Thursday, June 23, 2011

ಗುಡಿಸಲಿನಲ್ಲೊಂದು ನಂದಾದೀಪ


ದೀಪ-೨
ಮುಂದುವರಿದ ಭಾಗ.....

ಬೇಸರಗೊಂಡ ಚೆನ್ನಮ್ಮಾ ಅಯ್ಯೋ.!!! ನಾನು ಯಾವತ್ತೂ ತಗೆದುಕೊಳ್ಳದವಳು ಪಾಪಿ... ಯಾಕೆ ಆ ಪೆನ್ನು ತಗೊಂಡೆ, ನನ್ಗೆ ಏನು ಹಿಡಿದಿತ್ತೋ...ಭೂತ ಛೇ...ಎಂತಾ ಎಡವಟ್ಟು ಮಾಡಿಕೊಂಡುಬಿಟ್ಟೆ. ಈಗ ಕೈಲಿದ್ದ ಕೆಲಸನೂ ಹೋಯ್ತು ಇನ್ನು ಆಕೆ ನನ್ನ ಕೆಲಸಕ್ಕೆ ಸೇರಿಸೋದೆ ಇಲ್ಲ ಏನು ಮಾಡುವುದೋ ದೇವರೆ..!!?? ಎಂದು ಮನಸಲ್ಲೇ ಬಡಬಡಾಯಿಸಿಕೊಂಡು ಕಣ್ಣಲ್ಲಿ ಮಳೆಹನಿ ಸುರಿಸುಕೊಂಡು ಹೋಗ್ತಾ ಇರುವಾಗ ನೆನಪಾಗಿದ್ದು...... ಮತ್ತೊಂದು ಮನೆಯಲ್ಲಿ ಕೆಲಸ ಮಾಡುವ ಮನೆಯೊಡತಿ....... ದಡಬಡನೆ ಹೋಗಿ ಆಕೆಯತ್ತಿರ ಇರುವ ವಿಷಯವನ್ನೇಲ್ಲಾ ಹೇಳಿ ಅಮ್ಮಾವರ್ರೆ ..!! ನಾನು ತಪ್ಪು ಮಾಡಿಬಿಟ್ಟಿದ್ದೀನಿ. ಏನೋ ಮಗ ಪರೀಕ್ಷೆ ಚೆನ್ನಾಕಿ ಬರಿಲಿ ಅಂತಾ ಹಂಗೆ ಮಾಡಿದೆ, ಆಮೇಲೆ ಆ ಯಜಮಾನಮ್ಮ ನಿಮ್ಗೆ ತಿಳಿಸಿದ್ರೆ ನನ್ನ ಕೆಲಸದಿಂದ ತೆಗೆಯೊಲ್ಲಾ ತಾನೇ...??? ಎಂದು ಒಂದೇ ಉಸಿರಿಗೆ ಕೇಳಿ ಗಳಗಳನೇ ಅತ್ತುಸುರಿದು ಕೇಳುತ್ತಿದ್ದಾಗ, ಈ ಮನೆಯೊಡತಿ ಬಲು ತಾಳ್ಮೆಯಿಂದ ತೊಂದರೆ ಇಲ್ಲ ನಿನ್ನ ಮಗಳ ಪರೀಕ್ಷೆ ತಾನೇ.....ಬಾ ನಾನು ಏನು ಬೇಕೋ ಕೊಡ್ತೀನಿ ಎಂದೇಳಿ ಅವರ ಮನೆಯಲ್ಲಿದ್ದ ಪರೀಕ್ಷಾ ಒತ್ತಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ಜಾಮಿಟ್ರಿ ಎಲ್ಲವನ್ನು ಒಂದು ಬ್ಯಾಗಿಗೆ ಹಾಕಿ ಕೊಟ್ಟು ಕಳಿಸುತ್ತಾಳೆ. ಸಂತಸದಿ ಹೊರಟ ಚೆನ್ನಮ್ಮ....ಅಯ್ಯೋ...!!! ಸಾಹುಕಾರರು ಎಲ್ಲ ಒಂದೇ ತರ ಇರ್ತಾರೆ ಅಂತ ತಿಳ್ಕಂಡಿದ್ದೇ ಹಂಗೇನಿಲ್ಲಾ...ಪಾಪ ಒಳ್ಳೆ ಜನನೂ ಅವ್ರೆ......ಎಂದು ಸಂತಸದಿ ಅಲ್ಲೂ ಆನಂದಭಾಷ್ಪದ ಹನಿ ಸುರಿಸುತ್ತ ಮನೆಕಡೆ ಹೊರಟಳು.

ಮನೆಗೆ ಒಂದೇ ಉಸಿರಿಗೆ ಬಂದವಳು ಮಗಳ ಕೈಗೆ ಒಡತಿ ಕೊಟ್ಟಿದ್ದ ಬ್ಯಾಗನ್ನಿತ್ತಳು. ಅತ್ತ ಮಗಳು ತೆಗೆಯುತ್ತ ನೋಡಿದಳು ಅಯ್ಯೋ!!!! ಅಮ್ಮ ಇಷ್ಟೊಂದು ಚೆನ್ನಾಗಿರೋ ಒತ್ತಿಗೆ, ಪೆನ್ನು ಎಲ್ಲಾ ಎಲ್ಲಿ ಸಿಕ್ತು, ನಾನು ಇಷ್ಟು ಚೆನ್ನಾಗಿರೋದ್ರಲ್ಲಿ ಬರಿತೀನಾ? ಆಶ್ಚರ್ಯಚಕಿತಳಾಗಿ ಒಂದೇ ಸಮನೇ ಆ ವಸ್ತುಗಳನ್ನೇ ನೋಡುತ್ತಲಿದ್ದಳು !! ಅಮ್ಮ ಇರುವ ವಿಷಯವನ್ನೇಳಿ ಸಮಾಧಾನಿಸಿ ನೀನು ಚೆನ್ನಾಗಿ ಓದು ಹೀಗೆ ಯಾರಾದರೂ ಸಹಾಯ ಮಾಡ್ತಾರೆ. ಅಮ್ಮನ ಆಸೆ ಶಬರಿಯ ಕಣ್ಣಲ್ಲೇ ಎದ್ದು ಕಾಣುತ್ತಿತ್ತು.

