Tuesday, December 29, 2009

-ಸಂಗೀತಗಾರುಡಿಗ-ಸಾಹಸಸಿಂಹ-


ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು

ನೀನಿಲ್ಲದ ಸಂಗೀತ ಸುಧೆ ಕರಾಳ ಮೌನದಿ
ಕನ್ನಡಿಗರ ಮನ-ಮನೆಗಳಲಿ ಕಾರ್ಮೋಡ ಕವಿಸಿದೆ

ಹುಟ್ಟೊಂದು ದಿನ, ಸಾವೊಂದು ದಿನವೆಂದು ಬರೆದನಾ ಬ್ರಹ್ಮ
ನಿನ್ನ ಹುಟ್ಟುಸಾವು ಎರಡೂ ಒಂದೇ ದಿನ ಏನಿದರ ಮರ್ಮ!!!!

ನಿನ್ನ ಅಗಲಿಕೆಯಿಂದ ಸಂಗೀತ ಸರಸ್ವತಿ ಕಳೆಗುಂದಿಹಳು
ಈ ನಿನ್ನ ಸ್ಥಾನವ ತುಂಬಲು ಹಾತೊರೆದು ನಿಂದಿಹಳು
ಓ ದೇವನೆ ಸಂಗೀತ-ಸಾಹಿತ್ಯ ಸರಸ್ವತಿಗೆ
ಎಂದೂ ಬೀಳದಿರಲಿ ದುಃಖದ ಕರಿನೆರಳು

ಓ ಗಾನ ಕೋಗಿಲೆಯೆ ಕೇಳಲೆಲ್ಲರು ಧ್ವನಿಸುರುಳಿಯಲಿ ನಿನ್ನ ಗಾಯನ
ನಿನ್ನ ಆ ಮಾಂತ್ರಿಕ ಧನಿಗೆ ಮನಸೂರೆಗೊಂಡು ಮಾಡಲೆಲ್ಲರು ನಿನ್ನ ಮನನ
ಓ ಸಂಗೀತ ಆರಾಧಕನೆ ನಿನಗಿದೋ ನಮ್ಮೆಲ್ಲರ ಹೃತ್ಪೂರ್ವಕ ನಮನ
ನಮ್ಮನಗಲಿದ ದೇಹ ಮತ್ತೊಮ್ಮೆ ಹುಟ್ಟಿ ಕರುನಾಡಿನಲಿ ಮೂಡಿಸಲಿ ಸಂಚಲನ


ನಾನು ಕಚೇರಿಯಿಂದ ಮನೆಗೆ ಹೋಗುವ ಹೊತ್ತಿಗೆ ಸರಿಯಾಗಿ ಟಿವಿಯಲ್ಲಿ ವಾರ್ತೆಗಳು ಬರುವ ಸಮಯ, ನನ್ನ ಮಗನ ನೆಚ್ಚಿನ ಗಾಯಕ ಸಿ. ಅಶ್ವಥ್ (ತಾತ) ಇವರ ಪಾರ್ಥೀವ ಶರೀರವನ್ನು ಟಿ.ವಿಯಲ್ಲಿ ತೋರಿಸುತ್ತಲಿದ್ದರು ತಕ್ಷಣ ಅಯ್ಯೋ ಆ ತಾತ ಸತ್ತುಹೋಗಿದ್ದಾರೆ ಅಮ್ಮ ಇವರ ಮೇಲೆ ಒಂದು ಕವನ ಬರಿ ಬ್ಲಾಗಿಗೆ ಹಾಕು ಪ್ಲೀಸ್ ಎಂದು ತುಂಬಾ ನೊಂದು ಹೇಳಿದನು. ನನ್ನ ಮಗನ ದುಃಖ ನೀಗಿಸಲು ಈ ಪುಟ್ಟ ಕವನ ಹಾಗೆಯೇ ಸಂಗೀತಗಾರುಡಿಗನಿಗೆ ನಮ್ಮ ಆಶ್ರುತರ್ಪಣ.

