Tuesday, August 17, 2010

ಮೀನಿನ ಮೇಸ್ಟ್ರು ಮತ್ತು ಕಣ್ಣಿನ ಡಾಕ್ಟರ್


ನಮಗೆ ತೀರಾ ಆತ್ಮೀಯರೆನಿಸಿಕೊಂಡಂತಹ ಇಬ್ಬರೂ ಬಹಳ ವಿಶೇಷ ವ್ಯಕ್ತಿಗಳು, ತಮ್ಮ ವೃತ್ತಿಯಲ್ಲಿ ಅತಿ ಪ್ರಬುದ್ಧತೆಯನ್ನು ಸಾಧಿಸಿರುವಂತಹವರು.

ಮೊದಲು ಅವರೂರಿನಲ್ಲೇ ಇರುವ ಕೆರೆ, ಕುಂಟೆಗಳಲ್ಲಿ ಬೆಸ್ತರಂತೆ ಮೀನನ್ನು ಹಿಡಿದು ಅದರ ಬಗ್ಗೆ ಹೆಚ್ಚು ಹಳ್ಳಿ ಜನರಿಗೆ ತಿಳಿಸುತ್ತಿದ್ದರೇನೋ.... ನಂತರ ಹಳ್ಳಿಯಿಂದ ಪೇಟೆಗೆ ಬಂದು ಮೀನಿನ ಮಾರ್ಕೆಟ್ ಗೆ ಬಂದಂತಹ ಮೀನುಗಳ ಬಗ್ಗೆ ಬಾರಿ ಅಭ್ಯಾಸ ಮಾಡಿ ಮಾಡಿ..... ನಂತರ ಕಡಲ ತೀರಕ್ಕೆ ಹೋಗಿ ಅಲ್ಲೂ ಕಡಲ ದಡದಲ್ಲಿ ಕೂತು ಮೀನಿಗಾಗಿ ಗಾಳ ಹಾಕಿ ಅಲ್ಲೂ ಯಶಸ್ವಿಯಾಗಿ ಎಲ್ಲರಿಗೂ ಪಾಠ ಪ್ರವಚನ ಮಾಡಿರಬೇಕು....... ಆನಂತರ ಊರು, ಕೇರಿ ಬಿಟ್ಟು ದೂರದಲ್ಲಿರೋ ಕಡಲ ಅಲೆಗಳು ರಾತ್ರೋರಾತ್ರಿ ನಿಶಬ್ಧ ನಿದ್ರೆಯಲ್ಲೂ ಕೇಳುವಂತಿರಬೇಕೆಂದು ಅರಬೀ ಸಮುದ್ರದ ದಡದಲ್ಲೇ ಇರೋ ಮೀನಿನ ಸಂಸಾರಕ್ಕೆ ಸೇರಿ ಬಿಟ್ಟಿರುವ ಮೀನಿನ ಮೇಸ್ಟ್ರು..... ಮೊದ ಮೊದಲು ಕೊಡದಲ್ಲಿದ್ದ ಮೀನಿನಂತೆ ಸಾಹಿತ್ಯ ಕೃಷಿಯನ್ನು ಅಕ್ಕಪಕ್ಕ ಇದ್ದ ಮೀನುಗಳಿಗೆ ನೀಡುತ್ತಲಿದ್ದರು ಈಗ ನೋಡಿ ಕಡಲ ಅಬ್ಬರಕ್ಕೆ ಜಿಗಿದಿದ್ದಾರೆ. ಯಾವ ಅಲೆಗಳ ಅಡೆತಡೆಯೂ ಇಲ್ಲದೆ ಸಾಹಿತ್ಯದ ಹೊನಲನ್ನು ನಮ್ಮಂತಹ ಸಹಸ್ರಾರು ಜನರಿಗೆ ನೀಡಲು ಸಜ್ಜಾಗಿರುವ..... ಮಾತಿನ ಜಾದು........ ಮೀನಿನ ಮೇಸ್ಟ್ರು, ನೀರು ವಿಜ್ಞಾನಿಗಳಾದಂತ ಇವರು ಡಾ. ಅಜಾದ್, ಅವರಿಗೆ ನಮ್ಮ ಅಭಿನಂದನೆಗಳು.......

