೈಟ್ ಕನ್ನಡ ಕೂಟಕ್ಕೆ ಬೆಳ್ಳಿಹಬ್ಬದ ವೈಭವ ಇದರ ಸಲುವಾಗಿ ಕನ್ನಡ ಕೂಟದ ವತಿಯಿಂದ ಮನರಂಜನಾ ಕಾರ್ಯಕ್ರಮ ಹಾಗೂ ಬೆಂಗಳೊರಿನಿಂದ ಆಗಮಿಸಿರುವ ಪ್ರಭಾತ್ ಕಲಾವಿದರಿಂದ ವಿವಿಧ ನೃತ್ಯರೂಪಕ ನಾಟಕಗಳು ನೆಡೆಯಲಿವೆ. ಇದಲ್ಲದೆ ಪ್ರಭಾತ್ ಕಲಾವಿದರೊಂದಿಗೆ ಕುವೈಟ್ ಕನ್ನಡಿಗರೂ ಸಹ ಭಾಗವಹಿಸಲಿದ್ದಾರೆ.
ಕಿರುತೆರೆ ಹಾಗು ಚಲನಚಿತ್ರ ತಾರೆಗಳಾದ ಹಾಗೂ ಪ್ರಭಾತ್ ಕಲಾವಿದರಾದ ದೀಪಶ್ರೀ ಮತ್ತು ಹರೀಶ್ ದಂಪತಿಗಳ ಸಾರಥ್ಯದಲ್ಲಿ ನಾವುಗಳು ನಾಟಕಾಭ್ಯಾಸದಲ್ಲಿ ತೊಡಗಿದ್ದೇವೆ. ಪರಿಪೂರ್ಣತೆ ಅಥವಾ ಪಕ್ವತೆ ನಮ್ಮಲ್ಲಿಲ್ಲದಿದ್ದರೂ ನಮ್ಮ ಪಾತ್ರಗಳಿಗೆ ಜೀವತುಂಬುವ ನಿಟ್ಟಿನಲ್ಲಿದ್ದೇವೆ.

ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸಂತಸ ಭರಿತವಾಗಿ ನೆರವೇರುವುದೆಂದು ನಾವು ಭಾವಿಸುತ್ತ ನಿಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನವನ್ನು ನೀಡುತ್ತಲಿದ್ದೇವೆ.


ಆಮಂತ್ರಣ ನಮ್ಮದು .... ಬರುವಿಕೆ ನಿಮ್ಮದು...ನಿಮ್ಮ ನಿರೀಕ್ಷೆಯಲ್ಲಿ ಕಾಯುವುದು ನಮ್ಮೆಲ್ಲರದು.... ಎಲ್ಲರೊಟ್ಟುಗೂಡಿ ಕನ್ನಡದದೀಪ ಬೆಳಗಿಸಿ ಉಳಿಸುವುದು ಕನ್ನಡಿಗರೆಲ್ಲರದು...

ಕಡಲ ಕಿನಾರೆಯಾದ
ಮರಳುಗಾಡ ಸಿರಿಯಲಿ
ಭಾರತಾಂಬೆಯ ಕುವರಿ
ದಿವ್ಯನಗೆಯ ಕನ್ನಡಾಂಬೆ
ವಿಜೃಂಭಿಸಲಿರುವಳು......
ನಿಮ್ಮೆಲ್ಲರ ಜಯಕಾರವಿರಲಿ
ಈ ಭುವನೇಶ್ವರಿ ತಾಯಿಗೆ........

ಶುಭದಿನ.
ವಂದನೆಗಳೊಂದಿಗೆ
ಕುವೈಟಿನ ಬ್ಲಾಗಿಗರಾದ
ಮೃದುಮನಸು,
ಸವಿಗನಸು, ಮತ್ತು
ಜಲನಯನ....

Thursday, November 5, 2009

ಮೊದಲು

ಮಾತನಾಡುವ ಮೊದಲು ಆಲಿಸಿಕೊ
ಕೇಳಿದ ಮಾತು ಮನದಾಳದಲಿರಲಿ
ಮನದಮಾತು ಮುತ್ತ ಪೋಣಿಸಿದಂತಿರಲಿ
ಪೋಣಿಸಿದ ಸರಮಾಲೆ ಮುತ್ತಿನಹಾರದಂತಿರಲಿ!!

ಬರೆಯುವ ಮೊದಲು ಯೋಚಿಸು
ಯೋಚಿಸಿದ ಸಾಲು ಮಿದುಳಲ್ಲಿರಿಸಿ
ಲೇಖನಿ ಜೊತೆಗೆ ಅಕ್ಷರಸಾಲು ಮೂಡಿಸು
ಬರೆದ ಸಾಲುಗಳು ಎಲ್ಲರ ಮನದಲುಳಿಸು!!

ಖರ್ಚು ಮಾಡುವ ಮೊದಲು ಸಂಪಾದಿಸು
ಸಂಪಾದಿಸುವುದ ಕಲಿಯಲು ಶ್ರಮವಹಿಸು
ಶ್ರಮದ ಸಂಪಾದನೆಯ ಇತಿಮಿತಿಯೂಂದಿಗೆ
ಶ್ರಮದ ಫಲ ಜೀವನಪೂರ್ತಿ ಅನುಭವಿಸು!!

ಟೀಕಿಸುವ ಮೊದಲು ತಾಳ್ಮೆಯಿರಲಿ
ತಾಳ್ಮೆ ನಮ್ಮ ಜೀವನಕೆ ಸಹಾನುಭೂತಿ
ಟೀಕಿಸುವುದು ನಮ್ಮ ತರ್ಕಕ್ಕೆ ನಿಲುಕದ್ದು
ನಿಲುಕದ ಜೀವಕ್ಕೆ ಟೀಕಿಸುವುದ ದೂಡಿಬಿಡು!!

ತೊರೆಯುವ ಮೊದಲು ಪ್ರಯತ್ನಿಸು
ಇರುವುದ ತೂರೆಯುವುದು ಸುಲಭವಲ್ಲ
ತೊರೆದರೆ ಮತ್ತೆ ಪಡೆವುದು ಆಶಾಗೋಪುರ
ಎಲ್ಲದರ ಅರಿವು ನಮ್ಮಲಿದ್ದೊಡೆ ಒಳಿತು!!

Saturday, October 24, 2009

ಪ್ರೀತಿಯ ಸ್ನೇಹಿತೆಗೊಂದು ಪತ್ರ ಬೇಗ ತಲುಪಿಸಿಬಿಡಿ ಅವಳ ಹತ್ರ....

ಪ್ರೀತಿಯ ಮನಸು....
ಅಂದಿನಿಂದ ಇಂದಿನವರೆಗೆ ನನಗೆ "ಅತಿ ಆತ್ಮೀಯ" ಸ್ನೇಹಿತರು ಎಂದು ಯಾರು ಇರಲ್ಲಿಲ ಸ್ನೇಹಿತರೆಲ್ಲ ಇದ್ದರೋ ಯಾರು ನನ್ನ ಹೃದಯಕ್ಕೆ ಹತ್ತಿರವಾದವರಲ್ಲ ಏಕೋ ಕಾಣೆ ನಾನು ಸ್ನೇಹ ಗುರುತಿಸುವುದರಲ್ಲಿ ಅಥವಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇನೆನಿಸುತ್ತೆ ಆದರೆ ನೀ ಸಿಕ್ಕ ಮೇಲೆ ಆ ಭಾವನೆಯೆಲ್ಲಾ ಮಾಯವಾಗಿದೆ.