ಈಗಷ್ಟೆ ತಿಳಿದ ಆಘಾತಕಾರಿ ಸುದ್ದಿ ಕನ್ನಡ ಚಲಚಿತ್ರ ಕಂಡ ಮೇರು ನಟ ವಿಷ್ಣುವಿನ ಅಕಾಲಿಕ ಮರಣ ಕನ್ನಡ ಸಾಹಿತ್ಯ,ಸಂಗೀತ,ಕಲಾ ಸರಸ್ವತಿಗೆ ಮತ್ತೊಂದು ನಷ್ಟವನ್ನು ತಂದುಕೊಟ್ಟಿದೆ... ೨೦೦೯ರ ಕೊನೆದಿನಗಳು ಕನ್ನಡಿಗರಿಗೆ ದುಃಖದ ಹೊಳೆಯನ್ನರಿಸಿದೆ.

ಕನ್ನಡಿಗರನ್ನಗಲಿದ ಸಾಹಸಸಿಂಹ ವಿಷ್ಣು ಹಾಗು ಸಿ. ಅಶ್ವಥ್ ಅವರಿಗೆ ನಮ್ಮ ನಮನ

Tuesday, December 22, 2009

ಅವಳದೇ ನೆನಪು..!!! ನೈಜ ಕತೆ!!!

ಅವಳ ನೆನಪು ಕಾಡುತಿತ್ತು... ನನಗಲ್ಲ!!?.. ಮತ್ತ್ಯಾರಿಗೆ...? ಎಂದು ಪ್ರಶ್ನಿಸುತ್ತೀರಾ ಈ ಲೇಖನವನ್ನು ಓದಿ ನೀವೇ ಉತ್ತರಿಸಿ ಯಾರಿಗೆ ನೆನಪಿನ ಪುಟ ತೆರೆದಿದ್ದು ಎಂದು.


ಚಂದ್ರು ಮತ್ತು ಚಂದನ ಲಿಂಗನೂರಿ (ಹೆಸರು ಬದಲಿಸಲಾಗಿದೆ) ೧ ರಿಂದ ೭ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದುತ್ತಲಿರುತ್ತಾರೆ ಇಬ್ಬರು ಬಹಳ ಒಳ್ಳೆ ಸ್ನೇಹಿತರು ಇವರಿಬ್ಬರ ಸ್ನೇಹದಿಂದ ಇವರುಗಳ ತಾಯಂದಿರೂ ಸಹ ಒಳ್ಳೆ ಸ್ನೇಹಿತರಾಗುತ್ತಾರೆ. ೮ನೇ ತರಗತಿಗೆ ಇಬ್ಬರು ಬೇರೆ ಶಾಲೆಗೆ ಸೇರಿಕೊಳ್ಳುತ್ತಾರೆ, ಶಾಲಾ ಬದಲಾವಣೆಯಿಂದ ಇಬ್ಬರ ಭೇಟಿ ಕಡಿಮೆ ಆದರೂ ಶಾಲೆಗೆ ಹೋಗುವಾಗ ಬರುವಾಗ ಸಿಗುತ್ತಿದ್ದರು ಇಬ್ಬರು ಪರಸ್ಪರ ಮಾತನಾಡುತ್ತಲಿದ್ದರು, ಸ್ನೇಹಿತರ ಭೇಟಿಗೇನು ಕೊರತೆಯಾಗಲಿಲ್ಲ.

