Sunday, November 22, 2009

ಪ್ರಭಾತ್ ಕಲಾವಿದರು.....


ಪ್ರಭಾತ್ ಕಲಾವಿದರು
'ಪ್ರಭಾತ್' ಎಂಬ ಹೆಸರೇ ಹೇಳುವಂತೆ ಬೆಳಗುವ ಕಲಾವಿದರೇ ಸರಿ....ಕನ್ನಡ ಕಲೆಯನ್ನು ನಾಡಿನಾದ್ಯಂತ ಪಸರಿಸುತ್ತಿರುವ ಕಲಾವೃಂದಕ್ಕೆ ಆತ್ಮೀಯ ಅಭಿನಂದನೆಗಳು. ಇತ್ತೀಚೆಗಷ್ಟೆ ಕುವೈಟಿಗೆ ಆಗಮಿಸಿದ್ದ ಪ್ರಭಾತ್ ಕಲಾವಿದರ ಕಲಾಜೀವನದ ಹಾದಿಯ ಕಿರು ಪರಿಚಯ. ಹಾಗೂ ವಿಶೇಷ ಒಲವುಮೂಡಿಸಿದ ಆ ಕಲಾವೃಂದಕ್ಕೆ ನಮ್ಮ ಪ್ರೀತಿಯ ಕಿರುನುಡಿಯ ಹಣತೆ.
೧೯೩೦ರಲ್ಲಿ ಪ್ರಾರಂಭಗೂಂಡ ಒಂದು ಕಲಾವೃಂದ ಹಲವು ನಾಟಕ, ನೃತ್ಯರೂಪಕಗಳಿಗೆ ಹೆಸರುವಾಸಿಯಾಗಿದ್ದರು. ಈ ಕಲಾವೃಂದವನ್ನು ಗೋಪಿನಾಥ್,ಕರಿಗಿರಿ,ಜೈಸಿಂಹ,ದ್ವಾರಕನಾಥ್ ಎಂಬ ಕಲಾತಪಸ್ವಿಗಳು ತಮ್ಮ ಕಲಾವೃಂದಕ್ಕೆ ಗುರುರಾಜ ವಾದ್ಯವೃಂದ ಮತ್ತು ನಾಟಕ ಮಂಡಳಿ ಎಂಬ ಹೆಸರನ್ನಿಟ್ಟರು. ಇವರು ನಾಟಕ, ನೃತ್ಯ, ಹಾಡುಗಳು ಹಾಗೂ ಹರಿಕಥಾ ವಿಶೇಷತೆಗಳಲ್ಲೂ ಹೆಚ್ಚು ಒಲವಿತ್ತರು. ಮೊದಲು ತುಮಕೂರಿನಲ್ಲಿ ನೆಲೆಗೊಂಡಿದ್ದ ಕಲಾವಿದರು ಹೆಚ್ಚು ಪ್ರೇಕ್ಷಕರನ್ನು ಮನಸೆಳೆಯಲು ಬೆಂಗಳೂರಿಗೆ ಬಂದು ನೆಲೆಸಿದರು ಈ ತಂಡದ ಮೇಲ್ವಿಚಾರಕರಾಗಿ ಗೋಪಿನಾಥ್ ರವರು ತಮ್ಮ ತಂಡವನ್ನು ಮುನ್ನಡೆಸಿದರು. ೧೯೪೨ರಲ್ಲಿ ಪ್ರಭಾತ್ ಕಲಾವಿದರೆಂಬ ಹೆಸರಿಂದ ಮರುನಾಮಕರಣ ಮಾಡಿದರು. ಮೊಟ್ಟ ಮೊದಲು ಭಾರತೀಯ ಸಾಂಸ್ಕೃತಿಕ ನೃತ್ಯವನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೂ ಈ ಕಲಾವಿದರ ಪಾಲಾಗುತ್ತದೆ.

ಚಲನಚಿತ್ರ ಅಭಿನೇತ್ರಿಗಳಾದ ಸಿ.ಆರ್.ಸಿಂಹ, ಶ್ರೀನಾಥ್, ಮಂಜುಳ, ಲೋಕೇಶ್ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದು ಇದೇ ಕಲಾವಿದರ ತಂಡದಿಂದ, ಇವರೆಲ್ಲ ಚಿತ್ರರಂಗದ ಹಾದಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ತಮ್ಮ ನಾಟಕಗಳಲ್ಲಿ ಸುಮಾರು ೨೦ ನಾಟಕಗಳನ್ನು ಸಾದರಪಡಿಸಿದ್ದಾರೆ ಅವುಗಳಲ್ಲಿ ಕೆಲವು ಮೋಹಿನಿ ಬ್ರಹ್ಮಾಸುರ, ಕರ್ನಾಟಕ ವೈಭವ, ಕಿಂದರಿಜೋಗಿ,ರಾಮ ಪ್ರತಿಕ್ಷಾ,ಪುಣ್ಯಕೋಟಿ, ಧರ್ಮಭೊಮಿ, ದಶಾವತಾರ ಮುಂತಾದವುಗಳು. ಇಂತಹ ನೃತ್ಯರೂಪಕ ನಾಟಕ ಪ್ರಸ್ತುತ ಪಡಿಸುವುದು ಅತಿ ಸುಲಭದ ಮಾತಲ್ಲ ಅದಕ್ಕೆ ತಕ್ಕಂತ ವೇದಿಕೆ, ದೀಪಾಲಂಕಾರಗಳ ಪ್ರಭಾವ, ಹಿನ್ನೆಲೆ ಧ್ವನಿಗೆ ತಮ್ಮ ಮಾತು ಹೊಂದಾಣಿಕೆ, ಇವೆಲ್ಲವೂ ಬಲು ಕಷ್ಟದ ಕೆಲಸ ಅದಕ್ಕೆ ತಕ್ಕಂತ ಕಲಾವಿದರು ತಮ್ಮ ಶ್ರದ್ಧೆ ಒಲವೂ ಎಲ್ಲವನ್ನು ವಹಿಸಬೇಕಾಗುತ್ತದೆ. ಇಂತಹ ನೃತ್ಯರೂಪಕಗಳಿಗೆ ಸಾಹಿತ್ಯ,ಸಂಗೀತ ಜೋಡಣೆಗೆಂದೆ ಸಂಗೀತಸಾಹಿತ್ಯ ನಿರ್ಮಾಣಶಾಲೆಯನ್ನು ಪ್ರಭಾತ್ ಕಲಾವಿದರು ಹೊಂದಿದ್ದಾರೆ.ಇದೇ ಕಲಾವಿದರ ಅತಿ ಪ್ರಸಿದ್ಧ ನಾಟಕ ಸಿಂಡ್ರೆಲಾ ಈ ನಾಟಕವು ಸುಮಾರು ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವುದು ಅವರ ಕಲಾ ಪ್ರಬುದ್ಧತೆಯನ್ನು ಹಿಡಿದು ತೋರಿಸುತ್ತದೆ.