ಮನಸು ನನ್ನ ಅತಿ ಆತ್ಮೀಯ ಸ್ನೇಹಿ ನಿನ್ನೊಟ್ಟಿಗಿನ ಸ್ನೇಹ ಎಂದೊ ಬೇಸರ ಮೂಡಿಸಿಲ್ಲ, ಮನಸು ನೀನು ಮಿತ ಭಾಷಿ, ಮೌನ ಗೌರಿ, ಹಸಿರ ಕಾನನವೆಂದರೆ ನಿನಗೇನೋ ಪ್ರೀತಿ ಅಲ್ಲಲ್ಲ ಮೋಹ... ಕಷ್ಟ ಜೀವಿಗೆ ಸಹಾಯ ಹಸ್ತ ಎಂದೆಂದು ನಿನ್ನದಿರುತ್ತೆ, ಇಂತ ಸ್ನೇಹಿ ನನ್ನೊಟ್ಟಿಗುರುವುದು ಖುಷಿ ಅಲ್ಲದೆ ಮತ್ತೇನು... ಮನಸು ನೀ ಹೇಳುತ್ತಿದ್ದೆ ನೀ ನನ್ನ ಮಾತು ನೀ ಯಾವಾಗಲೂ ಮಾತಾಡು ನಿನ್ನ ಮೌನ ನನಗೆ ಬೇಡ ಮಾತಾಡುತ್ತಿದ್ದರೆ ಚೆನ್ನ.. ದಿನವೆಲ್ಲ ಹರಟುತ್ತಲಿದ್ದರು ಯಾವುದೇ ಬೇಸರವಿಲ್ಲದೇ ಮಾತಾಡುತ್ತಿದ್ದೆ... ಒಮ್ಮೆ ಎಲ್ಲೂ ಹೋಗಿದ್ದೆ ನನಗಾಗಿ ಓಡೋಡಿ ಬಂದು ನಿನ್ನೊಟ್ಟಿಗೆ ಮಾತಾಡಲು ಎಲ್ಲ ಕೆಲಸ ಮುಗಿಸಿ ಓಡಿಬಂದೆ ಗೆಳತಿ ಎಂದಾಗ ನನಗಾದ ಆನಂದ ಹೇಳ ತೀರದು. ನೀ ನಿನ್ನೊಳಗಿಲ್ಲದಿದ್ದರೊ ನಿನ್ನ ಮಾತು ಮಿತಿಯಾಗಿದ್ದರೂ ನನಗಾಗಿ ಎಷ್ಟೋ ಸಲ ಮಾತನಾಡಿರುವೇ ಅಲ್ಲವೆ ಗೆಳತಿ.

ನೀ ಮೈದಡವಿ ನಿನ್ನ ಪ್ರೀತಿ ನೀಡಿ ನನಗೆ ಸಲಹೆಯಿತ್ತ ದಿನವೆಲ್ಲ ನನಗೆ ಖುಷಿ, ನೀ ಬಲು ಮೃದು ನೀ ಬೇಗ ನೊಂದು ಬಿಡುತ್ತೀಯ ನಿನ್ನ ಮನಕೆ ನೋಯಿಸದಿರು ನಗು ನಗುತ್ತಲಿರು ನಿನ್ನ ನಗುವಲ್ಲೇನೋ ಆಕರ್ಷಣೆ ಇದೆ ನಗುವೇ ಚೆನ್ನ.. ನಿನ್ನ ಈ ಕಣ್ಣು ಎಲ್ಲರನು ಸೆಳೆಯುತ್ತೆ ನಿನ್ನ ಕಂಡೊಡೆ ಕಣ್ಣು, ನಗು ಎರಡು ಎಲ್ಲರನ್ನು ಸ್ನೇಹಜೀವಿಯಾಗಿಸುತ್ತೆ... ಹೀಗೆ ನಗುತ್ತಲಿರು ಎಂದೆಲ್ಲ ನನ್ನ ಹೊಗಳುತ್ತಿದ್ದೆ.... ಜೊತೆಗೆ ನಾ ಅಳುಮುಂಜಿ ಎಂದು ನನ್ನ ಅಳುವನ್ನು ಕಡಿಮೆ ಮಾಡಲು ಹೇಳುತ್ತಿದ್ದೆ ಅಲ್ಲವೇ ಮನಸು....
ನೀ ಎಲ್ಲ ವಿಷಯವನ್ನು ನನೂಟ್ಟಿಗೆ ಹೇಳುತ್ತಿದ್ದೆ ನಾನು ನಿನ್ನೂಟ್ಟಿಗೆ ಎಲ್ಲ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದೆ.... ನನ್ನ ಸ್ನೇಹಕ್ಕೆ ನೀ ಸೋತಿದ್ದೋ ಎನೋ ಅಂದು ನಿನ್ನ ಕಣ್ಣಾಣೆ ನಿನ್ನ ನಾ ಪ್ರೀತಿಸುವೆ ಸ್ನೇಹಿಯಾಗಿ ಎಂದೇಳಿದ್ದೆ ಇದೆಲ್ಲ ನಿಜವೇ ಎಂದು ನನ್ನ ಕಾಡುತ್ತಿದೆ. ನೀ ನನ್ನ ಪ್ರಾಣ ಸ್ನೇಹಿತೆ, ನೀ ನನ್ನ ಅರಿವು, "ಅರಿವೇ ಗುರು" ಎಂದು ದೊಡ್ಡವರು ಹೇಳಿದ್ದಾರೆ ಅಲ್ಲವೇ ಅಂತೆಯೇ ನೀನು ನನ್ನ ಗುರು ನಿನ್ನ ನಡೆ ನುಡಿ ಎಲ್ಲವೊ ನನಗೆ ಮಾದರಿ...

ಇಷ್ಟು ಕಾಲ ಸ್ನೇಹಿಯಾಗಿದ್ದ ನೀನು ಏಕೆ ಈಗ ನನ್ನೊಡನೆ ಮಾತನಾಡದೆ ಮರೆಯಾಗಿ ಕುಳಿತಿರುವೆ ಮೋಡದ ಮರೆಯ ಚಂದ್ರನಂತೆ ಬೆಳದಿಂಗಳ ಚೆಲ್ಲದೆ ಮುಸುಕು ಮಬ್ಬಿನಲಿ ನನ್ನ ತಳ್ಳಿರುವೆ.. ಮೌನ ದೂಡಿ ಮಂಜು ಮುಸುಕಿದ ಹಾದಿಯಿಂದ ಹೊರಗೊಮ್ಮೆ ಬಾ ಆ ನಿನ್ನ ಮೃದು ಸ್ನೇಹಿತೆ ಬಳಲಿ ಬೆಂಡಾಗಿದ್ದಾಳೆ ಮುದ ನೀಡೋ ಮನಸಿಗೆ ಏಕೀ ಮುಸುಕು ಸ್ನೇಹಿತೆ ನೀ ಬಂದು ಮೃದು ಸ್ನೇಹಿಯನೊಮ್ಮೆ ನಲುಗದಂತೆ ನಲಿವಿನೆಡೆಗೆ ತೆಗೆದುಕೊಂಡೋಗು.

ಇಂತಿ ನಿನ್ನ ಸ್ನೇಹಿತೆ..
ಮೃದು...

Tuesday, October 6, 2009

ಮಳೆರಾಯ

ಬೆಳ್ಳಿ ಮೋಡದಲಿ ಮಳೆರಾಯ ಅಡಗಿರಲು
ಭುವಿಗಿಳಿದು ಬಾ ಎಂದು ಕರೆಯಲು
ಜನ್ಸ್ತೋಮ ಸಲ್ಲಿಸಿದವಂದು ಹೋಮ ಹವನಗಳು

ಒಂದಷ್ಟು ದಿನ ಕೆಂಡಾಮಂಡಲವಾದ ಭುವಿಗೆ
ಎಲ್ಲೆಲ್ಲೊ ಕಾಡಿತ್ತು ಹಸಿರ ಸಿರಿಗೆ ಬಂಜರು ನೆರಿಗೆ

ಮೋಹಕೋ ಮುನಿಸಿಗೋ ಮಳೆರಾಯ
ಇಳೆಯಿಂದ ಧರೆಗಿಳಿದು ಸುರಿಸಿದ್ದಾನೆ ಮಳೆಯ
ಭೀಕರ ಮಳೆಯಲಿ ಕಳೆದುಕೊಂಡಿವೆ ಜೀವರಾಶಿ ತಮ್ಮ ನೆಲೆಯ!!!!

