Thursday, March 23, 2017

ಈ "ಉಪ್ಪಿಟ್ಟು" ಎಂಬ ತಿಂಡಿ ಹೆಸರು ಹೇಳುತ್ತಿದ್ದಂತೆ ಏನೆಲ್ಲಾ ನೆನಪುಗಳು ಬರುತ್ತೆ!!

ಬೆಳಗೆದ್ದು ಯಾವ ತಿಂಡಿ ಮಾಡಲಿ, ಅಯ್ಯೋ ಆಫೀಸಿಗೆ ತಯಾರು ಬೇರೆ ಆಗಬೇಕು, ಮಕ್ಕಳನ್ನ ಶಾಲೆಗೆ ಕಳುಹಿಸಬೇಕು, ಕಷ್ಟನಪ್ಪ ದಿನಾ ಏನ್ ತಿಂಡಿ, ಏನು ಅಡಿಗೆ ಅಂತಾ ಯೋಚನೆ ಮಾಡೋದ್ರಲ್ಲೇ ತಲೆ ಗಿರ್ ಅನ್ನುತ್ತೆ. ಇಂತಹ ಗಿರ್ ಎನ್ನುವ ಸಮಯದಲ್ಲೇ ನೋಡಿ ಈ ಉಪ್ಪಿಟ್ಟ್ ಥಟ್ ಅಂಥ ತಯಾರಾಗುತ್ತೆ. ಎಷ್ಟೋ ಜನರಿಗೆ ಅಯ್ಯೋ ಉಪ್ಪಿಟ್ಟಾ, ಇನ್ನು ಕೆಲವರಿಗೆ ವಾವ್ ಉಪ್ಪಿಟ್ಟಾ!!, ಮತ್ತೆ ಕೆಲವರು ಒಹೋ ಉಪ್ಪಿಟ್ಟ್ ಸಕತ್ ಇಂತಹ ಉದ್ಗಾರಗಳು ಕೇಳಿ ಬರುತ್ತೆ. ಇನ್ನು ಗಂಡು-ಹೆಣ್ಣು ನೋಡುವ ಶಾಸ್ತ್ರ ಎಂದು ಬಿಟ್ಟರೆ ಸಾಕು... ಉಪ್ಪಿಟ್ಟು, ಕಾಫಿ ಮಾಡಿಕೊಡೋಣ ಎಂದು ಹುಡುಗಿ ಕಡೆಯವರು ಮಾತನಾಡಿಕೊಂಡರೆ, ಗಂಡಿನ ಕಡೆಯವರು ಅಯ್ಯೋ ಅದೇ ಉಪ್ಪಿಟ್ಟು, ಎಲ್ಲೋದ್ರು ಈ ಉಪ್ಪಿಟ್ಟ್ ಮಾಡಿಬಿಡ್ತಾರಪ್ಪ ಎಂದು ಗೊಣಗಿಕೊಂಡೆ ಬರ್ತಾರೆ. ಹೆಣ್ಣು ಇಷ್ಟವಾದರೆ ಉಪ್ಪಿಟ್ಟಿನ ಕಡೆ ಗಮನವಂತೂ ಹೋಗಲ್ಲ, ಇಲ್ಲವಾದರೆ ಮುಗಿತು ಕತೆ ಅಯ್ಯೋ ಈ ಉಪ್ಪಿಟ್ಟು ತಿನ್ನೊ ಸಂಪತ್ತಿಗೆ ಇಲ್ಲಿವರೆಗೂ ಬಂದೆವಾ ಎಂದುಕೊಳ್ಳುತ್ತಾರೆ. ಕೆಲವರಿಗಂತೂ ಬಿಸಿ-ಬಿಸಿ ಉಪ್ಪಿಟ್ಟು ಬೇಕು, ಇನ್ನು ಕೆಲವರಿಗೆ ತಣ್ಣನೆ ಉಪ್ಪಿಟ್ಟು ಬೇಕು, ಮತ್ತೊಂದಷ್ಟು ಜನ ಬೇಸರಿಕೆಗೆ-ಆಸರಿಕೆಗೆ ಉಪ್ಪಿಟ್ಟು ಮಾಡಿಕೊಂಡು ತಿಂತಾರೆ. ನಾನಂತು ಯಾವಾಗಾದ್ರು ಸೋಮಾರಿತನ ಅತಿಯಾಗಿ ರಾತ್ರಿ ಊಟಕ್ಕೂ ಉಪ್ಪಿಟ್ಟು ಮಾಡಿ ಬಡಿಸಿದ್ದೀನಿ. ಪಾಪ ಗಂಡ-ಮಗ ಸದ್ದಿಲ್ಲದೆ ತಿಂದಿದ್ದಾರೆ. ಇನ್ನೇನು ಮಾಡ್ತಾರೆ ಸರಿ ರಾತ್ರಿಯಲ್ಲಿ ಎಲ್ಲಿ ಹೋಗ್ತಾರೆ ಹೇಳಿ.