ಬರಿ ನಾಟಕ ನೃತ್ಯ ಇಷ್ಟಕ್ಕೆ ಮೀಸಲಿಡದೆ ತಮ್ಮ ವೃತ್ತಿಯನ್ನು ಉಡುಗೆ ತೊಡಿಗೆಗಳ ಬಾಡಿಗೆಗೆ ನೀಡುವಿಕೆ, ಸಂಗೀತ ಸಾಮಾಗ್ರಿಗಳು, ವೇದಿಕೆಗೆ ಬಳಸುವ ಸಾಮಗ್ರಿಗಳನ್ನು ಬಾಡಿಗೆಗೆ ನೀಡುತ್ತಲಿದ್ದಾರೆ, ನೃತ್ಯ ತರಬೇತಿಯನ್ನು ಸಹಾ ಹಲವು ಮಕ್ಕಳಿಗೆ ನೀಡುತ್ತಲಿದ್ದಾರೆ.

ಮತ್ತೊಂದು ವಿಶೇಷತೆ ಈ ಕಲಾಕುಟುಂಬದಲ್ಲಿದೆ ಅದೇನಂದರೆ ಅಮೇರಿಕಾ ಅಮೇರಿಕಾ ಖ್ಯಾತಿಯ ತಾರೆ ಹೇಮ ಪಂಚಮುಖಿ, ಹಾಗು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ಹರೀಶ್ ರವರು ಈ ಸಂಸ್ಥೆ ಸ್ಥಾಪಕರೊಬ್ಬರಾದ ಗೋಪಿನಾಥ್ ಅವರ ಮೊಮ್ಮಕ್ಕಳು ಇವರ ಸಾಧನೆಯೂ ಸಹ ಶ್ಲಾಘನೀಯ, ಹೇಮರವರು ಹಲವು ಮಕ್ಕಳಿಗೆ ನೃತ್ಯ ತರಬೇತಿದಾರರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಲಿದ್ದಾರೆ ಮತ್ತು ಹರೀಶ್ ಹಾಗೂ ಅವರ ಪತ್ನಿ ಕಿರುತೆರೆ ಅತಿ ಮುಗ್ಥ, ಸೌಮ್ಯ ಸ್ವರೂಪಿ ದೀಪಶ್ರೀ ದಂಪತಿಗಳಿಬ್ಬರು ಈ ಪ್ರಭಾತ್ ಕಲಾವಿದರ ಬಳಗಕ್ಕೆ ಹೆಮ್ಮೆಯ ಗರಿಗಳಾಗಿದ್ದಾರೆ.

ಕುಟುಂಬವನ್ನೇ ಕಲಾವಂತಿಕೆಯಲ್ಲಿ ಮುಳುಗಿಸಿಕೊಂಡ ಈ ಮನೋಘ್ನ ಅಭಿನೇತ್ರಿಗಳೂಂದಿಗೆ ನಾವುಗಳು ಕಳೆದ ಸಮಯ ನಮ್ಮ ಜೀವನದ ಅತಿ ಸಂತಸದ ಸಮಯ ಹಾಗು ಅವರ ತರಬೇತಿ ಮೇರೆಗೆ ನಾವು ಕಲಿತ ಕಿಂದರಜೋಗಿ ನಾಟಕದ ಪುಟ್ಟ ಪಾತ್ರ ನಮಗೆ ಖುಷಿಕೊಟ್ಟಿದೆ. ಇನ್ನು ಉತ್ತಮವಾಗಿ ಮಾಡಬೇಕಿತ್ತೆಂಬ ಅಭಿಲಾಷೆಯು ಇದೆ.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಸಂತಸ ತರಿಸಿದೆ. ಅವರಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.

ಹರೀಶ್ ಅವರು ನೀಡಿದ ರಾಮ, ವಿಷ್ಣು,ಕಿಂದರಜೋಗಿ ಮುಂತಾದವು..ಎಲ್ಲ ಪಾತ್ರಗಳನ್ನು ನಾವು ಕಣ್ಣಾರೆ ಕಂಡೆವು ಈ ಪಾತ್ರಗಳಿಗೆ ಕಿಂಚಿತ್ತೂ ಕುತ್ತು ಬರದಹಾಗೆ ಆಯಾ ಪಾತ್ರಕ್ಕೆ ಕಳೆತುಂಬಿದ್ದರು.ಇನ್ನು ದೀಪಶ್ರೀರವರು ಸೀತೆಯ ಪಾತ್ರವನ್ನು ಅತಿ ಮುಗ್ಧತೆಯಿಂದ ನಿರ್ವಹಿಸಿದರು ಹಾಗೂ ಪುಣ್ಯಕೋಟಿ ಪಾತ್ರದಲ್ಲಿ ತಾವೇ ಆ ಪುಣ್ಯಕೋಟಿಯೇನೋ ಎಂಬಂತೆ ಆ ಪಾತ್ರದಲ್ಲೇ ಐಕ್ಯರಾಗಿಬಿಟ್ಟಿದ್ದರು...ಅವರು ತಬ್ಬಲಿಕರುವಿನ ತಬ್ಬಿ ಮುದ್ದಾಡಿ ಇತರ ಹಸುಗಳಿಗೆ ಕಂದಮ್ಮನನ್ನು ನೀಡುವಾಗಿನ ದೃಶ್ಯ ಇಂದಿಗೂ ಕಣ್ಣುಕಟ್ಟಿದಂತಿದೆ...ಎಷ್ಟೋ ಮಂದಿ ಪ್ರೇಕ್ಷಕರು ತಾಯಿ ಮಗು ಅಗಲಿಕೆಗಾಗಿ ನೊಂದು ಕಣ್ಣೀರ ಸುರಿಸಿದ್ದು ಉಂಟು ಅಷ್ಟು ಮನೋಘ್ನ ಅಭಿನಯ ದೀಪಶ್ರೀರವರದು.ಇವರಿಬ್ಬರಷ್ಟೆ ಅಲ್ಲ ಅವರೊಂದಿಗೆ ಪಾತ್ರ ನಿರ್ವಹಿಸಿದ್ದ ಕಿಂದರಿಜೋಗಿಯ ಗೌಡ ಹಾಗೂ ಅಲೆಗ್ಸಾಂಡರ್ ಪಾತ್ರಧಾರಿ, ಲಕ್ಷ್ಮಣ,ಜಟಾಯು,ಹುಲಿ, ಕೃಷ್ಣ, ಹಲವು ನೃತ್ಯ ಕಲಾವಿದರೂ ಎಲ್ಲರೂ ಅದೇನು ಅಭಿನಯ ಒಬ್ಬೂಬ್ಬ ಕಲಾವಿದರೂ ೩,೪ ಪಾತ್ರಧಾರಿಗಳಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವಕಳೆ ತುಂಬಿದರು.

