Showing posts with label ಕಥೆ. Show all posts
Showing posts with label ಕಥೆ. Show all posts

Sunday, October 9, 2011

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

Sunday, July 3, 2011

ಗುಡಿಸಲಿನಲ್ಲೊಂದು ನಂದಾದೀಪ

ಮುಂದುವರಿದ ಕೊನೆಯ ಭಾಗ :- ದೀಪ-೩

ಪ್ರಶ್ನೆ ಪತ್ರಿಕೆ ಕಣ್ಣೆದುರಿದೆ, ಸ್ನೇಹಿತರಾಡಿದ ಮಾತು ಕಿವಿಯಲಿ ಗುನುಗುತಲಿದೆ, ಮೆದುಳು ಏಕೋ ಮಾತು ಕೇಳುತ್ತಿಲ್ಲ, ಕೈ ಕೆಲಸ ಮಾಡುತ್ತಿಲ್ಲ, ಒಮ್ಮೆ ಹೃದಯ ಮಾತ್ರ ಉತ್ತರಿಸುತ್ತೆ. "ಶಬರಿ ಇದು ಚಿಂತಿಸೋ ಸಮಯವಲ್ಲ ಹೃದಯದ ಮನಸ ಅರಿತುಕೊ, ಕೈಗೆ ಕೆಲಸಕೊಡು, ಗುನುಗುವ ಮಾತಿನ ಧನಿಗಳನ್ನ ಒಮ್ಮೆ ದೂರವಿಡು, ನಿನ್ನ ಧ್ಯೇಯದತ್ತ ಗಮನ ಕೊಡು" ಎಂದು ಹೃದಯ ಮನ ಬಿಚ್ಚಿ ಅವಳನ್ನ ತಟ್ಟಿ ಎಬ್ಬಿಸಿದೆ.