ಹೀಗಿದ್ದ ಸ್ನೇಹ ಇದ್ದಕ್ಕಿದ್ದ ಹಾಗೆ ಚಂದ್ರುಗೆ ಚಂದನಳ ಭೇಟಿ ಕಡಿಮೆಯಾಗುತ್ತ ಬರುತ್ತಲಿತ್ತು, ಹೀಗೆ ದಿನ ಕಳೆದಂತೆ ದೂರವಾದರು, ಚಂದ್ರುವು ತನ್ನ ವಿದ್ಯೆಯೆಡೆ ಗಮನ ಕೊಟ್ಟು ಎಸ್.ಎಸ್.ಎಲ್.ಸಿ ಮುಗಿಸಿ ಕಾಲೇಜಿಗೆ ಸೇರಿದ ನಂತರ ಅಲ್ಲಿ ೧ರಿಂದ ೭ರವರೆಗೆ ಓದುತ್ತಲಿದ್ದ ಮತ್ತೊಬ್ಬ ಸ್ನೇಹಿತ ರಾಜೇಶ್ ಎಂಬವ ಸಿಕ್ಕಿದ್ದೆ ಇವನಿಗೆ ಎಲ್ಲಿಲ್ಲದ ಖುಷಿ ಅವರಿಬ್ಬರೂ ಸಹ ಒಳ್ಳೆ ಸ್ನೇಹಿತರಾಗಿದ್ದರು. ಹೀಗೆ ಕೆಲವುದಿನಗಳು ಕಳೆದ ನಂತರ ಆ ಚಂದನ ಇರುತ್ತಿದ್ದ ಮನೆಯತ್ತಿರ ಹೋಗಿ ಅದೇ ರಸ್ತೆಯಲ್ಲಿ ೩,೪ ಬಾರಿ ಸುತ್ತಾಡಿ ಬರುತ್ತಾನೆ, ಆದರೆ ಆ ಮನೆಯ ಹತ್ತಿರ ಯಾರು ಕಾಣಲಿಲ್ಲ , ಇತ್ತ ಆ ಸ್ನೇಹಿತೆ ಚಂದನಳ ಬಗ್ಗೆ ರಾಜೇಶ್ ಹತ್ತಿರ ವಿಚಾರಿಸಿದ ಆದರೆ ರಾಜೇಶ್ಗ್ ಅವಳ ಬಗ್ಗೆ ಗೊತ್ತಿರಲಿಲ್ಲ ಅವರ ಮನೆ ಹತ್ತಿರ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದ, ಸರಿ ಎಂದು ಚಂದ್ರು ಮತ್ತೆರಡುದಿನ ಬಿಟ್ಟು ಅವಳ ಮನೆ ಹತ್ತಿರ ಹೋಗಿ ಅದೇ ಆ ಚಂದನಳಿದ್ದ ಮನೆಯ ಬಾಗಿಲನ್ನು ತಟ್ಟಿದ ಬಹಳ ಖುಷಿಯಿಂದ ಅಂದು ನಾನೇನೋ ರಸ್ತೆಯಲ್ಲಿ ನೋಡುತ್ತ ಹೋದೆ ಇಂದು ಇವರ ಮನೆಗೆ ಬಂದಿರುವೆ ಅವರ ಅಮ್ಮ ಅಥವಾ ಚಂದನ ಬರಬಹುದು ಎಂದು ಸಂತಸದಿಂದಿರುವಾಗ ಯಾವುದೋ ಒಂದು ವಯಸ್ಸಾದ ಅಜ್ಜಿ ಬಾಗಿಲು ತೆರೆದಾಗ ಬಹಳ ಬೇಸರವಾಯಿತು ಚಂದ್ರುವಿಗೆ, ನಂತರ ಆ ಸ್ನೇಹಿತೆಯ ಮನೆಯವರ ಬಗ್ಗೆ ವಿಚಾರಿಸಿದಾಗ ಅವರು ಇಲ್ಲಿಲ್ಲ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ ಕೂಡಲೇ ಈ ಚಂದ್ರುವಿಗೆ ಎಲ್ಲಿಲ್ಲದ ನೋವು ಹೃದಯಭಾರವಾದಂತೆ ಮನೆಯತ್ತ ಮುಖಮಾಡಿದ.

ನೆನಪುಗಳ ಮಾತು ಮಧುರಾ ಎಂಬಂತೆ....ಅವಳ ನೆನಪಲ್ಲೇ ತನ್ನ ಕಾಲೇಜ್ ಮುಗಿಸಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡ ಆಗೊಮ್ಮೆ ಈಗೊಮ್ಮೆ ಚಂದನಳ ನೆನಪು ಮಾಡಿಕೊಳ್ಳುತ್ತಾ ತನ್ನ ವಿದ್ಯಾಭ್ಯಾಸ ಮುಗಿಸಿದ.