ಹರೀಶ್, ದೀಪ ಹಾಗೂ ಎಲ್ಲಾ ಪಾತ್ರ ವೃಂದದವರಿಗೆ ನಮ್ಮ ನಮನಗಳು.

ಕೆಲವು ನಾಟಕದ ಚಿತ್ರಗಳು...


















ಎಷ್ಟೋ ಜನರಿಗೆ ನಮ್ಮಲ್ಲೇ ಇರುವ ಪ್ರತಿಬೆಗಳು ಕಾಣುವುದಿಲ್ಲ, ಇಂತಹ ಕಲಾ ಆರಾಧಕರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಜೊತೆಗೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವುದು ನಮ್ಮ ನಿಲುವು ಸಹ ಆಗಿರಬೇಕು ಅಲ್ಲವೆ..?




Saturday, November 14, 2009

ಮರುಭೂಮಿಯಲ್ಲಿ ಕನ್ನಡವೈಭವ

ರಜತ ಮಹೋತ್ಸವದ ಸಂಭ್ರಮತೆಯ ಸಭಾಂಗಣಕ್ಕೆ ಹೂಕ್ಕುವ ಮುನ್ನವೇ ಎದ್ದು ಕಾಣುತ್ತಿತ್ತು ಒಳಗಿನ ಅದ್ದೂರಿ ಮುಂಭಾಗಿಲ ರಂಗೋಲಿಯಲಿ, ಗಣಪನ ಮೂರ್ತಿ, ಹೆಂಗಳೆಯರ ನಗು ನಗುವಿನೊಂದಿಗೆ ಸಾಂಪ್ರದಾಯಕ ಆಹ್ವಾನ ಎಲ್ಲವೂ ಎಲ್ಲರ ಮನಸಿಗೆ ಸಂತಸ ನೀಡಿತ್ತು, ಹಾಗೆ ಮುಂದೆ ಸಾಗಿದರೆ ಅಲ್ಲೇ ಮಕ್ಕಳ ಸೈನ್ಯ ಕಾದಿತ್ತು ಏನಿದು ಈ ಮಕ್ಕಳು ಹೀಗೆ ತರತರನಾದ ವೇಷಭೂಷಣಗಳಲ್ಲಿ ಮಿಂಚುತ್ತಿರುವರೆಂದು ನೋಡ ನೋಡುತ್ತಲಿದ್ದಂತೆ ಭಾರತದ ರಾಯಭಾರಿಗಳಾದ ಅಜಯ್ ಮಲ್ಹೋತ್ರರವರನ್ನು ಹಾಗೂ ಹಲವಾರು ಗಣ್ಯರ ಆಗಮನ ಕೋರಲು ಈ ಮುದ್ದು ಮಕ್ಕಳು ಕನ್ನಡನಾಡ ಕಲೆ ಸಂಸ್ಕೃತಿಯನ್ನು ತಮ್ಮ ವೇಷಭೂಷಣದಲ್ಲೇ ಬಿಂಬಿಸುತ್ತ ಎಲ್ಲರನ್ನು ಆಹ್ವಾನಿಸಿದರು ಆ ಮೆರವಣಿಗೆ ದಸರಾ ಮೆರವಣಿಗೆಯಂತೆ ಕಂಡದ್ದು ನಿಜವೇ ಸೈ.

ಮುಖ್ಯ ಅತಿಥಿಗಳೆಲ್ಲ ಆಸೀನರಾಗುತ್ತಲಿದ್ದಂತೆ ಸಮಾರಂಭವು ಕುವೆಂಪುರವರ ನಾಡಗೀತೆ ಭಾರತ ಜನನಿಯ ತನುಜಾತೆ.... ಎಂಬ ಹಾಡಿನಿಂದ ಮೊಳಗುತ್ತಿದ್ದಂತೆ ಎಲ್ಲಿದ್ದರೋ ಬಸವಣ್ಣ, ವಿದ್ಯಾರಣ್ಯ, ರನ್ನ,ಪೊನ್ನ, ಹಿಂದೊ ಕ್ರೈಸ್ತ, ಮುಸಲ್ಮಾನ, ಗೌತಮ, ಹೌಯ್ಸಳ ಎಲ್ಲರೂ ಒಮ್ಮೆಲೆ ಬಂದು ನಮ್ಮಮುಂದೆ ನಿಂತು ಬಿಟ್ಟರು...ಹಾಗೆ ನೆರೆದಿದ್ದ ಸಭಿಕರೆಲ್ಲ ನಾಡಗೀತೆಗೆ ಕೊಟ್ಟ ಗೌರವ ಅಭಿನಂದನಾರ್ಹ... ನಂತರದಿ ಅವಾಹನೆಯನ್ನು (ದೇವರ ಪ್ರಾರ್ಥನೆ) ನೃತ್ಯಗೀತೆಯೊಂದಿಗೆ ಕೂಟದ ಮಕ್ಕಳು ನೆರೆವೇರಿಸಿದರು.ತದನಂತರ ಗಣ್ಯರು ಹಾಗೂ ಕೂಟದ ಕಾರ್ಯಕಾರಿ ಸಮಿತಿಯೂಂದಿಗೆ ಜ್ಯೋತಿಬೆಳಗಿಸಿ ಉಪಕಾರ್ಯಕಾರಿ ಸಮಿತಿ ಸದಸ್ಯ ಸದಸ್ಯೆಯರೆಲ್ಲರೂ ಒಟ್ಟಾಗಿ ಡಿ. ಎಸ್ . ಕರ್ಕಿ ರವರ ಹಚ್ಚೇವು ಕನ್ನಡದ ದೀಪ.... ಹಾಡಿಗೆ ಸೊಡರೊತ್ತುರಜತಮಹೋತ್ಸವದ ವೇದಿಕೆ ಹಾಗೂ ಕನ್ನಡಿಗರ ಮನ-ಮನಗಳಿಗೆ ಒಲವ ಬೆಳಕನು ಹರಿಸಿದರು.
ಇಷ್ಟೆಲ್ಲ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸುಮಾರು ೧೧ ಗಂಟೆ ಇರಬಹುದು ಕರುನಾಡಿಂದ ಬರಬೇಕಾದಂತ ಕರುನಾಡಿನಿಂದ ಬಂದಂತಹ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದಂತಹ ಶ್ರೀ ಗಣೇಶ್ ಕಾರ್ಣೀಕ್ ರವರು ಸಮಾರಂಭಕ್ಕೆ ಮೆರುಗು ನೀಡಿದರು. ಇವರ ಬರುವಿಕೆಯಲ್ಲೆ ಸೂತ್ರದ ಬೊಂಬೆಯಾಟ ನೆಡೆಯುತ್ತಲಿದ್ದು. ವಶವರ್ತಿ(ಸೂತ್ರದ ಬೊಂಬೆಯಾಟ) ನೆರೆದಿದ್ದ ಎಲ್ಲ ಜನರ ಚಪ್ಪಾಳೆ ಗಿಟ್ಟಿಸಿತು.

