Monday, December 31, 2012

ಅನಾಥ ಗುರು..


 -ಕಥೆ -
ಅನಾಥ ಗುರು..
ಇದು ನಮ್ಮ-ನಿಮ್ಮ ನಡುವಿನ ಜೀವನ


ನಾನು ಅಂದ್ರೇ ನನ್ನ ಅಪ್ಪ, ಅಮ್ಮ, ಅಣ್ಣಂದಿರು ಅಕ್ಕಂದಿರಿಗೆ ಪ್ರಾಣ...!!! ಚಿಕ್ಕವಳಾಗಿ ಹುಟ್ಟಬೇಕು ಎಲ್ಲರ ಪ್ರೀತಿ ಗಳಿಸಬೇಕು.. ಇದು ನಾನು ಬೆಳೆಯುತ್ತಿರುವಾಗ ನನ್ನೊಳ ಮನಸ್ಸಿಗೇ ಹೇಳಿಕೊಂಡ ವಿಷಯ. ನಾನಿನ್ನೂ ಹತ್ತನೇ ತರಗತಿ ಅಪ್ಪ ಅಮ್ಮ ಇಬ್ಬರೂ ನನ್ನನ್ನ ಬಿಟ್ಟು ಕಾಣದ ಲೋಕಕ್ಕೆ ಹೋಗಿಯಾಗಿತ್ತು, ಅಮ್ಮ ಇಲ್ಲದಿದ್ದರೂ ಅಕ್ಕಂದಿರಿದ್ದಾರೆ, ಅಪ್ಪ ಇಲ್ಲದಿದ್ದರೂ ಅಣ್ಣಂದಿರಿದ್ದಾರೆ ಎಂಬ ಧೈರ್ಯ ನನ್ನಲ್ಲಿತ್ತು. ಎಸ್. ಎಲ್. ಸಿ ಪರೀಕ್ಷೆ ಮುಗಿಸಿದೆ ರಜೆಯ ನೆಪವೊಡ್ಡಿ ಅಕ್ಕಂದಿರ ಮನೆಯಲ್ಲೇ ತಿರುಗಾಡಿ ಬಂದಿದ್ದೆ. ಅಣ್ಣ ಮುಂದಿನ ವಿಧ್ಯಾಭ್ಯಾಸಕ್ಕೆ ಕಳುಹಿಸುತ್ತಾನೆ ಎಂದುಕೊಂಡಿದ್ದೆ, ಆದರೆ ಅಣ್ಣ ಯಾಕೋ ಮನಸೇ ಮಾಡಲಿಲ್ಲ. ಇದ್ದ ಇನ್ನಿಬ್ಬರು ಅಣ್ಣಂದಿರನ್ನ ಕೇಳಿದರೆ ಬೇಡ ಮಗಳೇ ನಿನ್ನನ್ನ ಮುದ್ದಾಗಿ ಬೆಳೆಸಿದ್ದೀವಿ ನೀನು ಕಾಲೇಜ್ ಗೆ ಎಂದು ಹೊರಗಡೆ ಹೋದರೆ ಬರುವವರೆಗೂ ನಮಗೆ ಭಯ, ನಿನಗೆ ಯಾವುದೇ ಕೊರತೆ ಇಲ್ಲದೆ ನಿನ್ನ ನಾವು ಸಾಕುತ್ತೇವೆ... ಈ ಪ್ರೀತಿ ಅಣ್ಣಂದಿರ ಮೇಲೆ ನಂಬಿಕೆ ಇಲ್ಲವೇ..!! ಕಂದ, ಮನೆಯಲ್ಲೇ ಆರಾಮಾಗಿ ಇದ್ದು ಬಿಡು ಎಂದು ಅಣ್ಣಂದಿರು ಹೇಳಿದಾಗ..ನನ್ಗೆ ಆಕಾಶ ಎರಡೇ ಗೇಣು...!! ಎಂತಹ ಪ್ರೀತಿ?? ಅಬ್ಬಾ!! ನಾನೇ ಧನ್ಯಳು ಎಂದೆನಿಸಿತು.

ಅಣ್ಣಂದಿರ ಮುದ್ದಿಗೆ ಮನೆಯಲ್ಲೇ ಉಳಿದೆ. ಇದೆಲ್ಲದರ ನಡುವೆಯೇ ಅತ್ತಿಗೆಯಂದಿರು ಮನೆ ತುಂಬಿಕೊಂಡಿದ್ದರು, ಮೂವರು ಅಣ್ಣಂದಿರು, ಅತ್ತಿಗೆಯಂದಿರಿಗೆ ನನ್ನ ಮೇಲೆ ಪ್ರೀತಿ, ಕಾಳಜಿ ಎಲ್ಲವೂ ಇತ್ತು. ನಾನು ಸಹಾ ಅತ್ತಿಗೆಯರನ್ನೂ ಬಹಳಷ್ಟು ಹೊಂದುಕೊಂಡುಬಿಟ್ಟಿದ್ದೆ. ಅತ್ತಿಗೆಯಂದಿರೂ ತಮ್ಮ ಬಾಣಂತನಕ್ಕೊ ಹೋಗದೇ ನನ್ನ ಮೇಲಿನ ಕಾಳಜಿಗೋ ಅಥವಾ ಬಿಟ್ಟಿರಲಾರದೆಯೋ ಅವರೂ ಸಹ ತನ್ನ ತವರು ಮನೆಗಳತ್ತ ತಲೆ ಹಾಕಲಿಲ್ಲ. ಸದಾ ನನ್ನದೇ ಗುಣಗಾನ ನೀನು ನಮ್ಮ ತಾಯಿ ಇದ್ದಂಗೆ, ನಮ್ಮ ಸೇವೆ ಎಷ್ಟು ಚೆನ್ನಾಗಿ ಮಾಡ್ತೀ, ಮಕ್ಕಳನ್ನೆಲ್ಲಾ ಪ್ರೀತಿಸ್ತೀ ನಿನ್ನ ಪಡೆದದ್ದೇ ಪುಣ್ಯ ಎಂದು ಹೇಳಿದರೆ ಭೂಮಿ ಮೇಲೆ ನಿಲ್ಲಲಾಗದೇ ತೇಲಾಡುವ ಹಾಗೆ ಆಗ್ತಾ ಇದ್ದದ್ದಂತೂ ಸತ್ಯ.

ಕನಸು ಕಾಣುವ ವಯಸ್ಸು ನನ್ನದು, ವಯಸ್ಸಿಗೂ ಮೀರಿದ ಆಸೆ, ಆಕಾಂಕ್ಷೆಗಳು ನನ್ನನ್ನ ಕಾಡುತ್ತಲೇ ಇದ್ದವು, ಮದುವೆಯ ವಯಸ್ಸಾಗಿದೆ ನನಗೂ ಎನ್ನುವುದಕ್ಕಿಂತ, ನಾನೂ ಒಬ್ಬನ ಆಸರೆಯ ಬೆಚ್ಚನೆಯ ಸುಖದಲ್ಲಿ ಬಾಳಬೇಕು ಎಂಬ ತುಮುಲ ಸದಾ ಕಾಡುತ್ತಲೇ ಇತ್ತು. ಅಕ್ಕ-ಪಕ್ಕದ ಮನೆಯಲ್ಲಿದ್ದ ನನ್ನ ಸ್ನೇಹಿತೆಯರು ಮದುವೆಯಾಗಿ ಬಾಣಂತನಕ್ಕೆ ತವರಿಗೆ ಬಂದಿದ್ದಾರೆ. ನನ್ನ ಆಪ್ತ ಗೆಳತಿ ಜಾನುಗೆ (ಜಾನಕಿ) ಎಂಥಾ ಮನೆ ಸಿಕ್ಕಿದೆ ಎಂದರೆ ತಂದೆಯ ಮನೆಯಲ್ಲಿ ಎಂದೂ ಕಾಣದ ಸುಖದ ಸುಪ್ಪತ್ತಿಗೆಯ ಮನೆ, ಪ್ರೀತಿಸೋ ಗಂಡ ಸದಾ ಗಂಡನನ್ನೇ ಹೊಗಳುತ್ತಿದ್ದ ಜಾನುನ ನೋಡಿದ್ರೇ ನಾನೂ ಮದುವೆಯಾಗಬೇಕು, ನನಗೂ ಅಂತಹ ಗಂಡ ಬೇಕು ಎಂಬಂತಾಗುತ್ತಿತ್ತು. ಜಾನೂ ಬಾಣಂತನಕ್ಕೆ ಬಂದರೆ ಅವಳನ್ನು ಬಿಟ್ಟಿರಲಾರದೇ ಓಡೋಡಿ ಬರುವ ಅವಳ ಗಂಡ, ಕೈಯಲ್ಲಿ ಹಿಡಿದುತರುವ ಗುಲಾಬಿ, ಮಲ್ಲಿಗೆ ಹೂ ಹಣ್ಣು ಕಾಯಿಗಳಲ್ಲೇ ಹೆಂಡತಿಯನ್ನು ಕಾಣುವ ಅವನ ಸಂಭ್ರಮ ನೋಡಿಯೇ, ನನ್ನಲ್ಲಿ ಹೊಸ ಆಸೆ ಅಂಕುರಿಸಿತ್ತು. ಇಷ್ಟೆಲ್ಲಾ ಆಸೆಗಳನ್ನು ಹೇಳಿಕೊಳ್ಳಲು ಎಷ್ಟೇ ಆಪ್ತರು, ಪ್ರೀತಿಸುವವರು ಇದ್ದರೂ ಯಾರೊಂದಿಗೂ ನನ್ನ ಆಸೆ ಬಿಚ್ಚಿಡಲಾಗಲೇ ಇಲ್ಲ.

ಸಂಜೆಯ ಕತ್ತಲು ಕವಿಯುವ ಮುನ್ನ ನೆಂಟರು ನನ್ನ ಬಾಳಿನ ಬೆಳಕನ್ನು ಹಚ್ಚಲು ಬಂದರು, ದೂರ ಸಂಬಂಧಿಕರು ಯಾವುದೋ ಒಂದು ಗಂಡಿನ ಜಾಡು ಹಿಡಿದು ಬಂದಿದ್ದರು, ಅಣ್ಣಂದಿರು, ಅಕ್ಕಂದಿರು ಅತ್ತಿಗೆಯರೂ ಎಲ್ಲರೂ ಸೇರಿದ್ದರು. ಒಬ್ಬರ ಮುಖ ಒಬ್ಬರು ನೋಡುಕೊಳ್ಳುತ್ತ ನಮಗೆ ನನ್ನ ತಂಗಿಯನ್ನು ಬೇರೆ ಮನೆಗೆ ಕಳುಹಿಸುವ ಮನಸೇ ಇಲ್ಲ. ನನ್ನ ತಂಗಿ ಬೇರೊಂದು ಮನೆಗೆ ಹೋದರೆ ಎಲ್ಲಿ ನಲುಗುವಳೋ ಎಂಬ ನೋವು ಕಾಡುತ್ತಿದೆ. ಅಣ್ಣಂದಿರ ಮಾತಿಗೆ ಅಕ್ಕಂದಿರು ಹೀಗೆಲ್ಲ ಹೇಳಿದರೆ ಹೇಗೆ ಮನೆ ಮಗಳು ಎಷ್ಟು ದಿನವೆಂದು ಮನೆಯಲ್ಲಿರಲು ಸಾಧ್ಯ?. ಮದುವೆ ಎಂಬುದು ಹೆಣ್ಣಿನ ಜೀವನದ ಅತಿ ಮುಖ್ಯ ಘಟ್ಟ. ಅವಳನ್ನು ಧಾರೆ ಎರೆದು ಕೊಡಿ ಎಂಬ ಮಾತಿಗೋ ಏನೋ ಒಟ್ಟಲ್ಲಿ ನನ್ನ ಜೀವನದಲ್ಲೂ ಮದುವೆ ಭಾಗ್ಯ ಒಲಿದು ಬಂದಿತ್ತು.

ಅಪ್ಪ,ಅಮ್ಮ ನನಗಾಗೇ ಮಾಡಿಸಿಟ್ಟಿದ್ದ ಒಡವೆ, ವಸ್ತುಗಳ ಜೊತೆ ಅಣ್ಣಂದಿರು ಎಲ್ಲರೂ ಕೂಡಿ ಗಂಡಿಗೆಂದು ಹಣ, ಆಸ್ತಿ ಎಲ್ಲವನ್ನೂ ನೀಡಿ ಅತಿ ಅದ್ದೂರಿಯಲ್ಲಿ ಮದುವೆ ಕಾರ್ಯ ನೆರೆವೇರಿಸಿದರು. ಗಂಡ ಎಂಬ ಕಲ್ಪನೆಯೇ ನನ್ನಲ್ಲಿ ಬೇರೆ ಇತ್ತು. ಸದಾ ಪ್ರೀತಿ, ಕಾಡುವವ ನನ್ನೆಲ್ಲ ನೋವು ನಲಿವಿಗೆ ಸ್ಪಂದಿಸುವವ ಹೀಗೆ ಹಲವು ಕನಸಿನ ಸೌಧವನ್ನೇ ಕಲ್ಪಿಸಿಕೊಂಡಿದ್ದೆ, ಅದಕ್ಕೆ ತಕ್ಕಂತ ಗಂಡನೂ ಸಿಕ್ಕಿದ್ದ. ಸದಾ ನನ್ನ ಒಳಿತನ್ನೇ ಬಯಸುವ ಗಂಡ, ಮನೆಗೆ ಎಂದೂ ತಡಮಾಡದೆ ಸಮಯಕ್ಕೆ ಸರಿಯಾಗಿ ಬರುವುದು, ಎಂದೂ ತಪ್ಪಿಸದೇ ನನ್ನ ಮುಡಿಯನ್ನು ಮಲ್ಲಿಗೆಯ ಹೂಮಾಲೆಗಳಲ್ಲಿ ಅಲಂಕರಿಸುವ ಪರಿ ಎಲ್ಲವೂ ವಿಶಿಷ್ಟವೇ ಆಗಿತ್ತು. ನನ್ನ ಮದುವೆ ತಡವಾಗಿಯಾದರೂ ಒಂದು ಅರ್ಥಪೂರ್ಣ ಮದುವೆಯಾಗಿರುವೆ ಎಂಬ ಭಾವನಾಲೋಕದಲ್ಲಿ ತೇಲುವ ಮೊದಲ ಘಟ್ಟದಲ್ಲೇ........!!! ನನ್ನವನ ತಡ ರಾತ್ರಿ ಆಗಮನ ಯಾಕೋ ಭಯ ಸೃಷ್ಟಿಸಿತ್ತು.

ದಿನಗಳೂ ಕಳೆದಂತೆ ತಡ ರಾತ್ರಿಗಳು ತಡವಾದ ದಿನಗಳಾಗಲು ಪ್ರಾರಂಭವಾಯ್ತು, ಕಾರಣ ಹುಡುಕ ಹೊರಟರೇ ಗಂಡನ ಕಣ್ಣ ಕಂಬನಿ ನನ್ನನ್ನೇ ಕರಗಿಸಿಬಿಟ್ಟಿತ್ತು. ಕೆಲಸದ ಹೆಸರಿನಲ್ಲಿ ಎಲ್ಲವೂ ಡೋಲಾಯಮಾನವಾಗಿದೆ ಹಣವಿಲ್ಲದೇ ಕೈಚೆಲ್ಲಿ ಕೂರಬೇಕಿದೆ. ಸಾಲ-ಸೋಲಗಳು ಬೆಂಬೆತ್ತಿ ಕಾಡುತ್ತಿದೆ ನಾನು ಬದುಕುವುದೇ ಕಷ್ಟ ಎಂಬ ಮಾತುಗಳು ನನ್ನ ಹೃದಯವನ್ನು ಘಾಸಿಗೊಳಿಸಿತ್ತು. ಗಂಡನಿಗಿಂತ ಹೆಚ್ಚಿನದು ಏನೆಂದು ಅಣ್ಣಂದಿರು ಕೊಟ್ಟಿದ್ದ ಹಣ,ಆಸ್ತಿ ಎಲ್ಲವನ್ನೂ ಮಾರಿ ಕೈ ತುಂಬಿ ಚೆಲ್ಲುವಷ್ಟು ಹಣವನ್ನು ನನ್ನವನ ಕೈಗೆ ನೀಡಿದ್ದೆ. ಅಂದು ಆ ರಾತ್ರಿ ಎಂದೂ ಮರೆಯದ ರಾತ್ರಿ ಗಂಡ ನನ್ನಲ್ಲಿ ತೋರಿಸಿದ ಪ್ರೀತಿ, ಗೌರವ, ಪೂಜನೀಯ ಭಾವನೆ ಯಾರಿಗೂ ಸಿಗಲಾರದೆಂದು ಭಾವಿಸಿದ್ದೆ.

ಮನೆ, ಆಸ್ತಿ, ಒಡವೆ ಎಲ್ಲವನ್ನು ಮಾರಿದ ಹಣದಿಂದ ಸಾಲಗಳನ್ನು ತೀರಿಸುತ್ತಿರುವೆ. ಈಗಿರುವ ಮನೆ ಇನ್ನೇನು ಕೆಲ ದಿನಗಳಲ್ಲಿ ಖಾಲಿ ಮಾಡಬೇಕು, ನಾವು ಬಾಡಿಗೆ ಮನೆಗೆ ಹೋಗೋಣ ಎಂದು ಪುಟ್ಟ ಮನೆಯಲ್ಲಿ ಅರಸಿಯಾಗಿ ಕೂರಿಸಿದರು. ಇತ್ತ ದೂರದ ಊರಲ್ಲಿ ಯಾರಿಗೋ ಸಾಲ ನೀಡುವ ನೆಪ ಒಡ್ಡಿ ಅಂದು ನನ್ನ ಬಿಟ್ಟು ಹೋದವ ಹಿಂದಿರುಗಿ ಬರಲೇ ಇಲ್ಲ, ಬಾಡಿಗೆ ಹಣ ಕಟ್ಟಲು ನನ್ನಲ್ಲಿ ಏನೂ ಇಲ್ಲ, ಇದ್ದ ಅಡ್ವಾನ್ಸ್ ಹಣದಲ್ಲಿ ಜಮಾ ಆಗುತ್ತಲೇ ಬರುತ್ತಿದೆ. ಇತ್ತ ೬ ತಿಂಗಳು ಕಳೆಯುತ್ತೆ ಅಡ್ವಾನ್ಸ್ ಕೂಡ ಖಾಲಿಯಾಗುತ್ತೆ ಮನೆಯೊಡತಿ ಇನ್ನೇನು ಕತ್ತು ಹಿಡಿದು ದಬ್ಬಬೇಕಾಗಿತ್ತು... ತಕ್ಷಣ ಅಣ್ಣಂದಿರ ನೆನಪು...

ನನ್ನ ಅಣ್ಣಂದಿರು ಎಂದೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಅಣ್ಣಂದಿರ ಮನೆ ಹೊಕ್ಕೆ, ಮೂರು ದಿನಗಳು ಅಲ್ಲಿಯೇ ಇದ್ದೆ ಅಣ್ಣಂದಿರು ಗಂಡ ಎಲ್ಲಿ ಏನು ಬಂದಿದ್ದು, ಯಾವ ವಿಷಯವಿಚಾರ ವಿನಿಮಯವಿಲ್ಲದೇ, ಸಂಬಂಧಿಕಳಾಗಿ ೪ ದಿನ ಕಳೆದೆ, ಕೊನೆಗೆ ನಾನೇ ಬಾಯಿಬಿಟ್ಟೆ.. ಅಣ್ಣ..!! ನನ್ನ ಗಂಡ ಹೀಗೆ ಮಾಡಿದ್ದಾನೆ ಎಲ್ಲಿ ಹೋದರೋ ಗೊತ್ತಿಲ್ಲ, ನನ್ನ ಬಾಡಿಗೆ ಮನೆಗೆ ಬಿಟ್ಟು ಹೋದವರು ಬರಲೇ ಇಲ್ಲ..!!  ಎಂದು ಬಿಕ್ಕಳಿಸುವಾಗ ಸಾಂತ್ವಾನಿಸುವ ಕೈ ಚಾಚುತ್ತ ಯಾರು ಬರಲೇ ಇಲ್ಲ. ಮತ್ತೂ ದುಃಖ ತಡೆಯಲಾರದೆ ಮನಸ್ಸು ಕುಗ್ಗಿ ಹೋಗಿತ್ತು. ಅತ್ತಿಗೆಯಲ್ಲೂ ಮೊದಲಿದ್ದ ಪ್ರೀತಿಯಿಲ್ಲಾ, ಎಲ್ಲವೂ ಅಯೋಮಯವೆನಿಸಿತು...ಇಷ್ಟೆಲ್ಲಾ ನೆಡೆದರೂ ನಾನು ಇಲ್ಲಿರುವುದು ಒಳಿತಲ್ಲವೆಂದು ಮನೆಬಿಡುವ ಸಮಯ ಅಣ್ಣಂದಿರಲ್ಲೊಬ್ಬ ನೋಡು..!! ನೀನು ಹಣ,ಆಸ್ತಿ,ಮನೆ ಇವನ್ನೆಲ್ಲಾ ಮಾರುವಾಗ ನಾವು ಇರಲಿಲ್ಲವೇ..? ನಿನಗಾಗಿ ಅಷ್ಟೆಲ್ಲಾ ಮಾಡಿದರೆ, ನೆನ್ನೆ ಮೊನ್ನೆ ಪರಿಚಿತನಾದವನೇ ನಿನಗೆ ಹೆಚ್ಚಾಯಿತಾ..!! ಅವನು ಗಂಡನೇ ಇರಬಹುದು, ಆದರೂ ಅಪ್ಪನ ಮನೆಯ ಆಸ್ತಿ ಒಮ್ಮೆಯಾದರೂ ಒಪ್ಪಿಗೆ ಬೇಡವೇ..? ಎಂದು ಮುಖಕ್ಕೆ ಮಂಗಳಾರತಿ ಮಾಡಿ ಮನೆಯತ್ತ ಎಂದೂ ಯಾವ ಕಾರಣಕ್ಕೂ ಬರಬೇಡ, ದೈನೇ ಎಂದು ಬೇಡುವ ಸ್ಥಿತಿಗೆ ನಾವು ಕಳುಹಿಸಿರಲಿಲ್ಲಾ...!! ಎಂದು ಹೇಳಿ ಕಳುಹಿಸಿಬಿಟ್ಟರು.

ನಿಜ ನಾನು ಒಪ್ಪುತ್ತೇನೆ ತಪ್ಪು ಮಾಡಿದ್ದೀನಿ, ಅದೇನೋ "ಕೊಟ್ಟ ಹೆಣ್ಣು ಕುಲದಿಂದ ಹೊರಗೆ" ಎಂಬಂತೆ ನಾನು ಹೊರಗಿನವಳಾಗಿದ್ದೆ. ಮದುವೆಯಾದರೆ ಗಂಡನೇ ಎಲ್ಲಾ ಎಂದು ಭಾವಿಸಿ ಅವನನ್ನು ನಂಬಿ ನನ್ನದೆಲ್ಲದು ಅವನದಲ್ಲವೂ ಎಂದು ಭಾವಿಸಿ ಕೊಟ್ಟಿದ್ದೆ ಈಗ ಮೋಸಹೋದೆ. ಇತ್ತ ಅಣ್ಣಂದಿರೂ ಕೈ ಹಿಡಿಯಲಿಲ್ಲ, ಬಾಡಿಗೆ ಮನೆಯೇ ಗಟ್ಟಿ ಎಂದು ಮತ್ತದೇ ಮನೆಗೆ ಬಂದಾಗ ನನ್ನ ಮನೆಯ ಪಾತ್ರೆ-ಸಾಮಾನುಗಳೆಲ್ಲಾ ಮನೆಯ ಬಾಗಿಲಲ್ಲಿದ್ದವು, ಆಶ್ಚರ್ಯದಿಂದ ಏನಾಗಿದೆ ಎಂದು ತೋಚದಾಯ್ತು, ಮನೆಯೊಡತಿಯಲ್ಲಿ ಕೇಳಿದೊಡನೆ ನೋಡಮ್ಮ ಮನೆ ಬಾಡಿಗೆ ಇಲ್ಲಿಗೆ ಅಡ್ವಾನ್ಸ್ ವಜಾ ಆಗಿದೆ. ಮುಂದೆ ನಿನ್ನಿಷ್ಟ ಎಲ್ಲಾದರು ಬೇರೆ ಮನೆ ಮಾಡಿಕೊಂಡು ಹೋಗು ಎಂದು ಹೇಳಿಬಿಟ್ಟರು. ನನ್ನೊಳಗಿನ ಆತಂಕ ಇಮ್ಮಡಿಸಿತು, ಕಣ್ಣುಗಳು ಮಾತನಾಡಲು ಪ್ರಾರಂಭಿಸಿದವು, ಕರಗಳು ಬೇಡಿಕೆಗೆ ಮುಂದಾದವು.... ನನಗೆ ಯಾರೂ ಇಲ್ಲ ದಯವಿಟ್ಟು ಸಹಕರಿಸಮ್ಮ, ನಿಮ್ಮ ಮನೆಕೆಲಸ ಮಾಡಿಕೊಂಡು ಇರುತ್ತೇನೆ ನನಗೆ ಇರಲು ಜಾಗ, ಊಟ ಬಟ್ಟೆ ಕೊಟ್ಟರೆ ಸಾಕು ಎಂದು ಗೋಗರೆದು ಬೇಡಿದೆ. ಮನೆಯೊಡತಿ ಕೂಡ ಒಬ್ಬಳೇ ಇದ್ದಳು ಅವಳಿಗೆ ಇದ್ದ ಹೆಣ್ಣು ಮಕ್ಕಳೆಲ್ಲಾ ಬೇರಾವುದೋ ದೇಶದಲ್ಲಿ ನೆಲೆಸಿದ್ದರಿಂದ. ಕೈಗಾಸರೆಯಾಗುವಳೆಂದು ಮನಸ್ಸು ಒಪ್ಪಿ ನನ್ನನ್ನು ಅಲ್ಲಿಯೇ ಅವರ ಮನೆಯಲ್ಲೇ ಇರುವ ಹಾಗೆ ವ್ಯವಸ್ಥೆ ಮಾಡಿದರು.