ಅಂತೆಯೇ ನಮ್ಮ ಕಣ್ಣಿನ ಡಾಕ್ಟರ್ ....... ಡಾಕ್ಟರ್ ಎಂದರೆ ಯಾರು ಎಂದುಕೊಂಡಿರಿ ಸ್ಟೆತಸ್ಕೋಪ್ ಹಿಡಿದರೆನೇ ಡಾಕ್ಟರಾ...? ಇಲ್ಲ ಇವರೂ ಒಂತರ ಡಾಕ್ಟರೇ ಸರಿ ಒಂದೇ ಕಣ್ಣಿನಲ್ಲಿ ಮತ್ತೊಂದು ಕಣ್ಣಿಟ್ಟು ಸೃಷ್ಟಿಯ ಸೌಂದರ್ಯವನ್ನು ನಮಗೆಲ್ಲರಿಗೂ ವಿಧವಿಧವಾಗಿ ಬಣ್ಣ ಬಣ್ಣದ ಚಿತ್ರಗಳ ಮೂಲಕ ನೀಡುತ್ತ ನಮ್ಮನೆಲ್ಲಾ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿರುವ.... ಹಾಗೂ ದಿನಬೆಳಗಾದರೆ ಬೆಂಗಳೂರಿಗರಿಗೆ ದೇಶ ವಿದೇಶದ ಸುದ್ದಿ ಸಾರಾಂಶವನ್ನು ನೀಡುತ್ತಲಿರುವ..... ವೆಂಡರ್ ಕಣ್ಣಿನ ಶ್ರೀ ಶಿವು ಅವರಿಗೂ ನಮ್ಮ ಅಭಿನಂದನೆಗಳು.

ಎಲ್ಲಾ ಬ್ಲಾಗಿಗರ ಪರವಾಗಿ ...... ತಮ್ಮ ಸಾಹಿತ್ಯದ ಕೂಸುಗಳನ್ನು ಹೊರ ಜಗತ್ತಿಗೆ ನೀಡುತ್ತಲಿರುವ ಮೀನಿನ ಮೇಸ್ಟ್ರಿಗೆ ಹಾಗೂ ಕಣ್ಣಿನ ಡಾಕ್ಟರ್ ಗೆ ಹೃದಯಪೂರ್ವಕ ಅಭಿನಂದನೆಗಳು.

ಯಾರು ಯಾರು ಬರುವವರು:?
೧. ಬಾಲ್ಕನಿ ಸೀಟ್ ಬೇಕಿದ್ದವರು ಪಕ್ಕು ಮಾಮ, ದಾದ, ಬ್ಯಾಚುಲರ್ಸ್ ಗೆ ಹೆಣ್ಣು ಹುಡುಕುವ ಹಿರಿಯಣ್ಣ, ಮರಳು ಮತ್ತು ಸಿಮೆಂಟ್ ಮಧ್ಯದಲ್ಲೇ ಸೆಂಟಿಮೆಂಟ್ ತೋರಿಸುವ ಶ್ರೀ ಪ್ರಕಾಶ್ ಹೆಗಡೆಯವರಿಗೆ ಹೇಳಿ ಟವಲ್ ಹಾಕಿಸಬಹುದು....
೨. ಇನ್ನು ಗಾಂಧಿ ಕ್ಲಾಸ್ ನಲ್ಲಿ ಕೂರಲು ಬಯಸುವವರು ನನ್ನ ಪ್ರೀತಿಯ ತಮ್ಮ, ಅಮಾಯಕ, ಶಿಪ್ರ, ಮದುಮಗ ಶಿವಪ್ರಕಾಶ್ ಗೆ ಹೇಳಿ ಟವಲ್ ಹಾಕಿಸಬಹುದು......

ಸೂಚನೆ: ಒಬ್ಬೊಬ್ಬರಿಗೂ ಒಂದೊಂದು ಬಣ್ಣದ ಟವೆಲ್ ಇರುತ್ತೆ ...... ಯಾರು ಹೆದರಬೇಕಿಲ್ಲ ಮೊದಲೇ ನಿಮ್ಮ ಬಣ್ಣದ ಟವೆಲ್ ಹೇಳಿರುತ್ತಾರೆ.....

