Thursday, March 26, 2009

ಯುಗಾದಿ


ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು....

ಚೈತ್ರ ರಥವೇರಿ ಬರುವಾಗ
ಹೊಸಬಾಳ ಹೊಸ್ತಿಲಲಿ ನಿಂತಾಗ
ಹಳೆಯದನೆಲ್ಲ ಹಿಂದಿಕ್ಕಿ.....
ನಿಸರ್ಗದ ಹೊಸತನ್ನು ಸ್ವೀಕರಿಸು
ಎಂದೇಳುವ.. ಈ ದಿನವೇ...ಯುಗಾದಿ

ಮೈಗೆ ಎಣ್ಣೆ ಹಚ್ಚಿ, ಬೇವಿನನೀರಿಂದ
ಮೈಯ ಕಲ್ಮಶ ತೊಳೆದು
ಬೇವು-ಬೆಲ್ಲ ಸಿಹಿ-ಕಹಿಯನು
ಸಮನಾಗಿ ಎಲ್ಲರಿಗೆ ಹಂಚುತ್ತ
ಸುಖ-ದುಃಖದ ಸಂಕೇತವಾಗಿರುವುದೇ ಯುಗಾದಿ...

ಬಾಗಿಲಿಗೆ ತೋರಣವ ಕಟ್ಟಿ
ನೆಲಕೆ ರಂಗೋಲಿಯ ಮೂಡಿಸಿ
ಹೊಸಬಟ್ಟೆ, ಸಿಹಿ ಊಟ
ಎಲ್ಲರ ಮನೆ ಮನೆಯಲಿ
ಹೊಸತು ಹರುಷ ತುಂಬಿಬರಲು...ಅದುವೇ ಯುಗಾದಿ

ವಸಂತಕಾಲದ ಹಸಿರ ಚಿಗುರು ಸವಿದ
ಕೋಗಿಲೆಯು ಸೊಸುವ ಹಿಂಪಾದ ಕಂಠನಾದ...
ಮೊಗ್ಗು ಹೂವಾಗಲು ದುಂಬಿಗೆ ಝೇಂಕಾರ
ನಿಸರ್ಗ ಸೃಷ್ಟಿಯೇ ಪ್ರಾಯತುಂಬಿ
ಮಿರಿಮಿರಿ ಬೆಳಕ ಸೂಸುವ ಈ ದಿನವೇ ಯುಗಾದಿ....

ದೇಗುಲಗಳಲಿ ಮುಂಜಾವಿನ ಪೂಜೆ
ಸುಗಂಧದ್ರವ್ಯಗಳೊಂದಿಗೆ ಘಂಟಾನಾದ
ರೈತ ತನ್ನ ಹಸು-ಕರುಗಳ ಸಿಂಗರಿಸಿ
ಮಿರಿ ಮಿರಿ ಮಿಂಚಿಸಿ ಪೂಜೆಗೈವನು..
ಮನುಕುಲಕೆ ಹೊಸ ಆಯಾಮ ನೀಡುವದಿನವೇ..ಈ ಯುಗಾದಿ...



ಹೊಸ ವರ್ಷದ ಹೊಸ್ತಿಲಿಗೆ ಕಾಲಿಡುತ್ತಲಿರುವ ತಮ್ಮೆಲ್ಲರಿಗು ನಮ್ಮ ಶುಭಾಶಯಗಳು... ನಗು ನಗುತ ಬಾಳೋಣ ದ್ವೇಷ ಅಸೊಯೆ ಎಲ್ಲವನು ಮರೆತು ಬೇವು-ಬೆಲ್ಲದಿ ಸುಖ ದುಃಖವ ಸಮನಾಗಿ ಭಾವಿಸಿ.... ಎಲ್ಲರಲಿ ಸಹೃದಯಿಗಳಾಗಿ ಬಾಳೋಣ..



ನಿಮ್ಮವರೆ ಆದ...
ಮನಸು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು...
ವಂದನೆಗಳು..ಶುಭದಿನ....

Tuesday, March 24, 2009

ಕನ್ನಡಿಗರಿಗೊಂದು ಮಾಹಿತಿ...

