ಮೊನ್ನೆ ಕಚೇರಿಗೆ ತಡವಾಗಿತ್ತು. ರಕ್ತ ಪರೀಕ್ಷೆಗೆ ಹೋಗಿದ್ದೆ ಅದಕ್ಕೆ ತಡವಾಯ್ತು ಎಂದು ನನ್ನ ಮೇಲಧಿಕಾರಿಗಳಿಗೆ ಕಾರಣ ಹೇಳುತ್ತಿದ್ದಂತೆ... ಏನು ಈಗ ರಕ್ತ ಪರೀಕ್ಷೆ ಎಂದರು, ಸಕ್ಕರೆ ಖಾಯಿಲೆಯಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗಿದ್ದೆ ಎಂದೇಳುತ್ತಲಿದ್ದಂತೆ ... ರಿಪೋರ್ಟ್ ಬಂತಾ..!!? ಹಾ ಬಂದಿದೆ ಏನು ಹಾಗಿದ್ದರೆ ಸಕ್ಕರೆಯೋ, ಉಪ್ಪೋ (sugar or salt) ಎಂದು ಗೇಲಿ ಮಾಡಿದ್ದಕ್ಕೆ ಎರಡೂ ಇಲ್ಲ ಸರ್... ಎಂದೇಳಿದೆ... ಡಾಕ್ಟರ್ ಹತ್ತಿರ ಗಲಾಟೆ ಮಾಡಿಲ್ಲ ತಾನೇ ಎಂದರು..!!?? ನಾನು ಏಕೆ ಗಲಾಟೆ ಮಾಡಲಿ ಸದ್ಯ ಯಾವ ರೋಗವಿಲ್ಲದೆ ಆರಾಮಾಗಿ ಇದ್ದೀನಲ್ಲ ಎಂದು ಖುಷಿ ಪಡಬೇಕು ಸದ್ಯಕ್ಕೆ ಅವರ ಮೇಲೆ ಏಕೆ ಗಲಾಟೆ ಮಾಡಬೇಕು ಎಂದುಕೊಳ್ಳುತ್ತಲಿದ್ದೆ....
ನಂತರ ನನ್ನ ಬಾಸ್ ಒಂದು ಪ್ರಸಂಗವನ್ನು ನನಗೆ ಹೇಳಿದರು ಪ್ರತಿಷ್ಠಿತ (ದುಬಾರಿ) ಆಸ್ಪತ್ರೆಗೆ ಒಬ್ಬ ತನ್ನ ಖಾಯಿಲೆ ಪರೀಕ್ಷೆ ಮಾಡಿಸಲು ಹೋಗಿದ್ದನಂತೆ, ಡಾಕ್ಟರ್... ನಿನಗೆ ರಕ್ತ ಪರೀಕ್ಷೆಗಳಲ್ಲಿ ಹಲವು ವಿಧಗಳಿವೆ ಅವೆಲ್ಲವನ್ನು ಒಮ್ಮೆ ಮಾಡಿಸಿ. ನಂತರ ಏನು ತೊಂದರೆ ಇದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಔಷಧೋಪಚಾರ ಮಾಡೋಣ ಎಂದಿದ್ದಾರೆ. ಸರಿ ಎಂದು ಅಂದು ಲ್ಯಾಬ್ ನಲ್ಲಿ ರಕ್ತವನ್ನು ಕೊಟ್ಟು ಹೋಗಿದ್ದಾನೆ.
ಲ್ಯಾಬ್ ನವರು ಮರುದಿನ ಬರಲು ಹೇಳಿದ್ದರಿಂದ ಮಾರನೇ ದಿನ ಬಂದು ಕೌಂಟರ್ ನಲ್ಲಿ ತನ್ನ ಲ್ಯಾಬ್ ರಿಪೋರ್ಟ್ ತೆಗೆದುಕೊಂಡು ಅಲ್ಲೇ ಇದ್ದ ಒಬ್ಬರನ್ನು ವಿಚಾರಿಸಿ ಸರ್, ನನ್ನ ರಕ್ತ ಪರೀಕ್ಷೆ ಮಾಡಿದ್ದೀರಲ್ಲ ಏನಾದರು ತೊಂದರೆ ಇದೆಯೇ ನನಗೆ, ಯಾವುದಾದ್ರು ಖಾಯಿಲೆಗಳ ಸೂಚನೆ ಇದೆಯೆ ಎಂದು ಕೇಳಿದ್ದಾನೆ....