ಇತ್ತ ನನ್ನ ಕಥೆಗೆ ಬೇರಾರೋ ಮರುಗಿದರೂ ನನ್ನವರೇ ಆದ ಅಣ್ಣ, ಅಕ್ಕಂದಿರು ಕರಗದೇ  ಹೋದರು, ಇತ್ತ ಕಟ್ಟಿಕೊಂಡ ಗಂಡ ಹೆಂಡತಿಯ ನೆನಪೇ ಇಲ್ಲದಂತಾದ. ಅಂದು ಅಣ್ಣಂದಿರು ತೋರಿಸಿದ್ದ ಪ್ರೀತಿ, ಗಂಡ ತೋರಿಸಿದ ಪ್ರೀತಿ ಎಲ್ಲವೂ ನಾಟಕವೇ..?? ಎಂಬ ಭ್ರಮೆಯಲ್ಲಿ ಮುಳುಗಿ ಹೋಗಿದ್ದೆ. ಕಾರಣ ಹುಡುಕ ಹೊರಟರೆ ಉತ್ತರ ಸಿಗಲೇ ಇಲ್ಲ. ಮತ್ತೊಮ್ಮೆ ಅಣ್ಣಂದಿರ ನೋಡೋ ಆಸೆ, ಗೊತ್ತಿಲ್ಲದವರ ಮನೆಯಲ್ಲಿ ಎಷ್ಟು ದಿನ ಹೊರೆಯಾಗಿ ಇರುವುದು ಎಂದು ಅಣ್ಣಂದಿರ ಆಶ್ರಯಕ್ಕೆ ಮತ್ತೆ ಹೊರಟೆ, ಅತ್ತಿಗೆಯಂದಿರ ಒಡಲಾಳದ ಪ್ರೀತಿ ಅಂದೇ ಅರ್ಥವಾಗಿದ್ದು, ಅತ್ತಿಗೆಯಂದಿರ ಮಕ್ಕಳ ಸಾಕುವಾಗ ನನ್ನ ನೆರವು ಬೇಕಿತ್ತು, ಮನೆಯಲ್ಲಿ ಕಸ ಮುಸುರೆ ತೊಳೆಯಲು ಹೆಣ್ಣು ಬೇಕಿತ್ತು ಇದೇ ಕಾರಣಕ್ಕೆ ಮದುವೆ ಮಾಡದೆ ಪ್ರೀತಿಯ ನೆಪವೊಡ್ಡಿದ್ದರು.... ಇನ್ನು ಗೆಂಡನೆಂಬವ ಪ್ರೀತಿಯ ಬಲೆ ಬೀಸಿ ನನ್ನನ್ನೇ ಬರಿದು ಮಾಡಿದ್ದ. ಅವನ ಪ್ರೀತಿ ಅರಿವಾಗಿದ್ದು ನನ್ನ ಹಳೆಯ ಮನೆ ನೋಡುವ ಮನಸಾಗಿ ಹೋದಾಗ, ಅಲ್ಲೂ ಆಘಾತವೇ ಕಾದಿತ್ತು ನನ್ನ ಗಂಡನೇ ಆ ಮನೆಯ ಒಡಯನಾಗಿದ್ದ ಕಾರಣ ಇಷ್ಟೇ ತಾನು ಪ್ರೀತಿಸಿದವಳನ್ನ ಮದುವೆಯಾಗಿ ನನ್ನ ಹೆಸರಲ್ಲಿದ್ದ ಆಸ್ತಿ ಅವಳದಾಗಿದ್ದು ತಿಳಿದಿದ್ದು ಇಂದೇ. ನಾನೊಬ್ಬಳು ಮೂಢಳು ಪ್ರೀತಿಯ ಅರ್ಥವೇ ಅರಿವಾಗಿಲ್ಲ, ಅರಿವಾಗುವಷ್ಟರಲ್ಲಿ ಜೀವನವೇ ಮುಗಿದಿತ್ತು. ತನ್ನೆಲ್ಲಾ ಕಷ್ಟಗಳ ಬರವಣಿಗೆಯಲ್ಲಿ ಅಳಿಸಿ, ತಿದ್ದಿ-ತೀಡಿ ಬರೆಯಲು ಸಾಧ್ಯವಾಗದಂತಹ ಆಘಾತಕರ ಸ್ಥಿತಿಯನ್ನು ಮುಟ್ಟಿದ್ದೇನೆ. ಇನ್ನೇನಿದ್ದರೂ  ಅಪರಿಚಿತರ ಆಶ್ರಯವೇ ಲೇಸು. ಒಂಟಿ ಬಾಳಿಗೆ ಅನಾಥ ಪ್ರಜ್ಞೆ ಬೆಂಬಿಡದೆ ಕಾಡುವುದನ್ನು ಮರೆಮಾಚಲು ನನ್ನ ಜೀವನ ಸೃಷ್ಟಿಸಿಕೊಳ್ಳಲು ಅನಾಥಾಶ್ರಮದ ಶಾಲೆಯಲ್ಲಿ ಅನಾಥ ಮಕ್ಕಳಿಗೆ ಗುರುವಾಗಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು ಅನಾಥ ಗುರು..!!


Thursday, December 13, 2012

ಯಾವ ಹೆಸರು ಯಾರ ಹೆಸರಿಗೋ...

ಸಿ.ಇ.ಓ ಕರೆ....

ಓ ಗಾಡ್, ಏನ್ ಕಾದಿದೆಯಪ್ಪೋ ಮೊದಲೇ ಕೊರೆಯುತ್ತೆ ಈ ಯಪ್ಪಾ... ಅಂದುಕೊಂಡು ಒಳಗೆ ಹೋದೆ..!! ಕರ್ಮ, ಅದೇನೋ ಹೇಳ್ತಾರಲ್ಲಪ್ಪಾ ಸಿಗಾರ್ ಸೇದಿರುವ ವಾಸನೆ ಗಬ್ಬ್ ಅಂತಾ ಇದೆ... ನನ್ಗೋ ಒಳಗೆ ಹೋಗ್ತಾ ಇದ್ದ ಹಾಗೆ ಕೆಮ್ಮೋ ಕೆಮ್ಮು... ಸಾರಿ... ಸ್ಮೋಕ್ ಮಾಡಿದ್ದೆ ಅಂದ್ರು ಬಾಸ್, ಆಯ್ತಪ್ಪಾ ಈಗ ಕರೆದಿದ್ದೇನು ಅಂದೇ..!!

ಯಾರು ಇದು ಸಯ್ಯದ್..?

ಯಾವ ಸಯ್ಯದ್, ಎಲ್ಲಿದ್ದಾರೆ ಏನು ಕಥೆ..? ಎಂದು ಮರು ಪ್ರಶ್ನೆ ಹಾಕಿದೆ... 

ನೀವು ಮುಸ್ಲಿಮ್ಮಾ, ಐ ಥಿಂಕ್... ಹಿಂದು ಅಲ್ಲವಾ??... ನಿಮ್ಮಲ್ಲೂ ಸೈಯ್ಯದ್ ಅಂತಾ ಹೆಸರು ಇರುತ್ತಾ..?

ನಾನು ಮುಸ್ಲಿಮ್ ಅಲ್ಲಾ, ಈಗ ಏನು ವಿಷಯ ಹೇಳಿ...(ಸದ್ಯ ಅಲ್ಲಿಂದ ಓಡಿದ್ರೇ ಸಾಕಿತ್ತು. ಆ ವಾಸನೆಗ ನಿಲ್ಲೋಕ್ಕೆ ಆಗ್ತಿಲ್ಲ)

ಯಾವುದೋ ಪೇಪರ್ ಗಳನ್ನು ತಿರುವಿ ಹಾಕಿ. ನೋಡಿ, ಇಲ್ಲಿ ಯಾರು..? ಇದು ನಿನ್ನ ಹೆಸರಿನ ಜೊತೆ 'ಸಯ್ಯದ್ ಆಲಿಂಗಪ್ಪಾ'   ಮತ್ತು ಮಫೂನ್ ಅಂತಾ ಇದೇ ನಿನ್ನ ಗಂಡನ ಹೆಸರು ಮಹೇಶ್ ಅಲ್ಲ್ವಾ? ಎಂದು ಕೇಳಿದರು

ಹೌದು ಮಹೇಶ್ ನನ್ನ ಗಂಡನ ಹೆಸರು... ಮನು ವಚನ್ ನನ್ನ ಮಗನ ಹೆಸರು..

ಹಾಗಾದ್ರೆ ಈ ಸೈಯ್ಯದ್ ಯಾರು..?

ಅದು ನನ್ನ ಗಂಡನ ಹೆಸರಿಗೆ ಇನ್ನೊಂದು ಹೆಸರು ಕೊಟ್ಟಿದ್ದಾರೆ ಈ ಕುವೈತಿಗೆ ಬಂದ ಮೇಲೆ..!! ಅಂತೇಳಿದೆ.. 

ನನ್ನವರ ಹೆಸರು ಸಿದ್ದಲಿಂಗಪ್ಪ ಮಹೇಶ್ ಎಂದು ಅಪ್ಪನ ಹೆಸರಿನ ಜೊತೆ ಅವರ ಹೆಸರು ಇದೆ. ಕುವೈತಿಗೆ ಬಂದ ಹೊಸತರಲ್ಲಿ ನನ್ನವರ ಹೆಸರಿನಲ್ಲಿ ರೆಸಿಡೆನ್ಸಿ, ಸಿವಿಲ್ ಐಡಿ ಮಾಡಿಸುವಾಗ ಅವರ ಹೆಸರನ್ನು ಅರೆಬಿಕ್ ಗೆ ಬರೆಯುವ ಸಂದರ್ಭದಲ್ಲಿ ಹೀಗೆ ಮಾಡಿಬಿಟ್ಟಿದ್ದಾರೆ. ಮತ್ತೆ ಬದಲಿಸಲು ಹೋದಾಗ ಅರಬೀ ಭಾಷೆಯಲ್ಲಿ ಸಿದ್ದಲಿಂಗಪ್ಪ ಎಂಬ ಹೆಸರನ್ನು ಸೈಯ್ಯದ್ ಆಲಿಂಗಪ್ಪಾ ಎಂದೇ ಬರೆಯೋದು ಎಂದು ಸಮಜಾಯಿಶಿ ಕೊಟ್ಟರಂತೆ... :)

ಕೊನೆಗೆ ನನ್ನ ಮಾತು ಕೇಳಿಸಿಕೊಂಡು ನಮ್ಮ ಬಾಸ್ ಹಾಗು ಜೊತೆಯಲ್ಲೇ ಇದ್ದ ನಮ್ಮ ಕಛೇರಿಯವರು ನಗುತ್ತಲೇ... ಸೈಯ್ಯದ್ ಹೆಂಡತಿ ಎಂದು ರೇಗಿಸುತ್ತಲೇ ಇದ್ದರು.

ಮತ್ತೆ ಮಗನಿಗೂ ಹೀಗೇ ಆಗಿದ್ದಾ..? ಹೌದು ಅಂದೇಳಿದೆ 

ಮನು ವಚನ್ ಹಿಂದಿ ಪಿಲ್ಮ್ ಆಕ್ಟರ್ ಇದಾರಲ್ಲಾ ಅಮಿತಾ ಬಚನ್ ಹಂಗಾ ಹೆಸರು ಅದೇ ಫ್ಯಾಮಿಲಿನಾ ಅಂದ್ರು... ಹೂ ಅದೇ ತರನೇ ಆದರೆ ನಾವು ಆ ಫ್ಯಾಮಿಲಿ ಅಲ್ಲ ಅಂದೇ..ಹಹಹ (ಹೇಗೋ ಈಜಿಪ್ಟ್ ಜನಕ್ಕೆ ನಮ್ಮ ಭಾರತದ ನಟರ ಬಗ್ಗೆ ಗೊತ್ತಲ್ಲಾ ಅಂತಾ ಖುಷಿ ಆಯ್ತು).


ಇದೊಂದೇ ಘಟನೆ ಅಲ್ಲಾ.... ಎಲ್ಲಿಗೇ ಹೋಗಲಿ ನನ್ನವರನ್ನು ಸೈಯ್ಯದ್ ಎಂದೇ ಕರೆಯುತ್ತಾರೆ.. ಮನೆಯ ವಾಚ್ ಮನ್ ಸಹಾ "ಹಾ..!! ಸೈಯ್ಯದ್... ಆ..!! ಸೈಯ್ಯದ್..." ಎನ್ನುತ್ತಲೇ ಕರೆಯುತ್ತಾನೆ ಜೊತೆಗೆ ಒಮ್ಮೆ ನಮಾಜ್ ಮಾಡೋಕ್ಕೆ ಬರೋಲ್ವಾ ಎಂದು ಕರೆದಿದ್ದಾ. ಇಲ್ಲ ನಾವು ನಮಾಜ್ ಮಾಡೋಲ್ಲಾ ಎಂದಾಗ ಸೈಯ್ಯದ್ ಎಂದು ಹೆಸರಿದೆ ಮತ್ತೆ..?? ಹೂ ಹೆಸರಿದೆ ಅದು ಕುವೈತ್ ಜನ ಬದಲಿಸಿರೋದು ಎಂದು ಹೇಳಿದ್ದರು. :) ಇನ್ನು ಮಾತ್ತಾರಾದರು ಅರಬೀ ಜನ ಅವರ ಸಿವಿಲ್ ಐಡಿ ನೋಡಿದರೆ ಸಾಕು ಸೈಯ್ಯದ್ ಎಂದೇ ಕರೆಯುವುದು. 

ನಾನು ಸಹ ನನ್ನವರು ಎಲ್ಲಿಗಾದರು ಹೊರಟರೆ ಸೈಯ್ಯದ್ ಅಲಿಂಗಪ್ಪಾ ಎಂಬುದನ್ನು ಸ್ವಲ್ಪ ಬದಲಿಸಿ ಸೈಯ್ಯದ್ ಎಲ್ಲಿಗಪ್ಪಾ..?? ಎಂದು ಕೇಳುತ್ತೇನೆ. 

ಇನ್ನು ನನ್ನ ಮಗನ ಹೆಸರು ಮನುವಚನ್ ಇರುವುದು ಮಫೂನ್ ಮಾಡಿದ್ದಾರೆ ಒಂದು ರೀತಿ ಬಫೂನ್ ಆದಂಗೆ ಆಯ್ತು ನೋಡಿ..:)

ಈ ರೀತಿ ಇರುವ ಹೆಸರೇ ಬದಲಾದರೆ ತಮಾಷೆ ಜೊತೆಗೆ ಮುಜುಗರವೂ ಇರುತ್ತದೆ ಅಲ್ಲವೇ..???:) :)

ಸೈಯ್ಯದ್ ಅಲಿಂಗಪ್ಪಾ, ಅ..ಲಿಂಗ ಅಪ್ಪ... ಆಲಿಂಗ ಅಪ್ಪಾ, ಎಲ್ಲಿಗಪ್ಪಾ ಹೀಗೆ ನಿಮ್ಮ ಕಲ್ಪನೆಗೆ ಬಂದಂತೆ ಹೆಸರನ್ನು ಬದಲಿಸಿ ಸದ್ಯಕ್ಕೆ ನಕ್ಕು ಬಿಡಿ :) :)

Sunday, September 30, 2012

ಹುಚ್ಚು ಹೆಚ್ಚಾಗಿದೆ..!!!


                       ಚಿತ್ರ ನೋಡಿ ಎಲೆ ಅಡಿಕೆ ಕಡ್ಡಿಪುಡಿ ತಿನ್ನೋ...ಹುಚ್ಚು ಹೆಚ್ಚಾಗಿದೆ...ಎಂದುಕೋ ಬೇಡಿ..!!


                                                                                     ಪೋಟೋ ಡಿ.ಜಿ ಮಲ್ಲಿಕಾರ್ಜುನ್ 


ಹೊರಗಡೆ ಹೋದ ಮಗ ಇನ್ನು ಬಂದಿಲ್ಲ ಎಂದು ಮನೆಯಿಂದ ಆಚೆ ಹೋಗಿ ಕಾಯಲು ನಿಂತೆ, ಇದ್ದಕ್ಕಿದ್ದಂತೆ  ನನ್ನ ಅಡ್ಡಗಟ್ಟಿ ಏನೋ ಮಾತನಾಡುತ್ತಲಿದ್ದಾಳೆ, ಅರ್ಥವಾಗುತ್ತಿಲ್ಲ, ಅಕ್ಷರಗಳನ್ನ ನುಂಗುತ್ತಲೇ ಇದ್ದಾಳೆ. ಇಪ್ಪತ್ತರ ಆಸುಪಾಸಿನ ಹುಡುಗಿ, ವಕ್ರ ಉಡುಗೆ, ಕೆದರಿದ ಗುಂಗುರು ಕೂದಲು, ಕೆಂಪು ಪಾಚಿ ಹಲ್ಲುಗಳು, ಕೈಕಾಲಲ್ಲಿ ನಿತ್ರಾಣವಿಲ್ಲ ಎನಿಸುತ್ತೆ... ಬಡಕಲು ದೇಹ.. ಕಣ್ಣುಗಳಲ್ಲಿನ ನಿರಾಶೆ ಎದ್ದು ಕಾಣುತ್ತಿದೆ ಅವಳ ಕೈಯಲ್ಲಿ ಏನೋ ಆಟದ ಕಡ್ಡಿ. ಹಾಗೆ ಸ್ವಲ್ಪ ಕಣ್ಣರಳಿಸಿ ಹಿಂದೆ ನೋಡಿದೆ ಅಲ್ಲೇ ಒಂದು ಪುಟ್ಟ ಮಗು ಆಟದ ಸಾಮಾನಿನೊಂದಿಗೆ ನಿಂತಿದೆ. ಮೊದಲ ಸಲ ನೋಡ್ತಾ ಇರೋ ಈ ಹುಡುಗಿ ಹತ್ತಿರ ನಾನು ಇಂಗ್ಲೀಷಿನಲ್ಲೇ ಮಾತನಾಡಿ ಏನು ಎಂದು ಕೇಳಿದೆ..!! ನೀನು(ನುವ್ವು) ಇಂಡಿಯಾ..?? ಅಂದಳು ಹೌದು, ಎಂದು ಸನ್ನೆ ಮಾಡಿದೆ. ಮತ್ತೆ ತೆಲುಗಿನವಳ ಅಂದಳು. ಇಲ್ಲ, ಏನು ಬೇಕು..? ಎಂದು ತೆಲುಗಿನಲ್ಲೇ ಮಾತನಾಡಿಸಿದೆ. 

ನೀನು ಮಾಲ್ಯಾ(MALYA)(ಕುವೈತಿನ ಒಂದು ಸಿಟಿ)ಗೆ ಹೋಗ್ತಾ ಇದ್ದೀಯಾ ಅಂದಳು, ಇಲ್ಲ..!! ನಾನು ಅಲ್ಲಿಗೆ ಹೋಗೋದಿಲ್ಲ ಅಂದೆ, ಹೋಗು ಒಂದು ಸರಿ ಅಂದಳು.. ಯಾಕೆ ಎಂದು ಕೇಳಿದ್ರೇ.. ನನಗೆ ಕಡ್ಡಿಪುಡಿ ಅಥವಾ ಹನ್ಸ್ ಬೇಕು ತಂದು ಕೊಡ್ತೀಯಾ.....? ನಿನಗೆ ಯಾಕೆ ಬೇಕು ಅದೆಲ್ಲಾ ಅಚ್ಚುಕಟ್ಟಾಗಿ ಊಟ ಮಾಡಿಕೊಂಡಿರು ಎಂದೇಳ್ತಾ ಇದ್ದ ಹಾಗೇ ಏನೋ ಮುಖಭಾವ ಕೋಪಕ್ಕೆ ತಿರುಗಿದಂತಾಗಿತ್ತು.. ನನಗೇ ಅದು ತಿಂದಿಲ್ಲಾ ಅಂದ್ರೇ ಹುಚ್ಚು ಹಿಡಿಯುತ್ತೇ... ತಂದುಕೊಡು ಇಲ್ಲಾ ಅಂದ್ರೇ "ನಿಮ್ಮ ಯಜಮಾನ ಇದಾರಲ್ಲಾ ಅವರಿಗೆ ಹೇಳಿ ತರಿಸಿಕೊಡು" ಎಂದ ಕೂಡಲೇ... "ನಾನು ದಂಗಾಗಿ ಹೋದೆ......!!!". ಸಾವರುಸಿಕೊಳ್ಳುತ್ತಲೇ............ ನೀನು ಕೆಲಸ ಮಾಡ್ತೀಯಲ್ಲಾ ಆ ಮನೆಯ ಯಜಮಾನರಿಗೆ ಹೇಳು.. ತರಿಸಿಕೊಡುವರು, ಅಯ್ಯೋ.. ಅದು ಯಾವ್ ಭಾಷೆ ತೂ.. ಬರೋದೇ ಇಲ್ಲ ನನ್ಗೆ ಅಂದಳು.. ಭಾಷೆ ಬರದೆ ಅರಬೀ ಮನೆಯಲ್ಲಿ ಆ ಮಗು ಜೊತೆ ಒಡನಾಟ, ಮನೆಮಂದಿಯೊಂದಿಗೆ ಮಾತುಕತೆ ಹೇಗಿರಬೇಕು ದೇವರೇ..!! ಇವಳು, ಎಂದು ಯೋಚಿಸ್ತಾ ನಿಂತೆ..!! 

ಏನು.... ಏನು ತಂದು ಕೊಡ್ತೀಯಾ..!!? ಎಂದು ಕೈ ಅಲ್ಲಾಡಿಸಿ ಕೇಳಿದರೆ ನನಗೆ ಉತ್ತರಿಸಲು ತೋಚಲೇ ಇಲ್ಲ..!! ಮನಸಲ್ಲೇ ನೂರಾರು ದ್ವಂದ್ವಗಳು.. ಅವಳ ನೋಡಿದರೆ ಪಾಪ ಎನಿಸುತ್ತೇ ಆದರೆ ಛೇ..!! ಈ ಕೆಟ್ಟ ಅಭ್ಯಾಸ ಎಲ್ಲಾ ಯಾಕೆ ಈ ಹುಡುಗೀಗೇ ಅಚ್ಚುಕಟ್ಟಾಗಿ ತಿಂದುಕೊಂಡಿರಬಾರದ ಅಥವಾ ಆ ಮನೆಯಲ್ಲಿ ಅವಳ ಹುಚ್ಚು ಹೆಚ್ಚಿಸುವಂತಾ ಘಟನೆಗಳು ನೆಡೆಯುತ್ತಾ ?. ಹೀಗೇ ಏನೇನೋ ಪ್ರಶ್ನೆಗಳು ನನ್ನೊಳಗೆ. ಒಬ್ಬ ಮನುಷ್ಯನನ್ನು ನೋಡಿ ಅವರು ಹೇಗೆ, ಏನೂ, ಎಂತವರು ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ. ಆದರೂ ನಾನು ಕೊನೆಗೂ ಅವಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಮೌನವಾಗೇ ನಿಂತು ಬಿಟ್ಟೆ....!!!

ನಾನು ಈ ಹುಡುಗಿ ನೋಡಿದ್ದು ಆಗಷ್ಟೇ..?? ಯಾವುದೋ ಅರಬೀ ಮಗುವನ್ನು ಅಪಾರ್ಟ್ಮೆಂಟ್ ಮುಂದೆ ಆಟವಾಡಿಸುತ್ತಾ ಇದ್ದಳು. ನಾವಿರುವ ಅಪಾರ್ಟ್ಮೆಂಟ್ ನಲ್ಲಿ ಯಾರೂ ಪರಿಚಯ ಇಲ್ಲ, ಪಕ್ಕದ ಮನೆಯಲ್ಲಿ ಯಾರಿದ್ದಾರೋ ಎಂಬುದು ೬ ವರ್ಷ ಕಳೆದರೂ ಇನ್ನೂ ಗೊತ್ತಾಗಿಲ್ಲ. ಅಂತಹದರಲ್ಲಿ ಮಹಡಿ ಮೇಲೆ ಯಾವುದೋ ಮನೆ ಕೆಲಸದ ಹುಡುಗಿ ಇಷ್ಟು ಜೋರು ಮಾಡಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಡು ಎಂದು ಹೇಳಬೇಕಾದರೆ "ಈ ಕಡ್ಡಿಪುಡಿಯೋ ಅಥವಾ ಆ ಮನೆಮಂದಿಯೋ ಎಷ್ಟು ಹುಚ್ಚು ಹಿಡಿಸಿರಬೇಡ....!!!???"


ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!! 

Tuesday, September 18, 2012

ನೆನಪಾಗ್ಯಾದಾ...!!!


ಕಳೆದ ಬಾರಿ ತವರಿಗೆ ಬಂದಿದ್ದ ಗಣಪ ಮತ್ತು ಅವರಮ್ಮ 
ಪೋಟೋ - ಮನುವಚನ್
----------

ನೆನಪಾಗ್ಯಾದಾ...!!!

ನನ್ನಪ್ಪ ನನ್ನಮ್ಮ..
ಕರೆ ಮಾಡಿ ಕರೆದ್ಯಾರ 
ಹೊಸ ಸೀರೆ ತಂದೀನಿ
ಕುಂಕುಮ ಅರಿಶಿನ-ಬಾಗೀನ
ಕೊಂಡೊಯ್ಯು ಬಾ ಎಂದಾರಾ...

ನನ್ನಣ್ಣ-ಅತ್ತಿಗೆ
ಮಾತಲ್ಲೇ ಬೈದಾರ
ಪ್ರತಿ ವರುಷ ಬರುವವಳು
ಈ ವರ್ಷ ಬಲು ಬೇಗ 
ಬಂದು ಹೊರೆಟೆಬಿಟ್ಟೆಯಲ್ಲಾ ಎಂದಾರಾ...

ನನ್ನಕ್ಕ-ಬಾವ
ಪ್ರತಿ ಸಲವು ಬಂದಾಗ
ಜೊತೆ ಜೊತೆಗೆ ಇದ್ದೇವು
ಹೋಳಿಗೆ ಹೂರಣದಿ
ನಿನ್ನ ನಗುವಾ ಕಂಡೇವು...

ಎಲ್ಲ ಪ್ರೀತಿ ಬೈಗುಳದಿ
ಊರ ಹಾದಿಯ ನೋಡುತ
ಮನಸ್ಯಾಕೋ ಒದ್ದಾಡಿ
ತವರೂರ ನೆನಸ್ಯಾದಾ..

ನಾನೊಬ್ಬ ಮಗಳೆಂದು
ಬಾವ ಕೊಡಿಸುತ್ತಿದ್ದ ಬಳೇ
ಅಣ್ಣ ಕೊಡುತಿದ್ದ ರೊಕ್ಕಾ
ಅಮ್ಮ ನೀಡುವ ಬಾಗಿನ
ಅಕ್ಕ ತೋರಿಸಿಕೊಡುವ ಪೂಜೆ
ಅತ್ತಿಗೆಯ ಕೈರುಚಿ ಅಡಿಗೆ
ಎಲ್ಲ ನೆನಪಾಗಿ 
ಕಣ್ಣು ಯಾಕೋ ಜಿನಿಗ್ಯಾದಾ..!!


ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು....

Thursday, September 6, 2012

ಮಿಥ್ಯದ ಹೂರಣ ಸತ್ಯದ ತೋರಣ...