ಭುಗಿಲೆದ್ದ ಆಹಾಕಾರಕೆ ನೀನೆ ಹೊಣೆ
ಮುಗ್ಧ ಜನತೆಗೇಕೆ ಹಿಂಸಿಸುವೆ ನಾ ಕಾಣೆ
ದಯೆನೀಡಿ ನಿನ್ನ ಪ್ರಲಾಪದಲಿರಲಿ ಕರುಣೆ!!!

ಆಗಸದೆಡೆ ಕುಳಿತು ನೋಡುತಿರುವೆಯಲ್ಲ
ಬಲಿಯಾದ ಹಸುಗೂಸುಗಳು ಕಾಣುತಿವೆಯಲ್ಲ
ಒಮ್ಮೆಲೆ ಧಗಧಗಿಸುವ ಆಕ್ರಂದವನು ಒತ್ತಿಸಿಬಿಟ್ಟೆಯಲ್ಲ

ವರುಣನ ಆರ್ಭಟಕೆ ನಲುಗುತಿಹುದು ಬಡಪಾಯಿ ಜೀವ
ಇತ್ತ ಸಮಯ ಸಾಧಿಸೋ ರಾಜಕೀಯರ ಮನೋಭಾವ
ಇದೆಲ್ಲದರಲಿ ಬಡಜೀವಿಯ ದಿನದ ಕೂಳಿಗೂ ಬಂದೊದಗಿದೆ ಅಭಾವ ...!!!

ಕಾಣದ ದೈವವೆ ಭುವಿಗಿಳಿದು ಬಾ ಒಮ್ಮೆ
ನಲುಗುತಿರುವವರ ಕೈಹಿಡಿದು ದಾರಿ ತೋರೊಮ್ಮೆ.....ಓ ದೈವವೆ ದಾರಿ ನೀಡೋಮ್ಮೆ!!!

Monday, September 28, 2009

ಬೆಳ್ಳಂಬೆಳಗಿನ ಕನಸು


ಎಲ್ಲ ನಿದ್ರಿಸುವಾಗ ನಾ ಎಚ್ಚೆತ್ತಂತ್ತಾಯ್ತು
ಬೆಳಗಿನಜಾವದ ಮಸುಕು ಮೊಗ್ಗಿನಲಿ
ಮನದಲ್ಲೆಲ್ಲೋ ಹೂ ಅರಳಿದಂತಾಯ್ತು
ತುಟಿಯ ಮೇಲೆ ಮುಗುಳುನಗೆ ಬೀರುತಿತ್ತು ....

ಹಕ್ಕಿಯ ಚಿಲಿಪಿಲಿ ಗಾನ ಕೇಳಲಿಲ್ಲ
ದನಕರುಗಳು ಅಂಬಾ ಎನುವ ಧನಿಯು ಮೂಡಲಿಲ್ಲ
ಮೈಮರೆತಂತೆ ಭಾಸವಾಗಿತ್ತಿಂದ್ದು
ಮುಂಜಾವಿನ ಕನಸಿನಲಿ ನಿನ್ನದೇ ಚಿತ್ರ ಮೂಡಿತ್ತು ...

ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ಜೊತೆಗೂಡಿ ಸಾಗಲು
ಬೆಳದಿಂಗಳ ಚೆಂದಿರನು ಕಿರುನಗೆಯ ಬೀರಿದಂತಾಯ್ತು
ಸಾಲು ಸಾಲು ಮರಗಳು ತಂಗಾಳಿ ಬೀಸಲು
ನಿನ್ನ ಅಪ್ಪುಗೆಯಡೇ ಬರಸೆಳೆದಂತಾಯ್ತು .....

ಒಲವೆಂಬ ಹಣತೆ ನೀಡಿದೆಯೆನಗೆ
ಸವಿಭಾವ ಪ್ರೀತಿ ಬರಲು ನನ್ನೆಡೆಗೆ
ನಾ ಸೋತು ನಿನಗೆ ಸೆರೆಯಾದ ಭಾವ
ಮೂಡಿತಿಂದು ಬೆಳ್ಳಂಬೆಳಗಿನ ಜಾವ .....

ಮುಂಜಾವ ಸವಿಗನಸು ನಿಜವೆಂದು ತಿಳಿದು
ಕಣ್ಣ್ಬಿಟ್ಟು ನಗಲು ಒಲವುಕ್ಕಿ ಹರಿಯಲು
ಮಂಜು ಮುಸುಕಿನಲಿ ನೀ ಬಂದು ಸೇರಲು
ಕನಸುನನಸಾದಂತೆ ಆಗಸಕೆ ಎರಡೇ ಮೆಟ್ಟಿಲೇರಿ ನಿಂತೆ ...

ಮುಂಜಾವಿನ ಕನಸಿನೊಂದಿಗೆ ಎಲ್ಲರಿಗು ದಸರಾ ಹಬ್ಬದ ಶುಭಾಶಯಗಳು..
ಒಲವೆಂಬ ಹಣತೆ, ಸಹೃದಯತೆಯೆಂಬ ನಂದಾದೀಪ ನಿಮ್ಮನೆಯೂಳಗೆ ಹಾಗು ನಿಮ್ಮೊಳಗೆ ಸದಾ ಬೆಳಗಲಿ.
ವಂದನೆಗಳು
ಶುಭದಿನ

Sunday, September 20, 2009

ಆಗಿದ್ದೇಲ್ಲಾ ಒಳ್ಳೆಯದಕ್ಕ...?


ಆರ್ಟ್ ಆಫ್ ಲೀವಿಂಗ್ ಕ್ಲಾಸ್ ಮೂಲಕ ನಾವೆಲ್ಲ ಸುಮಾರು ೬೦ಜನ ಕನಕಪುರ ಆಶ್ರಮಕ್ಕೆ ಹೋಗಿದ್ದೆವು,ನನ್ನ ಜೊತೆ ನನ್ನ ಅಪ್ಪ ಅಮ್ಮ ಕೂಡ ಆಶ್ರಮ ವೀಕ್ಷಣೆಗೆಂದು ಬಂದಿದ್ದರು.
ಎಲ್ಲರು ನಮ್ಮ ಸ್ನೇಹಿತರು ಹಾಗು ಗುರುಗಳೊಂದಿಗೆ ಆಶ್ರಮವೆಲ್ಲ ಸುತ್ತಾಡಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು ಗುರುಗಳು ಒಮ್ಮೆ ಊಟ ಮುಗಿಸಿ ಬೇರೆಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿ ಎಲ್ಲರೂ ಊಟಕ್ಕೆ ತೆರಳಿದೆವು.