ಸ್ಥಳ : ಕನ್ನಡ ಭವನ
ದಿನಾಂಕ: ೨೨ ಆಗಸ್ಟ್ ೨೦೧೦
ಪ್ರಾರಂಭ: ಬೆಳ್ಳಿಗ್ಗೆ ೧೦ಕ್ಕೆ
ಮುಕ್ತಾಯ: ಮುಗಿಯುವುದು ನಮ್ಗೆ ಗೊತ್ತಿಲ್ಲ......
ಪುಸ್ತಕಗಳ ಹೆಸರು : ಜಲನಯನ ಮತ್ತು ಗುಬ್ಬಿ ಎಂಜಲು


Sunday, August 15, 2010

ಸ್ವತಂತ್ರ - ಅತಂತ್ರ


ಆಂಗ್ಲರ ಕಣ್ಣಿಗೆ ಗುರಿಯಾಗಿದ್ದ ಭರತ ಭೂಮಿಯಲಿ
ಸ್ವತಂತ್ರವೇ ಇಲ್ಲದೆ ಕೂಲಿಯಾಳುಗಳಾಗಿದ್ದರು
ತಮ್ಮ ತನವನ್ನೇ ಮರೆತು ಬಾಳು ಸಾಗಿಸುತ್ತಿದ್ದರು
ಅಂದು ಸ್ವತಂತ್ರ ಬರುವ ಮೊದಲು...........

ಸ್ವತಂತ್ರ ಪಡೆಯುವ ದಿಟ್ಟ ಹೆಜ್ಜೆಯಲ್ಲಿ
ಎಷ್ಟೋ ಹಳ್ಳಿಗಳು ಗುಡಿಸಿ ಗುಂಡಾಂತರ
ಜೊತೆಗೆ ಹೆಣ್ಣು ಮಕ್ಕಳಿಗೆ ಹಲವು ಅವಾಂತರ
ಗಂಡು ದಿಕ್ಕಿಲ್ಲದಂತೆ ಬರಡು ಜೀವನ ಮಾಡಿಬಿಟ್ಟಿದ್ದರಂದು.........

ಸ್ವತಂತ್ರ ಪೂರ್ವಾದಿನಗಳು ಕರಿ ನೆರಳಿನಂತೆ
ಸಾಗಿಸಿದ ಅದೆಷ್ಟೋ ಜನಸ್ಥೋಮ
ಒಲವಿನ ಹಸೆಮಣೆಯನ್ನೇ ಮರೆತು
ಸೇಡಿನ ಧಗೆಯಲಿ ಮಿಂದಿದ್ದರು ಅಂದು.....

ಹೆಣ್ಣು ಗಂಡು ಭೇದವಿಲ್ಲದಂತೆ ಹೀನಾಯ ಸ್ಥಿತಿಗೆ ತಳ್ಳಿ
ಆಂಗ್ಲ ದೊರೆಗಳು ರಾಜಠೀವಿಯಲ್ಲಿ ಮೆರೆದರು
ದುಃಖಕೆ ಸ್ಪಂದಿಸದೆ ಕಾಲ್ತುಳಿತಕೆ ಬಿದ್ದ
ಹತಾಷಾ ಜನರ ನೋವು ನರಗಟ್ಟಿದ್ದವಂದು........

ಸ್ವತಂತ್ರದ ಮುನ್ನಾದಿನಗಳ ನೋವಿನ ಕಹಳೆಗೆ
ಜಲಿಯನ್ ವಾಲಾ ಬಾಗ್ ನ ಮಾರಣಹೋಮವೇ
ಸಾಕು ನರಕಯಾತನೆ ಅನುಭವಿಸಿದ ಅಂದಿನ
ಅಮಾಯಕ ಜನರಿಗೆ ನೀಡಿದ ಆಂಗ್ಲರ ಕೊಡುಗೆ.........