ಕನ್ನಡ ಕೂಟ ಕುವೈಟ್ ೨೫ ವರ್ಷಗಳು ಸಾಗಿಬಂದ ಹಾದಿಯನ್ನು ದೃಶ್ಯಮಾಲಿಕೆಯಲ್ಲಿ ನಿರೂಪಿಸಿ ನೆರೆದಿದ್ದವರೆಲ್ಲರಿಗೂ ಮರಳು ಮಲ್ಲಿಗೆಯ ಕಂಪು ಸೂಸಿದರು...ತದನಂತರ ವೇದಿಕೆ ಅಲಂಕರಿಸಿದ ಹಳೆ ಬೇರೆಂಬಂತೆ ಕನ್ನಡಕೂಟ ಆರಂಭಿಸಿದ್ದ ಹಾಗು ಮಾಜಿ ಅಧ್ಯಕರುಗಳು ಮತ್ತು ಹೊಸ ಚಿಗುರು ಎಂಬಂತೆ ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಹಾಗೂ ಕರುನಾಡ ಪ್ರತಿನಿಧಿಗಳಾಗಿ ಬಂದಿದ್ದ ಕ್ಯಾಪ್ಟನ್ ಗಣೇಶ್ ಎಲ್ಲರೊ ವೇದಿಕೆಗೊಂದು ಮೆರುಗು ನೀಡಿದರು. ಹಳೆ ಬೇರುಗಳ ಭಾಷಣ ಅವರ ಅನುಭವ ಅವರ ಅಭಿಪ್ರಾಯ ಎಲ್ಲವೂ ಮನಸೂರೆಕೊಂಡಿತು... ನಂತರದಿ ಕ್ಯಾಪ್ಟನ್ ಗಣೇಶ್ ರವರ ಸರದಿ ನೋಡು ನೋಡುತ್ತಲಿದ್ದಂತೆ ಅವರ ಭಾಷಣ ಅವರ ಧ್ಯೇಯ, ಆಸಕ್ತಿ, ಒಲವೂ ಎಲ್ಲವೂ ಮೆಚ್ಚನಾರ್ಹವೆನಿಸಿತು... ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಲಿಟ್ಟು ೩ ವರ್ಷಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಮಾಡುವೂದಿಲ್ಲವೆಂದು ಖಡಾಖಂಡಿತವಾಗಿ ಸಭೆಯಲ್ಲಿ ಸಾರಿ ಹೇಳಿದರೂ ಅದು ಅಲ್ಲದೆ ಅನಿವಾಸಿ ಭಾರತೀಯರಿಂದಾಗುವ ಅನುಕೂಲ, ಅವರುಗಳ ತೊಂದರೆ, ಅನಿವಾಸಿ ಭಾರತೀಯರಿಂದ ದೊರಕುವ ಅನಿಸಿಕೆ ಅಭಿಪ್ರಾಯ, ಕರುನಾಡ ಏಳ್ಗೆಗೆ ಅನಿವಾಸಿ ಭಾರತೀಯರ ಪಾತ್ರ ಎಲ್ಲಕ್ಕೊ ಸ್ಪಂದಿಸುವುದಾಗಿ ಹೇಳಿದರು. ಇವರ ಭಾಷಣ ಮುಗಿಯುತ್ತಿದ್ದಂತೆ ಸ್ಮರಣ ಸಂಚಿಕೆಯನ್ನು ಸಾಂಸ್ಕೃತಿಕ ರೀತಿಯಲ್ಲಿ ಬಿಡುಗಡೆಮಾಡಲಾಯಿತು. ಈ ಕಾರ್ಯಕ್ರಮಗಳೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು ಎಲ್ಲರು ತಮ್ಮ ಊಟ ಮುಗಿಸಿ ಮಧ್ಯಾಹ್ನದ ಕಾರ್ಯಕ್ರಮಗಳತ್ತ ಹೊರಡುವತ್ತಲಿದ್ದಂತೆ ಕ್ಯಾ.ಗಣೇಶ್ ಅವರ ಆಶಯದ ಮೇರೆಗೆ ಮತ್ತೊಮ್ಮೆ ನಾಡಗೀತೆ ಹಾಡುವವರಿಗೆ ಆಹ್ವಾನವಿತ್ತರು.