ಏನೇ ಹೇಳಿ ಉಪ್ಪಿಟ್ಟು ಎಷ್ಟೋ ತರಹೇವಾರಿಯಾಗಿ ಮಾಡಬಹುದು ಕಾಳು ಉಪ್ಪಿಟ್ಟು, ಪ್ಲೈನ್ ಉಪ್ಪಿಟ್ಟು, ತರಕಾರಿ ಉಪ್ಪಿಟ್ಟು, ನುಚ್ಚಕ್ಕಿ ಉಪ್ಪಿಟ್ಟು, ಗೋಧಿ ನುಚ್ಚಿನ ಉಪ್ಪಿಟ್ಟು, ಹಿತಕವರೇ ಉಪ್ಪಿಟ್ಟು ಇನ್ನು ಇತ್ಯಾದಿ. ಮೊನ್ನೆ ಸ್ನೇಹಿತೆ ಮನೆಯಲ್ಲಿ ಉಪ್ಪಿಟ್ಟು ಹೊರಗಡೆಯಿಂದ ತರಿಸಿದ್ರು, ಎಷ್ಟು ಚೆಂದ ಅಂದ್ರೆ ಆ ಉಪ್ಪಿಟ್ಟಿನಲ್ಲಿ ಏನೂ ಹೆಚ್ಚು ಇರಲಿಲ್ಲ, ಹಾಗಾದ್ರೆ ಉಪ್ಪಿಟ್ಟು ಹೇಗಾಯ್ತು ಅಂತೀರಾ? ಆ ಉಪ್ಪಿಟ್ಟಿನಲ್ಲಿ ರವೆ, ಅಲ್ಲೊಂದು ಇಲ್ಲೊಂದು ಕಾಣುವ ಈರುಳ್ಳಿ (ಏನು ಉಂಡುಂಡಗೆ ಈರುಳ್ಳಿ ಹಾಕಿದ್ರಾ ಅನ್ನಬೇಡಿ ಕತ್ತರಿಸಿದ್ದರು) ಆ ಬಿಳಿ ರವೆಯ ಮೇಲೆ ಕಪ್ಪನೆ ಆಕರ್ಷಿಸುವ ಚಿಟಿದ ಸಾಸಿವೆ, ಕರಂ ಕುರುಮ್ ಎನ್ನುವ ಉದ್ದಿನ ಬೇಳೆ, ಹೆಚ್ಚು ಎಣ್ಣೆ ಬಳಸದೆ, ಮೃದುವಾಗಿ ಹದವಾಗಿ ಮಾಡಿದ್ದ ಉಪ್ಪಿಟ್ಟು ಬಾಯಿ ರುಚಿಗೆ ಹಿತವೆನಿಸಿತ್ತು, ಹೊಟ್ಟೆಗೂ ಆಹ್ಲಾದಕರವಾಗಿತ್ತು.
ಆ ಸ್ನೇಹಿತೆ ಮನೆಯ ಉಪ್ಪಿಟ್ಟು ನನ್ನ ತಾತನನ್ನು ನೆನಪಿಸಿತ್ತು!! ಸುಮಾರು ೧೮-೨೦ ವರ್ಷದ ಹಿಂದೆ ಇದ್ದ ತಾತನನ್ನ ನೆನಪಿಸುತ್ತು ಎಂದರೆ ಲೆಕ್ಕ ಹಾಕಿ ಆ ಉಪ್ಪಿಟ್ಟು ಅಥವಾ ತಾತನೋ ಎಷ್ಟು ಧನ್ಯರು ಎಂದು. ವಿಷ್ಯಕ್ಕೆ ಬಾ ಸುಮ್ಮನೆ ಉಪ್ಪಿಟ್ಟನ್ನ ಹಿಡಕೊಂಡು ಎಳಿಬೇಡ ಅಂತೀರಾ, ಹೂ ಸರಿ, ನಾವು ರಜೆಗೆ ಅಜ್ಜಿ ಊರಿಗೆ ಹೋದ್ರೆ ಸಾಕು ನಮಗೆ ಸಂಭ್ರಮ, ಹಳ್ಳಿ ಸೊಗಡು, ಆಲೆಮನೆ, ಕಬ್ಬು-ಗೆಣಸು, ಕಡಲೆಕಾಯಿ ಹೀಗೆ ತಿನ್ನೋ ಖುಷಿ. ಇದಕ್ಕೆ ನಾವು ಊರಿಗೆ ಹೋಗ್ತಾ ಇದ್ದಿದ್ದು ಬೇರೇನೂ ಕೆಲಸ ಬರೋಲ್ಲ ನೋಡಿ ಏನ್ ಮಾಡೋದು.