ಹೋರಾಟ, ಬಡಿದಾಟ, ಕಾದಾಟ ಯಾವುದಕ್ಕೂ
ಬಗ್ಗದ ಆಂಗ್ಲರಿಗೆ ಕೊನೆಗೊಂದು ಹುಟ್ಟಿತೊಂದು ತಂತ್ರ
ಅದುವೇ ಶಾಂತಿಯುತ ಅಹಿಂಸಾ ಮಾರ್ಗದ ಮಂತ್ರ
ಮಂತ್ರ-ತಂತ್ರದಲೇಗೋ ಮೊಳಗಿತು ಸ್ವತಂತ್ರದ ಕಹಳೆ ...........

ಸ್ವತಂತ್ರ ಬಂದರೇನು ಪ್ರಜಾಪ್ರಭುತ್ವ ಇದ್ದರೇನು
ರಾಜಕೀಯದ ಹೆಸರಲಿ ಆಂಗ್ಲರಿಗಿಂತ ಕೀಳಾಗಿ
ಬಾಳುತಿಹರು ನಾವೇ ಆಯ್ಕೆ ಮಾಡಿದ
ದೇಶ, ರಾಜ್ಯ ಕಾಯುವ ಬದಲು...ನುಂಗೋ ಭಟರು........

ರಾಜಕೀಯದ ದಬ್ಬಾಳಿಕೆಯಲಿ ಬಿದ್ದೇಳುತಿರುವ
ಖಾದಿ ಬಟ್ಟೆಯ ಭ್ರಷ್ಟ ರಾಜಕಾರಣಿಗಳಿಗೆ
ಅಹಿಂಸಾ ಮಾರ್ಗ ಬಿಟ್ಟು ಬೇರಾವ ಮಾರ್ಗ
ಹುಡುಕಿ ತಳಿಸಬೇಕಿದೆಯೋ ತಿಳಿಯದು.........

ಎಂದು ಈ ಭ್ರಷ್ಟತೆ ಹೋಗಿ ನಿಷ್ಟತೆ ಬರುವುದೋ
ಮತ್ತೊಮ್ಮೆ ಗಾಂಧಿಯಂತ ಮಹಾನುಭಾವಿಗಳು
ಹುಟ್ಟಿ ಬರಬೇಕಿದೆ, ಸ್ವತಂತ್ರದ ಹೆಸರಲಿ
ಅತಂತ್ರವನ್ನು ಹೊರದೋಡಿಸ ಬೇಕಿದೆ.......ಭಾರತ ಭೂಮಿಗೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕದಿದ್ದರೆ ಚೆನ್ನಾಗಿರುತ್ತಿತ್ತು ಮತ್ತು ಬ್ರಿಟೀಷರ ಆಳ್ವಿಕೆಯಲ್ಲಿಯೇ ನಾವೆಲ್ಲರೂ ಇರಬೇಕಿತ್ತು......?

ಬ್ರಿಟೀಷರ ಆಳ್ವಿಕೆಯಲ್ಲಿದ್ದಿದ್ದರೆ ನಮಗೆ ಹೊರದೇಶದಾದ್ಯಂತ ಒಳ್ಳೆಯ ಮರ್ಯಾದೆ ಇರುತ್ತಿತ್ತು. ನಮ್ಮಗಳಿಗೆಲ್ಲಾ ಬ್ರಿಟೀಷ್ ಪಾಸ್ ಪೋರ್ಟ್ ಸಿಗುತ್ತಿತ್ತು. ಅನುಕೂಲಗಳು ಹೆಚ್ಚಿನವಾಗುತ್ತಿತ್ತು, ಈಗ ನಮ್ಮ ದೇಶದಲ್ಲಿ ಮೋಸ, ವಂಚನೆ,ಧಗ, ಕಳ್ಳತನ, ಕೊಲೆ, ಅತ್ಯಾಚಾರ ಎಲ್ಲವೂ ಮಿತಿಮೀರಿದೆ......... ರಾಜಕೀಯದವರು ಅತಿಯಾಗಿ ವರ್ತಿಸುತ್ತಾರೆ - ಎಂಬುದು ನಮ್ಮ ಸಹದ್ಯೋಗಿಯೊಬ್ಬರ ವಾದ.....

