Thursday, September 23, 2010

ಮನಸು ಮರಳಿ ಬ್ಲಾಗಿಸಿದೆ.....

ನಮಸ್ಕಾರ ಇಷ್ಟು ಕಾಲ ಒಟ್ಟಿಗಿದ್ದು ಬ್ಲಾಗಿನ ಮನಸನ್ನೇ ಅರಿಯಲಿಲ್ಲ ನೋಡಿ ನನ್ನ ಮನಸು...... ಬಣಗುಡುತ್ತಿರುವ ಈ ನನ್ನ ಮನಸಿಗೆ ಸಾಂತ್ವಾನಿಸಲು ಇಲ್ಲ, ಏನು ಇಲ್ಲ, ಅನಾಥಳಾಗಿ ಬಿಟ್ಟು ಊರು ಸುತ್ತಲು ಹೊರಟುಹೋಗಿದ್ದೆ...... ಈಗಲಾದರು ಈ ಮೃದುಮನಸಿಗೆ ನನ್ನ ಕಥೆ ಹೇಳಿಕೊಳ್ಳೋಣವೆಂದು ಬಂದಿರುವೆ ನೀವು ಸಹ ಓದಿ.

ತವರೂರು ನೋಡುವ ಖುಷಿಯಲ್ಲಿ ಹೋಗಿದ್ದೆ ಕೇವಲ ೨೫ ದಿನಗಳ ರಜೆಗಾಗಿ. ಅಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ವಿಮಾನ ಇಳಿದಾಗ ಅಯ್ಯೋ..!!! ಹಸಿರ ಸಿರಿಯೊಂದಿಗೆ (ಮರುಭೂಮಿಗೆ ಹೋಲಿಸಿದರೆ ನಮ್ಮೂರು ಹಸಿರೇ) ಕಾಂಕ್ರಿಟ್ ಮನೆಗಳ ಸಾಲು ಎದ್ದು ಕಾಣುತ್ತಿತ್ತು. ನನ್ನ ತವರೂರ ಮಣ್ಣಿನ ವಾಸನೆಯೇ ನನಗೆ ಬಹಳಷ್ಟು ಮುದನೀಡಿತ್ತು..... ತವರ ಭೂಮಿಗೆ ನಮಿಸುತ್ತ ಮನೆಯ ದಾರಿಯಿಡಿದು ಹೊರಟರೆ ಮತ್ತದೆ ರಸ್ತೆ ಜೊತೆಗಷ್ಟು ಹೊಸ ಹೊಸ ರಸ್ತೆಗಳ ಕಾಮಗಾರಿ, ಮೆಟ್ರೋ ಸಿರಿ, ಅದೇ ಆಟೋರಿಕ್ಷಾ, ಬಸ್ಸು ಕಾರುಗಳದೇ ಕಾರುಬಾರು..... ಎತ್ತ ನೋಡು ಸುತ್ತ ಮುತ್ತ ನನ್ನವರೇ ಇದ್ದಾರೆ ಎಂಬ ಭಾವನೆ ........ ಆದರೆ ಮರುಭೂಮಿಯಲ್ಲಿ ಎಲ್ಲಿ ನೋಡಿದರು ಇವರಾರು ನಮ್ಮವರಲ್ಲ ಇದು ನನ್ನೂರಲ್ಲ, ನನ್ನದೇನು ಇಲ್ಲ ಎಂಬ ಭಾವನೆ ........ ಒಮ್ಮೆಲೇ ನನ್ನೂರು ತಲುಪಿದ ಕೂಡಲೆ ಎಲ್ಲವೂ ನನ್ನದೇ ಎಂಬ ಪುಳಕಭಾವ.