ಬೆಂಗಳೂರಿಗೆ ಹೋಗಿದ್ದಾಗ ಒಂದಷ್ಟು ಪುಸ್ತಕಗಳನ್ನು ಗೀತಕ್ಕ ನನಗಾಗಿ ಓದಲು ಕೊಟ್ಟಿದ್ದರು. ನನಗೂ ಅವರ ಪುಸ್ತಕಗಳನ್ನು ಓದಬೇಕು ಎಂಬ ಆಸೆ ಬಹಳಷ್ಟಿತ್ತು.. ಅವರು ಸುಮಾರು ೧೦-೧೨(ಕರೆಕ್ಟ್ ಲೆಕ್ಕ ಬೇಕಂದ್ರೆ ಪೋಟೋ ನೋಡಿ) ಪುಸ್ತಕಗಳನ್ನು ಕೊಟ್ಟಿದ್ದರು ಇತ್ತೀಚೆಗೆ ಇವುಗಳಲ್ಲಿ ಯಾವುದು ಓದಲಿ ಎಂದು ಯೋಚಿಸುತ್ತಿದ್ದೆ ಆದರೂ ಅವುಗಳಲ್ಲಿ ಮಿಥ್ಯ ಕಥೆ ಯಾಕೋ ನನ್ನ ತಲೆಯಲ್ಲೇ ಗಿರಕಿ ಹೊಡೆಯುತ್ತಿತ್ತು.. ಎಲ್ಲರೂ ಈ ಪುಸ್ತಕ ಹಾಗಿದೆ ಹೀಗಿದೆ ಒಂದು ಗಂಡಿನ ಮನಸ್ಸನ್ನು ಅರಿತು ಬರೆದಿದ್ದಾರೆ ಎನ್ನುತ್ತಿದ್ದರು ನನಗೂ ಗಂಡಿನ ಮನದಾಳದ ಮಾತುಗಳನ್ನು ತಿಳಿಯುವ ಕುತೂಹಲದಲ್ಲಿ ಮಿಥ್ಯದ ಮೊದಲ ಪುಟ ತೆರೆಯುವ ಮುನ್ನ ಮುಖಪುಟದ ವಿನ್ಯಾಸದ ಹಿಂದಿನ ಅರ್ಥ ಹೆಣ್ಣು ಎತ್ತಲೋ ಮುಖ ಮಾಡಿದ್ದಾಳೆ ಗಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ... ಇಲ್ಲಿ ಗಂಡಿನ ಸಂಕಟ ಎದ್ದು ಕಾಣುತ್ತೆ ಹೆಣ್ಣು ಧೈರ್ಯದಿಂದಿದ್ದಾಳೆ ಎಂದೆನಿಸಿತು...ಮತ್ತೆ ಪುಟ ತಿರುಗಿಸುತ್ತಾ ನೆಡೆದಂತೆ ಮಿಥ್ಯದ ಬಾಗಿಲು ತೆರೆಯಿತು. 
ಚಿತ್ರ: ಮನುವಚನ್ 
ಕಾದಂಬರಿಯ ಮುಖ್ಯ ಪಾತ್ರಧಾರಿ ಪುರು (ಪುರುಷೋತ್ತಮ್) ಒಬ್ಬ ಮಧ್ಯಮ ವರ್ಗದ ಗಂಡು, ಅಪ್ಪ-ಅಮ್ಮ, ಹೆಂಡತಿ ಮಕ್ಕಳೊಂದಿಗಿನ ಸಂತೋಷದ ಜೀವನದಲ್ಲೂ ಕಾಣುವ ನೂರೆಂಟು ತುಮುಲ ಮನಸಿನ ಚಿತ್ರಣ. ವಿದ್ಯಾವಂತನಾಗಿ ನಾಲ್ಕಾರು ಜನರೊಂದಿಗೆ ಬೆರೆತು ಪ್ರಪಂಚದ ಜ್ಞಾನ ಉಳ್ಳವನೇ ಆದರೂ ಕೆಲವೊಮ್ಮೆ ತನ್ನ ಮನಸ್ಸಿನೊಳಗಿನ ಭಾವನೆಗಳಲ್ಲಿ ಕುಗ್ಗಿ ಹೋಗುತ್ತಾನೆ. ಇಲ್ಲಿ ಪುರು ತನ್ನ ಕಛೇರಿಯಲ್ಲಿ ಲೇಡಿ ಬಾಸ್ ನಿಂದ ಅನುಭವಿಸುತ್ತಿದ್ದ ಯಾತನೇ ಅನ್ನುವುದಕ್ಕಿಂತ ಒಂದು ರೀತಿ ಮುಜುಗರದ ಸಂಗತಿಗಳು ಸದಾ ಕಾಡುತ್ತಲೇ ಇದ್ದವು. "ಹೆಣ್ಣು ತಾನಾಗೇ ಬಯಸಿ ಬಂದರೆ ಯಾವ ಗಂಡು ಬಿಡುವುದಿಲ್ಲ" ಎಂಬುದು ಎಲ್ಲರ ಬಾಯಲ್ಲಿ ಬರುವ ಮಾತು... ಆದರೆ ೪೦ರ ಹರಯದ ಹೆಣ್ಣು ಗಂಡ ಎಲ್ಲೋ ದೂರದ ದೇಶದಲ್ಲಿದ್ದಾನೆ ಬೆಳೆದು ನಿಂತ ಮಗ ಅವನದೇ ಪ್ರಪಂಚದಲ್ಲಿದ್ದಾನೆ. ಇನ್ನು ಇವಳದು ಎಂಬ ಬದುಕು ಶೂನ್ಯತೆಯಲ್ಲಿ ತುಂಬಿದೆ. ದೂರದಲ್ಲಿ ನೆಲೆಸಿರೋ ಗಂಡ ಒಲ್ಲದ ಗಂಡನೂ ಸಹ ಆಗಬಹುದು...  ಎಲ್ಲೋ ಇರುವ ಗಂಡನನ್ನು ಕಾಯುತ್ತ ತನ್ನ ದಿನ ಜೀವನದಲ್ಲಿನ ಬಣ್ಣದ ಬದುಕನ್ನು ತನ್ನದೇ ನಿಟ್ಟಿನಲ್ಲಿ ಸೃಷ್ಟಿಸಿಕೊಳ್ಳ ಹೊರಡುತ್ತಾಳೆ.  ಈ ಬಣ್ಣದ ಬದುಕಿಗೆ ಬಣ್ಣ ಹಚ್ಚುವವ ಪುರುಷೋತ್ತಮನೇ ಯಾಕಾಗಬಾರದು ಸ್ಪುರದ್ರೂಪಿ, ಸಾಧುವಿದ್ದಂತೆ, ಮೊದಲೇ ಕಲೆಗಾರ ಚಿತ್ರ ಬಿಡಿಸುವವ ನನ್ನ ಬದುಕಿಗೆ ಬಣ್ಣ ಬಳಿಯಲಾರನೇ ಎಂಬ ಮನಸ್ಥಿತಿಯಲ್ಲಿರುವ ಬಾಸ್ ಪ್ರತಿಭಾ ಸದಾ ಪುರುಷೋತ್ತಮನತ್ತಲೇ ಒಲವು.. ಕಾಫೀ, ಟೀ ನೆಪವೊಡ್ಡಿ ಕರೆದೊಯ್ಯುವುದಲ್ಲದೇ ಕಛೇರಿಯಲ್ಲಿ ತಡವಾಗಿ ಹೋಗುವಂತೆ ಕೆಲಸಗಳ ಹೊರೆಯೊರಿಸುವ ಈ ಬಾಸ್ ಪ್ರತಿಭಾಳನ್ನು ಎದುರಿಸುವ ಶಕ್ತಿ ಇವನಲ್ಲಿ ಇಲ್ಲದಾಯಿತು.
ಚಿತ್ರ: ಸ್ಕಾನರ್ 7425 :)

ಗಂಡಸು ಕಛೇರಿಯಲ್ಲಿನ ಏರುಪೇರಿನಲ್ಲೂ ಮನೆಗೆ ಬಂದಾಗ ಮನೆಯಲ್ಲೂ ಸಮಾಧಾನವಿಲ್ಲದಿದ್ದರೆ ಖಂಡಿತ ಅವನ ಜೀವನ ಅಯೋಮಯ... ಇಲ್ಲಿ ಪುರುವಿನ ಪರಿಸ್ಥಿತಿಯೂ ಹಾಗೆ ಕಲೆಗಾರನಾಗಿ ಪ್ರತಿಭಾಳ ಚಿತ್ರ ಬಿಡಿಸಿದ..!! ಇಲ್ಲಿ ಅವನ ಹೆಂಡತಿ ಇವನ ಗ್ರಹಚಾರ ಬಿಡಿಸಿದಳು. ಅಪ್ಪ, ಅಮ್ಮನ ಮನಸಿನಲ್ಲೂ ಪ್ರಶ್ನೆಗಳು ಹುಟ್ಟುವಂತಾದವು ಇಂತಹ ಸಂದರ್ಭದಲ್ಲಿ ಬಾಸ್ ಮತ್ತು ಇವನ ಏಕಾಂತದಲ್ಲಿ ನೆಡೆದ ಸಂಭಾಷಣೆ.. ಸೆಕ್ಷುಯಲ್ ಹೆರಾಸ್ ಮೆಂಟ್ ಕೇಸ್ ಜಡಿದ ಕಾರಣಕ್ಕೆ ಪುರುಷೋತ್ತಮನನ್ನೇ ಜೈಲಿಗೆ ಕಳುಹಿಸುವತ್ತ ಸಾಗಿದ ಕಥೆ ಮುಂದೇನಾಗುತ್ತೇ ಎಂಬ ಭಯ ಕುತೂಹಲ..!!??.. ಇಲ್ಲಿ ಗೀತಾರವರು ಸಮರ್ಥವಾಗಿ ಪುರೋಷತ್ತಮನ ಮನದಾಳವನ್ನು ತುಂಬಾ ಮನೋಘ್ನವಾಗಿ ಬಿಂಬಿಸಿದ್ದಾರೆ. ಹೆಣ್ಣು ಭೋಗದ ವಸ್ತು ಎಂಬುದು ಅವನ ಭಾವನೆಯಾಗಿರಲಿಲ್ಲ ಆದರೂ ಅವನ ಜೈಲಿಗೆ ಹೋಗುವ ಸಮಯದಲ್ಲಿ ಸಹಕರಿಸಿದ್ದು ಸಹೋದ್ಯೋಗಿಗಳು. ಇಲ್ಲಿ ಇವನ ಸಹಕಾರಕ್ಕೆ ನಿಂತಿದ್ದು  ಹೆಂಗಳೆಯರೇ ಹೆಚ್ಚು.

ಗಂಡ ಜೊತೆಯಲಿಲ್ಲದಿದ್ದರೆ ಎಷ್ಟೋ ಹೆಣ್ಣು ಮಕ್ಕಳು ಆಮಿಷ ಅಥವಾ ಮೋಹದ ಜಾಲದಲ್ಲೋ ಬಿದ್ದುಬಿಡುವ ಸಾಧ್ಯತೆಗಳು ಹೆಚ್ಚು ಎಂಬುದು ಇಲ್ಲಿ ಒತ್ತಿ ಒತ್ತಿ ಹೇಳಿದಂತಿದೆ. ಮತ್ತೊಬ್ಬ ರವಿ ಎಂಬುವವ ದುಬೈನಲ್ಲಿ ನೆಲೆಸಿರುತ್ತಾನೆ ಇತ್ತ ಅವನ ಹೆಂಡತಿ(ಸುಕನ್ಯಾ) ಯಾವುದೋ ಪ್ರೀತಿ ಆಮಿಷಕ್ಕೆ ಬಿದ್ದು ತನ್ನ ಚಿಕ್ಕ ಮಗುವನ್ನು ಬಿಟ್ಟು ಹೋಗುತ್ತಾಳೆ... ಇಲ್ಲಿ ಕರುಳ ಬಳ್ಳಿಗೂ ಬೆಲೆಯಿಲ್ಲದಂತಾಯಿತು. ಇಷ್ಟೆಲ್ಲಾ ನೆಡೆದರೂ ಆಕೆಯ ಗಂಡ ಮಾತ್ರ ಒಂದು ಪ್ರಬುದ್ಧ ಸ್ಥಾನದಲ್ಲೇ ಉಳಿಯುತ್ತಾನೆ ಮರಳಿ ಸುಕನ್ಯಾ ಬರುವುದಾದರೆ  ಸ್ವೀಕರಿಸಲೂ ಸಿದ್ಧನಾಗಿರುತ್ತಾನೆ.

ಇಲ್ಲಿ ಪುರುಷೋತ್ತಮ ತಂದೆ ತನ್ನ ಏಕಮಾತ್ರ ಆಸ್ಥಿಯನ್ನು ಮಗಳಿಗೆ ಅಫಿಡವಿಟ್ ಮಾಡಿರುವಾಗಲೇ ಇದ್ದ ಇಬ್ಬರು ಹೆಣ್ಣು ಮಕ್ಕಳು ಮನೆಯ ಬೆಲೆ ಕಟ್ಟುವುದು ನೋಡಿ.. ನಾನೆಲ್ಲಿ ನನ್ನ ಆಸ್ತಿಯಲ್ಲಿ ಮೂರು ಮಕ್ಕಳಿಗೂ ಭಾಗ ನೀಡಿ ಅದರಂತೆ ಅಮ್ಮ ಅಪ್ಪನೂ ಮೂರು ಭಾಗಗಳಂತೆ ವಿಗಂಡಿಸಿ ಬಿಡುವರೋ ಎಂದು ಮನಸಿನಲ್ಲೇ ತೋಯ್ದಾಡುತ್ತಿದ್ದರೆ.. ಇಲ್ಲಿ ಮಗ ಮತ್ತು ವಯಸ್ಸಾದ ತಂದೆಯ ನಡುವಿನ ಸಂಭಾಷಣೆ  ಒಂದು ರೀತಿ ಪ್ರೀತಿಯ ಬೆಸುಗೆ ಅದು ಎಂದೂ ಬಿಡಿಸಲಾರದ ಸಂಬಂಧವನ್ನು ಕಲ್ಪಿಸಿಕೊಂಡರೇ ಸುಖವೆನಿಸುತ್ತೆ... ಅಪ್ಪ ಮಗನ ಬಾಂಧವ್ಯಕ್ಕೆ ಆಸ್ತಿ ಮತ್ತು ಹೆಣ್ಣು ಮಕ್ಕಳೊಡನೆ ನೆಡೆಯುವ ಜಟಾಪಟಿ ಎನ್ನುವುದಕ್ಕಿಂತ ತೋಳಲಾಟವನ್ನು ಮಗ ಎಷ್ಟು ಚೆನ್ನಾಗಿ ನಿಭಾಯಿಸುತ್ತಾನೇ ಎಂಬುದನ್ನು ಓದುವ ಆತುರ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎಂದೂ ಹೋಗದ ಈ ಕರೆಂಟ್ ತಟ್ಟ್ ಎಂದು ಕತ್ತಲನ್ನು ಕವಿಸಿಬಿಟ್ಟಿತ್ತು... ನಾನು ಓದುವ ಪುಸ್ತಕಕ್ಕೆ ಕತ್ತಲು ಕವಿದಂತೆ ಮಾಡಿದ ಹಾಗೆ ಪುರುಷೋತ್ತಮನ ಜೀವನದಲ್ಲೂ ಕತ್ತಲು ಬರುವುದೇನೋ ಹೆಣ್ಣು ಮಕ್ಕಳು ಅಪ್ಪನ ವಿರುದ್ಧ ನಿಲ್ಲುವರೇನೋ, ಸೊಸೆಯಾದ ಜಾನಕಿ ಮನಸ್ಸು ಕೆಡಿಸಿಕೊಂಡು ಸಂಸಾರ ಇಬ್ಬಾಗವಾಗುವುದೇನೋ ಎಂಬ ದ್ವಂದ್ವದಲ್ಲಿದ್ದೆ ಆದರೂ ಮೊಬೈಲ್ ನಲ್ಲಿದ್ದ ಲೈಟ್ ಆನ್ ಮಾಡಿ ಪೂರ್ಣ ಕಥೆಯನ್ನು ಒಂದೇ ಉಸಿರಿಗೆ ಓದಿಬಿಟ್ಟೆ..
ಕಥೆಯ ಮುಕ್ತಾಯ ಬಹಳ  ಇಷ್ಟವಾಯಿತು. ಈ ಕಥೆ ಓದುವವ ಅವನ ಮನೋಭಾವನೆ ಕೆಟ್ಟದ್ದಾಗಿದ್ದರೂ ಹೌದು..!! ನಾನು ಹೀಗಿರಬಾರದು ನನ್ನಲ್ಲೂ ಬದಲಾವಣೆ ಬೇಕು ಎಂದು ಬಯಸುತ್ತಾನೆ. ನಾನು ಅಲ್ಲಿನ ಪಾತ್ರಗಳಲ್ಲಿ ಒಬ್ಬಳಾಗಿ ತಲ್ಲೀನಳಾಗಿದ್ದೆ... ಹಾಗೇ ಪುರುಷೋತ್ತಮನಂತೆಯೇ ನನ್ನ ಅಣ್ಣ, ಗಂಡ, ಅಪ್ಪ, ಭಾವ ಎಲ್ಲರೂ ಇರಬಹುದು ಅಂತೆಯೇ ಇಲ್ಲಿನ ಹೆಣ್ಣನ ಪಾತ್ರಧಾರಿಗಳೂ ನಮ್ಮ ಸುತ್ತಲೇ ಇರಬಹುದು ಎಂಬಂತೆ ಭಾಸವಾಯಿತು.  ಹೆಣ್ಣಾಗಿ ನಾವು ಧೋರಣೆಗಳನ್ನು ಮಾಡುವವರ ವಿರುದ್ಧ ಹೋರಾಡಬೇಕು, ಹೆಣ್ಣು ಎಂದ ಕೂಡಲೇ ಸರ್ಕಾರ ಸವಲತ್ತು, ಅಥವಾ ಕೋರ್ಟ್-ಕಚೇರಿಗಳಲ್ಲಿ ಹೆಣ್ಣಿನ ಪರವಾಗೇ ಕಾನೂನುಕಟ್ಟಳೆಗಳು ಇರಬಹುದು ಆದರೆ ಅದನ್ನು ಸದುಪಯೋಗ  ಪಡಿಸಿಕೊಳ್ಳಬೇಕೆ ವಿನಃ ದುರುಪಯೋಗ ಪಡಿಸಿಕೊಳ್ಳಬಾರದು.

ಇದು ನಾಯಕ ಪ್ರಧಾನ ಕಾದಂಬರಿ. ಹೆಣ್ಣು ಗಂಡಿನ ಮನದಾಳದಲ್ಲಿಳಿದು ಹೀಗೂ ನೆಡೆಯುತ್ತದೆ ಎಂದು ತೋರಿಸಿರುವ ಕಥೆ. ಅಂತೆಯೆ.... Feminist  ಆಗುವ ಬದಲು Humanist ಆದರೆ ಒಳ್ಳೆಯದು ಎಂಬುದನ್ನ ಹೇಗೆ ಬಿಂಬಿಸಿದ್ದಾರೆ ಎಂದು ಮಿಥ್ಯಾ ಕಾದಂಬರಿಯನ್ನು ಓದಿದರೆ ನಿಮಗೇ ತಿಳಿಯುತ್ತದೆ...

ಮಿಥ್ಯ.. ಮಿಥ್ಯ...ಮಿಥ್ಯ.. ಕಾದಂಬರಿಯ ಪಾತ್ರಗಳೆಲ್ಲವೂ ನಮ್ಮ ನಿಮ್ಮ ನಡುವೆ ಬಂದುಹೋಗುವುದಂತೂ ಸತ್ಯ.. ಸತ್ಯ.. ಸತ್ಯ...

ಧನ್ಯವಾದಗಳು ಗೀತಕ್ಕ ನನಗೆ ಒಳ್ಳೊಳ್ಳೆ ಪುಸ್ತಕಗಳನ್ನು ಕೊಟ್ಟಿರಿ.. ಆದಷ್ಟು ಬೇಗ ಮಿಕ್ಕುಳಿದ ಪುಸ್ತಕಗಳನ್ನು  ಓದಿ ಮುಗಿಸುವೆ. 

Monday, September 3, 2012

ಹಳಿ ತಪ್ಪಿದ ಕರುಳ ಬಳ್ಳಿ...


ನನ್ನ ಪಕ್ಕದಲ್ಲಿ ಕುಳಿತವರು ನನ್ನ ಮಗನಿಗೆ ಐಸ್ ಕ್ರೀಂ ಕೊಡಿಸುವುದಾಗಿ ಬಲವಂತದಿ ಕರೆದೊಯ್ದಿದ್ದರು...ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಕಿಟಿಕಿಯಾಚೆ ಕಣ್ಣಾಡಿಸಿದೆ ಮಗ ಐಸ್ ಕ್ರೀಂ ತಿನ್ನುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ, ಪಕ್ಕದಲ್ಲಿ ಕುಳಿತವರು ಸಹ ಅವನೊಟ್ಟಿಗೆ ಏನೋ ಬಾಯಾಡಿಸುತ್ತಿದ್ದರು ನಾನು ಇದ್ದಾನೇ ಕಣ್ಣಿನ ಆಸುಪಾಸಲ್ಲೇ ಎಂದು ಕೈನಲ್ಲಿದ್ದ ಗೀತಾ ಬಿ.ಯು ರವರ ಮಿಥ್ಯಾ ಪುಸ್ತಕವನ್ನು ಓದಲು ಮುಂದಾದೇ.. ತೀವ್ರ ಮೌನದಲ್ಲೇ ಒಂದು ಗಂಡಿಗೂ ತನ್ನದೇ ಆದ ಭಾವನೆಗಳು ಹೇಗಿರುತ್ತದೆ ಎಂದು ಕಥೆಯೊಟ್ಟಿಗೆ ನಾನೂ ಮೆಲುಕು ಹಾಕುತ್ತ ಹೊರಟೆ.... ಓದುವುದರಲ್ಲಿ ಮಗ್ನಳಾದವಳಿಗೆ ರೈಲು ತನ್ನ ಹಳಿ ಬಿಟ್ಟು ಸಾಗುವವರೆಗೂ ಗೊತ್ತೇ ಆಗಲಿಲ್ಲ ಮಗ ಇನ್ನೂ ರೈಲಿಗೆ ಬಂದಿಲ್ಲವೆಂದು..!! ತಕ್ಷಣ ಕಿಟಕಿಯತ್ತ ನೋಡಿದೆ ಅಮ್ಮಾ... ಅಮ್ಮಾ..!! ಎಂದು ಕಿರುಚುತ್ತ ಕೈನಲ್ಲಿದ್ದ ಐಸ್ ಕ್ಯಾಂಡಿಯನ್ನು ರಪ್ಪನೆ ಎಸೆದು ಓಡೋಡಿ ಬರುವ ಕಂದನ ಕಂಡು ಎದೆ ಝಲ್ ಎಂದಿತ್ತು... ಅಯ್ಯೋ ಕಂದಾ...ಅಯ್ಯೋ ಕಂದಾ...ಇನ್ನೂ ನೀನು ಹತ್ತಿಲ್ಲವೇ ಬೇಗ ಓಡಿ ಬಾ..  ಬಾಗಿಲಿನತ್ತ ಓಡಿದೆ.... ಮಗನನ್ನು ಕರೆದೊಯ್ದವರೂ ಓಡೋಡಿ ಬರುತ್ತಿದ್ದರು... ನನ್ನ ಮಗನನ್ನು ಕೈಹಿಡಿದು ಕರೆದುಕೊಂಡು ಬನ್ನಿ ನಾನು ಹತ್ತಿಸಿಕೊಳ್ಳುವೆ ಎಂದು ಕಿರುಚಿ ಹೇಳಿದರೂ ಅವರು ನನ್ನ ಮಾತು ಕೇಳುವುದರಲ್ಲೇ ಇರಲಿಲ್ಲ... ಓಡಿ ಬಂದವರು ಗಾಬರಿಯಲ್ಲಿ ರೈಲು ಹತ್ತಿಬಿಟ್ಟಿರು..... 

ನನಗೋ ಈ ಮನುಷ್ಯ ಹತ್ತಿ ಬಂದನಲ್ಲ ನನ್ನ ಮಗನನ್ನು ಕರೆತರಲಿಲ್ಲ... ಎಂದುಕೊಳ್ಳುವಷ್ಟರಲ್ಲಿ ರೈಲು ರಭಸಕ್ಕೆ ತಿರುಗಿತು ಹೋ..!! ಜನರೆಲ್ಲಾ ಜೋರು ಧ್ವನಿಯಲ್ಲಿ ಅಯ್ಯೋ ಮಗು, ಅಯ್ಯೋ ಮಗು ಎನ್ನುತ್ತಿದ್ದಾರೆ...ಇನ್ನು "ಮಗ ಕೈ ತಪ್ಪಿದ" ಎಂಬ ಗಾಬರಿಯಲ್ಲಿ ನಾನು ರೈಲಿಂದ ಆಚೆ ಹಾರಲು ಯತ್ನಿಸುವಷ್ಟರಲ್ಲೇ.. ಹಿಂದಿನಿಂದ ಯಾರೋ ನನ್ನ ತೋಳನೆಳೆದರು, ಮಗ ಓಡಿ ಬರುತ್ತಿದ್ದ ರಭಸವನ್ನೇ ದಿಟ್ಟಿಸುತ್ತಿದ್ದೇ... ರೈಲ್ವೇ ನಿಲ್ದಾಣದ ಆಸುಪಾಸು ಬಿಟ್ಟು ಮಗ ಆಗಲೇ ಮುಂದೆ ಬಂದಿದ್ದ, ಜಲ್ಲಿ ಕಲ್ಲುಗಳ ಮೇಲೆಯೇ ಓಡಿ ಬರುವುದು ಕಾಣುತ್ತಿದೆ... ಕಾಂಗ್ರೆಸ್ ಗಿಡಗಳು ಸುತ್ತುವರಿದಿವೆ ಅವನ ಅರುಚಿವಿಕೆ ನನ್ನ ಕಿವಿಗೆ ಕೇಳುತ್ತಿಲ್ಲ.. ನನ್ನ ಕಣ್ಣು ಒಂದೇ ಸಮನೇ ಜೋಗ್ ಜಲಪಾತವಾಗಿಬಿಟ್ಟಿದೆ.... ಈ ಮನುಷ್ಯ ಕರೆದುಕೊಂಡೋದವ ಕರೆತರುವುದ ಬಿಟ್ಟು ಎಂತಾ ಕೆಲಸ ಮಾಡಿದ, ಈಗ ಏನು ಮಾಡಲಿ, ಹೇಗೆ ಮಗನನ್ನ ಮತ್ತೆ ಸೇರಲಿ.. ಎಷ್ಟು ಭಯ ಪಟ್ಟಿದೆಯೋ ನನ್ನ ಕೂಸು, ಮುಂದೇನು ಮಾಡುವನೋ ದೇವರೇ ಕಾಪಾಡಪ್ಪ.....  


ನನ್ನನ್ನೇ ನೋಡುತ್ತಿದ್ದ ಬೋಗಿಯ ಜನ... ಆ ಮನುಷ್ಯನನ್ನೇ ನಿಂದಿಸುತ್ತಿದ್ದರು.. ಇತ್ತ ಆ ಮನುಷ್ಯ ನನ್ನ ಪಾದವಿಡಿದು ನನ್ನನ್ನು ಕ್ಷಮಿಸಿ ನಿಮ್ಮ ಮಗ ನನ್ನಲ್ಲಿ ಎಷ್ಟು ಬೇಗ ಹೊಂದುಕೊಂಡುಬಿಟ್ಟ ನನಗೆ ಮಕ್ಕಳಿದಿದ್ದರಿಂದ ಪ್ರೀತಿ ಹೆಚ್ಚಾಗಿ ಅವನಿಗೆ ತಿಂಡಿ ಕೊಡಿಸಲು ಕರೆದುಕೊಂಡೋದೆ. ಕ್ಷಮಿಸಿ ಮೇಡಮ್.. ಕ್ಷಮಿಸಿ ಮೇಡಮ್... ಎಂದು ಒಂದೇ ಸಮನೆ ರೋಧಿಸುತ್ತಿದ್ದಾನೆ.. ನಾನು ಹೇಳುವುದಿನ್ನೇನು.."ಕ್ಷಮಿಸಲೇನಿದೇ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಕೋಪದ ಜೊತೆಗೆ ನನ್ನ ಮೇಲೆ ಬೇಸರವಾಗುತಿತ್ತು. ಈ ಪುಸ್ತಕ ಆಮೇಲೆ ಓದಿದ್ದರೇ ಸಾಕಾಗಿತ್ತು ಇಲ್ಲವೇ ಮಗ ಒಳಗೆ ಬಂದ ಮೇಲೆ ಓದಿದ್ದರೆ ಆಗುತ್ತಿತ್ತು.... ಎಂದು ನನ್ನನ್ನು ನಾನೇ ಶಪಿಸಿಕೊಳ್ಳುತ್ತ ಅಲ್ಲೇ ನೆಲದ ಮೇಲೆ ಕುಸಿದುಬಿದ್ದೆ... ಯಾರೋ ಏನೋ ಹೇಳಿದ್ದು ಕೇಳಿಸಿತು "ಮುಂದಿನ ನಿಲ್ದಾಣದಲ್ಲಿ ಇಳಿದು ತುಮಕೂರಿಗೆ ಹೋಗಿ ನೋಡಿ", ಇನ್ನೊಬ್ಬರು ಇಲ್ಲೇ "ರೈಲ್ವೇ ಕ್ರಾಸಿಂಗ್ ಇರುತ್ತೆ ಸ್ವಲ್ಪ ಹೊತ್ತು ನಿಲ್ಲಿಸಿರುತ್ತಾರೆ ಇಲ್ಲಿಯೇ ಇಳಿದು ಹೋಗಿ" ಎಂದರು.... ನನಗೆ ಆಗ ಸ್ವಲ್ಪ ಧೈರ್ಯ ಬಂದಂತಾಗಿತ್ತು.. ಹತ್ತಿರವೇ ಕ್ರಾಸಿಂಗ್ ಇರೋದರಿಂದ ಇಳಿದು ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಇಲ್ಲಾ... ಈ ರೈಲು ಮುಂದೆ ಬೆಂಗಳೂರಿನ "ಯಶವಂತಪುರ" ಬಿಡುವವರೆಗೂ ನಿಲ್ಲಿಸುವುದೇ ಇಲ್ಲಾ... "ಧಸಕ್ ಎಂದಿತು ಜೀವ"..!!! 