ಮನದಾಳದಲ್ಲಿರುವ ಆಸೆ, ಹಂಬಲ, ಪ್ರೀತಿ, ನೋವು ಎಲ್ಲವೂ ಕಣ್ಣಲ್ಲೇ ಕಾಣುತ್ತಂತೆ ಹಾಗೆ ಶಬರಿ ತನ್ನ ಕಣ್ಣಲ್ಲೇ ಎಲ್ಲವನ್ನು ಹುದುಗಿಟ್ಟುಕೊಂಡಿದ್ದಳು, ಅವಳ ಮನದಾಳದ ಆಶಾಗೋಪುರ ಕಟ್ಟಿ ಮನದಾಸೆ ಎಲ್ಲವೂ ನಿಜವಾಗಿ ನೆರೆವೇರುವುದೆಂಬ ನಿರೀಕ್ಷೆಯಲ್ಲಿದ್ದಳು. ಕ್ಷಣಗಣನೆ ಪರೀಕ್ಷೆಗೆ ಮೊದಲು ಪರೀಕ್ಷೆಗೆ ಬಂದವಳೇ ದೇವರನ್ನು ಪ್ರಾರ್ಥಿಸಿ ಮನೆಯೊಡತಿ ಕೊಟ್ಟಿದ್ದ ಆ ಒತ್ತಿಗೆ ಹಾಗೂ ಪೆನ್ನುಗಳಿಗೆ ನಮಸ್ಕರಿಸಿ ಬರೆಯಲು ಪ್ರಾರಂಭಿಸುತ್ತಾಳೆ. ಬರೆದ ಬರವಣಿಗೆ ಮುತ್ತು ಪೋಣಿಸಿ ದೇವರಿಗೆ ಮಾಲೆ ಮಾಡಿಬಿಡುವ ಶಬರಿ ಅಕ್ಷರ ಪಲ್ಲಕ್ಕಿಯಲ್ಲಿ ತಾಯಿ ಶಾರದೆಯನ್ನು ಕೂರಿಸಿಬಿಡುತ್ತಾಳೆ. ಎಲ್ಲ ವಿಷಯಗಳ ಪರೀಕ್ಷೆ ಬರೆದು ಇನ್ನೇನು ಅಂದು ಕೊನೆ ಪರೀಕ್ಷಾ ದಿನ ಅಪ್ಪ ಅಮ್ಮ ಮಗಳಿಗಾಗಿ ಕಾಯುತ್ತಲಿದ್ದಾರೆ, ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಬರೆದು ಸಂತಸದಿ ಶಾಲೆಯಿಂದ ಹೊರಗೆ ಬರುತ್ತಿದ್ದಂತೆ.....ಶಬರಿ ಪಾಸ್ ಆಯ್ತಾ....ಏನು ಹೇಳಿದರು ಮೇಸ್ಟ್ರು ಎಂದು ಬಡಬಡಿಸುತ್ತಿದ್ದಂತೆ. ಚೆನ್ನಯ್ಯ ಸ್ವಲ್ಪ ನಿಧಾನ, ಎನ್ನುತ್ತಿದ್ದಂತೆ ಮಗಳು ಅಮ್ಮ ಈ ಪರೀಕ್ಷೆ ಕರ್ನಾಟಕದಲ್ಲಿರೋ ಎಲ್ಲಾ ಮಕ್ಕಳು ಬರೆದಿದ್ದಾರೆ. ಇದು ಪಾಸೋ ಫೇಲೋ ಹೇಳೋಕೆ ಸುಮಾರು ತಿಂಗಳು ಬೇಕು .......... ಎಂದಕೂಡಲೇ ಚೆನ್ನಮ್ಮಗೆ ಬೇಸರ ಛೇ ಇನ್ನು ತಿಂಗಳು ಕಾಯಬೇಕ....?? ಎಂದು ಸಪ್ಪೆ ಮೋರೆಯಲ್ಲೇ ಮನೆ ಕಡೆ ನಡೆಯುತ್ತಾಳೆ...

ಇತ್ತ ಅವರ ದೈನಂದಿನ ಜೀವನ ನೆಡೆಯುತ್ತಲಿರುತ್ತೆ.......ಶಬರಿ ಅಮ್ಮನೊಟ್ಟಿಗೆ ಕೆಲಸ, ಜೊತೆಗೆ ಅಪ್ಪನೊಟ್ಟಿಗೆ ಕೆಲಸ ರಜೆಯಾದ್ದರಿಂದ ಇಬ್ಬರಿಗೂ ಕೈಜೋಡಿಸಿ ತಮ್ಮ ತಂಗಿಯನ್ನು ಸಲಹುತ್ತಲಿರುತ್ತಾಳೆ....... ಹೀಗೆ ದಿನಗಳು ಕಳೆಯುತ್ತಲಿದ್ದಂತೆ........... ನಾಳೆ ಪರೀಕ್ಷೆಯ ಫಲಿತಾಂಶ ಎಂದು ಅವರ ಶಾಲೆಯ ಮಾಸ್ಟರು ತಿಳಿಸಿದ್ದೇ ತಡ, ಏನಾಗಿದೆಯೋ ಏನೋ ಸದ್ಯ ಅವಳು ಪಾಸಾದರೆ ಸಾಕು, ನಮ್ಮಂತ ಬಡವರು ಪಾಸಾಗೋದೆ ಕಷ್ಟ ಅಂತಹದರಲ್ಲಿ ಇವಳು ಏನು ಮಾಡಿದ್ದಾಳೋ ಕಾಣೆ...!!! ಎಂದು ಸಂಜೆ ಮನೆಗೆ ಬರುವಾಗ ದೇವರ ಗುಡಿಗೆ ಹೋಗಿ ಹುಂಡಿಗೆ ಒಂದು ರೂಪಾಯಿ ಹಾಕಿ ದೇವರೆ ನೋಡು ನಾನು ಇದುವರೆಗೂ ಏನು ಕೇಳಿಲ್ಲ, ದಯವಿಟ್ಟು ನನ್ನ ಮಗಳನ್ನ ಬರಿ ಪಾಸ್ ಮಾಡಿಸಿಬಿಡು ಸಾಕು... ಮುಂದಕ್ಕೆ ಓದಿಸೋ ಆಸೆ ಇದೆ. ಸರ್ಕಾರಿ ಕಾಲೇಜ್ ಇದೆ ಹೇಗೋ ಮಾಡಿ ಸೇರುಸ್ತೀನಿ ಎಂದು ಬೇಡಿಕೊಂಡು ಮನೆಗೆ ಬರುತ್ತಾಳೆ. ಮಗಳಿನ್ನು ಕೆಲಸದಿಂದ ಬಂದಿಲ್ಲ.... ಚೆನ್ನಮ್ಮ ಗಂಡನೊಟ್ಟಿಗೆ ಮಾತನಾಡುತ್ತ... ಅಡಿಗೆ ತಯಾರಿ ಮಾಡುವಾಗ್ಲೆ.... ಯಾರೋ ಬಾಗಿಲು ತಟ್ಟಿದ ಶಬ್ದ ಕೇಳುತ್ತೆ..... ಹೋಗಿ ನೋಡ್ತಾರೆ!!?? ಯಾರೋ ಮೈಕ್ ಹಿಡ್ಕೊಂಡು.... ನಾಲ್ಕಾರು ಜನ ಅದೇನೋ ಕ್ಯಾಮರಾ ಹೊತ್ತ್ಕೊಂಡು ಬಂದಿದಾರೆ.... ಯಾಕೆ ಯಾರು ನೀವು ಏನಾಗ್ಬೇಕಿತ್ತು ಎಂದೇಳುವಾಗಲೇ ನೋಡಿ ನಾವು ದೂರದರ್ಶನದಿಂದ ಬಂದಿದ್ದೀವಿ.... ಶಬರಿ ಅನ್ನೋರ ಮನೆ ಇದೆಯೇ ಎಂದ ಕೂಡಲೆ ಚೆನ್ನಮ್ಮಗೆ ಗಾಬರಿ ಗಂಡನನ್ನು ಒಂದೇ ಉಸಿರಿಗೆ ಕರೆದು...... ಅವನು ದಿಗ್ಬ್ರಾಂತನಾಗಿ ಏನಾಯಿತು...?!! ನನ್ನ ಮಗುವಿಗೆ ಯಾಕೆ ಬಂದಿರೀ ನೀವು ಉಸಿರುಗಟ್ಟಿ ಕೇಳುತ್ತಲೇ ಅವರು ಏನಿಲ್ಲ ಗಾಬರಿಯಾಗಬೇಡಿ. ನಿಮ್ಮ ಮಗಳು ಎಸ್. ಎಸ್. ಎಲ್.ಸಿ ಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಬಂದಿದ್ದಾಳೆ......ಹಾಗಂದರೆ ಏನು...? ಎಂದ ಚೆನ್ನಮ್ಮನ ಪ್ರಶ್ನೆಗೆ ದೂರದರ್ಶನದವರು ಉತ್ತರಿಸಿ.... ಎಲ್ಲಿ ನಿಮ್ಮ ಮಗಳು ಅವರೊಟ್ಟಿಗೆ ಮಾತನಾಡಬೇಕೆಂದ ಕೂಡಲೆ ಅಪ್ಪ ದೌಡಾಯಿಸಿ ಕೆಲಸ ಮಾಡುತ್ತಿದ್ದ ಮನೆಯಿಂದ ಮನೆಯೊಡತಿಗೇಳಿ ಮಗಳನ್ನ ಕರೆತಂದನು.....