ಚಪ್ಪಲಿಗೂಡಿನಲ್ಲಿ ಚಪ್ಪಲಿ ಬಿಡುವಾಗ ಸುತ್ತಮುತ್ತ ನೋಡಿದೆ ಅಲ್ಲೇ ನನಗೇನೋ ಅನುಮಾನ ಇಷ್ಟು ಚೆನ್ನಾಗಿದೆ ನನ್ನ ಚೆಪ್ಪಲಿ ಏನಾದ್ರು ಆದರೆ ಎಂಬ ಅನುಮಾನದಲ್ಲೇ ಊಟಕ್ಕೆ ಒಳ ನಡೆದೆ ಅಲ್ಲಿನ ಭರ್ಜರಿ ಊಟ ನನ್ನ ಚಪ್ಪಲಿ ಮೇಲಿದ್ದ ಕಾಳಜಿಯನ್ನೆಲ್ಲ ಮರೆಸಿತ್ತು... ಊಟ ಮುಗಿಸಿ ಬಂದೊಡೆ ನಾ ಬಿಟ್ಟಿದ್ದ ಚಪ್ಪಲಿ ಅಲ್ಲಿ ಕಾಣುತ್ತಿಲ್ಲ, ಆಗ ನಾ ತಿಂದ ಊಟವೆಲ್ಲ ಕರಗಿದಹಾಗಾಯಿತು... ಸುತ್ತಮುತ್ತ ಸುಮಾರು ೧೦ ಭಾರಿ ಸುತ್ತಾಡಿದೆ ಸುಸ್ತಾದೆ ಎಲ್ಲೂ ಕಾಣಲಿಲ್ಲ ನನ್ನ ಜೊತೆ ಇದ್ದ ಗುರುಗಳು, ಸ್ನೇಹಿತರು ಎಲ್ಲರೂ ಒಂದೆ ಮಾತು ಒಳ್ಳೆಯದು ಅದು ಆಶ್ರಮದಲ್ಲಿ ಚಪ್ಪಲಿ ಕಳೆದರೆ ಎಂದು ಇನ್ನು ಕೆಲವರು ನಿನ್ನ ಕರ್ಮವೆಲ್ಲ ಕಳೆಯಿತು ಬಿಡು ಎಂದರು, ಇನ್ನು ಕೆಲವರು ಇಲ್ಲೇ ಯಾರೋ ತೆಗೆದುಕೊಂಡಿರುತ್ತಾರೆ ಈ ಮಕ್ಕಳು ಇದ್ದಾರೆ ನೋಡಿ ಯಾರೋ ತೆಗೆದುಕೊಂಡಿರಬೇಕು ಎಂದೆಲ್ಲ ಮಾತಾಡುತ್ತಲಿದ್ದರು ನನ್ನ ಮನಸಿನಲ್ಲೇ ಅಯ್ಯೋ ಹೋಗಿದ್ದು ಹೋಯ್ತು ಮತ್ತೆ ಬರೋಲ್ಲ ಎಂದು ಸುಮ್ಮನಾದೆ.

ಆಶ್ರಮ್ಮದಲ್ಲೇ ಇದ್ದ ಶಾಪಿಂಗ್ ಮಾಲ್ನಲ್ಲಿ ಒಂದುಜೊತೆ ಚಪ್ಪಲಿ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ತೆರಳುವ ಮುನ್ನ ಚಪ್ಪಲಿ ಬಿಡುವಾಗ ಎಲ್ಲರು ಹೇಳಿದರು ಒಂದು ಚಪ್ಪಲಿ ಇಲ್ಲಿರಲಿ ಇನ್ನೊಂದು ಬೇರೆಡೆ ಇಡು ಎಂದು ಸರಿ ಎಂದೆನಿಸಿ ನಾನು ಹಾಗೆ ಇಟ್ಟು ಪ್ರಾರ್ಥನೆಗೆ ತೆರಳಿದೆ ಮತ್ತೆ ತಿರುಗಿ ಬರುವಾಗ ಮತ್ತದೇ ಕಥೆ ಕಾದಿತ್ತು ಯಾರೋ ಆ ಹೊಸ ಚಪ್ಪಲಿಯನ್ನು ತೊಟ್ಟು ಹೋಗಿದ್ದರು... ಇದು ಎಂಥಹ ಕರ್ಮವಪ್ಪ ಎಂದೆನಿಸಿತು ಆದರು ನಗುನಗುತ್ತಲೇ ಸ್ವೀಕರಿಸಿದೆ. ಸರಿ ಮತ್ತೊಮ್ಮೆ ಎಲ್ಲರಿಂದ ಗುಣಗಾನ ನಡೆಯಿತು ನಾನೇ ಹೇಳಿಬಿಟ್ಟೆ ಕೊನೆಗೆ ನೀವೆಲ್ಲ ನನ್ನ ಮರಿಬಾರದು ನೆನಪಿನಲ್ಲಿಟ್ಟು ಕೊಳ್ಳಲೆಂದು ನನ್ನ ಚಪ್ಪಲಿ ಕಳುವಾಗಿದೆ ನೀವಾರು ಮರೆಯದಿರಿ ಎಂದೇಳಿದ ಕೂಡಲೇ ಒಮ್ಮೆಲೇ ಎಲ್ಲರು ನಕ್ಕುಬಿಟ್ಟರು.

ಇಷ್ಟೆಲ್ಲಾ ಮುಗಿದನಂತರ ಮನೆಗೆ ಬರಿಗಾಲಲ್ಲೇ ಹೊರಟೆ ಎಲ್ಲರು ಬಸ್ ನಲ್ಲಿ ವಿಜಯನಗರದವರೆಗೂ ಬಂದೆವು ಅಲ್ಲಿ ಎಲ್ಲರು ಇಳಿಯುತ್ತಲೇ ಗುರುಗಳು ನನ್ನ ಕರೆದು ಚಿಂತಿಸಬೇಡ ನೀನು ಸಿಂಡ್ರೆಲ ತರ ನಿನಗಾಗಿ ಯಾರೋ ಗಾಜಿನ ಚಪ್ಪಲಿ ಹೊತ್ತು ತಂದಂತೆ ನಿನಗೊ ತರುತ್ತಾರೆ ಎಂದರು ಜೊತೆಗೆ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆಶಿರ್ವಾದವಿಟ್ಟರು ಮತ್ತೊಮ್ಮೆ ತಿರುಗಿ ಹೇಳಿದರು ನಾ ನಿನ್ನ ಮರೆಯುವುದಿಲ್ಲ ಎಂದರು...

ಬರಿಗಾಲಲ್ಲೇ ಸ್ವಲ್ಪ ದೂರ ನೆಡೆದು ಆಟೋ ಹಿಡಿದು ಮನೆಗೆ ಹತ್ತಿರ ಇಳಿದೆವು, ಅಲ್ಲೇ ಇದ್ದ ಬಾಟ ಅಂಗಡಿಗೆ ನನ್ನ ಅಪ್ಪಾಜಿ ಕರೆದುಕೊಂಡು ಹೋಗಿ ಚಪ್ಪಲಿ ಕೊಡಿಸಿದರು ಇಸ್ಟೆಲ್ಲಾ ಆಗಿದ್ದು ಒಳ್ಳೆಯದೇ ಸರಿ ಎನಿಸಿತು ಏಕೆ ಗೊತ್ತೆ ಮೊದಲ ಭಾರಿ ನನ್ನ ಅಪ್ಪ ನನಗೆ ಚಪ್ಪಲಿ ಕೊಡಿಸಲು ಅತಿ ಕಾಳಜಿವಹಿಸಿ ನೀನು ಇದೆ ತರಹದ ಚಪ್ಪಲಿತೆಗೆದುಕೋ ಎಂದು ಅವರೇ ಹಾಯ್ಕೆ ಮಾಡಿ ಚಪ್ಪಲಿ ಕೊಡಿಸಿದರು... ನನಗೇ ಆದ ಆನಂದ ಹೇಳತೀರದು ಎರಡು ಜೊತೆ ಚಪ್ಪಲಿ ಕಳೆದುಕೊಂಡೆಡೆಗೆ ಗಮನ ಇರಲೇ ಇಲ್ಲ. ಇನ್ನು ಮನೆಗೆ ತೆರೆಳಿದರೆ ನೆಡೆದ ಕಥೆ ಹೇಳುತ್ತಲಿದ್ದಂತೆ ನನ್ನ ಅಣ್ಣ ಅಕ್ಕ ಎಲ್ಲರೂ ನೀನು ಅದೃಷ್ಟವಂತೆ ಬಿಡು, ಅದು ಅಪ್ಪ ಬಂದು ನಿನಗೆ ಚಪ್ಪಲಿ ಕೊಡಿಸಿದ್ದಾರೆ ಎಂದು....!!! ನಿಜ ನಾನು ಅದೃಷ್ಟವಂತೆಯೇ ಸರಿ... ಅಪ್ಪ ಎಂದೂ ಅವರಾಗಿ ಬಂದು ಈ ರೀತಿ ಕೊಡಿಸಿರಲಿಲ್ಲ ನನ್ನ ಜೀವನದಲ್ಲೇ ಮೂದಲಬಾರಿ .... ಇದು ನನಗೆ ಸಂತಸದ ಕ್ಷಣ....