ಮತ್ತೇನು ಮಾಡುವುದು ಹಳಿ ತಪ್ಪಿಸಲೇ, ರೈಲಿಂದ ಹಾರಲೇ.. ಈಗಾಗಲೇ ನನ್ನ ಕರುಳ ಬಳ್ಳಿ ಹಳಿ ತಪ್ಪಿದೇ, ಇಷ್ಟು ಜನರು ಇದ್ದಾರೆ ಅವರಿಗೆಲ್ಲಾ ಯಾವ ಯಾವ ಕೆಲಸಗಳು ಇದ್ದಾವೋ ಏನು ಕಥೆಯೋ ಮತ್ತಾವ ಹಳಿ ತಪ್ಪಿಸಲಿ.. ದೇವರೇ ನನಗೆ ಯಾವುದಾದರೊಂದು ದಾರಿ ತೋರಿಸಪ್ಪ ನನ್ನೊಳಗಿನ ನಿಟ್ಟುಸಿರೆಲ್ಲ ಕಂಬನಿಯಧಾರೆಯಾಗಿತ್ತು. ನಾನು ಜೀವಂತ ಇರುವ ಹಾಗಿದೆಯೇ, ಇರುವ ಒಬ್ಬ ಮಗನನ್ನು ಬಿಟ್ಟು ಮತ್ತೇನು ಮಾಡಲಿ, ಮುಂದಿನ ಬದುಕು ಹೇಗೆ.. ಮಗ ಅಷ್ಟು ದೂರ ಓಡೋಡಿ ಬಂದ.. ತಿರುಗಿ ನಿಲ್ದಾಣಕ್ಕೆ ಹೋದನೋ ಇಲ್ಲವೋ... ಯಾರಾದರು ಕರೆದುಕೊಂಡು ಹೋಗಿಬಿಟ್ಟರೆ ಏನು ಮಾಡಲಿ ತಂದೆ..!! ದೇವರಲ್ಲಿ ಅಂಗಾಲಾಚಿ ಬೇಡುತ್ತಿದ್ದನ್ನು ಕಂಡ ರೈಲಿನ ಜನ... ಎಲ್ಲರೂ ಮಮ್ಮಲ ಮರುಗಿದರು ಎಲ್ಲರೂ ನನ್ನೊಟ್ಟಿಗೆ ಅವರೂ ದುಃಖಿಸಿದರು... ತೋಚದಾಯಿತು...!!?? ಮತ್ತೆ ಬಾಗಿಲ ಹತ್ತಿರ ಹೋಗಿ ದಿಟ್ಟಿಸಿ ನೋಡುತ್ತಲೇ ಇದ್ದೇ... ಓಡುವ ರೈಲಿನಿಂದ ಹಾರಿ ಬಿಟ್ಟಾಳು ಎಂದು ಒಂದಿಬ್ಬರು ನನ್ನ ಹಿಡಿದಿದ್ದರು.... ಇತ್ತ ಯಾವುದೋ ಶಬ್ದ ಟ್ರ್ ಣ್ ಟ್ರ್ ಣ್ ಎನ್ನುತ್ತಿದೆ... ಓಹೋ..! ದೇವರು ದಾರಿಬಿಟ್ಟ.. ಈಗ ರೈಲು ಯಾವುದೋ ಕಾರಣಕ್ಕೆ ನಿಲ್ಲಿಸುತ್ತಾರೇನೋ ಎಂದು ಮಗ್ಗುಲು ಬದಲಿಸುತ್ತ ಕಣ್ಣು ತೆರೆದು ನೋಡಿದರೆ ಬೆಳಗಿನ ಜಾವ ೫.೩೦ ಆಗಿತ್ತು..!!

ಚಿತ್ರ  @ ಶಿವುಲೋಕ..

Tuesday, August 28, 2012

ಮೂಕ ಮನಸು ಪ್ರೀತಿಸುತಿದೆ.. ಪ್ರೀತಿಸುತಿದೆ...!!!


ಮರುಭೂಮಿಯ ಬಿಸಿಲು ತಾಳಲಾರದೆ ರಜೆಗೆ ಬೆಂಗಳೂರಿಗೆ ವರ್ಷಗಳ ಹಿಂದೆ ಹೋಗಿದ್ದೆ. ಊರಲ್ಲಿ ಮನೆಗೆ ಹೊಸ ಅತಿಥಿ ಬಂದಿದ್ದ. ಏನ್ ಪ್ರೀತಿ, ಅಂತೀರಾ ಇವರು ಯಾರೋ ಗೊತ್ತೇ ಇಲ್ಲ, ಯಾರು ಬೇಕು ನಿಮ್ಗೆ.? ಯಾಕೆ ಬಂದಿರಿ? ಅಂತ ಕೇಳಲೇ ಇಲ್ಲ. ಅಮ್ಮ ಬೇರೇ ಅವನಿಗೆ ರೇಗ್ತಾ ಇದಾರೆ..!! ಏನೋ? ನೀನು, ಇವಳು ಯಾರು ಅಂತ ಗೊತ್ತಾ, ಹಂಗೆ ಹೇಗೆ ಒಳಗೆ ಬಿಟ್ಟೆ..?? ಯಾರಾದ್ರು ಬಂದ್ರೆ ಹೆಂಗೆ ತರಾಟೆ ತಗೋತೀಯಾ. "ಇವತ್ತೇನು ಹೀಗೆ ಸ್ವಾಗತ ಕೋರುತ್ತಿದ್ದೀಯ" ಇದೆಲ್ಲವನ್ನು ರಾಮು ಕೇಳಿಸಿಕೊಳ್ಳುತ್ತ ನನ್ನ ಸುತ್ತ ಓಡಾಡ್ತನೇ ಇದ್ದ. "ನಾನು ಈ ಮನೆಯವಳೇ ಅಂತ ಅವನಿಗೂ ಗೊತ್ತು" ನನ್ನ ನೋಡಿಲ್ಲದಿದ್ದ್ರೇ ಏನು?, ಅಮ್ಮನಿಗೆ ಹೀಗೆ ಸಮಜಾಯಿಸಿ ಕೊಡುವುದರ ಜೊತೆಗೆ ಹೊಸ ಅತಿಥಿ ನನ್ನ ಸ್ನೇಹಿತನಾಗಿದ್ದ.

ಆ ಒಂದು ತಿಂಗಳು ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ, ಸುಮಾರು ಎಂಟತ್ತು ದಿನಗಳು ಮಾತ್ರ ಆ ಸ್ನೇಹಿತನ ಜೊತೆ ಮಾತನಾಡುತ್ತ, ಅವನಿಗೆ ಬೇಕಾದ ಬಿಸ್ಕತ್ತು, ಬನ್ನು, ಬ್ರೆಡ್ ಕೊಡುಸ್ತಾ ಇದ್ದೆ. ಅವನೂ ಸಹ ಖುಷಿ ಖುಷಿಲಿ ತಿಂದು ನನ್ನ ಹಿಂದೆನೇ ಓಡಾಡ್ತಾ ಇದ್ದ. ಇನ್ನು ನನ್ನ ಮಗನಿಗೆ ರಾಮು ತುಂಬಾ ಆತ್ಮೀಯ, ಕಾರಣ ಅದನ್ನು ಮನೆಗೆ ಕರೆದುಕೊಂಡು ಬಂದಿದ್ದೇ ಅವನು ಮತ್ತು ನನ್ನ ಅಣ್ಣನ ಮಗ. ಇನ್ನು ನನ್ನ ಜೊತೆ ದೋಸ್ತಿ ಕೇಳಬೇಕ ಮಗನ ರೆಕಮೆಂಡೇಷನ್ ಬೇರೇ ಇತ್ತು, ಅದಕ್ಕೆ ತಕ್ಕಂತೆ ನಮ್ಮಿಬ್ಬರ ಆತ್ಮೀಯತೆಯೂ ಜಾಸ್ತಿ ಆಗಿತ್ತು.

ಹುಫ್...!! ಮುಗಿತಾ ಇದೇ ರಜೆ. ನಾಳೆ ನಮ್ಮ ಗಂಟುಮೂಟೆ ಕಟ್ಟಬೇಕು ಮನೆನಲ್ಲಿ ಎಲ್ಲಾ ನಮ್ಮ ಲಗೇಜ್ ಪ್ಯಾಕ್ ಮಾಡ್ತಾ ಇದ್ದಾರೆ. ನಮ್ಮ ಈ ಸ್ನೇಹಿತ ಯಾಕೋ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಾ ಇದಾನೆ, ಎಲ್ಲರನ್ನು ನೋಡ್ತಾನೇ ಸುಮ್ಮನೇ ಇದ್ದಾನೆ, ಮಾತಿಲ್ಲ ಕತೆ ಇಲ್ಲ, ಮೌನ ಸಂಭಾಷಣೆ ನೆಡೆದಿತ್ತು. ಇತ್ತ ಬೆಳ್ಳಂ ಬೆಳ್ಳಿಗ್ಗೆ ನಮ್ಮ ಗಂಟುಮೂಟೆಗಳು ಕಾರಿನಲ್ಲಿ ಕುಳಿತಿವೆ. ಇವನು ಅದೇ ನನ್ನ ಸ್ನೇಹಿತ "ರಾಮು" ಸುಮ್ಮನೆ ಇರಲಾರದೇ ಮಹಡಿ ಮೇಲಿಂದ ಚಂಗನೆ ನೆಗೆದು ಕಾರಿನ ಸುತ್ತ ಪ್ರದಕ್ಷಿಣೆ ಹಾಕಿ, ಲಗೇಜ್ ಎಲ್ಲವನ್ನು ಮೂಸಿ ನೋಡಿದ್ದೇ ತಡ ಕಾರಿನ ಒಳಗೆ ಓಡೋಗಿ ಕುಳಿತುಬಿಟ್ಟ!!. ನನ್ನ ಕಳಿಸಲು ಬಂದವರೆಲ್ಲಾ "ಬಿಟ್ಟ ಕಣ್ಣು ಬಿಟ್ಟಂತೆ " ನೋಡ್ತಾ ಇದ್ದಾರೆ... "ನೋಡಿದ ಇದನ್ನ??", "ನೆನ್ನೆ ಮೊನ್ನೆ ನೋಡಿದೋಳನ್ನ ಇಷ್ಟು ಇಷ್ಟಪಡ್ತಿದೆ". ಹೀಗೆ ಒಬ್ಬರಿಗೊಬ್ಬರು ಮಾತಾಡ್ತಾ ಇದ್ದಾರೆ. ನಾನು ಇನ್ನೇನು ಹೊರಡಬೇಕು ಅಲ್ಲೇ ಇದ್ದ ಬೇಕರಿಯಿಂದ ಬನ್ನು ತಂದು ರಾಮು ಬಾರೋ ತಗೊಳ್ಳೋ ಎಂದು ಕರೆದರೆ ಬರಲೇ ಇಲ್ಲ, ಕಾರಿಂದ ಇಳಿಯದವನನ್ನು ಬಲವಂತವಾಗಿ ಹೊರಗೆ ಕರೆದು ಬನ್ನು ಕೊಟ್ಟರೆ ಮೂಸಿ ನೋಡ್ತಾನೇ ಬಾಯಿ ಮಾತ್ರ ತೆರೆಯುತ್ತಿಲ್ಲ, ಯಾಕೋ, ತಿನ್ನೋ?? ಎಂದು ಅಲ್ಲೇ ಕಲ್ಲಿನ ಮೇಲಿಟ್ಟೆ. ತಿನ್ನದೆ ನನ್ನ ಹಿಂದೆಯೇ ಬರ್ತಾ ಇದ್ದಾನೆ!! ಬೇಡ ರಾಮು ಹೋಗು, ಬರ್ತಾ ಇರ್ತೀನಿ ವರ್ಷಕೊಮ್ಮೆ ಆಯ್ತಾ ಎಂದು ಮುಖ ನೋಡಿದ್ರೆ ಅವನ ಆ ಕಪ್ಪು-ಬಿಳುಪಿನ ಕಣ್ಣ ರೆಪ್ಪೆ ಒದ್ದೆಯಲ್ಲಿತ್ತು.... ಏನೂ ಮಾತಾಡೋಕ್ಕೇ ಆಗ್ತಿಲ್ಲ ಅವನಿಗೆ. "ಮಾತು ಬರುವ ಹಾಗಿದ್ದರೆ ಚೆನ್ನಾಗಿತ್ತು ಕಣೋ", ’ನಿನ್ನ ಭಾವನೆಯನ್ನ ನನ್ನ ಜೊತೆ ಹಂಚಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ನನ್ನ ಮನಸ್ಸು ಒದ್ದೆಯಾಗಿತ್ತು’. ಇವನಿಗೆ ನಾನೇನು ಅಂತ ಸೇವೆ ಮಾಡಿಲ್ಲ ಅದೇಕೋ ಅಂದು ನನ್ನ ಬೀಳ್ಕೊಡುವಾಗ ತೋರಿದ ಪ್ರೀತಿ ನನ್ನ ಮನದ ಪುಟದಲ್ಲೇ ಉಳಿದುಬಿಟ್ಟಿತು..


"ರಾಮು"  ನಮ್ಮ ಮನೆಯ ನಾಯಿಮಹರಾಜ ಏನೋ ಒಂದು ತರ ಪ್ರೀತಿ ಈಗಲೂ ಮನೆಗೇನಾದರು ಫೋನ್ ಮಾಡಿದರೆ  ಒಮ್ಮೊಮ್ಮೆ ಅಪ್ಪನೋ ಅಮ್ಮನೋ ಯಾರಾದರು ಬೇರೆಯವರಿಗೆ ನೋಡು ಸುಗುಣ ಫೋನ್ ಮಾಡಿದ್ದಾಳೆ ಎಂದಾಗ ನನ್ನ ರಾಮು ಬೊಗಳಿದ್ದು ಕೇಳಿಸಿಕೊಂಡಿದ್ದೀನಿ.. ಆ ಬೊಗಳುವಿಕೆಯಿಂದಲೇ ಹೇಗಿದ್ದೀರಾ ಎಂದು ಕೇಳುವ ಹಾಗಿರುತ್ತೆ.. ಇದು ನನ್ನ ಬ್ರಾಂತೋ ಅಥವಾ ನಿಜವಾಗಿಯೂ ನನ್ನ ರಾಮು ನಮ್ಮ ನೆನಪಿಟ್ಟಿದ್ದಾನೋ ಗೊತ್ತಿಲ್ಲ.... ಆದರೆ ಫೋನ್ ಮಾಡಿದಾಗ ಈ ಅನುಭವ ಎಷ್ಟೋ ಬಾರಿ ನನಗಾಗಿದೆ......  ಪ್ರತಿದಿನ ಮನೆಮಂದಿ ನೆನಪಾಗ್ತಾರೋ ಇಲ್ಲವೋ ಆದರೆ ಈ ರಾಮು ಮಾತ್ರ ಪ್ರತಿಕ್ಷಣ ನೆನಪಾಗ್ತಾನೆ... 

ಪ್ರತಿ ವರ್ಷದ ಕಥೆಯಂತೆ ಕಳೆದ ತಿಂಗಳು ರಜೆಗೆ ಹೋದಾಗಲೂ ಅದೇ ಪ್ರೀತಿ ಅದೇ ಸ್ನೇಹ... ಬದಲಾವಣೆಯೇ ಇಲ್ಲದಂತ ನೋಟ-ಒಡನಾಟ. ಈ ಬಾರಿ ಬೆಂಗಳೂರನ್ನು ಬಿಡುವಾಗ ಬೆಳಗಿನ ಜಾವ ೩.೩೦ಕ್ಕೆ ಮನೆಯಿಂದ ಹೊರಟೆವು ಅಷ್ಟೊತ್ತಿನಲ್ಲಿ ಮಹಡಿಯ ಮೇಲೆ ಎಲ್ಲೋ ಮಲಗಿದ್ದವ ಜಂಗನೇ ಬಂದು ಬಿಟ್ಟ... ರಾಮನನ್ನು ಕಂಡ ಮನೆಯವರೆಲ್ಲಾ "ಎಲ್ಲರಿಗೂ ಹೇಳಿ ಹೊರಟೆ ರಾಮುಗೆ ಹೇಳಿದ್ದಾ..??" ನೋಡು ಆದರೂ ಅವನೇ ಎದ್ದು ಬಂದಿದ್ದಾನೇ ನಿಮ್ಮನ್ನ ಕಳುಹಿಸಿಕೊಡಲು ಎಂದು ಹೇಳಿದಾಗ ಮನಸ್ಸು ಏಕೋ ..ಏನೋ..ಎಂತದೋ ಭಾವನೆಯಲ್ಲಿತ್ತು ಹೇಳೋಕ್ಕೆ ಆಗ್ತಿಲ್ಲ..!!  ಹಾಗೇ ಅದೇ ಭಾವನೆಯಲ್ಲಿ ಹೊರಟ ನಮ್ಮನ್ನು ಬಹುದೂರ ಕಾರನ್ನು ಹಿಂಬಾಲಿಸಿ ಓಡಿ ಬರುತ್ತಿದ್ದವನನ್ನು... ಕಣ್ಣು ಮಬ್ಬಾಗುವರೆಗೂ ಅವನನ್ನೇ ದಿಟ್ಟಿಸಿ ನೋಡಿದೆ.....  


ರಾಮು.. ನನ್ನ ಪ್ರೀತಿಯ ರಾಮು... 

Thursday, August 23, 2012

ನನ್ನ ಪ್ರೀತಿಯ ಸ್ಯಾಮ್ ಅಲೆ... ಅವಳು ಬೀಸಿದಳು ಬಲೆ....


ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!

ಹೂ ನಾವುಗಳು ವಿದ್ಯಾವಂತರು, ಬುದ್ಧಿವಂತರೇ ಹಿಂಗೆ ಮಾಡಿದ್ರೆ ಹೇಗೆ... ಆದಷ್ಟು ಸರ್ಕಾರಿ ವಾಹನಗಳನ್ನ ಉಪಯೋಗಿಸಿಕೊಂಡು ಓಡಾಡಬೇಕು... ಜನ ಎಲ್ಲರೂ ಕಾರ್, ಬೈಕ್ ಅಂತಲೇ ಓಡಾಡ್ತಾ ಇದ್ದು, ಸ್ವಲ್ಪನು ಮಯ್ಯಿ ನೋಯಿಸೋಕ್ಕೆ ಇಷ್ಟಪಡದೇ ಹೋದ್ರೇ ಹೆಂಗೆ.. ಹೀಗ್ ಮಾಡೇ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹೋಗಿರೋದು... ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗಿರೋದು.

ಅಕ್ಕನ ಮಾತಿಗೆ ಬಾರಿ ಗಾಂಧಿವಾದದ ಮಾತು ಆಡಿ ಮಧ್ಯಾಹ್ನ ಮೆಜೆಸ್ಟಿಕ್ ಬಸ್ ಹತ್ತಿದ್ದೆ... ಅದು ಆಗಲೆ ೨ಗಂಟೆ ಊಟ ಬೇರೆ ಬಿಸಿಬಿಸಿ ತಿಂದಿದ್ದೇ... ಮೆಜೆಸ್ಟಿಕ್ ಬೇಡ ಯಲಹಂಕಗೇ ಸೀದ ಹೋಗುವ ಬಸ್ಗೆ ಹೋಗಿ ಅಲ್ಲಿಂದ ದೇವನಹಳ್ಳಿಗೆ ಹೋಗು ಅಂತ ಅಂದ್ರು ಮನೆನಲ್ಲಿ... ಮಗ ಮೆಜೆಸ್ಟಿಕ್ ನೋಡಿಲ್ಲ ಅವನಿಗೂ ತೋರಿಸಿದ ಹಾಗೆ ಆಗುತ್ತೆ ಎಂದು ಒಣಜಂಭವೋ, ಪ್ರತಿಷ್ಠೆಯೋ ಮಾಡಿ ಬಸ್ ಹತ್ತಿದೆ. ಮೆಜೆಸ್ಟಿಕ್ ಗೆ ೨೪೪ಸಿ ಬಸ್ ಹತ್ತಿ ಇಳಿಯುವ ಮುನ್ನ ತಾಮುಂದು ನಾಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಮೈಮೇಲೆ ಬಿದ್ದು ಇಳಿದಿದ್ದಾಯ್ತು...

ನೆಂಟರ ಮನೆಗೆ ಹೋಗ್ತಾ ಇದ್ದೇನೆ ಏನಾದರೂ ತಿಂಡಿ ತೆಗೆದುಕೊಳ್ಳುವ ಎಂದು ಅಲ್ಲೇ ಹತ್ತಿರ ಇದ್ದ ನಂದಿನಿ ಸಿಹಿತಿಂಡಿಯ ಅಂಗಡಿಗೆ ಹೋಗಿ ಮೈಸೂರ್ ಪಾಕ್, ಪೇಡಾ, ಬಿಸ್ಕೇಟ್, ಅದು ಇದು ಆಳು-ಮೂಳು ಎಲ್ಲಾ ಪ್ಯಾಕ್ ಮಾಡಿಸಿದೆ.... ಮಗ ಐಸ್ ಕ್ರೀಂ ಎಂದಾ...?? ಹೂ ತಗೋ ಏನ್ ಬೇಕೋ ಎಂದೆ... ನೀನು ಒಂದು ತಿನ್ನಮ್ಮ ಅಂದಾ ನಾನು ಆಹಾ..!! ನಂದಿನಿ ಹಾಲಿನಲ್ಲಿ ಮಾಡಿದ ಐಸ್ ಕ್ರೀಂ... ತಿನ್ನೋಣ ಎಂದು ಆಗಲಿ ನನಗೂ ಒಂದು ಎಂದೆ...!!! ಇನ್ನೇನು ಬಿಲ್ ಕೊಡಬೇಕು... ಮಗ ಆಗಲೇ ಐಸ್ ಕ್ರೀಂಗೆ ಬಾಯಾಕಿದ್ದಾನೇ....!! ನನ್ನ ಬ್ಯಾಗ್ ನಲ್ಲಿದ್ದ ಪರ್ಸ್ ಕಾಣ್ತಾ ಇಲ್ಲ....... ಓಹ್..!!! ದೇವರೇ ಇರೋ ಬರೋ ದೇವರನ್ನೇಲ್ಲಾ ಜಪಿಸಿದೆ .. ತಕ್ಷಣ ಅಂಗಡಿಯವನಿಗೆ ಬಸ್ ಗೆ ಕೊಟ್ಟು ಮಿಕ್ಕಿದ್ದ ಕಾಸು ಕೈನಲ್ಲೇ ಇದ್ದದ್ದನ್ನು ಮಗನ ಐಸ್ ಕ್ರೀಂಗೆ ವಜಾ ಹಾಕಿಕೊಳ್ಳಿ ನನಗೆ ಐಸ್ ಬೇಡ ಎಂದು ... ನನ್ನ ಪರ್ಸ್ ಕಳ್ಳತನವಾಗಿದೆ ಎಂದು ಹೇಳಿ ಮಗನನ್ನ ಕರೆದುಕೊಂಡು ಓಡಿದೆ.

ಬಸ್ ಇಳಿದ ಜಾಗಕ್ಕೆ ಹೋಗಿ ನೋಡಿದೆ ೨೪೪ಸಿ ಬಸ್ ಕಾಣ್ತಾ ಇಲ್ಲ... ಕಣ್ಣು ಮಬ್ಬಾಗಿದೆ, ಏನು ಮಾಡುವುದು ತೋಚ್ತಾ ಇಲ್ಲ... ಸ್ವಲ್ಪ ಸಮಯದ ಮುಂಚೆ ಸ್ನೇಹಿತನಿಗೆ ಕರೆ ಮಾಡಿದ್ದೇ ಮತ್ತೆ ಅವನಿಗೆ ಕರೆ ಮಾಡಿ... ಹೀಗಾಗಿದೇ ಏನು ಮಾಡುವುದೋ ಎಂದೇ..!!! ನನ್ನ ಪರ್ಸ್ ನಲ್ಲಿದ್ದ ೫ಸಾವಿರ ರುಪಾಯಿ ಮತ್ತು ನನ್ನ ಪ್ರೀತಿಯ ಸ್ಯಾಮ್ ಕಾಣ್ತಾ ಇಲ್ಲ ಎಂದೇ...ಅಯ್ಯೋ..!! ಗೂಬೆ ಎಂತಾ ಕೆಲಸ ಮಾಡಿಕೊಂಡೆ... ಐ.ಎಂ ನಂ ಗೊತ್ತಿದ್ರೇ ಪೋಲೀಸ್ಗೆ ಕಂಪ್ಲೆಂಟ್ ಕೊಡು ಎಂದ..!!! ಯಾವುದಕ್ಕೂ ಪೋಲೀಸ್ ಠಾಣೆಗೆ ಹೋಗಿ ಬರೋಣ ಎಂದು ಉಪ್ಪಾರಪೇಟೆ ಸ್ಟೇಷನ್ ಹತ್ತಿರ ಹೋಗೋಕ್ಕೆ ಮಗನ ಕೈ ಹಿಡಿದು ಎಳೆದುಕೊಂಡೇ ಓಡಿದೆ....!!