ಬೆಳಗಿನ ಸಮಾರಂಭವೇಕೋ ತುಸು ಮಂದಗತಿಯಲ್ಲಿ ಸಾಗುತ್ತಿದೆಯೆಂದೆನಿಸಿತು ಆದರೆ ಅಪರಾಹ್ನದ ಸಮಾರಂಭ ಕ್ಯಾ.ಗಣೇಶ್ ರವರ ಆಸೆಯಂತೆ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಅಲ್ಲದೆ ಅವರೂ ಸಹ ನಮ್ಮೆರಲ್ಲೊಬ್ಬರಾಗಿ ಹಾಡಿದರು ಇವರೊಟ್ಟಿಗೆ ಕುವೈಟ್ ಅತಿಥಿಗಳು ಮಾಜಿ ಹಾಗೂ ಹಾಲಿ ಅಧ್ಯಕ್ಷರು ಕೂಡಿ ನಾಡಗೀತೆ ಸುಸೂತ್ರ ಸುಮಧುರವಾಗಿ ನೆರೆವೇರಿದ ನಂತರ ೨೫ ವರ್ಷಗಳ ಹುಟ್ಟುಹಬ್ಬದ ಸಂಭ್ರವನ್ನು ಸಿಹಿ ಕೇಕ್ ಕತ್ತರಿಸುವ ಮೂಲಕ ಮಧ್ಯಾಹ್ನದ ಮನರಂಜನ ಕಾರ್ಯಕ್ರಮಕ್ಕೆ ಸಿಹಿಸಂತಸದ ಹೊನಲಾಯಿತು. ಇವರೆಲ್ಲರೊಟ್ಟಿಗೆ ಉದಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಅವರ ನುಡಿಮುತ್ತುಗಳು ಸಭೆಗೆ ಕಳೆಯನ್ನು ತರಿಸಿತ್ತು
ಇನ್ನು ಕನ್ನಡಕೂಟದ ಹಿರಿ ಕಿರಿಯರ ಮನರಂಜನಾ ಕಾರ್ಯಕ್ರಮದ ಸಮಯ ಮೂದಲಿಗೆ ಅಷ್ಟಲಕ್ಷ್ಮಿ ರೂಪದ ನೃತ್ಯ
ರೂಪಕವನ್ನು ಕೂಟದ ಹೆಂಗಳೆಯರು ಅತಿ ಉತ್ಸಾಹ, ಮನಪೂರ್ವಕವಾಗಿ ದೇವಿಯನ್ನು ನೆನೆದರೆ ಲಕ್ಷಿ ದಯಪಾಲಿಸದೇ ಇರುತ್ತಾಳೆಯೇ ವೇದಿಕೆಯು ಲಕ್ಷ್ಮಿ ಕಟಾಕ್ಷವಾಗಿ ಮಾರ್ಪಟ್ಟಿತ್ತು, ಲಕ್ಷ್ಮಿ ಬಂದುಹೋಗುತ್ತಲಿದ್ದಂತೆ ಅದೆಲ್ಲಿದ್ದವೋ ಗುಬ್ಬಿಗಳು ನಮ್ಮ ಮುದ್ದು ಚಿಣ್ಣರು ಗುಬ್ಬಿ ಗುಬ್ಬಿ ಎಂದು ಗುಬ್ಬಿಗಳನ್ನೇ ಸಭಾಂಗಣಕ್ಕೆ ಕರೆತಂದುಬಿಟ್ಟಿದ್ದರು ವೇದಿಕೆ ಅಲಂಕರಿಸಿದ ಗುಬ್ಬಿಗಳು ಬಣ್ಣ ಬಣ್ಣದ ದೀಪಗಳು ಜಗಮಗಿಸುವುದ ಕಂಡು ಅಲ್ಲೇ ನಿಂತು ಬಿಟ್ಟಿದ್ದವು ಗುಬ್ಬಿಗಳನ್ನು ಕಂಡ ಹಳ್ಳಿ ಮಕ್ಕಳು ಮತ್ತೊಂದು ಜಾನಪದ ನೃತ್ಯವನ್ನು ಎಲ್ಲರ ಮುಂದಿಟ್ಟು ಹಳ್ಳಿಗೆ ಕರೆದೋಯ್ದರು, ಇನ್ನು ಹಲವು ಮಕ್ಕಳು ನಾವೇನು ಕಮ್ಮಿ ಎಂಬಂತೆ ಕೋಲಾಟದಿ ನೃತ್ಯ ಮಾಡಿ ನಲಿಸಿದರು, ಲಕ್ಷ್ಮಿ, ಗುಬ್ಬಿ, ಹಳ್ಳಿ ಜಾನಪದರು, ಕೋಲಾಟ ಎಲ್ಲವನ್ನು ಕಂಡ ಅದೆಲ್ಲೋ ಇದ್ದ ಎರಡು ನವಿಲುಗಳು ನೃತ್ಯವಾಡುತ್ತ ಬಂದೇ ಬಿಟ್ಟವು ಇನ್ನು ಸ್ವಲ್ಪಹೊತ್ತು ನೃತ್ಯನೋಡೋಣವೆಂದರೆ ತೊಗಲುಗೊಂಬೆಯ ನೃತ್ಯವಾಡಲು ಮಕ್ಕಳ ಹಿಂಡು ಬಂದೇ ಬಿಟ್ಟಿತು...ಇವರನ್ನೆಲ್ಲ ನೋಡಲು ನಾಗರಹೊಳೆಯಲ್ಲಿದ್ದ ಕಾಡುಜನರೂ ಓಡೋಡಿ ಬರುವುದೇ ಅಬ್ಬಾ ಕಾಡುಜನವೆಂದು ಯಾರು ಅವರನ್ನು ಹೇಳುವುದು ಅಷ್ಟು ಮನೋಘ್ನ ನೃತ್ಯವನ್ನು ನೀಡಿ ಕುಣಿದು ಕುಪ್ಪಳಿಸಿದರು.... ಇವರೆಲ್ಲರ ಮಧ್ಯೆ ಕೃಷ್ಣ ಕೊಳನೂದುತ ಸ್ನೇಹ ವೃಂದದೊಂದಿಗೆ ಕುಣಿದುನಲಿದನು, ನಂತರ ಕನ್ನಡದ ಹುಡುಗರೆಲ್ಲ ನಮ್ಮ ಜೀವನ ಕನ್ನಡ ಎಂದು ನೃತ್ಯ ನೀಡಿ ಸಿಳ್ಳೆ ಗಿಟ್ಟಿಸಿದರು, ನಂತರ ನಾದಸ್ವರೂಪದ ಬೆಸುಗೆಯೊಂದಿಗೆ ಹೆಂಗಳೆಯರು ನೃತ್ಯ ನೀಡಿ ಮನತಣಿಸಿದರು, ನೃತ್ಯ ಲೋಕದಿಂದ ಹೊರಬರುತ್ತಿದ್ದ ಹಾಗೇ ಒಂದು ಮುನ್ಸೊಚನೇ ಇಲ್ಲದೆಯೇ ಆಶ್ಚರ್ಯದ ವೇದಿಕೆಯಲ್ಲಿ ಸೃಷ್ಟಿಯಾಗಿತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೂಟದ ಹಾಲಿ ಅಧ್ಯಕ್ಷರಾದ ಶ್ರೀಮತಿ ಶ್ರೀ ಸತೀಶ್ ಚಂದ್ರ ಶೆಟ್ಟಿ ದಂಪತಿಗಳ ೨೫ ವರ್ಷದ ವಿವಾಹ ಮಹೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ದಂಪತಿಗಳಿಗೆ ಬೆರಗು ಮೂಡಿಸಿದರು. ಕೂಟದ ಕಾರ್ಯಕ್ರಮ ಹೇಗಿತ್ತೆಂದರೆ ತವರೂರಲ್ಲಿ ಮದುವೆ ಸಮಾರಂಭ ನೆಡೆದಂತಿತ್ತು ಹೆಂಗಳೆಯರು ಮದುವೆಮನೆಯಲ್ಲಿ ಶಾಸ್ತ್ರಕ್ಕೊಂದು ಉಡುಗೆ ಮುಹೂರ್ತಕ್ಕೂಂದು ಬೆರಗುಗೊಳಿಸೋ ಉಡುಗೆ ಹೀಗೆ ಸಾಂಪ್ರದಾಯಕ ಉಡುಗೆತೂಡುಗೆಯೂಂದಿಗೆ ಸಭಾಂಗಣವನ್ನು ಹೆಣ್ಣುಮಕ್ಕಳು ಅಲಂಕರಿಸಿಬಿಟ್ಟಿದ್ದರು.
ಇತ್ತ ಸಂಜೆಯ ಸವಿ ಸವಿಯಲೂ ಸಭಿಕರೆಲ್ಲರು ನೆರೆದಿದ್ದರೂ ಇತ್ತ ವೇದಿಕೆಯ ಹಿಂಬದಿ ಪ್ರಭಾತ್ ಕಲಾವಿದರು (ಬೆಂಗಳೂರು) ಇವರೊಟ್ಟಿಗೆ ಕನ್ನಡ ಕೂಟದ ಮಕ್ಕಳು ದೊಡ್ಡವರು ಅತಿ ಉತ್ಸಾಹದಿಂದ ಕಾತುರದಿ ವೇದಿಕೆ ಅಲಂಕರಿಸಲು ಕಾದಿದ್ದರು... ಸಂಜೆಯ ಕಾರ್ಯಕ್ರಮ ಕುವೆಂಪುರವರ ಕಿಂದರ ಜೋಗಿ ನೃತ್ಯರೂಪಕ ನಾಟಕ ಪ್ರಾರಂಭವಾಗಿಯಿತು ಏನು ಆ ಹಳ್ಳಿ ಮಕ್ಕಳು ಅಜ್ಜನೊಂದಿಗೆ ಕಥೆ ಹೇಳುವಂತೆ ಕೇಳುತ್ತಲಿದ್ದಂತೆ ಅಜ್ಜ ಆ ಮಕ್ಕಳಿಗೆಲ್ಲಾ ತುಂಗಾ ತೀರದ ಹಳ್ಳಿಗೆ ಕರೆದೂಯ್ದರು ಆ ಹಳ್ಳಿಯ ಜನ ಆ ಜನರಿಗೊಬ್ಬ ಗೌಡ ಸುಂದರ ಊರಿಗೆ ಇಲಿಗಳ ಕಾಟ, ಕಾಟ ತಾಳಲಾರದೆ ಕಿಂದರಜೋಗಿಗೆ ಮೂರೆ, ಕಿಂದರ ಜೋಗಿ ಇಲಿಗಳ ನಾಶಾನಂತರ ಗೌಡನ ದರ್ಪ, ಜಂಭ ಇದಕ್ಕೆ ಕೆಲವು ಹಳ್ಳಿ ಜನ ಪ್ರೋತ್ಸಾಹ, ಕೆಲವರ ಬೈಗುಳ ಮೋಸ ಮಾಡುವನೆಂದು.. ಭಾವಿಸಿ ಬೈಗುಳ ನೆಡೆದಿತ್ತು... ಗೌಡನಲ್ಲಿ ಮುನಿಸಿ ಊರ ಮಕ್ಕಳನ್ನೆಲ್ಲ ಕರೆದೂಯ್ದ ಕಿಂದರಿಜೋಗಿ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಪ್ರಭಾತ್ ಕಲಾವಿದರು ಹಾಗು ಕೂಟದ ಸದಸ್ಯರು ವೇದಿಕೆಯನ್ನು ತುಂಗಾ ತೀರದ ಹಳ್ಳಿಯನ್ನಾಗಿ ಮೂಡಿಸಿಬಿಟ್ಟಿದ್ದರು. ಈ ನೃತ್ಯ ರೂಪಕ ನಾಟಕ ಮುಗಿಯುವ ಹೂತ್ತಿಗೆ ಕಾಫಿ, ಟೀ ಸಮಯವಾಗಿತ್ತು ಎಲ್ಲರೂ ಕಾಫಿ, ಟೀ ಜೊತೆಗೆ ತಿಂಡಿತಿನಿಸು ತಿಂದು ಮುಗಿಸುವಷ್ಟರಲ್ಲೇ ಸಂಜೆಯ ಸಮಾರಂಭವು ಅತಿ ಅದ್ದೂರಿಯಿಂದ ಸಜ್ಜಾಗಿ ಸಭಿಕರೆಲ್ಲರಿಗಾಗಿ ಕಾದಿತ್ತು.