ಪ್ರಿಯ ಸ್ನೇಹಿತರೆ..
ನಾವು ಕನ್ನಡಿಗರು ನಮ್ಮ ಕನ್ನಡ ನಾಡು, ನುಡಿ ಸಂಸ್ಕೃತಿಯ ನಾವೆಲ್ಲ ತಿಳಿಯಬೇಕು,ನಮ್ಮ ಸಂಸ್ಕೃತಿಯನ್ನು ಬೆಳಗಿದ ಬೆಳಗುತ್ತಿರುವ ನಮ್ಮ ಕವಿವರ್ಯರ ಬಗ್ಗೆ ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ ಹೇಳಿ...ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ಜನ ಸಿಗಬಹುದೇನೋ... ನಮಗೆ ತಿಳಿಯದಿರುವುದು ಎಷ್ಟೊ ಈ ಜಗತ್ತಿನಲ್ಲಿದೆ...

ಕೆಲವು ದಿನಗಳ ಹಿಂದೆಯಷ್ಟೆ ಅಂತರ್ಜಾಲದಲ್ಲಿ ಕನ್ನಡ ಕವಿ ಎಂಬ ವೆಬ್ ಸೈಟ್ ನೋಡಿದೆ..ಅಲ್ಲಿನ ಮಾಹಿತಿ ಎಲ್ಲವೊ ಮನಸೂರೆ ಮಾಡಿತು.. ಈ ತಾಣದಲ್ಲಿ ನಮ್ಮ ಕನ್ನಡ ನಾಡ ಕವಿಗಳಲ್ಲಿ, ಜಾನಪದ ಸಾಹಿತಿಗಳು,ಹಳೆಗನ್ನಡ ಕವಿಗಳು, ಕಾದಂಬರಿಕಾರರು, ಹಾಸ್ಯ ಸಾಹಿತಿಗಳು ಇನ್ನು ಹತ್ತು ಹಲವು ವಿಚಾರ ವೇದಿಕೆ ಅಲ್ಲಿ ಬಿಂಬಿತವಾಗಿದೆ... ನಾವೆಲ್ಲರು ಆ ಸಾಹಸ ಪಥಕ್ಕೆ ಕಣ್ಣಾಡಿಸಿ ನಮ್ಮಿಂದಾಗೋ ಸೇವೆಯನ್ನು ಮೀಸಲಿಡುವ ಬನ್ನಿ....ನೀವು ಈ ತಾಣ ಕಂಡಕೂಡಲೆ ಮನಸೋಲಬಹುದು...

ಕನ್ನಡ ಸಂಸ್ಕೃತಿ,ನಾಡ ಹಿರಿಮೆ ಗರಿಮೆ ಎಲ್ಲದರ ಪರಿ ನಮಗೆ ಉಣಬಡಿಸಿದ ನಮ್ಮ ಈ ಮಹಾನ್ ಕವಿಶ್ರೇಷ್ಠರ ಸಾರ್ಥಕ ಬಾವವನ್ನೆಲ್ಲಾ ಸೂಸುವ ಈ ಅಂತರ್ಚಾಲ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಕನ್ನಡಿಗರೆಲ್ಲರು ಕೈ ಜೋಡಿಸೋಣ ಬನ್ನಿ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ
www.kannadakavi.com

ವಂದನೆಗಳು..

Tuesday, March 17, 2009

ಎಲ್ಲರು ಒಮ್ಮೆ ಸ್ಮರಿಸೋಣ ಬನ್ನಿ..

ಕನ್ನಡದ ಹಿರಿಮೆಗೆ ಮಹಾನ್ ಚೇತನರಾದವರನೊಮ್ಮೆ ನೆನೆದು ಪಾವನರಾಗುವ ಬನ್ನಿ..
ಸಾಹಿತ್ಯದ ಮೂಲಕ ನಮ್ಮ ಸಂಸ್ಕೃತಿ ಬೆಳೆಸಿದ ಇಂದಿಗೂ ಬೇಳೆಸುತ್ತಿರುವ ನಮ್ಮ ಮಹಾನ್ ಕವಿಗಳಿಗೆ ನಮ್ಮ ಹೃದಯಪೂರ್ವಕ ನಮನಗಳು. ಮಹಾನ್ ಚೇತನಗಳಲ್ಲಿ ಪು.ತಿ.ನ ಹಾಗು ಡಿ.ವಿ.ಜಿ ಎಂದೇ ಹೆಸರುವಾಸಿಯಾಗಿರುವ ಕನ್ನಡದ ಶ್ರೇಷ್ಠಕವಿಗಳಲ್ಲಿ ಇವರೂ ಸಹ ಅತ್ಯುತ್ತಮರು. ಇವರುಗಳ ಜನುಮದಿನದ ನೆನಪು ಇಂದು, ಅವರ ಸಾಹಿತ್ಯಗಳಿಂದ ಅವರು ಎಂದೆಂದಿಗೊ ಜೀವಂತರಾಗೇ ಇರುತ್ತಾರೆ......ಮತ್ತೊಮ್ಮೆ ಹುಟ್ಟಿಬರಲಿ ಈ ದಿಗ್ಗಜರು....ಕರುನಾಡ ಸಿರಿ ಬೆಳಗಲು..
ಪು.ತಿ.ನ- ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ಊರು-ಮೇಲುಕೋಟೆ
ಜನನ-ಮಾರ್ಚ್ ೧೭ ೧೯೦೫
ಅವರ ನೆನಪಿನಲಿ ಇಲ್ಲೊಂದು ಅವರೇ ಬರೆದ ಪುಟ್ಟ ಕವನ
ಲಘುವಾಗೆಲೆ ಮನ
ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು

ನನಗಂಟಲು ನೀನಾಗುವೆ ಕಶ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಶ್ಕಳ
ಹರಿಯು ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು
ಲಘುವಾಗೆಲೆ ಮನ

ನೀಲದಾಗಸದ ಅರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಷಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ
ಹಾರಿ ಹರಿಯ ಮುಟ್ಟು
ಹಾರಿ ಹರಿಯ ಮುಟ್ಟು
ಲಘುವಾಗೆಲೆ ಮನ

ಬೆಳಕಿಗೊಲಿದು ಬಿರಿದಲರಿ ನೆಲರುಬರೆ
ಪೋಗುಸಂಗಡೆಲೆ ನೀ ಮನವೆ
ಮುಗ್ಧರುಲಿವ ನಗೆ ಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೆ
ಲಘುವಾಗೆಲೆ ಮನ
***********************
ಮತ್ತೊಬ್ಬ ಮಹಾನ್ ಚೇತನ ಡಾ. ಡಿ.ವಿ.ಜಿ
ಡಿ.ವಿ.ಜಿ-ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಊರು-ದೇವನಹಳ್ಳಿ ಹತ್ತಿರದ ಸೋಮತ್ತನಹಳ್ಳಿ
ಜನನ-ಮಾರ್ಚ್ ೧೭,೧೮೮೭
ಕವನದೊಂದಿಗೆ ಅವರ ಮನನ
ಏನೀ ಭಯಭ್ರಾಂತಿಯೇ ನೀಲಾಂಬರೇ
ಏನಂಗವಿಭ್ರಾಂತಿಯೇ ಅಶಾಂತಿಯೇ
ನೀಲಾಂಬರದ ನಿರಿಯಾಲಯತನಗೆಂದು
ಚಳಿಗಾರರುಹಿದರೆ ಮನೋಹರೆ

ಹೇಮಾಂಬರಾಗಕೆ ಶಾಮಾಂಬರಚ್ಚನಿ
ರಮಣೀಯಕವೆಂದು ಭಾಮಿನಿಯಿಂಬಗೆದು
ಕ್ಷೌಮವ ಕೊಳ್ಳಲಿ ಭೀಮೋತ್ಪಾತವಿದೇನೆ
ಸೌಮ್ಯನಾಯಕಿ ವರಸ್ವಾಮಿಯೆ ಗತಿಯಲ್ತೆ

ಬೆಚ್ಚಿಸಿ ನಿನ್ನನು ನಿಶ್ಚೇಲಗೈದು
ತನ್ನಕ್ಷಿಗೆ ನಿನ್ನ ಸಿಂಗಾರದೂಟವನುಣಿಸೆ
ವ್ರುಶ್ಚಿಕಮಂತ್ರವನುಚ್ಚರಿಸಿದನೇನೆ
ಅಚ್ಚುಮೆಚ್ಚಿನ ನಿನ್ನ ಮಾಯಾವಿ ಕೇಶವ

Sunday, March 15, 2009

ಐಷಾರಾಮಿ ದೇಶದಲಿ ಐಷಾರಾಮಿ ಕಾರುಗಳು...

