Tuesday, January 22, 2013

ಮನಸು-ಕನಸು ಇವೆರಡರ ನಡುವೆ

ನನ್ನ ಪ್ರೀತಿಯ ತಮ್ಮ ಡಾ.ಲೋಹಿತ್ ತೆಗೆದ ಕೆಲವು ಚಿತ್ರಗಳಿಗೆ ನನ್ನ ಸಾಲುಗಳು :)

-ಮುಗ್ಧ ಮನಸು-


ಛಳಿಯಲಿ ಬೆಚ್ಚಗೆ ಮಲಗಿದ್ದೆ
ಅಮ್ಮನೋ ಬಿಡದೆ ಮುದ್ದಿಸಿ
ನನ್ನ ಎಬ್ಬಿಸಿ ಬುತ್ತಿ ಕಟ್ಟಿ
ಶಾಲೆಗೆ ಕಳುಹಿಸಿಹಳು....

ಬೆನ್ನಿಗೆ ಬಿದ್ದ 
ಪುಸ್ತಕದ ಹೊರೆ ಹೊತ್ತು
ಮನೆ ಬಿಟ್ಟು ದೂರ ನೆಡೆದರೂ 
ತೂಗಡಿಕೆ ಏಕೋ ಕಾಡಿದೆ ...

ಬಿಸಿಲು ಎಳಸಾಗಿ
ಕಾಲುವೆಯು ಹೊಳಪಾಗಿ
ಗಾಳಿಯು ತಂಪೆರಗಿ
ನನ್ನ ಚುಂಬಿಸುತಿವೆ
ಎಳೆ ಮನಸಿಗೆ ಸುಖವೆನಿಸಿದೆ...

ರಸ್ತೆ ಬದಿ, ಸೇತುವೆ, ಯಾವುದಾದರೇನು
ಕೊಂಚ ವಿಶ್ರಮಿಸುವ 
ಆಸೆಯಲಿ ಹೊಟ್ಟೆ ತುಂಬುವ
ಬುತ್ತಿ ಆಶ್ರಯಿಸಿ 
ಮಂಪರಿಗೆ ಜಾರಿರುವೆ 

-------------

-ಭವಿಷ್ಯದ ಕನಸು-


ಬುತ್ತಿಗಿಂತ ಅತಿ ಹೆಚ್ಚು
ಕನಸುಗಳನು ಹೊತ್ತು
ಭವಿಷ್ಯ ಹುಡುಕ ಹೊರಟ
ಕೂಸು ಯಾ ಒಡಲ ಮುತ್ತು


ಹಾದಿ ಸವೆಸಿದ ಹೆಜ್ಜೆಗಳು
ಸದಾ ನವಿರಾದ ಗೆಜ್ಜೆಗಳಲಿ
ಮುಂಬರುವ ಬದುಕಿಗೆ
ಹೊಸ ಭಾಷ್ಯ ಬರೆಯಲಿದೆ.. 

ನೇಸರ ಬೆಳಕಿಗೆ
ಹೊಳೆವ ಕಣ್ಣು
ಯಶಸ್ಸಿನ ಆಗರ
ಬೆಳೆಸುವಳು ಈ ಹೆಣ್ಣು...