ನಮಗೆ ನಮ್ಮತನ ಎನ್ನುವುದು ಸ್ವತಂತ್ರ ಬಂದಿದ್ದರಿಂದಲೇ ಸಾಧ್ಯ.... ನಮ್ಮನ್ನು ನಾವು ಗುರುತಿಸಿಕೊಳ್ಳಲು ಸ್ವತಂತ್ರವೇ ಸರಿಯಾದ ದಾರಿ...... ಅವರ ಆಳ್ವಿಕೆಯಲಿದ್ದರೆ ನಾವುಗಳು ಕೆಲಸ ಮಾಡಿ ಬ್ರಿಟೀಷರು ಹೆಸರು ತೆಗೆದುಕೊಳ್ಳುತ್ತಲಿದ್ದರು. ಅವರ ಪಾಸ್ ಪೋರ್ಟ್ ನಿಂದ ನಮಗ್ಯಾವುದೇ ಅನುಕೂಲವಾದರೂ ನಮ್ಮ ಸ್ವಂತಿಕೆ ಇರುವುದಿಲ್ಲ. ಎಲ್ಲಾ ದೇಶದಲ್ಲಿ ಮೋಸ ವಂಚನೆ, ಕೊಲೆ ದರೋಡೆ ಇದ್ದೇ ಇರುತ್ತೆ ದೂರದಲ್ಲಿರುವವರಿಗೆ ಕಾಣುವುದಿಲ್ಲ ನಮ್ಮ ದೇಶದ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುತ್ತೇವೆ ಆದ್ದರಿಂದ ನಮ್ಮ ದೇಶದಲ್ಲೇ ಹೆಚ್ಚು ತಪ್ಪು ನೆಡೆಯೋದು ಎಂದು ತಪ್ಪು ಭಾವಿಸುತ್ತೇವೆ - ಎಂಬುದು ನನ್ನ ವಾದ

ನೀವು ಸಹ ನಿಮ್ಮ ನಿಮ್ಮ ವಾದಗಳನ್ನು ಮಂಡಿಸಿ.... ನಿಮಗೇನನ್ನಿಸುತ್ತೋ ಅದನ್ನು ತಿಳಿಸಿ.....

Thursday, August 5, 2010

ಹೀಗೆಲ್ಲಾ ಆಗುತ್ತಾ.....

ಆಫೀಸಿಗೆ ಬೆಳ್ಳಿಗ್ಗೆ ಬೆಳ್ಳಿಗ್ಗೆ ಎದ್ದು ರೆಡಿಯಾಗಿ ಹೋಗೋದು ಇದೆಯಲ್ಲಾ.... ಒಂದು ತರಾ ಬೇಜಾರು....... ಏನು ಮಾಡೋದು ಹೊಟ್ಟೆಪಾಡು... ಹೋಗ್ಲೇಬೇಕು.......