ಹಳ್ಳಿಗೋಗಿದ್ದ ಸಭಿಕರೆಲ್ಲರೂ ಧರ್ಮಭೂಮಿ ಕಡೆಗೊರಟರು, ಅಬ್ಬಾ!!! ಅದೆಂತಹ ನಾಟಕ ಎಲ್ಲರೂ ಈ ನಾಟಕವನ್ನು ನೋಡಲೇಬೇಕು... ಎಲ್ಲರಿಗು ತಿಳಿದಂತೆ ಗ್ರೀಕ್ ದೊರೆ ಅಲೆಗ್ಸಾಂಡರ್ ಅತಿ ಬಲಿಷ್ಟ ಶೌರ್ಯ ದೊರೆ, ಈ ದೊರೆ ಭಾರತದ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ತನ್ನ ಗುರುಗಳಾದ ಅರಿಸ್ಟಾಟಲ್ ಹಾಗು ಅಲೆಗ್ಸಾಂಡರ್ ನಡುವಿನ ಸಂಭಾಷಣೆ ಹಾಗು ಅರಿಸ್ಟಾಟಲ್ ನಮ್ಮ ಭವ್ಯ ಭಾರತ ಬಗೆಗಿದ್ದ ಅತಿಯಾದ ಗೌರವ, ಪ್ರೀತಿ ಎಲ್ಲವನ್ನು ತಿಳಿಸಿ ಅಲೆಗ್ಸಾಂಡರ ರಾಜನಿಗೆ ದಂಡಯಾತ್ರೆಗೆ ಹೋಗುವ ಬದಲು ಶಾಂತಿಯಾತ್ರೆಗೆ ಹೋಗುವಂತೆ ಸೂಚಿಸಿದ್ದರು ಅಂತೆಯೇ ಭರತ ಭೊಮಿಗೆ ಬಂದ ರಾಜ ಹಿಂತಿರುಗಿ ಹೋಗುವಾಗ ಆರೋಗ್ಯ ಏರುಪೇರಿನಿಂದ ಅಸುನೀಗುತ್ತಾನೆ ತಾನು ಸಾಯುವ ಮುನ್ನ ತನ್ನ ದೇಹವನ್ನು ಪೆಟ್ಟಿಗೆಯಲ್ಲಿಡಿ ಆದರೆ ತನ್ನ ಎರಡು ಕೈಗಳನ್ನು ಹೊರಗಿಡಿ ಏಕೆಂದರೆ ನಾನು ೩೩ ವರ್ಷಕ್ಕೆ ಹತ್ತು ಹಲವು ದೇಶಗಳನ್ನು ಗೆದ್ದು ದಿಗ್ವಿಜಯಿಯಾಗಿದ್ದೆ ಆದರೆ ಸತ್ತ ನಂತರ ನನ್ನ ಕೈ ಏನನ್ನೊ ತೆಗೆದುಕೊಂಡೋಗುತ್ತಿಲ್ಲ, ಬರಿಗೈನಲ್ಲಿ ಹೋಗುತ್ತಿರುವೆ ಎಂದು ಎಲ್ಲರಿಗೂ ಸಂದೇಶವನಿತ್ತು ಅವನು ಅಮರನಾದನು... ಇದೆಲ್ಲದರ ಮಧ್ಯೆ ಅರಿಸ್ಟಾಟಲ್ ಭಾರತ ಭೂಮಿಯ ಗಂಗಾ ಜಲ, ರಾಮಾಯಣ, ಮಹಾಭಾರತ, ಕೃಷ್ಣ ಹಾಗೂ ಅವನ ಕೊಳಲ ಪ್ರಾಮುಖ್ಯತೆ, ಭಗವದ್ಗೀತೆಯ ವಿಶೇಷತೆಯನ್ನು ನಮ್ಮ ಮುಂದಿಟ್ಟರು.. ಅಬ್ಬಾ ಎಂತಹ ವೈಭವೋತೀತ ಭರತಖಂಡ ಪರಿಚಯವನ್ನು ನಾಟಕರೂಪದಲ್ಲಿ ನಮ್ಮ ಮುಂದಿಟ್ಟರು ಎಂದೆನಿಸಿತು.