ಮೊದಲ ಭೇಟಿ ಇದುವರೆಗೂ ಪೋಲೀಸ್ ಸ್ಟೇಷನ್ ಒಳಗಡೆ ಹೋಗಿ ನೋಡಿಲ್ಲ... ಇನ್ನೇನು ಒಳಹೋಗಬೇಕು ಎನ್ನುವಾಗ ಅಲ್ಲೇ ದ್ವಾರದಲ್ಲಿ ಬಂದೂಕುದಾರಿ ನಮ್ಮನ್ನೇ ದುರುಗುಟ್ಟುತ್ತಿದ್ದ... ಹಾಗೆ ಕಣ್ ಸರಿಸಿ ಒಳಗೆ ಹೋದೆ.. ಪೋಲೀಸ್ ಯಾರಿಗೋ ನೂರು ರುಪಾಯಿ ಎಲ್ಲಾ ಈಗ ನಡೆಯಲ್ಲಪ್ಪ... ಇದ್ದರೆ ೫೦೦ ಕೊಡು ಅಂತಾ ಇದ್ದ ಅಯ್ಯೋ ಕರ್ಮವೇ ನಾನು ಈಗ ಕೈಲಿದ್ದಿದ್ದೆಲ್ಲಾ ಕಳೆದುಕೊಂಡು ಬಂದಿದ್ದೀನಿ ಮತ್ತೆ ಇಲ್ಲಿ ಕಾಸು ಬೇರೆ ಕೇಳ್ತಾರೇನೋ ಗೊತ್ತಿಲ್ವೇ...ದೇವರೇ ಏನಪ್ಪಾ ಮಾಡೋದು ಎಂದು ಸ್ವಲ್ಪ ದೂರ ಹೊರಬಂದು ನನ್ನ ಯಜಮಾನರು ಕುವೈತ್ನಲಿದ್ದವರಿಗೆ (ನನ್ನ ಹತ್ತಿರವಿದ್ದ ಇನ್ನೊಂದು ಮೊಬೈಲಿನಿಂದ) ಕರೆ ಮಾಡಿದೆ "ಕಣ್ಣಲ್ಲಿ ಧಾರಾಕಾರ ಮಳೆ" ಆದರೆ "ಬೆಂಗಳೂರಲ್ಲಿ ಮಾತ್ರ ಆಗ ಮಳೆಯೇ ಇರಲಿಲ್ಲ"...  ನನ್ನ ಮೊಬೈಲ್ ಕಳೇದೋಯ್ತು ಪೋಲೀಸ್ ಸ್ಟೇಷನ್ಗೆ ಬಂದಿದ್ದೀನಿ ನನ್ನ ಈ-ಮೈಲ್ ನಲ್ಲಿ ಐ.ಎಂ ನಂಬರ್ ಇದೆ ನೋಡಿ ಮೆಸೇಜ್ ಮಾಡೋಕ್ಕೆ ಹೇಳಿದೆ... ಸ್ವಲ್ಪವೂ ಪ್ರಜ್ಞೇ ಇಲ್ವಾ ನಿನ್ಗೆ ಬೆಂಗಳೂರಲ್ಲಿ ಜನ ಹೇಗಿರ್ತಾರೆ, ಮಯ್ಯೆಲ್ಲಾ ಕಣ್ಣಾಗಿರಬೇಕು ಗೊತ್ತಾಗೋಲ್ವಾ..?!! ಯಜಮಾನರ ಕಡೆಯಿಂದ ಸುಪ್ರಭಾತ ಬರ್ತಾನೇ ಇದೆ.. "ಅಯ್ಯೋ ನನ್ನ ಕಷ್ಟ ನನ್ನ್ಗೆ ಈವಯ್ಯದೊಂದು ಗೊಣಗಾಟ.. ನಾನೇನು ಬೇಕು ಅಂತ ಕಳ್ಳಿ ಕೈಗೆ ಕೊಟ್ಟು ಬಂದ್ನಾ" ಹಿಂಗೆ ಮನಸಲ್ಲೇ ಅಂದುಕೊಂಡೆ ಧೈರ್ಯವಾಗಿ ಜೋರಾಗಿ ಅವರಿಗೆ ಹೇಳಿಲ್ಲ ಹೇಳಿದ್ರೇ ಅಷ್ಟೇ ಕಥೆ..:) ಐ. ಎಂ ನಂಬರ್ ತಗೆದುಕೊಂಡು ಕಂಪ್ಲೇಂಟ್ ಬರೆದುಕೊಟ್ಟೆ ಅಲ್ಲೇ ಕುಳಿತಿದ್ದ ಪೋಲೀಸ್ ಏನ್ ನಿಮ್ಮ ಹೆಸರು, ಯಾವ ಊರು ಕಂತೆ ಪುರಾಣಗಳನ್ನೇಲ್ಲಾ ಕೇಳ್ತಾ ಇದ್ರೇ ನನಗೆ ಒಳಗೊಳಗೇ ಕೋಪ.. ನನ್ನ ಊರು ಕೇರಿ ಕಟ್ಟುಕೊಂಡು ಇವರಿಗೇನು ಮೊದಲು ಕಂಪ್ಲೇಂಟ್ ಬಗ್ಗೆ ಮಾತಾಡಪ್ಪಾ ಸಾಮಿ ಎಂದುಕೊಂಡೇ... ನೋಡಿ ಮೆಡಂ ದಿನಕ್ಕೆ ಇಂತಹ ಕೇಸ್ ನೂರಾರು ಬರುತ್ವೇ ನಿಮ್ಮ ಕಳುವಾದ ವಸ್ತು ಸಿಕ್ಕರೇ ನಿಮ್ಮ ಅದೃಷ್ಟ, ಇಲ್ಲವೇ ಇಲ್ಲ... ನಿಮ್ಮ ಐ. ಎಂ ನಂಬರ್ ಕೊಟ್ಟೀದ್ದೀರಲ್ಲಾ ಕಂಪ್ಯೂಟರ್ ನಲ್ಲಿ ಹಾಕ್ತೀವಿ ನೋಡೋಣ ಎಂದು ಮುಂದಿನ ಮಹಭಾರತಕ್ಕೆ ಶುರುವಿಟ್ಟರು.

ಅಲ್ಲಾ...!!! ಮೇಡಮ್ ನಿಮ್ಗೇ ಸ್ವಲ್ಪಾನೂ ಗೊತ್ತಾಗಲಿಲ್ಲ್ವೇ (ಗೊತ್ತಾಗಿದ್ರೇ ನಿಮ್ಮ ಹತ್ರಾ ಯಾಕ್ ಬರ್ತಿದ್ದೇ ಸ್ವಾಮಿ - ಇದು ಮನಸಿನ ಮಾತು), ಬೆಂಗಳೂರಿನಲ್ಲಿ ಜನ ದಿಕ್ಕು ದೆಸೆ ಇಲ್ಲದೇ ಬಂದು ಇಲ್ಲಿ ಸುಖವಾಗಿ ಬದುಕೋದನ್ನ ಆಯ್ಕೇಮಾಡ್ಕೋತಾರೆ. ಮೊನ್ನೆ ಹಿಂಗೆ ಒಬ್ಳು ಕಳ್ಳಿ ಎಂ.ಬಿ.ಎ ಮಾಡಿರೋಳು ಸಿಕ್ಕಾಪಟ್ಟೆ ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ಲು ಎಂತಾ ಜಾಣರಿರ್ತಾರೆ ಗೊತ್ತೇ..??, ನಿಮ್ಮ ಪರ್ಸ್ ಕಳುವಾದ ಕೂಡಲೇ ಅವರ ಕೈನಲ್ಲಿ ಇರೋದೇ ಇಲ್ಲ ನಿಮಿಷಕ್ಕೆ ೪,೫ ಕೈ ಬದಲಾಯಿಸಿರ್ತಾರೆ ಗೊತ್ತೇ.. ನಾವು ದಿನಕ್ಕೆ ಎಷ್ಟು ಕೇಸ್ ನೋಡಿಲ್ಲಾ ಮೇಡಂ..!!! ಸ್ವಲ್ಪ ನೀವುಗಳು ಎಚ್ಚರಿಕೆಯಿಂದ ಇರ್ಬೇಕು..!!!(ಎಚ್ಚರ ಇಲ್ಲದ್ದಕ್ಕೆ ಹಿಂಗೆ ಆಗಿದ್ದು -ಮನಸಿನ ಮಾತು) ನೀವು ಬೆಂಗಳೂರಲ್ಲಿ ಎಷ್ಟು ದಿನ ಇರ್ತೀರೋ ಏನೋ ಅಷ್ಟರೊಳಗೆ ಸಿಕ್ಕರೆ ನೋಡ್ತೀವಿ ಮೇಡಮ್, ಆನಂತರ ನಿಮ್ಮ ಸಂಬಂಧಿಕರ ನಂಬರ್ ಕೊಟ್ಟಿದ್ದೀರಲ್ಲಾ ನೋಡೋಣ ಸಿಕ್ಕರೆ ತಿಳುಸ್ತೀವಿ. ನಮಗೂ ಕಷ್ಟ ಮೇಡಮ್ ಈ ಮೆಜೆಸ್ಟಿಕ್ ನಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ ಯಾರನ್ನ ಅಂತ ನೋಡೋದು, ಯಾರಿಗೆ ಅಂತ ರೂಲ್ಸ್ ಮಾಡೋದು, ಯಾರೋ ಒಬ್ಬಳು ಕಳ್ಳಿ ತರ ಇರ್ತಾಳೇ ಅಂದುಕೊಳ್ಳಿ ಅನುಮಾನಿಸಿ ಅವರನ್ನ ಕರೆತಂದ್ರೆ... ಅವರಿಂದೆನೇ ಬರ್ತಾರೆ ಜನ ಬಿಡಿಸ್ಕೊಂಡು ಹೋಗೋಕ್ಕೆ... ಹಾಗೂ ನಾವು ಪೋಲೀಸ್ ನವರು ಜೋರು ಮಾಡಿದ್ವಿ ಅಂತ ಇಟ್ಟುಕೊಳ್ಳಿ ಅಷ್ಟೇ ಮುಗಿತು ಕಥೆ ಪೋಲೀಸ್ ನವನು ನನ್ನ ಮೈಮೇಲೇ ಬಿದ್ದ, ನನ್ನ ಹತ್ತಿರ ಅಸಭ್ಯವಾಗಿ ವರ್ತಿಸಿದ ನಾನು ಕಳ್ಳಿಯೇ ಅಲ್ಲಾ...  ಮರ್ಯಾದಸ್ಥ  ಕುಟುಂಬದವಳು ಹೀಗೆಲ್ಲಾ ಮಾಡ್ತಾರೆ ಎಂದು ರಸ್ತೆಬದಿ ಕೂಗಾಡಿದ್ರೆ ಸಾಕು ಈ ಮೀಡಿಯಾ ಜನ ಕ್ಯಾಮರಾ ಎತ್ತಾಕೊಂಡು ಬಂದುಬಿಡ್ತಾರೆ, ಇರೋ ಬರೋ ಟಿವಿಗಳಲ್ಲೆಲ್ಲಾ ನೇರಪ್ರಸಾರ ಮಾಡ್ತಾರೆ ನಾವು ಏನು ತಪ್ಪೇ ಮಾಡದೇ ಇದ್ರು ಮನೆಮನೆಗಳಲ್ಲಿ ಹೆಸರಾಗ್ತೀವಿ ಕೊನೆಗೆ ಮನೆಗೆ ಹೋಗೋಕ್ಕು ಮುಖವಿಲ್ಲದೇ ಎಲ್ಲಾದ್ರು ದೇಶಾಂತರ ಹೋಗ್ಬೇಕಾಗುತ್ತೆ... ಇಂತ ಪರಿಸ್ಥಿತಿನಲ್ಲಿ ಕಳ್ಳರ ಮೇಲೆ ಕಣ್ಣಿಡೋದು ಹೇಗೆ ಹೇಳಿ ಮೇಡಮ್ ನೀವೇ..!!!

ಹೂ.. ಏನು ಮಾಡೋದು ಸರ್ ನಿಮ್ಮಲ್ಲೂ ತಪ್ಪುಗಳು ಇವೆ ಹಾಗೆ ನಿಮಗೂ ತೊಂದರೆಗಳೂ ಇವೆ ಎಂಬುದು ಗೊತ್ತು... ಆದರೂ ನಮ್ಮಲ್ಲಿನ ವ್ಯವಸ್ಥೆಗಳು ಸರಿ ಇಲ್ಲ. ಇದ್ದರೂ ಒಳ್ಳೆಯ ರೀತಿ ಬಳಸಿಕೊಳ್ಳುವವರು ಕಡಿಮೆ ಸರ್... ಎಂದೇಳಿ ಯಾಪ್ ಮೋರೆ ಹಾಕುತ್ತ ಕುಳಿತಿದ್ದೇ... ನನ್ನನ್ನೇ ದುರುಗುಟ್ಟುತ್ತ ಅಲ್ಲೇ ಜೈಲಿನಲ್ಲಿದ್ದವ ನೋಡ್ತಾ ಇದ್ದ, ಮಗ ಅಮ್ಮ ಕಳ್ಳ ನೋಡು ಜೈಲಿನಲ್ಲಿರೋನು ಯಾರೋ ಪೋಲೀಸ್ ಹತ್ರಾನೇ ಸಿಗರೇಟ್ ತಕೊಂಡು ಸೇದುತಾ ಇದಾನೆ... ಪೋಲೀಸೇ ಅವರಿಗೆ ಹೆಲ್ಪ್ ಮಾಡ್ತಾರಲ್ಲಮ್ಮಾ... ಎಂದು ಮಗ ಪಿಸುಗುಡುತ್ತಿದ್ದ... ಹೌದು ಸುಮ್ಮನಿರು ಅವನ ಕಡೆ ನೋಡ್ಬೇಡ ಭಯ ಆಗುತ್ತೆ ಏನ್ ಹಂಗಿದಾನೇ ಯಪ್ಪಾ..!! ರೌಡಿ ಥರ... ಕಳ್ಳ-ಪೋಲೀಸ್ ಆಟನೇ ಹಾಗೆ ಬಿಡು ಎಂದೇಳಿ  ಪೋಲೀಸ್ ಗೆ ನಮಸ್ಕಾರ ಹೇಳಿ ಅಲ್ಲಿಂದ ಕಾಲ್ ಕಿತ್ತೆ.

ಠಾಣೆಯ ಅನುಭವ ಹೊಸದಾದರು ಕೆಲವು ವಿಚಾರ ತಿಳಿದುಕೊಂಡು ಭಾರದ ಹೃದಯ ನನ್ನ ಪ್ರೀತಿಯ ಸ್ಯಾಮ್ ನ ಹತ್ತಿರವೇ ನನ್ನ ಹೃದಯದ ಅಲೆ ಬೀಸ್ತಾ ಇತ್ತು ಆದರೇನು ಮಾಡಲಾಗದು, ನನ್ನ ಜೀವನದಲ್ಲಿ ಮೊದಲಬಾರಿಗೆ ಒಂದು ವಸ್ತು ಕಳೆದುಕೊಂಡ ಅನುಭವ ನನ್ನ ಮನಸ್ಸಿಗೆ ಬಹಳ ಆಘಾತವನ್ನೇ ತಂದಿತ್ತು...!!

ಉಸಿರಿಲ್ಲದ ಅವನು
ನನ್ನವನ ಕೊಡುಗೆ
ನನ್ನತ್ತ ಬಂದಾಗ
ಬೆಸೆದೆ ಪ್ರೀತಿ ಬೆಸುಗೆ
ಸದಾ ರಿಂಗಣಿಸುತ
ಮುಂಜಾವ ರಾಗವಾಗಿ
ಸಂಜೆಯ ಹೊನಲಾಗಿ
ನನ್ನ ಆವರಿಸಿದ್ದ ಸ್ಯಾಮ್
ನನ್ನೊಡನಿಲ್ಲ...
ಅಲೆಯಾಗಿ ತೇಲಿ ಹೋದೆ
ಮತ್ತೆಂದು ಬರುವೇಯೋ
ಎಂದು ಕಾದು ಕುಳಿತಿರುವೆ
ನನ್ನ ನೆನೆದು ಬರುವೆಯಾ
ಹೇ.. ನನ್ನೊಲವ ಅಲೆಯೇ..

ಏನು ಕರ್ಮವೋ ಒಟ್ಟಲ್ಲಿ ಆಗಿನ್ನು ಕುವೈತಿನಿಂದ ಬೆಂಗಳೂರಿಗೆ ಬಂದು ವಾರವೂ ಕಳೆದಿರಲಿಲ್ಲ, ನನ್ನ ಪ್ರೀತಿಯ (ಸ್ಯಾಮ್ ಸಂಗ್ ವೇವ್-೨) ಸ್ಯಾಮ್ ನ ಅಲೆ ಅದೆಷ್ಟು ಬೇಗ ಬೀಸಿತೋ... ಬಿದ್ದೇ ಬಿಟ್ಟಿತು ಕಳ್ಳಿಯ ಬಲೆಗೆ...  

ಎಷ್ಟೋಂದ್ ಜನ ಇಲ್ಲಿ ಯಾರು ಕದ್ದೋರು... ಎಲ್ಲಿ ನಮ್ಮ ಸ್ಯಾಮ್ ಸಂಗ್ ಎಲ್ಲೀ


ಐ ಮಿಸ್ ಯು... ಸ್ಯಾಮ್

Sunday, July 1, 2012

ಕಾಣದ ಲೋಕಕೆ ತೆರಳಿದಾಗ... ದರುಶನ ಭಾಗ್ಯ ಇಲ್ಲದಾಗ..!!


ಕಾರಣಾಂತರಗಳಿಂದ ೩ ವರ್ಷವಾದರೂ ಊರಿನ ಕಡೆ ತಲೆಹಾಕದವ ತನ್ನ "ಮಗ ಮತ್ತು ತಾಯಿ" ನೋಡಲು ಇತ್ತೀಚೆಗಷ್ಟೇ ಹೋಗಿ ಬಂದಿದ್ದ. ನೆಂಟರಿಷ್ಟರ ಒಡನಾಟ, ಊರೂರು ಸುತ್ತಾಟ, ಅಮ್ಮನ ಕೈ ಅಡುಗೆ ರುಚಿ ಇನ್ನೂ ತನ್ನ ನಾಲಿಗೆಯಲ್ಲೇ ಇದೆ.. ಇದೆಲ್ಲದರ ಜೊತೆ ತವರಿನ ನೆನಪು ಮಾಸೇ ಇಲ್ಲದಿರುವಂತಿರುವಾಗ ನೆನ್ನೆ..!! ಬೆಳ್ಳಂ ಬೆಳ್ಳಗ್ಗೆ ಏನೋ ಸಂಕಟ, ಮುಂಜಾವಿನ ನಿದ್ರೆಯೂ ತನ್ನತ್ತ ಸುಳಿಯದಂತೆ ಮಾಡಿದ್ದು ಆ ಒಂದು ದೂರವಾಣಿ ಕರೆ. ಆಂಧ್ರದ ಕಡೆಯಿಂದ ಕರೆ ಬಂದಿದ್ದೇ ತಡ ತನ್ನ ಕಿವಿ ತಾನೇ ನಂಬದಂತ ವಿಷಯವೊಂದು ಮುಟ್ಟಿತು. ಕಳೆದ ರಾತ್ರಿ ಅಮ್ಮನೊಟ್ಟಿಗೆ ಮಾತನಾಡಿದ್ದ ಮಗನಿಗೆ ಬೆಳ್ಳಿಗ್ಗೆ ಅಮ್ಮನಿಲ್ಲ ಎಂಬ ಸುದ್ದಿ ಆಘಾತ ನೀಡಿದ್ದಂತು ಸತ್ಯ.

ಅಮ್ಮನಂತೂ ಇಲ್ಲ, ಕೊನೆಯಲ್ಲಿ ಅಮ್ಮನ ಮುಖವಾದರೂ ನೋಡಬೇಕಲ್ಲಾ...!! ಓಹ್ ಏನು ಮಾಡುವುದು ಈಗಷ್ಟೇ ಊರಿಂದ ಬಂದಿದ್ದಾನೆ, ಇದ್ದಕ್ಕಿದ್ದ ಹಾಗೆ ಊರಿಗೆ ಮರಳೋದು ಎಂದರೆ ಅಷ್ಟು ಸುಲಭವೇ..?? ಕೈ ಎಲ್ಲಾ ಬರಿದಾಗಿದೆ ಕುವೈತಿನಲ್ಲಿ ನೆಲೆಸಬೇಕಾದರೆ ತನ್ನ ರೆಸಿಡೆನ್ಸಿ ಮಾಡಿಸಿಕೊಳ್ಳುವ ಸಲುವಾಗಿ ೧೦ ದಿನಗಳ ಮುಂದೆಯೇ ಕುವೈತಿ ವ್ಯಕ್ತಿಗೆ ಸುಮಾರು ೫೦ಸಾವಿರ ಹಣ ನೀಡಿ, ಒಂದು ವರ್ಷದ ಮಟ್ಟಿಗೆ ಕುವೈತಿನಲ್ಲಿ ನೆಲೆಸುವಂತೆ ಮಾಡಿಕೊಂಡಿದ್ದ. ತಾನು ದುಡಿಯೋ ಸಂಬಳ ಕೇವಲ ೧೦ ಸಾವಿರ ಇನ್ನು ಈಗ ಊರಿಗೆ ಹೋಗಲು ಸಾಲ ಯಾರು ನೀಡುತ್ತಾರೆ. ಹೇಗೆ ಊರಿಗೆ ಹೋಗೋದು ದೇವರೇ ...!!

ತನ್ನ ಇಷ್ಟೇಲ್ಲಾ ತೊಳಲಾಟವನ್ನು ನನ್ನ ಕಛೇರಿಯ "ಆಫೀಸ್ ಬಾಯ್"  ಹೇಳಿಕೊಳ್ಳದಿದ್ದರೂ ಅವನ ಕಣ್ಣುಗಳು ಮತ್ತು ಮುಖಭಾವ ಎಲ್ಲವನ್ನೂ ಬಿಚ್ಚಿಡುತ್ತಿತ್ತು. ನಾನು ಏನಾಗಿದೆ ಎಂದು ಪೂರ್ಣ ವಿಷಯ ತಿಳಿದಾಗ ಒಮ್ಮೆಲೇ ಮನಸ್ಸು ಕುಸಿದಂತಾಯಿತು. ಇಷ್ಟೆಲ್ಲಾ ಇದ್ದರೂ ಕೆಲಸಕ್ಕೆ ಬಂದಿದ್ದಾನೆ, ಜೊತೆಗೆ ಅವನು ಊರಿಗೆ ಹೋಗಬೇಕು ಎಂಬ ತುಡಿತವನ್ನೂ ಯಾರೊಂದಿಗೂ ಹೇಳಿಕೊಳ್ಳದೇ ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ... ಛೇ..!! ಎಂತಾ ವಿಪರ್ಯಾಸ, ತಾಯಿ ಮುಖ ನೋಡಲಾಗದೆ ಕೊರಗುತ್ತಾನಲ್ಲಾ ಎಂದೆನಿಸಿ ಕಛೇರಿಯಲ್ಲಿದ್ದವರೆಲ್ಲ ಯೋಚಿಸಿ ಅವನಿಗೆ ಟಿಕೆಟ್ ಕೊಡಿಸಿ ಕಳಿಸುವ ವ್ಯವಸ್ಥೆ ಮಾಡಲು ಮುಂದಾದೆವು.

ಹಣವನ್ನೆಲ್ಲಾ ಹೊಂದಿಸಿದೆವು, ಇದರ ಜೊತೆಗೆ ವಿಮಾನ ಟಿಕೆಟ್ ಬುಕ್ ಮಾಡುವ ಕೆಲಸ,ನಾನು ಇರೋಬರೋ ವಿಮಾನಗಳ ಬಗ್ಗೆ ವಿಚಾರಿ ನೋಡಿದೆ ಯಾವೊಂದು ವಿಮಾನಕ್ಕೂ ಟಿಕೆಟ್ ಸಿಗುತ್ತಿಲ್ಲ. ಕಾರಣ ಇಷ್ಟೇ.. ಇಲ್ಲಿ "ಜೂನ್, ಜುಲೈ,ಆಗಸ್ಟ್" ಈ ಮೂರು ತಿಂಗಳು ಬೇಸಿಗೆ ರಜೆಯಾದ್ದರಿಂದ ಎಲ್ಲಾ ವಿಮಾನಗಳ ಟಿಕೆಟ್ ಈ ಮೊದಲೇ ಬುಕ್ ಆಗಿಹೋಗಿದ್ದವು. ಕೊನೆಗೂ ಯಾವುದೇ ವಿಮಾನಕ್ಕೂ ಟಿಕೆಟ್ ಸಿಗಲಿಲ್ಲ ಅಮ್ಮನ ಮುಖ ನೋಡಲಾಗಲೂ ಇಲ್ಲ. ಊರಿಗೆ ಕರೆ ಮಾಡಿ ನಾನು ಬರುವುದಿಲ್ಲ ಉಳಿದ ಕಾರ್ಯಗಳನ್ನೆಲ್ಲ ಮುಗಿಸಿಬಿಡಿ ಎಂದು ತನ್ನವರಿಗೆ ಕರೆಮಾಡಿ ಕೈ ಚೆಲ್ಲಿ ಕುಳಿತುಬಿಟ್ಟ.

ಕೊನೆಯಲ್ಲಿ ಅವನ ಮಾತು ಮೇಡಮ್, "ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು" ಎಂಬಂತೆ ನನ್ನ ಪರಿಸ್ಥಿತಿ, ನೀವೆಲ್ಲ ಹಣ ನೀಡಿ ಇಷ್ಟು ನನಗಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ.. ಈಗೊಂದೇ ದಾರಿ ಅಮ್ಮನ ಆತ್ಮಕ್ಕೆ ಕ್ಷಮೆಕೋರಿ ಇಲ್ಲಿಂದಲೇ ಕೈಮುಗಿದು ಬಿಡುವೇ..!!

"ಅಮ್ಮಾ..!! ನನ್ನನ್ನು ಕ್ಷಮಿಸಿಬಿಡು ನಿನ್ನ ಮುಖ ನೋಡಲು ಬರಲಾಗದು" ಸತ್ತ ಜೀವಕೆ ಕೇಳಿತೆ ಈ ಮಗನ ಮಾತು...!!???


Tuesday, June 19, 2012

ಯಾಕೆ...ಹೀಗೆ..!??


ಯಾಕೆ ಮನುಷ್ಯ ಹೀಗೆ
ಮನಸು ಪೂರ ಕೆಡಕೇ
ಹಾಲಿನಂತ ಮನಸಿಗೆ 
ಹುಳಿ ಹಿಂಡುವುದು ಏತಕೆ...


ಇಂದು ಇರುವುದು
ನಾಳೆ ಕಳೆವುದು
ನಾವೇ ದುಡಿದ ಆ ಹಣ
ವ್ಯಯಿಸುವುದಕೆ ಬೆಲೆಯ ಕಟ್ಟುವುದು ಏತಕೆ...ಈ ಜನ. 


ಊರು ಊರು ಸುತ್ತಿ
ಕಷ್ಟ ನಷ್ಟ ಎಲ್ಲ ಜಯಿಸಿ
ಇರುವ ಎರಡು ದಿನದ ಬದುಕಲಿ
ಮನಸಿಗೆ ಕಸಿವಿಸಿ ಕೊಡುವುದು ಏತಕೆ...ಈ ಜನ 


ಹೋದ ನೆನ್ನೆಗೂ 
ಬರುವ ನಾಳೆಗೂ
ಇಂದು ಹೋಲಿಕೆ ಏತಕೆ
ಇದ್ದಲ್ಲೇ ಇರುವ ಮನಸಿಗೆ 
ಒತ್ತಡದ ಬಿಸಿಯೇಕೆ ನೀಡುವರು...ಈ ಜನ.


ಅರ್ಥವಿರುವ ಜೀವನಕೆ
ವ್ಯರ್ಥ ಕಾಲಹರಣ 
ಕೊಳಕ ತುಂಬಿಸಿ
ಗಂಗೆಯ ಕದಡಿದಂತೆ
ಶುದ್ಧ ಮನಸ ಹೊಲಸು ಮಾಡುವುದು ಏತಕೆ...ಈ ಜನ.