ತಟ್ ಎಂದು ಮನಸ್ಸನ್ನು ಬದಲಿಸಿದ ಶಬರಿ ಪ್ರಶ್ನೆಗಳನ್ನೆಲ್ಲಾ ಒಂದೊಂದಾಗಿ ಓದಿ ಮುಗಿಸಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದಳು. ಮನಸನ್ನು ಚಿಂತೆಗೀಡುಮಾಡದೆ ಪರೀಕ್ಷೆ ಮುಗಿಸಿದಳು. ರಜೆಯ ಮಜಾ ಪ್ರಾರಂಭವಾಯಿತು..!! ಯಾರೊಬ್ಬ ಸ್ನೇಹಿತರು ಇವಳತ್ತ ಮುಖ ಮಾಡಲಿಲ್ಲ, ಮನ ಮುದುಡಿದರೂ ಅಮ್ಮನೊಟ್ಟಿಗೆ ಕೆಲಸಕ್ಕೆ ನಿಂತಳು. ಪರೀಕ್ಷಾ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಅಮ್ಮನಿಗೂ ಗೊತ್ತಿತ್ತು ಈ ವಿಷಯ, ಅಪ್ಪ ಅಮ್ಮ ಇಬ್ಬರೂ ಕೂಡಿ ದೇವಸ್ಥಾನಕ್ಕೆ ಉದ್ದಾಂಡ ನಮಸ್ಕಾರವೂ ಮಾಡಿ ಬಂದಿದ್ದರು... ಮಗಳಲ್ಲಿ "ಮಗು ಈ ಸರಿ ಟಿವಿನೋರು ಬರ್ತಾರಾ...?" ಎಂದಷ್ಟೆ ಕೇಳಿದ್ದು....... ನೀನು ಚೆನ್ನಾಗಿ ಪರೀಕ್ಷೆಯಲ್ಲಿ ಉತ್ತರಿಸಿದ್ದೀಯಾ, ಕಳೆದಬಾರಿ ತರ ಕರ್ನಾಟಕಕ್ಕೆ ಮೊದಲನೆಯವಳಾಗುವಷ್ಟು ಚೆನ್ನಾಗಿ ಬರೆದಿದ್ದೀಯಾ ಇಲ್ಲವಾ...ಈ ತರಹದ ಪ್ರಶ್ನೆ ಕೇಳಲೇ ಇಲ್ಲ. ಏಕೆಂದರೆ ಚೆನ್ನಮ್ಮನಿಗೆ ಅಷ್ಟು ತಿಳುವಳಿಕೆ ಇಲ್ಲವೇ ಇಲ್ಲ.. ಮಗಳಿಗೆ ಅಮ್ಮನ ಮುಗ್ಧತನ ಅರ್ಥವಾಗಿತ್ತು. ಗೊತ್ತಿಲ್ಲಮ್ಮ ಬರೆಯೋದೇನೋ ಬರೆದಿದ್ದೀನಿ, ನೋಡೋಣ ಎಂದಷ್ಟೇ ಹೇಳಿದ್ದು. ಸಂಜೆ ಟಿವಿಯಲ್ಲಿ ಹೇಳ್ತಾರೆ ಯಾರು ಕರ್ನಾಟಕಕ್ಕೆ ಮೊದಲು ಎಂದು. ಶಬರಿಗೆ ಮನೆಗೆಲಸ ಮಾಡುವವರ ಮನೆಗೆ ಹೋಗಿ ಟಿವಿಯಲ್ಲಿ ನೋಡಬೇಕೆಂಬ ಆಸೆ ........ ಅಮ್ಮ ಅಪ್ಪನಿಗೂ ಹೇಳಿ ಎಲ್ಲರನ್ನು ಕರೆದುಕೊಂಡು ಸಂಜೆ ಬರುವ ವಾರ್ತೆಗೆ ಮಧ್ಯಾಹ್ನವೇ ಅವರ ಮನೆಯತ್ತ ಧಾವಿಸುತ್ತಾರೆ. ಶಾರದಮ್ಮನ ಮನೆ ಬೀಗ ಜಡಿದಿದ್ದಾರೆ. ಅಯ್ಯೋ ಎಂತಾ ಕೆಲಸ ಹಾಗೋಯ್ತು ಏನು ಮಾಡ್ಲಿ.... ಬೇಜಾರಲ್ಲೇ ಮನೆಗೆ ವಾಪಸ್ ಬಂದಾಗ ಮನೆಯತ್ತಿರ ಪತ್ರಿಕಾ ಬಳಗ ಕಾದಿತ್ತು. ಎಣಿಸಿದಂತೆ ಮಗಳು ಕರ್ನಾಟಕಕ್ಕೆ ಮೊದಲು..!! ಎಲ್ಲಾ ವಿಭಾಗಳಲ್ಲಿ ಇವಳಷ್ಟು ಹೆಚ್ಚು ಅಂಕ ಯಾರು ಗಳಿಸೇ ಇರಲಿಲ್ಲ. ಅಷ್ಟು ಉನ್ನತ ಅಂಕ ಗಳಿಸಿದ್ದವಳಿಗೆ ಪತ್ರಿಕಾ ಬಳಗ, ವಾಹಿನಿಯವರು ಎಲ್ಲರೂ ಮುಗಿಬಿದ್ದು ಅಭಿನಂದಿಸುತ್ತಲಿದ್ದಾರೆ. ಅಕ್ಕ ಪಕ್ಕದ ಬೃಹದಾಕಾರದ ಬಂಗಲೆಯಿಂದೆಲ್ಲ ನೋಡುತ್ತಲಿದ್ದಾರೆ. ಅವರುಗಳಲ್ಲೇ ಗುಸು ಗುಸು... ಏನಾಗಿದೆ ಆ ಗುಡಿಸಲಿನಲ್ಲಿ ಯಾರಾದರು ಸತ್ತಿದ್ದಾರಾ? ಏನಾಗಿರಬಹುದು.........ಅಯ್ಯೋ ಈ ಗುಡಿಸಲ ಜನ ಎಷ್ಟಿದ್ದರೇನು, ಸಂಜೆ ಹೊತ್ತಿಗೆ ಕುಡಿದು ರಾಧಾಂತ ಮಾಡೋ ಜನ ಎಂದು ಮನಸೋ ಇಚ್ಚೆ ಮಾತನಾಡಿಕೊಳ್ಳುತ್ತಲಿದ್ದಾರೆ..........ಆದರೆ ಆ ಜನ ಬಾಯಿ ಮುಚ್ಚಿಸಿದ್ದು ಬೆಳಗಿನ ವಾರ್ತಾ ಪ್ರಸಾರ ಮತ್ತು ಮುಂಜಾನೆಯ ಪತ್ರಿಕೆ ಮನೆ ಬಾಗಿಲು ತಟ್ಟಿದಾಗ ಆ ಶ್ರೀಮಂತ ಜನರಿಗೆ ಈ ಪುಟ್ಟ ಮನೆಯಲ್ಲಿ ಕೆಸರಿನ ಕಮಲವಿದೆ ಎಂದು ಗೊತ್ತಾಗಿದ್ದೇ ಆಗ......ಈ ಹಿಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ಹೆಚ್ಚು ಹೆಸರಾಗಿರಲಿಲ್ಲ....... ಪಿ.ಯು.ಸಿ ಹೇಗೆ ಜೀವನದ ಮಹತ್ತರ ಹೆಜ್ಜೆಯೋ ಹಾಗೇ ಪ್ರಪಂಚದ ಕಣ್ಣಿಗೆ ಬೀಳಲೂ ಅಷ್ಟೇ ಮುಖ್ಯವಾಯ್ತು. ಇಲ್ಲೂ ಸಹ ಶಬರಿ ತನ್ನ ಅಪ್ಪ ಅಮ್ಮನ ಆಸೆ, ಶಾರದಮ್ಮನವರ ಒಲವಿನ ಕಾಣಿಕೆ ಎಲ್ಲವೂ ಕೆಲಸ ಮಾಡಿತ್ತು. ಮರುದಿನ ಟಿವಿಯಲ್ಲಿ ಕಂಡ ಶಾಲೆಯ ಸ್ನೇಹಿತರೂ ಎಲ್ಲರೂ ಗುಂಪುಗುಂಪಾಗಿ ಆ ಕೆಸರ ಗುಡಿಸಲಿಗೆ ದುಂಬಾಲಿಟ್ಟರು. ಅಂದು ಅಸಹ್ಯದ ದಾರಿ ಇಂದು ನಗೆಯ ಹಾದಿಯಾಗಿತ್ತು. ಜನ ಎಲ್ಲಾ ಹಾಗೆ ಗೆದ್ದೆತ್ತಿನ ಬಾಲ ಹಿಡಿಯುವುದಂತೂ ಸತ್ಯ..!!!