ಆಗುವುದೆಲ್ಲ ಒಳ್ಳೆಯದಕ್ಕೆ, ಅಗ್ಗಿದ್ದು,ಆಗುತ್ತಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂದು ನನ್ನ ಮನಸಿಗೆ ಅರಿವಾಯಿತು...ನೀವೆಲ್ಲ ಏನೇಳುತ್ತೀರಿ ಆಗಿದ್ದೇಲ್ಲ ಒಳ್ಳೆಯದಕ್ಕ.....?
ವಂದನೆಗಳು

Sunday, September 13, 2009

ಸಮಾಗಮ

ನೀ ಬರುವುದು ಶುಕ್ರವಾರ ಸಂಜೆ ಆದರೆ ನನಗೆ ಗುರುವಾರ ರಾತ್ರಿಯೆಲ್ಲ ನಿದ್ರೆ ಬರಲೇ ಇಲ್ಲ ಬೆಳಗಾಗುವುದನ್ನೇ ಕಾಯುತ್ತಲಿದ್ದೆ... ಮಧ್ಯೆ ಊರಿಗೆ ಮೆಸೇಜ್ ಮಾಡುವುದು, ಕರೆ ಮಾಡುವುದು ಇದೆ ಕಥೆ ಸಾಗಿತ್ತು ರಾತ್ರಿಯೆಲ್ಲ, ಇನ್ನೇನು ಬೆಳಗಾಯಿತು ಇಂದು ನೀ ಬರುವೆ ಎಂದು ನಿನಗೆ ಇಷ್ಟವಾದ ಊಟ ತಯಾರು ಮಾಡುವ ತಾರತುರಿ ಜೊತೆಗೆ ಮದ್ಯೆ ಮದ್ಯೆ ದೇವರ ಕೋಣೆಗೆ ಹೋಗಿ ದೇವರೆ ನನ್ನ ಕಂದ ಈಗ ವಿಮಾನದಲ್ಲಿದ್ದಾನೆ ಅವನು ತಿನ್ನಲು ಎಲ್ಲದರ ವ್ಯವಸ್ಥೆ ಸರಿ ಆಗಲಿ, ಮತ್ತೊಮ್ಮೆ ಈಗ ದುಬೈನಲ್ಲಿ ಇದ್ದಾನೆ ಅವನು ಹೇಗಿದ್ದಾನೊ ನೀನೇ ಅವನ ಹಾರೈಕೆ ಮಾಡು ದೇವರೇ ಎಂದು ಬೇಡುತ್ತಲಿದ್ದೆ. ಸಂಜೆ ಇನ್ನು ಆಗಿರಲಿಲ್ಲ ಊರಿಂದ ಆಗಲೇ ಕರೆಗಳು ಬರುತ್ತಲಿದ್ದವು ಎಲ್ಲರಿಗು ಉತ್ತರ ಹೇಳುವುದೇ ಆಗಿತ್ತು...

ವಿಮಾನವು ೪.೪೫ ಕ್ಕಾಗಲೇ ಬಂದು ಇಳಿದಿತ್ತು ನಾವು ಪ್ರಯಾಣಿಕರು ಹೊರ ಬರುವ ಬಾಗಿಲಿನತ್ತಲೇ ಇಣುಕಿ ಇಣುಕಿ ನೋಡುತ್ತಲಿದ್ದೆವು... ನೋಡ ನೋಡುತ್ತಿದ್ದಂತೆ ೫.೨೦ ಸಮಯ ದಾಟಿತ್ತು ಜೊತೆಗೆ ನನ್ನ ಸಂಯಮವೂ ದಾಟಿತ್ತು... ಇತ್ತ ನನ್ನ ಪತಿರಾಯರು ಮದ್ಯೆ ಮದ್ಯೆ ತಮಾಷೆಯ ಚಟಾಕಿ ಹಾರಿಸುತ್ತಿದ್ದರು ನನ್ನ ಹುಸಿಕೋಪ ಅವರೆಡೆಗೆ ಹಾರಿತ್ತು... ಸದ್ಯ ಮೊದಲು ಮಗ ಬಂದರೆ ಸಾಕು ಅಂದರೆ ನಿಮಗೆ ತಮಾಷೆನ ಸುಮ್ಮನಿರೋಕೆ ಏನು ಕೊಡಬೇಕು ಎಂದು ಮೆಲ್ಲನೆ ಗದರಿ ನಾ ಮತ್ತದೆ ಬಾಗಿಲಿನೆಡೆ ಕಣ್ಣು ಹಾಯಿಸಿದೆ... ಇನ್ನು ಬರಲಿಲ್ಲವಲ್ಲ ಎಷ್ಟೊತ್ತುಬೇಕು ಹೊರಬರಲು ಬೇಗ ಬರಲಿ ಎಂದು ನೂರೆಂಟು ಸಾರಿ ಬಡಬಡಿಸಿದೆ. ಅತ್ತೊಮ್ಮೆ ಇತ್ತೊಮ್ಮೆ ತಿರುಗಾಡುತ್ತಲಿದ್ದೆ ಮನೆಯವರು ಬಂದ ಬಾ ಎಂದು ಕರೆದೊಡೆ ಅತ್ತಕಡೆ ಓಡಿದೆ...
ಆ ಪುಟ್ಟ ಕಣ್ಣುಗಳು ಅತ್ತಲಿತ್ತ ಸುತ್ತುಗಟ್ಟಿ ನೋಡುತ್ತಲಿತ್ತು ಎಲ್ಲಿರುವರು ನಮ್ಮ ಅಪ್ಪ ಅಮ್ಮ ಎಂದು ಕಣ್ಣು ಹುಡುಕುತ್ತಿತ್ತು ಮುಖದಲ್ಲಿ ಮೌನಮನೆಮಾಡಿತ್ತು... ಎರ್ ಲೈನ್ಸ್ ಕಚೇರಿಯವರು ಕರೆತರುವಾಗ ನಿಮ್ಮವರು ಬಂದಿದ್ದಾರೇ ಎಂದು ಕೇಳುವ ಹಾಗಿತ್ತು ಈ ಪುಟ್ಟ ಕಂದ ಸುತ್ತಮುತ್ತ ನೋಡಿ ಕಾಣುತ್ತಲಿಲ್ಲ ಎನ್ನುವಾಗೆ ಭಾಸವಾಯಿತು... ಒಮ್ಮೆ ನಮ್ಮಿಬ್ಬರ ಮುಖಕಂಡ ಕೂಡಲೇ ಮಂದಹಾಸ ಮೂಡಿತ್ತು.... ಮಗನನ್ನು ನಮಗೆ ಒಪ್ಪಿಸಿದರು ಹಾಗೆ ನಮ್ಮ ಸಹಿ ಕೂಡ ತೆಗೆದುಕೊಂಡರು ನಾವು ಅವರಿಗೆ ಧನ್ಯವಾದ ತಿಳಿಸಿ ಹೊರಟೆವು.....

