Saturday, December 31, 2011

ಹ್ಯಾಪ್ಪಿ... ಹ್ಯಾಪಿ....

ನನ್ನ ಕಡೆಯಿಂದ ನಿಮಗೆಲ್ಲರಿಗೂ ಹ್ಯಾಪ್ಪಿ... ಹ್ಯಾಪಿ....ನ್ಯೂ ಇಯರ್..  

ಚಾಕ್ ಲೆಟ್ ಅಂತ ಸಿಹಿ ನಿಮ್ಗೇ ಸಿಗ್ಲಿ...ಓಕೆ..!

ಪ್ರೀತಿಯಿಂದ
-ಅನನ್ಯ


ಓರೆ ನೋಟದ
ಮುಗ್ಧ ಮನಸು
ಕಣ್ಣ ಭಾಷೆಯಲಿ
ಆಸೆ ಹುಟ್ಟಿಸುತ
ಮೌನದಿ
ಬಿಗುಮಾನ ಬೀರೋ
ರಾಣಿ ಜೇನು ನೀನು....
---------

@ಚಿತ್ರ - ಮನಸು

Thursday, December 22, 2011

ಅಶೃತರ್ಪಣ


ಮನೆಯೊಂದು ಭೂಪಟ
ಅಪ್ಪ-ಅಮ್ಮ ನಕ್ಷಾ ಸೂಚಕ
ಮಕ್ಕಳು ದಿಕ್ಕುಗಳ ಪಾಲಕ
ಗಂಡಿದ್ದರೆ ಅವ ಕುಲ ದೈವಿಕ

ಅಲ್ಲೊಂದು ಮನೆಯಿಹುದು
ನಕ್ಷೆ-ದಿಕ್ಕುಗಳ ಕಾರುಬಾರಿನಲ್ಲಿ
ಪ್ರಕೃತಿಯ ವೈಫಲ್ಯವೋ
ವಿಧಿಯ ಕೈಂಕರ್ಯವೋ
ಅಲೆಯೊಂದು ಅಪ್ಪಳಿಸಿತು...

ಭೂಪಟದ ನಕ್ಷೆ ಬದಲಿಸಿದೆ
ದಿಕ್ಕು ಹುಡುಕವ ಪ್ರಯತ್ನಕ್ಕೆ
ಬೆಂಕಿಯ ಕೊಳ್ಳಿಯಿಟ್ಟಾಗಿದೆ
ನಕ್ಷೆಯೇ ಇಲ್ಲದ ಜೀವನಕ್ಕೆ...

ಭೂಗೋಳ ಕೊಂಚ ವಾರೆಯಾಗಿ
ಇಂದಿಗೆ ಹನ್ನೊಂದು ದಿನವಾಗಿದೆ
ಬದುಕಿನ ದಿಕ್ಕಿಗೆ ಸಡ್ಡೆ ಹೊಡೆದವಗೆ 
ಅವರದು ತಿಥಿಯೆಂಬ ದಿಕ್ಸೂಚಿ
ನನ್ನದು ಅಶೃತರ್ಪಣದ ಕಣ್ಣ ಸೂಜಿ .... 

Wednesday, November 23, 2011

ನವರಸಗಳ ಭಾವಸಂಗಮದಿ ಕರುನಾಡ ಹಬ್ಬ

ಸಂಜೆಯ ಸೂರ್ಯ ಮನೆಗೆ ತೆರಳೋ ಸಮಯ ಬಂದಾಯ್ತು... ಸಭಾಂಗಣ ಬಿಕೋ ಎನ್ನುತಿದೆ ಜನಸಂದಣಿ ಇಲ್ಲ... ಅಲ್ಲೊಂದಿಬ್ಬರು ಏನೋ ಕಂಪ್ಯೂರ್ ನಲ್ಲಿ ಕೆಲಸ ಮಾಡ್ತಾ ಕೂತಿದ್ದಾರೆ.... ಗೆಜ್ಜೆ ಕಟ್ಟಿದ ಕೂಸುಗಳಿಗೆ ಜೊತೆಯಾಗಿ ಬಾಲ ಕೃಷ್ಣರು ಸಭಾಗಂಣದಲ್ಲಿ ಸಪ್ಪಳ ಮಾಡ್ತಾ ಓಡಾಡ್ತನೇ ಇದ್ದಾರೆ...

ಯಾವಾಗ ಕಾರ್ಯಕ್ರಮ ಪ್ರಾರಂಭವಾಗುತ್ತೋ ಎಂದು ಕಾಯ್ತಾ ಇದ್ದೆವು... ಸುಮಾರು ೪ ಗಂಟೆಯ ಹೊತ್ತಿಗೆ ಬಂದರು ಮೆಲ್ಲನೆ ಹೆಜ್ಜೆ ಇಡುತ್ತ ಗಣ್ಯರು ವೇದಿಕೆಯತ್ತ ಬಂದು ಆಸೀನರಾದರು ಸ್ವಲ್ಪ ಸಮಯದ ನಂತರದಿ ಸ್ವಾಗತ ದೇವರ ಶ್ಲೋಕ ನೃತ್ಯದೊಂದಿಗೆ ಪ್ರಾರಂಭವಾಗಿ ಮಿಕ್ಕುಳಿದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಖ್ಯಾತ ಕನ್ನಡ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ವಿಠಲ್ ಮೂರ್ತಿಯವರು ದೀಪ ಬೆಳಗುವ ಮೂಲಕ ವೇದಿಕೆಯನ್ನು ಬೆಳಗಿಸಿದರು.
ತದನಂತರ ಗಣ್ಯರ ಶುಭಕೋರಿಕೆ, ಅಭಿನಂದನಾರ್ಪಣೆ, ಎಲ್ಲವೂ ಸರಾಗವಾಗಿ ಜರುಗಿತು ಇನ್ನೇನು ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಳೆ ತುಂಬುತ್ತಲಿದ್ದಂತೆ ಸಭಾಂಗಣದ ಕುರ್ಚಿಗಳು ಭರ್ತಿಯಾಗುತ್ತ ಬರುತ್ತಲಿತ್ತು...
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸಲು ಮೊದಲು ಗಣಪತಿಗೆ ನೃತ್ಯ ಮುಖೇನ ನಮ್ಮೆಲ್ಲರ ಆವಾಹನೆಯನ್ನು ಸಲ್ಲಿಸಿ ನಮ್ಮ ಸಿರಿನಾಡ ವೈಭವವನ್ನು ವರ್ಣಿಸಿ ನರ್ತಿಸುತ್ತ ನಮ್ಮ ಕೂಟದ ಚಿಣ್ಣರು ಕುಣಿದಾಡಿದರು. ಸಿರಿನಾಡಿನ ವೇದಿಕೆಯಲ್ಲಿ ನಮ್ಮ ನಾಡು ಕರುನಾಡು ನಮ್ಮೆಲ್ಲರ ಪುಣ್ಯಭೂಮಿ ಎಂಬಂತೆ ಪುಟ್ಟ ಹೆಜ್ಜೆಗಳು ಕುಣಿದು ಕುಪ್ಪಳಿಸುತ್ತಲಿದ್ದಂತೆ ಇಂದು ಬಾನಿಗೆಲ್ಲ ಹಬ್ಬ ನಮ್ಮ ನಾಡ ನೆನೆಯುವ ಹಬ್ಬ ಎಂಬಂತೆ ಆ ಪುಟ್ಟ ಕಂಗಳಲ್ಲಿ ಕರುನಾಡನ್ನೇ ಬಿಂಬಿಸುತ್ತ ನೃತ್ಯ ಮಾಡಿದರು... ನಿಸರ್ಗನಾಡಿನ ಹಬ್ಬ ವರ್ಣಿಸುತ್ತಲಿದ್ದಂತೆ ಮತ್ತಷ್ಟು ಚಿಣ್ಣರು... ಕನ್ನಡ ನಾಡು ನಮ್ಮದೇವಾಲಯ ಅಲ್ಲಿ ಹುಟ್ಟಿದರೆ ಏನೆಲ್ಲಾ ಆಗಬಹುದೋ ಆದೆಲ್ಲಾ ಸ್ಥಾನಗಳನ್ನು ಗಿಟ್ಟಿಸಲು ನಾವು ಸೈ ಎಂದು ಹೆಜ್ಜೆ ಹಾಕುತ್ತಲಿದ್ದ ಮಕ್ಕಳಿಗೆ ನೆರೆದವರ ಕರಗಳು ಚಪ್ಪಾಳೆಗಳ ಶೃತಿಯಿಂದ ಪ್ರೋತ್ಸಾಹಿಸುತ್ತಲಿದ್ದರು....


ಕನ್ನಡ ನಾಡು, ನುಡಿ, ಸಂಪತ್ತು, ಸೌಂದರ್ಯ ಎಲ್ಲವನ್ನೂ ಹೊಗಳಿ ನಾಡದೇವಿಗೆ ನಮ್ಮ ಕೂಟದ ಮಕ್ಕಳು ನಮನ ಸಲ್ಲಿಸುತ್ತಲಿದ್ದಂತೆ ಅಂದಿನ ವೇದಿಕೆಯಲ್ಲಿ ಮತ್ತೊಂದು ವೇದಿಕೆ ಅಲಂಕಾರಗೊಳ್ಳಲಾರಂಭಿಸಿತು. ಅಂದಿನ ಆ ವೇದಿಕೆ ಎಲ್ಲಾ ತರನಾದ ಭಾವನೆಗಳಿಂದ ತುಂಬಿ ತುಳುಕುತ್ತಲಿತ್ತು... ಅದುವೇ ನವರಸಗಳ ಭಾವಸಂಗಮ.
ಭರತಮುನಿ ಮತ್ತು ಅಭಿನವಗುಪ್ತರು ತಿಳಿಸಿರುವ ನವರಸಗಳು ಶ್ರಿಂಗಾರ, ಹಾಸ್ಯ, ರೌದ್ರ, ಕರುಣ, ಭೀಬತ್ಸ್ಯ, ವೀರ, ಅದ್ಭುತ, ಭಯಾನಕ, ಶಾಂತ ರಸ ಹೀಗೆ ಒಂಬತ್ತು ರಸಗಳು ಮನುಷ್ಯ ಜೀವನ, ಪ್ರಕೃತಿ ಮಡಿಲಲ್ಲಿ ಹೇಗೆಲ್ಲಾ ಬಿಂಬಿಸುತ್ತದೆ ಎಂಬುದನ್ನು ಕೂಟದ ಎಲ್ಲಾ ವಯಮಿತಿಯವರು ಕೂಡಿ ವೇದಿಕೆಗೆ ಮೆರುಗು ಕೊಟ್ಟಿದ್ದೇ ಒಂದು ವಿಭಿನ್ನತೆಯನ್ನ ಸೂಸುತ್ತಲಿತ್ತು.
ಶೃಂಗಾರ ಹೆಣ್ಣು ಗಂಡಿನ ಪ್ರೇಮಶೃಂಗಾರ, ಕಲೆಗಾರನ ಕಲಾಶೃಂಗಾರ ಹೀಗೆ ಶೃಂಗಾರ ಎಲ್ಲೆಲ್ಲೂ ಅಡಗಿದೆ ಎಂದು ನಮ್ಮ ಹೆಣ್ಣು ಮಕ್ಕಳು ರವಿವರ್ಮನ ಕುಂಚದ... ಹಾಡಿಗೆ ನೃತ್ಯ ನೀಡಿ ಹಸಿರು ಹಸಿರಾಗಿದ್ದರು... ನಧೀಮ್ ಧೀಮ್ ತನ.. ಮೊದಲ ಪ್ರೇಮ ಹೇಗೆಂದು ವರ್ಣಿಸಲು ನೀರೆಯರು ತಮ್ಮ ನಾಚಿಕೆಯ ಶೃಂಗಾರವನ್ನು ವೇದಿಕೆಯಲ್ಲಿ ನೃತ್ಯಸಿದ್ದು ವೇದಿಕೆಗೆ ಶೃಂಗಾರವನ್ನು ತಂದಿತ್ತು.

ಏನು ಜನರೆಲ್ಲಾ ಶೃಂಗಾರ ರಸದಲ್ಲಿದ್ದಾರೆ... ಅತ್ತ ಯಾಕೋ ವೇದಿಕೆ ಕತ್ತಲಿನಲ್ಲಿದೆ ಭೂತಪ್ರೇತಗಳು ಸದ್ದಿಲ್ಲದೆ ಬಂದು ಕೂಗಾಡುತ್ತಿವೆ... ಸ್ಮಶಾನದಂತಿದ್ದ ಆ ವೇದಿಗೆ ಭೂತಗಳ ಓಡಾಟ, ಕಿರುಚಾಟ ಎಲ್ಲಾ ಕೇಳಿ ಎಷ್ಟೋ ಮಕ್ಕಳು ಅಳಲು ಪ್ರಾರಂಭಿಸಿದರು... ಭೂತ ಹೆದರಿಸಿದ್ದು ಸಾಕಾಗಾದೆ ನಾಗ ನಾಗಿಣಿ ಬೇರೆ ಬಂದ್ರು.. ಕಳ್ಳರು ನಾಗಿಣಿಯಲ್ಲಿದ್ದ ಮಣಿ ಕಿತ್ತುಕೊಂಡು ನಾಗಿಣಿ ಸಾವಿಗೆ ಕಾರಣರಾದ್ರು ಎಲ್ಲಾ ನೋಡಿದ್ದ ಜನ ಸ್ವಲ್ಪ ಬೆವರಿದ್ರು ಅಂತ ಅನ್ಸುತ್ತೆ... ಇದುವೇ ಭಯಂಕರ ರಸದ ಮೂಲ ನೃತ್ಯ ಇಲ್ಲಿ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ನೃತ್ಯ ಮಾಡಿದ್ದರು.
ಹೆದರಿಕೆ ಹೋಗಿಸೋಕ್ಕೆ ಅಂತ ವೀರ ಧೀರೆಯರು, ಬುದ್ಧಿವಂತರು ಬಂದರು ನೋಡಿ ವೇದಿಕೆ ಮೇಲೆ ನಮ್ಮ ನಾಡುಕಂಡ ಅದ್ಭುತ ನಾರಿಯರ ದರುಶನ ದೊರಕಿತು ತಮ್ಮದೇ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದ ಕಿತ್ತೂರಿ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಒನಕೆ ಓಬವ್ವ, ಗಂಗೂಬಾಯಿ ಗಾನಗಲ್ , ಸಾಲುಮರ ತಿಮ್ಮಕ್ಕ, ಬಿ.ಜಯಶ್ರೀ, ಸುಧಾಮೂರ್ತಿ ಇವರೆಲ್ಲಾ ವೇದಿಕೆಯ ಮೇಲೆ ಬಂದು ಅವರನ್ನ ಸ್ವಾಗತಿಸಲು ಚಿಣ್ಣರು ನೃತ್ಯರೂಪಕದಲ್ಲಿ ವೇದಿಕೆಗೆ ಮೆರುಗು ನೀಡಿದರು.. ಈ ಅದ್ಭುತ ರಸದ ನೃತ್ಯ ನೋಟದಲ್ಲಿ ಆ ಪಾತ್ರಧಾರಿಗಳು ನಿಜಕ್ಕೂ ನಮ್ಮ ಕಣ್ಣ ಮುಂದೆ ಬಂದಂತಾಯಿತು.
ಅದ್ಭುತತೆಯೊಂದಿಗೆ ವೀರತ್ವದ ಹೆಸರು ರಾರಾಜಿಸುವಂತೆ ಮಾಡಿದ ವೀರ ಸಂಗೊಳ್ಳಿ ರಾಯಣ್ಣ ಮತ್ತು ನಮ್ಮ ಸುರಕ್ಷತೆಗೆ ಸೇವೆ ಸಲ್ಲಿಸುತ್ತಲಿರುವ ನಾಡಿನ ಯೋಧರನ್ನು ನೆನಪಿಸುತ್ತ ಯೋಧರಿಗೊಂದು ನೃತ್ಯ ನಮನ ನೀಡುದ್ದು ಬಹಳ ವಿಶೇಷವಾಗಿತ್ತು ಇಲ್ಲೂ ಸಹ ಮಕ್ಕಳು ದೊಡ್ಡವರು ಬಹಳ ಹುಮ್ಮಸ್ಸಿನಿಂದ ವೀರತ್ವವನ್ನೇ ಪಡೆದಂತೆ ನೃತ್ಯ ಮಾಡಿದರು.
ಇನ್ನು ರೌದ್ರಕ್ಕೆ ವಿರುದ್ಧವಾದದ್ದು ಹಾಸ್ಯ ... ಭಾವ ಸಂಗಮದ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಕಚೇರಿ ಬಂದಿತ್ತು ಗೊತ್ರಾ... ಸರ್ಕಾರಿ ಕೆಲಸಗಾರರು ಹೇಗೆ ಕೆಲಸಮಾಡ್ತಾರೆ ಅದರಲ್ಲೂ ಕಿವುಡರಿದ್ದರೆ ಹೇಗೆ ನೆಡೆಯುತ್ತೆ ಕೆಲಸ ಎಂದು ಹಾಸ್ಯರೂಪಕದಲ್ಲಿ ಮೂಡಿಬಂದಿತು ಇದಾದ ನಂತರ ಟಿವಿ೯೦ ಎಂಬ ಶೀರ್ಷಿಕೆಯಡಿ ಹೊಸತನದ ಹಾಸ್ಯ ಟಿವಿ ಪರದೆಯ ಮೇಲೆ ಮೂಡಿಬಂದಿತು... ಈ ಹಾಸ್ಯ ಟಿವಿಯಲ್ಲಿ ಕರ್ಮಕಾಂಡ, ಡಾಕ್ಟರ್ ಆರ್ಡರ್, ಸಮ್ ರುಚಿ, ಕ್ರೈಂ ಡೈರಿ ಹೀಗೆ ಹಲವು ಕಾರ್ಯಕ್ರಮ ಮೂಡಿಬಂದಿತು...ಇದನ್ನ ನೋಡಿ ನಗು ಬರೋರೆಲ್ಲ ನಕ್ಕಿದ್ದಾರೆ... ತೀರಾ ಗಡುಸು ಮನಸ್ಸಿನವರು ನಕ್ಕದೇ ಕಕ್ಕಾಬಿಕ್ಕಿಗಳಾಗಿ ನೋಡಿರಲೂ ಬಹುದು ... ಎಲ್ಲರೂ ನಕ್ಕಿದ್ದಾರೆ ಅಂತ ಹೇಳೋಕೆ ಆಗೋಲ್ಲ ಅಲ್ವ..?

ಟಿವಿ೯೦ ಯೂಟ್ಯೂಬ್ ಲಿಂಕ್ ಗೆ ಭೇಟಿ ನೀಡಿ:http://www.youtube.com/watch?v=LzRBYEo3rAU

ನಕ್ಕಿಲ್ಲದೇ ಇಲ್ಲದವರು ನನ್ನ ಮೇಲೆ ರೌದ್ರರಾಗದಿದ್ದರೆ ಸಾಕು ಏನು ಇವಳು ನಮ್ಮನ್ನ ಹೀಗೆ ಆಡಿಕೋತಾ ಇದಾಳೆ ಅಂತ .... ಈಗ ನೋಡಿ ಶಿವ ಯಾಕೋ ರೌದ್ರನಾಗಿಬಿಟ್ಟಿದ್ದ ಅವನ ಅವತಾರಗಳನ್ನೆಲ್ಲಾ ನೋಡಿ ಭಯವಾಗ್ತಾ ಇತ್ತು... ರುದ್ರನ ವೇಷಧಾರಿಗಳು ಎಲ್ಲರನ್ನು ಬೆಚ್ಚಿಬೀಳಿಸಿದ್ದರು... ಪಾರ್ವತಿ ನಾನೇನು ಕಮ್ಮಿ ಎಂಬಂತೆ ದುರ್ಗೆ ಅವತಾರ ಧರಿಸಿ ಮಹಿಸಾಸುರನ ಮರ್ಧನ ಮಾಡಿದ್ದು ವಿಶೇಷವಾಗಿತ್ತು... ಇಲ್ಲಿ ರೌದ್ರರಸ ಸೂಚಿಸಲು ಶಿವ ತನ್ನ ರೌದ್ರತೆಯ ರುದ್ರ ನರ್ತನ, ದುರ್ಗೆ ಮಹಿಸಾಸುರನ ಸಂಹಾರದ ದೃಷ್ಯ ವಿಭಿನ್ನವಾಗಿತ್ತು.
ರೌದ್ರತೆಯಿಂದ ಕರುಣೆಯತ್ತ ನೆಡೆದರೆ ಅಲ್ಲಿ ಕಂಡಿದ್ದೇ ಒಂದು ವಿಚಿತ್ರ ... ಅದೇ ಈ ಪ್ರಕೃತಿಯ ಮಾತೆಯ ವಿಕೋಪತೆ ಸಾಮಾನ್ಯರ ಮೇಲೆ ಏರಗಿದ ರೀತಿ... ಜಪಾನ್ ಜನತೆ ಸುನಾಮಿಯಲ್ಲಿ ಸಿಲುಕಿ ನರಳಿದ ಪ್ರಸಂಗವನ್ನು ವೇದಿಕೆಯಲ್ಲಿ ಬಿಂಬಿಸಿದ್ದು ಎಲ್ಲರ ಮನ ಕಲಕುವಂತಿತ್ತು... ಇಲ್ಲಿ ನೋವಿನಿಂದ ಬಳಲಿದವರು, ಮಕ್ಕಳನ್ನ ಕಳೆದುಕೊಂಡವರ ಹೃದಯವಿದ್ರಾವಕ ಸನ್ನಿವೇಶ ನೋಡಿದರೆ ಎಂತವರಿಗೂ ಕರುಣೆ ಹುಟ್ಟುತ್ತದೆ ಇಂತಹ ದೃಶ್ಯವನ್ನು ಎಲ್ಲಾ ವರ್ಗದವರು ಅಭಿನಯಿಸಿದ್ದು ವಿಶೇಷ...