ವಿದ್ಯಾಭ್ಯಾಸ ಮುಗಿಸಿ ಕೆಲಸ ಎಲ್ಲವೂ ಸಿಕ್ಕಿತು, ತನ್ನ ಜೀವನ ಸಂಗಾತಿ ಹಾರಿಸಿಕೊಳ್ಳುವ ವೇಳೆ ಮನೆಮಂದಿಯೆಲ್ಲ ಒಪ್ಪಿ ಒಂದು ಮದುವೆ ಮಾಡಿಯೇಬಿಟ್ಟರು, ಮದುವೆಯಾದ ೫ವರ್ಷಗಳ ನಂತರ ವಿದೇಶಕ್ಕೆ ಪ್ರಯಾಣ ಬೆಳೆಸಿದ ಇಷ್ಟೆಲ್ಲಾ ತನ್ನ ಜೀವನದಲ್ಲಿ ನೆಡೆದರೂ ತನ್ನ ಸ್ನೇಹಿತೆಯನ್ನು ಮರೆಯಲಿಲ್ಲ. ಇಷ್ಟು ಜೀವನ ಸಾಗಿಸುವಷ್ಟರಲ್ಲಿ ಆರ್ಕೊಟ್ ಎಂಬ ಸ್ನೇಹ ಜಾಲ ಸಂಪರ್ಕದ ಮಹಾ ಮಾಯೆ ಬಂದುಬಿಟ್ಟಿತ್ತು ಇದೇ ಸಮಯದಲ್ಲಿ ಚಂದ್ರು ಆರ್ಕೂಟ್ ಮಾಯೆಗೆ ಹೆಜ್ಜೆ ಇಟ್ಟಿದ್ದ ಇದೇ ಜಾಲದಿಂದ ತನ್ನ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದನು, ಅಲ್ಲಿ ತನ್ನ ಸ್ನೇಹಿತೆಯ ಹೆಸರಿರಬಹುದೆಂದು ಹುಡುಕಿದ ಹುಡುಕಿದ ಆಗ ದಪ್ಪಗೆ ಒಳ್ಳೆ ಟಮೆಟೋ ಹಣ್ಣಿನಂತಿದ್ದಳು ಈಗ ಹೇಗಿರಬಹುದು ಹಾ!!! ಅವಳ ಅಣೆಯ ಮೇಲೊಂದು ಬಿದ್ದು ಗಾಯಮಾಡಿಕೊಂಡಿದ್ದ ಗುರುತಿತ್ತು ಎಂದು ಆ ಹಳೆ ವಿದ್ಯಾರ್ಥಿಗಳ ಕೂಟದಲ್ಲಿದ್ದ ಹೆಂಗಳೆಯರ ಫೋಟೋ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು ಸಿಗಲೇ ಇಲ್ಲ..... ಆನಂತರ ಆರ್ಕೊಟಿನಲ್ಲಿನ ಹುಡುಕುವ ಪ್ರಪಂಚಕ್ಕೆ ಹೋಗಿ ಅಲ್ಲಿ ಆಕೆಯ ಹೆಸರು ಕೊಟ್ಟು ಹುಡುಕಿದನು ನಂತರ ಕುಟುಂಬದ ಹೆಸರಾದ ಲಿಂಗನೂರಿ ಎಂಬ ಹೆಸರನ್ನು ಕೊಟ್ಟು ಹುಡುಕಿ ಹುಡುಕಿ ಸುಸ್ತಾದನು.... ಇಷ್ಟೆಲ್ಲಾ ನೆಡೆಯಿತು ಪಾಪ ಫಲಕಾರಿಯಾಗಲಿಲ್ಲ....