ಶಬರಿಗೂ ಸಂತಸವೇ ಸರಿ..... ಅಲ್ಲಿ ದೂರದರ್ಶನದವರು ನಿಮ್ಮ ಸಾಧನೆಯ ಗುಟ್ಟು...? ಈ ಪ್ರಶ್ನೆಗೆ ಉತ್ತರ ನನ್ನಮ್ಮ,.., ..., ನನ್ನಮ್ಮನ ಆಸೆ..... ಆಕೆಗೆ ನಾನು ಚೆನ್ನಾಗಿ ಓದಿ ಬಡವರೂ ಓದಬಲ್ಲೆವೆಂಬ ಸಾಧನೆಯನ್ನು ಮಾಡಿ ತೋರಿಸು ಎಂಬ ಇಚ್ಚೆ ನನ್ನಿಷ್ಟು ಕೆಲಸ ಮಾಡಿಸಿತು.

ಎಲ್ಲದರಲ್ಲೂ ೧೦೦ಕ್ಕೆ ೧೦೦ ಅಂಕ ಹೇಗೆ ಸಾಧ್ಯ.....? ನನ್ನಮ್ಮ ಕೆಲಸ ಮಾಡುವ ಮನೆಯೊಡತಿ ಸಹೃದಯಿ ನನ್ನ ಪರೀಕ್ಷೆಗೆಂದೇ ಪೆನ್ನು, ಪೆನ್ಸಿಲ್, ಒತ್ತಿಗೆ ಎಲ್ಲವನ್ನೂ ಸಂತಸದಿ ಕಳುಹಿಸಿ ನನಗೆ ಹರಸಿದ್ದರು, ಆಕೆಯ ಆಶಿರ್ವಾದ ನನ್ನ ಅಂಕಕ್ಕೆ ಕಾರಣ ಎಂದು ಹೇಳುತ್ತಿದ್ದಂತೆ ಆ ಮನೆಯೊಡತಿ ಶಾರದಮ್ಮ ವಿಷಯ ತಿಳಿದಿದ್ದರಿಂದ ಈ ಪುಟ್ಟ ಗುಡಿಸಲತ್ತ ಬರುತ್ತಿದ್ದಳು. ಅಷ್ಟರಲ್ಲೇ ಆ ಪುಟ್ಟ ಶಬರಿಯ ಮಾತು ಆಕೆಯ ಕಿವಿಗೆ ಬೀಳುತ್ತಿದ್ದಂತೆ...... ಆನಂದ ಭಾಷ್ಪದಿ ನಲಿದು ಶಬರಿಯನ್ನಾಲಂಗಿಸಿ ಮುದ್ದಾಡಿದಳು. ನೆರೆದಿದ್ದವರೆಲ್ಲರ ಸಾಕ್ಷಿಯಾಗಿ ಈ ಮಗುವಿಗೆ ಇಂದಿನಿಂದ ಎಷ್ಟು ಖರ್ಚುವೆಚ್ಚವಾಗುತ್ತೋ ನಾನೇ ಭರಿಸಿ ಅವಳ ವಿದ್ಯಾಭ್ಯಾಸ ಮಾಡಿಸುತ್ತೇನೆಂದು ಆ ಮನೆಯೊಡತಿ ಶಾರದೆ ಒಪ್ಪಿಕೊಂಡರು. ಇಂತಹ ಸಂತಸದ ಸುದ್ದಿ ಯಾರಿಗೆ ತಾನೆ ಖುಷಿ ನೀಡುವುದಿಲ್ಲ ಹೇಳಿ..? ಶಬರಿ, ಅಪ್ಪ, ಅಮ್ಮ ಎಲ್ಲರ ಸಂತಸ ಎಲ್ಲೆ ಮೀರಿತ್ತು...!!!

ಈಗ ಶಬರಿಗೆ ಅಮ್ಮನ ಆಸೆಯ ಜೊತೆಗೆ ಶಾರದೆಯ ಮನದಾಳಕ್ಕೆ ಖುಷಿ, ಜೊತೆಗೆ ಸಾಧಸಿ ತೋರುವ ಭಾರ ಹೆಚ್ಚಾಯಿತು. ಶಾರದೆಯವರು ಹಣ ಕೊಟ್ಟು ಓದಿಸುತ್ತಾರೆಂದು ಶಬರಿ ಯಾವುದನ್ನೂ ದುರುಪಯೋಗ ಪಡಿಸಿಕೊಳ್ಳಲಿಲ್ಲ...... ಶಬರಿ ಸರ್ಕಾರಿ ಕಾಲೇಜಿಗೆ ಸೇರಿದಳು ಅದಕ್ಕೆ ತಕ್ಕಂತ ಖರ್ಚು ವೆಚ್ಚವನ್ನು ಭರಿಸಿದ ಶಾರದೆಗೆ ಮನಸಿಲ್ಲ ಒಳ್ಳೆ ಕಾಲೇಜಿಗಾದರೂ ಸೇರು ಎಂಬ ಅಭಿಲಾಷೆ ಅವರದು.....ಆದರೆ ಶಬರಿಯದು ಒಂದೇ ನಿರ್ಧಾರ ಓದುವ ಮನಸ್ಸು, ಹುಮ್ಮಸ್ಸು ಎಲ್ಲಾದರೇನು ಓದಿ ತೋರಿಸುತ್ತೇನೆ ಎಂಬ ಛಲ ಅವಳಲ್ಲಿದ್ದ ಕಾರಣ ಸರ್ಕಾರಿ ಅಥವಾ ಖಾಸಗಿ ಕಾಲೇಜಿನ ಹಿರಿಮೆ, ಕೀಳರಿಮೆ ಎಲ್ಲೂ ಬರಲೇ ಇಲ್ಲ......