Thursday, June 7, 2012

ಬ್ಯೂಟಿ ಮತ್ತು ಪಾರ್ಲರ್

ಒಳಗೊಳಗೇ ಏನೋ ಕೌತುಕ...ಆಗಿನ್ನು ಕುವೈತ್ ನಗರ ಹೊಸದು. ಕುವೈತಿಗೆ ಬರುವ ಮೊದಲು ಬೇರೆ ಅರಬ್ ದೇಶ ನೋಡಿದ್ದರೂ, ಇಲ್ಲಿನ ವಾತಾವರಣ, ಜನ, ಸ್ಥಳ ಎಲ್ಲವೂ ಬೇರೆ ತರಹವೇ ಇದೇ ಎನ್ನಿಸಿತ್ತು.  ನಗರವನ್ನು ಒಮ್ಮೆ ಸುತ್ತಾಡಿದೊಡೆ ಕಣ್ಣಿಗೆ ಕಾಣೋದು ಹೆಚ್ಚುಕಡಿಮೆ ಒಂದೊಂದು ಅಪಾರ್ಟ್ ಮೆಂಟ್ಗಳಲ್ಲೂ ಒಂದು ಅಥವಾ ಎರಡು ಬ್ಯೂಟಿ ಪಾರ್ಲರ್ ಗಳೇ ಕಾಣ್ತಾವೇ... ಯಪ್ಪಾ..!!! ಕುವೈತ್ ಹೆಂಗಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚೇ ಇರಬೇಕು ಅಂದುಕೊಂಡಿದ್ದೆ. ಬ್ಯೂಟಿ ಪಾರ್ಲರ್ ಜಾಸ್ತಿ ಆದಷ್ಟು ಅಲಂಕಾರ ಪ್ರಿಯರೂ ಜಾಸ್ತಿ ಆಗ್ತನೇ ಇರ್ತಾರೆ ಅಲ್ವಾ..??.ಕುವೈತಿಗೆ ಹೊಸದಾಗಿ ಬಂದಾಗ ಬೆಂಗಳೂರಿನ ಸ್ನೇಹಿತ ಒಬ್ಬ ಕೇಳಿದ್ದ "ಕುವೈತಿ ಹುಡುಗೀರು ಹೇಗಿದ್ದಾರೆ. ಎಲ್ಲಾ ಹೇಳ್ತಾರೆ ಸಕತ್ ಬ್ಯೂಟಿಗಳಾಗಿರ್ತಾರೆ ಅಂತಾ ಹೌದಾ..?" ಎಂದಿದ್ದ. ನಾನು ಹೌದ..!! ನಾನು ಅಷ್ಟು ನೋಡೇ ಇಲ್ಲವೇ, ಎಂದು ಅಂದಿನಿಂದಲೇ ಕುವೈತಿ ಹೆಂಗಳೆಯರತ್ತ ಕಣ್ಣಾಯಿಸಿದೆ.... ವಾಹನ ಓಡಿಸುವಾಗ ಅವರ ಕರಗಳನ್ನು ನೋಡಿ ವಾಹ್ ಎಷ್ಟು ನುಣುಪಾಗಿದೆ ಕೈ. ಅವರ ಕೈಗಳೇ ಅಷ್ಟು ಚೆಂದವಿರುವಾಗ  ಇನ್ನು ಮುಖವೇಗೆ ಇರುತ್ತೆ ಎಂದುಕೊಳ್ಳುತ್ತಿದ್ದೆ.  

ನಿಜ ಕುವೈತಿನ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿರುತ್ತಾರೆ. ಇಲ್ಲಿನ ಹೆಂಗಳೆಯರು ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡ್ತಾರೆ ಎಂದೆನಿಸಿತು. ಮೊದಲೇ "ಹೆಣ್ಣು ಎಂದರೆ ಸೌಂದರ್ಯ" ಎಂಬಂತೆ ಪ್ರಪಂಚ ಬಿಂಬಿಸಿದೆ ಅದರೊಳಗೆ ಇಲ್ಲಿನ ಹೆಂಗಳೆಯರು ಇನ್ನೂ ವಿಭಿನ್ನ.   ಇಲ್ಲಿನವರು ಪಾಶ್ಚಿಮಾತ್ಯರ ರೀತಿಯೂ ಉಡುಗೆಗಳನ್ನು ತೊಡುವವರೂ ಇದ್ದಾರೆ, ಅಂತೆಯೇ ತಮ್ಮದೇ ಸಂಸ್ಕೃತಿಯ ಬುರುಕವನ್ನು ತೊಡುವವರೂ ಇದ್ದಾರೆ. ಬುರುಕವನ್ನು ತೊಟ್ಟಿರುವಂತ ಹೆಂಗಳೆಯರನ್ನು ನೋಡಿದ್ದೇನೆ. ಆಹಾ..!! ಏನು ಹೇಳ್ತೀರಾ ಕಣ್ಣಿಗೆ ತೀಡಿದ ದಟ್ಟನೆಯ ಕಾಡಿಗೆ ನಮ್ಮನ್ನ ಆಕರ್ಷಿಸುತ್ತವೆ. ಇನ್ನು ಇಲ್ಲಿನ ಹೆಂಗಳೆಯರು ಮೃದು ಕೋಮಲ ತ್ವಚೆಯ ಸ್ವಚ್ಚ ಬೆಳ್ಳನೆಯ ಚರ್ಮಕ್ಕೆ ಹೊಂದುವಂತಾ ಅಲಂಕಾರ ಜೊತೆಗೆ ಕೇಶರಾಶಿ... ನಾನು ಎಷ್ಟೋ ದಿನ ಯೋಚಿಸಿದ್ದೇನೆ, ಈ ಹೆಂಗಳೆಯರಿಗೆ ಸಮಯ ಎಲ್ಲಿ ಸಿಗುತ್ತೆ, ಯಾವಾಗ ಈ ರೀತಿ ಅಲಂಕಾರ ಮಾಡಿಕೊಳ್ಳುತ್ತಾರೆ ಎಂದು. ಕುವೈತಿನ ಇಂತಹ ಸುಡುಬಿಸಿಲಿನಲ್ಲೂ ಅವರ ಸೌಂದರ್ಯ ಸ್ವಲ್ಪವೂ ಮಾಸಿರುವುದಿಲ್ಲ ಆ ರೀತಿ ಅಲಂಕರಿಸಿರುತ್ತಾರೆ.

ಅಲಂಕಾರ ಎಂದರೆ ಬರಿ ಬಣ್ಣ ಬಳಿದುಕೊಳ್ಳುವುದಕ್ಕೆ ಅಷ್ಟೇ ಮೀಸಲಿಡದೆ, ತನ್ನ ರೂಪಕ್ಕೆ ತಕ್ಕಂತಹ ವಸ್ತ್ರಗಳನ್ನು ತೊಟ್ಟು, ಅದಕ್ಕೆ ಸೂಕ್ತವಾಗಿ ಬೆರಳುಗಳಿಗೆ ಉಂಗುರ, ಕಿವಿ ಓಲೆ, ಕೊರಳಿಗೆ ಸರ, ಚಪ್ಪಲಿ ಇವೆಲ್ಲಾ ಅಲ್ಲದೆ ತನ್ನ ಕೈಗಳಲ್ಲೂ ಮೇಕಪ್ ಗೆ ತಕ್ಕಂತ ಬ್ಯಾಗಳನ್ನೂ ಸಹ ದಿನದಿನಕ್ಕೂ ಬದಲಿಸಿ ಬರ್ತಾರೆ. ಈ ಸೌಂದರ್ಯ ಸುಗಂಧವಾಗಿಸಲು ಅವರು ಬಳಸೋ ಸುಗಂಧ ದ್ರವ್ಯಗಳಂತೂ ಹೇಳತೀರದು ಸದಾ ಘಮಘಮಿಸುತ್ತಲೇ ಇರ್ತಾರೆ. ಇವೆಲ್ಲವುಗಳ ಜೊತೆ ಕೆಲವು ಹೆಣ್ಣು ಮಕ್ಕಳು ವಿವಿಧ  ಕಾರುಗಳು ಅದು ಹೆಸರಾಂತ  ಐಷಾರಾಮಿ ಕಾರುಗಳನ್ನ ಆಗಾಗ ಬದಲಿಸುತ್ತಾ ಓಡಾಡುವುದನ್ನ ಕಂಡಿದ್ದೇವೆ.ಕುವೈತ್ ಹೆಂಗಳೆಯರು ಬರಿ ಸೌಂದರ್ಯಕ್ಕಷ್ಟೇ ಮೀಸಲಿಡದೆ, ಅವರುಗಳಲ್ಲಿ ಬಹಳಷ್ಟು ವಿದ್ಯಾವಂತೆಯರು ಸಹ ಇದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನು ಅಲಂಕರಿಸಿ ಸದಾ ಎಲ್ಲಾ ಕಾರ್ಯಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಷಯ. 

ಐಷಾರಾಮಿ ಕುವೈತ್ ನಗರಿಯಲ್ಲಿ ಹೆಂಗಳೆಯರ ಪಾರ್ಲರ್ ಎಷ್ಟು ಐಷಾರಾಮಿಯಿಂದ ಕೂಡಿರುತ್ತದೋ ಅಷ್ಟೇ ಐಷಾರಾಮಿಯಿಂದ ಗಂಡಸರ ಪಾರ್ಲರ್ ಗಳೂ ಸಹ ಇರುತ್ತವೆ (ಗಂಡಸರೇನು ಕಮ್ಮಿ ಮೇಕಪ್ ಮಾಡ್ತಾರೇ ಅಂದುಕೋ ಬೇಡಿ).  ಜಗಮಗಿಸೋ ದೀಪಗಳು, ಅದ್ಧೂರಿ ಆಸನಗಳು, ವಿಭಿನ್ನ ರೀತಿಯ ಕನ್ನಡಿಗಳ ಶೃಂಗಾರ ನೋಡೋಕ್ಕೆ ಎರಡು ಕಣ್ಣು ಸಾಲದೆ ಕೃತಕ ಎರಡು ಕಣ್ಣುಗಳನ್ನ(ಕನ್ನಡಕ) ತೆಗೆದುಕೊಂಡಿದ್ದೇನೆ. ನಾನು ಹೇಳುವುದಕ್ಕಿಂತ ನೀವೆಲ್ಲಾ ಒಮ್ಮೆ ಬಂದು ನೋಡಿದರೆ ಚೆನ್ನಾಗಿರುತ್ತೆ. ಬೆಂಗಳೂರಲ್ಲಿ ಚಿಲ್ಲರೆ ಅಂಗಡಿಗಳು ಇದ್ದ ಹಾಗೆ ಈ ಪಾರ್ಲರ್ ಗಳು ಇವೆ ಎಂದರೆ ನೀವು ನಂಬಲೇ ಬೇಕು.

ಕುವೈತಿನ ಪ್ರತಿ ಅಪಾರ್ಟ್ ಮೆಂಟ್ ಗಳಲ್ಲಿ ಕಾಣಿಸೋ ಬ್ಯೂಟಿ ಪಾರ್ಲರ್ ನೋಡಿದ್ರೇ ಇವರು ವಾರಕ್ಕೆ ಅದೆಷ್ಟು ಬಾರಿ ಕುಳಿತು ಶೃಂಗಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೋ ಎನಿಸುತ್ತದೆ. ಒಟ್ಟಲ್ಲಿ ಏನೇ ಹೇಳಿ ಕುವೈತಿನ ಹೆಂಗಳೆಯರಲ್ಲಿ ಸೌಂದರ್ಯ ಪ್ರಜ್ಞೆ ಮೆಚ್ಚಲೇ ಬೇಕು ಜೊತೆಗೆ ಆ ಸೌಂದರ್ಯ ವರ್ಧಕಗಳ ಜೊತೆಗೆ ಸಮಯ ತಳ್ಳುತ್ತ ಸಮಯ ಮೀಸಲಿಡುವ ಅವರ ತಾಳ್ಮೆಗೆ ಜೈ ಎನ್ನಲೇ ಬೇಕು.

ಚಿತ್ರಗಳು: ನೆಟ್ ಲೋಕ

Sunday, May 6, 2012

ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ - ಬಸವ ಜಯಂತಿ

 ಶರಣರ ಬರವೆನಗೆ ಜೀವಾಳವಯ್ಯ... ಎಂದು ಬಾಗಿಲಲ್ಲೇ ಕಾದು, ಬರಲಿರುವ ಶರಣ ಶರಣೆಯರನ್ನ ಸ್ವಾಗತಿಸಲು ನಿಂತಿದ್ದ ಮನೆಯೊಡೆಯ ಮತ್ತು ಮನೆಯೊಡತಿ ‘ಇನ್ನೂ ಯಾಕ ಬರಲಿಲ್ಲವ್ವ ನಮ್ಮ ಮಂದಿ’ ಎಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತನೇ ಇದ್ರು....  ‘ಭಜನಾ ಮಂಡಳಿಯವರು ಬಂದ್ರೆ ನೋಡಿ ನಮ್ಮ ಕಾರ್ಯಕ್ರಮ ಚಲೂ ಆಗೋದು’ ಅಂತ ಮಾತಾಡ್ಕೋತಾ ಇದ್ರು. ೬.೩೦ರ ಆಸುಪಾಸು ಇರಬೇಕು ಒಬ್ಬೊಬ್ಬರೇ ಬರಲಿಕ್ಕೆ ಪ್ರಾರಂಭಿಸಿದ್ರು. ಮನೆಯೊಳಗಣ ಗುಡಿಯೊಳಗೆ ಕುಳಿತಿದ್ದ ಬಸವಣ್ಣನಿಗೆ ನಮಿಸಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

೧೨ನೇ ಶತಮಾನದ ಕ್ರಾಂತಿ ಇಂದಿಗೂ ಮಾದರಿಯಾಗಿದೆ,  ಜಾತಿ ಭೇದ, ಮೇಲು-ಕೀಳು, ಲಿಂಗ ಭೇದ ಇಂತಹುವುಗಳು ಅಂದು-ಇಂದಿನದಲ್ಲ ತಲತಲಾಂತರಗಳಿಂದ ಬಂದಿರುವಂತಹ ಈ ಅಸ್ಪೃಶ್ಯತೆಯ ಭಾವನೆಗಳನ್ನು ತೊಳೆದು ಹಾಕಲು ಬಸವಣ್ಣ ರೂಪಿಸಿಕೊಂಡ ಮಾರ್ಗ ಮಾತ್ರ ಅದ್ವಿತೀಯ. ಬಸವಣ್ಣ ತನ್ನ ಜೀವನದ ಎಲ್ಲಾ ಆಯಾಮಗಳಲ್ಲಿ ಮಿಂದು ಬಂದವರು ಜೀವನದ ಎಲ್ಲಾ ಬೇಕು ಬೇಡಗಳನ್ನು ಸಮಾನಾಗಿ ಸ್ವೀಕರಿಸಿದಂತಹ ಅಣ್ಣ ನಮ್ಮ ಜೀವನದ ಧರ್ಮ ಗುರು, ಭಕ್ತಿ ಭಂಡಾರಿ, ದಾಸೋಹ, ಕಾಯಕಗಳ ಗುರು. “ಕಾಯಕದಲ್ಲಿ ಕೈಲಾಸವನ್ನು ಕಾಣು ದಾಸೋಹದ ಮುಖೇನ ನೀಡುವ ಕೈ ಮುಂದಾಗಲಿ” ಎನ್ನುವಂತಹ ಬಸವಣ್ಣನ ಧ್ಯೇಯ ಮಾರ್ಗವನ್ನು ಹಿರಿಯರಾದ, ತೀರ್ಥರೂಪು ಸಮಾನರಾದ ಶ್ರೀಯುತ ಅಪ್ಪಾ ರಾವ್ ಅಕ್ಕೋಣಿಯವರು  “ಬಸವ ಜಯಂತಿಯ ಆಚರಣೆ ಇದೇ ವರ್ಷಕ್ಕೆ ೧೦೦ ವಸಂತಗಳನ್ನು ಕಂಡಿದೆ,... ಮನುಷ್ಯ ದೇವರಲ್ಲ.. ಆದರೆ ದೇವರಂತೆ ಪೂಜಿಸಬಹುದು.. ಅದು ಮನುಷ್ಯ ದೇವರ ಸ್ಥಾನವನ್ನು ಪಡೆದುಕೊಂಡರೆ ಎಲ್ಲವೂ ಸಾಧ್ಯ...  ಆ ಸ್ಥಾನ ನಾವು-ನೀವೆಲ್ಲಾ ಗಳಿಸಬಹುದು ನಮ್ಮ ಮನಸ್ಸು ಒಳ್ಳೆಯ ಚಿತ್ತದಲ್ಲಿದ್ದರೆ” ಎಂಬಂತೆ ಅಪ್ಪಾಜಿ ತಿಳಿಸಿದಾಗ ನನಗೆ ನೆನಪಾದ ವಚನ...
ಕಲ್ಲ ದೇವರು ದೇವರಲ್ಲ, ಮಣ್ಣ ದೇವರು ದೇವರು ದೇವರಲ್ಲ, 
ಮರ ದೇವರು ದೇವರಲ್ಲ,  ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ 
ಸೇತುಬಂಧ ರಾಮೇಶ್ವರ, ಗೋಕರ್ಣ,  ಕಾಶಿ, ಕೇದಾರ, 
ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯಕ್ಷೇತ್ರಂಗಳಲ್ಲಿಯ ದೇವರು ದೇವರಲ್ಲ 
ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ ಬಾಲಸಂಗಯ್ಯ ಅಪ್ರಮಾಣ ದೇವ....

ಹೀಗೊಂದು ವಚನವಿದೆ ಕಲ್ಲ ದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ, ಮರ ದೇವರಲ್ಲ ಹಾಗೆ ಮನುಷ್ಯನು ದೇವರಲ್ಲ ತನ್ನ ತಾನರಿತು ನಾನು ಯಾರು ಎಂದು ತಿಳಿದು ನೆಡೆದ್ರೇ ದೇವರಾಗಬಹುದು ಎಂಬಂತಿದೆ.. ಈ ವಚನದಲ್ಲಿ ಇರುವ ಆಶಯವನ್ನೇ ಅಪ್ಪಾಜಿ ನಮ್ಮೆಲ್ಲರಿಗೂ ಮನವರಿಕೆಯಾಗುವಂತೆ ತಿಳಿಸಿದರು. ಅವರ ನುಡಿ ನಮ್ಮೆಲ್ಲರ ಮನದಲ್ಲಿ ಬೆಳಕು ಮೂಡಿಸಿದ್ದಂತೂ ಸತ್ಯ.  ನಾನೂ ದೇವರಾಗಲು ಸಾಧ್ಯವಾದರೆ ಪ್ರಯತ್ನಿಸು ಎಂದು ಎಲ್ಲೋ ಒಳ ಮನಸ್ಸು ಹೇಳಿದ ಹಾಗಾಯಿತು. ೧೨ನೇ ಶತಮಾನದ ವಿಚಾರ ಧಾರೆಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಅನುಭವ ಮಂಟಪದಂತಹ ಸ್ಥಳ ಈಗಲೂ ಇದ್ದಿದ್ದರೆ ಎಲ್ಲರೂ ದೈವದೆಡೆಗೆ, ಸದ್ ಬುದ್ಧಿಯೆಡೆಗೆ ನೆಡೆಯಬಹುದಿತ್ತೇನೋ...!! ಅಲ್ಲಮ, ಸಿದ್ಧರಾಮ, ಅಕ್ಕ, ಆಯ್ದಕ್ಕಿ ದಂಪತಿಗಳು, ಚೆನ್ನಬಸವಣ್ಣ, ನೀಲಾಂಬಿಕೆ, ಮಾದಲಾಂಬಿಕೆ ಎಲ್ಲರ ಬಗೆಗೂ ಪುಟ್ಟ ವಿವರಗಳನ್ನು ನೀಡಿದ್ದು ಖುಷಿಕೊಟ್ಟಿತು. ಇನ್ನೂ ಮತ್ತಷ್ಟು ಹೇಳಿದ್ದರೆ ಚೆಂದವೆನಿಸುತ್ತಿತ್ತು ಆದರೆ ಮಾತು ಮೊಟುಕಾಗಿದ್ದು ಸಮಯದ ಅಭಾವದಿಂದಷ್ಟೇ... ಅವರೊಂದಿಗೆ ಮತ್ತಷ್ಟು ವಿಚಾರಧಾರೆ ತಿಳಿಯೋ ಆಶಯ ನನ್ನದಾಗಿದೆ.ನುಡಿದರೆ ಮುತ್ತಿನ ಹಾರದಂತಿರಬೇಕು, ವಚನದಲ್ಲಿ ನಿನ್ನ ನಾಮಾಮೃತ ತುಂಬಿ,  ಸಕಲಕೆಲ್ಲಾ ನೀನೇ ಅಕಳಂಕ ಗುರುವೆಂದು.... ಹೀಗೆ ಸಾಲು ಸಾಲು ವಚನಗಳು ದಿಬ್ಬಣವೇರಿ ಕಿವಿಯಲ್ಲಿ ಕೇಳುತ್ತಲಿದ್ದಂತೆ. ವಚನಕಾರರಲ್ಲಿ ಮಹಿಳೆಯರಿಗೆ ನೀಡಿದ ಪ್ರಾಶಸ್ತ್ಯ, ೧೨ನೇ ಶತಮಾನದಲ್ಲಿಯೇ ಹೆಣ್ಣು ಪ್ರಪಂಚದ ಕಣ್ಣು ತೆರೆಸ ಹೊರಟಂತಹ ಹಲವು ವಚನಗಾರ್ತಿಯರ ವಿಶೇಷತೆಯನ್ನು ಮತ್ತು ನಮ್ಮ ನಮ್ಮ ಕ್ರಿಯೆಯಲ್ಲಿ ಆಚಾರವಿರಬೇಕು ಎಂಬ ತತ್ವವಾದಿಗಳ ವಚನಕಾರ್ತಿಯರ ವಚನಗಳೊಂದಿಗೆ ಶ್ರೀಮತಿ ಸಂಧ್ಯಾಅರುಣ್ ಬಹಳಷ್ಟು ಸವಿವರವಾಗಿ ತಿಳಿಸಿದರು. ನಂತರ ಅಕ್ಕ ಮಹಾದೇವಿಯವರ ತನುಕರಗದವರಲಿ... ವಚನದೊಡನೆ ಮತ್ತಷ್ಟು ವಚನ ಗಾಯನ ಸಾಗಿತು.

ಸಾರೀ ಚೆಲ್ಲಿದ ಮುಕುತಿ... ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ...  ಇವೆಲ್ಲ ವಚನಗಳೊಂದಿಗೆ ಶಿವನ ಕುರಿತ ಬೋಲೋ ಓಂ ನಮಃ ಶಿವಾಯ, ಹರ ಓಂ... ಬ್ರಹ್ಮ ಮುರಾರಿ ಹೀಗೆ ಸಾಲುಸಾಲುಗಳೇ ಇವೆ, ಇದೆಲ್ಲದರೊಟ್ಟಿಗೆ ತಂದೆ ನೀನು ತಾಯಿ ನೀನು....ಹಸಿವಾದೊಡೆ .... ಇವನಾರವ ಇವನಾರವ .... ಹೀಗೆ ಹಲವು ವಚನಗಳಿಗೆ ಧ್ವನಿಯಾಗಿದ್ದು ಪುಟಾಣಿಗಳು. ಆ ವಚನಗಳನ್ನು ಕೇಳಿದ ನಾವೇ ಪುಣ್ಯವಂತರು. ಆ ಮಕ್ಕಳಲ್ಲಿದ್ದ ಹುಮ್ಮಸ್ಸು ವಚನ ಗಾಯನ ನಮಗೆ ಪ್ರೇರಣೆ.

ಇಷ್ಟು ವಿಜೃಂಭಣೆಯಲ್ಲಿ ವಚನ ಸಾಹಿತ್ಯದ ಒಂದು ಬೆಳವಣಿಗೆಗೆ  ೧೨ನೇ ಶತಮಾನ ಹೇಗೆ ಪೂರಕವಾಗಿತ್ತು ಎಂಬುದನ್ನು ತಿಳಿಸಲು ಗೋಕುಲಾಷ್ಟಮಿಯ ಇಮಾಮ್ ಸಾಬ್ ರನ್ನು ನೆನಪುಮಾಡಿಕೊಳ್ಳುತ್ತ ಡಾ. ಅಜಾದ್ ಮೈಕ್ ಹಿಡಿದು ನಿಂತರು.. ಅದೇಕೋ ತಂಪು ಹವಾ ಗಾಳಿ ಇದ್ದರೂ ಬೆವರುತ್ತಲೇ (ಗೋಕುಲಾಷ್ಟಮಿಗೆ ಇಮಾಮ್ ಸಾಹೇಬರನ್ನ ಕರೆಸಿ, ತಾನು ತಯಾರಿ ಮಾಡಿ ಬಂದಿದ್ದೆಲ್ಲವನ್ನ ಹಿರಿಯರು ಹೇಳಿ ಮುಗಿಸಿದ್ದರು.. ಇನ್ನೇನಪ್ಪಾ ಹೇಳಲಿ ಅನ್ನೋ ಟೆನ್ಶನ್ ಆಗಿತ್ತಂತೆ...ಪಾಪ....!!) ಸರ್ವಜ್ಞರ ವಚನಗಳನ್ನೇ ಉದಾಹರಣೆಯನಿಟ್ಟು ವಚನ ಸಾಹಿತ್ಯ ಜನ ಸಾಮಾನ್ಯರಿಗೂ ಅರ್ಥವಾಗುವಂತೆ, ಲೋಕದ ಆಗುಹೋಗುಗಳ ಜೊತೆ ಚಿಂತನೆಗಳನ್ನು ಸೃಷ್ಟಿಸಿದ್ದು ವಚನಗಾರರುಗಳ ಸಾಹಿತ್ಯ. ಅದು ಬಹುಬೇಗ ಜನರತ್ತ ತಲುಪಿ ಸ್ಪಂದಿಸಿದ್ದೂ ಇದೆ. ೧೨ನೇ ಶತಮಾನಕ್ಕೂ ಮುಂಚೆ ವಿದ್ವಾಂಸರು, ಆಸ್ಥಾನ ಕವಿಗಳು ರಚಿಸುವ ಸಾಲುಗಳು ಹಳೆಗನ್ನಡ, ಸಂಸ್ಕೃತ ಇವುಗಳಿಂದಲೇ ಕೂಡಿದ್ದವು, ಇವು ಅಷ್ಟು ಬೇಗ ಜನರನ್ನ ಒಲಿಸುವಂತಹವುಗಳಾಗಿರಲಿಲ್ಲ ಇಂತಹ ಸಮಯದಲ್ಲಿ ಹೊಸ ರೂಪವನ್ನು ಕೊಟ್ಟಿದ್ದು ವಚನ ಸಾಹಿತ್ಯ ಜೊತೆಗೆ ಕನ್ನಡ ಬೆಳವಣಿಗೆಗೂ ಒಂದು ವೇದಿಕೆ ನಿರ್ಮಾಣವಾಗಿದೆ ಎಂದು ಡಾ. ಅಜಾದ್ ಸವಿಸ್ತಾರವಾಗಿ ತಿಳಿಸಿದರು....    


ಮುಕ್ತಾಯದ ಹಂತಕ್ಕೆ ಬಂದಾಗ ಬಸವ ಚಿತ್ರ ಪಟಕ್ಕೆ ವಂದಿಸುತ್ತಾ ಶರಣ ಶರಣೆಯರು ಬಿಲ್ವಾಕ್ಷತೆಯನ್ನು ಪೇರಿಸಿ ಕೈಮುಗಿದು ಹೊರನೆಡೆದಾಗ ಕಣ್ ಕೋರೈಸಿದ್ದು ಉತ್ತರ ಕರ್ನಾಟಕ ಶೈಲಿಯ ದಾಸೋಹ ಸಂಭ್ರಮ... ಬಸವಣ್ಣನ ಮನನ ಮಾಡಿ ಮರುದಿನದ ಕಾಯಕ ನೆನೆದು ಬಂದಿದ್ದ ಶರಣರೆಲ್ಲರೂ ದಾಸೋಹದಲ್ಲಿ ಪಾಲ್ಗೊಂಡರು ... ಹೋಳಿಗೆ ಮಾವಿನ ಹಣ್ಣಿನ ಸೀಕರಣೆ, ಬಕ್ರಿ ಭಾಳ್ ತಿಂದ್ವಿ ನೋಡ್ರಿ (ಜೋಳದ ರೊಟ್ಟಿ )ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ ಪುಡಿಗಳು... ಅದು ಇದು ಪುಡಿಗಳೆಲ್ಲಾ ಇದ್ದವೂ ನನ್ಗೆ ಮರೆತು ಹೋಗಿದೆ ಹಹಹಹ... ಖರೆ ಉತ್ತರ ಕರ್ನಾಟಕದವ್ರನ್ನೇ ಕೇಳ್ಬೇಕ್ರಿ... ಭಾಳ್ ಛಲೋ ಅಡಿಗೆ ಮಾಡಿದ್ರಿರೀ.. ಹೊಟ್ಟೆ ತುಂಬ ತಿಂದು ಮನಸ್ಸು ದೇಹ ಸಂತುಷ್ಟಿಯಾಯಿತು. 