ಭೀಭತ್ಸ್ಯ ಇದರ ಅರ್ಥವೇ ವಿಭಿನ್ನ.... ಜಿಗುಪ್ಸೆ ಮತ್ತು ಅತಿ ರೋಸಿಹೋಗಿರುವಂತ ಪರಿಸ್ಥಿತಿಗಳು ಮಹಾಭಾರತದಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಪಾಂಡವರು ಕೌರವರ ಕಡೆಯವರನ್ನೆಲ್ಲಾ ಸಂಹರಿಸಿ... ದುರ್ಯೋಧನನಿಗಾಗಿ ಹುಡುಕುವ ವೇಳೆ ಜಲಮಂತ್ರ ಸಿದ್ಧಿಯಿಂದ ಅವಿತು ಕುಳಿತಿದ್ದ ದುರ್ಯೋಧನನಿಗಾಗಿ ಭೀಮ ತೋರುವ ಭೀಬತ್ಸ್ಯ ರೀತಿಯ ದೃಶ್ಯವೇ ಅಂದಿನ ವೇದಿಕೆಯ ಯಕ್ಷಗಾನ ನೃತ್ಯ ಈ ಯಕ್ಷಗಾನ ನೃತ್ಯದ ವಿಶೇಷವೇ ಹೆಣ್ಣು... ಆ ಭೀಮ ಪಾತ್ರಧಾರಿಯಾಗಿ ನರ್ತಿಸಿದ್ದು ಅದ್ಭುತವಾಗಿತ್ತು...

ಭೀಭತ್ಸ್ಯದಲ್ಲಿರುವ ಭೀಮನನ್ನು ಸಮಾಧಾನದಿ ಶಾಂತ ಚಿತ್ತರನ್ನಾಗಿಸಲು ಬುದ್ಧ ವೇದಿಕೆಯ ಮೇಲೆ ಬಂದಿದ್ದಾನೆ... ಕಟುಕ ಅಂಗುಲಿಮಾಲನಿಗೆ ಶಾಂತಿ ಬೀಜವ ಬಿತ್ತಿ ಅವನ ಮನ ಒಲಿಸಿ ಶಾಂತಿಯುತ ಬಾಳನ್ನು ಬಾಳಲು ಬೆಳಕು ಚೆಲ್ಲಿದ ಪುಟ್ಟ ನಾಟಕ ಮಕ್ಕಳು ಬಹಳಷ್ಟು ಶಾಂತದಿಂದ ನಿಭಾಯಿಸಿದರು.
ಭೋದಿಸತ್ವರಾಗಿ ಅವತರಿಸಿದ ಬುದ್ಧ ತನ್ನ ಸಹಸ್ರಭುಜಗಳಿಂದ ಹೋರಾಡಿದರ ಸಂಕೇತವಾಗಿ ಮಕ್ಕಳ ನೃತ್ಯ ವಿಭಿನ್ನವೆನಿಸಿತು ಅಂತೆಯೇ ಮನುಷ್ಯನ ಮನಸ್ಸನ್ನು ಶಾಂತಿ ಮತ್ತು ತಾಳ್ಮೆಯಿಂದಿಡಲು ಯೋಗಾಭ್ಯಾಸ ಬಹು ಮುಖ್ಯದ ಸಂಗತಿ.

ಎಲ್ಲರನ್ನು ಶಾಂತಚಿತ್ತದತ್ತ ಎಳೆಯಲು ಮಕ್ಕಳು ಯೋಗಾ ಮತ್ತು ಧ್ಯಾನದ ಮೂಲಕ ನೃತ್ಯ ನೀಡಿದರು. ಇದು ಬಹಳ ಸುಂದರವಾಗಿತ್ತು... ಇಲ್ಲಿ ಕೆಲವರು ಯೋಗಾಭ್ಯಾಸವನ್ನು ಕಲಿತು ಸಹ ಹೋಗಿರಬೇಕು ಎಂದೆನಿಸುತ್ತೆ...

ನವರಸಗಳ ೯ ರಸಗಳು ಎಲ್ಲಾ ವಿವಿಧ ರೀತಿಯಲ್ಲಿ ಮೂಡಿ ಬರುತ್ತಲಿದ್ದಂತೆ ಮತ್ತೊಂದು ಅದ್ಧೂರಿ ಮುಕ್ತಾಯ ಸಮಾರಂಭಕ್ಕೆ ಒಬ್ಬನೇ ವ್ಯಕ್ತಿಯಲ್ಲಿ ಎಷ್ಟೆಲ್ಲಾ ರಸಗಳು ಕೆಲಸಮಾಡಿವೆ ಎಂಬ ಉದಾಹರಣೆಗೆ ಕರುನಾಡನ್ನು ಸುವರ್ಣಭೂಮಿ ಎಂದು ಕರೆದ ಮಹಾನ್ ಚೇತನ ಅಶೋಕ ಚಕ್ರವರ್ತಿ ಜೀವನವನ್ನಾಧರಿಸಿ ಪುಟ್ಟ ನೃತ್ಯ ರೂಪಕ ಎಲ್ಲರ ಮನಸ್ಸನ್ನು ಸೆಳೆದಿತ್ತು.

ಈ ನೃತ್ಯ ಕೇವಲ ೫,೬ ದಿನಗಳಲ್ಲಿ ನಮ್ಮ ಮಕ್ಕಳಲ್ಲಿನ ಕಲೆಯನ್ನು ಹೊರಹಾಕಲು ಕರುನಾಡ ಮಿತ್ರರಾದ ಸಾಧನಾ ಅಕಾಡೆಮಿ, ಹುಬ್ಬಳ್ಳಿಯಿಂದ ಸುಧೀರ್ ಯಾದವ್ ಮತ್ತು ಮೃತ್ಯುಂಜಯ್ ಮರುಭೂಮಿಗೆ ಬಂದು ನೃತ್ಯ ನಿರ್ದೇಶಿಸಿ ಮಕ್ಕಳ ಅಭಿನಯ ಕೌಶಲತೆಯನ್ನು ಮೆರೆದರು....

ಅದ್ಧೂರಿ ಸಮಾರಂಭ ಮುಕ್ತಾಯ ಎಲ್ಲಾ ಸಭಿಕರಿಗೆ ವಂದಿಸುತ್ತ ಮುಕ್ತಾಯವಾಯಿತು..ಭಾವಸಂಗಮದಲ್ಲಿ ಎಲ್ಲಾ ರೀತಿಯ ಹೊಸ ಹೊಸ ಪ್ರಯತ್ನಗಳೊಂದಿಗೆ ವೇದಿಕೆ ನವರಸಗಳಂತೆ ಹಲವು ಬಣ್ಣಗಳಾಗಿ ಬಿಂಬಿತವಾಗಿವೆ. ಇಲ್ಲಿ ಕೂಟದ ಮಕ್ಕಳು, ಸದಸ್ಯರು ಎಲ್ಲರ ಒಗ್ಗಟ್ಟಿನ ಪ್ರಯತ್ನವೇ ಕಳೆದ ಶುಕ್ರವಾರ (೧೮-೧೧-೧೧) ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅದ್ಧೂರಿ ಕಾರ್ಯಕ್ರಮ.


ಚಿತ್ರಗಳು : ಕ್ಯಾಮರಾ ಕೊಡುಗೆ

Monday, October 31, 2011

ನನ್ನ ಪಾ(ಹಾ)ಡು..


ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ನಾ ಮುಟ್ಟುವ ನೆಲ ಅದೇ ಮರುಭೂಮಿ
ನಾನಿರುವ ಸ್ಥಳ ಅದೇ ಕುವೈತ್
ನಾ ನೋಡುವ ಮರ ಅದೇ ಖರ್ಜೂರದ ಮರ
ಅರಬರ ನಾಡಲಿ ಜೀವನ ನೆಡೆಸುತಿರುವುದು ಸತ್ಯ
ಕಡಲ ತೀರದ ಮನೆಯಲಿ ನೆಲೆಸಿರುವುದು ನಿತ್ಯ
ಎಲ್ಲೇ ಇದ್ದರೂ ನಾ ಹೇಗೇ ಇದ್ದರು ನಾ
ಮಾತೃಭಾಷೆ ಕನ್ನಡವೇ ಸದಾ....

ಒಂಟೆಗಳ ನಾಡಲಿ ಕುಳಿತಿರುವಾ ಮನ
ತೈಲದ ಸಿರಿಯನು ಕಣ್ಣಲಿ ನೋಡುತಾ
ಕಡಲ ಉಪ್ಪಿನ ವಾಸನೆ ಸೇವಿಸುತಾ
ಕನ್ನಡದ ಕೂಗನು ಮನದಲೇ ಹೇಳುತಾ
ಕನ್ನಡ ನಾಡಲಿ ದೇಹವ ನೀಡಿದ
ಆ ನನ್ನ ತಾಯಿ ಹೃದಯಕೆ ವಂದನೆ...

ಕಚೇರಿಗಳಲಿ ಅರಬಿ, ಇಂಗ್ಲೀಷಿನದೇ ಸಾಮ್ರಾಜ್ಯ
ಆದರೂ ಆಗೊಮ್ಮೆ ಈಗೊಮ್ಮೆ ಸಿಗುವ
ಕನ್ನಡಿಗರೊಡನೆ ಭಾಷಾ ಭಾಂದವ್ಯ
ಸದಾ ಹಸಿರಾಗಿಸುವುದು ನಮ್ಮ ಆಂತರ್ಯ

ಎಲ್ಲಿದ್ದರೂ ಸರಿ ಹೇಗಿದ್ದರೂ ಸರಿ
ಕನ್ನಡಭಾಷೆ ಮಾತನಾಡಿದರೆ ಸೈ..

ಚಿತ್ರ:ಅಂತರ್ಜಾಲ

Monday, October 24, 2011

ಧಮ್..ಧಮ್..

ದಿನವೆಲ್ಲಾ ಸುತ್ತಿ
ಮೈಯ್ಯಿಕೈ ನೋಯಿಸ್ಕೊಂಡು
ಕೆಲಸ ಮಾಡಿದ್ದು ಸಾಕಾಯ್ತು
ಬೆಂಡಾಗಿ ಹೋಯ್ತು ಜೀವ...

ಮನಸ್ನಾಗಿನ ನೋವು
ದೇಹದಾಗಿನ ತಾಪ
ತಣಿಸೋಕೆ ಬೀಡಿ ಸೇದುತಾ
ಧಮ್ ಎಳಿದ್ರೆ ಸುಖವೋ ಸುಖ...

ಗಂಡುಸ್ರೋಬ್ಬ್ರೆ ಅಲ್ಲ
ಕುಡಿದು ಸೇದೋಕೆ
ನಾವೇನು ಕಮ್ಮಿ
ಬಾಟ್ಲಿ ಗೀಟ್ಲಿ
ಬೀಡಿ ಸಿಗರೇಟ್ ಸೇದೋಕೆ...

ಬೀಡಿಯ ಗಾಳಿ ದೇಹದಾಗೆ ಸೇರಿ
ಬೆಚ್ಚಗೇ ಮಾಡುಸ್ತಾದೆ ನೋಡಿ
ಮನಸನ್ನಾ ತಣಿಸ್ತಾದೇ ನೋಡಿ
ನಿಮ್ಗೂ ಬೇಕಾರೆ ಕೊಡ್ತೀನಿ ವಸಿ ತಗೊಳ್ಳಿ...

ಚಿತ್ರ ಕೃಪೆ: ಗಣಪತಿ ಹೆಗಡೆ

Sunday, October 9, 2011

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

Tuesday, October 4, 2011

ರೀತಿ...ನೀತಿ..ಪ್ರೀತಿ..

http://ittigecement.blogspot.com/2011/09/blog-post.html - ಇದು ಪ್ರಕಾಶಣ್ಣ ಬರೆದ ಕಥೆ...

ನೀತಿ..ಪ್ರೀತಿ..
ಅದೇ ಕಥೆಯನ್ನು ಮುಂದುವರಿಸಿ ಬರೆದಿದ್ದೇನೆ...

ನಾನು ಪ್ರಶ್ನೆ ಕೇಳುವುದು ಸಹಜ......!!!

ಯಾಕೆ ಅಂದರೆ.... ನಾನು ಜೀವನದಲ್ಲಿ ಎಂದೂ ಇವರನ್ನ ನೋಡೇ ಇಲ್ಲ, ಇವರ ಬಗ್ಗೆ ಕೇಳಿಲ್ಲ, ಬಹಳ ದಿನಗಳ ಪರಿಚಯವಿಲ್ಲ ಅಥವಾ ನಮ್ಮ ನೆಂಟರೂ ಅಲ್ಲ... ದಿಢೀರ್ ಎಂದು ೨ ತಿಂಗಳಲ್ಲಿ ನೋಡಿದ್ದು ಆಯ್ತು ಮದುವೆನೂ ಆಯ್ತು ಈ ಎರಡು ತಿಂಗಳಲ್ಲಿ ಗಂಡನಾಗುವನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ......


ಆ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೂ ಎನ್ನಲಿ.... ಇಲ್ಲವಾ ಖಡಾಖಂಡಿತವಾಗಿ ಇಲ್ಲ ಎಂದು ವಾದಿಸಿ ನನ್ನನ್ನ ಗೆಲ್ಲ ಬೇಕಿತ್ತು ಅದು ಬಿಟ್ಟು.... ಕೆಟ್ಟ ಕೋಪ ತೋರಿಸಿ ಮುಖ ತಿರುಗಿಸಿ ಮಲಗುವುದೇನು...?????

ಇವರೊಬ್ಬರಿಗೇ ಕೋಪ ಬರುವುದ.... ನನಗೂ ಬರುತ್ತೆ..... ನನ್ನಲ್ಲೂ ಸ್ವಾಭಿಮಾನವೆನ್ನುವುದು ಇದೆ......

ಮದುವೆಯಾದರೆ ಈ ತರಹ ಕದನ, ಕೋಪ ಎಲ್ಲಾ ಇರುತ್ತಾ...ಅಬ್ಬಾ!!! ಭಯವಾಗುತ್ತೆ... ಅಪ್ಪ ಅಮ್ಮನಿಗೆ ಹೇಳಿದ್ದೆ, ಪ್ರೀತಿಸಿ ಮದುವೆವಾಗತೀನಿ ಎಂದು ಆದರೆ ಅಪ್ಪ,ಅಮ್ಮ ಅದೇ ಓಭಿರಾಯನ ಕಾಲದಲ್ಲೇ ಇದ್ದಾರೆ.... ಜಾತಿ,ಮತ, ಹಣ, ಅಂತಸ್ತು ಎಂದು ಏನೋ ಮನೆಯವರೆಲ್ಲಾ ನೋಡಿ ಮಾಡಿದ ಮದುವೆ ಸಂಬಂಧ ಭದ್ರವಾಗಿರುತ್ತೆ ಎನ್ನೋ ಇರಾದೆ ಇವರದು...... ಏನೋ ನನಗೆ ನನ್ನ ಜೀವನವೇ ಗೊಂದಲದಲ್ಲಿದೆ... ಈಗಲೇ ನನ್ನ ಗಂಡನಿಗೆ ಇಷ್ಟು ಕೋಪ... ಮುಂದೆ ಹೇಗೋ ದೇವರೇ ಬಲ್ಲ..!!!!!!!! ಈ ರೀತಿ ಯೋಚನೆ ಆ ಹೆಣ್ಣು ಮಗಳದು...

ಮೌನ ಆವರಿಸಿದೆ ಆ ಬದಿ ಅವನು ಈ ಬದಿ ಇವಳು...... ನೀರವ ಮೌನ .... ಇಲ್ಲಿ ತಪ್ಪುನೆಪ್ಪುಗಳ ಪ್ರಶ್ನೆ ಇಲ್ಲ...... ಹುಸಿಮುನಿಸು ಮನೆ ಮಾಡಿದೆ.... ಆ ಮುನಿಸಲ್ಲೇ ಕಣ್ಣ ಕಂಬನಿಗಳು ತಲೆದಿಂಬನ್ನ ಒದ್ದೆಗೊಳಿಸುತ್ತಿತ್ತು ಇದು "ಮೌನದಿ ಕಣ್ಣೀರ ರಾಗ".........

--
ತನ್ನೆಲ್ಲಾ ಆಸೆ, ಪ್ರೀತಿ, ಬದುಕು, ನಂಬಿಕೆ, ನನ್ನವನೇ ಇವನು.. ಇವಳು ನನ್ನವಳು ಎಂದು ಒಬರಿಗೊಬ್ಬರಿದ್ದೇವೆ..... ಒಲವಿನ ಆಸರೆಯಾಗಿ ಹೊಸ ಬದುಕು ಪ್ರಾರಂಭಿಸುವ ದಿನ ಈ ಮೊದಲ ರಾತ್ರಿ ಇಂತಹದರಲ್ಲಿ ಎಲ್ಲವೂ ಅನುಮಾನದಲ್ಲಿ ದೂಡಿಬಿಡುತ್ತಾಳಲ್ಲ ಇವಳು... ಕನಸು ಕಟ್ಟಿದ್ದ ಮೊದಲ ರಾತ್ರಿ ಕನಸಾಗೇ ಉಳಿದು ಬಿಟ್ಟಂತಾಯ್ತು............ -ಈ ರೀತಿ ಇರಾದೆ ಗಂಡನದು

ಮತ್ತದೇ ನೀರವ ಮೌನ ಮಗ್ಗುಲು ಬದಲಿಸದೇ ಯೋಚಿಸಿದ್ದವನಿಗೆ ನಿದ್ರೆ ಆವರಿಸಿತ್ತು....

ಮಧ್ಯರಾತ್ರಿ....

ಏಕೋ ಗಂಟಲು ಒಣಗಿದೆ.... ಗಂಡನ ಮೇಲಿನ ಕೋಪ...ಕಣ್ಣಲ್ಲಿ ನೀರನ್ನು ತರಿಸಿತ್ತು... ಕಣ್ಣಲ್ಲಿ ಹೋದ ನೀರು ಬಾಯಾರಿಕೆಯನ್ನ ಎಳೆತಂದಿತು.. ಅಯ್ಯೋ ದೇವರೆ.. ಈಗಲೇ ಗಂಟಲು ಒಣಗಬೇಕೆ.... ಅತ್ತು ಅತ್ತು... ಗಂಟಲ್ಲಿಂದ ಕೆಮ್ಮು ಪಕ್ಕದಲ್ಲಿದ್ದ ಗಂಡನನ್ನ ಎಬ್ಬಿಸಿತು.....

ತಟ್ಟನೆ ಎದ್ದವನು ಒಂದು ಲೋಟದಲ್ಲಿ ನೀರನ್ನಿಡಿದು ಕೈಚಾಚಿದನು... ಕುಳಿತು ಕೆಮ್ಮುತ್ತಿದ್ದವಳು ಮಾತನಾಡಲಿಲ್ಲ... ಬೇಡವೆಂಬಂತೆ ಮುಖ ತಿರುಗಿಸಿದಳು... ಆದರು ಅವಳ ಮುಖ ತಿರುಗಿಸಿ ನೀರನ್ನ ಇವನೇ ಕುಡಿಸಿದ.... ಅವನ ಆ ಸೇವೆ ಇಷ್ಟವಾಯ್ತು.. ನನ್ನ ಮೇಲೂ ಕಾಳಜಿ ಇದೆ ಎನಿಸಿತು... ಆದರು ಯಾಕೋ ಆ ಕೋಪವಿಡಿಸಲಿಲ್ಲ....ಎಂದೆಲ್ಲಾ ಮನಸಿನಲ್ಲಂದುಕೊಂಡಳು

ಲೋಟದಿಂದ ನೀರು ಕುಡಿಸುತ್ತ ಅವಳ ಸೌಂದರ್ಯವನ್ನೇ ಸವಿಯಬೇಕೆನಿಸಿತು..... ಆದರೂ ಅವಳು ನನ್ನನೇ ಪ್ರಶ್ನಿಸಿದಳು... ನನ್ಗೆ ಕೋಪ ಬಂದಿದೆ ಈ ರೀತಿ ಅನುಮಾನ ಪಡುತ್ತಾಳಲ್ಲ ನನ್ನ ಮೇಲೆ... ಛೇ..!! ಬಿಡು ಮಾತ್ಯಾಕೆ ಈಗ..ಮಾತನಾಡೋದು ಎಂದುಕೊಂಡು ಮಲಗಿದನು....

ಗಂಟಲಿಗೆ ಧಣಿವಾರಿತು.... ಆದರೆ ಕೋಪ ಶಮನವಾಗಲಿಲ್ಲ..... ಮಬ್ಬು ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡಿದರು ಮೌನ ಕರಗಿಲ್ಲ.... ಅವನ ಕಣ್ಣ ಭಾಷೆ ಅರ್ಥ ಮಾಡಿಕೊಳ್ಳಲಾಗಿಲ್ಲ ಇವಳಿಗೆ...... ಪ್ರೀತಿ ಇದೆ... ಅದನ್ನ ಕೋಪದಲ್ಲಿ ಕಳೆಯೋ ಮನಸ್ಸಿಲ್ಲ ಇಬ್ಬರಿಗೂ....... ಆದರೂ ಏನೋ ಸ್ವಾಭಿಮಾನ....

ಮುಖ ತಿರುವಿ ಮಲಗಿದ್ದ ಅವಳೀಗ ಗಂಡನತ್ತ ಮುಖ ಮಾಡಿ ಮಲಗಿದ್ದಳು ಆದರೆ ಅಂತರ ಮಾತ್ರ ಮುಂದುವರಿಸಿದ್ದಳು......

ಇತ್ತ ಇವನೂ ಅವಳ ಮೌನ ಮುರಿಯಲು ಸಾಧ್ಯವಾಗಲಿಲ್ಲ ತನ್ನಲಿದ್ದ ಕೋಪ ಸಹ ಕಡಿಮೆಯಾಗಿರಲಿಲ್ಲ..... ಮುಖ ತಿರುಗಿಸಿ ಮಲಗಿಬಿಟ್ಟಿದ್ದ...... ಒಂದೇ ಮಗ್ಗುಲಲಿ ಮಲಗಿದ್ದವಗೆ ಕೈ ಹಿಡಿದಂತೆ ನೋವಾಗಿದೆ......... ಇತ್ತ ಒರಳುತ್ತಾನೆ.... ಒಮ್ಮೆಲೇ ಬದಲಿಸಿದ ಕೈ ಪಕ್ಕದಲ್ಲೇ ಇದ್ದ ಮೃದು ತೋಳು ಅವನನ್ನ ಆಕರ್ಷಿಸಿದೆ........ ಮೆಲ್ಲಗೆ ನೇವರಿಸಿ.....ತಲೆದಡವಿದೊಡೆ....... ಅದೇನೋ ಮೋಹಕ ಭಾವ ಮನದಲ್ಲೇ ಅರಳುತ್ತದೆ.....