ಮೊದಲ ವರ್ಷ ಪಿ.ಯು.ಸಿ ಮುಗಿಸಿದ್ದಾಳೆ. ದ್ವಿತೀಯ ಪಿ.ಯು.ಸಿ ಇದು ಜೀವನದ ಪ್ರಮುಖ ಘಟ್ಟ. ಜೀವನದ ಮುಂದಿನ ಹೆಜ್ಜೆಗೆ ಇದು ಅದ್ಭುತ ಮಹತ್ವ ಹೊಂದಿರುವುದು ಪಿ.ಯು.ಸಿ. ಇಲ್ಲಿ ಒಮ್ಮೆ ಶ್ರದ್ಧೆ, ಆಸೆ, ಛಲ ಎಲ್ಲವನ್ನೊಂದಾಗಿಸಿ ಓದಿದರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಎಂಬುದು ಮಾತ್ರ ಸತ್ಯ......... ಇದೆಲ್ಲದರ ಅರಿವು ಶಬರಿಯಲ್ಲಿ ಮನೆ ಮಾಡಿರುವುದಂತು ನಿಜ. ಬಡತನದಲ್ಲಿ ಎಲ್ಲದಕ್ಕೂ ವಿಶೇಷತೆ ಇರುತ್ತದೆ..... ಸುತ್ತಮುತ್ತಲಿನಲ್ಲಿದ್ದ ಮನೆ ಮಕ್ಕಳು ಪಿ.ಯು.ಸಿ ಎಂದರೆ ಎಲ್ಲರೂ ದೊಡ್ಡ ದೊಡ್ಡ ಕಾಲೇಜಿನಲ್ಲಿರೋ ಉಪನ್ಯಾಸಕರ ಹತ್ತಿರ ಟೂಷನ್ನಿಗೆಂದು ಹೋಗುತ್ತಾರೆ. ಆದರೆ ಶಬರಿಗೆ ಟೂಷನ್ನಿಗೆ ಹೋಗೋಕೆ ಹಣದ ಅಭಾವ, ಕೊಡುವವರು ಇದ್ದಾರೆಂದು ಅದನ್ನ ಬಳಸಿಕೊಳ್ಳುವ ಮನಸಿಲ್ಲ ಕಾರಣ ಅವರು ಎಂತಹವರೇ ಆಗಲಿ ಕೊಡುತ್ತಾರೆಂದು ನಾವು ಈಗ ಪಡೆದರೆ ನಾಳೆ ಹೇಗೋ ಏನೋ ಅವರ ಹಂಗಿನಲ್ಲಿರಬೇಕಲ್ಲಾ ಎಂಬ ಚಿಂತೆ..... ಹಂಗಿನ ಅರಮನೆಗಿಂತ ಈ ಗುಡಿಸಿಲಿನರಮನೆಯೇ ವಾಸಿ ಎಂದು ಭಾವಿಸಿದ್ದಳು.... ಆ ಪುಟ್ಟ ಮನದಲ್ಲಿ ಮಹತ್ತರ ಆಶಾವಾದವಿದೆ. ಅದನ್ನು ನಿಭಾಯಿಸಿ ಮುಂದುವರಿವುದೇ ಒಂದು ದೊಡ್ಡ ಸಂಗತಿ.

ಶಬರಿಗೆ ಓದುವ ಹಂಬಲ, ವಿದ್ಯೆ ಯಾರ ಸೊತ್ತು ಹೇಳಿ, ಸರಸ್ವತಿ ಒಲಿಯುವವರಿಗೆ ಖಂಡಿತಾ ತಡಮಾಡದೆ ಯಾವುದೇ ಎಡೆತೊಡೆ ಇಲ್ಲದೆ ಅವರ ಮೆದುಳಿನಲ್ಲಿ ಉಳಿದುಬಿಡುತ್ತಾಳೆ.. ಅಮ್ಮ ಅಪ್ಪ ಮಗಳೇ ಹೇಗೆ ಓದುತ್ತೀಯಾ..... ಅದು ಏನು ಇದು ಏನು, ನೀನು ಓದಲು ಟೂಷನ್ನಿಗೇನಾದರು ಹೋಗಬೇಕಾ..? ಯಾವ ಗಂಧ ಗಾಳಿಯೂ ಇಲ್ಲ ಶಬರಿ ತಾನೇ ಸ್ವಂತ ಬುದ್ಧಿಯಿಂದ ಓದುವ ನಿಟ್ಟಿನಲ್ಲಿರುವಳು.

ಕಾಲೇಜಿನಲ್ಲಿ ಒಬ್ಬರಿಗೊಬ್ಬರ ಪೈಪೋಟಿ ಸರ್ಕಾರಿ ಕಾಲೇಜುಗಳಲ್ಲಿ ಮಧ್ಯಮವರ್ಗದ ಮಕ್ಕಳೂ ಸಹ ಇದ್ದಾರೆ. ಇದ್ದಿದ್ದರಲ್ಲಿ ಅವರಿಗಾವ ಕೊರತೆಯೂ ಇಲ್ಲ, ಹಲವರದು ಶಬರಿಯಷ್ಟು ಯೋಚನೆಗೀಡು ಮಾಡುವ ಜೀವನ ಶೈಲಿಯೇನಲ್ಲ...... ಅಮ್ಮ ಬೆಳಗೆದ್ದರೆ ದುಡಿಮೆ.... ಅಪ್ಪ ಕೈಲಾಗದವನು ತಾನೇ ಮನೆಕೆಲಸ ಮುಗಿಸಿ ಅಮ್ಮನಿಗೂ ಕೈ ಜೋಡಿಸಿ ಕಾಲೇಜಿಗೆ ಬರಬೇಕು, ಕಾಲೇಜು ಸುಮಾರು ೪ ಕಿ,ಮೀ ಇದೆ ಯಾವ ಬಸ್ ವ್ಯವಸ್ಥೆಯಿಲ್ಲ, ಕಾಲೇ ಚಕ್ರ ಎಂದು ದಾರಿ ಹಿಡಿಯುವುದವಳ ಕೆಲಸವಾಗಿತ್ತು.... ದಿನಕ್ಕೆ ೮ಕಿ.ಮಿ ನೆಡೆದು ಬಂದರೂ ಸ್ವಲ್ಪವೂ ಆಯಾಸ ತೋರದೆ ಮನೆಕೆಲಸ, ಓದು ಎಲ್ಲವನ್ನು ಸಮದೂಗಿಸಿಕೊಂಡು ಬಂದಳು.......