ಮನೆಗೆ ಹತ್ತಿರವಾಗುತ್ತಿದ್ದ ಹಾಗೆ ರಸ್ತೆಯ ಇಕ್ಕೆಡಗಳಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿತ್ತು..... ನನಗೂ ಒಂದು ವರ್ಷದ ಹಿಂದೆ ಎಲ್ಲರೂ ಕೂಡಿ ಹಬ್ಬ ಮಾಡಿದ್ದೆವು. ಈಗ ಮತ್ತೆ ಎಲ್ಲರೂ ಸೇರಿ ಹಬ್ಬ ಮಾಡುತ್ತಲಿದ್ದೇವೆ ಎಂಬ ಖುಷಿ ಜೊತೆಗೆ ಅದೇ ಸಂಜೆ ನಮ್ಮ ಬಳಗ ಅಂದರೆ ಬ್ಲಾಗ್ ಬಳಗದಲ್ಲಿ ಶಿವು.ಕೆ, ಪ್ರವೀಣ್, ಅನಿಲ್ ಬೆಡಗಿ, ನಾಗರಾಜ್, ಶಿಪ್ರ, ಶಶಿ ಅಕ್ಕ ಎಲ್ಲರೂ ಬರುವುದು ಮೊದಲೇ ತಿಳಿದಿತ್ತು. ಮೊದಲಿದ್ದ ಖುಷಿಯ ಜೊತೆ ಇವರೆಲ್ಲರ ಭೇಟಿ ಮತ್ತಷ್ಟು ಹೊಸ ಉತ್ಸಾಹವನ್ನೇ ತಂದಿತ್ತು. ಪ್ರಯಾಣದ ಆಯಾಸ ಯಾವೂದು ಇರದೆ ಕಾತುರವಾಗಿರುವಷ್ಟೇ ಮೊದಲ ಭೇಟಿ ಎಂದೆನಿಸಲಿಲ್ಲ. ಎಲ್ಲರೂ ಬಹಳ ದಿನಗಳ ಪರಸ್ಪರ ಭೇಟಿ ಮಾಡಿದ್ದೆವೆಂದೆನಿಸಿತು.
----
ನಂತರದ್ದೇ ಪುಸ್ತಕ ಬಿಡುಗಡೆ ಸಮಾರಂಭ ಈಗಾಗಲೇ ಎಲ್ಲರ ಬ್ಲಾಗಿನಲ್ಲಿ ಫೋಟೋಗಳು, ವಿಡಿಯೋಗಳು, ಕವನ, ಲೇಖನಗಳ ಮುಖೇನ ಎಲ್ಲರ ಮನಗಳಿಗೆ ತಲುಪಿವೆ ಆದರೂ ನನ್ನದೊಂದು ಪುಟ್ಟ ನುಡಿಗಳನ್ನು ನಿಮ್ಮೊಂದಿಗೆ ನನ್ನ ಮೃದುಮನಸಿನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಅಂದಿನ ಸಮಾರಂಭ ನಮ್ಮ ಮನೆಯಲ್ಲೇ ನೆಡೆಯುವ ಸಮಾರಂಭದ ರೀತಿ ನೆಡೆದಿತ್ತು. ಆ ಸಮಾರಂಭಕ್ಕೆ ಎಲ್ಲರೂ ಏನು ಕೆಲಸ ಮಾಡಲು ಸಾಧ್ಯ ನನ್ನಿಂದೇನಾದರೂ ಆಗುವುದೇ, ಮಾಡಬಹುದೇ ಎಂಬ ಉತ್ಸಾಹದಲ್ಲೇ ಇದ್ದರು, ಎಲ್ಲರೂ ಹಾಗೇ ಕೆಲಸ ನಿರ್ವಹಿಸಿದರು. ಸಮಾರಂಭದಲ್ಲಿ ನಾನು ಮತ್ತು ನನ್ನವರಿಗೂ ಒಂದು ಸ್ಥಾನ ನೀಡಿದ ಶಿವು ಹಾಗೂ ಅಜಾದ್ ಅವರಿಗೆ ನಾವು ಸದಾ ಆಭಾರಿಗಳು.... ನಮ್ಮ ಸವಿ ಆಶಯ ಸದಾ ಅವರೊಂದಿಗೆ ಇದ್ದೇ ಇರುತ್ತದೆ. ನಮ್ಮ ಪುಟ್ಟ ಕೆಲಸದಲ್ಲಿ ಅಲ್ಪ ಸಲ್ಪವಾದರು ತಪ್ಪುಗಳೇನಾದರೂ ಆಗಿದ್ದರೆ ಕ್ಷಮೆ ಕೋರುತ್ತೇವೆ........ ನಾವು ದೂರದ ಊರಿನಲ್ಲಿದ್ದರೂ ಕನ್ನಡ ಭಾಷೆ, ಸಂಸ್ಕೃತಿ, ನಮ್ಮ ಆಚಾರ ವಿಚಾರ ಯಾವುದನ್ನೂ ಮರೆತಿಲ್ಲ ಎಲ್ಲರಿಗಿಂತ ಹೆಚ್ಚಿನದಾಗಲ್ಲದಿದ್ದರೂ ನಮ್ಮ ಮಟ್ಟಿಗೆ ಆಚರಿಸುತ್ತಲಿದ್ದೇವೆ ಅಂತೆಯೇ ನಮ್ಮ ಕನ್ನಡಿಗರ ಬ್ಲಾಗ್ ಬಂಧುಗಳೆಲ್ಲರಿಂದಲೂ ಹಲವು ವಿಚಾರಗಳನ್ನು ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಲಿದ್ದೇವೆ. ಹಾಗೆ ಎಲ್ಲಾ ಬ್ಲಾಗ್ ಬರಹಗಾರರಿಗೂ ನಮ್ಮ ಧನ್ಯವಾದಗಳು...... ಅಂದಿನ ಸಮಾರಂಭಕ್ಕೆ ಕಳೆಕಟ್ಟಿದ ಡುಂಡಿರಾಜ್ ರವರು, ಶೇಷಾಶಾಸ್ತ್ರಿಗಳು, ಸುಧೀಂದ್ರರವರೆಂಬ ಮಹಾನ್ ವ್ಯಕ್ತಿಗಳ ಭೇಟಿಯಂತೂ ಮತ್ತಷ್ಟು ಖುಷಿ ನೀಡಿದೆ. ಬ್ಲಾಗ್ ಭಾಂದವ್ಯ ಸದಾ ಹಸಿರಾಗಿರಲಿ..... ಏನೇ ಬಂದರೂ ಬ್ಲಾಗಿಗರಲ್ಲಿ ಬಲವಿರಲಿ...... ಸಹಮತ ಜೊತೆಗೆ ಬ್ಲಾಗ್ ಬರಹಗಳ ಮೂಲಕ ಸಮಾಜಕ್ಕೆ ಒಳಿತನ್ನು ನೀಡಲೆಂದು ಆಶಿಸುತ್ತೇನೆ..... ಅಂದಿನ ಸಮಾರಂಭದ ರುವಾರಿಗಳು, ಆಗಮಿಸಿದ್ದ ಎಲ್ಲಾ ಬ್ಲಾಗಿಗರು, ಮಿತ್ರರು, ಆತ್ಮೀಯರು ಎಲ್ಲರ ಭೇಟಿ ಇದೆಯಲ್ಲಾ ಅದು ನೆನಪಿನ ಪುಟಗಳಲ್ಲಿ ಮೊದಲನೇ ಪುಟದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಯಾವುದೇ ಸುನಾಮಿ ಅಲೆಗಳು ಬಂದರೂ ಅಳಿಸಲಾಗದಂತ ಭಾಂದವ್ಯ ಬೆಳೆದು ನಿಂತಿದೆ. ಇದೇ ರೀತಿ ಮುಂದೆಯೂ ಉಳಿಯಲೆಂಬುದೆ ನನ್ನ ಆಸೆ.