ಮಬ್ಬುಗತ್ತಲಲಿ ಕಣ್ಣು ಬಿಟ್ಟವಗೆ ಆ ಕೆಂಬಣ್ಣದ ತುಟಿಗಳು ಆಹ್ವಾನಿಸಿವೆ...... ಅವಳ ಮುಗ್ಧ ಮೊಗ ಅವಳತ್ತ ಸೆಳೆದಿದೆ......ಇತ್ತ ನಿದ್ರೆಯಲ್ಲಿರುವಂತೆ ನಟಿಸುತ್ತಿದ್ದವಳಿಗೆ... ಅವನ ಘಾಡ ಚುಂಬನ ಅವನನ್ನೇ ಬಾಚಿ ತಬ್ಬುವಂತೆ ಮಾಡಿದೆ...... ಆ ಕತ್ತಲ ರಾತ್ರಿ... ಇಬ್ಬರೂ ಮಾತಿಲ್ಲ ಕಥೆ ಇಲ್ಲ.... ನೀರವ ಮೌನದಲ್ಲೇ ಒಬ್ಬರಿಗೊಬ್ಬರು ಕ್ಷಮಾಪಣೆ ಸಲ್ಲಿಸಿ.........ಮಿಲನ ಮಹೋತ್ಸವದಲ್ಲಿ ತೇಲಿಬಿಡುತ್ತಾರೆ.... ಈ ಸಮ್ಮಿಲನ ಅವರಿಬ್ಬರಿಗೂ ಅರಿವೇ ಇಲ್ಲದೇ ಒಂದು ಮಾಡಿಸಿಬಿಟ್ಟಿದೆ...

ಒಬ್ಬರಿಗೊಬ್ಬರ ಪ್ರಶ್ನೆ ಅದು ಘಾಡವಾದ ವಿಷಯವೇನಲ್ಲ....... ಮಾತು ಸಹಜ... ಪ್ರೀತಿಯ ಬಂಧನ ಎಲ್ಲ ತಪ್ಪು ಮಾತುಗಳನ್ನ ಮುಚ್ಚಾಕಿ ಬಿಡುವಂತೆ ಎರಡು ಜೀವಗಳು ಪ್ರೀತಿಯಲ್ಲಿ ಇಬ್ಬರೂ ಬಂಧಿಯಾಗಿದ್ದರು......

ಆ ಕೋಪದ ರಾತ್ರಿ ಇಬ್ಬರಿಗೂ ಅರಿವಿಲ್ಲದೇ ಒಂದು ಮಾಡಿಸಿತ್ತು.........ಕೋಪ, ಮುನಿಸು.... ಮುಖ ತಿರುಗಿಸಿ ಮಲಗಿದ್ದೂ ಯಾವೊಂದು ವ್ಯತ್ಯಾಸ ಅರಿಯದೇ ಬೆಳಗಿನ ಸೂರ್ಯ ಕಿಟಕಿಯಲ್ಲಿ ನಾಚುತ್ತ ಇವರಿಬ್ಬರ ಮುಖಕ್ಕೆ ಬೆಳಕು ಚೆಲ್ಲಿದ್ದ......


ರೀತಿ: ಈ ರೀತಿನು ಇರುತ್ತಾರೆ ಜನ ಎಂಬುದು ಪ್ರಕಾಶಣ್ಣನ ಕಥೆ

ನೀತಿ: ಗಂಡ ಹೆಂಡಿರು ಜಗಳ ತಿಂದು ಮಲಗೋವರೆಗಷ್ಟೇ

ಪ್ರೀತಿ: ಗಂಡು ಹೆಣ್ಣು ಪ್ರೀತಿಯಲ್ಲಿ ಎಲ್ಲವನ್ನೂ ಮರೆಮಾಚಬಹುದು...

ತಪ್ಪುಗಳಿದ್ದರೆ ಕ್ಷಮೆ ಇರಲಿ...

Wednesday, September 28, 2011

ನೀರವ ಮೌನ


ಆ ಬದಿಯಿಂದ ಈ ಬದಿಗೆ
ಭದ್ರವಾಗಿ ನಿಂತಿಹೆನು
ದಡ ಸೇರ ಬಯಸುವವಗೆ
ದಾರಿ ತೋರುವೆ ನಾನು

ಯಾರು ಬಂದು ಹೋದ ಕುರುಹಿಲ್ಲ
ಹೆಜ್ಜೆಗಳ ಸಪ್ಪಳ ಕೇಳುತಿಲ್ಲ
ಬರುವರೆಂಬ ನಿರೀಕ್ಷೆಯಲಿ ನಿಂತಿಹೆನು
ಬಾಯ್ತೆರದ ಬಕ ಪಕ್ಷಿಯಂತೆ.....

ಹೆಜ್ಜೆಗಳು ನಲುಗವು
ಆಯ ತಪ್ಪಿ ಬೀಳಿಸೆನು
ಸುತ್ತಲೂ ಕಬ್ಬಿಣ ಸಲಾಕೆ ಹೊಂದಿಹೆನು
ಇನ್ನೇಕೆ ಭಯವು ನೆಡೆದಾಡಲು...!!??

ಹೆಜ್ಜೆ ಮೂಡುವವರೆಗೂ
ಗೆಜ್ಜೆ ಸಪ್ಪಳ ಕೇಳುವವರೆಗೂ
ಈ ನೀರವ ಮೌನದಲಿರುವ
ಹಾದಿಗೆ ಮಾತು ಕಲಿಸ ಬನ್ನಿ..!!!

-----------

@ಚಿತ್ರ: ಮನುವಚನ್

Wednesday, September 21, 2011

ಫೇಸ್ ಬುಕ್ಕಾಯಣ... ಪೋನಾಯಣ.....ರಾಮಾಯಣ

ನಮ್ಮ ಕಛೇರಿಯಲ್ಲಿ ಒಬ್ಬರು ಒಂದು ವಾರದ ಮಟ್ಟಿಗೆ ತವರೂರಾದ ಭಾರತಕ್ಕೆ ತೆರಳಿದ್ದರು... ಅವರು ಊರು ತಲುಪಿದ ಕೆಲವೇ ಘಂಟೆಗಳಲ್ಲಿ ಸುಮಾರು ೪,೫ ಮಿಸ್ ಕಾಲುಗಳು ಬಂದವಂತೆ, ಆ ಕರೆಯನ್ನು ಸ್ವೀಕರಿಸಿದ್ದೇ ತಡ ಯಾರೂ ಮಾತನಾಡುತ್ತಲಿರಲಿಲ್ಲ... ಯಾವುದೇ ಮಾತಿಲ್ಲ ಕಥೆಯಿಲ್ಲ, ಹೀಗೆ ಸುಮಾರು ಸರಿ ಕರೆಮಾಡಿದ್ದರಿಂದ ಪೋನ್ ಸ್ವಿಚ್ ಆಫ್ ಮಾಡಿಬಿಟ್ಟಿದ್ದಾರೆ.

ಆ ಪೋನ್ ಸ್ವಿಚ್ ಆಫ್ ಆಗಿದ್ದೇ ತಡ ೧೦ ನಿಮಿಷಗಳ ನಂತರ ಅವರ ಹೆಂಡತಿಯ ಮೊಬೈಲ್ ಗೆ ಬೇನಾಮಿ ಕರೆಗಳು ಬರಲು ಪ್ರಾರಂಭವಾಯಿತು. ಕರೆ ಸ್ವೀಕರಿಸಿದರೆ ಮಾತಿಲ್ಲ ಮೌನದಲ್ಲೇ ಧ್ವನಿ ಕೇಳುವ ಖಯಾಲಿ ಆ ಜನರಿಗೆ... ಒಂದೇ ದಿನದಲ್ಲಿ ಸುಮಾರು ೧೦,೧೫ ಕರೆ ಬರುವುದು ಮಾತಿಲ್ಲದೇ ಧ್ವನಿ ಕೇಳುವುದು ಇದೇ ನೆಡೆಯುತ್ತಲಿತ್ತು. ಕೊನೆಗೆ ಆ ಫೋನ್ ಕೂಡ ಸ್ವಿಚ್ ಆಫ್ ಮಾಡಿ... ಮನೆಗೆ ಬಂದು ಇನ್ನೇನು ನೀರು ಕುಡಿಯ ಬೇಕು ಎನ್ನುವಾಗಲೇ ಮನೆಯಲ್ಲಿದ್ದ ದೂರವಾಣಿಗೆ ಮತ್ತೆ ಕರೆ ಬಂದು ಸ್ವೀಕರಿಸಿದರೆ ಮತ್ತದೇ ಮೌನ....... ಮಾತಿಲ್ಲ ಕಥೆ ಇಲ್ಲ... ಆ ದೂರವಾಣಿಗೂ ಸುಮಾರು ಸರಿ ಕರೆ ಬರುವುದು ಸ್ವೀಕರಿಸುವುದು ಇದೇ ನೆಡೆದಿತ್ತು....... ತಾಳ್ಮೆ ಕಳೆದುಕೊಂಡ ಇವರು ಫೋನ್ ಲೈನ್ ತೆಗೆದು ಬಿಟ್ಟರು....

ಎಲ್ಲರಿಗೂ ಚಿಂತೆ ಕಾಡಲು ಪ್ರಾರಂಭವಾಯಿತು ಯಾರು ಮಾಡುತ್ತಿದ್ದಾರೆ ಏಕೆ ಹೀಗೆ ಎಂದು.... ಕೊನೆಗೆ ಮನೆಯಲ್ಲಿದ್ದ ಅವರ ಅಮ್ಮನ ಹತ್ತಿರ ವಿಚಾರಿಸುವಾಗ ಹೇಳಿದರು ನೀವುಗಳು ಭಾರತಕ್ಕೆ ಬರುವ ಸ್ವಲ್ಪ ಘಂಟೆಗಳ ಒಳಗೆ ಯಾರೋ ಕರೆ ಮಾಡಿದರು... ಬಂದಿದ್ದಾರ ಎಂದು, ಇನ್ನು ಬಂದಿಲ್ಲ ಎಂದೆ. ಸ್ವಲ್ಪ ಸಮಯದ ನಂತರ ಮತ್ತೂ ಕರೆ ಮಾಡಿ ಕೇಳಿದರು ಏನೋ ವಿಷಯವಿರಬೇಕೆಂದು ನಿಮ್ಮಗಳ ಮೊಬೈಲ್ ನಂಬರ್ ಕೊಟ್ಟೆ ಎಂದರು..... ಈ ಲ್ಯಾಂಡ್ ಲೈನ್ ನಂಬರ್ ಹೇಗೆ ಸಿಕ್ಕಿತು ಎಂದು ಯೋಚಿಸುವಾಗ ನೆನಪಾಗಿದ್ದು "ಫೇಸ್ ಬುಕ್", ಕುವೈತಿನಿಂದ ಭಾರತಕ್ಕೆ ಹೊರಡುವ ಮುನ್ನ ತಮ್ಮ ಫೇಸ್ ಬುಕ್ಕಿನಲ್ಲಿ ಅವರ ಮನೆಯ ದೂರವಾಣಿ ಸಂಖ್ಯೆಯನ್ನು ಹಾಕಿದ್ದಾರೆ ಅದರಿಂದಲೇ ಈ ಕೆಲಸವಾಗಿರಬಹುದು ಎಂದು ಊಹಿಸಿಕೊಂಡಿದ್ದಾರೆ.

ಇನ್ನು ಪೋಲೀಸಿಗೆ ತಿಳಿಸೋಣ ಎಂದರೆ ಅಲ್ಲಿ ಒಮ್ಮೆ ಹೋಗಿ ಸೇರಿಕೊಂಡರೆ ಮುಗಿಯಿತು ಮತ್ತೆ ಹೊರಗೆ ಬರೋಕ್ಕೆ ಆಗೋಲ್ಲ.... ೧ ವಾರ ಮಾತ್ರ ರಜೆಯಲ್ಲಿರುವುದು ಎಂದು ಯೋಚಿಸಿ ಸುಮ್ಮನಾಗಿದ್ದಾರೆ. ನಂತರ ಇಷ್ಟೂ ಕರೆಗಳು ಬಂದಿದ್ದ ದೂರವಾಣಿ ಸಂಖ್ಯೆಗಳನ್ನೆಲ್ಲವನ್ನೂ ಬರೆದಿಟ್ಟುಕೊಂಡು ಅವರ ಸ್ನೇಹಿತರೊಬ್ಬರಿಗೆ ಕೊಟ್ಟು ಬಂದಿದ್ದಾರೆ. ಈ ವಿಷಯವೆಲ್ಲವನ್ನೂ ಒಮ್ಮೆ ಪರಿಶೀಲಿಸುವಂತೆ ಹೇಳಿ ಬಂದಿದ್ದಾರೆ...

ಇದು ನಿಜವೇ ಎಂದು ನನಗೆ ಆಶ್ಚರ್ಯವಾಗಿ..!!! ಮತ್ತೊಮ್ಮೆ ಅವರನ್ನೇ ಕೇಳಿದೆ. ಹೌದು!!! ನಾನು ಊರಿಗೆ ಹೋಗಬೇಕೆಂದು ತೀರ್ಮಾನಿಸಿದ್ದೇ ಹೊರಡುವ ಹಿಂದಿನ ದಿನ ನಂತರ ಟಿಕೆಟ್, ಪ್ಯಾಕಿಂಕ್ ಹೀಗೆ ಬ್ಯುಸಿ ಇದ್ದೆ.. ಯಾರಿಗೂ ಹೇಳೇ ಇರಲಿಲ್ಲ... ಅಮ್ಮನಿಗೆ ಹೇಳಿದ್ದೇ ನಾನು ವಿಮಾನ ಹತ್ತುವ ೧ಗಂಟೆಯ ಮುನ್ನ, ಸ್ನೇಹಿತರಾಗಲಿ, ಸಂಬಂಧಿಕರಿಗಾಗಲಿ ಯಾರಿಗೂ ಹೇಳೇ ಇರಲಿಲ್ಲ ನಾನು ಬರುತ್ತೇನೆಂದು... ಇನ್ನು ನನ್ನ ಎರಡೂ ಹೊಸ ಸಿಮ್ ಗಳು ಸ್ನೇಹಿತ ವಿಮಾನ ನಿಲ್ದಾಣಕ್ಕೆ ತಂದು ಕೊಟ್ಟಿದ್ದು... ಆ ಸ್ನೇಹಿತ ಹೀಗೆ ಮಾಡುವವನೇ ಅಲ್ಲ... ಆದರೆ ನನಗೆ ಅನುಮಾನವಿರುವುದು ಈ ಫೇಸ್ ಬುಕ್ ಮಾತ್ರ... ಇದರಿಂದ ಹಲವು ಅನಾಹುತ ನೆಡೆದಿವೆ ಎಂದು ಕೇಳಿದ್ದೇನೆ ಎಂದರು. ನನ್ನ ಅನುಮಾನ ಖಂಡಿತಾವಾಗಿಯೂ ಸುಳ್ಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ...!!

ಪಾಪ ಅವರು ರಜೆಯನ್ನು ಈ ಪೋನಿನ ರಾಮಾಯಣದಲ್ಲೇ ದಿನ ಕಳೆದು ಬಂದಿದ್ದಾರೆ.... ಇದು ಫೇಸ್ ಬುಕ್ ರಾಮಾಯಣವೋ..ಫೋನ್ ರಾಮಾಯಣವೋ... ಏನೋ ಒಂದು ತಿಳಿದಿಲ್ಲ ಆದರೆ ಈಗ ಮಾತ್ರ ಅವರು ಕರೆಗಳನ್ನು ಸ್ವೀಕರಿಸಿದ್ದರಲ್ಲ ಅಷ್ಟೂ ಸಂಖ್ಯೆಗಳನ್ನು ನೋಡುತ್ತ ನಂಬರಾಯಣದಲ್ಲಿ ಮುಳುಗಿದ್ದಾರೆ... (ಅವರು ಊರಿಂದ ಬಂದು ೩ ದಿನವಾಯಿತು ದಿನಕ್ಕೆ ಎರಡು ಬಾರಿಯಾದರೂ ಬರೆದಿಟ್ಟಿರುವ ಫೋನ್ ನಂಬರ್ ಗಳನ್ನು ಮಾತ್ರ ನೋಡುತ್ತಲೇ ಇದ್ದಾರೆ... ಯಾರು ಇರಬಹುದು, ಏಕೆ ಕರೆ ಮಾಡಿದರು ಎಂಬ ಪ್ರಶ್ನೆಗಳನ್ನು ಮನಸ್ಸಲ್ಲೇ ಹಾಕಿಕೊಂಡು ಗೊಣಗುತ್ತಲಿದ್ದಾರೆ).

ಆದರೆ ಇನ್ನೊಂದು ವಿಷಯವೆಂದರೆ ಅವರು ಊರು ಬಿಟ್ಟು ಕುವೈಟಿಗೆ ಬಂದ ನಂತರ ಅಲ್ಲಿ ಮನೆ ನಂಬರಿಗೆ ಮತ್ತಾವು ಬೇನಾಮಿ ಕರೆಗಳು ಬರುಲ್ಲಿಲ್ಲವೆಂದು ಹೇಳಿದ ಮೇಲೆ ಫೇಸ್ ಬುಕ್ಕಿನ ಮೇಲೆ ಹೆಚ್ಚು ಅನುಮಾನ ಪ್ರಾರಂಭವಾಗಿದೆ

ಇದು ನಿಜವೋ ಏನೋ ಗೊತ್ತಿಲ್ಲ ಆದರೆ ಆದಷ್ಟು ಮುಖ್ಯ ವಿಷಯಗಳನ್ನು ಮಾತ್ರ BUZZ , Google+, FACEBOOK, twitter ಇತ್ಯಾದಿ.... ಎಲ್ಲಿಯೂ ಬಿತ್ತರಿಸದೇ ಇರುವುದು ಒಳ್ಳೆಯದು.... ಅಲ್ಲವೇ..?

@ಫೋಟೋ - ಅಂತರ್ಜಾಲ

Wednesday, September 14, 2011

ರಾಜಕೀಯ ಖೈದಿ

ಮನುಷ್ಯರ ಕಥೆ ಇಷ್ಟೆ ಅಲ್ಲವೇನು
ಯೋಚನೆ ಮಾಡಿ ಲಾಭಾ ಏನಿದೆ..!!??

ನೋಟಿಗೊಂದು ಓಟು ಗಿಟ್ಟಿಸಿ
ಜನರ ಆಯ್ಕೆಯಲ್ಲಿ ಸೀಟು ಪಡೆದು
ದೇವರೆಸರಲಿ ಪ್ರಮಾಣ ಮಾಡಿ
ಮಣ್ಣು ಮುಕ್ಕಿಸಲೊರಟ ಜನರ ಕಥೆ ಎಲ್ಲಿಗೆ ನಿಲ್ಲಿತು..!!

ಕೋಟಿಗಟ್ಟಳೆ ಹಣವ ದೋಚಿ
ಐಶಾರಾಮಿ ಜೀವನ ನಡೆಸಿ
ರಾಜ ಠೀವಿಯಲ್ಲಿ ಮೆರೆದ
ರಾಜಕೀಯ ಕೀಚಕರ ಕಥೆ ಎಲ್ಲಿಗೆ ಬಂದಿದೆ.!!

ಪೂಜೆಗೈವ ದೇವಗೂ ಸಿಡಿಮದ್ದು ಸಿಡಿಸಿ
ಬಡಪಾಯಿ ಜನರ ಕಣ್ಣುಬಾಯಿಗೆ ಮಣ್ಣ ಎರಚಿ
ವಜ್ರಕಚಿತ ಸಿಂಹಾಸನದಿ ದರ್ಬಾರು ನೆಡೆಸಿದರು
ಆದರಿಂದು ಎಲ್ಲ ಇದ್ದು ಕಲ್ಲ ಮಂಚದಿ ಮಲಗುವವನ ಜೀವನ ಎಲ್ಲಿದೆಯೋ.!!!

ಜೈಲ ಬಾಗಿಲು ತೆರೆದಿದೆ
ಹೊರಗೆ ತಿಂದು ತೇಗುತಿರುವ
ರಾಜಕೀಯ ಖೈದಿಗಳ ಒಳಗೆ ತಳ್ಳಲು
ಸದ್ಯಕಿರುವ ಕೋಣೆಗಳು ಸಾಲದಾಗಿದೆಯೇನೋ...!!

ಇಲ್ಲೇ ಇದ್ದು ಬಿಡುವರಂತೆ ಸಂಪಾದಿಸಿದರು
ಆಯುಷ್ಯ ಎಷ್ಟೋ ಏನೋ ತಿಳಿಯದವರು
ಸಾವಿನ ಬಾಗಿಲು ತಟ್ಟೋ ಮುನ್ನ ಜೈಲ ಬಾಗಿಲು ತೆರೆಯಿತು
ಏನಾದರೇನು ನಾ ಮಾಡಿದ ಕರ್ಮ ಕಾಡದೇ ಬಿಡುವುದೇನು..!!!

ಈ ಮನುಷ್ಯನ ಕಥೆ ಇಷ್ಟೆ ಎನಿಸಿದೆ
ಆಮಿಷಕೆ ಬಲಿಯಾದವನ ವ್ಯಥೆ ಕೇಳುವವ ಇಲ್ಲವೆನಿಸಿದೆ...