ಕಾಲೇಜಿನಲ್ಲಿ ಗುರುಗಳಿಗೆ ಅಚ್ಚುಮೆಚ್ಚಾದ ಶಬರಿ ಎಂದೂ ಹಿಂದೆ ಉಳಿಯಲಿಲ್ಲ ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿಗೆ ಹೆಸರನ್ನೂ ತಂದುಕೊಟ್ಟಳು.....ಇನ್ನೇನು ಪರೀಕ್ಷೆ ಹತ್ತಿರಬರುತ್ತಲಿದೆ ಮೊದಲಿನಂತೆ ಅಮ್ಮ ಮಗಳಿಗೆ ಕೆಲಸಕ್ಕೆ ಬರಬೇಡವೆಂದೇಳಿ ಪರೀಕ್ಷೆಯತ್ತ ಗಮನ ಕೊಡಲು ಹೇಳಿದಳು....ಅಮ್ಮನ ಆಜ್ಞೆಯಂತೆ ಶಬರಿ ತನ್ನ ವಿದ್ಯೆಯತ್ತ ಗಮನಕೊಟ್ಟಳು...ಶಬರಿ ಚೆನ್ನಾಗಿ ಓದುತ್ತಲಿದ್ದಳು ಹೆಸರು ಸಹ ಗಳಿಸಿದ್ದಳಲ್ಲ ಕಾಲೇಜಿನಲ್ಲಿ, ಅದಕ್ಕೆ ಒಳ್ಳೆ ಸ್ನೇಹಿತರನ್ನೂ ಸಹ ಗಳಿಸಿದ್ದಳು...... ಪರೀಕ್ಷಾ ತಯಾರಿಗಾಗಿ ರಜೆ ಕೊಟ್ಟಿದ್ದರಿಂದ ಸ್ನೇಹಿತರಿಗೆ ಕೆಲವು ವಿಷಯಗಳಲ್ಲಿ ಶಬರಿಯಿಂದ ಮಾಹಿತಿ ಪಡೆಯಲು ಅವಳ ಮನೆಯತ್ತಿರ ಬರುತ್ತಾರೆ. ಅದುವರೆಗೂ ಅವಳ ಮನೆ ಹೀಗಿರುತ್ತೆಂಬ ಕಲ್ಪನೆಗೂ ಬಾರದ ಸ್ನೇಹಿತರು ಅವಕ್ಕಾದರು....ಛೇ!!!! ಇಂತಾ ಮನೆನಾ ಅದು ಹೇಗಿದ್ದಾಳೋ ಇವಳು ಇಲ್ಲಿ ಅಂತಾ.. ಒಬ್ಬ, ಮತ್ತೊಬ್ಬ....ಅಯ್ಯೋ ಕರ್ಮ ನಾವು ಈ ಗುಡಿಸಿಲಿಗೆ ಬಂದೆವಲ್ಲಪ್ಪಾ,ಅವಳು ಮನೆ ವಿಳಾಸ ಕೊಟ್ಟಿದ್ದಳೇ ಹೊರತು, ತನ್ನ ಮನೆ ಹೀಗೆ, ಮನೆಯವರು ಹೀಗೆಂದು ಹೇಳೇ ಇರಲಿಲ್ಲ, ಅದು ಅವರಿಗ್ಯಾಕೆ ಹೇಳಬೇಕು ನಾ ಹೋಗುವುದು ಓದಲು ಮನೆ ವಿಚಾರ ಚರ್ಚಿಸುವುದಕ್ಕಲ್ಲವೆಂಬುದು ಅವಳ ವಾದ. ಮನೆಯತ್ತಿರ ಬಂದಿದ್ದ ಸ್ನೇಹಿತರನ್ನು ಕಂಡು ಖುಷಿಯಾಗಿದ್ದ ಶಬರಿ ಅವಳ ಸಂತಸಕ್ಕೆ ಒಮ್ಮೆ ರಪ್ಪನೇ ಮುಖಕ್ಕೆ ನೀರೆರಚಿದಂತಾಯಿತು ಕಾರಣ ಅವಳ ಸ್ನೇಹಿತ ನೀನಿಂತ ಮನೆಯಲ್ಲಿರುವುದು ನಮಗೆ ಗೊತ್ತಿರಲಿಲ್ಲ, ಛೇ..... ಇದು ಒಂದು ಮನೆಯಾ... ಅದು ಹೇಗಿದ್ದೀಯೋ.... ನಾವು ಇಲ್ಲಿಗೆ ಬರೋಲ್ಲ ಸಾಕು ನಿನ್ನ ಸಹವಾಸವೆಂದು ಹೊರಟೇ ಬಿಟ್ಟರು.........ಅವರ ಮಾತನ್ನು ಕೇಳಿಸಿಕೊಂಡ ಅಮ್ಮ ಒಳಗೆ ಮರುಗುತ್ತಿದ್ದಳು.... ಛೇ ನಾವು ಇಷ್ಟು ಬಡವರಾಗಿದ್ದಕ್ಕೆ ತಾನೇ ನನ್ನ ಮಗಳಿಗೆ ಸ್ನೇಹವೂ ಸಿಗದಂತಾಯಿತು ಎಂದು ಮಮ್ಮಲ ಮರುಗಿದಳು. ಆದರೆ ಶಬರಿ ಕಿಂಚಿತ್ತೂ ಬೇಸರಿಸದೆ ಹೋದರೆ ಹೋಗು ತಿಳಿದಿದೆ ನನಗೆ ಕಾರಣ, ನಾವು ಇರುವುದೇ ಹೀಗೆ ನಮ್ಮ ಜೀವನವೇ ಹೀಗೆ. ಅವರಲ್ಲೂ ಏನಾದರೊಂದು ಕಷ್ಟ ಇರುತ್ತೇ ಹಾಗಂತ ಎಲ್ಲವನ್ನು ಬಿಟ್ಟು ಬರುತ್ತಾರ... ಹಾಗೇ ನನ್ನ ಮನೆ ಬಡತನದಲ್ಲೇ ಇರಬಹುದು............ ನಮ್ಮ ಮನಸ್ಸು, ಹೃದಯ ಯಾವಾಗಲೂ ಶ್ರೀಮಂತವಾಗಿದೆ ಎಂದು ನೆಡೆದದ್ದನ್ನು ಅಲ್ಲೇ ಬಿಟ್ಟು ತನ್ನ ಕೆಲಸದಲ್ಲಿ ತೊಡಗುವಳು........

ಪರೀಕ್ಷಾ ದಿನ ಎಲ್ಲರೂ ಸೇರಿದ್ದರು, ಅಂದು ಮನೆಯತ್ತಿರ ಬಂದಿದ್ದ ಸ್ನೇಹಿತರೆಲ್ಲ ಕಾಲೇಜಿನಲ್ಲಾಗಲೇ ಗುಲ್ಲೆಬ್ಬಿಸಿ ಬಿಟ್ಟಿದ್ದರು, ಎಲ್ಲರೂ ಇವಳನ್ನೇ ತಿನ್ನುವಂತೆ ನೋಡುತ್ತಿದ್ದಾಗ ಎಲ್ಲವನ್ನು ಅರ್ಥಮಾಡಿಕೊಂಡಳು. "ಬಂದದ್ದೆಲ್ಲಾ ಬರಲಿ ಭಗವಂತ ದಯೆ ಇರಲಿ" ನನಗೂ ರಾಮ ಬರುವಾಗ ಶಬರಿಯಲಿದ್ದ ಸಂತಸದಂತೆ ನನಗೂ ಒಳ್ಳೆ ಸಮಯ ಬಂದೇ ಬರುವುದು ಅಂದು ನಾನು ಸುಖಿಯಾಗಿ ಖುಷಿ ಪಡುವೆ ಎಂದು ಮನಸಲ್ಲೇ ನೊಂದಳು. "ಬಡವರಾದರೇನು ನನ್ನಲ್ಲಿ ವಿದ್ಯೆ ಇಲ್ಲವೇ..?" ಯಾರೊಬ್ಬರು ಮಾತನಾಡಲಿಲ್ಲ, ಮೊದಲೆಲ್ಲಾ ಮೇಲೆ ಬಿದ್ದು ಬಿದ್ದು ಮಾತನಾಡುವವರ ಚಹರೇಯೇ ಇಲ್ಲಾ. ಏನು ನಾನು ಗುಡಿಸಲಲ್ಲಿರುವುದೇ ಮಹಾಪರಾಧವೇ... ಬಡತನ ನಮಗೆ ಶಾಪವೇ..? ನನ್ನ ಸ್ನೇಹಕ್ಕೂ ನನ್ನ ಮನೆಗು ಸಂಬಂಧವೇನು ಏಕೆ ಈ ಜನ ಹೀಗೆ...?? ಶಬರಿ ಮನಸಲ್ಲೇ ನೂರೆಂಟು ಪ್ರಶ್ನೆ ಉತ್ತರ ಮಾತ್ರ ಸಿಗಲೇ ಇಲ್ಲ. ಸ್ವಲ್ಪ ಹುಸಿ ಕೋಪ ಒಮ್ಮೆ ಮನಸಲ್ಲಿ ಹಾದು ಹೋಯಿತು. ಅಲ್ಲೇ ಇದ್ದ ಸ್ನೇಹಿತೆಯನ್ನು ಇವಳಾಗಿ ಇವಳೇ ಮಾತನಾಡುಸುತ್ತಾಳೆ ರೂಮ್ ನಂ. ೧೮ ಎಲ್ಲಿದೆ ಯಾವ ಕಡೆ ಹೋಗಬೇಕೆಂದು..!! ಅಲ್ಲವೇ..!!! ಶಬರಿ ನೀನು ಹೋಗಿ ಹೋಗಿ ಅಂತಾ ಜಾಗದಲ್ಲ ಇರೋದು ನಿಮ್ಮಪ್ಪ ಅಮ್ಮನಿಗೇನು ಸ್ವಲ್ಪ ಚೆನ್ನಾಗಿರೋ ಮನೆ ಬಾಡಿಗೆ ತಗೊಳ್ಳೋಕೆ ಎಂದಾಗ, ಇವಳಿಗೆಲ್ಲಿಲ್ಲದ ಕೋಪ ಬಂದು ಜೋರಾಗಿ ಚೀರಿದಳು........ ನಾವು ಯಾವ ಮನೆಯಲ್ಲಿದ್ದರೇನು ಅದು ನನ್ನಿಷ್ಟ......ಇದನ್ನೆಲ್ಲಾ ಸಾರಿದರಲ್ಲ ಆ ಸ್ನೇಹಿತರಿಗೇನು ಕೆಲಸ ಇಲ್ಲವಾ....? ನಾನು ಆ ಮನೆಯಲ್ಲಿರೋಳು ನಿಮಗೆಲ್ಲಾ ಏನು ಕಷ್ಟ.... ಇಷ್ಟು ನೀಚಮಟ್ಟಕ್ಕೆಲ್ಲಾ ಯೋಚಿಸೋ ನೀವೆಲ್ಲಾ ನನ್ನ ಸ್ನೇಹಿತರೆ ಅಲ್ಲವೆಂದು ರಭಸದಲ್ಲಿ ಪರೀಕ್ಷಾ ಕೊಠಡಿ ಹುಡುಕುತ್ತ ನೆಡೆದಳು. ಕೋಪದ ಬಿಸಿ ಇನ್ನೂ ತಣ್ಣಗಾಗಿಲ್ಲ, ಆದರು ಪರೀಕ್ಷೆ ಇದೆ ನನ್ನ ಜೀವನದ ಉದ್ದೇಶದೆಡೆಗೆ ಗಮನ ಕೊಡಬೇಕು ಎಂದು ಕೋಪ ತಣ್ಣಗಾಗಿಸಿ ಕುರ್ಚಿಯಲ್ಲಿ ಕುಳಿತಿದ್ದಾಳೆ. ಒಳಗೊಳಗೆ ಏನೋ ಬೇಸರ ಪ್ರಪಂಚ ಇಷ್ಟು ಬದಲಾದರೂ ಈ ಜನ ಬದಲಾಗಲಾರರೆ..? ಇಂತಹವರೆದುರು ನಾ ಸಾಧಿಸಿ ತೋರಬೇಕು ಎಂಬ ಹಠ ಮಾತ್ರ ಅತಿಯಾಯಿತು.