ಮರುದಿನ ಮಧ್ಯಾಹ್ನದವರೆಗೆ ಶಾಲೆಯಲ್ಲಿ ಅಂಕಗಳನ್ನು ಬಿತ್ತರಿಸಲು ಸಮಯವಿತ್ತು..... ಆದರೆ ಪರೀಕ್ಷಾ ಮಂಡಳಿಯಿಂದಷ್ಟೇ ತಿಳಿದ ವಾಹಿನಿಯವರಾಗಲೇ ಬಿತ್ತರಿಸಿಬಿಟ್ಟಿದ್ದರು. ಶಾಲೆಯ ಅಂಗಳದಲ್ಲಿ ಖುಷಿಯ ಹೊಳೆ ಹರಿದಿತ್ತು. ಶಬರಿ ಶಾಲೆಯೊಳಗೆ ಬರುತ್ತಲಿದ್ದಂತೆ ಭವ್ಯ ಸ್ವಾಗತ ಗುರುಗಳೆಲ್ಲರಿಗೂ ಸಂತಸದ ಕ್ಷಣ. ಈ ಪುಟ್ಟ ಕೂಸಿನ ಕಂಗಳಲ್ಲಿ ಆನಂದದ ಕಣ್ಣೀರು ಹನಿ ಹನಿಯಾಗಿ ಕಟ್ಟೆಯೊಡದಿತ್ತು. ಅಮ್ಮ ಅಪ್ಪನ ಆಸೆ ಮೊಳಕೆ ಚೆನ್ನಾಗೆ ಹೊಡೆತಿತ್ತು ಇನ್ನು ಅರಳುವುದೊಂದು ಬಾಕಿ. ಗುರು ಹಿರಿಯರ ಆಶೀರ್ವಾದ ಪಡೆದು ಮನೆಗೆ ಬಂದವಳು ಶಾರದಮ್ಮನ ಆಶೀರ್ವಾದ ಪಡೆಯಲು ನಡೆದಳು. ಅತ್ತ ಶಾರದಮ್ಮನು ಕರಗಿ ನೀರಾದರು. ಈ ಕೂಸಿಗೆ ಶುಭಹಾರೈಸಿ ಸಿಹಿ ಅಡಿಗೆಯ ಭೋಜನವನ್ನೇ ಮಾಡಿಟ್ಟರು. ಎಲ್ಲರೂ ಸಂತಸದಿ ಮಾತನಾಡುತ್ತಲಿದ್ದಂತೆ ಮತ್ತೊಂದು ಸಂತಸದ ಸಂಗತಿ ಟಿವಿಯ ವಾರ್ತಾ ಪ್ರಸಾರದಲ್ಲಿ ಕೇಳಿಬಂತು..... ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶಬರಿ ಎಂಬ ಹೆಣ್ಣು ಮಗಳಿಗೆ ಕರ್ನಾಟಕ ಘನ ಸರ್ಕಾರ ಉಚಿತವಾಗಿ ಆಕೆ ಎಲ್ಲಿಯವರೆಗೂ ಓದುವ ಇಚ್ಚೆ ಇದೆಯೋ ಅಲ್ಲಿಯವರೆಗೆ ಸರ್ಕಾರ ಖರ್ಚನ್ನು ಭರಿಸುವುದೆಂದು ಘೋಷಿಸಿದರು...!!! ಇದಕ್ಕಿಂತ ಸಂತಸ ಯಾರಿಗೆ ಬೇಕು ಅಲ್ಲೇ ಇದ್ದ ಶಾರದಮ್ಮನಿಗೊಮ್ಮೆಲೆ ಕಾಲು ಮುಗಿದುಬಿಟ್ಟರು ಅಮ್ಮ, ಅಪ್ಪ, ಮಗಳು ಮೂವರು, ಶಾರದಮ್ಮನಿಂದಲೇ ಇಷ್ಟೆಲ್ಲಾ ಸಾಧ್ಯವಾಯಿತೆಂಬುದವರ ನಂಬಿಕೆ (ಬಡವರಿಗೆ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ಮಾಡಿದರೆ ಸಾಕು ಪೂಜ್ಯತೆಯ ಮನೋಭಾವ ಸಹಾಯ ಮಾಡಿದವರ ಮೇಲೆ ಹುಟ್ಟುತ್ತದೆ). ಅದೇ ಸಂತಸದಿ ಗುಡಿಸಲ್ಲಿ ಹಬ್ಬದ ವಾತಾವರಣವೇ ಕಂಗೊಳಿಸುತ್ತಿತ್ತು......