@ಫೋಟೋಗಳು- ಅಂತರ್ಜಾಲ

Tuesday, July 19, 2011

ಸಾರ್ಥಕ ಬದುಕು


@ಚಿತ್ರ ದಿಗ್ವಾಸ್
----------

ಬಿಸಿಲ ಕಾವು ರಾಚಿದರೇನು
ಧೂಳು ಮೈಯ್ಯನೆರಗಿದರೇನು
ರಾಶಿ ರಾಗಿ ತುಂಬಿ ತುಳುಕಿದರು
ಸ್ವಚ್ಚಗೊಳಿಸೋ ಕಾರ್ಯ ನಮ್ಮದಲ್ಲವೇನು..?

ದಿನದ ಹಸಿವು ಕಾಡದಿರದು
ಅದಕೆ ನೋಡಿ ನಮ್ಮ ದುಡಿಮೆ
ಏನು ಇರುವುದೋ ಅನ್ನದ ಮಹಿಮೆ
ನಮ್ಮ ಶ್ರಮದ ಹಿಂದೆ ಹಲವು ಭಾವ
ಮನುಜ ಅದನು ನೆನೆದರೆ ನಮ್ಮ ಬದುಕು ಸಾರ್ಥಕ...

ಕಷ್ಟ-ನಷ್ಟಗಳ ಆಗರ ರೈತ ಜೀವನ
ಧೀರ್ಘ ಮಳೆ, ಬರಗಾಲದ ಹೊಳೆ
ಅಧಿಕ ಕಳೆ, ಬೆಳೆದ ಬೆಳೆ
ಎಲ್ಲ ಎಣಿಸಿ ಶೃಂಗರಿಸಬೇಕಿದೆ ಈ ಕಣ...

ಮುಸುಕು ವೇಷ, ಮಸುಕು ನೋಟ
ಧೋ ಎನುವ ಧೂಳಿನ ಆರ್ಭಟ
ಮನೆ-ಹೊಲ ಕೆಲಸ ಸರಿದೂಗಿಸಿ ನಡೆಸುವ
ತೃಪ್ತಿ ಜೀವನ ಬಲ್ಲವನೇ ಬಲ್ಲ.....!!!


Thursday, July 14, 2011

ಮೂಕವೇದನೆ


ನಾಯಿ ಏಕೋ ಮಣ್ಣು ಕೆರೆಯುತ್ತಿದೆ, ಅಲ್ಲೇ ಕೂತು ಅಳುತ್ತಿದೆ. ಮಾತು ಬಾರದೆ ಮೂಕವೇದನೆಯಲ್ಲಿದೆ. ದಾರಿ ಹೋಕರು ಯಾರೂ ಅದನ್ನು ಗಮನಿಸಲೇ ಇಲ್ಲ. ಎರಡು ಮೂರು ದಿನಗಳು ಕಾದ ನಾಯಿ ಬೇಸರದಿಂದ ಇದ್ದ ಜಾಗ ಬಿಟ್ಟು... ಓಡಿತು ಅಲ್ಲೇ ಪಕ್ಕದ ಊರಲ್ಲಿ ಯಾರದೋ ಮನೆ ಬಾಗಿಲಲಿ ಕಣ್ಣೀರಿಡುತ್ತ ಸಪ್ಪಗೆ ಕೂರುತ್ತಿತ್ತು, ಬಾಲ ಅಲ್ಲಾಡಿಸುತ್ತಿತ್ತು. ಮನೆಯೊಳಗಿನ ಒಡಯರನ್ನು ಕರೆದೊಯ್ಯುವ ಸನ್ನೆ ಮಾಡುತ್ತಿತ್ತು... ಮನೆಯವರು ಎಲ್ಲೋ ನಾಯಿ ಹಸಿವಾಗಿದೆ ಎಂದು ಅನ್ನ ನೀಡಿದರೂ ತಿನ್ನದೇ ಅಳುತ್ತಿತ್ತು. ಮೂಕ ಪ್ರಾಣಿಯ ಈ ವೇದನೆ ಮನುಷ್ಯನಿಗೆಲ್ಲಿ ಅರ್ಥವಾಗಬೇಕು. ಯಾರೂ ಅರಿತುಕೊಳ್ಳುವ ಹಾಗೆ ಕಾಣುತ್ತಿಲ್ಲವೆಂದು ಆ ಮನೆ ಒಡೆಯನ ಪಂಚೆಯನ್ನು ಬಾಯಲ್ಲಿ ಕಚ್ಚಿ ಎಳೆದೊಯ್ಯಲ್ಲು ಯತ್ನಿಸುತ್ತಿದ್ದಂತೆ ಆ ಮನೆಯವರು ಒಮ್ಮೆಲೆ ಅರಿತು ನಾಯಿ ಸಾಗಿದ ದಾರಿಯಲ್ಲೆ ನೆಡೆದರು, ಮೂಕ ಪ್ರಾಣಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ನೆಲವನ್ನೇ ಕೆರೆಯುತ್ತ ರೋಧಿಸುತ್ತಿತ್ತು.

ಇದನ್ನು ಕಂಡ ಆ ಮನೆಯ ಯಜಮಾನ ಅನುಮಾನದಿಂದ ನಾಲ್ಕಾರು ಜನಕ್ಕೆ ತಿಳಿಸಿ, ನಂತರ ಪೋಲೀಸರಿಗೆ ತಿಳಿಸಿದರು. ಆಗಲೇ ತಿಳಿದಿದ್ದು ಅಲ್ಲೊಂದು ಹೆಣ್ಣು ಶವವಾಗಿ ಮಲಗಿದ್ದಾಳೆಂದು. ಮಣ್ಣೊಳಗೆ ಮಣ್ಣಾಗಿದ್ದ ದೇಹ ಹೊರತೆಗೆಯುತ್ತಿದ್ದಂತೆ ನಾಯಿ ಆ ಹೆಣ್ಣಿನ ಪಾದದಡಿ ನಮಸ್ಕರಿಸುತ್ತ ಮಲಗಿದ್ದನ್ನು ಕಂಡು ಜನರೆಲ್ಲ ಮೂಕರಾದರು.

ನಂತರದ ಬೆಳವಣಿಗೆಯಲ್ಲಿ ತಿಳಿದಿದ್ದು ಆ ಹೆಣ್ಣು ತುಂಬು ಗರ್ಭಿಣಿ, ಪ್ರೀತಿಸಿ ಮದುವೆಯಾಗಿದ್ದಳು. ಶ್ರೀಮಂತ ಮನೆಯ ಹುಡುಗನನ್ನು ವರಿಸಿದ್ದೇ ತಪ್ಪಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು.

ನಾಯಿ ಇಷ್ಟು ನೋಯಲು ಕಾರಣ ಸತ್ತು ಹೋಗಿದ್ದ ಆ ಹೆಣ್ಣು ತಾನು ಆ ಮನೆಗೆ ಹೋದಾಗಿನಿಂದ ದಿನಾ ರಾತ್ರಿ ನಾಯಿಗೆ ಊಟವಾಕುತ್ತಳಿದ್ದಳಂತೆ. ಈ ಅನ್ನದ ಋಣ ಇಷ್ಟೆಲ್ಲಾ ಮಾಡಿಸಿದೆ.

ಮನುಷ್ಯನಲ್ಲಿ ಈ ಗುಣ ಬರಬಹುದೇ ಖಂಡಿತಾ ಇಲ್ಲ. ಮೂಕಪ್ರಾಣಿಗಳಲ್ಲಿರುವ ಪ್ರೀತಿ ನಮ್ಮಂತಹವರಲ್ಲಿ ಹೇಗೆ ಬರಲು ಸಾಧ್ಯ.

ಇದು ನಮ್ಮೂರಿಗೆ ಹತ್ತಿರ ಇರುವು ಯಾವುದೋ ಹಳ್ಳಿಯಲ್ಲಿ ನೆಡೆದಿತ್ತೆಂದು ನನ್ನಕ್ಕ ಹೇಳಿದ್ದಳು..

Tuesday, July 12, 2011

-ಉಸಿರು ಉಳಿಸಿ-

@ಚಿತ್ರ ದಿಗ್ವಾಸ್
--------

ಎಲ್ಲ ನವೀಕರಣದ ಹೆಸರು
ಆಡಂಬರದ ಡಾಂಬರೀಕರಣ
ಬೆಳೆವ ಜೀವಿಗಳು ಉಸಿರು
ಬಿಡಲಾಗದಂತ ಶಿಕ್ಷಾಭರಣ...!!!

ಭುವಿಯ ಗರ್ಭದಿಂದ
ಆಗಸನ ನೋಡಲಾರದಂತೆ
ಬಂಧಿಸಿಟ್ಟ ಈ ಮನುಷ್ಯ ಜೀವಕೆ
ಸಡ್ಡೆ ಹೊಡೆದು ನಿಂತಿಹೆವು ನಾವು...!!!

ಬೇರು ಭದ್ರಿಸಿ
ಹಸಿರ ರಕ್ಷಿಸಿ
ನಾನು ನನ್ನೊಡನೆ
ಎಳೆ ಕೂಸು ಬಂದಿಹೆವು ನೋಡಿ....!!!

ಭಾಸ್ಕರನು ಮೆಚ್ಚಿಹನು
ಎಳೆ ಎಳೆಯ ಬೆಳಕ ಚೆಲ್ಲಿಹನು
ಉಸಿರು ಉಳಿಯುವುದು
ದಾರಿ ಹೋಕರು ತುಳಿಯದಿದ್ದರೆ....!!!!

ಭಯವು ಮೂಡುತಿದೆ
ಬೆಂಕಿ ಚೆಂಡಿನಂತ
ವಾಹನಗಳು ಸಾಗುವುದೆಂದು
ಇರುವರೆಗು ನಮ್ಮನ್ನೇ ನಾವು ರಕ್ಷಿಸಿಕೊಳ್ಳಬೇಕಿದೆ...!!!

ಎಳೆ ಉಸಿರು ಚಿಗುರಿದೆ
ಬುಡ ಮೇಲು ಮಾಡದಿರಿ
ಹೇ ಮನುಜ ಮಿತ್ರರೇ
ನಿಮ್ಮಂತೆಹೇ ನಮ್ಮುಸಿರು...!!!

Sunday, July 3, 2011

ಗುಡಿಸಲಿನಲ್ಲೊಂದು ನಂದಾದೀಪ

ಮುಂದುವರಿದ ಕೊನೆಯ ಭಾಗ :- ದೀಪ-೩

ಪ್ರಶ್ನೆ ಪತ್ರಿಕೆ ಕಣ್ಣೆದುರಿದೆ, ಸ್ನೇಹಿತರಾಡಿದ ಮಾತು ಕಿವಿಯಲಿ ಗುನುಗುತಲಿದೆ, ಮೆದುಳು ಏಕೋ ಮಾತು ಕೇಳುತ್ತಿಲ್ಲ, ಕೈ ಕೆಲಸ ಮಾಡುತ್ತಿಲ್ಲ, ಒಮ್ಮೆ ಹೃದಯ ಮಾತ್ರ ಉತ್ತರಿಸುತ್ತೆ. "ಶಬರಿ ಇದು ಚಿಂತಿಸೋ ಸಮಯವಲ್ಲ ಹೃದಯದ ಮನಸ ಅರಿತುಕೊ, ಕೈಗೆ ಕೆಲಸಕೊಡು, ಗುನುಗುವ ಮಾತಿನ ಧನಿಗಳನ್ನ ಒಮ್ಮೆ ದೂರವಿಡು, ನಿನ್ನ ಧ್ಯೇಯದತ್ತ ಗಮನ ಕೊಡು" ಎಂದು ಹೃದಯ ಮನ ಬಿಚ್ಚಿ ಅವಳನ್ನ ತಟ್ಟಿ ಎಬ್ಬಿಸಿದೆ.

ತಟ್ ಎಂದು ಮನಸ್ಸನ್ನು ಬದಲಿಸಿದ ಶಬರಿ ಪ್ರಶ್ನೆಗಳನ್ನೆಲ್ಲಾ ಒಂದೊಂದಾಗಿ ಓದಿ ಮುಗಿಸಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದಳು. ಮನಸನ್ನು ಚಿಂತೆಗೀಡುಮಾಡದೆ ಪರೀಕ್ಷೆ ಮುಗಿಸಿದಳು. ರಜೆಯ ಮಜಾ ಪ್ರಾರಂಭವಾಯಿತು..!! ಯಾರೊಬ್ಬ ಸ್ನೇಹಿತರು ಇವಳತ್ತ ಮುಖ ಮಾಡಲಿಲ್ಲ, ಮನ ಮುದುಡಿದರೂ ಅಮ್ಮನೊಟ್ಟಿಗೆ ಕೆಲಸಕ್ಕೆ ನಿಂತಳು. ಪರೀಕ್ಷಾ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಅಮ್ಮನಿಗೂ ಗೊತ್ತಿತ್ತು ಈ ವಿಷಯ, ಅಪ್ಪ ಅಮ್ಮ ಇಬ್ಬರೂ ಕೂಡಿ ದೇವಸ್ಥಾನಕ್ಕೆ ಉದ್ದಾಂಡ ನಮಸ್ಕಾರವೂ ಮಾಡಿ ಬಂದಿದ್ದರು... ಮಗಳಲ್ಲಿ "ಮಗು ಈ ಸರಿ ಟಿವಿನೋರು ಬರ್ತಾರಾ...?" ಎಂದಷ್ಟೆ ಕೇಳಿದ್ದು....... ನೀನು ಚೆನ್ನಾಗಿ ಪರೀಕ್ಷೆಯಲ್ಲಿ ಉತ್ತರಿಸಿದ್ದೀಯಾ, ಕಳೆದಬಾರಿ ತರ ಕರ್ನಾಟಕಕ್ಕೆ ಮೊದಲನೆಯವಳಾಗುವಷ್ಟು ಚೆನ್ನಾಗಿ ಬರೆದಿದ್ದೀಯಾ ಇಲ್ಲವಾ...ಈ ತರಹದ ಪ್ರಶ್ನೆ ಕೇಳಲೇ ಇಲ್ಲ. ಏಕೆಂದರೆ ಚೆನ್ನಮ್ಮನಿಗೆ ಅಷ್ಟು ತಿಳುವಳಿಕೆ ಇಲ್ಲವೇ ಇಲ್ಲ.. ಮಗಳಿಗೆ ಅಮ್ಮನ ಮುಗ್ಧತನ ಅರ್ಥವಾಗಿತ್ತು. ಗೊತ್ತಿಲ್ಲಮ್ಮ ಬರೆಯೋದೇನೋ ಬರೆದಿದ್ದೀನಿ, ನೋಡೋಣ ಎಂದಷ್ಟೇ ಹೇಳಿದ್ದು. ಸಂಜೆ ಟಿವಿಯಲ್ಲಿ ಹೇಳ್ತಾರೆ ಯಾರು ಕರ್ನಾಟಕಕ್ಕೆ ಮೊದಲು ಎಂದು. ಶಬರಿಗೆ ಮನೆಗೆಲಸ ಮಾಡುವವರ ಮನೆಗೆ ಹೋಗಿ ಟಿವಿಯಲ್ಲಿ ನೋಡಬೇಕೆಂಬ ಆಸೆ ........ ಅಮ್ಮ ಅಪ್ಪನಿಗೂ ಹೇಳಿ ಎಲ್ಲರನ್ನು ಕರೆದುಕೊಂಡು ಸಂಜೆ ಬರುವ ವಾರ್ತೆಗೆ ಮಧ್ಯಾಹ್ನವೇ ಅವರ ಮನೆಯತ್ತ ಧಾವಿಸುತ್ತಾರೆ. ಶಾರದಮ್ಮನ ಮನೆ ಬೀಗ ಜಡಿದಿದ್ದಾರೆ. ಅಯ್ಯೋ ಎಂತಾ ಕೆಲಸ ಹಾಗೋಯ್ತು ಏನು ಮಾಡ್ಲಿ.... ಬೇಜಾರಲ್ಲೇ ಮನೆಗೆ ವಾಪಸ್ ಬಂದಾಗ ಮನೆಯತ್ತಿರ ಪತ್ರಿಕಾ ಬಳಗ ಕಾದಿತ್ತು. ಎಣಿಸಿದಂತೆ ಮಗಳು ಕರ್ನಾಟಕಕ್ಕೆ ಮೊದಲು..!! ಎಲ್ಲಾ ವಿಭಾಗಳಲ್ಲಿ ಇವಳಷ್ಟು ಹೆಚ್ಚು ಅಂಕ ಯಾರು ಗಳಿಸೇ ಇರಲಿಲ್ಲ. ಅಷ್ಟು ಉನ್ನತ ಅಂಕ ಗಳಿಸಿದ್ದವಳಿಗೆ ಪತ್ರಿಕಾ ಬಳಗ, ವಾಹಿನಿಯವರು ಎಲ್ಲರೂ ಮುಗಿಬಿದ್ದು ಅಭಿನಂದಿಸುತ್ತಲಿದ್ದಾರೆ. ಅಕ್ಕ ಪಕ್ಕದ ಬೃಹದಾಕಾರದ ಬಂಗಲೆಯಿಂದೆಲ್ಲ ನೋಡುತ್ತಲಿದ್ದಾರೆ. ಅವರುಗಳಲ್ಲೇ ಗುಸು ಗುಸು... ಏನಾಗಿದೆ ಆ ಗುಡಿಸಲಿನಲ್ಲಿ ಯಾರಾದರು ಸತ್ತಿದ್ದಾರಾ? ಏನಾಗಿರಬಹುದು.........ಅಯ್ಯೋ ಈ ಗುಡಿಸಲ ಜನ ಎಷ್ಟಿದ್ದರೇನು, ಸಂಜೆ ಹೊತ್ತಿಗೆ ಕುಡಿದು ರಾಧಾಂತ ಮಾಡೋ ಜನ ಎಂದು ಮನಸೋ ಇಚ್ಚೆ ಮಾತನಾಡಿಕೊಳ್ಳುತ್ತಲಿದ್ದಾರೆ..........ಆದರೆ ಆ ಜನ ಬಾಯಿ ಮುಚ್ಚಿಸಿದ್ದು ಬೆಳಗಿನ ವಾರ್ತಾ ಪ್ರಸಾರ ಮತ್ತು ಮುಂಜಾನೆಯ ಪತ್ರಿಕೆ ಮನೆ ಬಾಗಿಲು ತಟ್ಟಿದಾಗ ಆ ಶ್ರೀಮಂತ ಜನರಿಗೆ ಈ ಪುಟ್ಟ ಮನೆಯಲ್ಲಿ ಕೆಸರಿನ ಕಮಲವಿದೆ ಎಂದು ಗೊತ್ತಾಗಿದ್ದೇ ಆಗ......ಈ ಹಿಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ಹೆಚ್ಚು ಹೆಸರಾಗಿರಲಿಲ್ಲ....... ಪಿ.ಯು.ಸಿ ಹೇಗೆ ಜೀವನದ ಮಹತ್ತರ ಹೆಜ್ಜೆಯೋ ಹಾಗೇ ಪ್ರಪಂಚದ ಕಣ್ಣಿಗೆ ಬೀಳಲೂ ಅಷ್ಟೇ ಮುಖ್ಯವಾಯ್ತು. ಇಲ್ಲೂ ಸಹ ಶಬರಿ ತನ್ನ ಅಪ್ಪ ಅಮ್ಮನ ಆಸೆ, ಶಾರದಮ್ಮನವರ ಒಲವಿನ ಕಾಣಿಕೆ ಎಲ್ಲವೂ ಕೆಲಸ ಮಾಡಿತ್ತು. ಮರುದಿನ ಟಿವಿಯಲ್ಲಿ ಕಂಡ ಶಾಲೆಯ ಸ್ನೇಹಿತರೂ ಎಲ್ಲರೂ ಗುಂಪುಗುಂಪಾಗಿ ಆ ಕೆಸರ ಗುಡಿಸಲಿಗೆ ದುಂಬಾಲಿಟ್ಟರು. ಅಂದು ಅಸಹ್ಯದ ದಾರಿ ಇಂದು ನಗೆಯ ಹಾದಿಯಾಗಿತ್ತು. ಜನ ಎಲ್ಲಾ ಹಾಗೆ ಗೆದ್ದೆತ್ತಿನ ಬಾಲ ಹಿಡಿಯುವುದಂತೂ ಸತ್ಯ..!!!