ಹಳ್ಳಿ ಮನೆ, ಅತ್ತೆ-ಮಾವಂದಿರಿಗೆ ಬಿಡುವಿಲ್ಲದ ಕೆಲಸ, ಸದಾ ಹೊಲ-ಗದ್ದೆ ಆಳು-ಕಾಳು ಹೀಗೆ ಎಲ್ಲರೂ ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಬೆಳಗೆದ್ದು ಕಾಫಿ ಟೀ ತಿಂಡಿ ಅಂತ ಈ ಪ್ಯಾಟೆ ಮಂದಿ ಮಾಡ್ತಾರೆ ನೋಡಿ. ಇವತ್ತೇನು ತಿಂಡಿ, ಮಧ್ಯಾಹ್ಮಕ್ಕೇನು ಊಟ, ಸಂಜೆಗೆ ಸ್ನಾಕ್ಸ್, ರಾತ್ರಿಗೆ ಲೈಟ್ ಡಿನ್ನರ್ ಹೀಗೆಲ್ಲ ಎಲ್ಲಿ ಮಾಡ್ತಿದ್ರು? ಅಚ್ಚ್ ಕಟ್ಟಾಗಿ ಕರಿ ಲಾಡು, ಬಿಳಿ ಬಾನ ಬಸ್ದು , ಎಲ್ಲರು ತಿಂದು ಹೊಲ-ಗದ್ದೆ ಕೆಲಸಗಳಿಗೆ ಹೋದ್ರೆ ಬರ್ತಾ ಇದ್ದದ್ದೇ ಸಂಜೆ. ಇಂತಹದರಲ್ಲಿ ನಮ್ಮ ಅತ್ತೆ ನಾವೆಲ್ಲಾ ಪ್ಯಾಟೆ ಮಕ್ಕಳು ಬಂದವ್ರೆ ಅಂತಾ ತಿಂಡಿ ಮಾಡ್ತಾ ಇದ್ರು. ಆದ್ರೆ ವಸಿ ತಡ ಆಗೋದು ಹೇಳಿ, ನಮಗೋ ಕಾಯುವಷ್ಟು ತಾಳ್ಮೆ ಇರ್ತಿರ್ಲಿಲ್ಲ. ಇನ್ನು ನಮ್ಮ ಪರಿಸ್ಥಿತಿ ನೋಡ್ತಿದ್ದ ತಾತ ......... ೧೦ ಗಂಟೆಗೆ ನಾಸ್ಟಾ ಕೊಡ್ತಾಳಿವಳು ಮಕ್ಕಳು ಅಲ್ಲಿವರೆಗೂ ಒಣಕ್ಕೊಂಡು ಇರ್ಬೇಕಾ ಅಂತಾ, ತಾತ ಲೇ ಮಕ್ಕಳಾ, ಬೇಗ ಕೈಕಾಲು ಮುಖ ತೊಳಕ್ಕೊಂಡು ಬನ್ರೋ ಎಂದು ಬೆಳಿಗ್ಗೆ ಊರ್ ಮುಂದಿನ ಅಜ್ಜಿ ಹೋಟೆಲ್ ಗೆ ಕರಕೊಂಡು ಹೋಗಿ ಉಪ್ಪಿಟ್ಟು ಕೊಡ್ಸೋರು.... ಆಹಾ! ಆ ಉಪ್ಪಿಟ್ಟಿನ ರುಚಿ, ಘಮಲು ಇನ್ನೂ ಹಾಗೆ ಇದೆ ನೆನಪಿನಲ್ಲಿ. ಹೋಟೆಲ್ ಅಜ್ಜಿ ಮಾಡುತ್ತಿದ್ದ ಉಪ್ಪಿಟ್ಟಿನಲ್ಲೂ ಅಷ್ಟೇ ಏನೂ ಇರುತ್ತಿರಲಿಲ್ಲ, ಯಾವ ತರಕಾರಿಯನ್ನೂ ಸೋಕಿಸುತ್ತಿರಲಿಲ್ಲ, ಘಮ್ಮನೆ ಹುರಿದು, ಬೆಳ್ಳಗಿನ ರವೆಗೆ ಬಿಸಿನೀರು ತೋರಿಸುತ್ತಿದ್ದರು ಅದರ ಜೊತೆಗಿಷ್ಟು ಸಾಸಿವೆ ಅಲ್ಲೊಂದು ಇಲ್ಲೊಂದು ಕತ್ತರಿಸಿದ ಈರುಳ್ಳಿ, ಯಾವ ಕಡಲೆಯೂ ಇಲ್ಲ, ಅದಾವ ಉದ್ದಿನ ಬೇಳೆಯೂ ಕಾಣುತ್ತಿರಲಿಲ್ಲ. ಆದರೆ ಜೋಪಡಿಯ ಎದುರು ತೆಂಗಿನ ಗರಿ ತಾರಸಿಯ ಕೆಳಗೆ, ಕಲ್ಲು ಬೆಂಚಿನ ಮೇಲೆ ಕುಳಿತು, ಊರ ಮಂದಿಯೆಲ್ಲ ತಾತನಿಗೆ ಯಾರ ಮಕ್ಕಳು ಎಂದಾಗ ನನ್ನ ದೊಡ್ಡ ಮಗಳ ಮಕ್ಕಳು ಇವರು, ಚಿಕ್ಕ ಮಗನ ಮಕ್ಕಳು ಇವರು ಎಂದು ಬೆಂಗಳೂರಿನ ಕಥೆಯೆಲ್ಲಾ ಹೇಳ್ತಾ ಹರಟುತ್ತಿರುವ ಹೊತ್ತಿಗೆ ಹೋಟೆಲ್ ಅಜ್ಜಿ ಬಿಸಿ ಬಿಸಿ ಉಪ್ಪಿಟ್ಟನ್ನು ದೊನ್ನೆಯೊಳಗೆ ಹಾಕಿ ಕೊಡುತ್ತಿದ್ದರು, ನಾವು ಅಲ್ಲೇ ಕೂತು ಬಿಸಿ ಎಂದು ಒಮ್ಮೆ ಉಪ್ಪಿಟ್ಟಿಗೆ ಬೆರಳುಗಳನ್ನ ತಾಗಿಸಿ ನೆಕ್ಕುತ್ತಿದ್ದ ರುಚಿ, ಬಿಸಿಯನ್ನೇ ಬಾಯಿಯ ಗಾಳಿಯಲ್ಲಿ ಊದಿ ಊದಿ, ತುತ್ತುಗಳನ್ನ ಬಾಯೊಳಗಿಟ್ಟು ನಿಮಿಷಗಟ್ಟಲೆ ಸವಿಯುತ್ತಿದ್ದ ಸವಿ ಆಹಾ!! ಈಗಲೂ ಬಾಯಿ ನೀರು ಬಂತು ನೋಡಿ. ತುಪ್ಪದ ಘಮದೊಂದಿಗೆ, ರುಚಿಕಟ್ಟಾದ, ಶುಚಿಯಾದ ದೊನ್ನೆ ಉಪ್ಪಿಟ್ಟು ಅದಕ್ಕೆ ತಾತ ಕೊಡುತ್ತಿದ್ದದ್ದು ಒಂದು ದೊನ್ನೆಗೆ ನಾಲ್ಕಾಣೆ ಮಾತ್ರ. ಅಂದಿನ ನಾಲ್ಕಾಣೆಗೆ ನಮ್ಮ ಹೊಟ್ಟೆ ತುಂಬುತ್ತಿದ್ದು ಆದರೆ ಈಗ ಆ ನಾಲ್ಕಾಣೆ ಕಣ್ ಮರೆಯಾಗಿದೆ. ಹೋಟೆಲ್ ಅಜ್ಜಿ ಅದಾವ ಮಂತ್ರವಾಕಿ ತಿಂಡಿ ಮಾಡ್ತಾ ಇತ್ತೋ ಗೊತ್ತಿಲ್ಲ, ಅಷ್ಟು ರುಚಿಯಂತೂ ನಾ ಇದುವರೆಗೂ ಎಲ್ಲಿಯೂ ತಿಂದಿಲ್ಲ, ನಾನು ಕೂಡ ಮಾಡಿಲ್ಲ ಬಿಡ್ರಿ. ಎಷ್ಟೊಂದು ತರಕಾರಿ, ತುಪ್ಪ, ಮಸಾಲೆ ಎಲ್ಲಾ ಇದ್ರೂ..!! ಅಜ್ಜಿ ಹೋಟೆಲ್ ಮುಂದೆ ನಮ್ಮನ್ನೆಲ್ಲ ನೀವಾಳಿಸಿ ಬಿಸಾಕ್ ಬೇಕು.
ನೆನಪಿನ ಹಿತ್ತಲಿಗೆ ಕರೆದುಕೊಂಡು ಹೋಗಿದ್ದು ಸಾಹಿತ್ಯಾಸಕ್ತಿ ಬಳಗ, ಅಲ್ಲಿನ ಉಪ್ಪಿಟ್ಟಿನ ಚರ್ಚೆಗೆ ಈ ದೊನ್ನೆ ಉಪ್ಪಿಟ್ಟು ಬಂದಿದೆ ....