ಇಷ್ಟೆಲ್ಲಾ ಸವಿ ನೆನಪಿನೊಂದಿಗೆ ನನ್ನ ಕುಟುಂಬದವರೊಂದಿಗೆ ಕಾಲ ಕಳೆದು ಮತ್ತದೆ ಉಸುಕಿನ ಜೀವನಕ್ಕೆ ಮರಳಿದಾಗ ಏನೋ ಬೇಸರ, ದುಗುಡ, ಕೆಲಸದಲ್ಲಿ ಆಸಕ್ತಿಯೇ ಇಲ್ಲವಾಗಿತ್ತು ಬಂದ ದಿನವೇ ಕಛೇರಿಗೆ ಹೋಗಿದ್ದೆ ........ ಬರುವುದೇನೋ ಬಂದಿದ್ದೆ ಮರುಭೂಮಿಗೆ ಇರೋಬರುವ ಕೆಲಸವೆಲ್ಲ ನನಗೇ ಬೀಳಬೇಕಾ.... ಹೊಸ ಪ್ರಾಜೆಕ್ಟ್ ಎಂದು ಎಲ್ಲವನ್ನು ತುಂಬಿದರು, ಈಗ ಬ್ಲಾಗ್ ಬರೆಯುವುದಿರಲಿ......... ಓದಲೂ ಪುರುಸೊತ್ತಿಲ್ಲದಾಗಿ ಬಿಟ್ಟಿದೆ. ನನ್ನವರೇನೋ ಎರಡು ಸಾಲಿಗೆ ಒಂದು ಪೋಸ್ಟ್ ಮಾಡಿಬಿಡುತ್ತಾರೆ, ಆದರೆ ನಾನೇನು ಮಾಡಲಿ ಹೇಳಿ..... ಇಷ್ಟು ದಿನ ಬಿಡುವಿದ್ದ ಈ ಮೃದುಮನಸಿಗೆ ಸಮಯಕೊಟ್ಟು ಇಂದು ರಾತ್ರಿ ಪುಟ್ಟ ಲೇಖನ ಬರೆದಿದ್ದೇನೆ....

ಸಮಯ ಸಿಕ್ಕಾಗ ನಿಮ್ಮೆಲ್ಲರ ಬ್ಲಾಗ್ ಲೇಖನಗಳನ್ನು ಓದುವೆ.....ಆದರೂ ಆಗೊಮ್ಮೆ ಈಗೊಮ್ಮೆ ಓದುತ್ತಲಿರುವೆ ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು.....

ಸದಾ ಮೃದುಮನಸಿನೊಂದಿಗಿರಿ......