ಮರುದಿನ ಮಧ್ಯಾಹ್ನದವರೆಗೆ ಶಾಲೆಯಲ್ಲಿ ಅಂಕಗಳನ್ನು ಬಿತ್ತರಿಸಲು ಸಮಯವಿತ್ತು..... ಆದರೆ ಪರೀಕ್ಷಾ ಮಂಡಳಿಯಿಂದಷ್ಟೇ ತಿಳಿದ ವಾಹಿನಿಯವರಾಗಲೇ ಬಿತ್ತರಿಸಿಬಿಟ್ಟಿದ್ದರು. ಶಾಲೆಯ ಅಂಗಳದಲ್ಲಿ ಖುಷಿಯ ಹೊಳೆ ಹರಿದಿತ್ತು. ಶಬರಿ ಶಾಲೆಯೊಳಗೆ ಬರುತ್ತಲಿದ್ದಂತೆ ಭವ್ಯ ಸ್ವಾಗತ ಗುರುಗಳೆಲ್ಲರಿಗೂ ಸಂತಸದ ಕ್ಷಣ. ಈ ಪುಟ್ಟ ಕೂಸಿನ ಕಂಗಳಲ್ಲಿ ಆನಂದದ ಕಣ್ಣೀರು ಹನಿ ಹನಿಯಾಗಿ ಕಟ್ಟೆಯೊಡದಿತ್ತು. ಅಮ್ಮ ಅಪ್ಪನ ಆಸೆ ಮೊಳಕೆ ಚೆನ್ನಾಗೆ ಹೊಡೆತಿತ್ತು ಇನ್ನು ಅರಳುವುದೊಂದು ಬಾಕಿ. ಗುರು ಹಿರಿಯರ ಆಶೀರ್ವಾದ ಪಡೆದು ಮನೆಗೆ ಬಂದವಳು ಶಾರದಮ್ಮನ ಆಶೀರ್ವಾದ ಪಡೆಯಲು ನಡೆದಳು. ಅತ್ತ ಶಾರದಮ್ಮನು ಕರಗಿ ನೀರಾದರು. ಈ ಕೂಸಿಗೆ ಶುಭಹಾರೈಸಿ ಸಿಹಿ ಅಡಿಗೆಯ ಭೋಜನವನ್ನೇ ಮಾಡಿಟ್ಟರು. ಎಲ್ಲರೂ ಸಂತಸದಿ ಮಾತನಾಡುತ್ತಲಿದ್ದಂತೆ ಮತ್ತೊಂದು ಸಂತಸದ ಸಂಗತಿ ಟಿವಿಯ ವಾರ್ತಾ ಪ್ರಸಾರದಲ್ಲಿ ಕೇಳಿಬಂತು..... ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶಬರಿ ಎಂಬ ಹೆಣ್ಣು ಮಗಳಿಗೆ ಕರ್ನಾಟಕ ಘನ ಸರ್ಕಾರ ಉಚಿತವಾಗಿ ಆಕೆ ಎಲ್ಲಿಯವರೆಗೂ ಓದುವ ಇಚ್ಚೆ ಇದೆಯೋ ಅಲ್ಲಿಯವರೆಗೆ ಸರ್ಕಾರ ಖರ್ಚನ್ನು ಭರಿಸುವುದೆಂದು ಘೋಷಿಸಿದರು...!!! ಇದಕ್ಕಿಂತ ಸಂತಸ ಯಾರಿಗೆ ಬೇಕು ಅಲ್ಲೇ ಇದ್ದ ಶಾರದಮ್ಮನಿಗೊಮ್ಮೆಲೆ ಕಾಲು ಮುಗಿದುಬಿಟ್ಟರು ಅಮ್ಮ, ಅಪ್ಪ, ಮಗಳು ಮೂವರು, ಶಾರದಮ್ಮನಿಂದಲೇ ಇಷ್ಟೆಲ್ಲಾ ಸಾಧ್ಯವಾಯಿತೆಂಬುದವರ ನಂಬಿಕೆ (ಬಡವರಿಗೆ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ಮಾಡಿದರೆ ಸಾಕು ಪೂಜ್ಯತೆಯ ಮನೋಭಾವ ಸಹಾಯ ಮಾಡಿದವರ ಮೇಲೆ ಹುಟ್ಟುತ್ತದೆ). ಅದೇ ಸಂತಸದಿ ಗುಡಿಸಲ್ಲಿ ಹಬ್ಬದ ವಾತಾವರಣವೇ ಕಂಗೊಳಿಸುತ್ತಿತ್ತು......

ಶಬರಿಗೆ ಪಿ.ಯು.ಸಿ ಮುಗಿಯಿತು ಜವಾಬ್ದಾರಿಯೂ ಹೆಚ್ಚಿತು. ಓದುವುದರಲ್ಲಿ ಹೇಗೆ ಮುಂದೋ ರೂಪಿನಲ್ಲೂ ಅಷ್ಟೆ ಮುಂದು. ಕೆಸರಿನ ಕಮಲದಂತೆ ಕೋಮಲವಾಗಿದ್ದಳು. ಮುದ್ದು ಮನಸಿಗೆ ಮುಖದ ರೂಪ, ಹರೆಯದ ವಯಸ್ಸಿಗೆ ಹೈದರ ಕಣ್ಣು ಕುಕ್ಕುವಂತಾ ಸೊಬಗಿನವಳು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಈ ಸೌಂದರ್ಯದ ಹೆಣ್ಣು, ಸರಸ್ವತಿಯ ಕಣ್ಣು ಕಾಲೇಜಿನ ಎಲ್ಲರ ಮಾತಲ್ಲಿ ಉಳಿದುಬಿಟ್ಟಳು. ಇಲ್ಲೂ ಸಹ ವಿದ್ಯೆಯಲ್ಲಿ ಮುಂದು, ಹಾಗೆಂದು ಆಟಪಾಠಕ್ಕೆ ಎಂದೂ ಕಡಿಮೆ ಮಾಡಲಿಲ್ಲ. ತಾನು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ತುಡಿತ ಎಂದೂ ಯಾರಲ್ಲೂ ಹೇಳದವಳು, ಅಂದು ಕಾಲೇಜಿನ ಪ್ರಾಂಶುಪಾಲರಲ್ಲಿ ಹೇಳಿಕೊಂಡಳು ಕಾರಣವಿಷ್ಟೆ..... ಯಾವ ಯಾವ ಹಂತದಲ್ಲಿ ಏನು ಮಾಡಬೇಕು ಹೇಗೆ ನಾ ಅಂತಹ ಅಧಿಕಾರಿಯಾಗಬೇಕು ಎಂಬುದರ ವಿಷಯ ತಿಳಿಸಲು ಅಪ್ಪ ಅಮ್ಮರೇನು ವಿದ್ಯಾವಂತರಲ್ಲ..... ಗುರುಗಳೇ ಸೂಕ್ತವೆಂದು ಅವರ ಸಲಹೆ ಮೇರೆಗೆ ವಿದ್ಯಾಭ್ಯಾಸ ಮುಂದುವರಿಸಿದಳು.

ಸರಸ್ವತಿ ಒಲಿದ ಮೇಲೆ ಯಾವ ವಿದ್ಯೆಯಾದರೇನು ಅದು ನಿರ್ರಗಳವಾಗಿ ಎಲುಬಿಲ್ಲದ ಎಳಸಿನ ಮೇಲೆ ಅಚ್ಚು ಹೊತ್ತಿದಾಗೆ ನಾಲಿಗೆಯ ಅಂಚಿನಲ್ಲಿ ಹೊರಬರುತ್ತದೆ ಅಂತೆಯೇ ಮೆದುಳಲ್ಲಿ ಎಲ್ಲ ವಿಷಯಗಳು ಶೇಖರವಾಗಿ ಬಿಡುತ್ತದೆ.......... ಅದು ಶಬರಿಯ ವಿಷಯದಲ್ಲಿ ನಿಜವೇ ಹಾಗಿಬಿಟ್ಟಿತ್ತು.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವಾಗ ಅಮ್ಮ ಒಬ್ಬರ ಮನೆಯಲ್ಲಿ ಪೆನ್ನು, ಪೆನ್ಸಿಲ್ ಕದ್ದು ಆ ಮನೆಯಿಂದಲೇ ಹೊರ ಬರುವಂತಾಗಿದ್ದ ದಿನಗಳು ನೆನಪಿಸಿತು ಕಾರಣ ಆ ಮನೆಯೊಡತಿಯ ಮಗ ಇದೇ ಕಾಲೇಜಿನಲ್ಲಿ ಓದುತ್ತಲಿದ್ದನು.... ಹೇಳುವಂತಾ ವಿದ್ಯಾವಂತನಲ್ಲ.... ಮನೆಯಲ್ಲಿರುವ ದುಡ್ಡು ಪುಂಡಾಟಿಕೆಗೆ ಬಳಸುವಲ್ಲಿ ನಿಸ್ಸೀಮನಾಗಿದ್ದ...... ಹಾದಿ ಬೀದಿಯ ಹೆಣ್ಣುಗಳತ್ತ ಕಣ್ಣು ಹಾಕುವ ಚಾಳಿಯಲ್ಲಿದ್ದ....... ಈ ಸುಂದರ ಮೊಗದ ಶಬರಿಯ ಕಂಡು ಹಿಂದೆ ಬಿದ್ದವನು ಇವಳನ್ನೇ ವರಿಸಬೇಕೆಂಬ ಹಠ..... ಆ ಹಠ ಕೊನೆಗೆ ನಿರಾಸೆಯಂತು ಖಂಡಿತಾ ತಂದಿತ್ತು........... ಶಬರಿಗೆ ಈಗ ಯಾವ ಪ್ರೇಮ ಪ್ರಣಯದಲ್ಲಿ ಬೀಳುವಾಸೆ ಇರಲಿಲ್ಲ........ ನಿರಾಕರಿಸಿಯೂ ಬಿಟ್ಟಿದ್ದಳು. ಹಾಗೆ ಈ ಹುಡುಗು ಬುದ್ಧಿಗೆ ಅಮ್ಮನಿಂದಲೂ ಕಡಿವಾಣ ಬಂದಿತ್ತು......... ಆ ಹುಡುಗಿ ನಿನಗೆ ಗೊತ್ತಿಲ್ಲವಾ ಆ ಮನೆಗೆಲಸದವಳು.... ನಮ್ಮ ಅಂತಸ್ಥಿಗೂ ಅವಳಿಗೂ ಅಜಗಜಾಂತರ ನೀನು ಇಲ್ಲಿಗೆ ಕೊನೆ ಮಾಡಿದರೆ ಒಳ್ಳೆಯದು ಎಂದು ಬಲವಂತವೋ, ಒತ್ತಾಯ ಪೂರ್ವಕವೋ ಒಟ್ಟಲ್ಲಿ ಮಗನನ್ನು ಅವಳಿಂದ ತಪ್ಪಿಸಲು ಮಗನನ್ನು ಕಾಲೇಜು ಬಿಡಿಸಿ ಬೇರೆ ಕಾಲೇಜಿಗೆ ಕಳಿಸಿ ಬಿಟ್ಟರು.

ಯಾರು ಏನಾಗಲಿ, ಊರೂ ಹೋಗಲಿ, ಕಾಡು ಬರಲಿ ತನ್ನ ನಿಲುವು ಮಾತ್ರ ಬದಲಿಸದ ಶಬರಿ. ತನ್ನ ಕನಸಿನ ಶಿಖರ ಕೆಲವೇ ಮೆಟ್ಟಿಲಿರುವುದನ್ನು ಖಾತ್ರಿ ಮಾಡಿಕೊಂಡು ನಿಧಾನವಾಗಿ ಹೆಜ್ಜೆಯಿಡಲು ಪ್ರಾರಂಭಿಸುತ್ತಾಳೆ. ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವ ಆಸೆ ಇದ್ದರಿಂದ ತನ್ನ ಡಿಗ್ರಿಯಲ್ಲಿ ಒಳ್ಳೆ ಅಂಕ ಗಳಿಸಿ, ಮಾಸ್ಟರ್ ಡಿಗ್ರಿಯನ್ನೂ ಮುಗಿಸಿ ಆನಂತರವೇ ಐ. ಎ.ಎಸ್ ಯತ್ತ ಮುಖ ಮಾಡಿದ್ದು. ಐ.ಎ.ಎಸ್ ಪರೀಕ್ಷೆ ಬರೆಯುವವರೆಗೆ ದಾರಿದೀಪವಾಗಿ ನಿಂತಿದ್ದು ಕಾಲೇಜಿನಲ್ಲಿದ್ದ ಪ್ರಾಂಶುಪಾಲರು. ಪ್ರತಿ ಹೆಜ್ಜೆಗೂ ಅವಳ ನಿಲುವಿಗೆ ಬೆನ್ನೆಲುಬಾಗಿ ಸಾಧನೆಯ ಹಾದಿಗೆ ಬೆಳಕಾದರು. ಕೊನೆಗೂ ಐ.ಎ.ಎಸ್ ಪರೀಕ್ಷೆ ಜೊತೆಗೆ ಅಧಿಕಾರಿಗಿರಿಯೂ ಅವಳ ಗುಡಿಸಲ ಬಾಗಿಲಿನವರೆಗೂ ಹುಡುಕಿಕೊಂಡು ಬಂದಿತು. ಅಧಿಕಾರಿ ಪಟ್ಟ ಬಂದದ್ದೆ, ಓಹ್..!!! ಹೇಳಬೇಕೆ ಅಮ್ಮನಿಗೆ ಆಕಾಶ ಎರಡೇ ಗೇಣು ಎಂಬಂತೆ ಚಿಕ್ಕ ಮಕ್ಕಳಂತೆ ಚೆನ್ನಯ್ಯನ ಕೈ ಹಿಡಿದು ಎಳೆದಾಡಿ ಮಗಳನ್ನು ಬಾಚಿ ತಬ್ಬಿದಳು. ತುತ್ತು ಅನ್ನಕ್ಕೂ ಕಷ್ಟ ಪಡುವವರಿಗೆ ಅರಮನೆಯ ವೈಭೋಗ ಅದಾಗೆ ಹುಡುಕಿಕೊಂಡು ಬಂದಾಗ ಆಗುವ ಸಂತಸ ಈ ಬಡ ಕುಟುಂಬದಲ್ಲಿ ಕಾಣುತ್ತಿತ್ತು. ಸರ್ಕಾರಿ ಹಣದಲ್ಲಿ ಓದಿದವಳಿಗೆ ಸರ್ಕಾರದ ಋಣ ತೀರಿಸಲು ಸರ್ಕಾರಿ ಕೆಲಸ ದೇವರ ಕೆಲಸವೆಂದೇ ಸ್ವೀಕರಿಸಿದಳು.

ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿತ್ತು. ಗುಡಿಸಲಿಂದ ದೊಡ್ಡ ಮನೆಗೆ ಹೋಗಲೇ ಬೇಕಿತ್ತು. ಅಪ್ಪ ಅಮ್ಮನಿಗೂ ಸಂತಸ, ಆದರೆ ಈ ಪುಟ್ಟ ಗುಡಿಸಲು ಅವಳಿಗೆ ಏನೆಲ್ಲಾ ಕೊಟ್ಟಿತ್ತು ತನ್ನ ಜೀವನವನ್ನೇ ಇಷ್ಟು ಕಾಲ ಕಳೆದೆ ಇಂದು ಈ ಜೀವನದ ಗುಡಿಸಲು ಬಿಟ್ಟು ಹೋಗಲು ಮನಸಾಗದಿದ್ದರೂ ತನ್ನ ಕೆಲಸಕ್ಕೆ ತಕ್ಕಂತಿರಲು ತೆರಳಬೇಕಾಯ್ತು. ಸರ್ಕಾರ ಇವಳಿಗೆಂದೆ ಬಣ್ಣದ ಬಂಗಾರದ ಮನೆಯನ್ನು ಸಜ್ಜುಗೊಳಿಸಿತ್ತು, ಕಾರಿನಲ್ಲಿ ಕುಳಿತು ಹೋದ ದಾರಿ ಅದು ಪೆನ್ನು ಕದ್ದು ಮನೆಯೊಡತಿ ಆಚೆಕಳಿಸಿದ್ದ ಮನೆಯೆದುರೇ ಇವರ ವಾಸವಾಗಿತ್ತು. ನಮ್ಮ ಕಾಲ ಚೆನ್ನಾಗಿದೆಯೆಂದು ನಮಗಿಂತ ಕೀಳಾದವರ ಮೇಲೆ ದರ್ಪ ಸಾಧಿಸಬಾರದೆಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ಎದುರುಬದುರು ಮನೆ ಇವರನ್ನು ಕಂಡಾಗ ಆ ಮನೆಯೊಡತಿ ಶಾಂತಮ್ಮನಿಗೂ ಕಸಿವಿಸಿ. ಆದರೆ ಶಬರಿಯವರ ಮನೆ ಮನದಲ್ಲಿ ಯಾವ ಕಸಿವಿಸಿ ಇರಲಿಲ್ಲ.

ಇತ್ತ ಶಾರದೆ ಮತ್ತೊಂದು ಮನೆಯೊಡತಿ ಶಬರಿಗೆ ಮನೆ ಎಲ್ಲವೂ ವ್ಯವಸ್ಥೆಯಾದ ಮೇಲೆ ಚೆನ್ನಮ್ಮನನ್ನು ಕೆಲಸಕ್ಕೆ ಬರಬೇಡವೆಂದಾಗ ಬೇಸರಗೊಂಡ ಚೆನ್ನಮ್ಮ "ಏಕೆ!!?? ನಾನು ನಿಮ್ಮ ಮನೆಕೆಲಸ ಮಾಡಬಾರದು" ಎಂದ ಕೂಡಲೆ, ಒಂದು ಅಮೋಘ ಉತ್ತರವನ್ನೇ ಕೊಡುತ್ತಾರೆ. ನೀನು ಈಗ ಮಗಳಿಗೆ ಸೇವೆ ಮಾಡಿ ಮಗಳನ್ನು ನೋಡಿಕೊಂಡಿರು. ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಮಾತು ಹೇಳಿದರಾದರೂ ಕೇಳುವುದಿಲ್ಲ. ನೀವು ಅಂದಿನಿಂದ ನಮಗೆ ಆಸರೆ. ನನ್ನ ಮಗಳು ಶ್ರೀಮಂತೆಯಾಗುತ್ತಲಿದ್ದರೇನು..?? ಆ ವಿದ್ಯೆಯ ಸಿರಿ ನಿಮ್ಮ ವರದಾನ ದಯವಿಟ್ಟು, ನಾನು ಬದುಕಿರುವವರೆಗೂ ನಿಮ್ಮ ಮನೆಗೆಲಸ ಮಾಡುತ್ತೇನೆಂದು ಬೇಡುತ್ತಾಳೆ........ ಶಬರಿಗೂ ಈ ವಿಷಯ ತಿಳಿದು ಅಮ್ಮ ನೀನು ಬೇರೆಲ್ಲ ಕಡೆ ಕೆಲಸ ಮಾಡುವುದನ್ನು ಬಿಟ್ಟು ಬಿಡು. ಶಾರದಮ್ಮನವರ ಮನೆಯಲ್ಲಿ ನಿನ್ನ ಕೈಲಾದಷ್ಟು ಕೆಲಸ ಮಾಡು ಎಂದು ಹೇಳುತ್ತಾಳೆ ಚೆನ್ನಮ್ಮನಿಗೂ ಸರಿ ಎನಿಸುತ್ತೆ. ನಾನು ಆಗಾಗ ಬಿಡುವಿರುವಾಗ ನಿನಗೂ ಸಹಾಯ ಮಾಡಲು ಶಾರದಮ್ಮನವರ ಮನೆಯಲ್ಲಿ ಕೆಲಸಕ್ಕೆ ಬರುತ್ತೇನೆಂದ ಮಾತು ಮಾತ್ರ ಶಾರದಮ್ಮನ ಮನಸ್ಸು ಮರುಳಾಗುವಂತೆ ಮಾಡಿಬಿಡುತ್ತೆ. ತಕ್ಷಣ ಈ ವಿಷಯ ತಿಳಿದ ಶಾರದಮ್ಮ ಗಂಡ ಮಕ್ಕಳೊಂದಿಗೆ ಮಾರುಕಟ್ಟೆಗೆ ಹೋಗಿ ತನ್ನಿಷ್ಟವಾದ ವಸ್ತುಗಳನ್ನೆಲ್ಲಾ ತೆಗೆದುಕೊಂಡು. ಚೆನ್ನಮ್ಮನ ಮನೆಯತ್ತ ದಾವಿಸುತ್ತಾರೆ. ಕುಟುಂಬ ಸಮೇತರಾಗಿ ಬಂದವರಿಗೆ ಶಬರಿಯ ಕುಟುಂಬ ಸ್ವಾಗತಿಸಿ ಉಪಚಾರ ಮಾಡುತ್ತಾರೆ.

ಶಾರದಮ್ಮ ಶಬರಿಯಲ್ಲಿ ಬಂದು ನೀನು ಇನ್ನು ಆ ಗುಡಿಸಲು ಮರೆತಿಲ್ಲವಂತೆ...!!!!!! ದಿನಾ ಸಂಜೆ ದೀಪ ಹಚ್ಚಿ ಬರುವೆಯಂತೆ ಎಂದಾಗ ಚೆನ್ನಮ್ಮ ಆಶ್ಚರ್ಯದಿಂದ ನೋಡುತ್ತಾಳೆ. ಯಾರಿಗೂ ಈ ವಿಷಯ ತಿಳಿದಿರಲಿಲ್ಲ... ಗುಡಿಸಲನ್ನು ಗುಡಿಯಾಗಿ ಪೂಜಿಸುವ ಈ ಶಬರಿಯ ದೈವ ಭಕ್ತಿ.......... ಅಮ್ಮ ಅಪ್ಪನ ಕಂಗಳು ಮಾತ್ರ ಆ ವಿಷಯ ಕೇಳಿ ಜ್ಯೋತಿ ಬೆಳಗಿದಂತೆ ಬೆಳಗುತ್ತಿತ್ತು....