ವಚನಗಳು ಸರ್ವಕಾಲಿಕ ವಚನಗಳಲ್ಲಿನ ಆಶಯ ನಿಜಕ್ಕೂ ಹಲವು ಅರ್ಥಗಳನ್ನು ನೀಡುತ್ತೆ ಇಂತಹ ವಚನಗಳ ನೆನಪಿಗೆ ಮತ್ತು ವಚನ ಸಾಹಿತ್ಯದ ವಿಚಾರ ಧಾರೆಗೆ ಬಸವ ಜಯಂತಿ ಒಂದು ವೇದಿಕೆಯಾಗಿದ್ದಂತೂ ಸತ್ಯ. ಹಿತವಚನಗಳು ನಂತರ ವಚನ ಗಾಯನ ಗಂಡಸರು ಮತ್ತು ಹೆಂಗಸರ ತಂಡ ಮತ್ತು ಪುಟಾಣಿಗಳ ಮನೋಜ್ಞವಾಗಿ ಇಂಪಾದ ವಚನಗಳು ಎಲ್ಲವನ್ನೂ ನಮಗೆ ಉಣಬಡಿಸಿ ತಮ್ಮ ಮನೆಯಲ್ಲಿ ಇಷ್ಟೆಲ್ಲಾ ಸಂತೃಪ್ತಿ ನೀಡಿ ಕಾರ್ಯಕ್ರಮ ಏರ್ಪಡಿಸಿದ ಕಾಯಕ ದಾಸೋಹಿಗಳಾದ ಸಂಗೀತ ಮತ್ತು ಅಮೃತ್ ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತೇನೆ. ಸದಾ ಕಾಯಕದ ಕೈಲಾಸ ನಿಮ್ಮದಾಗಲಿ ವಿಚಾರ ವಿನಿಮಯಗಳಿಗೆ ನಿಮ್ಮ ಮನೆ ಮನಸ್ಸು ವೇದಿಕೆಯಾಗಲಿ.  ಒಂದು ಸವಿನೆನಪಿನ ವೇದಿಕೆಯಾಗಲೂ ಈ ಕುಟುಂಬಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು...

ಹಿರಿಯರ ಮಾರ್ಗದರ್ಶನ ನಮ್ಮಂತ ಕಿರಿಯರಿಗೆ ದಾರಿದೀಪ ಎಂಬಂತೆ ಅಮೃತ್ ರಾಜ್ ರವರ ಅಪ್ಪ ಅಮ್ಮರಾದ ಶ್ರೀಮತಿ ಸುಲೋಚನ ಮತ್ತು ಶ್ರೀಯುತ ಅಪ್ಪಾ ರಾವ್ ಅವರಿಗೆ ನಮ್ಮ ಅಭಿನಂದನಾ ಪೂರ್ವಕ ಧನ್ಯವಾದಗಳು ಅವರ ಮಾರ್ಗದರ್ಶನವೇ ಈ ಕಾರ್ಯಕ್ರಮದ ಯಶಸ್ಸು...


ಶರಣು ಶರಣಾರ್ಥಿ...

Monday, April 23, 2012


ಭಕ್ತಿ ಭಾವದ ಪೈರ ನೆಟ್ಟು
ಭವಂಗಳಲಿ ಪ್ರೀತಿಯೆಂಬ 
ಬೀಜಾಂಕುರತೆ  ಬೆಳೆಸಿ
ಲಿಂಗಭೇದಕೆ ಕೊನೆಯನಿಟ್ಟು
ದಯವೇ ಧರ್ಮದ ಮೂಲವೆಂತೆಂಬ ಮಂತ್ರವ ಭಿತ್ತಿ
ಅಕ್ಷಯ ಬೆಳಕನ್ನು ಬದುಕಿನುದ್ದಕೂ ನೀಡಿ
ಕೂಡಲ ಸಂಗನಲಿ ಐಕ್ಯಗೊಂಡಾತನ
ಜನ್ಮ ಜನ್ಮಾಂತರ ಕಳೆದರೂ
ವಚನಗಳ ನುಡಿಬೆಳಕು 
ಮನುಕುಲವ ತಿದ್ದಿತೀಡಬೇಕಿದೆ.......
ಹೇ ಬಸವ... 
ಗೋಮುಖವ್ಯಾಘ್ರಾದಿಗಳು
ಲೋಕವ ಹದೆಗೆಡಿಸುತಿವೆ
ಶತಮಾನಗಳೇ ಉರುಳಿದರೂ
ಬದಲಾಗುವ ಲಕ್ಷಣಗಳು ಕಾಣದು
ಪ್ರಕೃತಿಯೇ ಮುನಿದು ಬೀಳುವ ಮುನ್ನ
ನೀ ಮತ್ತೊಮ್ಮೆ ಹುಟ್ಟಿಬರಬೇಕಿದೆ ನೋಡೋ
ಹೇ ....!!ವಿಶ್ವಗುರು, ಜಗದ ಅಣ್ಣ.... ಬಸವಣ್ಣ..... 
 -----------------ಮೌಢ್ಯದ ಮಡಿಲಿಗೆ  ಕುಶಲತೆಯ ನೇಗಿಲು
ಹತ್ತಿಯ ಹುಂಡೆಗೆ ತುಪ್ಪದ ದೀವಿಗೆ
ದುಂಬಿಯ ಝೇಂಕಾರಕೆ ಜೇನಿನ ಹೊಳೆ
ವಿಜಾತಿಯ ಬಂಧನಕೆ ಪ್ರೇಮ ಸಂಬಂಧ
ಸಂಸ್ಕೃತಿ ಬೆಳಕಿಗೆ ರಾಜದರ್ಬಾರು
ಆಸೆಯ ಮಂತ್ರಕೆ ದೈವದ ಮೊರೆ
ಮೇಲು-ಕೀಳಿನ ಬದುಕಿಗೆ ಸಮಾನತೆಯ ಬೀಜಮಂತ್ರ
ಎಲ್ಲಕೂ  ಜಗದ ಜ್ಯೋತಿಯಾದ ಅಣ್ಣ ಬಸವಣ್ಣ....
----------

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು... 

ಆಚರಣೆ ಪೂಜೆ ನೈವೇದ್ಯಗಳಿಗೆ ಮೀಸಲಿಡದೆ ವಚನ ಸಾಹಿತ್ಯದ ಧ್ಯೇಯದ ಗುಟ್ಟನ್ನು ಅರಿತು ಬಾಳುವೆಡೆ ಮನಸು ಮಾಡೋಣ


@ಚಿತ್ರ: ನೆಟ್ ಲೋಕ


Sunday, April 1, 2012

ದಾಸೋಹ ಯೋಗಿ ಶ್ರೀ ಶ್ರೀಗಳು.....

"ಎಷ್ಟೋ ರಾತ್ರಿಗಳು ನಾನು ಬೀದಿ ದೀಪಗಳಿಗೆ ನನ್ನ ಪಾಠ ಒಪ್ಪಿಸಬೇಕಿತ್ತು". ಆದರೆ ಆ ದಿನಗಳು ನನ್ನ ಜೀವನದಲ್ಲಿ ಬರದಂತೆ ಮಾಡಿದ್ದು "ಶ್ರೀಮಠ" - ಹೀಗೆ ಎಷ್ಟೋ ಜನರು ತಮ್ಮ ಮನದಲ್ಲಿ ಕೃತಜ್ಞತೆಯ ಭಾವದಿಂದ ಅನ್ನ, ನಿದ್ರೆ, ವಿದ್ಯೆ, ಜಾಗ ಕೊಟ್ಟು ನಮ್ಮ ನೆಲೆಯನ್ನು ಸಾರ್ಥಕಗೊಳಿಸಿದ ಆ ದೇವರಸ್ಥಾನಕ್ಕೆ ನಮಿಸುತ್ತಲೇ ಇದ್ದಾರೆ.

ವಿದ್ಯಾದಾನ, ದಾಸೋಹ ಇಂತಹ ವಿಶಿಷ್ಟ ಕೈಂಕರ್ಯಗಳನ್ನು ಸುಮಾರು ವರುಷಗಳಿಂದ ನಡೆಸುಕೊಂಡು ಬಂದಿರುವಂತಹ  ಈ ದೇಗುಲ ತುಮಕೂರು ಸಮೀಪದ ಕ್ಯಾತಸಂದ್ರ ಎಂಬಲ್ಲಿ "ಸಿದ್ಧಗಂಗಾ ಮಠ" ಎಂದು ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದಲ್ಲಿ ಬಹಳ ಹಿಂದೆ "ಗೋಸಲಸಿದ್ಧೇಶ್ವರ" ಎಂಬ ಸಿದ್ಧಪುರುಷರು ಹಾಗೂ ಶ್ರೀ ಮಠ ಸ್ಥಾಪಕರು ತಮ್ಮ ತಪೋಬಲದಿಂದ ಗಂಗೆಯ ಉದ್ಭವ ಮಾಡಿಸಿದ್ದರಿಂದ ಈ ಸ್ಥಳಕ್ಕೆ "ಸಿದ್ದಗಂಗೆ" ಎಂದು ಹೆಸರು ಬಂದಿತು. ಮೊದಲು ಸಿದ್ಧಲಿಂಗ ಸ್ವಾಮಿಗಳಿಂದ ಪ್ರಾರಂಭಗೊಂಡ ದಾಸೋಹ ಕಾರ್ಯ ಮುಂದೆ "ಅಟವಿ ಸ್ವಾಮಿಗಳು" ದಾಸೋಹದಿಂದ ವಿದ್ಯಾರ್ಜನೆಗಾಗಿ ಸಂಸ್ಕೃತ ಪಾಠಶಾಲೆಗಳನ್ನು ಪ್ರಾರಂಭಿಸಿದರು. ಅಟವಿ ಸ್ವಾಮಿಗಳ ನಂತರ "ಉದ್ಧಾನ ಶಿವಯೋಗಿಗಳು" ಸಹ ಮತ್ತಷ್ಟು ಅಭಿವೃದ್ಧಿಗೊಳಿಸಿ ಶಿವರಾತ್ರಿ ಹಬ್ಬದ ಸಮಯದಲ್ಲಿ ಜಾತ್ರೆಯನ್ನು ಪ್ರಾರಂಭಿಸಿ ಬಂದುಹೋಗುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ನೀಡುವ ಯೋಜನೆ ಪ್ರಾರಂಭಿಸಿದರು.... ಒಬ್ಬರಾದನಂತರ ಮತ್ತೊಬ್ಬರು ತಮ್ಮದೇ ವಿಶಿಷ್ಠ ರೀತಿಯಲ್ಲಿ ಶ್ರೀ ಕ್ಷೇತ್ರವನ್ನು ಮೆರುಗುಗೊಳಿಸುತ್ತಾ ಬಂದರು. ಉದ್ಧಾನ ಶಿವಯೋಗಿಗಳು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಿವಣ್ಣ(ಶ್ರೀ ಶ್ರೀ ಶಿವಕುಮಾರ ಸ್ವಾಮಿ) ಎಂಬ ವಿದ್ಯಾರ್ಥಿಯಯನ್ನು ಕಂಡೊಡನೆ ಮುಂದೆ ಸಿದ್ಧಗಾಂಗಾ ಕ್ಷೇತ್ರವನ್ನು ಅತ್ಯುನ್ನತ ಶಿಖರಕ್ಕೆ ಏರಿಸುವರು ಎಂದು ತಿಳಿದಿತ್ತೋ ಏನೋ ಶಿವಣ್ಣ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡರು. ನಂತರದ ದಿನಗಳೇ ಅದ್ಭುತ ವರ್ಣಿಸಲಾಗದಷ್ಟು ಹಿರಿಮೆಯಲ್ಲಿ ಶ್ರೀ ಕ್ಷೇತ್ರ ಬೆಳೆದು ನಿಂತಿತು. 

ಶ್ರೀ ಶಿವಕುಮಾರಸ್ವಾಮಿಗಳು ಮಾಗಡಿಗೆ ಹತ್ತಿರವೇ ಇರುವ ವೀರಾಪುರ ಎಂಬ ಪುಟ್ಟ ಗ್ರಾಮದಲ್ಲಿ ೧೯೦೮ ಏಪ್ರಿಲ್ ೧ರಂದು ಜನಿಸಿದರು. ಪಾಟೀಲ್ ಹೊನ್ನಪ್ಪ ಮತ್ತು ಗಂಗಮ್ಮ ಶಿವಕುಮಾರಸ್ವಾಮಿಗಳ ತಂದೆ ತಾಯಿ. ಇವರು ಪ್ರೇಮರಿ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿ ಎಂಬ ಗ್ರಾಮದಲ್ಲಿ ಮುಗಿಸಿ ನಂತರ ಸೆಕೆಂಡರಿ ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವೀಧರರಾದರು.

ಬಸವ ತತ್ವವನ್ನು ಬರಿ ಮಾತಿನಲ್ಲಿ ಹೇಳದೆ ಅದನ್ನೇ ತಮ್ಮ ರೂಢಿಗತವಾಗಿ ಮಾಡಿಕೊಂಡು ಬಂದಿರುವಂತ ಶ್ರೀಗಳು ಮಠದ ಉದ್ಧಾರಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಕಟ್ಟಡ ನಿರ್ಮಾಣದ ಸಮಯದಲ್ಲಿ ತಾವೇ ಇಟ್ಟಿಗೆ, ಕಲ್ಲು ಮಣ್ಣು ಹೊತ್ತು ನೆಡೆಯುತ್ತಿದ್ದು, ತಾವೇ ಎಲ್ಲಾ ಕೆಲಸಗಳಲ್ಲಿ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿದ್ದದ್ದು, ಗದ್ದೆ, ಹೊಲಗಳಲ್ಲಿ ಭತ್ತ ನಾಟಿ ಮಾಡುವುದು ಕಳೆ ಕೀಳುವುದು ಇಂತಹ ಎಷ್ಟೋ ಕೆಲಸಗಳನ್ನು ಸ್ವಆಸಕ್ತಿಯಿಂದ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ನಮ್ಮ ಕುಟುಂಬದ ಹಲವಾರು ಮಂದಿ ಈಗಲೂ ಹೇಳುತ್ತಾರೆ.  ಶ್ರೀಗಳು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ದವಸ ದಾನ್ಯ ಎಲ್ಲವನ್ನೂ ವರ್ಷದ ದಾಸೋಹಕ್ಕೆ ದಾನಿಗಳ ಮೂಲಕ ಪಡೆದು ಬಂದದ್ದೂ ಇದೆ. ಈಗಲೂ ಸಹ ಸುತ್ತಮುತ್ತಲ ಹಳ್ಳಿಗಳು ದವಸದಾನ್ಯಗಳನ್ನು ಊರಿನ ಜನರೆಲ್ಲ ಕೂಡಿ ತಂದು ಮಠದಲ್ಲಿ ಕೊಡುವ ವಾಡಿಕೆಯನ್ನೂ ರೂಢಿಸಿಕೊಂಡಿದ್ದಾರೆ.ಸಿದ್ಧಗಂಗಾ ಮಠದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿದ್ದಾರೆ. ಉದ್ದಾನ ಶಿವಯೋಗಿಗಳು ಅಂದು ಪ್ರಾರಂಭಿಸಿದಾಗ ಕೇವಲ ೨೦೦ ವಿದ್ಯಾರ್ಥಿಗಳಿದ್ದರು ಈಗ ಸುಮಾರು ೧೦,೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲಿದ್ದಾರೆ. ಸುಮಾರು ೧೨೮ ವಿದ್ಯಾಸಂಸ್ಥೆಗಳನ್ನೊಳಗೊಂಡಿದೆ. ಈ ಸಂಸ್ಥೆಗಳು ನರ್ಸರಿಯಿಂದಿಡಿದು ತಾಂತ್ರಿಕ ವಿದ್ಯಾಲಯದವರೆಗೂ ಹಬ್ಬಿವೆ. 

ಅಂದಿನ ಪ್ರಯಾಣದಿಂದ ಇಂದಿನ ಪ್ರಯಾಣದವರೆಗೂ ಬಲು ಸಿಹಿಹೊನಲನ್ನೇ ಸೃಷ್ಟಿಸಿ ಬಂದಿರುವ ಶ್ರೀ ಮಠದ ದೇಗುಲಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳೇ ದೇವರು ಅವರಲ್ಲಿರುವ ಗುರುಭಕ್ತಿ, ನಿಸ್ವಾರ್ಥತತೆ, ದೇವರ ಶಕ್ತಿ ಎಲ್ಲವೂ ಹಲವು ಕೆಲಸಗಳಿಗೆ ಸಕಾರಗೊಳಿಸಿದೆ. ಮಠದಲ್ಲಿ ಅಷ್ಟೇ ಶಿಸ್ತುಬದ್ಧತೆಯನ್ನು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲೂ ಕಲಿಸುತ್ತಾ ಬಂದಿದ್ದಾರೆ. ಬೆಳಗ್ಗೆ ಸುಮಾರು ೫ ಗಂಟೆ ಬೆಳಗಿನ ಜಾವ ತಣ್ಣೀರು ಸ್ನಾನಮುಗಿಸಿ ೬ಗಂಟೆಗೆ ನೆಡೆಯುವ ಸಾಮೂಹಿಕ ಪ್ರಾರ್ಥನೆ ನಂತರ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಸಂಸ್ಕೃತ ಪಾಠ, ಆನಂತರ ಶಾಲೆಗೆ ಹೋಗುವ ಪರಿಪಾಠವನ್ನೆಲ್ಲ ಕಲಿಸಿದ್ದಾರೆ. ಅದೇ ರೀತಿ ಸಂಜೆ ೬ಗಂಟೆ ಸಾಮೂಹಿಕ ಪ್ರಾರ್ಥನೆಯೂ ಸಹ ಜರುಗುತ್ತದೆ. ಬೆಳ್ಳಗ್ಗೆ ಮತ್ತು ಸಂಜೆ ಜರುಗುವ ಪ್ರಾರ್ಥನೆಯಲ್ಲಿ ಶಿವಕುಮಾರ ಸ್ವಾಮಿಗಳು ಭಾಗಿಗಳಾಗಿ ಮಕ್ಕಳಿಗೆ ದಿನವೂ ಒಂದೂಂದು ನೀತಿಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಮಕ್ಕಳಿಗೆ ವಸತಿ, ಊಟ, ವಿದ್ಯೆ ಕಲ್ಪಿಸಿದರೆ ಸಾಲದು ಉತ್ತಮ ಮಾನವೀಯ ಪ್ರಜೆಗಳನ್ನಾಗಿ ಬೆಳೆಸಬೇಕು ಎಂಬುದು ಶ್ರೀಗಳ ಧ್ಯೇಯ.

ಅಂದಿನಿಂದ ಇಂದಿಗೂ ಕೊಪ್ಪರಿಗೆಗಳಲ್ಲಿ ಅಡಿಗೆ ತಯಾರಿ ಸಾಂಘವಾಗಿ ಜರುಗುತ್ತಲೇ ಇರುತ್ತದೆ. ಪ್ರತಿನಿತ್ಯ ಶ್ರೀಗಳು ಭೇಟಿ ನೀಡಿ ಪ್ರತಿಯೊಂದನ್ನೂ ಪರಿಶೀಲಿಸಿ ಬಂದಿರುವ ಭಕ್ತಾದಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಅಡುಗೆ ಒಲೆ ಎಂದು ಉರಿಯಲು ಪ್ರಾರಂಭಿಸಿತೋ ಈಗಲೂ ಅದೇ ಮಂದಹಾಸದಲ್ಲಿ ಸಾವಿರಾರು ಜನರಿಗೆ ಪ್ರಸಾದವನ್ನು ನೀಡುತ್ತಲೇ ಬಂದಿದೆ. ಕಾಯಕವೇ ಕೈಲಾಸ ಎಂದು ನಂಬಿರುವ ಶ್ರೀಗಳು ತಮ್ಮ ದಿನನಿತ್ಯ ನಿದ್ರೆಮಾಡುವುದು ರಾತ್ರಿ ೧೧ರಿಂದ ಬೆಳಗಿನ ಜಾವ ೨ರವರೆಗೆ ಮಾತ್ರ. ಅವರು ಬೆಳ್ಳಗಿನ ಜಾವ ೨ರಿಂದ ೩ಗಂಟೆಯವರೆಗೆ ಓದುತ್ತಾರೆ. ೩ರಿಂದ ೩.೩೦ರವರೆಗೆ ಸ್ನಾನ, ೩.೩೦ರಿಂದ ೫.೩೦ರವರೆಗೆ ಧ್ಯಾನ,ಪೂಜೆ,ಭಜನೆ ಇತ್ಯಾದಿಗಳನ್ನು ಮುಗಿಸಿ ಬೆಳಗಿನ ಉಪಹಾರ ನಂತರ ಮಕ್ಕಳ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ನಂತರ ಶ್ರೀಗಳ ದರುಶನಕ್ಕೆ ಬಂದಿರುವ ಭಕ್ತಾದಿಗಳ ಭೇಟಿ, ಮನೆಗಳಲ್ಲಿ ಪೂಜಾವಿಧಿವಿಧಾನಗಳಿಗೆ ತೆರಳುತ್ತಾರೆ ಸಂಜೆ ೮ರಿಂದ ರಾತ್ರಿ ೧೧ರವರೆಗೆ ತತ್ವಜ್ಞಾನಿಗಳ ಭಂಡಾರಗಳ ಓದುವುದು ಅವರ ಹವ್ಯಾಸ. ಕಲಿಯುಗ ತಪಸ್ವಿಗೆ ಭಕ್ತವೃಂದ ಎಲ್ಲೆಲ್ಲೂ ಹರಡಿದೆ ಅಂತೆಯೇ ಭಕ್ತಿ ಮನೆಮಾಡಿಸಿದ ಶ್ರೀಗಳಿಗೆ ಭಕ್ತವೃಂದ ನೆಡೆದಾಡುವ ದೇವರು, ಕಾಯಕ ಯೋಗಿ, ಕಲಿಯುಗ ದೇವರು ಎಂದು ಪೂಜಿಸುತ್ತಲೇ ಬಂದಿದ್ದಾರೆ. ಮಹಾಸ್ವಾಮಿಗಳನ್ನು ಭಕ್ತರು "ಬುದ್ದಿ" ಎಂದೇ ಕರೆಯುವ ವಾಡಿಕೆ. ಮಹಾಸ್ವಾಮಿಗಳ ಕಾಯಕ, ದಾಸೋಹ ಸೇವೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ಇಂತಹ ಮಹಾನ್ ಶಿವಯೋಗಿಗಳ ಪೂಜಾಕೈಂಕರ್ಯಗಳನ್ನು ನಾವು ಸದಾ ನೋಡುತ್ತಲೇ ಬಂದಿದ್ದೇವೆ ಅವರ ಚಟುವಟಿಕೆ ನಿಜಕ್ಕೊ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದಂತೂ ಸತ್ಯ. ಶ್ರೀಗಳಿಗೆ ಮೌನವೇ ಆಭರಣ, ಕೆಲಸ-ಕಾರ್ಯಗಳೇ ಭೂಷಣ ಎಂಬಂತೆ ಅಂದಿನಿಂದ ಇಂದಿಗೂ ಶ್ರೀಮಠವನ್ನು ಬೆಳಗುತ್ತಲೇ ಬಂದಿದ್ದಾರೆ.... ಬೆಳಕಿನ ಜ್ಯೋತಿ ಸದಾ ಎಲ್ಲರ ಬಾಳನ್ನು ಬೆಳಗುತ್ತಲಿರಲಿ ಎಂದು ಆಶಿಸುತ್ತೇವೆ.  

ಇಂದಿಗೂ ಚುರುಕು ಕಣ್ಣೋಟ, ಸ್ವಚ್ಚಮಾತು, ದಿಟ್ಟ ನೆಡೆ.... ಹೊಂದಿರುವ ಕಾಯಕ ಯೋಗಿ ಈಗಷ್ಟೆ ೧೦೫ ರ ಹರಯದಲ್ಲಿದ್ದಾರೆ ಇಂತಹ  ಮಹಾನ್ ಯೋಗಿ ಸದಾ ನಮ್ಮೊಂದಿಗಿರಲಿ....ಶ್ರೀಗಳ ಬಗ್ಗೆ ಬರವಣಿಗೆ ಅಥವಾ ಮಾತಿನಲ್ಲಿ ಹೇಳಲಾರದಷ್ಟು ಅತಿ ಎತ್ತರಕ್ಕೆ ಬೆಳೆದಿರುವುದಕ್ಕೆ ಉದಾಹರಣೆ ಸಿದ್ಧಗಂಗೆ ಕ್ಷೇತ್ರ ಬೆಳೆದು ನಿಂತಿರುವುದೇ ಸಾಕ್ಷಿ.  


ಮಾಹಿತಿ: ನನ್ನ ತಂದೆ ಶ್ರೀಮಠದ ವಿದ್ಯಾರ್ಥಿ, ಅವರೇ ಹೆಚ್ಚು ನನಗೆ ಶ್ರೀಮಠದ ಬಗ್ಗೆ ಹೇಳಿದ್ದರು... 

ಪೋಟೋ: ಮನಸು

Monday, March 12, 2012

ಎಕ್ಕದ ಹೂ (ಅರ್ಕ)


ಎಕ್ಕದ ಹೂ (ಅರ್ಕ)


ಎಕ್ಕವನ್ನು ಅರ್ಕವೆಂದೇ ಕರೆಯುವುದು, ನಮ್ಮಗಳ ಆಡುಭಾಷೆಯಲ್ಲಿ ಎಕ್ಕ ಎಂದು ಕರೆಯುತ್ತೇವೆ. ಸಂಸ್ಕೃತದಲ್ಲಿ "ಅಲರ್ಕ" ಎಂದಿದ್ದಾರೆ. ವೈಜ್ಞಾನಿಕವಾಗಿ ಕೊಲ್ಟ್ರಾಪಿಸ್ ಪ್ರೋಸಿರ (Calotropis Procera) ಎಂದು ಗುರುತಿಸಿದ್ದಾರೆ. ಎಕ್ಕದಲ್ಲಿ ಎರಡು ತರನಾದ ವಿಧಗಳಿವೆ ಒಂದು ಬಿಳಿ ಬಣ್ಣದ (ಶ್ವೇತಾವರ್ಕ) ಎಕ್ಕ ಮತ್ತೊಂದು ತಿಳಿನೇರಳೆ ಬಣ್ಣದ ಎಕ್ಕ. ಇವೆರಡೂ ಒಂದೇ ಜಾತಿಯ ಗಿಡಗಳು ಹಾಗೂ ಇವೆರಡರಲ್ಲೂ ಔಷಧಿಯ ಗುಣಗಳಿರುತ್ತವೆ. ಈ ಎಕ್ಕದ ಗಿಡಗಳು ಹೆಚ್ಚು ಖಾಲಿ ಮತ್ತು ಪಾಳು ಜಾಗದಲ್ಲಿ ಬೆಳೆಯುವುದು.