ತದನಂತರ ದಶಾವತಾರ ನೃತ್ಯರೂಪಕವು ಮನಸೂರೆಗೊಂಡಿತು, ವಿಷ್ಣುವಿನ ದಶ ಅವತಾರಗಳನ್ನು ಪ್ರಭಾತ್ ಕಲಾವಿದರಾದ ಹರೀಶ್ ಸಭಿಕರೆಲ್ಲರಿಗೂ ಅರ್ಥವಾಗುವಂತೆ ಮನಮುಟ್ಟುವಂತೆ ನೃತ್ಯರೂಪಿಸಿದರು. ಕೊನೆಯ ನೃತ್ಯರೂಪಕ ಪುಣ್ಯಕೋಟಿ ಆಹಾ!!! ದಟ್ಟಅಡವಿಯಲ್ಲಿ ಹುಲಿಯ ಬಾಯಿಗೆ ಸಿಕ್ಕಿಕೊಂಡ ಆ ಪುಣ್ಯಕೋಟಿ ಹಸುವಿನ ಮನಕಲಕುವ ದೃಶ್ಯ, ಆ ಕರುವಿನ ತಬ್ಬಲಿತನ ಎದ್ದು ಕಾಣುವಂತೆ ಮನೋಘ್ನ ಅಭಿನಯವನ್ನು ಪ್ರಭಾತ್ ಕಲಾವಿದರಾದ ದೀಪಶ್ರೀಹರೀಶ್ ಹಾಗೂ ಕೂಟದ ಸದಸ್ಯರ ಮಗು ನೀತಾ ತಬ್ಬಲಿಯ ಕರುವಾಗಿ ಬಹಳ ವಿಶೇಷವಾಗಿ ಅಭಿನಯಿಸಿದರು ಪುಣ್ಯಕೋಟಿಯ ನಾಟಕ ನೋಡ ನೋಡುತ್ತಲಿದ್ದ ಹಾಗೆ ಕೆಲವರ ಕಣ್ಣುಗಳು ಒದ್ದೆಯಾದವು....ಪುಣ್ಯಕೋಟಿ ಮರಳಿ ತಾಯಮಡಿಲು ಸೇರುವ ದೃಶ್ಯದೊಂದಿಗೆ ಮನಸು ಹಗುರಾಗಿ ಸಂತಸದಿ ನಾವುಗಳೆಲ್ಲ ಸಭಾಂಗಣ ತೊರೆದು ರಾತ್ರಿ ಊಟಕ್ಕೆ ತೆರೆಳಿದೆವು. ಮೃಷ್ಟಾನ್ನ ಭೋಜನದಿ ಎಲ್ಲರೂ ಊಟ ಸವಿದು ಮನೆಯ ಕಡೆ ಮುಖ ಮಾಡಿದೆವು.

ಪ್ರಭಾತ್ ಕಲಾವಿದರ ನೀಡಿದ ಸುಮಾರು ೨ ಗಂಟೆಯ ಕಾರ್ಯಕ್ರಮಗಳು ಬೆಂಗಳೂರಿನಲ್ಲಾಗಿದ್ದರೆ ಸುಮಾರು ೪೦ ಜನರೂಡಗೂಡಿ ನಿರೂಪಿಸುತ್ತಿದ್ದ ಕಲಾವಿದರು ಇಂದು ಸುಮಾರು ೧೫ ಕಲಾವಿದರೂಂದಿಗೆ ಒಬ್ಬೂಬರು ೩, ೪ ಪಾತ್ರಗಳನ್ನು ಅಭಿನಯಿಸಿ ಅದ್ಭುತ ಅಭಿನೇತ್ರಿಗಳಾಗಿ ನಮ್ಮೆಲ್ಲರಿಗೂ ಮನವನ್ನು ತಣಿಸಿದರು.
ಒಟ್ಟಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ನಮನ, ಮನನ ಎಲ್ಲವೂ ಸರಾಗವಾಗಿ ಯಾವ ಅಡೆತಡೆಯಿಲ್ಲದೆ ನೆರೆವೇರಿತು ಯಾವ ರಾಜಕಾರಿಣಿಗಳಾಗಲಿ, ಚಲನಚಿತ್ರ ತಾರೆಗಳಾಗಲಿ ಯಾರ ಅನುಪಸ್ಥಿತಿಯೂ ಕನ್ನಡಾಂಬೆಯ ವೈಭವೋತೀತ ಹುಟ್ಟುಹಬ್ಬದ ಆಚರಣೆಗೆ ಸ್ವಲ್ಪವೂ ಕುತ್ತುಬರದೆ ಕರುನಾಡ ಸಿರಿ ಮರಳುಗಾಡಿನಲ್ಲಿ ರಾರಾಜಿಸಿತು.
ಈ ಕಾರ್ಯಕ್ರಮಕ್ಕೆ ರುವಾರಿಗಳಾದ ಕಾರ್ಯಕಾರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಹಲವು ಉಪಸಮಿತಿಗಳೆಲ್ಲರಿಗೂ,ಮತ್ತು ಪ್ರಭಾತ್ ಕಲಾವೃಂದದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

Tuesday, November 10, 2009

ಒಟ್ಟಾಗಿ ಬನ್ನಿ...ಹಚ್ಚೋಣ ಕನ್ನಡದ ದೀಪ....


ಕನ್ನಡಾಂಬೆಯ ನೆನೆವ ಮನಗಳು ಪ್ರಪಂಚದಾದ್ಯಂತ ಹರಡಿಹೋಗಿವೆ ಕೆಲವು ಪ್ರಾಂತ್ಯ, ಊರು ಕೇರಿಗಳಲ್ಲಿ ಕನ್ನಡಮ್ಮನಿಗೆಂದೆ ಹಬ್ಬ ಆಚರಣೆಗಳು ನೆಡೆಯುತ್ತಲೇ ಇರುತ್ತವೆ. ಅಂತೆಯೇ ನಾವು ಸಾಗರದಾಚೆ ಕನ್ನಡಮ್ಮನ ನೆನೆದು ಅವಳ ಪ್ರೀತಿಪಾತ್ರರಾಗುವ ಒಂದು ಪುಟ್ಟ ಪ್ರಯತ್ನ...