ಇತ್ತ ಬಂದವರತ್ತ ಗಮನಿಸುತ್ತ... ಚೆನ್ನಮ್ಮ, ನೀವು ಬಂದದ್ದು ನಮಗೆ ಖುಷಿಯಾಯಿತು. ಶಾರದಮ್ಮ ನೀವು ನಮ್ಮೊಂದಿಗೆ ಊಟ ಮಾಡಿಯೇ ಹೋಗಬೇಕು, ಶಬರಿಯೇ ಇಂದು ಅಡಿಗೆ ಮಾಡುತ್ತಾಳಂತೆ ಇದ್ದು ಬಿಡಿ ಎಂದು ಒತ್ತಾಯ ಹೇರುತ್ತಾರೆ.......... ಊಟವೇನು ನಾನು ಇಂದು ಇಲ್ಲೇ ಇರುತ್ತೇನೆ ನನ್ನಾಸೆ ಒಂದಿದೆ ಅದನ್ನು ಪೂರೈಸಬೇಕು ಇದರಲ್ಲಿ ಒತ್ತಡವೇನಿಲ್ಲ....... ನಿಮ್ಮ ಅಭಿಪ್ರಾಯ ತಿಳಿಸಬೇಕು ಎಂದಾಗ ಚೆನ್ನಮ್ಮ ಗಂಡನ ಮುಖ ನೋಡುತ್ತಾಳೆ. ಅತ್ತ ಶಬರಿಯೂ ಅವಕ್ಕಾಗಿಬಿಡುತ್ತಾಳೆ. ಏನೆಂಬ ಕುತೂಹಲ!!! ಮೆದು ದನಿಯಲ್ಲೇ ಶಾರದಮ್ಮ ನನ್ನ ಮನೆಯವರೆಲ್ಲ ಒಪ್ಪಿ ಈ ನಿರ್ಧಾರಕ್ಕೆ ಬಂದಿದ್ದೇವೆ ಚೆನ್ನಮ್ಮ ನನ್ನ ಮನೆ ಕೆಲಸ ಬಿಡೋಲ್ಲವಂತೆ ಅದಕ್ಕೆ ನಾನು ಒಂದು ಮಾತನ್ನು ಕೇಳಬೇಕು....ಹಾ!!! ಹೇಳಿ ಶಾರದಮ್ಮ ನೀವು ಏನು ಹೇಳಿದರೂ ಕೇಳುವೆ ಎಂದಾಗ ಸರಿ............ ನೀನು ಇನ್ನು ಮೇಲೆ ನಮ್ಮ ಮನೆ ಕೆಲಸ ಮಾಡುವುದು ಬೇಡ!!!!!!!!!! ಅಯ್ಯೋ ಅದು ಆಗದ ಕೆಲಸ ನಾವೆಲ್ಲ ಒಪ್ಪಿಕೊಂಡೆ ನಿಮ್ಮ ಮನೆ ಕೆಲಸಕ್ಕೆ ಬರ್ತಾ ಇರೋದು, ಅದು ಬದಲಾಗುವುದಿಲ್ಲ ಎಂದಾಗ ಇಲ್ಲ ಚೆನ್ನಮ್ಮ, ನಿನ್ನ ಬದಲು ನಿನ್ನ ಮಗಳು ನನ್ನ ಮನೆ ಕೆಲಸಕ್ಕೆ ಸಮಯವಿದ್ದಾಗ ನಿನಗೆ ಸಹಾಯ ಮಾಡ್ತೀನಿ ಎಂದಳಲ್ಲಾ ಅದಕ್ಕೆ... ಅದಕ್ಕೆ.... ಶಬರಿಯೇ ನಮ್ಮ ಮನೆಯಲ್ಲಿ ಪೂರ್ಣ ಕೆಲಸ ಮಾಡಿಕೊಂಡಿರಲಿ ಎಂದು ಒತ್ತಾಯವಾಗಿ ಹೇಳಿದಾಗ ಚೆನ್ನಮ್ಮನಿಗೇಕೋ ಕಸಿವಿಸಿ, ಇದೇನು ಅವಳು ಅಂತಾ ದೊಡ್ಡ ಹುದ್ದೆ ವಿದ್ಯಾವಂತೆ ಇಷ್ಟೆಲ್ಲಾ ಇದ್ದು ಹೀಗೆ ಕೇಳ್ತಾರಲ್ಲ ಎಂದು ತಟ್ಟನೆ ಶಬರಿ ಕ್ಷಮಿಸಿ ಬೇಸರವಾಗಬೇಡಿ ನನಗೆ ಗೊತ್ತು ಅಮ್ಮನಿಗೆ ವಯ್ಯಸ್ಸಾಗಿದೆ ಶ್ರಮ ಬೇಡವೆಂದು ನಿಮ್ಮ ಮಾತು, ನನಗೆ ಕಚೇರಿ ಕೆಲಸ ಜಾಸ್ತಿ, ಅದು ಮುಗಿಸಿ ಬರುವುದೇ ತಡವಾಗುತ್ತೆ ಬೇಕಾದರೆ ನನ್ನ ತಂಗಿಯನ್ನು ಕಳಿಸುವೆ ನಾ ಬಿಡುವಿರುವಾಗ ಬರುವೆ ಎಂದು ಕೇಳಿಕೊಳ್ಳುತ್ತಾಳೆ ಶಾರದೆಯ ಅಂದಿನ ಸಹಾಯಕ್ಕೆ ಇಂದು ಈ ಕೃತಜ್ಞತಾ ಭಾವ!!!!!!!!!!

ಒಮ್ಮೆ ಎದ್ದು ನಿಂತ ಶಾರದೆ ಕ್ಷಮಿಸು ಶಬರಿ, ನೀನು ನನ್ನ ಮನೆಕೆಲಸದವಳಂತೆ ಬೇಡ ನನಗೆ ನೀನು ಮನೆಮಗಳಂತೆ ಸೊಸೆಯಾಗಿ ಬರಬೇಕು........!!!!!!!!!!! ಎಂದಿದ್ದೇ ಎಲ್ಲರು ದಿಗ್ಭ್ರಾಂತರಾಗುತ್ತಾರೆ. ಇದು ಸಹಜ, ಶಾರದಮ್ಮ ಅದ್ಧೂರಿ ಶ್ರೀಮಂತೆ, ಇವರ ಸ್ಥಾನವೇ ಬೇರೆ, ಅವರೆಲ್ಲಿ ನಾವೆಲ್ಲಿ ಎಂಬ ಭಾವನೆ. ಆದರೆ ಶ್ರೀಮಂತ ಮನಸಿನಲ್ಲಿ ತೀರ್ಮಾನ ಮಾಡಿದ ಶಾರದಮ್ಮನ ಮಾತಿಗೆ ಚೆನ್ನಮ್ಮ, ಚೆನ್ನಯ್ಯ ಇಬ್ಬರೂ ಒಪ್ಪುತ್ತಾರೆ.........ಆದರೆ ಶಬರಿ ಒಪ್ಪುವುದಿಲ್ಲ........ನನ್ನನ್ನು ನೀವು ಋಣಕ್ಕೆ ಸಿಕ್ಕಿಸುತ್ತಿದ್ದೀರಾ... ಅದೂ ಅಲ್ಲದೆ ನಾನು ಮದುವೆಯಾದರೆ ನನ್ನ ಮನೆ ನೆಡೆಸುವುದು ಅವರಿಗೆ ಕಷ್ಟ. ಅಪ್ಪ ಅಮ್ಮ ಸುಖವಾಗಿರಬೇಕು, ತಂಗಿ ತಮ್ಮನ ವಿದ್ಯಾಭ್ಯಾಸಕ್ಕೆ ಕುಂದು ಬರುವುದೆಂದಾಗ ಶಾರದಮ್ಮ ಇಲ್ಲ ಶಬರಿ ನಾನು ಯಾವ ಋಣಕ್ಕೂ ತಳ್ಳುತ್ತಿಲ್ಲ ನಿನ್ನಂತ ಮಗಳು ನನಗಿಲ್ಲ ಸೊಸೆಯೇ ಮಗಳೆಂಬುದಾಸೆ, ಇನ್ನು ನಿನ್ನ ಕುಟುಂಬಕ್ಕೆ ನಿನ್ನ ದುಡಿಮೆ ಮೀಸಲಿಡು ನಮ್ಮತ್ತ ಸ್ವಲ್ಪವೂ ಬಾರದಿರಲಿ, ಅವರ ಆಗುಹೋಗುಗಳೆಲ್ಲ ನಿನ್ನಿಂದಲೇ ಸಾಗಲಿ......... ಎಂದೇಳಿ ಮಾರುಕಟ್ಟೆ ಇಂದ ಹೊತ್ತು ತಂದಿದ್ದ ರೇಷ್ಮೇ ಸೀರೆ ಒಡವೆ, ಹಣ್ಣು ಹೂ ಎಲ್ಲವನ್ನು ಬ್ಯಾಗಿನಿಂದ ತೆಗೆದು ಆ ಪುಟ್ಟ ಕಂಗಳ ಮುಂದಿಟ್ಟು ಇದು ನನ್ನ ಆಸೆ, ಪೂರೈಸು ಎಂದು ಕರಮುಗಿದು ಕೇಳಿಕೊಳ್ಳುತ್ತಾಳೆ. ಅಪ್ಪ ಅಮ್ಮ ಮಗಳನ್ನು ಒಪ್ಪಿಸಿ.....ಕೊನೆಗೆ ಆ ಶ್ರೀಮಂತ ಮನೆಗೆ ಗುಡಿಸಿಲಿನ ನಂದಾದೀಪ ಬೆಳಕಾಗುವಂತೆ ಮಾಡುತ್ತಾರೆ.

Thursday, June 23, 2011

ಗುಡಿಸಲಿನಲ್ಲೊಂದು ನಂದಾದೀಪ


ದೀಪ-೨
ಮುಂದುವರಿದ ಭಾಗ.....

ಬೇಸರಗೊಂಡ ಚೆನ್ನಮ್ಮಾ ಅಯ್ಯೋ.!!! ನಾನು ಯಾವತ್ತೂ ತಗೆದುಕೊಳ್ಳದವಳು ಪಾಪಿ... ಯಾಕೆ ಆ ಪೆನ್ನು ತಗೊಂಡೆ, ನನ್ಗೆ ಏನು ಹಿಡಿದಿತ್ತೋ...ಭೂತ ಛೇ...ಎಂತಾ ಎಡವಟ್ಟು ಮಾಡಿಕೊಂಡುಬಿಟ್ಟೆ. ಈಗ ಕೈಲಿದ್ದ ಕೆಲಸನೂ ಹೋಯ್ತು ಇನ್ನು ಆಕೆ ನನ್ನ ಕೆಲಸಕ್ಕೆ ಸೇರಿಸೋದೆ ಇಲ್ಲ ಏನು ಮಾಡುವುದೋ ದೇವರೆ..!!?? ಎಂದು ಮನಸಲ್ಲೇ ಬಡಬಡಾಯಿಸಿಕೊಂಡು ಕಣ್ಣಲ್ಲಿ ಮಳೆಹನಿ ಸುರಿಸುಕೊಂಡು ಹೋಗ್ತಾ ಇರುವಾಗ ನೆನಪಾಗಿದ್ದು...... ಮತ್ತೊಂದು ಮನೆಯಲ್ಲಿ ಕೆಲಸ ಮಾಡುವ ಮನೆಯೊಡತಿ....... ದಡಬಡನೆ ಹೋಗಿ ಆಕೆಯತ್ತಿರ ಇರುವ ವಿಷಯವನ್ನೇಲ್ಲಾ ಹೇಳಿ ಅಮ್ಮಾವರ್ರೆ ..!! ನಾನು ತಪ್ಪು ಮಾಡಿಬಿಟ್ಟಿದ್ದೀನಿ. ಏನೋ ಮಗ ಪರೀಕ್ಷೆ ಚೆನ್ನಾಕಿ ಬರಿಲಿ ಅಂತಾ ಹಂಗೆ ಮಾಡಿದೆ, ಆಮೇಲೆ ಆ ಯಜಮಾನಮ್ಮ ನಿಮ್ಗೆ ತಿಳಿಸಿದ್ರೆ ನನ್ನ ಕೆಲಸದಿಂದ ತೆಗೆಯೊಲ್ಲಾ ತಾನೇ...??? ಎಂದು ಒಂದೇ ಉಸಿರಿಗೆ ಕೇಳಿ ಗಳಗಳನೇ ಅತ್ತುಸುರಿದು ಕೇಳುತ್ತಿದ್ದಾಗ, ಈ ಮನೆಯೊಡತಿ ಬಲು ತಾಳ್ಮೆಯಿಂದ ತೊಂದರೆ ಇಲ್ಲ ನಿನ್ನ ಮಗಳ ಪರೀಕ್ಷೆ ತಾನೇ.....ಬಾ ನಾನು ಏನು ಬೇಕೋ ಕೊಡ್ತೀನಿ ಎಂದೇಳಿ ಅವರ ಮನೆಯಲ್ಲಿದ್ದ ಪರೀಕ್ಷಾ ಒತ್ತಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ಜಾಮಿಟ್ರಿ ಎಲ್ಲವನ್ನು ಒಂದು ಬ್ಯಾಗಿಗೆ ಹಾಕಿ ಕೊಟ್ಟು ಕಳಿಸುತ್ತಾಳೆ. ಸಂತಸದಿ ಹೊರಟ ಚೆನ್ನಮ್ಮ....ಅಯ್ಯೋ...!!! ಸಾಹುಕಾರರು ಎಲ್ಲ ಒಂದೇ ತರ ಇರ್ತಾರೆ ಅಂತ ತಿಳ್ಕಂಡಿದ್ದೇ ಹಂಗೇನಿಲ್ಲಾ...ಪಾಪ ಒಳ್ಳೆ ಜನನೂ ಅವ್ರೆ......ಎಂದು ಸಂತಸದಿ ಅಲ್ಲೂ ಆನಂದಭಾಷ್ಪದ ಹನಿ ಸುರಿಸುತ್ತ ಮನೆಕಡೆ ಹೊರಟಳು.

ಮನೆಗೆ ಒಂದೇ ಉಸಿರಿಗೆ ಬಂದವಳು ಮಗಳ ಕೈಗೆ ಒಡತಿ ಕೊಟ್ಟಿದ್ದ ಬ್ಯಾಗನ್ನಿತ್ತಳು. ಅತ್ತ ಮಗಳು ತೆಗೆಯುತ್ತ ನೋಡಿದಳು ಅಯ್ಯೋ!!!! ಅಮ್ಮ ಇಷ್ಟೊಂದು ಚೆನ್ನಾಗಿರೋ ಒತ್ತಿಗೆ, ಪೆನ್ನು ಎಲ್ಲಾ ಎಲ್ಲಿ ಸಿಕ್ತು, ನಾನು ಇಷ್ಟು ಚೆನ್ನಾಗಿರೋದ್ರಲ್ಲಿ ಬರಿತೀನಾ? ಆಶ್ಚರ್ಯಚಕಿತಳಾಗಿ ಒಂದೇ ಸಮನೇ ಆ ವಸ್ತುಗಳನ್ನೇ ನೋಡುತ್ತಲಿದ್ದಳು !! ಅಮ್ಮ ಇರುವ ವಿಷಯವನ್ನೇಳಿ ಸಮಾಧಾನಿಸಿ ನೀನು ಚೆನ್ನಾಗಿ ಓದು ಹೀಗೆ ಯಾರಾದರೂ ಸಹಾಯ ಮಾಡ್ತಾರೆ. ಅಮ್ಮನ ಆಸೆ ಶಬರಿಯ ಕಣ್ಣಲ್ಲೇ ಎದ್ದು ಕಾಣುತ್ತಿತ್ತು.

ಮನದಾಳದಲ್ಲಿರುವ ಆಸೆ, ಹಂಬಲ, ಪ್ರೀತಿ, ನೋವು ಎಲ್ಲವೂ ಕಣ್ಣಲ್ಲೇ ಕಾಣುತ್ತಂತೆ ಹಾಗೆ ಶಬರಿ ತನ್ನ ಕಣ್ಣಲ್ಲೇ ಎಲ್ಲವನ್ನು ಹುದುಗಿಟ್ಟುಕೊಂಡಿದ್ದಳು, ಅವಳ ಮನದಾಳದ ಆಶಾಗೋಪುರ ಕಟ್ಟಿ ಮನದಾಸೆ ಎಲ್ಲವೂ ನಿಜವಾಗಿ ನೆರೆವೇರುವುದೆಂಬ ನಿರೀಕ್ಷೆಯಲ್ಲಿದ್ದಳು. ಕ್ಷಣಗಣನೆ ಪರೀಕ್ಷೆಗೆ ಮೊದಲು ಪರೀಕ್ಷೆಗೆ ಬಂದವಳೇ ದೇವರನ್ನು ಪ್ರಾರ್ಥಿಸಿ ಮನೆಯೊಡತಿ ಕೊಟ್ಟಿದ್ದ ಆ ಒತ್ತಿಗೆ ಹಾಗೂ ಪೆನ್ನುಗಳಿಗೆ ನಮಸ್ಕರಿಸಿ ಬರೆಯಲು ಪ್ರಾರಂಭಿಸುತ್ತಾಳೆ. ಬರೆದ ಬರವಣಿಗೆ ಮುತ್ತು ಪೋಣಿಸಿ ದೇವರಿಗೆ ಮಾಲೆ ಮಾಡಿಬಿಡುವ ಶಬರಿ ಅಕ್ಷರ ಪಲ್ಲಕ್ಕಿಯಲ್ಲಿ ತಾಯಿ ಶಾರದೆಯನ್ನು ಕೂರಿಸಿಬಿಡುತ್ತಾಳೆ. ಎಲ್ಲ ವಿಷಯಗಳ ಪರೀಕ್ಷೆ ಬರೆದು ಇನ್ನೇನು ಅಂದು ಕೊನೆ ಪರೀಕ್ಷಾ ದಿನ ಅಪ್ಪ ಅಮ್ಮ ಮಗಳಿಗಾಗಿ ಕಾಯುತ್ತಲಿದ್ದಾರೆ, ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಬರೆದು ಸಂತಸದಿ ಶಾಲೆಯಿಂದ ಹೊರಗೆ ಬರುತ್ತಿದ್ದಂತೆ.....ಶಬರಿ ಪಾಸ್ ಆಯ್ತಾ....ಏನು ಹೇಳಿದರು ಮೇಸ್ಟ್ರು ಎಂದು ಬಡಬಡಿಸುತ್ತಿದ್ದಂತೆ. ಚೆನ್ನಯ್ಯ ಸ್ವಲ್ಪ ನಿಧಾನ, ಎನ್ನುತ್ತಿದ್ದಂತೆ ಮಗಳು ಅಮ್ಮ ಈ ಪರೀಕ್ಷೆ ಕರ್ನಾಟಕದಲ್ಲಿರೋ ಎಲ್ಲಾ ಮಕ್ಕಳು ಬರೆದಿದ್ದಾರೆ. ಇದು ಪಾಸೋ ಫೇಲೋ ಹೇಳೋಕೆ ಸುಮಾರು ತಿಂಗಳು ಬೇಕು .......... ಎಂದಕೂಡಲೇ ಚೆನ್ನಮ್ಮಗೆ ಬೇಸರ ಛೇ ಇನ್ನು ತಿಂಗಳು ಕಾಯಬೇಕ....?? ಎಂದು ಸಪ್ಪೆ ಮೋರೆಯಲ್ಲೇ ಮನೆ ಕಡೆ ನಡೆಯುತ್ತಾಳೆ...

ಇತ್ತ ಅವರ ದೈನಂದಿನ ಜೀವನ ನೆಡೆಯುತ್ತಲಿರುತ್ತೆ.......ಶಬರಿ ಅಮ್ಮನೊಟ್ಟಿಗೆ ಕೆಲಸ, ಜೊತೆಗೆ ಅಪ್ಪನೊಟ್ಟಿಗೆ ಕೆಲಸ ರಜೆಯಾದ್ದರಿಂದ ಇಬ್ಬರಿಗೂ ಕೈಜೋಡಿಸಿ ತಮ್ಮ ತಂಗಿಯನ್ನು ಸಲಹುತ್ತಲಿರುತ್ತಾಳೆ....... ಹೀಗೆ ದಿನಗಳು ಕಳೆಯುತ್ತಲಿದ್ದಂತೆ........... ನಾಳೆ ಪರೀಕ್ಷೆಯ ಫಲಿತಾಂಶ ಎಂದು ಅವರ ಶಾಲೆಯ ಮಾಸ್ಟರು ತಿಳಿಸಿದ್ದೇ ತಡ, ಏನಾಗಿದೆಯೋ ಏನೋ ಸದ್ಯ ಅವಳು ಪಾಸಾದರೆ ಸಾಕು, ನಮ್ಮಂತ ಬಡವರು ಪಾಸಾಗೋದೆ ಕಷ್ಟ ಅಂತಹದರಲ್ಲಿ ಇವಳು ಏನು ಮಾಡಿದ್ದಾಳೋ ಕಾಣೆ...!!! ಎಂದು ಸಂಜೆ ಮನೆಗೆ ಬರುವಾಗ ದೇವರ ಗುಡಿಗೆ ಹೋಗಿ ಹುಂಡಿಗೆ ಒಂದು ರೂಪಾಯಿ ಹಾಕಿ ದೇವರೆ ನೋಡು ನಾನು ಇದುವರೆಗೂ ಏನು ಕೇಳಿಲ್ಲ, ದಯವಿಟ್ಟು ನನ್ನ ಮಗಳನ್ನ ಬರಿ ಪಾಸ್ ಮಾಡಿಸಿಬಿಡು ಸಾಕು... ಮುಂದಕ್ಕೆ ಓದಿಸೋ ಆಸೆ ಇದೆ. ಸರ್ಕಾರಿ ಕಾಲೇಜ್ ಇದೆ ಹೇಗೋ ಮಾಡಿ ಸೇರುಸ್ತೀನಿ ಎಂದು ಬೇಡಿಕೊಂಡು ಮನೆಗೆ ಬರುತ್ತಾಳೆ. ಮಗಳಿನ್ನು ಕೆಲಸದಿಂದ ಬಂದಿಲ್ಲ.... ಚೆನ್ನಮ್ಮ ಗಂಡನೊಟ್ಟಿಗೆ ಮಾತನಾಡುತ್ತ... ಅಡಿಗೆ ತಯಾರಿ ಮಾಡುವಾಗ್ಲೆ.... ಯಾರೋ ಬಾಗಿಲು ತಟ್ಟಿದ ಶಬ್ದ ಕೇಳುತ್ತೆ..... ಹೋಗಿ ನೋಡ್ತಾರೆ!!?? ಯಾರೋ ಮೈಕ್ ಹಿಡ್ಕೊಂಡು.... ನಾಲ್ಕಾರು ಜನ ಅದೇನೋ ಕ್ಯಾಮರಾ ಹೊತ್ತ್ಕೊಂಡು ಬಂದಿದಾರೆ.... ಯಾಕೆ ಯಾರು ನೀವು ಏನಾಗ್ಬೇಕಿತ್ತು ಎಂದೇಳುವಾಗಲೇ ನೋಡಿ ನಾವು ದೂರದರ್ಶನದಿಂದ ಬಂದಿದ್ದೀವಿ.... ಶಬರಿ ಅನ್ನೋರ ಮನೆ ಇದೆಯೇ ಎಂದ ಕೂಡಲೆ ಚೆನ್ನಮ್ಮಗೆ ಗಾಬರಿ ಗಂಡನನ್ನು ಒಂದೇ ಉಸಿರಿಗೆ ಕರೆದು...... ಅವನು ದಿಗ್ಬ್ರಾಂತನಾಗಿ ಏನಾಯಿತು...?!! ನನ್ನ ಮಗುವಿಗೆ ಯಾಕೆ ಬಂದಿರೀ ನೀವು ಉಸಿರುಗಟ್ಟಿ ಕೇಳುತ್ತಲೇ ಅವರು ಏನಿಲ್ಲ ಗಾಬರಿಯಾಗಬೇಡಿ. ನಿಮ್ಮ ಮಗಳು ಎಸ್. ಎಸ್. ಎಲ್.ಸಿ ಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಬಂದಿದ್ದಾಳೆ......ಹಾಗಂದರೆ ಏನು...? ಎಂದ ಚೆನ್ನಮ್ಮನ ಪ್ರಶ್ನೆಗೆ ದೂರದರ್ಶನದವರು ಉತ್ತರಿಸಿ.... ಎಲ್ಲಿ ನಿಮ್ಮ ಮಗಳು ಅವರೊಟ್ಟಿಗೆ ಮಾತನಾಡಬೇಕೆಂದ ಕೂಡಲೆ ಅಪ್ಪ ದೌಡಾಯಿಸಿ ಕೆಲಸ ಮಾಡುತ್ತಿದ್ದ ಮನೆಯಿಂದ ಮನೆಯೊಡತಿಗೇಳಿ ಮಗಳನ್ನ ಕರೆತಂದನು.....