ದಾರಿಯಲ್ಲಿ ಬರುತ್ತಿದ್ದಂತೆ ಕಂದ ನಿನಗೆ ತೊಂದರೆ ಆಯ್ತ... ಭಯ ಆಯ್ತ ಎಂದು ಕೇಳಿದರೆ ಏನು ಇಲ್ಲ ಏನು ತೊಂದರೆನೂ ಆಗಲಿಲ್ಲ, ನಾನು ...ಬೆಂಗಳೂರಿನಲ್ಲಿ ವಿಮಾನ ಹತ್ತಿದ ಕೂಡಲೇ ಗಜನಿ ಹಿಂದಿ ಚಲನಚಿತ್ರ ಬರುತ್ತಿತ್ತು ನೋಡಿ ಮುಗಿಸುವಸ್ಟರಲ್ಲಿ ದುಬೈ ಬಂತು, ಇನ್ನು ದುಬೈನಲ್ಲಿದ್ದಾಗ ವಿಡಿಯೋ ಗೇಮ್ಸ್ ಆಟವಾಡುತ್ತಲಿದ್ದೆ... ಮತ್ತೆ ದುಬೈನಲ್ಲಿ ವಿಮಾನ ಹತ್ತಿದಾಗ ಎಫ್ ಎಂ ಕೇಳುತ್ತಲಿದ್ದೇ ಬೇಗ ಕುವೈಟ್ ಬಂತು ನನಗೇನು ಬೇಜಾರಾಗಲೇ ಇಲ್ಲ.... ಕಂದ ನಾ ಬಹಳ ಭಯ ಪಟ್ಟಿದ್ದೇ ಎಂದಾಗ ನಗು ಅವನಿಗೆ ನಗುತ್ತ ಹೇಳಿದ ತಾತ ಕೂಡ ಹಾಗೆ ರಾತ್ರಿ ಎಲ್ಲ ಅಳುತ್ತ ಕೂತಿತ್ತು ಎಂದು ಜೋರು ನಗು ಪ್ರಾರಂಭಿಸಿದ ಹ ಹ ಹ ಅಹ.. ಇಷ್ಟು ಮಾತಾಡುತ್ತಲಿದ್ದ ಹಾಗೆ ಮನೆ ತಲುಪಿದೆವು..ಅಪ್ಪನಿಗೆ ಕಾಣದಂತೆ ಕಂದ ನಾನು ನಿನ್ನ ಜೊತೆ ಇರಲಿಲ್ಲವೆಂದು ಏನಾದರು ಬೇಸರ ಕೋಪ ಬಂದಿತ್ತೆ ಎಂದು ಕೇಳಿದಕ್ಕೆ ಇಲ್ಲಮ್ಮ ಎಂದಾಗ ನನ್ನ ಮನದಲ್ಲೇನೋ ಸಮಾದಾನದ ನಿಟ್ಟುಸಿರು ಬಿಟ್ಟಂತಾಯಿತು..

ಸ್ವಾಗತ ಬೋರ್ಡ್ ಕಂದಮ್ಮನಿಗೆ ..
ಮನೆಗೆ ಬರುತ್ತಲಿದ್ದಂತೆ ಊರೆಗೆ ಕರೆಮಾಡಿ ಎಲ್ಲರಿಗು ಹೇಳಿ ನಾ ಬಂದು ತಲುಪಿದೆ ಆರಾಮಾಗಿ ಏನು ತೊಂದರೆ ಇಲ್ಲವೆಂದು ಹೇಳಿ ಎಂದು ಎಲ್ಲರೊಟ್ಟಿಗೆ ಮಾತಾಡಿ ಖುಷಿ ಪಟ್ಟನು.... ನಾವು ಅವನ ಕಂಡು ಖುಷಿ ಪಟ್ಟೆವು ಜೊತೆಗೆ ಊರಿಂದ ಬಂದಿದ್ದ ಸಿಹಿಹೋಳಿಗೆ ಕಹಿ ಎಲ್ಲವನ್ನು ಮರೆಸಿತು.

ನನ್ನ ಕಂದಮ್ಮನ ಸುಖ ಪ್ರಯಾಣಕ್ಕೆ ಸಹಕರಿಸಿದ ನನ್ನ ಮನೆ ಮಂದಿ, ವಿಮಾನದಲ್ಲಿ ನನ್ನ ಕಂದ ಊಟ ಮಾಡಲು ಸಹಕರಿಸಿದ ಪಕ್ಕದಲ್ಲೇ ಕುಳಿತಿದ್ದ ಮಹಿಳೆ, ಗಗನ ಸಖಿಯರು, ವಿಮಾನ ಕಚೇರಿಯಾ ನಿರ್ವಾಹಕರು, ಕಾಣದೆ ಸಹರಿಸಿದ ಹಲವು ಕೈಗಳಿಗೂ ಹಾಗು ನಮ್ಮನ್ನು ಸಾಂತ್ವಾನಿಸಿದ ಸ್ನೇಹ ವೃಂದಕ್ಕೆ ನಮ್ಮ ನಮ್ರ ನಮನಗಳು..

ನಿಮ್ಮ,
ಮೃದು ಮನಸು
ಸವಿಗನಸು
ಇವರಿಬ್ಬರ ಜೊತೆಗೆ ನನ್ನ ಕಂದಮ್ಮ ...

Wednesday, September 9, 2009

ಶುಭಪ್ರಯಾಣ

ಪ್ರಿಯ ಬ್ಲಾಗ್ ಸ್ನೇಹಿತರೇ... ನಿಮ್ಮೆಲ್ಲರ ಶುಭಾಶಿರ್ವಾದದಿಂದ ನಮ್ಮ ಮಗ ಇಂದು ಸಂಜೆ ಯಾವುದೇ ತೊಂದರೆ ಇಲ್ಲದೆ ಕುವೈಟ್ ಬಂದು ತಲುಪಿದ!!!!!!

ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ಸದಾ ನಮ್ಮಮೇಲಿರಲಿ

ಬೇಸಿಗೆ ರಜೆ ಎಂದು ನಿನಗೋ ಮೂರು ತಿಂಗಳ ರಜೆ, ಈ ಬೇಸಿಗೆಯ ಬಿಸಿಯಲಿ ನೀ ಏನು ಮಾಡಲು ಸಾಧ್ಯ ಇರುವಷ್ಟು ರಜೆಯನ್ನು ಊರಿನಲ್ಲಿ ಕಳೆಯಲು ಇಬ್ಬರು ಹೊರಟೆವು, ಆದರೆ ನಾ ನಿನ್ನೊಟ್ಟಿಗೆ ೩ ತಿಂಗಳು ರಜೆ ಕಳೆಯಲಾಗದೆ ಕೆಲಸದ ನಿಮಿತ್ತ ಮರಳಿ ಮರುಭೂಮಿಗೆ ಬರಬೇಕಾಯಿತು... ನೀ ಬರಲು ಸ್ನೇಹಿತರೊಟ್ಟಿಗೆ ಬರುವಾಗೆ ತಯಾರಿ ನಡೆಸಿದ್ದೆವು... ನಿನ್ನ ಬರುವಿಕೆಗೆ ಯಾವ ಕೊರತೆಬರದಂತೆ ಎಲ್ಲ ವ್ಯವಸ್ಥೆಯೂ ನೆಡೆದಿತ್ತು...