ಕುವೈಟಿನಲ್ಲಿ ಕಾರುಗಳದೆ ಕಾರುಬಾರು, ಪ್ರಪಂಚದ ಅತಿ ಹೆಚ್ಚು ಬೆಲೆಯ, ಅತಿ ಸುಂದರ, ವಿರಳವಾಗಿ ಕಾಣ ಸಿಗುವ ಎಲ್ಲ ತರಹದ ಕಾರುಗಳು ನಾವಿಲ್ಲಿ ಕಾಣಬಹುದು... ಇಲ್ಲಿಯವರಿಗೇನು ಹುಚ್ಚೊ, ಆಸೆಯೋ, ಹಣವಿದೆಯೆಂದು ಐಷರಾಮಿತನವನ್ನು ತೋರಿಸಲೋ ಯವುದಕ್ಕೊ ತಿಳಿಯದು ಒಟ್ಟಲ್ಲಿ ಒಂದೊಂದು ಮನೆಯಲ್ಲಿ ಸುಮರು ೮, ೧೦ ಕಾರುಗಳಂತು ಇದ್ದೇ ಇರುತ್ತೆ... ಹೊಸ ಹೂಸ ಕಾರುಗಳು ಬರುತ್ತಲೇ ಇರುತ್ತೆ ಅವರುಗಳು ಬದಲಾಯಿಸುತ್ತಲೇ ಇರುತ್ತಾರೆ...ಲಕ್ಷ್ಮಿ ನಾಟ್ಯವಾಡುತ್ತಿರುವ ಈ ನಾಡಲ್ಲಿ ಯಾವುದಕ್ಕೆ ಬರವೇಳಿ... ಬಯಸಿದ್ದನು ಅನುಭವಿಸುವರು.. ನಮಗೆ ಒಂದು ಕುಶಿಯೆಂದರೆ ನಮ್ಮ ಕಣ್ಣಾರೆ ಇವೆಲ್ಲವನ್ನು ನೋಡುತ್ತಿದ್ದೇವೆ...








ನಮ್ಮ ಕೈಗೆ ಎಟುಕದ್ದು ಕ್ಯಾಮರಾ ಸೆರೆಗೆ ಸಿಕ್ಕಿದೆ... ಇವೆಲ್ಲ ಕೊಳ್ಳೊ ಮನಸಿಲ್ಲ, ಮನಸಿದ್ದರು ಹಣವಿಲ್ಲ, ಹಣವಿದ್ದರೊ ಕಾರಿಗಾಗಿ ದುಡ್ಡಾಕಲು ಮನ ಒಪ್ಪುತ್ತಿಲ್ಲ ಹ ಹ ಹ ಹ ...ಎಲ್ಲವೊ ಸುಳ್ಳು...ದುಡ್ಡು ಇಲ್ಲ, ಮನವೊ ಇಲ್ಲ, ಮನಸ್ಸು ಇಲ್ಲ.... ಚೆನ್ನಾಗಿರುವುದನ್ನು ನೋಡಿ ಸವಿಯುವ ಮನಸ್ಸಂತು ಇದೆ..ಅಷ್ಟೆ.... ನಿಮಗು ಇಷ್ಟವಾದರೆ ಹಾಗೆ ಒಮ್ಮೆ ನೋಡಿಬಿಡಿ.

Sunday, March 8, 2009

ನೆನಪಿನಂಗಳದಿ ದೂರದಿಂದಲೇ ಶುಭಾಶಯ..


