Showing posts with label ಮೂಕ ಪ್ರಾಣಿ. Show all posts
Showing posts with label ಮೂಕ ಪ್ರಾಣಿ. Show all posts

Thursday, July 14, 2011

ಮೂಕವೇದನೆ


ನಾಯಿ ಏಕೋ ಮಣ್ಣು ಕೆರೆಯುತ್ತಿದೆ, ಅಲ್ಲೇ ಕೂತು ಅಳುತ್ತಿದೆ. ಮಾತು ಬಾರದೆ ಮೂಕವೇದನೆಯಲ್ಲಿದೆ. ದಾರಿ ಹೋಕರು ಯಾರೂ ಅದನ್ನು ಗಮನಿಸಲೇ ಇಲ್ಲ. ಎರಡು ಮೂರು ದಿನಗಳು ಕಾದ ನಾಯಿ ಬೇಸರದಿಂದ ಇದ್ದ ಜಾಗ ಬಿಟ್ಟು... ಓಡಿತು ಅಲ್ಲೇ ಪಕ್ಕದ ಊರಲ್ಲಿ ಯಾರದೋ ಮನೆ ಬಾಗಿಲಲಿ ಕಣ್ಣೀರಿಡುತ್ತ ಸಪ್ಪಗೆ ಕೂರುತ್ತಿತ್ತು, ಬಾಲ ಅಲ್ಲಾಡಿಸುತ್ತಿತ್ತು. ಮನೆಯೊಳಗಿನ ಒಡಯರನ್ನು ಕರೆದೊಯ್ಯುವ ಸನ್ನೆ ಮಾಡುತ್ತಿತ್ತು... ಮನೆಯವರು ಎಲ್ಲೋ ನಾಯಿ ಹಸಿವಾಗಿದೆ ಎಂದು ಅನ್ನ ನೀಡಿದರೂ ತಿನ್ನದೇ ಅಳುತ್ತಿತ್ತು. ಮೂಕ ಪ್ರಾಣಿಯ ಈ ವೇದನೆ ಮನುಷ್ಯನಿಗೆಲ್ಲಿ ಅರ್ಥವಾಗಬೇಕು. ಯಾರೂ ಅರಿತುಕೊಳ್ಳುವ ಹಾಗೆ ಕಾಣುತ್ತಿಲ್ಲವೆಂದು ಆ ಮನೆ ಒಡೆಯನ ಪಂಚೆಯನ್ನು ಬಾಯಲ್ಲಿ ಕಚ್ಚಿ ಎಳೆದೊಯ್ಯಲ್ಲು ಯತ್ನಿಸುತ್ತಿದ್ದಂತೆ ಆ ಮನೆಯವರು ಒಮ್ಮೆಲೆ ಅರಿತು ನಾಯಿ ಸಾಗಿದ ದಾರಿಯಲ್ಲೆ ನೆಡೆದರು, ಮೂಕ ಪ್ರಾಣಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ನೆಲವನ್ನೇ ಕೆರೆಯುತ್ತ ರೋಧಿಸುತ್ತಿತ್ತು.

ಇದನ್ನು ಕಂಡ ಆ ಮನೆಯ ಯಜಮಾನ ಅನುಮಾನದಿಂದ ನಾಲ್ಕಾರು ಜನಕ್ಕೆ ತಿಳಿಸಿ, ನಂತರ ಪೋಲೀಸರಿಗೆ ತಿಳಿಸಿದರು. ಆಗಲೇ ತಿಳಿದಿದ್ದು ಅಲ್ಲೊಂದು ಹೆಣ್ಣು ಶವವಾಗಿ ಮಲಗಿದ್ದಾಳೆಂದು. ಮಣ್ಣೊಳಗೆ ಮಣ್ಣಾಗಿದ್ದ ದೇಹ ಹೊರತೆಗೆಯುತ್ತಿದ್ದಂತೆ ನಾಯಿ ಆ ಹೆಣ್ಣಿನ ಪಾದದಡಿ ನಮಸ್ಕರಿಸುತ್ತ ಮಲಗಿದ್ದನ್ನು ಕಂಡು ಜನರೆಲ್ಲ ಮೂಕರಾದರು.

ನಂತರದ ಬೆಳವಣಿಗೆಯಲ್ಲಿ ತಿಳಿದಿದ್ದು ಆ ಹೆಣ್ಣು ತುಂಬು ಗರ್ಭಿಣಿ, ಪ್ರೀತಿಸಿ ಮದುವೆಯಾಗಿದ್ದಳು. ಶ್ರೀಮಂತ ಮನೆಯ ಹುಡುಗನನ್ನು ವರಿಸಿದ್ದೇ ತಪ್ಪಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು.

ನಾಯಿ ಇಷ್ಟು ನೋಯಲು ಕಾರಣ ಸತ್ತು ಹೋಗಿದ್ದ ಆ ಹೆಣ್ಣು ತಾನು ಆ ಮನೆಗೆ ಹೋದಾಗಿನಿಂದ ದಿನಾ ರಾತ್ರಿ ನಾಯಿಗೆ ಊಟವಾಕುತ್ತಳಿದ್ದಳಂತೆ. ಈ ಅನ್ನದ ಋಣ ಇಷ್ಟೆಲ್ಲಾ ಮಾಡಿಸಿದೆ.

ಮನುಷ್ಯನಲ್ಲಿ ಈ ಗುಣ ಬರಬಹುದೇ ಖಂಡಿತಾ ಇಲ್ಲ. ಮೂಕಪ್ರಾಣಿಗಳಲ್ಲಿರುವ ಪ್ರೀತಿ ನಮ್ಮಂತಹವರಲ್ಲಿ ಹೇಗೆ ಬರಲು ಸಾಧ್ಯ.

ಇದು ನಮ್ಮೂರಿಗೆ ಹತ್ತಿರ ಇರುವು ಯಾವುದೋ ಹಳ್ಳಿಯಲ್ಲಿ ನೆಡೆದಿತ್ತೆಂದು ನನ್ನಕ್ಕ ಹೇಳಿದ್ದಳು..