 ಈ ಗಿಡ ಒಂದು ರೀತಿ ಪೊದೆಯಂತೆ ಬೆಳೆದಿರುತ್ತದೆ. ಬುಡದಲ್ಲಿಯೇ ಕವಲುಗಳೊಡೆದು ಹಾಗೆ ಮುಂದಕ್ಕೆ ಬೆಳೆದು ಎಲೆಗಳು ಮತ್ತು ಹೂವಿನ ಗೊಂಚಲನ್ನು ಹೊಂದಿರುತ್ತದೆ.  ಆಕರ್ಷಕವಾದ ಈ ಗೊಂಚಲು ದಪ್ಪನಾದ ದಳಗಳಿಂದ ಎದ್ದು ಕಾಣುತ್ತೆ, ಕೊಳವೆಯಂತಹ ಶಲಾಕೆಯನ್ನು ಹೊಂದಿರುತ್ತದೆ. ಈ ಹೂ ಗೊಂಚಲಿನ ಪ್ರತಿ ಹೂವಿನ ತಳಭಾಗದಲ್ಲಿ ಗಣಪತಿಯ ಆಕಾರವಿರುತ್ತದೆ. ಈ ಆಕಾರದಿಂದಲೇ ಗಣಪತಿಗೆ ಶ್ರೇಷ್ಟವೆಂದು ಭಾವಿಸಿದೆವೋ ಏನೋ ಗೊತ್ತಿಲ್ಲ. ಗಣಪತಿಗೆ ಎಷ್ಟು ಶ್ರೇಷ್ಟವೋ ಈಶನಿಗೂ ಅಷ್ಟೇ ಶ್ರೇಷ್ಠ ಎಂಬ ನಂಬಿಕೆಯಿದೆ.


ಎಕ್ಕದ ಹೂವಿಗೆ ಪೂಜನೀಯ ಭಾವನೆಯಿದೆ. ರಥಸಪ್ತಮಿಯಂದು ಎಕ್ಕದ ಎಲೆಗಳನ್ನು ಭುಜದಮೇಲೆ ಇಟ್ಟು ಗಂಡಸರು ಮಂತ್ರ ಪಟಣೆಯ ಮೂಲಕ ಸ್ನಾನ ಮಾಡುತ್ತಾರೆ ಎಂದು ಕೇಳಿದ್ದೇನೆ. ಬಿಳಿಯ ಎಕ್ಕದ ಬುಡದಲ್ಲಿ ’ಗಣೇಶ’ ನೆಲೆಸಿರುತ್ತಾನೆ ಆದ್ದರಿಂದಲೇ ಗಿಡದಿಂದ ಬೀಳುವ ಹೂಗಳೆಲ್ಲವೂ ಅದರ ಬುಡಕ್ಕೆ ಬೀಳುತ್ತವೆ ಎಂದು ನಂಬುತ್ತಾರೆ. ಎಷ್ಟೋ ದೇಗುಲಗಳಲ್ಲಿ ಬಿಳಿ ಎಕ್ಕದ ಗಿಡಗಳನ್ನು ಕಾಣುತ್ತೇವೆ ಅಂತೆಯೇ ಅದಕ್ಕೆ ಪೂಜೆ ಸಲ್ಲಿಸಿರುವುದನ್ನೂ ನೋಡಬಹುದು. ಮನೆ ಕಟ್ಟುವ ಜಾಗಳಲ್ಲೇನಾದರೂ ಬಿಳಿ ಎಕ್ಕದ ಗಿಡವಿದ್ದರೆ ತಮ್ಮ ಅದೃಷ್ಟವೆಂದು ಭಾವಿಸುತ್ತಾರೆ ಅಂತೆಯೇ ಆ ಗಿಡ ಮನೆ ಕಟ್ಟುವ ಸ್ಥಳದ ಮಧ್ಯೆ ಭಾಗದಲ್ಲಿದ್ದರೆ ಅದನ್ನು ಕತ್ತರಿಸಿ ಹಾಕಲು ಜನರು ಹಿಂದುಮುಂದು ನೋಡುತ್ತಾರೆ ಅಂದರೆ ಅದರಲ್ಲಿ ಅಷ್ಟು ದೈವ ಭಕ್ತಿಯನಿಟ್ಟಿದ್ದಾರೆ ನಮ್ಮ ಜನರು. 

ಈ ಅರ್ಕ ಹೂ ಬಿಟ್ಟಾಗ ಅದರ ಬೀಜಗಳು ಸುತ್ತ ಮುತ್ತಲೆಲ್ಲ ಗಾಳಿಯಲ್ಲಿ ಹತ್ತಿಯ ಹುಳುಗಳಂತೆ ಓಡಾಡುತ್ತಿರುತ್ತವೆ ಇದೇ ರೀತಿ ಬೀಜ ಪ್ರಸಾರದ ಪ್ರಕ್ರಿಯೆಯಿಂದ ಮತ್ತಷ್ಟು ಗಿಡಗಳು ಹುಟ್ಟಿಕೊಳ್ಳುತ್ತವೆ.

ಈ ಗಿಡದ ಬೇರು, ತೊಗಟೆ, ಎಲೆ, ಹೂ ಮತ್ತು ಅದರಲ್ಲಿರುವ ಲೇಟೆಕ್ಸ್ ಹಾಲನ್ನು ಔಷಧಿಗಳಿಗೆ ಬಳಸುತ್ತಾರೆ: 

  • ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. - ಇದು ನನ್ನ ಸ್ವಂತ ಅನುಭವ.
  • ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ  ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
  • ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
  • ಪುಡಿಮಾಡಿದ ಒಣಗಿದ ಎಕ್ಕದ ತೊಗಟೆಯನ್ನು  ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.
  • ಚೇಳುಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆಂದು ಕೇಳಿದ್ದೇನೆ.
  • ಮುಖದಲ್ಲಿ ಬಂಗು, ಅಜೀರ್ಣ, ಮಹಿಳೆಯ ಋತುಚಕ್ರ ತೊಂದರೆಗಳಿಗೆ, ಗಾಯ, ಮೂಲವ್ಯಾದಿ, ಹಲ್ಲು ನೋವಿಗೆ ಹೀಗೆ ಅನೇಕ ತೊಂದರೆಗಳಿಗೆ ಎಕ್ಕದ ಹಲವು ಭಾಗಗಳನ್ನು ಔಷಧಿಯಾಗಿ ಬಳಸುತ್ತಾರೆ. 


 ಎಕ್ಕದ ಗಿಡದಲ್ಲಿರುವ ಹಾಲಿನಂತಹ ದ್ರವ ಕಣ್ಣಿಗೇನಾದರು ಬಿದ್ದರೆ ಕಣ್ಣು ಹೋಗುತ್ತೆ ಎಂದು ನಾವು ಚಿಕ್ಕವರಿದ್ದಾಗ ಹೇಳಿ ಹೆದರಿಸುತ್ತಿದ್ದರು... ಆದರೆ ನಿಜವೋ ಸುಳ್ಳೋ ಇದುವರೆಗು ತಿಳಿದಿಲ್ಲ. ಯಾರಿಗಾದರೂ ತಿಳಿದಿದ್ದರೆ ತಿಳಿಸಿ.
---
ಪೋಟೋ: ಅಂತರ್ಜಾಲ


Thursday, March 1, 2012

ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ....ಹೂ


ತ್ರಿದಲಂ ತ್ರಿಗುಣಕಾರಂ
ತ್ರಿನೇತ್ರಂ ಚ ತ್ರಯಾಯುಧಂ 
ತ್ರಿಜನ್ಮಪಾಪ ಸಂಹಾರಮ್
ಏಕ ಬಿಲ್ವಮ್ ಶಿವಾರ್ಪಣಂ||

ಈ ಶ್ಲೋಕ ಎಲ್ಲರೂ ಕೇಳಿರಲೇ ಬೇಕಲ್ಲವೇ.. 
ಮೂರು ದಳದಂತಿರುವ ಈ ಪತ್ರೆಯನ್ನು ತ್ರಿನೇತ್ರನಾದವನು, ತ್ರಿಗುಣಗಳಂತಿರುವ ಮೂರು ನಯನಗಳುಳ್ಳವನೂ ಆದ ಹಾಗೂ ಅತಿ ಚೂಪಾದ ಮೂರು ಭಾಗಗಳಿರುವ ಆಯುಧವಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುತ್ತಾನೋ ಅವನು ನನ್ನೇಲ್ಲಾ ಮೂರು ಜನ್ಮದ ಪಾಪಗಳನ್ನು ನಾಶ ಮಾಡೆಂದು ಬೇಡುತ್ತ ಈ ಬಿಲ್ವಪತ್ರೆಯನ್ನು ಸರ್ಪಿಸುತ್ತೇನೆ.. ಎಂಬುದೇ ಈ ಶ್ಲೋಕದ ಅರ್ಥ....

ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದೆ ಮನಃಶಾಸ್ತ್ರದ ಕಾರಣಗಳೂ ಇವೆಯೆಂದು ಹೇಳುತ್ತಾರೆ.. ಸತ್ತ್ವ,ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಉತ್ಪನ್ನವಾಗುತ್ತದೆ. ಬಾಲ್ಯಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ.ಬಿಲ್ವ ಪತ್ರೆಯ ತೊಟ್ಟು ಲಿಂಗದ ಕಡೆಯೂ ಮತ್ತು ಎಲೆಗಳ ತುದಿಗಳು ನಮ್ಮೆಡೆಗೂ ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕೆಂಬ ಪ್ರತೀತಿ ಇದೆ.

ಬಿಲ್ವಪತ್ರೆ ಶಿವನಿಗೆ ಹಾಗೂ ಗಣಪನಿಗೂ ಪ್ರಿಯವಾದದ್ದು ಎಂದು ಹೇಳುತ್ತಾರೆ. ಬಿಲ್ವಪತ್ರೆ ಮರ ರುಟಾಸಿಯ (Rutaceae) ಕುಟುಂಬಕ್ಕೆ  ಸೇರಿದ್ದು. ಅಜಿಲ್ ಮರ್ಮೆಲಾಸ್ (Aegle Marmelos) ಎಂದು ವೈಜ್ಞಾನಿಕ ಸಸ್ಯಶಾಸ್ರ್ರೀಯ ಹೆಸರು. ಸಂಸ್ಕೃತದಲ್ಲಿ ಮಹಾಫಲ, ಶಿವದ್ರುಮ, ಶ್ರೀಫಲ, ಬಿಲ್ವ, ಶಾಂಡಿಲ್ಯ ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕನ್ನಡದಲ್ಲಿ ಬೆಲ್ಲಪತ್ರೆ, ಬಿಲ್ವ ಎಂದು ಕರೆಯುತ್ತಾರೆ.

ಇದು ಹೂ ಬಿಡುವ ಸಸ್ಯ ಜೊತೆಗೆ ಮಧುರ ರಸವುಳ್ಳದ್ದು, ಹೂ ಸುವಾಸನೆಯನ್ನು ಬೀರುತ್ತದೆ  ಬಿಳಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಬಿಲ್ವದ ಮರದ ಕೊಂಬೆಗಳಲ್ಲಿ ಮುಳ್ಳುಗಳಿದ್ದು (ಸುಮಾರು ಒಂದು ಅಂಗುಲ), ತೊಗಟೆ ಬೂದು ಬಣ್ಣದಾಗಿದ್ದು ಬೆಂಡು ಬೆಂಡಾಗಿರುವುದು, ಬೇಸಿಗೆಯಲ್ಲಿ  ಎಲೆಗಳೆಲ್ಲಾ  ಉದುರಿ ಹೋಗುತ್ತವೆ. ಫೆಬ್ರವರಿಯಿಂದ ಎಪ್ರಿಲ್ ತಿಂಗಳವರೆಗೆ ಹೂಕಾಯಿ ಬಿಡುವ ಕಾಲವಾಗಿದೆ. ಎಲೆಗಳು ತ್ರಿಪರ್ಣಿ (trifoliate) ಹಾಗೂ ಸುವಾಸಿತವಾಗಿರುತ್ತವೆ. ಇದರಲ್ಲಿ ತಿಳಿ ಹಳದಿ ಬಣ್ಣದ ಗಡುಸಾಗಿರುವಂತ ಕಾಯಿ ಬಿಡುತ್ತದೆ. ಈ ಮರ ಸುಮಾರು ೧೦ ರಿಂದ ೧೮ ಮೀಟರಿನಷ್ಟು ಎತ್ತರ ಬೆಳೆಯುತ್ತದೆ. ಬಿಲ್ವದ ಮರಗಳನ್ನು ಬಳಸಿ ಮನೆ ಸಾಮಾನುಗಳು, ಆಟಿಕೆಗಳು, ಗಾಡಿಗಳನ್ನು ತಯಾರಿಸಿ ಬಳಸುತ್ತಾರೆ.

"ಬ್ಯಾಲದ ಹಣ್ಣು" ನೋಡಿದ್ದೀರಾ, ಹೆಚ್ಚು ಕಡಿಮೆ ಬಿಲ್ವದ ಹಣ್ಣು ಸಹ ಅದೇ ರೀತಿ ಇರುತ್ತದೆ. ಬ್ಯಾಲದ ಹಣ್ಣಿನ ಸಿಪ್ಪೆ ಒಡೆದು ಒಳಗಿರುವ ತಿರುಳಿಗೆ ಬೆಲ್ಲವನ್ನು ಮಿಶ್ರಣ ಮಾಡಿ ನಾವುಗಳು ಹೆಚ್ಚು ತಿನ್ನುತ್ತಿದ್ದೆವು. ಇದು ಒಗರಿನ ಅಂಶ ಜಾಸ್ತಿ ಹೊಂದಿರುತ್ತದೆ. ಇದೇ ರೀತಿ ಬಿಲ್ವದ ಕಾಯಿಯ ತೊಗಟೆ ತೆಗೆದು ಅದರೊಳಗಿರುವ ತಿರುಳಿಗೆ ಬೆಲ್ಲ ಮಿಶ್ರಣ ಮಾಡಿ ತಿನ್ನುತ್ತಾರೆ. ಈ ಹಣ್ಣಿನಲ್ಲಿ ಬೀಜಗಳೂ ಸಹ ಇದ್ದು ಅದರ ಸುತ್ತಲೂ ಅಂಟುದ್ರವ ಇರುತ್ತದೆ. ತಿರುಳು ಹಾಗೂ ಬೀಜ ಪಕ್ಷಿಗಳಿಗೆ ತುಂಬಾ ಇಷ್ಟ. 

ಬಿಲ್ವದ ಹಣ್ಣಿನಲ್ಲಿ ಮ್ಯುಸಿಲೇಜ, ಪೆಕ್ವಿನ್, ಸಕ್ಕರೆ, ಟೆನಿನ್, ತೈಲಾಂಶ ಹಾಗೂ ತಿಕ್ತಾಂಶಳಿರುತ್ತವೆ. ಈ ಹಣ್ಣು ಆಮ್ಲರಸ. ಬಿಲ್ವಪತ್ರೆಯ ಕಷಾಯ, ಬಿಲ್ವಾದಿ ಚೂರ್ಣ, ಬಿಲ್ವಾದಿ ಘೃತ, ಬಿಲ್ವ ತೈಲ, ಬಿಲ್ವ ಮೂಲಾದಿ ಗುಟಿಕಿ ಇತ್ಯಾದಿ ಔಷಧಗಳನ್ನು ತಯಾರಿಸುತ್ತಾರೆ. ಇದನ್ನು ಆಯುರ್ವೇದ, ಯುನಾನಿ ಹಾಗೂ  ಸಿದ್ಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಬಿಲ್ವದ ಹಣ್ಣಿನಿಂದ ಗೋಡೆಗೆ ಬಳಿಯುವ ಪಾಲಿಶ್ ತಯಾರಿಸುತ್ತಾರಂತೆ ಇದು ಗೊತ್ತೇ ನಿಮಗೆ..? ಹಾಗೂ ಕಾಯಿಯಲ್ಲಿನ ತಿರುಳನ್ನು ತೆಗೆದು ಹಳದಿ ಬಣ್ಣವನ್ನು ಕ್ಯಾಲಿಕೋ ಮುದ್ರಣಕ್ಕೆ ಬಳಸುತ್ತಾರೆಂದು ಕೇಳಿದ್ದೇನೆ.

ಬಿಲ್ವದ ಮರ ಅಥವಾ ಪತ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಹೆಚ್ಚು ಕಡಿಮೆ ದೇವಾಲಯಗಳ ಆವರಣದಲ್ಲಂತು ಇದ್ದೇ ಇರುತ್ತದೆ. ಈ ತ್ರಿಪರ್ಣಿಕೆ ಕಿರುಎಲೆಗಳ ಮೇಲೆ ಪಾರದರ್ಶಕ ಚುಕ್ಕೆಗಳಿರುತ್ತವೆ. ಮೂರು ಎಲೆಗಳ ದಳ ಹೆಚ್ಚು ನೋಡಿದ್ದೇವೆ ಆದರೆ ಒಂದರಿಂದ ಒಂಭತ್ತು  ದಳಗಳೂ (ಕಿರು ಎಲೆಗಳು) ಸಹ ಬಿಡುತ್ತವೆಂದು ಕೇಳಿದ್ದೇನೆ. ಭಾರತ, ಬರ್ಮಾ, ಬಾಂಗ್ಲಾ, ಪಾಕಿಸ್ಥಾನ, ಈಜಿಪ್ಟ್, ಫಿಲಿಪೈನ್ಸ್, ಜಾವಾ, ಸುರಿನಾವ್ ಹಾಗೂ ಟ್ರೆನಿಡಾಡ್ ದೇಶಗಳಲ್ಲಿ ಈ ಮರವನ್ನು ಹೆಚ್ಚು ಕಾಣಬಹುದು. ಉತ್ತಮ ಮರಳು ಮಿಶ್ರಿತ ಮೆತ್ತನೆ ಮಣ್ಣು ಇದರ ಬೆಳೆಗೆ ಸೂಕ್ತ. ಒಣಹವೆ ಇದಕ್ಕೆ ಮುಖ್ಯವಾಗಿ ಬೇಕು. ಹೆಚ್ಚಿನ ವೇಳೆ ಒಣಹವೆಯಿದ್ದಲ್ಲಿ ಮಾತ್ರ ಇದು ಹಣ್ಣು ಬಿಡುವುದು. ಯಾವುದೇ ಹಣ್ಣು ಬೆಳೆಯಲಾರದ ಭೂಮಿ ಹಾಗೂ ಹವೆಯಲ್ಲಿ  ಇದು ಬೆಳೆಯುತ್ತದೆ.

ಬಿಲ್ವದ ಔಷಧೀಯ ಗುಣಗಳು:
ಬಿಲ್ವ ಮರದಲ್ಲಿನ ಬೇರು, ತೊಗಟೆ, ಪತ್ರೆ, ಹೂ, ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತದೆ. ಇದು ವಾತಹರ, ಅತಿಸಾರ, ಜ್ವರ, ಮೂತ್ರ ಸಂಬಂಧಿತ ರೋಗಗಳಿಗೆ ಸಿದ್ಧೌಷಧಿ. ಉಷ್ಣಗುಣ ಹೊಂದಿದ ಈ ಹಣ್ಣು ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚು ಮಾಡುತ್ತದೆ.... ರಕ್ತಭೇದಿ, ಹೊಟ್ಟೆ ನೋವು ಉಪಶಮನ -  ಹೀಗೆ ದೇಹದ ಒಳ ಮತ್ತು ಬಾಹ್ಯ ರೋಗಕ್ಕೆ ಮದ್ದಾಗಿ ಬಳಸುತ್ತಾರೆ. ಒಸಡಿನಲ್ಲಿನ ರಕ್ತಶ್ರಾವ. ಕೆಮ್ಮು, ನೆಗಡಿ, ಹೊಟ್ಟೆಯ ತೊಂದರೆಗಳು, ಗರ್ಭಿಣಿಯರಲ್ಲಾಗುವ ವಾಕರಿಕೆಗಳಿಗೆ ಬಿಲ್ವ ಹಣ್ಣು ಬಹಳಷ್ಟು ಔಷಧಿಯ ಗುಣವನ್ನು ಹೊಂದಿದೆ. ಬಿಲ್ವದ ಹಣ್ಣಿನಿಂದ ಪಾನಕವನ್ನು ಮಾಡಿ ಕುಡಿಯುತ್ತಾರೆ, ಇದು ಬೊಜ್ಜು ಕರೆಗಿಸುತ್ತದೆ, ಕಿವುಡುತನ, ಕಣ್ಣಿನ ಕಾಯಿಲೆಗಳು, ಹೀಗೆ ಎಲ್ಲಾ ರೋಗಕ್ಕೂ ಔಷಧಿಯ ರೀತಿ ಬಳಸುತ್ತಾರೆ.

ಸಕ್ಕರೆ ರೋಗಕ್ಕೆ ರಾಮ ಬಾಣವಿದ್ದಂತೆ. ರಕ್ತದಲ್ಲಿ ಸಕ್ಕರೆ ಕಾಯಿಲೆ ಇದ್ದು ಬಿಲ್ವದ ಎಲೆ ದಿನಕ್ಕೊಂದು ಸೇವಿಸುವುದು ಅಥವಾ  ಬಿಲ್ವದ ಹಣ್ಣಿನ ಪಾನಕ (ಸಕ್ಕರೆ ಹಾಕದೇ) ಕುಡಿಯುತ್ತ ಬಂದರೆ ಖಂಡಿತಾ ಸಕ್ಕರೆ ರೋಗ ಉಪಶಮನವಾಗುತ್ತದೆ.

ಬಿಲ್ವದ ಎಲೆ, ಕಾಯಿ, ಬೇರು ಈ ಮೂರು ಅಂಗಗಳನ್ನು ಔಷಧಕ್ಕಾಗಿ ಹೆಚ್ಚು ಬಳಸುತ್ತಾರೆ. ಎಲೆಗಳನ್ನು ಅರೆದು ಮುದ್ದೆ ಮಾಡಿ, ಇಲ್ಲವೆ ರಸ ತೆಗೆದು, ಅಥವಾ ಒಣಗಿಸಿ ಪುಡಿ ಮಾಡಿ ಉಪಯೋಗಿಸುತ್ತಾರೆ. ಬೇರನ್ನು ಪುಡಿ ಮಾಡಿ ಅಥವಾ ತೇಯ್ದು ಉಪಯೋಗಿಸುತ್ತಾರೆ. ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ, ಇಲ್ಲವೆ ಕಷಾಯ ಮಾಡಿ ಉಪಯೋಗಿಸಲಾಗುತ್ತದೆ. ಬಿಲ್ವವವು ಹೃದಯಕ್ಕೆ ಬಲ ನೀಡುತ್ತೆಂದೂ ಸಹ ಹೇಳುತ್ತಾರೆ. 

ಬಿಲ್ವವೃಕ್ಷದ "ಬೇರಿನ ಮತ್ತು ಮರದ ನಡುವಿನ ತಿರುಳಿನ ಭಸ್ಮದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಲೋಹ, ರಂಜಕ, ಸಿಲಿಕಾಗಳು" ಇರುತ್ತವೆ.

ಬಿಲ್ವ ಎಷ್ಟು ಉಪಯೋಗ ಅಲ್ವಾ:
೧. ಬಿಲ್ವದ ತೈಲ ಇದನ್ನು ೪ ಅಥವಾ ಐದು ಡ್ರಾಪ್ ಕಿವಿಗೆ ಬಿಡುವುದರಿಂದ ಕಿವುಡುತನ ಉಪಶಮನವಾಗುತ್ತದೆ.
೨. ಸುಮಾರು ೧೦ ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗುತ್ತದೆ.
೩. ೫ ಚಮಚ ಕಷಾಯ ಕುಡಿದರೆ ಜ್ವರ, ಗಂಟಲು ನೋವು ನಿವಾರಣೆಯಾಗುತ್ತದೆ.
೪. ೧೦ ಗ್ರಾಂ ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.
೫. ಬಿಲ್ವದ ಎಲೆಗಳನ್ನು ನೀರು ಮಿಶ್ರಿತದಿಂದ ಅರೆದು ಕಣ್ಣುಗಳ ರೆಪ್ಪೆಯ ಮೇಲೆ ಲೇಪನ ಮಾಡಿದರೆ ಒಳ್ಳೆಯ ಪರಿಣಾಮ  ನೀಡುತ್ತದೆ.
೬. ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ, ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.

  - ಬಿಲ್ವ ಮರದ ತೈಲ, ಬೇರಿನ ಪುಡಿ, ಲೇಹ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಕಷ್ಟ ಆದರೆ ಇಂತಹವು ಹೆಚ್ಚು ಗ್ರಂಧಿಗೆ ಅಂಗಡಿಗಳಲ್ಲಿ ಹೆಚ್ಚು ದೊರೆಯುತ್ತವೆ.
ಬಿಲ್ವ ಮರ ಬೆಳೆಸ ಬಯಸುವವರಿಗೆ ಸೂಕ್ತ ಮಾಹಿತಿ: (ನಮ್ಮ ಪರಿಚಿತರೊಬ್ಬರು ಸುಮಾರು ೨೦ ಮರಗಳನ್ನು ಬೆಳೆಸಿದ್ದಾರೆ ಅವರಿಂದ ಈ ಮಾಹಿತಿ ಪಡೆದೆ) :
೧. ಮರದ ಅಭಿವೃದ್ಧಿ  ಬೇರು ಹಾಗೂ ಬೀಜ ಎರಡರಿಂದಲೂ ಸಾಧ್ಯ. 
೨. ಜೂನ್, ಜುಲೈ ತಿಂಗಳಲ್ಲಿ ಬೀಜ ಬಿತ್ತಬೇಕು. ಬಿತ್ತಿದ ಬೀಜ ನಾಟಿ ಮಾಡಲು ಒಂದು ವರ್ಷದ ಸಮಯ ಬೇಕಾಗುತ್ತದೆ. 
೩. ಬಿಲ್ವದ ಗಿಡವನ್ನು ಮಳೆಗಾಲದಲ್ಲಿ  ನಾಟಿ ಮಾಡಬೇಕು. ನಾಟಿ ಮಾಡುವಾಗ ೧೦ರಿಂದ ೧೩ ಮೀಟರ್‌ಗಳ ಅಂತರ ಇಡಬೇಕಾಗುತ್ತದೆ. ಕಸಿ ವಿಧಾನವಾದ ಗಿಡವಾದರೆ ೫ ವರ್ಷಗಳಲ್ಲಿ  ಹಣ್ಣನ್ನು ನೀಡುತ್ತದೆ. ಬೀಜದ ಮೂಲಕ ಕನಿಷ್ಟ ೮ ವರ್ಷಗಳು ಬೇಕಾಗುತ್ತದೆ.
೪. ಆರಂಭದಲ್ಲೇ ಗೊಬ್ಬರ ಹಾಕಬೇಕು. ವಾರಕ್ಕೊಮ್ಮೆ ನೀರನ್ನು ಹಾಕಿದರೂ ತೊಂದರೆ ಇಲ್ಲ. ಗಿಡ ಬಲಿತ ಮೇಲೆ ಗೊಬ್ಬರವನ್ನು ಹಾಕಿ ಸ್ವಲ್ಪ ನೀರು ಹಾಕಬೇಕಾಗುತ್ತದೆ.
೫. ಮರದ ಎಲೆಗಳನ್ನು ಆಗಸ್ತ್ ತಿಂಗಳಲ್ಲಿ ಕೂಯ್ಲು ಮಾಡುತ್ತರೆ.
೬. ಇದರಲ್ಲಿ ಕಾಯಿ ಹಣ್ಣಾಗಲು ಸುಮಾರು ೮ ರಿಂದ ೧೦ ತಿಂಗಳು ಬೇಕಾಗುತ್ತದೆ.
೭. ಕಾಯಿ ಹಳದಿ ಬಣ್ಣಕ್ಕೆ ಬಂದಾಗ ಕತ್ತರಿಸಿ ಗೋಣಿಚೀಲದಲ್ಲಿಟ್ಟರೆ ಹಣ್ಣಾಗುತ್ತವೆ.  


ಮಾಹಿತಿ: ನನ್ನಿಂದ ಮತ್ತು ಹಲವಾರು ಜನರಿಂದ...  (ಮಾಹಿತಿಯಲ್ಲಿ ತಪ್ಪಿದ್ದಲ್ಲಿ ತಿದ್ದಿ ಮತ್ತಷ್ಟು ತಿಳಿದಿದ್ದರೆ ತಿಳಿಸಿ)

ಚಿತ್ರಗಳು: ಅಂತರ್ಜಾಲ

ಧನ್ಯವಾದಗಳು
ಮನಸು