ಸ್ನೇಹಿತರು ಹೀಗೆ ಮಾತನಾಡಿದ್ದು ತಪ್ಪೇ...? ಸ್ನೇಹ ಸಿರಿವಂತರಿಗೆ ಮಧ್ಯಮವರ್ಗದವರಿಗೇ ಮೀಸಲೇ...?
ಮನಸಿನಲ್ಲಿ ನೆಡೆಯುತ್ತಿದ್ದ ಗೊಂದಲ ಪರೀಕ್ಷೆ ಬರೆಯಲು ಬಿಟ್ಟಿತೆ ?
ಎಲ್ಲ ಗೊಂದಲಗಳಿಗೆ ಉತ್ತರ ಮುಂದಿನ ಭಾಗ ದೀಪ-೩ ರಲ್ಲಿ

ಮುಂದುವರಿಯುವುದು...

Thursday, June 16, 2011

ಗುಡಿಸಲಿನಲ್ಲೊಂದು ನಂದಾದೀಪ

ದೀಪ-೧

ಪುಟ್ಟ ಸಂಸಾರ ಗಂಡ ಹೆಂಡತಿ ಮೂರು ಮಕ್ಕಳು.......ಬೃಹತ್ ನಗರದ ಮಧ್ಯದಲ್ಲಿ ಪುಟ್ಟ ಗುಡಿಸಿಲಿನ ವಾಸ, ಸುತ್ತಲೂ ಅದ್ಧೂರಿ ಬಂಗಲೆಗಳಿದ್ದರೂ, ಅಲ್ಲಿ ಕೆಲವೇ ಕೆಲವು ಗುಡಿಸಲುವಾಸಿಗಳಿದ್ದರು. ಆ ಗುಡಿಸಲುಗಳೊಂದರಲ್ಲಿ ಈ ಪುಟ್ಟ ಚೆನ್ನಮ್ಮ ಮತ್ತು ಚೆನ್ನಯ್ಯನ ಕುಟುಂಬ ವಾಸವಾಗಿತ್ತು. ಚೆನ್ನಯ್ಯ ಅಂತ ಆರೋಗ್ಯವಂತನಲ್ಲ ವಾರಕ್ಕೆ ೪ ದಿನ ಕೆಲಸಕ್ಕೋದರೆ ಇನ್ನುಳಿದ ದಿನಗಳು ಮನೆಯಲ್ಲೇ ಆರೋಗ್ಯ ಕೆಟ್ಟು ಮಲಗುವಂತಹವನು ಇದನ್ನು ಕಂಡ ಚೆನ್ನಮ್ಮ ತನ್ನ ಗಂಡನನ್ನು ಮನೆಯಲ್ಲೇ ಉಳಿಯಲು ಬಿಟ್ಟು, ತಾನು ಕೆಲಸಕ್ಕೆ ಹೋಗುತ್ತಲಿದ್ದಳು. ಅಲ್ಲೇ ಸುತ್ತ ಮುತ್ತಲು ಇದ್ದ ಶ್ರೀಮಂತ ಮನೆಗಳಿಗೆ ಕೆಲಸ ಮಾಡುವುದು ಅವಳ ದಿನ ನಿತ್ಯದ ಕೆಲಸ...... ಈ ದಂಪತಿಗಳಿಗೆ ಮುದ್ದಾದ ಮೂರು ಮಕ್ಕಳು ಎರಡು ಹೆಣ್ಣು, ಒಂದು ಗಂಡು..... ದೊಡ್ಡ ಮಗಳು ಶಬರಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಲಿದ್ದಾಳೆ. ಈಕೆಗೆ ಅಮ್ಮನ ಕಷ್ಟ, ಅಪ್ಪನ ಆರೋಗ್ಯ ಎಲ್ಲದರ ಅರಿವಿದೆ. ಅದಕ್ಕಾಗೆ ಅಮ್ಮನೊಟ್ಟಿಗೆ ಕೈಜೋಡಿಸಿ ಅವಳೂ ಸಹ ಮನೆಗೆಲಸಕ್ಕೆ ಹೋಗುತ್ತಲಿರುತ್ತಾಳೆ. ಅಮ್ಮ ಮನೆ ಕಸಗುಡಿಸುತ್ತಿದ್ದರೆ ಶಬರಿ ಪಾತ್ರೆ ತೊಳೆಯುವ ಕೆಲಸ, ಈ ರೀತಿ ಇಬ್ಬರು ಹಂಚಿಕೊಂಡು ಕೆಲಸ ಮಾಡುತ್ತಿರುತ್ತಾರೆ.