ಯಾವಾಗಲೂ ಬೆಳ್ಳಿಗ್ಗೆ ೬.೪೦ ಅಷ್ಟರಲ್ಲಿ ನನ್ನವರು ರೆಡಿಯಾಗಿ ನಿಲ್ಲಿಸಿದ್ದ ಕಾರನ್ನು ಸ್ವಲ್ಪ ಹೊತ್ತು ಸ್ಟಾರ್ಟ್ ಮಾಡಿ ಆನಂತರ ಮನೆ ಮುಂದಕ್ಕೆ ತಂದು ನನಗಾಗಿ ಕಾಯೋ ವಾಡಿಕೆ... ಏನು ಮಾಡೋದು ನಾವು ಹೆಂಗಳೆಯರು ಸ್ವಲ್ಪ ಹಾಗೆ ಕನ್ನಡಿ ಎಂಬ ಭೈರವನ ಜೊತೆ ಒಡನಾಟ ಜಾಸ್ತಿ..... ಅಂದು ಹೊರಗಡೆ ನನಗಾಗಿ ಕಾರ್ ನಿಲ್ಲಿಸಿ ಕಾಯುತ್ತಿದ್ದ ನನ್ನವರು ಬೈಯ್ದಾರು ಎಷ್ಟೊತ್ತು ಶೃಂಗಾರ ಮಾಡಿಕೊಂಡು ಬೇಗ ಬರೋದಿಕ್ಕೆ ಆಗೋಲ್ಲವಾ..... ಎಂದರೆ..!!? ಎಂದು ಲಘುಬಗೆಯಿಂದ ಮನೆಗೆ ಬೀಗ ಜಡಿದು ಓಡುತ್ತಿದ್ದೆ..... ಅಷ್ಟರಲ್ಲಿ ನನ್ನ ಮುಂದೆ ಒಬ್ಬಾಕೆ ಹೋಗ್ತಾ ಇದ್ದಳು ನಾನು ಅವಳನ್ನೂ ಹಿಂದಿಕ್ಕಿ ಬರಬರನೇ ಹೋದವಳೇ ಎದುರೇ ಇದ್ದ ಕೆಂಬಣ್ಣದ ಕಾರನ್ನು ಹತ್ತಲು ಹತ್ತಿರವಾಗುತ್ತಿದ್ದಂತೆ ನನಗೆ ಕಾರಿನಲ್ಲಿರೋರು ಯಾರು ಅಂತ ಅನ್ನಿಸ್ತಾ ಇತ್ತು......... ಅಯ್ಯೋ ಇದೇನು ನನ್ನವರು ಗಡ್ಡ ಬಿಟ್ಟಿಲ್ಲ... ಶೇವ್ ಮಾಡ್ತಾರಲ್ಲಾ ಯಾವಾಗಲೂ, ಇಂದು ಅವರ ಮುಖ ನೋಡಿದ್ನಾ ಇಲ್ವಾ........ ಮಬ್ಬು ಮಬ್ಬಾಗಿ ಕಾರಿನೊಳಗಿರುವ ವ್ಯಕ್ತಿ ಕಾಣ್ತಾ ಇದ್ರು....... ಕನ್ನಡಕ ಬೇರೆ ಹಾಕಿರ್ಲಿಲ್ಲ..... ಏನೋ ಬಿಡು ಎಂದು ಮತ್ತೂ ಹತ್ತಿರ ಹೋಗ್ತಾ ಇದ್ದ ಹಾಗೆ ಕಾರ್ ಒಳಗಿಂದ ಕೈ ಅಲುಗಾಡಿದ ರೀತಿ ಕಾಣುಸ್ತಾ ಇತ್ತು ............ ಭಿಕ್ಷೆಗೆ ಬಂದವರನ್ನ ಮುಂದಕ್ಕೆ ಹೋಗು ಅಂತಾರಲ್ಲ ಹಾಗೆ ಸನ್ನೇ ಮಾಡುತ್ತಿರುವ ಹಾಗೆ ಕಾಣಿಸಿತು ಆದರು........ ನಾನು ಕಾರಿನ ಫ್ರೆಂಟ್ ಸೀಟ್ ಬಾಗಿಲು ತೆಗೆದೆ ಆಗಲೇ ಗೊತ್ತಾಗಿದ್ದು ನೋಡೀ..........

ಅಬ್ಬಾ..!!!! ಇದು ನನ್ನವರಲ್ಲ ನಮ್ಮ ಕಾರಲ್ಲಾ ನಾನು ಯಾವುದೋ ಕಾರಿಗೆ ......... ಹತ್ತಿಕೊಳ್ಳಲು ಬಂದುಬಿಟ್ಟಿದ್ದೀನಿ ಎಂದು. ಆಮೇಲೆ ಮುಂದೆ ನೋಡಿದ್ರೆ ಅಲ್ಲೇ ಇದೆ ನಮ್ಮ ಕಾರ್ ........ (ಆತ ಕೈ ಸನ್ನೆ ಮಾಡಿದ್ದು ಮುಂದಿರುವ ಕಾರ್ ನಿಮ್ಮದು ಎಂದು ಆಗ ಅರ್ಥವಾಯ್ತು) ನನ್ಗೆ ನಾಚಿಕೆಯಾಗಿ ಸಾರಿ ಕೇಳಿದೆ.......... ಕಾರಿನಲ್ಲಿ ಕುಳಿತಿರುವವ ಏನೋ ಸುಮ್ಮನಾದ ನಾನು ಒಬ್ಬಾಕೆನ ಹಿಂದಿಕ್ಕಿ ಬಂದಿದ್ದೆನಲ್ಲಾ .....!!! ಆಕೆ ಗುರ್ ಎಂದಾಳು ಎಂದು ಹಿಂತಿರುಗಿ ಅವಳಿಗೂ ಸಾರಿ ಹೇಳಿದೆ..........ಆಕೆ ಏನೂ ಮಾತನಾಡಿದ್ದು ಕೇಳಿಸಲಿಲ್ಲ, ಜೊತೆಗೆ ಅವರ ಮುಖಭಾವವೂ ತಿಳಿಯಲಿಲ್ಲ ಕಾರಣ ಅವರ ಕಣ್ಣು ಮಾತ್ರ ಕಾಣುವಂತಿದ್ದ ಉಡುಪು.....ಆದ್ರೂ ಅವರ ಕಣ್ಣಿನಲ್ಲೇ ಗೊತ್ತಾಯ್ತು ಪರವಾಗಿಲ್ಲ ಎಂದಿದ್ದು..........