ಅವರು ವೃತ್ತಿಯಲ್ಲಿ ಶಿಕ್ಷಕರು ಅತಿ ಶಿಸ್ತಿನ ವ್ಯಕ್ತಿ... ದೇವನಹಳ್ಳಿ ಒಂದೇ ಊರಿನಲ್ಲಿ ಸುಮಾರು ೩೦ ವರ್ಷ ಕೆಲಸ ಮಾಡಿದ್ದರು. ಸಂಸಾರ ಬೆಂಗಳೂರಿಗೆ ಬಂದು ನೆಲೆಸಿದ್ದರಿಂದ ಅವರು ಆ ಶಾಲೆಯನ್ನು ಬಿಟ್ಟು ಬೇರೆಡೆಗೆ ಬರಬೇಕಾಯಿತು... ಆಗ ಬಂದದ್ದೇ ತಿಪ್ಪಗೊಂಡನ ಹಳ್ಳಿಯ ಹತ್ತಿರವಿರುವ ಮಸ್ಕಲ್ಲು ಎಂಬ ಗ್ರಾಮಕ್ಕೆ ಆ ಊರಿಗೆ ಹೆಚ್ಚು ಜನ ಸಂದಣಿ ಕಾಣದ ಊರು ಅಲ್ಲಿ ಹೆಚ್ಚು ಸಂಸಾರಗಳು ಲಂಬಾಣಿ ಕುಟುಂಬಗಳು ಆ ಮಾಸ್ತರು ಹೋಗುವವರೆಗೂ ಈ ಮೂದಲು ಬೇರಾವ ಶಿಕ್ಷಕರು ಅಲ್ಲಿ ಹೆಚ್ಚು ದಿನ ಕೆಲಸಮಾಡಿದವರು ಇರಲಿಲ್ಲ (ಅಲ್ಲಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ ಶಿಕ್ಷಕರೆ ತೀರಾ ವಿರಳ)... ಇವರು ಅಲ್ಲಿಗೆ ತೆರಳಿದಾಗ ಊರ ಜನರೂ ಕೂಡ ಇಷ್ಟುದಿನ ಬಂದು ಹೋದ ಶಿಕ್ಷಕರುಗಳ ಹಾಗೆ ಇವರು ಎಂದು ಓಡಿ ಹೋಗುತ್ತಾರೊ ಎಂದು ಭಾವಿಸಿದ್ದರು... ಮೂದಲು ಶಾಲೆಗೆ ಹೋದಾಗ ಇವರಿಗು ಕೂಡ ಕಷ್ಟವೆನಿಸಿತ್ತು ಹೇಗೆ ಈ ಹಳ್ಳಿಗೆ ಬಂದು ಹೋಗುವುದೆಂದು ಕಾರಣ ಆ ಹಳ್ಳಿಗೆ ಯಾವುದೆ ಬಸ್ ಸೌಕರ್ಯವಿರಲಿಲ್ಲ ತಿಪ್ಪಗೂಂಡನ ಹಳ್ಳಿಯವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೫ ಕಿ.ಮಿ ದೂರದಷ್ಟು ಕಾಲು ನೆಡಿಗೆಯಲ್ಲೇ ಸಾಗಬೇಕಿತ್ತು... ಬಿಸಿಲು ಮಳೆ ಎನ್ನದೆ ಆ ರಸ್ತೆಗೇನು ಅಚ್ಚುಕಟ್ಟಾದ ದಾರಿ ಇರಲಿಲ್ಲ ದಾರಿಯಲೆಲ್ಲಾ ಕಲ್ಲು ಮುಳ್ಳುಗಳದೇ ರಾಶಿ..ಅಂತಹ ದಾರಿಯಲ್ಲಿ ಓಡಾಡುವುದು ಬಲು ಕಷ್ಟದ ಕೆಲಸ ಕೂಡ... ಆದರು ಸ್ವಲ್ಪವೂ ಬೇಸರಪಡದೆ ಒಂದು ದಿನವೊ ತಪ್ಪದೇ ಶಾಲೆಗೆ ಹೋಗುತ್ತಿದ್ದರು ಇದನ್ನು ಕಂಡ ಆ ಊರ ಜನ "ಮಾಸ್ತರೆ ನೀವು ದಿನವೂ ಅಷ್ಟು ದೂರ ಎರಡು ಸಮಯಕ್ಕೂ ಸುಮಾರು ೧೦ ಕಿ. ಮಿ. ದೂರ ಓಡಾಡಲು ಕಷ್ಟವಾಗುತ್ತೆ ಇನ್ನು ಮುಂದೆ ಶನಿವಾರದಂದು ಶಾಲೆಗೆ ಬರಬೇಡಿ" ನೀವು ಇಷ್ಟು ಶ್ರದ್ಧೆಯಿಂದ ನಮ್ಮ ಮಕ್ಕಳಿಗೆ ವಾರವೆಲ್ಲ ಹೇಳಿಕೂಡುತ್ತೀರಿ ಒಂದು ದಿನ ಬರದಿದ್ದರೆ ಏನು ಆಗದು ಎಂದು ಹೇಳಿದ್ದರಂತೆ.... ಆ ಮಾತು ಕೇಳಿ ನನಗೂ ಖುಷಿಯಾಗಿತ್ತು ಇವರ ಕಷ್ಟ ನೋಡಲಾಗದೆ ಕನಿಕರವಿಟ್ಟ ಆ ಜನಕ್ಕೆ ನಾನು ಅಭಾರಿ... ಈ ಶಾಲೆಯ ಶಿಕ್ಷಕರು ನನ್ನ ತಂದೆ, ಅವರಿಗೆ ಜೀವನ ಪೂರ್ತಿ ಕಷ್ಟ ಪಟ್ಟೇ ಅಭ್ಯಾಸ, ಮಿತ ಭಾಷಿ, ಮೌನ ಬಂಗಾರ ಎಂಬಂತೆ ಅವರು ಮೌನಕ್ಕೆ ಹೆಚ್ಚು