ಶಬರಿಗೆ ಪಿ.ಯು.ಸಿ ಮುಗಿಯಿತು ಜವಾಬ್ದಾರಿಯೂ ಹೆಚ್ಚಿತು. ಓದುವುದರಲ್ಲಿ ಹೇಗೆ ಮುಂದೋ ರೂಪಿನಲ್ಲೂ ಅಷ್ಟೆ ಮುಂದು. ಕೆಸರಿನ ಕಮಲದಂತೆ ಕೋಮಲವಾಗಿದ್ದಳು. ಮುದ್ದು ಮನಸಿಗೆ ಮುಖದ ರೂಪ, ಹರೆಯದ ವಯಸ್ಸಿಗೆ ಹೈದರ ಕಣ್ಣು ಕುಕ್ಕುವಂತಾ ಸೊಬಗಿನವಳು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಈ ಸೌಂದರ್ಯದ ಹೆಣ್ಣು, ಸರಸ್ವತಿಯ ಕಣ್ಣು ಕಾಲೇಜಿನ ಎಲ್ಲರ ಮಾತಲ್ಲಿ ಉಳಿದುಬಿಟ್ಟಳು. ಇಲ್ಲೂ ಸಹ ವಿದ್ಯೆಯಲ್ಲಿ ಮುಂದು, ಹಾಗೆಂದು ಆಟಪಾಠಕ್ಕೆ ಎಂದೂ ಕಡಿಮೆ ಮಾಡಲಿಲ್ಲ. ತಾನು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ತುಡಿತ ಎಂದೂ ಯಾರಲ್ಲೂ ಹೇಳದವಳು, ಅಂದು ಕಾಲೇಜಿನ ಪ್ರಾಂಶುಪಾಲರಲ್ಲಿ ಹೇಳಿಕೊಂಡಳು ಕಾರಣವಿಷ್ಟೆ..... ಯಾವ ಯಾವ ಹಂತದಲ್ಲಿ ಏನು ಮಾಡಬೇಕು ಹೇಗೆ ನಾ ಅಂತಹ ಅಧಿಕಾರಿಯಾಗಬೇಕು ಎಂಬುದರ ವಿಷಯ ತಿಳಿಸಲು ಅಪ್ಪ ಅಮ್ಮರೇನು ವಿದ್ಯಾವಂತರಲ್ಲ..... ಗುರುಗಳೇ ಸೂಕ್ತವೆಂದು ಅವರ ಸಲಹೆ ಮೇರೆಗೆ ವಿದ್ಯಾಭ್ಯಾಸ ಮುಂದುವರಿಸಿದಳು.