ಇಷ್ಟುದಿನ ಸುಮ್ಮನಿದ್ದ ಈ ಚಂದ್ರು ನಂತರ ಬ್ಲಾಗ್ ಪ್ರಪಂಚಕ್ಕೆ ಹೆಜ್ಜೆಯಿಟ್ಟಾಗ ಆ ಪ್ರಪಂಚದಲ್ಲಿ ಹತ್ತು ಹಲವು ಜನರು ತಮ್ಮ ಜೀವನದ ಹೊಸ ಹಳೆ ಕಥೆಗಳನ್ನು ಬಿತ್ತರಿಸುವುದ ಕಂಡು, ಈತನಿಗೂ ಪ್ರೇರಣೆಯಾಯಿತೇನೋ ಮೊದಲು ಹೆಂಡತಿಯತ್ತಿರ ಬಂದು ಇಷ್ಟು ದಿನದ ಗುಟ್ಟನ್ನು ರಟ್ಟು ಮಾಡಿಬಿಟ್ಟ. ಇದು ಏಕೆ ರಟ್ಟು ಮಾಡಿದನೆಂದರೆ ಬ್ಲಾಗಿಗೆ ಹಾಕುವ ಮುನ್ನ ಹೆಂಡತಿಗೆ ಗೊತ್ತಿದ್ದರೆ ಚೆನ್ನ ಇಲ್ಲವಾದರೆ ಪ್ರಪಂಚಕ್ಕೆ ಗೊತ್ತಾದಮೇಲೆ ನನಗೇನು ನೀವು ಹೇಳುವುದು ಬೇಡವೆಂದು ಬಿಡುವಳೆಂದೋ ಏನೋ ಮೊದಲೇ ಹೇಳಿ ಸಂಕಷ್ಟದಿಂದ ಪಾರಾದನು ಹಹಹಹ.ಶುಭದಿನ

Tuesday, December 8, 2009

ಅಮ್ಮನಾದಾಗ ತಬ್ಬಿಬ್ಬಾದೆ!!!!

ರಜೆಯಲ್ಲಿ ಊರಿನಲ್ಲಿದ್ದಾಗ ಎಲ್ಲೋ ಹೋಗಬೇಕಿತ್ತು...ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೇ ನನ್ನ ಪಕ್ಕ ಒಬ್ಬ ಹೆಂಗಸು ಕೈನಲ್ಲೊಂದು ಬ್ಯಾಗ್, ಕಂಕುಳಲ್ಲೊಂದು ಸುಮಾರು ೬ ತಿಂಗಳ ಹಸುಗೂಸು, ಮತ್ತೊಂದು ಅಮ್ಮನನ್ನೇ ತಬ್ಬಿ ನಿಂತ ಸುಮಾರು ೨ ವರ್ಷದ ಕಂದಮ್ಮ ನಾನು ನೋಡಿದೆ ಮನವೇಕೋ ಕರಗಿತು ಎಷ್ಟು ಕಷ್ಟ ನೋಡು ಪಾಪ ಎರಡು ಮಕ್ಕಳು ಜೊತೆಗೆ ಬ್ಯಾಗ್ ಬೇರೆ ಆಟೋದಲ್ಲಾದರೂ ಹೋಗಬಾರದೆ ಎನಿಸಿತು, ಆದರೆ ಆಕೆಯ ಮುಖ ನೋಡಿದರೆ ಅಷ್ಟು ಸ್ಥಿತಿವಂತರೆನಿಸಲಿಲ್ಲ...ಪಾಪ ಅವರವರ ಕಷ್ಟ ಅವರವರಿಗಿರುತ್ತೆ ನಾವು ಎಲ್ಲರನ್ನು ತಾಳೆ ಹಾಕಬಾರದೆನಿಸಿತು...