ಶಬರಿಗೂ ಸಂತಸವೇ ಸರಿ..... ಅಲ್ಲಿ ದೂರದರ್ಶನದವರು ನಿಮ್ಮ ಸಾಧನೆಯ ಗುಟ್ಟು...? ಈ ಪ್ರಶ್ನೆಗೆ ಉತ್ತರ ನನ್ನಮ್ಮ,.., ..., ನನ್ನಮ್ಮನ ಆಸೆ..... ಆಕೆಗೆ ನಾನು ಚೆನ್ನಾಗಿ ಓದಿ ಬಡವರೂ ಓದಬಲ್ಲೆವೆಂಬ ಸಾಧನೆಯನ್ನು ಮಾಡಿ ತೋರಿಸು ಎಂಬ ಇಚ್ಚೆ ನನ್ನಿಷ್ಟು ಕೆಲಸ ಮಾಡಿಸಿತು.

ಎಲ್ಲದರಲ್ಲೂ ೧೦೦ಕ್ಕೆ ೧೦೦ ಅಂಕ ಹೇಗೆ ಸಾಧ್ಯ.....? ನನ್ನಮ್ಮ ಕೆಲಸ ಮಾಡುವ ಮನೆಯೊಡತಿ ಸಹೃದಯಿ ನನ್ನ ಪರೀಕ್ಷೆಗೆಂದೇ ಪೆನ್ನು, ಪೆನ್ಸಿಲ್, ಒತ್ತಿಗೆ ಎಲ್ಲವನ್ನೂ ಸಂತಸದಿ ಕಳುಹಿಸಿ ನನಗೆ ಹರಸಿದ್ದರು, ಆಕೆಯ ಆಶಿರ್ವಾದ ನನ್ನ ಅಂಕಕ್ಕೆ ಕಾರಣ ಎಂದು ಹೇಳುತ್ತಿದ್ದಂತೆ ಆ ಮನೆಯೊಡತಿ ಶಾರದಮ್ಮ ವಿಷಯ ತಿಳಿದಿದ್ದರಿಂದ ಈ ಪುಟ್ಟ ಗುಡಿಸಲತ್ತ ಬರುತ್ತಿದ್ದಳು. ಅಷ್ಟರಲ್ಲೇ ಆ ಪುಟ್ಟ ಶಬರಿಯ ಮಾತು ಆಕೆಯ ಕಿವಿಗೆ ಬೀಳುತ್ತಿದ್ದಂತೆ...... ಆನಂದ ಭಾಷ್ಪದಿ ನಲಿದು ಶಬರಿಯನ್ನಾಲಂಗಿಸಿ ಮುದ್ದಾಡಿದಳು. ನೆರೆದಿದ್ದವರೆಲ್ಲರ ಸಾಕ್ಷಿಯಾಗಿ ಈ ಮಗುವಿಗೆ ಇಂದಿನಿಂದ ಎಷ್ಟು ಖರ್ಚುವೆಚ್ಚವಾಗುತ್ತೋ ನಾನೇ ಭರಿಸಿ ಅವಳ ವಿದ್ಯಾಭ್ಯಾಸ ಮಾಡಿಸುತ್ತೇನೆಂದು ಆ ಮನೆಯೊಡತಿ ಶಾರದೆ ಒಪ್ಪಿಕೊಂಡರು. ಇಂತಹ ಸಂತಸದ ಸುದ್ದಿ ಯಾರಿಗೆ ತಾನೆ ಖುಷಿ ನೀಡುವುದಿಲ್ಲ ಹೇಳಿ..? ಶಬರಿ, ಅಪ್ಪ, ಅಮ್ಮ ಎಲ್ಲರ ಸಂತಸ ಎಲ್ಲೆ ಮೀರಿತ್ತು...!!!

ಈಗ ಶಬರಿಗೆ ಅಮ್ಮನ ಆಸೆಯ ಜೊತೆಗೆ ಶಾರದೆಯ ಮನದಾಳಕ್ಕೆ ಖುಷಿ, ಜೊತೆಗೆ ಸಾಧಸಿ ತೋರುವ ಭಾರ ಹೆಚ್ಚಾಯಿತು. ಶಾರದೆಯವರು ಹಣ ಕೊಟ್ಟು ಓದಿಸುತ್ತಾರೆಂದು ಶಬರಿ ಯಾವುದನ್ನೂ ದುರುಪಯೋಗ ಪಡಿಸಿಕೊಳ್ಳಲಿಲ್ಲ...... ಶಬರಿ ಸರ್ಕಾರಿ ಕಾಲೇಜಿಗೆ ಸೇರಿದಳು ಅದಕ್ಕೆ ತಕ್ಕಂತ ಖರ್ಚು ವೆಚ್ಚವನ್ನು ಭರಿಸಿದ ಶಾರದೆಗೆ ಮನಸಿಲ್ಲ ಒಳ್ಳೆ ಕಾಲೇಜಿಗಾದರೂ ಸೇರು ಎಂಬ ಅಭಿಲಾಷೆ ಅವರದು.....ಆದರೆ ಶಬರಿಯದು ಒಂದೇ ನಿರ್ಧಾರ ಓದುವ ಮನಸ್ಸು, ಹುಮ್ಮಸ್ಸು ಎಲ್ಲಾದರೇನು ಓದಿ ತೋರಿಸುತ್ತೇನೆ ಎಂಬ ಛಲ ಅವಳಲ್ಲಿದ್ದ ಕಾರಣ ಸರ್ಕಾರಿ ಅಥವಾ ಖಾಸಗಿ ಕಾಲೇಜಿನ ಹಿರಿಮೆ, ಕೀಳರಿಮೆ ಎಲ್ಲೂ ಬರಲೇ ಇಲ್ಲ......

ಮೊದಲ ವರ್ಷ ಪಿ.ಯು.ಸಿ ಮುಗಿಸಿದ್ದಾಳೆ. ದ್ವಿತೀಯ ಪಿ.ಯು.ಸಿ ಇದು ಜೀವನದ ಪ್ರಮುಖ ಘಟ್ಟ. ಜೀವನದ ಮುಂದಿನ ಹೆಜ್ಜೆಗೆ ಇದು ಅದ್ಭುತ ಮಹತ್ವ ಹೊಂದಿರುವುದು ಪಿ.ಯು.ಸಿ. ಇಲ್ಲಿ ಒಮ್ಮೆ ಶ್ರದ್ಧೆ, ಆಸೆ, ಛಲ ಎಲ್ಲವನ್ನೊಂದಾಗಿಸಿ ಓದಿದರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಎಂಬುದು ಮಾತ್ರ ಸತ್ಯ......... ಇದೆಲ್ಲದರ ಅರಿವು ಶಬರಿಯಲ್ಲಿ ಮನೆ ಮಾಡಿರುವುದಂತು ನಿಜ. ಬಡತನದಲ್ಲಿ ಎಲ್ಲದಕ್ಕೂ ವಿಶೇಷತೆ ಇರುತ್ತದೆ..... ಸುತ್ತಮುತ್ತಲಿನಲ್ಲಿದ್ದ ಮನೆ ಮಕ್ಕಳು ಪಿ.ಯು.ಸಿ ಎಂದರೆ ಎಲ್ಲರೂ ದೊಡ್ಡ ದೊಡ್ಡ ಕಾಲೇಜಿನಲ್ಲಿರೋ ಉಪನ್ಯಾಸಕರ ಹತ್ತಿರ ಟೂಷನ್ನಿಗೆಂದು ಹೋಗುತ್ತಾರೆ. ಆದರೆ ಶಬರಿಗೆ ಟೂಷನ್ನಿಗೆ ಹೋಗೋಕೆ ಹಣದ ಅಭಾವ, ಕೊಡುವವರು ಇದ್ದಾರೆಂದು ಅದನ್ನ ಬಳಸಿಕೊಳ್ಳುವ ಮನಸಿಲ್ಲ ಕಾರಣ ಅವರು ಎಂತಹವರೇ ಆಗಲಿ ಕೊಡುತ್ತಾರೆಂದು ನಾವು ಈಗ ಪಡೆದರೆ ನಾಳೆ ಹೇಗೋ ಏನೋ ಅವರ ಹಂಗಿನಲ್ಲಿರಬೇಕಲ್ಲಾ ಎಂಬ ಚಿಂತೆ..... ಹಂಗಿನ ಅರಮನೆಗಿಂತ ಈ ಗುಡಿಸಿಲಿನರಮನೆಯೇ ವಾಸಿ ಎಂದು ಭಾವಿಸಿದ್ದಳು.... ಆ ಪುಟ್ಟ ಮನದಲ್ಲಿ ಮಹತ್ತರ ಆಶಾವಾದವಿದೆ. ಅದನ್ನು ನಿಭಾಯಿಸಿ ಮುಂದುವರಿವುದೇ ಒಂದು ದೊಡ್ಡ ಸಂಗತಿ.

ಶಬರಿಗೆ ಓದುವ ಹಂಬಲ, ವಿದ್ಯೆ ಯಾರ ಸೊತ್ತು ಹೇಳಿ, ಸರಸ್ವತಿ ಒಲಿಯುವವರಿಗೆ ಖಂಡಿತಾ ತಡಮಾಡದೆ ಯಾವುದೇ ಎಡೆತೊಡೆ ಇಲ್ಲದೆ ಅವರ ಮೆದುಳಿನಲ್ಲಿ ಉಳಿದುಬಿಡುತ್ತಾಳೆ.. ಅಮ್ಮ ಅಪ್ಪ ಮಗಳೇ ಹೇಗೆ ಓದುತ್ತೀಯಾ..... ಅದು ಏನು ಇದು ಏನು, ನೀನು ಓದಲು ಟೂಷನ್ನಿಗೇನಾದರು ಹೋಗಬೇಕಾ..? ಯಾವ ಗಂಧ ಗಾಳಿಯೂ ಇಲ್ಲ ಶಬರಿ ತಾನೇ ಸ್ವಂತ ಬುದ್ಧಿಯಿಂದ ಓದುವ ನಿಟ್ಟಿನಲ್ಲಿರುವಳು.

ಕಾಲೇಜಿನಲ್ಲಿ ಒಬ್ಬರಿಗೊಬ್ಬರ ಪೈಪೋಟಿ ಸರ್ಕಾರಿ ಕಾಲೇಜುಗಳಲ್ಲಿ ಮಧ್ಯಮವರ್ಗದ ಮಕ್ಕಳೂ ಸಹ ಇದ್ದಾರೆ. ಇದ್ದಿದ್ದರಲ್ಲಿ ಅವರಿಗಾವ ಕೊರತೆಯೂ ಇಲ್ಲ, ಹಲವರದು ಶಬರಿಯಷ್ಟು ಯೋಚನೆಗೀಡು ಮಾಡುವ ಜೀವನ ಶೈಲಿಯೇನಲ್ಲ...... ಅಮ್ಮ ಬೆಳಗೆದ್ದರೆ ದುಡಿಮೆ.... ಅಪ್ಪ ಕೈಲಾಗದವನು ತಾನೇ ಮನೆಕೆಲಸ ಮುಗಿಸಿ ಅಮ್ಮನಿಗೂ ಕೈ ಜೋಡಿಸಿ ಕಾಲೇಜಿಗೆ ಬರಬೇಕು, ಕಾಲೇಜು ಸುಮಾರು ೪ ಕಿ,ಮೀ ಇದೆ ಯಾವ ಬಸ್ ವ್ಯವಸ್ಥೆಯಿಲ್ಲ, ಕಾಲೇ ಚಕ್ರ ಎಂದು ದಾರಿ ಹಿಡಿಯುವುದವಳ ಕೆಲಸವಾಗಿತ್ತು.... ದಿನಕ್ಕೆ ೮ಕಿ.ಮಿ ನೆಡೆದು ಬಂದರೂ ಸ್ವಲ್ಪವೂ ಆಯಾಸ ತೋರದೆ ಮನೆಕೆಲಸ, ಓದು ಎಲ್ಲವನ್ನು ಸಮದೂಗಿಸಿಕೊಂಡು ಬಂದಳು.......

ಕಾಲೇಜಿನಲ್ಲಿ ಗುರುಗಳಿಗೆ ಅಚ್ಚುಮೆಚ್ಚಾದ ಶಬರಿ ಎಂದೂ ಹಿಂದೆ ಉಳಿಯಲಿಲ್ಲ ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿಗೆ ಹೆಸರನ್ನೂ ತಂದುಕೊಟ್ಟಳು.....ಇನ್ನೇನು ಪರೀಕ್ಷೆ ಹತ್ತಿರಬರುತ್ತಲಿದೆ ಮೊದಲಿನಂತೆ ಅಮ್ಮ ಮಗಳಿಗೆ ಕೆಲಸಕ್ಕೆ ಬರಬೇಡವೆಂದೇಳಿ ಪರೀಕ್ಷೆಯತ್ತ ಗಮನ ಕೊಡಲು ಹೇಳಿದಳು....ಅಮ್ಮನ ಆಜ್ಞೆಯಂತೆ ಶಬರಿ ತನ್ನ ವಿದ್ಯೆಯತ್ತ ಗಮನಕೊಟ್ಟಳು...ಶಬರಿ ಚೆನ್ನಾಗಿ ಓದುತ್ತಲಿದ್ದಳು ಹೆಸರು ಸಹ ಗಳಿಸಿದ್ದಳಲ್ಲ ಕಾಲೇಜಿನಲ್ಲಿ, ಅದಕ್ಕೆ ಒಳ್ಳೆ ಸ್ನೇಹಿತರನ್ನೂ ಸಹ ಗಳಿಸಿದ್ದಳು...... ಪರೀಕ್ಷಾ ತಯಾರಿಗಾಗಿ ರಜೆ ಕೊಟ್ಟಿದ್ದರಿಂದ ಸ್ನೇಹಿತರಿಗೆ ಕೆಲವು ವಿಷಯಗಳಲ್ಲಿ ಶಬರಿಯಿಂದ ಮಾಹಿತಿ ಪಡೆಯಲು ಅವಳ ಮನೆಯತ್ತಿರ ಬರುತ್ತಾರೆ. ಅದುವರೆಗೂ ಅವಳ ಮನೆ ಹೀಗಿರುತ್ತೆಂಬ ಕಲ್ಪನೆಗೂ ಬಾರದ ಸ್ನೇಹಿತರು ಅವಕ್ಕಾದರು....ಛೇ!!!! ಇಂತಾ ಮನೆನಾ ಅದು ಹೇಗಿದ್ದಾಳೋ ಇವಳು ಇಲ್ಲಿ ಅಂತಾ.. ಒಬ್ಬ, ಮತ್ತೊಬ್ಬ....ಅಯ್ಯೋ ಕರ್ಮ ನಾವು ಈ ಗುಡಿಸಿಲಿಗೆ ಬಂದೆವಲ್ಲಪ್ಪಾ,ಅವಳು ಮನೆ ವಿಳಾಸ ಕೊಟ್ಟಿದ್ದಳೇ ಹೊರತು, ತನ್ನ ಮನೆ ಹೀಗೆ, ಮನೆಯವರು ಹೀಗೆಂದು ಹೇಳೇ ಇರಲಿಲ್ಲ, ಅದು ಅವರಿಗ್ಯಾಕೆ ಹೇಳಬೇಕು ನಾ ಹೋಗುವುದು ಓದಲು ಮನೆ ವಿಚಾರ ಚರ್ಚಿಸುವುದಕ್ಕಲ್ಲವೆಂಬುದು ಅವಳ ವಾದ. ಮನೆಯತ್ತಿರ ಬಂದಿದ್ದ ಸ್ನೇಹಿತರನ್ನು ಕಂಡು ಖುಷಿಯಾಗಿದ್ದ ಶಬರಿ ಅವಳ ಸಂತಸಕ್ಕೆ ಒಮ್ಮೆ ರಪ್ಪನೇ ಮುಖಕ್ಕೆ ನೀರೆರಚಿದಂತಾಯಿತು ಕಾರಣ ಅವಳ ಸ್ನೇಹಿತ ನೀನಿಂತ ಮನೆಯಲ್ಲಿರುವುದು ನಮಗೆ ಗೊತ್ತಿರಲಿಲ್ಲ, ಛೇ..... ಇದು ಒಂದು ಮನೆಯಾ... ಅದು ಹೇಗಿದ್ದೀಯೋ.... ನಾವು ಇಲ್ಲಿಗೆ ಬರೋಲ್ಲ ಸಾಕು ನಿನ್ನ ಸಹವಾಸವೆಂದು ಹೊರಟೇ ಬಿಟ್ಟರು.........ಅವರ ಮಾತನ್ನು ಕೇಳಿಸಿಕೊಂಡ ಅಮ್ಮ ಒಳಗೆ ಮರುಗುತ್ತಿದ್ದಳು.... ಛೇ ನಾವು ಇಷ್ಟು ಬಡವರಾಗಿದ್ದಕ್ಕೆ ತಾನೇ ನನ್ನ ಮಗಳಿಗೆ ಸ್ನೇಹವೂ ಸಿಗದಂತಾಯಿತು ಎಂದು ಮಮ್ಮಲ ಮರುಗಿದಳು. ಆದರೆ ಶಬರಿ ಕಿಂಚಿತ್ತೂ ಬೇಸರಿಸದೆ ಹೋದರೆ ಹೋಗು ತಿಳಿದಿದೆ ನನಗೆ ಕಾರಣ, ನಾವು ಇರುವುದೇ ಹೀಗೆ ನಮ್ಮ ಜೀವನವೇ ಹೀಗೆ. ಅವರಲ್ಲೂ ಏನಾದರೊಂದು ಕಷ್ಟ ಇರುತ್ತೇ ಹಾಗಂತ ಎಲ್ಲವನ್ನು ಬಿಟ್ಟು ಬರುತ್ತಾರ... ಹಾಗೇ ನನ್ನ ಮನೆ ಬಡತನದಲ್ಲೇ ಇರಬಹುದು............ ನಮ್ಮ ಮನಸ್ಸು, ಹೃದಯ ಯಾವಾಗಲೂ ಶ್ರೀಮಂತವಾಗಿದೆ ಎಂದು ನೆಡೆದದ್ದನ್ನು ಅಲ್ಲೇ ಬಿಟ್ಟು ತನ್ನ ಕೆಲಸದಲ್ಲಿ ತೊಡಗುವಳು........

ಪರೀಕ್ಷಾ ದಿನ ಎಲ್ಲರೂ ಸೇರಿದ್ದರು, ಅಂದು ಮನೆಯತ್ತಿರ ಬಂದಿದ್ದ ಸ್ನೇಹಿತರೆಲ್ಲ ಕಾಲೇಜಿನಲ್ಲಾಗಲೇ ಗುಲ್ಲೆಬ್ಬಿಸಿ ಬಿಟ್ಟಿದ್ದರು, ಎಲ್ಲರೂ ಇವಳನ್ನೇ ತಿನ್ನುವಂತೆ ನೋಡುತ್ತಿದ್ದಾಗ ಎಲ್ಲವನ್ನು ಅರ್ಥಮಾಡಿಕೊಂಡಳು. "ಬಂದದ್ದೆಲ್ಲಾ ಬರಲಿ ಭಗವಂತ ದಯೆ ಇರಲಿ" ನನಗೂ ರಾಮ ಬರುವಾಗ ಶಬರಿಯಲಿದ್ದ ಸಂತಸದಂತೆ ನನಗೂ ಒಳ್ಳೆ ಸಮಯ ಬಂದೇ ಬರುವುದು ಅಂದು ನಾನು ಸುಖಿಯಾಗಿ ಖುಷಿ ಪಡುವೆ ಎಂದು ಮನಸಲ್ಲೇ ನೊಂದಳು. "ಬಡವರಾದರೇನು ನನ್ನಲ್ಲಿ ವಿದ್ಯೆ ಇಲ್ಲವೇ..?" ಯಾರೊಬ್ಬರು ಮಾತನಾಡಲಿಲ್ಲ, ಮೊದಲೆಲ್ಲಾ ಮೇಲೆ ಬಿದ್ದು ಬಿದ್ದು ಮಾತನಾಡುವವರ ಚಹರೇಯೇ ಇಲ್ಲಾ. ಏನು ನಾನು ಗುಡಿಸಲಲ್ಲಿರುವುದೇ ಮಹಾಪರಾಧವೇ... ಬಡತನ ನಮಗೆ ಶಾಪವೇ..? ನನ್ನ ಸ್ನೇಹಕ್ಕೂ ನನ್ನ ಮನೆಗು ಸಂಬಂಧವೇನು ಏಕೆ ಈ ಜನ ಹೀಗೆ...?? ಶಬರಿ ಮನಸಲ್ಲೇ ನೂರೆಂಟು ಪ್ರಶ್ನೆ ಉತ್ತರ ಮಾತ್ರ ಸಿಗಲೇ ಇಲ್ಲ. ಸ್ವಲ್ಪ ಹುಸಿ ಕೋಪ ಒಮ್ಮೆ ಮನಸಲ್ಲಿ ಹಾದು ಹೋಯಿತು. ಅಲ್ಲೇ ಇದ್ದ ಸ್ನೇಹಿತೆಯನ್ನು ಇವಳಾಗಿ ಇವಳೇ ಮಾತನಾಡುಸುತ್ತಾಳೆ ರೂಮ್ ನಂ. ೧೮ ಎಲ್ಲಿದೆ ಯಾವ ಕಡೆ ಹೋಗಬೇಕೆಂದು..!! ಅಲ್ಲವೇ..!!! ಶಬರಿ ನೀನು ಹೋಗಿ ಹೋಗಿ ಅಂತಾ ಜಾಗದಲ್ಲ ಇರೋದು ನಿಮ್ಮಪ್ಪ ಅಮ್ಮನಿಗೇನು ಸ್ವಲ್ಪ ಚೆನ್ನಾಗಿರೋ ಮನೆ ಬಾಡಿಗೆ ತಗೊಳ್ಳೋಕೆ ಎಂದಾಗ, ಇವಳಿಗೆಲ್ಲಿಲ್ಲದ ಕೋಪ ಬಂದು ಜೋರಾಗಿ ಚೀರಿದಳು........ ನಾವು ಯಾವ ಮನೆಯಲ್ಲಿದ್ದರೇನು ಅದು ನನ್ನಿಷ್ಟ......ಇದನ್ನೆಲ್ಲಾ ಸಾರಿದರಲ್ಲ ಆ ಸ್ನೇಹಿತರಿಗೇನು ಕೆಲಸ ಇಲ್ಲವಾ....? ನಾನು ಆ ಮನೆಯಲ್ಲಿರೋಳು ನಿಮಗೆಲ್ಲಾ ಏನು ಕಷ್ಟ.... ಇಷ್ಟು ನೀಚಮಟ್ಟಕ್ಕೆಲ್ಲಾ ಯೋಚಿಸೋ ನೀವೆಲ್ಲಾ ನನ್ನ ಸ್ನೇಹಿತರೆ ಅಲ್ಲವೆಂದು ರಭಸದಲ್ಲಿ ಪರೀಕ್ಷಾ ಕೊಠಡಿ ಹುಡುಕುತ್ತ ನೆಡೆದಳು. ಕೋಪದ ಬಿಸಿ ಇನ್ನೂ ತಣ್ಣಗಾಗಿಲ್ಲ, ಆದರು ಪರೀಕ್ಷೆ ಇದೆ ನನ್ನ ಜೀವನದ ಉದ್ದೇಶದೆಡೆಗೆ ಗಮನ ಕೊಡಬೇಕು ಎಂದು ಕೋಪ ತಣ್ಣಗಾಗಿಸಿ ಕುರ್ಚಿಯಲ್ಲಿ ಕುಳಿತಿದ್ದಾಳೆ. ಒಳಗೊಳಗೆ ಏನೋ ಬೇಸರ ಪ್ರಪಂಚ ಇಷ್ಟು ಬದಲಾದರೂ ಈ ಜನ ಬದಲಾಗಲಾರರೆ..? ಇಂತಹವರೆದುರು ನಾ ಸಾಧಿಸಿ ತೋರಬೇಕು ಎಂಬ ಹಠ ಮಾತ್ರ ಅತಿಯಾಯಿತು.

ಸ್ನೇಹಿತರು ಹೀಗೆ ಮಾತನಾಡಿದ್ದು ತಪ್ಪೇ...? ಸ್ನೇಹ ಸಿರಿವಂತರಿಗೆ ಮಧ್ಯಮವರ್ಗದವರಿಗೇ ಮೀಸಲೇ...?
ಮನಸಿನಲ್ಲಿ ನೆಡೆಯುತ್ತಿದ್ದ ಗೊಂದಲ ಪರೀಕ್ಷೆ ಬರೆಯಲು ಬಿಟ್ಟಿತೆ ?
ಎಲ್ಲ ಗೊಂದಲಗಳಿಗೆ ಉತ್ತರ ಮುಂದಿನ ಭಾಗ ದೀಪ-೩ ರಲ್ಲಿ

ಮುಂದುವರಿಯುವುದು...

Thursday, June 16, 2011

ಗುಡಿಸಲಿನಲ್ಲೊಂದು ನಂದಾದೀಪ

ದೀಪ-೧

ಪುಟ್ಟ ಸಂಸಾರ ಗಂಡ ಹೆಂಡತಿ ಮೂರು ಮಕ್ಕಳು.......ಬೃಹತ್ ನಗರದ ಮಧ್ಯದಲ್ಲಿ ಪುಟ್ಟ ಗುಡಿಸಿಲಿನ ವಾಸ, ಸುತ್ತಲೂ ಅದ್ಧೂರಿ ಬಂಗಲೆಗಳಿದ್ದರೂ, ಅಲ್ಲಿ ಕೆಲವೇ ಕೆಲವು ಗುಡಿಸಲುವಾಸಿಗಳಿದ್ದರು. ಆ ಗುಡಿಸಲುಗಳೊಂದರಲ್ಲಿ ಈ ಪುಟ್ಟ ಚೆನ್ನಮ್ಮ ಮತ್ತು ಚೆನ್ನಯ್ಯನ ಕುಟುಂಬ ವಾಸವಾಗಿತ್ತು. ಚೆನ್ನಯ್ಯ ಅಂತ ಆರೋಗ್ಯವಂತನಲ್ಲ ವಾರಕ್ಕೆ ೪ ದಿನ ಕೆಲಸಕ್ಕೋದರೆ ಇನ್ನುಳಿದ ದಿನಗಳು ಮನೆಯಲ್ಲೇ ಆರೋಗ್ಯ ಕೆಟ್ಟು ಮಲಗುವಂತಹವನು ಇದನ್ನು ಕಂಡ ಚೆನ್ನಮ್ಮ ತನ್ನ ಗಂಡನನ್ನು ಮನೆಯಲ್ಲೇ ಉಳಿಯಲು ಬಿಟ್ಟು, ತಾನು ಕೆಲಸಕ್ಕೆ ಹೋಗುತ್ತಲಿದ್ದಳು. ಅಲ್ಲೇ ಸುತ್ತ ಮುತ್ತಲು ಇದ್ದ ಶ್ರೀಮಂತ ಮನೆಗಳಿಗೆ ಕೆಲಸ ಮಾಡುವುದು ಅವಳ ದಿನ ನಿತ್ಯದ ಕೆಲಸ...... ಈ ದಂಪತಿಗಳಿಗೆ ಮುದ್ದಾದ ಮೂರು ಮಕ್ಕಳು ಎರಡು ಹೆಣ್ಣು, ಒಂದು ಗಂಡು..... ದೊಡ್ಡ ಮಗಳು ಶಬರಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಲಿದ್ದಾಳೆ. ಈಕೆಗೆ ಅಮ್ಮನ ಕಷ್ಟ, ಅಪ್ಪನ ಆರೋಗ್ಯ ಎಲ್ಲದರ ಅರಿವಿದೆ. ಅದಕ್ಕಾಗೆ ಅಮ್ಮನೊಟ್ಟಿಗೆ ಕೈಜೋಡಿಸಿ ಅವಳೂ ಸಹ ಮನೆಗೆಲಸಕ್ಕೆ ಹೋಗುತ್ತಲಿರುತ್ತಾಳೆ. ಅಮ್ಮ ಮನೆ ಕಸಗುಡಿಸುತ್ತಿದ್ದರೆ ಶಬರಿ ಪಾತ್ರೆ ತೊಳೆಯುವ ಕೆಲಸ, ಈ ರೀತಿ ಇಬ್ಬರು ಹಂಚಿಕೊಂಡು ಕೆಲಸ ಮಾಡುತ್ತಿರುತ್ತಾರೆ.

ಶಬರಿ ಹೆಸರಿಗೆ ತಕ್ಕಂತೆ ಆ ರಾಮನಿಗಾಗಿ ಕಾದಿದ್ದ ಶಬರಿಯಂತೆ ಇವಳಲ್ಲೂ ಕಾಯುವ ಸಹನೆ ಬಹಳವಿತ್ತು. ಶಬರಿ ಓದುವ ಮನಸ್ಸು ಮಾತ್ರ ಅತಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಇವಳು ಶಾಲೆಯಲ್ಲೇ ಮೊದಲು, ಸಂಜೆ ಮನೆಗೆ ಬಂದೊಡನೆ ಅಮ್ಮನೊಟ್ಟಿಗೆ ಕೆಲಸ ಎಲ್ಲ ಕೆಲಸ ಮುಗಿಸಿ ಬರುವಷ್ಟರಲ್ಲಿ ರಾತ್ರಿ ೮ ಗಂಟೆ ಆನಂತರ ತನ್ನ ಓದಿನ ಕಡೆ ಗಮನ. ಸದಾ ಅಂದಿನ ಪಾಠವನ್ನು ತಪ್ಪದೇ ಓದುತ್ತಿದ್ದ ಶಬರಿಗೆ ಯಾವುದೇ ತೊಂದರೆ ಎದುರಿಸಲಿಲ್ಲ. ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಇನ್ನೇನು ದಿನಗಳೆಣಿಸುವಂತಾಗಿದೆ ಸೀಮೆ ಎಣ್ಣೆ ಬುಟ್ಟಿ ಇಟ್ಟು ರಾತ್ರಿ ಎಲ್ಲಾ ಓದುತ್ತಿದ್ದಾಳೇ ಶಬರಿ, ಅಮ್ಮ ಅಪ್ಪ ಮಗಳ ಶ್ರಮ ಕಂಡು ಬೇಸರವೆನಿಸಿದೆ ಪಕ್ಕದಲ್ಲಿರೋ ಶ್ರೀಮಂತ ಮನೆಗಳಲ್ಲಿ ನಾಯಿ ಮಲಗುವ ಕೋಣೆಗೂ ದೀಪಾಲಂಕಾರವಿದೆ, ನಮ್ಮಂತ ನಿರ್ಗತಿಕರಿಗೆ ಆ ನಾಯಿಗಿರುವಷ್ಟು ಸೌಲಭ್ಯವಿಲ್ಲದಾಯಿತೆ. ಎಂದು ಮರುಕ ಒಂದು ಕಡೆ, ನಮ್ಮ ಹಣೆ ಬರಹವೇ ಹೀಗೆಂಬ ಸಮಜಾಯಿಸಿ ಮತ್ತೊಂದೆಡೆ.

ಶಬರಿ ಪರೀಕ್ಷಾ ದಿನಗಳಲ್ಲಿ ಕೆಲಸಕ್ಕೆ ಬರದಿರಲು ಅಮ್ಮ ತಾಕಿತ್ತು ಮಾಡಿರುತ್ತಾಳೆ. ನೀನು ಮನೆಯಲ್ಲೇ ಇದ್ದು ಓದು, ಕೆಲಸವೆಲ್ಲಾ ನಾನೇ ಮುಗಿಸಿ ಬರುವೆ ಎಂದು.... ಅತ್ತ ಮನೆಗೆಲಸದಲ್ಲಿ ತೊಡಗಿರುವಾಗ ಮನೆಯೊಡತಿ ಗತ್ತಿನಿಂದ ನಿನ್ನ ಮಗಳು ಬಂದಿಲ್ಲ, ಕೆಲಸ ನಿಧಾನವಾಗುತ್ತೆ......ದಿನವೆಲ್ಲಾ ಕೆಲಸ ಮಾಡ್ತಾನೇ ಇರು, ನಾವು ನೀ ಮುಗಿಸೋವರೆಗೂ ಕಾದು ಕುಳ್ತಿರ್ತೀವಿ ಎಂದು ಜೋರು ಧನಿಯಲ್ಲಿ ಕೇಳುತ್ತಲೇ, ಇತ್ತ ಚೆನ್ನಮ್ಮ ಇಲ್ಲಮ್ಮ, ಮಗಳಿಗೆ ಪರೀಕ್ಷೆ ಇದೆ ಅದಕ್ಕೆ ಓದಲೆಂದು ಬಿಟ್ಟುಬಂದೆ ಎಂದ ಕೂಡಲೇ ಮನೆಯೊಡತಿ ಓಹೋ.... ಅವಳು ಓದಿ ಈ ದೇಶವೇನು ಉದ್ಧಾರವಾಗಬೇಕಿಲ್ಲ, ಬರೆದಷ್ಟು ಬರೆಯಲಿ ಮುಂದಿನ ವರ್ಷದಿಂದ ಓದು ಬಿಡಿಸಿ ನಮ್ಮ ಮನೆ ಕೆಲಸಕ್ಕೆ ಬಿಡು ನಿನಗೆ ವಯಸ್ಸಾಯಿತು..... ನಿನ್ನ ಕೈಲಾಗೋಲ್ಲ ಎಂದು ಗದರಿಬಿಡುತ್ತಾಳೆ.....ಚೆನ್ನಮ್ಮ ಮನಸಲ್ಲೇ ಅಳುತ್ತಾ ಅವರ ಮಕ್ಕಳಾದರೆ ಓದಬಹುದು, ಆ ಮಕ್ಕಳು ಓದುವಾಗ ಅವರು ಕುಳಿತಲ್ಲೇ ಸೇವೆ ಮಾಡಬೇಕು, ತಿನ್ನಲೂ ಸಹ ಎದ್ದು ಬರುವುದಿಲ್ಲ, ಓದುವ ಮೇಜಿಗೆ ಎಲ್ಲವನ್ನು ತೆಗೆದೊಯ್ಯಬೇಕು....ಅಂತಹದರಲ್ಲಿ ನಾವು ಬಡವರು ನಮ್ಮ ಮಕ್ಕಳೂ ಓದಲೇ ಬಾರದೆ....??

ಅಂದು ಸಂಜೆ ಮನೆಗೆ ಬಂದವಳೆ ಮಗಳಿಗೆ ನೊಂದ ಮನಸಿನಿಂದಲೇ ಹೇಳುತ್ತಾಳೆ. "ಬಡತನವೇ ಒಂದು ಶಾಪ" ನಮಗೆ, ನೀನು ಆ ಶಾಪವನ್ನು ನಮ್ಮಿಂದ ದೂರ ಮಾಡಬೇಕು, "ನಾವು ಕೂಲಿ ಕೆಲಸಕ್ಕೆ ಮೀಸಲೆಂದು ಭಾವಿಸಿರುವವರ ಮಧ್ಯೆ ನಮಗೂ ಯಜಮಾನಿಕೆ ಮಾಡುವಷ್ಟು ಸಾಮರ್ಥ್ಯವಿದೆ" ಎಂಬಂತೆ ನೀನು ಸಾಧಿಸಿ ತೋರಿಸಬೇಕು . ನನಗೆ ಗೊತ್ತಿಲ್ಲ ಅದು ಹೇಗೆ ಓದುತ್ತೀಯೋ ಅಂತ ಒಟ್ಟಲ್ಲಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸು. ಎಂದು ಅಮ್ಮ ಮಗಳಲ್ಲಿ ಕಣ್ಣ ಕಂಬನಿಯೊಂದಿಗೆ ಬೇಡುತ್ತಾಳೆ......ಮಗಳಿಗೂ ಅಮ್ಮನಿಗೇನೋ ಬೇಸರವಾಗಿ ಹೀಗೆಳುತ್ತಲಿದ್ದಾಳೆ ಅವಳ ಆಸೆ ಹೇಗಾದರೂ ಮಾಡಿ ಪೂರೈಸಲೇ ಬೇಕು ಎಂಬ ಪಣ ತೊಡುತ್ತಾಳೆ.

ಇತ್ತ ಅಮ್ಮನದೂ ಮಾಮೂಲಿ ಕೆಲಸ ಅಪ್ಪ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕರೆತರುವುದು, ಮನೆ ಜವಾಬ್ದಾರಿ ವಹಿಸಿ ನೆಡೆಸುವುದು ಇದೇ ಕೆಲಸ.......ಜೊತೆಗೆ ಅಪ್ಪ ಮನೆಯಲ್ಲೇ ಇದ್ದು ಸಮಯ ಹಾಳು ಮಾಡದೆ ಬಿಸಾಡಿದ ನ್ಯೂಸ್ ಪೇಪರ್ ನಿಂದ ಪೊಟ್ಟಣವನ್ನು ಮಾಡಿ ಅಂಗಡಿಗೆ ಮಾರುತ್ತಲಿರುತ್ತಾನೆ. ಶ್ರಮದ ಜೀವನದಲ್ಲೂ ಸುಖಕಾಣುವುದು ಈ ಕುಟುಂಬದ ನಿಲುವು. ಶಬರಿಗೆ ಇನ್ನೇನು ಎರಡೇ ದಿನ ಪರೀಕ್ಷೆಗೆ.....ಪರೀಕ್ಷೆ ಬರೆಯಲು ಲೇಖನಿ ಇಲ್ಲ......ಅಮ್ಮನನ್ನು ಕೇಳಿದಳು ಅಮ್ಮ ಬರೆಯಲು ಪೆನ್ನು ಬೇಕಿತ್ತು ತಂದುಕೊಡುತ್ತೀಯಾ...? ಆಯ್ತು ಮಗಳೇ ಸಂಜೆ ಮನೆಗೆಲಸದವರ ಮನೆಯಲ್ಲಿ ಕೇಳಿ ತರುತ್ತೇನೆಂದಳು......

ಮನೆಗೆಲಸಕ್ಕೆ ಹೋಗಿದ್ದಾಗ ಮನೆಯೊಡತಿಯನ್ನು ಕೇಳಿದರೆ ಎಲ್ಲಿ ಅಪಶಕುನದ ಮಾತಾಡುವಳೋ ಎಂದು ಯೋಚಿಸಿ ಕೇಳಲೋ ಬೇಡವೆಂದು ಯೋಚಿಸುತ್ತಾ ಮಕ್ಕಳ ಕೋಣೆ ಸ್ವಚ್ಚಗೊಳಿಸಲು ಹೋದಾಗ ಆ ಮನೆಯ ಮಕ್ಕಳ ಪೆನ್ನುಗಳು, ಪೆನ್ಸಿಲ್ ಗಳನ್ನು ಕಂಡು ಮನದಲ್ಲೆಲ್ಲೋ ಆಸೆ ಮೂಡಿ, ಇಷ್ಟು ದುಬಾರಿ ಪೆನ್ನು ನನ್ನ ಮಗಳು ಜನ್ಮದಲ್ಲೂ ಕಾಣಲಾರಳು..........ಈ ಪೆನ್ನುಗಳನ್ನು ಉಪಯೋಗಿಸಿ ಬರೆದರೆ ನನ್ನ ಮಗು ಪರೀಕ್ಷೆಯಲ್ಲಿ ಚೆಂದಾಕಿ ಬರೆಯಬಹುದೆಂದು ಏನೋ ಆಸೆ ಪಟ್ಟು ಅಲ್ಲಿದ್ದ ಎರಡು ಪೆನ್ನು, ಎರಡು ಪೆನ್ಸಿಲ್ ಗಳನ್ನು ತೆಗೆದು ತನ್ನ ಸೆರಗಿನಲ್ಲಿ ಕಟ್ಟುಕೊಳ್ಳುತ್ತಿರವಾಗಲೇ...... ಆ ಮನೆಯೊಡತಿ ಬಂದು ಬಿಡುತ್ತಾಳೆ..........ಹೌಹಾರಿದ ಮನೆಯೊಡತಿ ಏನು ಕೆಲಸ ಮಾಡುತ್ತಲಿದ್ದೀಯಾ, ಕಳ್ಳತನ ಮಾಡ್ತಾ ಇದ್ದೀಯಾ..?!!! ಹಿಂಗೆ ಎಷ್ಟು ದಿನ ಏನೇನು ತಗೊಂಡು ಹೋಗಿದ್ದೀಯಾ... ನಿಮ್ಮಂತವರಿಂದ ನಾವು ನೆಮ್ಮದಿಯಾಗಿರೊಕ್ಕೆ ಆಗೋಲ್ಲ.....ಎಂದ ಕೂಡಲೇ ಕಾಲಿಗೆ ಬಿದ್ದ ಚೆನ್ನಮ್ಮ ಅಮ್ಮ, ಕ್ಷಮಿಸಿ, ನಾನು ಇದೇ ಮೊಟ್ಟ ಮೊದಲು ನಿಮ್ಮ ಮನೆ ವಸ್ತು ಮುಟ್ಟಿದ್ದು ನಾನಾಗಿ ಎಂದೂ ಒಂದು ಹುಲ್ಲುಕಡ್ಡಿಯನ್ನೂ ನಿಮ್ಮ ಮನೆಯಿಂದ ತಗೊಂಡು ಹೋಗಿಲ್ಲಮ್ಮ...ದಯವಿಟ್ಟು ಕ್ಷಮಿಸಮ್ಮ.....ಈ ಪೆನ್ನುಗಳ ಕೊಡದಿದ್ದರೂ ಪರವಾಗಿಲ್ಲ ........ ವಾಪಸ್ ಇಟ್ಟುಬಿಡುತ್ತೇನೆ. ದಯವಿಟ್ಟು ನನ್ನ ಕ್ಷಮಿಸಮ್ಮ.......ನಿನ್ನ ಕ್ಷಮಿಸೋದಾ ಇಂದು ಚಿಕ್ಕದು ನಾಳೆ ದೊಡ್ಡದು....ಹೀಗೆ ಕಳ್ಳತನ ಮಾಡ್ತೀಯಾ.ಹೋಗು ನಮ್ಮ ಮನೆಗೆ ಕೆಲಸಕ್ಕೆ ಬರ್ಕೂಡದು ................ ಇನ್ನು ಯಾವತ್ತೂ ಈ ಕಡೆ ತಲೆ ಹಾಕ್ಬೇಡ ಎಂದು ಒಮ್ಮೆಲೇ ಆಚೆ ತಳ್ಳಿ ಬಾಗಿಲು ಜಡಿದು ಬಿಡುತ್ತಾಳೆ......

ಚೆನ್ನಮ್ಮ ತನ್ನ ಮಗಳಿಗೆ ಪೆನ್ನುಗಳು ತೆಗೆದುಕೊಂಡು ಬರುವಳೇ...?
ಆ ಮನೆ ಕೆಲಸದವಳು ಮತ್ತೆ ಮನೆಗೆ ಸೇರಿಸಿಕೊಳ್ಳುವಳೇ ಇಲ್ಲವೇ..?
ಕ್ಷಮಿಸಲಾರದಂತ ತಪ್ಪೇ ಇದು ....? ಮುಂದೇನಾಗುವುದೆಂದೆ ದೀಪ-೨ ರಲ್ಲಿ ನೋಡೋಣ..