ರಿಪೋರ್ಟ್ ನೋಡುತ್ತ ಲ್ಯಾಬ್ನವರು ಸರ್ ನಿಮಗೆ ಯಾವುದೇ ತೊಂದರೆ ಇಲ್ಲ... ಎಲ್ಲಾ ನಾರ್ಮಲ್ ಆಗಿದೆ ಹೋಗಿ ಡಾಕ್ಟರಿಗೆ ಒಮ್ಮೆ ತೋರಿಸಿ ಎಂದೇಳುತ್ತಿದ್ದಂತೆ... ರಪ್ಪನೆ ರಿಪೋರ್ಟ್ ನೋಡುತ್ತಿದ್ದವನ ಕೈಯಿಂದ ಪೇಪರ್ ಗಳನ್ನೆಲ್ಲ ಕಿತ್ತುಕೊಂಡು ರಪರಪ ಎಂದು ಅತಿ ವೇಗವಾಗಿ ಓಡುತ್ತಲಿದ್ದವನನ್ನು ಕಂಡ ಲ್ಯಾಬ್ ನವರು ಓಹೋ ಬಹಳ ಖುಷಿಯಾಗಿರಬೇಕು ಎಂದು ಮಾತನಾಡಿಕೊಳ್ಳುತ್ತಲಿದ್ದರಂತೆ.... ಆದರೆ ಕೋಪದಲ್ಲಿ ಹೋಗುತ್ತಲಿದ್ದವನ ಮುಖಭಾವ ಅವರ್ಯಾರಿಗೂ ಕಂಡಿರಲಿಲ್ಲ.
ಕೋಪದಲ್ಲಿ ಹೋಗುತ್ತಲಿದ್ದವ ೫ನೇ ಮಹಡಿಯಲ್ಲಿದ್ದ ಡಾಕ್ಟರ್ ನ್ನು ನೋಡಲು ಲಿಫ್ಟ್ ಬಳಸದೆ ಮೆಟ್ಟಲುಗಳನ್ನೇ ಹತ್ತಿ ಹೋದ...... ಅಲ್ಲಿ ಡಾಕ್ಟರ್ ತಮ್ಮ ರೂಮಿನಲ್ಲಿ ರೋಗಿಗಳ ಪರೀಕ್ಷೆ ನೆಡೆಸುತ್ತಲಿದ್ದರು, ಆದರು ಈತ ರಭಸದಿ ಒಳಹೊಕ್ಕು ..... ಡಾಕ್ಟರ್...!!(ಚೀರುತ್ತಾ) ನಿಮಗೆ ಗೊತ್ತ "ನಾನು ರಕ್ತ ಪರೀಕ್ಷೆಗೆ ೧೦೦ ಕೆ.ಡಿ (ಸುಮಾರು ೧೫,೦೦೦ ರೂ) ಖರ್ಚು ಮಾಡಿದ್ದೀನಿ ಆದರೆ ನನಗೆ ಏನೂ ಖಾಯಿಲೆಯೇ ಇಲ್ಲ..!!!"
ಡಾಕ್ಟರ್ ಅವನನ್ನೇ ನೋಡುತ್ತಾ... ಅವಕ್ಕಾದರು ಅಯ್ಯೊ ಕರ್ಮವೇ ಇದಕ್ಕೆ ಖುಷಿ ಪಡಪ್ಪಾ... ನಿನಗೆ ಏನು ಖಾಯಿಲೆ ಇಲ್ಲವಲ್ಲ ಸದ್ಯ, ಆರೋಗ್ಯವಾಗಿದ್ದೀಯಾ..!!!
ಅದು ಹೇಗೆ ನಾನು ಇಷ್ಟೆಲ್ಲಾ ಖರ್ಚುಮಾಡಿದ್ದೀನಿ...!!???? ಎಂದು ಜೋರು ಗಿರುಚುತ್ತಲಿದ್ದನಂತೆ...
ಪಾಪ ಡಾಕ್ಟರ್ ತಲೆಕೆಡೆಸಿಕೊಂಡಿರ ಬೇಕು...
ಕಾಸು ಕೊಟ್ಟರೆ ಖಾಯಿಲೆ ಇರಲೇಬೇಕು ಎಂದುಕೊಂಡಿರಬೇಕು ಈತ ಹಹಹ...!!!