ಇನ್ನೇನೂ ನನ್ನ ಕಂದಮ್ಮ ತಾಯ ಮಡಿಲ ಸೇರುವ ದಿನ ಬಹಳ ಹತ್ತಿರವಿತ್ತೆನ್ನುವಾಗಲೇ ಕಾರಣಾಂತರದಿಂದ ಸ್ನೇಹಿತರ ಜೊತೆಗೂಡಿ ಬರಲಾಗದೆ ಪ್ರಯಾಣ ರದ್ದಾಯಿತು ಮತ್ತೆ ನಿನ್ನ ಕರೆತರುವುದೆಂತು ಚಿನ್ನ ನನ್ನ ಮುದ್ದು ನೀ ಒಬ್ಬೊಂಟಿಯಾದೆಯಲ್ಲಾ ನಿನ್ನ ಕರೆತರಲು ನಾವೇ ಬರೋಣವೆಂದರೆ ಕೆಲಸಗಳ ಒತ್ತಡದೊಂದಿಗೆ ಹಲವಾರು ಇರುಸುಮುರುಸುಗಳು, ನನ್ನ ಮನದಲ್ಲಿ ನೀ ಬರಲಾಗದೆಂದು ತಿಳಿದೊಡೆ ನನಗೇನೋ ದುಗುಡ, ಆಘಾತ, ದುಃಖ ಎಲ್ಲವೂ ಒಮ್ಮೆಲೆ ಹೊಮ್ಮಿ ಬಂತು... ನಿನ್ನನ್ನು ಕರೆತರಲು ನಾವೇ ಹೋಗುವುದೊ ಬೇರೆ ವ್ಯವಸ್ಥೆ ಮಾಡುವುದೋ ಎಂಬ ದ್ವಂದ್ವ ಮನಸಿನಲಿದ್ದಾಗ ಸ್ನೇಹಿತರಿಂದ ತಿಳಿಯಿತು "ಜೊತೆಯಿಲ್ಲದ ಮಗುವಿನ ಪ್ರಯಾಣ(ಅನ್ಅಕಂಪನೀಡ್ ಚೈಲ್ಡ್ ಟ್ರಾವೆಲ್)" ಎಂದು ಪ್ರಯಾಣದ ಚೀಟಿ ಕಾಯ್ದಿರಿಸಿದ್ದರೆ (ಟಿಕೆಟ್ ಬುಕ್) ಯಾವುದೇ ತೊಂದರೆ ಇಲ್ಲದೆ ಕರೆದುಕೊಂಡು ಬರುತ್ತಾರೆಂದಾಗ ಮತ್ತದೇ ದುಃಖ ಚಿನ್ನ... ನಮ್ಮ ನಿಲುವನ್ನು ನಿನ್ನಪ್ಪ ಕರೆಮಾಡಿ ಹೇಳಿದಾಗ ಕಂದ ನೀನು ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಬೇಕು, ಗಗನಸಖಿಯರು ನಿನಗೆ ಸಹಾಯ ಮಾಡುತ್ತಾರೆಂದಾಗ ನಿಜವಾಗಿಯೂ ನಾ ನಂಬದಂತಷ್ಟು ಮಟ್ಟಕ್ಕೆ ನಿನ್ನ ಉತ್ತರ ಕೇಳಿತು... "ಓಹೋ!! ಅದಕ್ಕೇನು ಬರುತ್ತೇನೆ, ನನಗೇನು ಭಯವಿಲ್ಲ" ಎಂದು ಧೈರ್ಯವಾಗಿ ನಗುವಿನಲ್ಲೇ ಒಪ್ಪಿದ್ದೇ..!! ಈ ಮಾತು ಕೇಳುತ್ತಿದ್ದಂತೆ ನನಗೆ ಒಮ್ಮೆಲೇ ದುಃಖ ತಡೆಯದೆ ಕಣ್ಣೀರ ಧಾರೆ ಹರಿದುಬಿಟ್ಟಿತ್ತು ಇದ ಕಂಡ ನಿನ್ನಪ್ಪ ನನ್ನೊಮ್ಮೆ ಮೆದುವಾಗಿ ರೇಗಿದರು ನಿನ್ನದು ಭಾವಾತಿರೇಕ. ನೀ ವಿದ್ಯಾವಂತೆ, ಬುದ್ದಿವಂತೆ, ಎಲ್ಲ ತಿಳಿದಿದ್ದು ನೀನೇ ಹೀಗೆ ಮಾಡಿದರೆ ಹೇಗೆ? ನಮ್ಮಲ್ಲಿ ವ್ಯವಸ್ಥೆ ಇದೆ ಅದನ್ನ ಉಪಯೋಗಿಸಿಕೊಳ್ಳಲು ಇದು ಒಂದು ಒಳ್ಳೆ ಸಮಯ ಎಂದೆಲ್ಲಾ ಹಲವು ಸಮಜಾಯಿಷಿ ಕೊಟ್ಟರು ಆದರೇನು ಮಾಡುವುದು ಕಂದ? ನಾ ಎಲ್ಲಿ ಏನೇ ಆಗಿರಲಿ, ಎಷ್ಟೆ ಬುದ್ದಿ ಇದ್ದರೇನು ಮಗುವಿನ ಅಮ್ಮನಲ್ಲವೇ? ನನ್ನ ಕರುಳಬಳ್ಳಿ ಇನ್ನು ಪುಟ್ಟದ್ದು ಅದಕ್ಕಿಗಾಗಲೇ ಜವಾಬ್ದಾರಿ ಕೊಟ್ಟುಬಿಟ್ಟಿರುವೇ. ಅಮ್ಮನಿಲ್ಲದಾಗ ಊಟಮಾಡುವುದು....ತಣ್ಣಗಿದ್ದ ಊಟವನ್ನು ಬಿಸಿಮಾಡುವುದು...ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ಅದನ್ನ ಭದ್ರಪಡಿಸಿ ಮನೆಯನ್ನ ಜೋಪಾನಿಸುವುದು ಇವಲ್ಲದೆ ಹತ್ತು ಹಲವು ನಿನ್ನ ಹೆಗಲೇರಿದೆ ನಿನ್ನ ವಯಸ್ಸಿನ ಮಕ್ಕಳನ್ನು ಇನ್ನು ಪುಟ್ಟ ಕಂದಮ್ಮರಂತೆ ನೋಡಿಕೊಳ್ಳುವ ತಾಯಂದಿರ ಕಂಡರೆ ನನಗೇನೋ ಒಂದು ರೀತಿ ನಾ ತಪ್ಪು ಮಾಡಿದೆ ನನ್ನಿಂದ ನಿನಗೆ ಸಲ್ಲಬೇಕಾದ ಪ್ರೀತಿ ಹಾರೈಕೆ ಸಲ್ಲಲಿಲ್ಲವೇನೋ ಎಂಬ ಭಾವನೆ ಮನದಾಳದಲ್ಲಿ ಆಗಾಗ ಮೂಡುತ್ತೆ, ಅಲ್ಲದೆ ಈ ಮನಸಿನಲ್ಲಿ ಕಾಡುತ್ತೆ ನಾ ಏನು ಮಾಡಲಿ ಕಂದ ನಮ್ಮ ವ್ಯವಸ್ಥೆಗಳು ಬದಲಾಗಿವೆ, ನಿನ್ನ ಭವಿಷ್ಯದ ನೆಲೆ ಹಚ್ಚ ಹಸಿರಾಗಿರಲೆಂಬುದು ನನ್ನ ಇಚ್ಚೆ...

ನೀ ಇನ್ನು ಮರುಭೂಮಿಯ ಮುಟ್ಟುವವರೆಗೂ ನನ್ನ ಹೃದಯಬಡಿತ ಅತಿರಭಸವಾಗಿರುತ್ತೆ. ಮನದ ಮೈದಾನದಲ್ಲಿ ಹಲವಾರು ಯಕ್ಷಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನಿನ್ನ ನೋಡುವವರೆಗೂ ನಿದ್ರಾಹಾರ ಸೇರದು. ಕಣ್ಣಂಚಿನ ಕಂಬನಿ ಅಲ್ಲೇ ಮೂಡಿಬಿಟ್ಟಿದೆ ನೀ ಬರುವವರೆಗೂ ಅದು ಮಾಸುವ ಸೂಚನೆ ಕಾಣುತ್ತಿಲ್ಲ.

ನೀ ಬೆಂಗಳೂರಿಂದ ಕುವೈಟ್ಗೆ ನೇರ ಒಂದೇ ವಿಮಾನದಲ್ಲಿ ಬರುವಂತಿದ್ದರೆ ನನಗಷ್ಟು ಭಯ, ದುಃಖವೇನಿರುತ್ತಿರಲಿಲ್ಲವೇನೋ ಈಗ ದುಬೈ ವಿಮಾನ ನಿಲ್ದಾಣದಲ್ಲಿ ಸುಮಾರು ೩ ಗಂಟೆಗಳ ಕಾಲ ತಂಗಿದ್ದು ಮತ್ತೊಂದು ವಿಮಾನದಲ್ಲಿ ಬರಬೇಕು ನನಗೆ ಇಲ್ಲೇ ಹೆಚ್ಚಿನ ಆಂತಕ ನಿನಗೆಲ್ಲಿ ಬೇಸರವಾಗುತ್ತೊ, ಎಲ್ಲಿ ನೊಂದುಕೊಂಡು ಬೀಡುತ್ತೀಯೋ, ದುಃಖದಿ ನನ್ನ ಶಪಿಸಿಬಿಡುತ್ತೀಯೇನೋ...ನನ್ನಮ್ಮ ನನ್ನ ಜೊತೆಗಿದ್ದರೆ ಈ ರೀತಿ ತೊಂದರೆ ಇರುತ್ತಿತ್ತೆ ಎಂಬ ಭಾವನೆ ಬರುವಾಗೆ ಪರಿಸ್ಥಿತಿ ಎಲ್ಲಿ ಒದಗಿಬರುತ್ತೋ ಎಂಬ ಭೀತಿ ಕಾಡುತ್ತಿದೆ ನನ್ನ ಕಂದಮ್ಮ.... ನಿನಗೆ ಧೈರ್ಯ ತುಂಬುವ ಶಕ್ತಿ ಆ ಕಾಣದ ದೇವರೇ ನೀಡಬೇಕು. ಊರಲ್ಲೂ ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಎಲ್ಲರಿಗೊ ತಡೆಯಲಾಗದ ಆತಂಕ ಅವರಿಗೊ ನಾನು ಕ್ಷಮೆಯಾಚಿಸುತ್ತೇನೆ.