ಸರಸ್ವತಿ ಒಲಿದ ಮೇಲೆ ಯಾವ ವಿದ್ಯೆಯಾದರೇನು ಅದು ನಿರ್ರಗಳವಾಗಿ ಎಲುಬಿಲ್ಲದ ಎಳಸಿನ ಮೇಲೆ ಅಚ್ಚು ಹೊತ್ತಿದಾಗೆ ನಾಲಿಗೆಯ ಅಂಚಿನಲ್ಲಿ ಹೊರಬರುತ್ತದೆ ಅಂತೆಯೇ ಮೆದುಳಲ್ಲಿ ಎಲ್ಲ ವಿಷಯಗಳು ಶೇಖರವಾಗಿ ಬಿಡುತ್ತದೆ.......... ಅದು ಶಬರಿಯ ವಿಷಯದಲ್ಲಿ ನಿಜವೇ ಹಾಗಿಬಿಟ್ಟಿತ್ತು.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವಾಗ ಅಮ್ಮ ಒಬ್ಬರ ಮನೆಯಲ್ಲಿ ಪೆನ್ನು, ಪೆನ್ಸಿಲ್ ಕದ್ದು ಆ ಮನೆಯಿಂದಲೇ ಹೊರ ಬರುವಂತಾಗಿದ್ದ ದಿನಗಳು ನೆನಪಿಸಿತು ಕಾರಣ ಆ ಮನೆಯೊಡತಿಯ ಮಗ ಇದೇ ಕಾಲೇಜಿನಲ್ಲಿ ಓದುತ್ತಲಿದ್ದನು.... ಹೇಳುವಂತಾ ವಿದ್ಯಾವಂತನಲ್ಲ.... ಮನೆಯಲ್ಲಿರುವ ದುಡ್ಡು ಪುಂಡಾಟಿಕೆಗೆ ಬಳಸುವಲ್ಲಿ ನಿಸ್ಸೀಮನಾಗಿದ್ದ...... ಹಾದಿ ಬೀದಿಯ ಹೆಣ್ಣುಗಳತ್ತ ಕಣ್ಣು ಹಾಕುವ ಚಾಳಿಯಲ್ಲಿದ್ದ....... ಈ ಸುಂದರ ಮೊಗದ ಶಬರಿಯ ಕಂಡು ಹಿಂದೆ ಬಿದ್ದವನು ಇವಳನ್ನೇ ವರಿಸಬೇಕೆಂಬ ಹಠ..... ಆ ಹಠ ಕೊನೆಗೆ ನಿರಾಸೆಯಂತು ಖಂಡಿತಾ ತಂದಿತ್ತು........... ಶಬರಿಗೆ ಈಗ ಯಾವ ಪ್ರೇಮ ಪ್ರಣಯದಲ್ಲಿ ಬೀಳುವಾಸೆ ಇರಲಿಲ್ಲ........ ನಿರಾಕರಿಸಿಯೂ ಬಿಟ್ಟಿದ್ದಳು. ಹಾಗೆ ಈ ಹುಡುಗು ಬುದ್ಧಿಗೆ ಅಮ್ಮನಿಂದಲೂ ಕಡಿವಾಣ ಬಂದಿತ್ತು......... ಆ ಹುಡುಗಿ ನಿನಗೆ ಗೊತ್ತಿಲ್ಲವಾ ಆ ಮನೆಗೆಲಸದವಳು.... ನಮ್ಮ ಅಂತಸ್ಥಿಗೂ ಅವಳಿಗೂ ಅಜಗಜಾಂತರ ನೀನು ಇಲ್ಲಿಗೆ ಕೊನೆ ಮಾಡಿದರೆ ಒಳ್ಳೆಯದು ಎಂದು ಬಲವಂತವೋ, ಒತ್ತಾಯ ಪೂರ್ವಕವೋ ಒಟ್ಟಲ್ಲಿ ಮಗನನ್ನು ಅವಳಿಂದ ತಪ್ಪಿಸಲು ಮಗನನ್ನು ಕಾಲೇಜು ಬಿಡಿಸಿ ಬೇರೆ ಕಾಲೇಜಿಗೆ ಕಳಿಸಿ ಬಿಟ್ಟರು.