ಶಬರಿ ಹೆಸರಿಗೆ ತಕ್ಕಂತೆ ಆ ರಾಮನಿಗಾಗಿ ಕಾದಿದ್ದ ಶಬರಿಯಂತೆ ಇವಳಲ್ಲೂ ಕಾಯುವ ಸಹನೆ ಬಹಳವಿತ್ತು. ಶಬರಿ ಓದುವ ಮನಸ್ಸು ಮಾತ್ರ ಅತಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಇವಳು ಶಾಲೆಯಲ್ಲೇ ಮೊದಲು, ಸಂಜೆ ಮನೆಗೆ ಬಂದೊಡನೆ ಅಮ್ಮನೊಟ್ಟಿಗೆ ಕೆಲಸ ಎಲ್ಲ ಕೆಲಸ ಮುಗಿಸಿ ಬರುವಷ್ಟರಲ್ಲಿ ರಾತ್ರಿ ೮ ಗಂಟೆ ಆನಂತರ ತನ್ನ ಓದಿನ ಕಡೆ ಗಮನ. ಸದಾ ಅಂದಿನ ಪಾಠವನ್ನು ತಪ್ಪದೇ ಓದುತ್ತಿದ್ದ ಶಬರಿಗೆ ಯಾವುದೇ ತೊಂದರೆ ಎದುರಿಸಲಿಲ್ಲ. ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಇನ್ನೇನು ದಿನಗಳೆಣಿಸುವಂತಾಗಿದೆ ಸೀಮೆ ಎಣ್ಣೆ ಬುಟ್ಟಿ ಇಟ್ಟು ರಾತ್ರಿ ಎಲ್ಲಾ ಓದುತ್ತಿದ್ದಾಳೇ ಶಬರಿ, ಅಮ್ಮ ಅಪ್ಪ ಮಗಳ ಶ್ರಮ ಕಂಡು ಬೇಸರವೆನಿಸಿದೆ ಪಕ್ಕದಲ್ಲಿರೋ ಶ್ರೀಮಂತ ಮನೆಗಳಲ್ಲಿ ನಾಯಿ ಮಲಗುವ ಕೋಣೆಗೂ ದೀಪಾಲಂಕಾರವಿದೆ, ನಮ್ಮಂತ ನಿರ್ಗತಿಕರಿಗೆ ಆ ನಾಯಿಗಿರುವಷ್ಟು ಸೌಲಭ್ಯವಿಲ್ಲದಾಯಿತೆ. ಎಂದು ಮರುಕ ಒಂದು ಕಡೆ, ನಮ್ಮ ಹಣೆ ಬರಹವೇ ಹೀಗೆಂಬ ಸಮಜಾಯಿಸಿ ಮತ್ತೊಂದೆಡೆ.

ಶಬರಿ ಪರೀಕ್ಷಾ ದಿನಗಳಲ್ಲಿ ಕೆಲಸಕ್ಕೆ ಬರದಿರಲು ಅಮ್ಮ ತಾಕಿತ್ತು ಮಾಡಿರುತ್ತಾಳೆ. ನೀನು ಮನೆಯಲ್ಲೇ ಇದ್ದು ಓದು, ಕೆಲಸವೆಲ್ಲಾ ನಾನೇ ಮುಗಿಸಿ ಬರುವೆ ಎಂದು.... ಅತ್ತ ಮನೆಗೆಲಸದಲ್ಲಿ ತೊಡಗಿರುವಾಗ ಮನೆಯೊಡತಿ ಗತ್ತಿನಿಂದ ನಿನ್ನ ಮಗಳು ಬಂದಿಲ್ಲ, ಕೆಲಸ ನಿಧಾನವಾಗುತ್ತೆ......ದಿನವೆಲ್ಲಾ ಕೆಲಸ ಮಾಡ್ತಾನೇ ಇರು, ನಾವು ನೀ ಮುಗಿಸೋವರೆಗೂ ಕಾದು ಕುಳ್ತಿರ್ತೀವಿ ಎಂದು ಜೋರು ಧನಿಯಲ್ಲಿ ಕೇಳುತ್ತಲೇ, ಇತ್ತ ಚೆನ್ನಮ್ಮ ಇಲ್ಲಮ್ಮ, ಮಗಳಿಗೆ ಪರೀಕ್ಷೆ ಇದೆ ಅದಕ್ಕೆ ಓದಲೆಂದು ಬಿಟ್ಟುಬಂದೆ ಎಂದ ಕೂಡಲೇ ಮನೆಯೊಡತಿ ಓಹೋ.... ಅವಳು ಓದಿ ಈ ದೇಶವೇನು ಉದ್ಧಾರವಾಗಬೇಕಿಲ್ಲ, ಬರೆದಷ್ಟು ಬರೆಯಲಿ ಮುಂದಿನ ವರ್ಷದಿಂದ ಓದು ಬಿಡಿಸಿ ನಮ್ಮ ಮನೆ ಕೆಲಸಕ್ಕೆ ಬಿಡು ನಿನಗೆ ವಯಸ್ಸಾಯಿತು..... ನಿನ್ನ ಕೈಲಾಗೋಲ್ಲ ಎಂದು ಗದರಿಬಿಡುತ್ತಾಳೆ.....ಚೆನ್ನಮ್ಮ ಮನಸಲ್ಲೇ ಅಳುತ್ತಾ ಅವರ ಮಕ್ಕಳಾದರೆ ಓದಬಹುದು, ಆ ಮಕ್ಕಳು ಓದುವಾಗ ಅವರು ಕುಳಿತಲ್ಲೇ ಸೇವೆ ಮಾಡಬೇಕು, ತಿನ್ನಲೂ ಸಹ ಎದ್ದು ಬರುವುದಿಲ್ಲ, ಓದುವ ಮೇಜಿಗೆ ಎಲ್ಲವನ್ನು ತೆಗೆದೊಯ್ಯಬೇಕು....ಅಂತಹದರಲ್ಲಿ ನಾವು ಬಡವರು ನಮ್ಮ ಮಕ್ಕಳೂ ಓದಲೇ ಬಾರದೆ....??

ಅಂದು ಸಂಜೆ ಮನೆಗೆ ಬಂದವಳೆ ಮಗಳಿಗೆ ನೊಂದ ಮನಸಿನಿಂದಲೇ ಹೇಳುತ್ತಾಳೆ. "ಬಡತನವೇ ಒಂದು ಶಾಪ" ನಮಗೆ, ನೀನು ಆ ಶಾಪವನ್ನು ನಮ್ಮಿಂದ ದೂರ ಮಾಡಬೇಕು, "ನಾವು ಕೂಲಿ ಕೆಲಸಕ್ಕೆ ಮೀಸಲೆಂದು ಭಾವಿಸಿರುವವರ ಮಧ್ಯೆ ನಮಗೂ ಯಜಮಾನಿಕೆ ಮಾಡುವಷ್ಟು ಸಾಮರ್ಥ್ಯವಿದೆ" ಎಂಬಂತೆ ನೀನು ಸಾಧಿಸಿ ತೋರಿಸಬೇಕು . ನನಗೆ ಗೊತ್ತಿಲ್ಲ ಅದು ಹೇಗೆ ಓದುತ್ತೀಯೋ ಅಂತ ಒಟ್ಟಲ್ಲಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸು. ಎಂದು ಅಮ್ಮ ಮಗಳಲ್ಲಿ ಕಣ್ಣ ಕಂಬನಿಯೊಂದಿಗೆ ಬೇಡುತ್ತಾಳೆ......ಮಗಳಿಗೂ ಅಮ್ಮನಿಗೇನೋ ಬೇಸರವಾಗಿ ಹೀಗೆಳುತ್ತಲಿದ್ದಾಳೆ ಅವಳ ಆಸೆ ಹೇಗಾದರೂ ಮಾಡಿ ಪೂರೈಸಲೇ ಬೇಕು ಎಂಬ ಪಣ ತೊಡುತ್ತಾಳೆ.