ನಿನ್ನ ಬರುವಿಕೆಗಾಗಿ ಕಾದು ಕುಳಿತಿರುವೆ... ಮನದ ದುಗುಡ ಸಾವಕಾಶದಿ ತಹಬದಿಗೆ ತರಲು ಪ್ರಯತ್ನಿಸುತ್ತಲಿರುವೆ ಕಂದ.... ಈ ಎಲ್ಲಾ ಪರಿಸ್ಥಿತಿಗೆ ಕಾರಣ ಯಾರೆಂದು ತಿಳಿಯದು? ನೀನೋ, ನಾನೋ, ಅಪ್ಪನೋ, ಸಮಯವೋ, ಅಥವಾ ದಿನವೋ ತಿಳಿಯದು ಏನಾದರು ಸರಿ ನನ್ನ ಕಂದ ನೀ ಬರುವ ಹಾದಿಯಲಿ ಲೋಹದ ಹಕ್ಕಿಯು ನಿನ್ನ ಕರೆತರಲು ಆ ದೇವವೃಂದಗಳು ನಗೆಯ ಹೂವ ಚೆಲ್ಲಲೆಂದು ಆಶಿಸುತ್ತೇನೆ. ನಿನ್ನ ಪ್ರಯಾಣ ಯಾವ ಕೊರತೆಬಾರದೆ ನಿನಗೂ ಸಂತಸವಾಗುವ ಹಾಗೆ ಪ್ರಯಾಣ ಸುಖವಾಗಿ ಸಾಗಲೆಂದು ಹೃದಯಪೂರ್ವಕವಾಗಿ ಹರಸುವೆವು.
ನನ್ನದೇನೇ ತಪ್ಪಿದ್ದರೂ ಕ್ಷಮಿಸಿಬಿಡು ಕಂದ ಪೂರ್ಣಪ್ರಮಾಣದ ತಾಯಾಗಲಿಲ್ಲ.... ನಿನ್ನ ಹಾರೈಕೆ ಮಾಡುವುದರಲಿ ಎಲ್ಲೋ ಸೋತಿರುವೆನು...

ಇಷ್ಟೆಲ್ಲ ಅನುಭವದಿ ಒಂದಂತು ನಿಜ, ನಿನ್ನ ಹಾದಿಯಲಿ ಕಷ್ಟ ಸುಖ ಏನೇ ಬಂದರೂ ಎದುರಿಸಿ ನೀ ಬಾಳುವೆ ಎಂಬ ನಂಬಿಕೆ ನನಗಿದೆ ಅಂತೆಯೇ ಜೀವನಪೂರ್ತಿ ಯಾರನ್ನು ಆಶ್ರಯಿಸದೆ ನಿನ್ನ ಕಾಲಮೇಲೆ ನೀ ನಿಲ್ಲುವೆ... ನೀ ನಮ್ಮ ಹೆಮ್ಮೆಯ ಪುತ್ರನಾಗಿ ಬಾಳು. ನಿನ್ನ ಅಮ್ಮ ಅಪ್ಪನ ಸಾಕಬೇಕೆಂಬ ಬೇಡಿಕೆ ಏನಿಲ್ಲ.... ದೈನೆ ಎಂದು ಬಂದ ಜನರಿಗೆ ನೆಲೆಯಾಗು, ಹತ್ತಾರು ಜನಸಮೂಹಕ್ಕೆ ಮಾದರಿಯಾಗಿ ಬಾಳು ಆಶ್ರಯ ಬೇಡಿ ಬಂದವರಿಗೆ ಆಶ್ರಯನೀಡಿ ಅವರ ದುಃಖ ಮರೆಸುವ ಶಕ್ತಿ ನಿನ್ನಲ್ಲಿ ಮೂಡಲಿ.

ಒಲವಿನ ಕುಡಿಗೆ ಪ್ರಯಾಣದ ಬಿಸಿ ಮುಟ್ಟದಿರಲಿ ಎಂದು ಆಶಿಸುತ್ತ ಶುಭಪ್ರಯಾಣ....ನನ್ನ ಕಂದಮ್ಮಗೆ....


ಪ್ರೀತಿಯಿಂದ
ಮೃದುಮನಸಿನ ಅಮ್ಮ...
ಸವಿಗನಸಿನ ಅಪ್ಪ..



ತಾಯಿ ಮಗನ ಸಮಾಗಮ ಮುಂದಿನ ಭಾಗದಲ್ಲಿ....

Monday, August 31, 2009

ಮುನಿಸು ತರವೇ

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?

ಮುಗಿಲ ಮಳೆಯ ಭುವಿಗೆ ನೀಡಿ
ಹಚ್ಚ ಹಸಿರು ಜೊತೆಜೊತೆ ಗೂಡಿ
ಜೀವಿಗೆ ಹುಸಿರ ನೀಡೋ ಜೀವನಾಡಿ
ಅದುವೇ ನಮ್ಮ ನಿಸರ್ಗ...!!!!
ಗೆಳತಿ ನೀ ನನ್ನ ನಿಸರ್ಗ ಅಲ್ಲವೇ ..?

ನಿಸರ್ಗದಂತೆ ನಿನ್ನ ಸ್ನೇಹದ ಕುಡಿ
ಬೆಳಸಿದೆ ಅಂದು ಇಂದು ನನ್ನೊಡಗೂಡಿ
ನಿನ್ನ ಸ್ನೇಹಕೆ ಪ್ರೇಮವೇ ಕನ್ನಡಿ
ಪ್ರೇಮಸುಧೆ ನನ್ನಡೆಗೆ ನೀಡಿ
ಹೊರಟಿರುವೆಯಲ್ಲೇ ..?

ನಿನ್ನ ಸ್ನೇಹದಿ ಯಾವ ಪರಿಧಿ ಇಲ್ಲ
ನಿನ್ನ ತೊರೆಯುವ ಮನಸು ನನಗಿಲ್ಲ
ಏಕೆ ನಿನಗೆ ತೊರೆವ ಮನಸು ಬಂದಿದೆಯಲ್ಲ
ಮೌನ ಮುಸುಕಿ ಮುನಿಸು ಮೂಡಿದೆಯಲ್ಲ
ಇದು ನಿನಗೆ ತರವೇ..?

ಮುನಿವ ಮನಕೆ ನನ್ನದೊಂದು ಬೇಡಿಕೆ
ನನ್ನದೇನೆ ತಪ್ಪಿದ್ದರೂ ಕ್ಷಮಿಸೆಂಬ ಕೋರಿಕೆ
ನಿನ್ನೊಟ್ಟಿಗೆ ನೆಡೆದ ಮಾತಲ್ಲೇ ಹಿತವಿದೆ
ಅದು ಕೊನೆವರೆಗೂ ಇರಲೆಂಬ ಮನಸಿದೆ
ನಿನ್ನ ಬಿಡೋ ಮನಸಿಲ್ಲವೇ..?

ಸ್ನೇಹಿ ನಿಸರ್ಗ!! ನೀ ನೀಡು ಸ್ನೇಹ ಸ್ವರ್ಗ
ನಿನ್ನ ಸ್ನೇಹದಿ ನಾ ಅರಿವೇ ಪ್ರೇಮಮಾರ್ಗ
ಸ್ನೇಹಸುಧೆ ಮುನಿವ ಮನಸು ದೂಡಿ
ನೀ ಬಂದು ಮೀಟು ಸ್ನೇಹ ನಾಡಿ
ನೀ ಸ್ನೇಹಧಾರೆಯಲ್ಲವೇ..?

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?