ಅಯ್ಯೋ....... ಅವರಿರ್ಲಿ ಇಲ್ಲಿ ನನ್ನವರು ಕಾರಿನಲ್ಲೇ ಕೂತು..... ಹಿಂಬದಿ ಬರುವ ಕಾರುಗಳ ಕಾರುಬಾರು ನೋಡುವ ಕನ್ನಡಿಯಲ್ಲೇ ನನ್ನನ್ನು ನೋಡ್ತಾ ಇದ್ದಾರೆ..... ಹುಸಿ ಹುಸಿ ನಗುವಿನಲ್ಲಿ ನಿನ್ಗೆ ಅಷ್ಟು ಗೊತ್ತಾಗೋಲ್ವ ನಮ್ಮ ಕಾರು ಯಾವ್ದು ಅಂತಾ...!!!!

ಅಯ್ಯೋ ಇಲ್ಲಪ್ಪ ನಾನು ಆತುರವಾಗಿ ಬರ್ತಾ ಇದ್ದೇ ಅಲ್ಲದೇ ಆ ಕಾರು LANCER.... ಒಂದೇ ಬಣ್ಣ.... ಕನ್ನಡಕ ಬೇರೆ ಹಾಕಿರ್ಲಿಲ್ಲ... ಮಬ್ಬು ಮಬ್ಬು ಒಳಗಿರೋರು ನೀವಲ್ಲ ಅಂತಾ ತಿಳಿಲಿಲ್ಲ....

ಕನ್ನಡಕ ಹಾಕ್ಕೊಳ್ಳೊದು ಅಲ್ವಾ....?

ಅಯ್ಯೋ ಕನ್ನಡಕ ಮತ್ತೆ ವಾಚ್ ಇವೆಲ್ಲಾ ಹಾಕಿಕೊಳ್ಳೋಸ್ಟರಲ್ಲಿ ಟೈಮ್ ಆಗುತ್ತೆ ಅದರ ಬದಲು ಕಾರಿನಲ್ಲಿ ಕುಳಿತಾಗ ಸಮಯ ಇರುತ್ತೇ ಅಂತಾ ದಿನಾ ಹಾಗೆ ತರ್ತೀನಲ್ಲ ಇವತ್ತು ಹಾಗೇ ಬಂದೆ...... ನೀವು ನಿಲ್ಲಿಸೋ ಜಾಗದಲ್ಲಿ ಆ ಕಾರು ತಂದು ಅದು ಅಲ್ಲದೆ ಒಂದೇ ತರಹದ ಕಾರು ನಿಲ್ಲಿಸಿದ್ರೆ ಹಿಂಗೆ ಆಗುತ್ತೆ....... ಏನು ಮಾಡೋದು...... ಆ ಗಂಡ ಹೆಂಡತಿ ಏನು ತಿಳಿದಿದ್ದ್ರೆ ಸಾಕು.... ಎಂದು........ ನಾ ಏನೇ ಬಡಬಡಾಯಿಸಿದರೂ ನನ್ನವರಿಗೆ ನಗುನೋ ನಗು....