ಶರಣು.. ಆ ಊರನ್ನು ನಾನು ಒಮ್ಮೆ ನೋಡಿದಾಗಲೇ ಅವರ ಕಷ್ಟ ನನ್ಗೆ ಅರ್ಥವಾಗಿದ್ದು ಆ ರಸ್ತೆ ತುಂಬೆಲ್ಲ ಕಲ್ಲುಗಳು ಜೋರು ನೆಡೆದರೆ ಎಲ್ಲಿ ಬಿದ್ದು ಬಿಡುತ್ತೇವೋ ಎಂಬ ಭಯ ತುಂಬಾ ಇಕ್ಕಟ್ಟಾದ ಸ್ಥಳ... ಆ ಕಾಲು ದಾರಿಯಲ್ಲೇ ಹಾದು ಹೋಗಬೇಕಿತ್ತು ತಿಪ್ಪಗೊಂಡನ ಹಳ್ಳಿ ಡ್ಯಾಮ್ ಎಂದರೇ ಹೆಚ್ಚು ಹೆಸರುವಾಸಿ ಆ ಹಳ್ಳಿಗೆ ಹತ್ತಿರವಿದ್ದ ಊರಿಗೆ ಯಾವ ವ್ಯವಸ್ಥೆಯೂ ಇರಲಿಲ್ಲ.... ಸುಮಾರು ೭ ವರ್ಷ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿದರು... ಅಲ್ಲಿನ ಮಕ್ಕಳಿಗೆ ಅಕ್ಷರದ ಅರಿವು ಸಹ ಸರಿಯಾಗಿ ಇರಲಿಲ್ಲ....... ಆ ಜನರ ಮುಗ್ಧತೆ, ಅವರಿಗೆ ನಾಗರೀಕತೆ ಅರಿವು ಯಾವುದರ ಗಂಧವೂ ಇರಲಿಲ್ಲ ಕೂಡ... ಅಂತಹದರಲ್ಲಿ ನನ್ನ ತಂದೆ ಶಿಕ್ಷಕರಾಗಿ ತೆರಳಿದ ನಂತರ ಹಲವಾರು ಬದಲಾವಣೆಗಳು ಕಂಡರು... ಆ ಮಕ್ಕಳು ಒಳ್ಳೆ ವಿಧ್ಯಾಬ್ಯಾಸ ಮುಗಿಸಿ ಈಗ ಒಳ್ಳೂಳ್ಳೆ ಕೆಲಸದಲ್ಲಿದ್ದಾರೆ ಆಗಾಗ ನಮ್ಮ ತಂದೆಯವರನ್ನು ಬೇಟಿ ಮಾಡಲು ಬರುತ್ತಿರುತ್ತಾರೆ...
ಆ ಶಾಲೆಯಲ್ಲಿ ೧ ನೇ ತರಗತಿಯಿಂದ ೭ನೇ ತರಗತಿವರೆಗಿನ ಮಕ್ಕಳು ಆ ಮಕ್ಕಳಿಗೆ ಇವರು ಒಬ್ಬರೇ ಮಾಸ್ತರು... ಎಂತಹ ವಿಪರ್ಯಾಸ ನೋಡಿ ಮುಖ್ಯೋಪಾದ್ಯಯರು ಇವರೆ ಶಿಕ್ಷಕರು ಇವರೆ ಕಚೇರಿ ಕೆಲಸ ಮಕ್ಕಳ ವಿದ್ಯಾಬ್ಯಾಸ ಎಲ್ಲವು ಇವರ ಮೇಲೆ.... ಇವೆಲ್ಲ ಅವರಿಗೇನು ಕಷ್ಟದ ಕೆಲಸವಲ್ಲ ಬಿಡಿ ತನ್ನ ಒಂದು ಕಣ್ಣನ್ನು ಕಳೆದುಕೂಂಡು ತನ್ನ ವೃತ್ತಿ ಜೀವನಕ್ಕೆ ಸ್ವಲ್ಪವೂ ಕುತ್ತು ಬರದ ಹಾಗೆ ಸೇವೆ ಸಲ್ಲಿಸಿದ್ದಾರೆ... ದಿನವೂ ಬೆಳ್ಳಿಗ್ಗೆ ೭ ಗಂಟೆಗೆ ಮನೆ ಬಿಟ್ಟರೆ ರಾತ್ರಿ ೮ ಅಥವಾ ೯ ಕ್ಕೆ ಮನೆಗೆ ಬರುತ್ತಾ ಇದ್ದಿದ್ದು ಬೆಳ್ಳಿಗ್ಗೆ ಮುದ್ದೆ ಸಾರಿನ ಊಟ ವಾದರೆ ಮುಗಿಯಿತು ಮತ್ತೆ ರಾತ್ರಿಯೇ ಊಟ ಯಾರ ಮನೆಯಾಗಲಿ, ಯಾವುದೆ ಹೋಟೆಲ್ ಗಳಲ್ಲಾಗಲಿ ತಿಂದವರಲ್ಲ ೧ ಲೋಟ ನೀರು ಸಹ ಕುಡಿಯುತ್ತಲಿರಲಿಲ್ಲ ಅದು ಏಕೋ ತಿಳಿಯದು ನಾವು ಯಾವಾಗಲು ನಮ್ಮ ಅಪ್ಪಾಜಿಗೆ ರೇಗಿಸುತ್ತಿದ್ದೆವು... ಏಕೆ ಹಾಗೆ ಮಾಡ್ತೀರಿ ಆರೋಗ್ಯ ಹಾಳಾಗುತ್ತೆ ಎಂದರೆ ಕೇಳುತ್ತಲೇ ಇರಲಿಲ್ಲ..ಏನೋ ಅವರದೂಂದು ಕಟ್ಟು ನಿಟ್ಟಿನ ವಾದ..ಹ ಹ ಹ..