ಇತ್ತ ಅಮ್ಮನದೂ ಮಾಮೂಲಿ ಕೆಲಸ ಅಪ್ಪ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕರೆತರುವುದು, ಮನೆ ಜವಾಬ್ದಾರಿ ವಹಿಸಿ ನೆಡೆಸುವುದು ಇದೇ ಕೆಲಸ.......ಜೊತೆಗೆ ಅಪ್ಪ ಮನೆಯಲ್ಲೇ ಇದ್ದು ಸಮಯ ಹಾಳು ಮಾಡದೆ ಬಿಸಾಡಿದ ನ್ಯೂಸ್ ಪೇಪರ್ ನಿಂದ ಪೊಟ್ಟಣವನ್ನು ಮಾಡಿ ಅಂಗಡಿಗೆ ಮಾರುತ್ತಲಿರುತ್ತಾನೆ. ಶ್ರಮದ ಜೀವನದಲ್ಲೂ ಸುಖಕಾಣುವುದು ಈ ಕುಟುಂಬದ ನಿಲುವು. ಶಬರಿಗೆ ಇನ್ನೇನು ಎರಡೇ ದಿನ ಪರೀಕ್ಷೆಗೆ.....ಪರೀಕ್ಷೆ ಬರೆಯಲು ಲೇಖನಿ ಇಲ್ಲ......ಅಮ್ಮನನ್ನು ಕೇಳಿದಳು ಅಮ್ಮ ಬರೆಯಲು ಪೆನ್ನು ಬೇಕಿತ್ತು ತಂದುಕೊಡುತ್ತೀಯಾ...? ಆಯ್ತು ಮಗಳೇ ಸಂಜೆ ಮನೆಗೆಲಸದವರ ಮನೆಯಲ್ಲಿ ಕೇಳಿ ತರುತ್ತೇನೆಂದಳು......

ಮನೆಗೆಲಸಕ್ಕೆ ಹೋಗಿದ್ದಾಗ ಮನೆಯೊಡತಿಯನ್ನು ಕೇಳಿದರೆ ಎಲ್ಲಿ ಅಪಶಕುನದ ಮಾತಾಡುವಳೋ ಎಂದು ಯೋಚಿಸಿ ಕೇಳಲೋ ಬೇಡವೆಂದು ಯೋಚಿಸುತ್ತಾ ಮಕ್ಕಳ ಕೋಣೆ ಸ್ವಚ್ಚಗೊಳಿಸಲು ಹೋದಾಗ ಆ ಮನೆಯ ಮಕ್ಕಳ ಪೆನ್ನುಗಳು, ಪೆನ್ಸಿಲ್ ಗಳನ್ನು ಕಂಡು ಮನದಲ್ಲೆಲ್ಲೋ ಆಸೆ ಮೂಡಿ, ಇಷ್ಟು ದುಬಾರಿ ಪೆನ್ನು ನನ್ನ ಮಗಳು ಜನ್ಮದಲ್ಲೂ ಕಾಣಲಾರಳು..........ಈ ಪೆನ್ನುಗಳನ್ನು ಉಪಯೋಗಿಸಿ ಬರೆದರೆ ನನ್ನ ಮಗು ಪರೀಕ್ಷೆಯಲ್ಲಿ ಚೆಂದಾಕಿ ಬರೆಯಬಹುದೆಂದು ಏನೋ ಆಸೆ ಪಟ್ಟು ಅಲ್ಲಿದ್ದ ಎರಡು ಪೆನ್ನು, ಎರಡು ಪೆನ್ಸಿಲ್ ಗಳನ್ನು ತೆಗೆದು ತನ್ನ ಸೆರಗಿನಲ್ಲಿ ಕಟ್ಟುಕೊಳ್ಳುತ್ತಿರವಾಗಲೇ...... ಆ ಮನೆಯೊಡತಿ ಬಂದು ಬಿಡುತ್ತಾಳೆ..........ಹೌಹಾರಿದ ಮನೆಯೊಡತಿ ಏನು ಕೆಲಸ ಮಾಡುತ್ತಲಿದ್ದೀಯಾ, ಕಳ್ಳತನ ಮಾಡ್ತಾ ಇದ್ದೀಯಾ..?!!! ಹಿಂಗೆ ಎಷ್ಟು ದಿನ ಏನೇನು ತಗೊಂಡು ಹೋಗಿದ್ದೀಯಾ... ನಿಮ್ಮಂತವರಿಂದ ನಾವು ನೆಮ್ಮದಿಯಾಗಿರೊಕ್ಕೆ ಆಗೋಲ್ಲ.....ಎಂದ ಕೂಡಲೇ ಕಾಲಿಗೆ ಬಿದ್ದ ಚೆನ್ನಮ್ಮ ಅಮ್ಮ, ಕ್ಷಮಿಸಿ, ನಾನು ಇದೇ ಮೊಟ್ಟ ಮೊದಲು ನಿಮ್ಮ ಮನೆ ವಸ್ತು ಮುಟ್ಟಿದ್ದು ನಾನಾಗಿ ಎಂದೂ ಒಂದು ಹುಲ್ಲುಕಡ್ಡಿಯನ್ನೂ ನಿಮ್ಮ ಮನೆಯಿಂದ ತಗೊಂಡು ಹೋಗಿಲ್ಲಮ್ಮ...ದಯವಿಟ್ಟು ಕ್ಷಮಿಸಮ್ಮ.....ಈ ಪೆನ್ನುಗಳ ಕೊಡದಿದ್ದರೂ ಪರವಾಗಿಲ್ಲ ........ ವಾಪಸ್ ಇಟ್ಟುಬಿಡುತ್ತೇನೆ. ದಯವಿಟ್ಟು ನನ್ನ ಕ್ಷಮಿಸಮ್ಮ.......ನಿನ್ನ ಕ್ಷಮಿಸೋದಾ ಇಂದು ಚಿಕ್ಕದು ನಾಳೆ ದೊಡ್ಡದು....ಹೀಗೆ ಕಳ್ಳತನ ಮಾಡ್ತೀಯಾ.ಹೋಗು ನಮ್ಮ ಮನೆಗೆ ಕೆಲಸಕ್ಕೆ ಬರ್ಕೂಡದು ................ ಇನ್ನು ಯಾವತ್ತೂ ಈ ಕಡೆ ತಲೆ ಹಾಕ್ಬೇಡ ಎಂದು ಒಮ್ಮೆಲೇ ಆಚೆ ತಳ್ಳಿ ಬಾಗಿಲು ಜಡಿದು ಬಿಡುತ್ತಾಳೆ......

ಚೆನ್ನಮ್ಮ ತನ್ನ ಮಗಳಿಗೆ ಪೆನ್ನುಗಳು ತೆಗೆದುಕೊಂಡು ಬರುವಳೇ...?
ಆ ಮನೆ ಕೆಲಸದವಳು ಮತ್ತೆ ಮನೆಗೆ ಸೇರಿಸಿಕೊಳ್ಳುವಳೇ ಇಲ್ಲವೇ..?
ಕ್ಷಮಿಸಲಾರದಂತ ತಪ್ಪೇ ಇದು ....? ಮುಂದೇನಾಗುವುದೆಂದೆ ದೀಪ-೨ ರಲ್ಲಿ ನೋಡೋಣ..