ಸ್ವಲ್ಪ ಸಮಯದ ನಂತರ ಬಸ್ ಬಂತು ನಾನು ಅಮ್ಮನನ್ನು ತಬ್ಬಿ ನಿಂತ ಕಂದಮ್ಮನನ್ನು ಕರೆದುಕೊಂಡೆ, ಆಕೆ ಇನ್ನೊಂದು ಮಗುವಿನೊಂದಿಗೆ ಬಸ್ ಹತ್ತಿದಳು, ಒಳ ಹೋಗುತ್ತಿದ್ದಂತೆ ಆಕೆ ಕುಳಿತುಕೊಂಡಳು ನಾನು ಆ ಮಗುವನ್ನು ಹೊತ್ತುಕೊಂಡೇ ಸ್ವಲ್ಪ ಸಮಯ ನಿಂತಿದ್ದೆ...ತಕ್ಷಣವೇ ಆಕೆ ಇಲ್ಲಿ ಕೊಡಿ ಎಂದು ಹೇಳಿದಳು ನಾ ಕೊಟ್ಟೆ... ಅಷ್ಟು ಹೊತ್ತು ಸುಮ್ಮನಿದ್ದ ಮಗು ಅಮ್ಮನ ಹತ್ತಿರವೇಕೋ ಅಳಲು ಪ್ರಾರಂಭಿಸಿತು.... ನನಗೆ ಹಿಂದಿನ ಸೀಟು ಸಿಕ್ಕಿತು ನಾನು ಕುಳಿತುಬಿಟ್ಟೆ...ಆದರೆ ಆ ಮಗು ಅಳು ನಿಲ್ಲಿಸಲೇ ಇಲ್ಲ, ತದನಂತರ ಮಗುವಿನ ತಾಯಿ ಪಕ್ಕ ಒಬ್ಬರು ವಯಸ್ಸಾದಾಕೆ ಕುಳಿತಿದ್ದರು ಅವರು ಹಿಂದೆ ತಿರುಗಿ ನಿನಗೆ ಸ್ವಲ್ಪನೂ ಅರ್ಥವಾಗೋಲ್ಲವೇ ನೀನು ಕುಳಿತಿದ್ದೀಯಲ್ಲಮ್ಮಾ, ನಿನ್ನ ಮಗೂನ ಕರೆದುಕೊಳ್ಳೋಕೇನು ಆ ಯಮ್ಮ ಬೇರೆ ಮಗು ಇರೋಳು ನಿನ್ನ್ಗೆ ಅರ್ಥ ಆಗೋಲ್ವೇನಮ್ಮ ಅಂದರು...ನಾನು ತಕ್ಷಣ ತಬ್ಬಿಬ್ಬಾದೆ!!.....ಹಹಹಹ........ಮಕ್ಕಳು ಅಮ್ಮನತ್ತಿರ ಇದ್ದರೆ ಸರಿ ನೀನು ಕೂತಿದ್ದೀಯ ಕರ್ರ್ಕೋ ಎಂದರು, ನಂತರ ಆ ಮಗುವಿನ ತಾಯಿ ಈ ಮಗು ಅವರದಲ್ಲ ನನ್ನದೇ ಎಂದಳು, ಮಗುವಿನ ತಾಯಿ... ಬಸ್ ನಲ್ಲಿದ್ದವರೆಲ್ಲ ಒಮ್ಮೆಲೇ ಚಾಲಕನೂ ಸೇರಿ ನಕ್ಕುಬಿಟ್ಟರು ಈ ನಗು ಕಂಡು ಅಳುತ್ತಿದ್ದ ಕಂದ ನಗಲು ಪ್ರಾರಂಭಿಸಿತು ಅದಕ್ಕೇನು ಅರ್ಥವಾಯಿತೋ ಕಾಣೆ ಒಟ್ಟಲ್ಲಿ ನಗು ಬಂತು ಹಹಹಹ....

ಕೆಲವೂಮ್ಮೆ ನಾವು ತಬ್ಬಿಬ್ಬಾಗುವ ಸಂದರ್ಭಗಳು ಬಂದು ಬಿಡುತ್ತವೇ ಅಲ್ಲವೇ..?