ಇಷ್ಟೆಲ್ಲಾ ಮಾತಾಡುವಷ್ಟರಲ್ಲಿ ಆ ಕಾರ್ ನಮ್ಮ ಮುಂದೆ ಹಾರಿ ಹೋಯ್ತು ಅಷ್ಟರಲ್ಲಾಗಲೇ ಕನ್ನಡಕ ಕಣ್ಣಿಗೆ ಬಂದಿತ್ತು ಅಗೋ ನೋಡಿ ಆ ಕಾರಿನ ನಂಬರ್ ಕೂಡ ಹೆಚ್ಚು ಕಮ್ಮಿ ನಮ್ಮ ಕಾರಿನ ನಂಬರ್ ತರವೇ ಇದೇ......... ಏನು ಕರ್ಮನೋ ಬೆಳಿಗ್ಗೆ ಬೆಳಿಗ್ಗೆ ....... ನನ್ಗೆ ನಾಚಿಕೆಯಾಗೋ ಹಾಗೆ ಈ ಕೆಲಸ ಮಾಡಿದ್ದೆ ... ಅಂದು !!!...........

ಇದೆಲ್ಲಾ ಅವಾಂತರವಾದಾಗಿನಿಂದ ದಿನ ಕಾರ್ ನಂಬರ್ ಪ್ಲೇಟ್ ನೋಡಿ.... ಕಾರಿನೊಳಗೆ ಇರುವವರು ನನ್ನವರೇ ಎಂದು ಖಾತ್ರಿ ಮಾಡಿಕೊಳ್ಳುತ್ತೇನೆ ... ಅದು ಏನಾದರು ತಡವಾಗಿ ಆಚೆ ಹೋದರೆ....... ಸಾಮಾನ್ಯವಾಗಿ ನನ್ನವರ ಜೊತೆಯಲ್ಲೇ ಹೆಜ್ಜೆ ಹಾಕೋಕ್ಕೆ ಪ್ರಾರಂಭಿಸಿದ್ದೀನಿ ಯಾಕೆ ಗೊತ್ತಾ...!!! ಪಕ್ಕದಲ್ಲೇ ಇದ್ದರೆ ಅವರು ಯಾವ ಕಾರಿನಲ್ಲಿ ಕೂರುತಾರೋ ನಾನೂ ಅದೇ ಕಾರಿನಲ್ಲಿ ಕೂರುತ್ತೇನೆ...... ಇದೆ ಸರಿಯಾದ ಐಡಿಯಾ ಅಲ್ಲವೆ.....

ಈಗ ಆ ಕಾರಿನವರು ಎದುರು ಸಿಕ್ಕಾಗ ನಾನು ಅವರುಗಳ ಮುಖವೇ ನೋಡೋಲ್ಲ ........... ಗೊತ್ತಿಲ್ಲದವಳಂತೆ ಇದ್ದು ಬಿಡ್ತೀನಿ.... ಹೀಗೂ ಆಗುತ್ತೆ ಕೆಲವೊಮ್ಮೆ ಏನು ಮಾಡೋದು ಅಲ್ವಾ....???

ಈ ಲೇಖನ ಯಾಕೆ ಬರೆದೆ ಅಂತೀರಾ...!!! ಇವತ್ತು... ನಾನು ನನ್ನ ಕನ್ನಡಕವನ್ನ ಮರೆತು ಆಫೀಸಿಗೆ ಬಂದಿದ್ದೀನಿ (ನನ್ನವರಿಗೆ ಹೇಳ ಬೇಡಿ ಆಮೇಲೆ ಬೈತಾರೆ...!!!) ಹಹಹಹ ಇಂದು ಇಲ್ಲಿ ಆಫೀಸಿನಲ್ಲಿ ಏನು ಫಜೀತಿ ಆಗುತ್ತೋ ಗೊತ್ತಿಲ್ಲ ..... ಮಬ್ಬು ಮಬ್ಬಿನಲ್ಲೇ ಟೈಪಿಸಿದ್ದೇನೆ... ತಪ್ಪಿದ್ದರೆ ತಿದ್ದಿಕೊಳ್ಳಿ ಹಹಹಹ......