ಈ ಶಾಲೆಗೆ ಹೋದ ನಂತರ ಆ ಊರ ಜನವೆಲ್ಲ ನಮ್ಮ ಮನೆಗೆ ಬರುವಂತಾದರು ಅವರುಗಳಿಗೆ ಬೆಂಗಳೂರಲ್ಲಿ ಏನೇ ಕೆಲಸವಿರಲಿ, ಯಾವುದಾದರು ಕಚೇರಿಯಲ್ಲಿ ಕೆಲಸವಾಗಬೇಕೆಂದರೆ ಸಾಕು ನನ್ನ ತಂದೆಯ ಮುಖಾಂತರವೇ ನೆಡೆಯಬೇಕಿತ್ತು. ಊರಿನ ಜನರಿಗೆಲ್ಲ ಎಲ್.ಐ.ಸಿ. ಮಾಡಿಸೋ ವ್ಯವಸ್ಥೆ, ಮಕ್ಕಳ ಹೆಚ್ಚಿನ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಹೀಗಿ ಹಲವಾರು ಕೆಲಸಗಳು ಮಾಡುತ್ತಲಿದ್ದರು ನಾವು ಮೂಕರಂತೆ ಅವರ ನಡುವಿನ ಮಾತು ಕತೆ ನೋಡುತ್ತಲಿದ್ದೆವು.... ಬಂದವರಿಗೆಲ್ಲ ಅಮ್ಮ ಊಟ ತಿಂಡಿ ವ್ಯವಸ್ಥೆ ಜೊತೆ ಕೆಲವು ಸಮಯ ನಮ್ಮ ಮನೆಗಳಲ್ಲೆ ಉಳಿಯಲು ವ್ಯವಸ್ಥೆಯನ್ನು ನನ್ನ ಅಣ್ಣ ಮಹಡಿಯ ಮೇಲೆ ಒಂದು ಮನೆ ಹೀಗೆ ಬರುವವರಿಗೆಂದು ಇದ್ದ ಮನೆಯಲ್ಲಿ ವ್ಯವಸ್ಥೆ ಮಾಡುತ್ತಿದ್ದ... ಅಪ್ಪನ ಕಾರ್ಯದಲ್ಲಿ ಅಮ್ಮ ಅಣ್ಣ(ಅಣ್ಣ ಆ ಊರಿಂದ ಬಂದವರನ್ನು ಯಾವ ಕಚೇರಿಗೆ ಬೇಕೂ ಕರೆದುಕೊಂಡು ಹೋಗೋ ಕೆಲಸ ಹೆಚ್ಚು ಇರುತ್ತಿತು) ಇಬ್ಬರು ಹೆಚ್ಚು ಭಾಗಿಯಾಗುತ್ತಿದ್ದರು. ಅಪ್ಪನ ಪುಣ್ಯದಲ್ಲಿ ಅವರಿಗೂ ಪಾಲು. ಒಟ್ಟಲ್ಲಿ ಆ ಊರಿನ ಜನಕ್ಕೊ ನಮಗೊ ಏನೋ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿತ್ತು... ಅವರ ಪ್ರೀತಿಗೆ ಅಷ್ಟು ನೆಡೆದಾಡಿದ್ದೆಲ್ಲಾ ಕಡಿಮೆ ಅನ್ನಿಸೊ ಆಗಿತ್ತು... ಆ ಊರಿಂದ ಬೇರೆ ಊರಿಗೆ ವರ್ಗಾವಣೆ ಆಗಿ ಸ್ವಲ್ಪ ದಿನಗಳ ನಂತರ ಊರಿಗೆ ರಸ್ತೆ, ಊರಿಗೆ ಬಸ್ಸು ಎಲ್ಲದರ ವ್ಯವಸ್ಥೆಯೂ ಆಗಿತ್ತು ಹ ಹ ಹ ಹೇಗಿದೆ ನೋಡಿ ಇವರು ಇದ್ದಾಗ ಆ ವ್ಯವಸ್ಥೆಇದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು...ಇದು ಅವರ ಜೀವನದ ಸಣ್ಣ ತುಣುಕು ಹೆಚ್ಚು ಬರೆದರೆ ಓದುವವರಿಗು ಬೇಸರ....ಯಾರೋ ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ಅಷ್ಟು ತಿಳಿದುಕೊಳ್ಳುವ ಮನಸು ಇರೊಲ್ಲ ಕೆಲವರಿಗೆ, ಅಲ್ಲದೆ ನನ್ನಪ್ಪನೇನು ದೊಡ್ಡ ಕವಿಯಲ್ಲ, ಹೆಸರುವಾಸಿಯಾದ ವ್ಯಕ್ತಿಯಲ್ಲ.... ಆದರೆ ನನ್ನ ಆದರ್ಶವ್ಯಕ್ತಿ ಅಷ್ಟೆ....ಅವರ ತಾಳ್ಮೆ ನನಗೆ ದಾರಿದೀಪ...ಇಂದು ಅವರ "ಹುಟ್ಟುಹಬ್ಬ"........ಈ ದಿನದ ನೆನಪಿಗಾಗಿ ನನ್ನಿಂದ ಒಂದು ಪುಟ್ಟ ಲೇಖನ... ನನ್ನಪ್ಪನಿಗೆ ಒಳಿತು, ಉಲ್ಲಾಸ, ಆರೋಗ್ಯಭಾಗ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ...
ಒಲ್ಲದೆಯೋ ಸಲ್ಲದೆಯೋ ಕಣ್ಣಾಡಿಸಿದ ನಿಮಗೆಲ್ಲ ನನ್ನ ಹೃತ್ಪೂರ್ವಕ ವಂದನೆಗಳು....ಶುಭದಿನ.