ಕುವೈಟ್ ಕನ್ನಡಿಗರೆಲ್ಲರು ಒಗ್ಗೂಡಿ ಇದೇ ನವೆಂಬರ್ ೧೩ರಂದು ಅಮೇರಿಕನ್ ಇಂಟರ್-ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಉತ್ಸವ ನೆರೆವೇರಲಿದೆ ಈ ಸಮಾರಂಭಕ್ಕೆ ಅಭೂತಪೂರ್ವ ರೀತಿಯಲ್ಲಿ ಎಲ್ಲಾ ಮಕ್ಕಳು, ಹಿರಿ-ಕಿರಿಯರೆಲ್ಲರೂ ತಮ್ಮದೇ ಆದಂತಹ ಮನರಂಜನಾ ಕಾರ್ಯಕ್ರಮಕ್ಕೆ ಮೆರುಗು ನೀಡಲು ಸಜ್ಜಾಗಿದ್ದಾರೆ.

ಈ ಬಾರಿ ಅತಿ ಆಸಕ್ತಿದಾಯಕ ಎಂದರೆ ಕುವೈಟ್ ಕನ್ನಡ ಕೂಟಕ್ಕೆ ಬೆಳ್ಳಿಹಬ್ಬದ ವೈಭವ ಇದರ ಸಲುವಾಗಿ ಕನ್ನಡ ಕೂಟದ ವತಿಯಿಂದ ಮನರಂಜನಾ ಕಾರ್ಯಕ್ರಮ ಹಾಗೂ ಬೆಂಗಳೊರಿನಿಂದ ಆಗಮಿಸಿರುವ ಪ್ರಭಾತ್ ಕಲಾವಿದರಿಂದ ವಿವಿಧ ನೃತ್ಯರೂಪಕ ನಾಟಕಗಳು ನೆಡೆಯಲಿವೆ. ಇದಲ್ಲದೆ ಪ್ರಭಾತ್ ಕಲಾವಿದರೊಂದಿಗೆ ಕುವೈಟ್ ಕನ್ನಡಿಗರೂ ಸಹ ಭಾಗವಹಿಸಲಿದ್ದಾರೆ.
ಕಿರುತೆರೆ ಹಾಗು ಚಲನಚಿತ್ರ ತಾರೆಗಳಾದ ಹಾಗೂ ಪ್ರಭಾತ್ ಕಲಾವಿದರಾದ ದೀಪಶ್ರೀ ಮತ್ತು ಹರೀಶ್ ದಂಪತಿಗಳ ಸಾರಥ್ಯದಲ್ಲಿ ನಾವುಗಳು ನಾಟಕಾಭ್ಯಾಸದಲ್ಲಿ ತೊಡಗಿದ್ದೇವೆ. ಪರಿಪೂರ್ಣತೆ ಅಥವಾ ಪಕ್ವತೆ ನಮ್ಮಲ್ಲಿಲ್ಲದಿದ್ದರೂ ನಮ್ಮ ಪಾತ್ರಗಳಿಗೆ ಜೀವತುಂಬುವ ನಿಟ್ಟಿನಲ್ಲಿದ್ದೇವೆ.

ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸಂತಸ ಭರಿತವಾಗಿ ನೆರವೇರುವುದೆಂದು ನಾವು ಭಾವಿಸುತ್ತ ನಿಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನವನ್ನು ನೀಡುತ್ತಲಿದ್ದೇವೆ.


ಆಮಂತ್ರಣ ನಮ್ಮದು .... ಬರುವಿಕೆ ನಿಮ್ಮದು...ನಿಮ್ಮ ನಿರೀಕ್ಷೆಯಲ್ಲಿ ಕಾಯುವುದು ನಮ್ಮೆಲ್ಲರದು.... ಎಲ್ಲರೊಟ್ಟುಗೂಡಿ ಕನ್ನಡದದೀಪ ಬೆಳಗಿಸಿ ಉಳಿಸುವುದು ಕನ್ನಡಿಗರೆಲ್ಲರದು...

ಕಡಲ ಕಿನಾರೆಯಾದ
ಮರಳುಗಾಡ ಸಿರಿಯಲಿ
ಭಾರತಾಂಬೆಯ ಕುವರಿ
ದಿವ್ಯನಗೆಯ ಕನ್ನಡಾಂಬೆ
ವಿಜೃಂಭಿಸಲಿರುವಳು......
ನಿಮ್ಮೆಲ್ಲರ ಜಯಕಾರವಿರಲಿ
ಈ ಭುವನೇಶ್ವರಿ ತಾಯಿಗೆ........

ಶುಭದಿನ.
ವಂದನೆಗಳೊಂದಿಗೆ
ಕುವೈಟಿನ ಬ್ಲಾಗಿಗರಾದ
ಮೃದುಮನಸು,
ಸವಿಗನಸು, ಮತ್ತು
ಜಲನಯನ....

Thursday, November 5, 2009

ಮೊದಲು

ಮಾತನಾಡುವ ಮೊದಲು ಆಲಿಸಿಕೊ
ಕೇಳಿದ ಮಾತು ಮನದಾಳದಲಿರಲಿ
ಮನದಮಾತು ಮುತ್ತ ಪೋಣಿಸಿದಂತಿರಲಿ
ಪೋಣಿಸಿದ ಸರಮಾಲೆ ಮುತ್ತಿನಹಾರದಂತಿರಲಿ!!

ಬರೆಯುವ ಮೊದಲು ಯೋಚಿಸು
ಯೋಚಿಸಿದ ಸಾಲು ಮಿದುಳಲ್ಲಿರಿಸಿ
ಲೇಖನಿ ಜೊತೆಗೆ ಅಕ್ಷರಸಾಲು ಮೂಡಿಸು
ಬರೆದ ಸಾಲುಗಳು ಎಲ್ಲರ ಮನದಲುಳಿಸು!!

ಖರ್ಚು ಮಾಡುವ ಮೊದಲು ಸಂಪಾದಿಸು
ಸಂಪಾದಿಸುವುದ ಕಲಿಯಲು ಶ್ರಮವಹಿಸು
ಶ್ರಮದ ಸಂಪಾದನೆಯ ಇತಿಮಿತಿಯೂಂದಿಗೆ
ಶ್ರಮದ ಫಲ ಜೀವನಪೂರ್ತಿ ಅನುಭವಿಸು!!

ಟೀಕಿಸುವ ಮೊದಲು ತಾಳ್ಮೆಯಿರಲಿ
ತಾಳ್ಮೆ ನಮ್ಮ ಜೀವನಕೆ ಸಹಾನುಭೂತಿ
ಟೀಕಿಸುವುದು ನಮ್ಮ ತರ್ಕಕ್ಕೆ ನಿಲುಕದ್ದು
ನಿಲುಕದ ಜೀವಕ್ಕೆ ಟೀಕಿಸುವುದ ದೂಡಿಬಿಡು!!

ತೊರೆಯುವ ಮೊದಲು ಪ್ರಯತ್ನಿಸು
ಇರುವುದ ತೂರೆಯುವುದು ಸುಲಭವಲ್ಲ
ತೊರೆದರೆ ಮತ್ತೆ ಪಡೆವುದು ಆಶಾಗೋಪುರ
ಎಲ್ಲದರ ಅರಿವು ನಮ್ಮಲಿದ್ದೊಡೆ ಒಳಿತು!!