ವಂದನೆಗಳು
ಶುಭದಿನ

Tuesday, December 1, 2009

-ಹೊಸ ಪ್ರಯತ್ನ-


ನೇಸರನು ಇದ್ದಾನೆ...ಪಳಪಳ ಹೊಳೆಯುತ್ತಲೂ ಇದ್ದಾನೆ
ಆದರೆ ಅವನ ಬೆಳಕು ಬೀಳುತ್ತಿಲ್ಲ ಕಾರಣ ನಾನೇ,
ನಾನು...
ಕಗ್ಗತ್ತಲ ಗುಹೆಯಲಿರುವೆ...
-----
ಕಣ್ಣೆದುರು ಊಟವಿದೆ ಹಸಿವಿನ ಹಾಹಾಕಾರವೂ ಇದೆ
ಆದರೆ ತಿನ್ನುಲು ಆಗುತಿಲ್ಲ ಕಾರಣವೇನು
ಗೊತ್ತೆ?
ನನಗೂ ಊಟದ ತಟ್ಟೆಗೂ ಮಧ್ಯೆ
ನುಣುಪಾದ ಗಾಜಿನ ಗೋಡೆ ಅಡ್ಡವಿದೆ..!!!
-----
ಬಾನಂಗಳ ವಿಮಾನದಲ್ಲಿ
ಹಾರಾಡುವಾಸೆ
ಆದರೆ ಕೈಗೆಟುಕದ ಆ ಆಗಸನೇರಲು
ಬಡತನ ಅಡ್ಡವಿದೆ..!!!
------
ಓದುವಾಸೆ ಬಲು ಇದೆ
ಓದಲು ಪುಸ್ತಕವೂ ಇದೆ
ಓದಿಸುವವರು ಇದ್ದಾರೆ
ಆದರೆ....
ಓದಲೋದರೆ ನಿದ್ದೆಗೆ ಜಾರಿ
ಸಮಯ ಕೆಡಿಸುವ ಮನವಿದೆ!!!
-----
ಲೇಖನಿಯಿದೆ
ಬರೆಯುವ ಪ್ರೋತ್ಸಾಹ ಸಿಕ್ಕಿದೆ
ಬರೆದದ್ದು ಓದಲು ಸಾಲುಗಟ್ಟಲೆ
ಜನರಿದ್ದಾರೆ..ಆದರೆ
ಬರೆಯಲು ಮೆದುಳಿಗೇನೂ
ವಿಷಯ ತೋಚದಂತಾಗಿದೆ..
-----
(ನಿರಾಶ್ರಿತ)
ಬತ್ತಿಯುಳ್ಳ ದೀವಿಗೆ ಇದೆ
ಜೊತೆಗೆ ತೈಲವೂ ಇದೆ
ಹೊತ್ತಿಸಲು ಬೆಂಕಿಕಡ್ಡಿಯೂ ಇದೆ
ಆದರೆ
ಮಳೆಯೊಟ್ಟಿಗೆ ಗಾಳಿಯು ಬೀಸುತಿದೆ
ಕಾರಣ
ನನ್ನದು ಸೂರಿಲ್ಲದ ಮನೆ
-----
(ಒಟ್ಟು ಕುಟುಂಬ)
ಮನೆಯೂ ಇದೆ
ಮಕ್ಕಳೂ ಇದ್ದಾರೆ
ಆದರೆ
ಸಂಸಾರವೆಂಬ
ಗೂಡು ಕಟ್ಟುವವರಿಲ್ಲ...
----
ಪ್ರೀತಿಯಿದೆ
ಆಸೆಯಿದೆ
ಆದರೆ
ಪ್ರೀತಿಸಲು
ಯಾರೂ ಇಲ್ಲ..
----
ನಾನು ಹೆಣ್ಣು
ಹೂ ಮುಡಿವಾಸಿಯಿದೆ
ಹೂವಿನ ರಾಶಿ ಎದುರಿದೆ
ಆದರೆ
ರಾಶಿ ಹೂ ಮುಡಿಯಲು
ಜಡೆಯೇ ಇಲ್ಲ..