Tuesday, March 3, 2009

ಕನಸು

ಕನಸು ಕಾಣಬೇಕೆಂದರೆ
ಕಲ್ಪನೆಯಲಿ ಮುಳುಗು!!

ಕನಸು ಕಲ್ಪನಾತೀತವಾದರೆ
ಕನಸೆಂಬುದೇ ಹುಸಿ!!

ಕನಸು ಮುದನೀಡುವುದಾದರೆ
ಕನಸಿನ ಜೊತೆ ಖುಷಿ

ಕನಸು ಆಶಾಗೋಪುರವಾದೂಡೆ
ಅದು ಆಕಾಂಕ್ಷೆಯೂಂದಿಗಿನ ಆಸೆ!!

ಕನಸು ನನಸಾದರೆ
ಆಸೆಯ ನಿಜ ನಿರೀಕ್ಷೆ

ಕನಸಲ್ಲಿ ದಿಗ್ಭ್ರಮೆಯಾದರೆ
ಅದು ಭಯಾನಕ

ಕನಸು ನುಚ್ಚುನೂರಾದರೆ
ಕನಸಿಗೆ ಬೆಲೆ ಇಲ್ಲ

ಕನಸು ರಮ್ಯತಾಣವಾದೊಡೆ
ಕನಸೆಂಬ ತಾಣದಿ ವಿಹಾರ

ಕನಸಿಗು ಮುನಿಸಾದರೆ
ಜೀವನವೇ ವ್ಯರ್ಥ

ಕನಸು ಮರುಕಳಿಸಿದರೆ
ಕನಸಲ್ಲೇ ಮರುಕ

ಕನಸು ಮರೆತುಹೋದರೆ
ಅದ ಮರೆತರೆ ಒಳಿತು

ಕನಸು ಕೆಡುಕೆನಿಸಿದೊಡೆ
ಕನವರಿಸುವುದ ಬಿಡುವುದೇ ಲೇಸು!!

ಕನಸು ಹಾಸ್ಯಾಸ್ಪದವಾದರೆ
ಕನಸಲ್ಲಿ ಮಗುವಂತೆ ನಗು!!

ಕನಸಲ್ಲಿ ಧನಿಕನಾದೊಡೆ
ಆ ಕನಸು ಕ್ಷಣಿಕ!!

ಕನಸಲ್ಲಿ ಕಲವರಿಸಿದರೆ
ಅದುವೇ ಮನದ ಮಾತು!!

ಕನಸು ಬರದೆ ಹೋದರೆ
ಗಾಢವಾಗಿ ನಿದ್ರಿಸು!!