ಯಾರು ಏನಾಗಲಿ, ಊರೂ ಹೋಗಲಿ, ಕಾಡು ಬರಲಿ ತನ್ನ ನಿಲುವು ಮಾತ್ರ ಬದಲಿಸದ ಶಬರಿ. ತನ್ನ ಕನಸಿನ ಶಿಖರ ಕೆಲವೇ ಮೆಟ್ಟಿಲಿರುವುದನ್ನು ಖಾತ್ರಿ ಮಾಡಿಕೊಂಡು ನಿಧಾನವಾಗಿ ಹೆಜ್ಜೆಯಿಡಲು ಪ್ರಾರಂಭಿಸುತ್ತಾಳೆ. ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವ ಆಸೆ ಇದ್ದರಿಂದ ತನ್ನ ಡಿಗ್ರಿಯಲ್ಲಿ ಒಳ್ಳೆ ಅಂಕ ಗಳಿಸಿ, ಮಾಸ್ಟರ್ ಡಿಗ್ರಿಯನ್ನೂ ಮುಗಿಸಿ ಆನಂತರವೇ ಐ. ಎ.ಎಸ್ ಯತ್ತ ಮುಖ ಮಾಡಿದ್ದು. ಐ.ಎ.ಎಸ್ ಪರೀಕ್ಷೆ ಬರೆಯುವವರೆಗೆ ದಾರಿದೀಪವಾಗಿ ನಿಂತಿದ್ದು ಕಾಲೇಜಿನಲ್ಲಿದ್ದ ಪ್ರಾಂಶುಪಾಲರು. ಪ್ರತಿ ಹೆಜ್ಜೆಗೂ ಅವಳ ನಿಲುವಿಗೆ ಬೆನ್ನೆಲುಬಾಗಿ ಸಾಧನೆಯ ಹಾದಿಗೆ ಬೆಳಕಾದರು. ಕೊನೆಗೂ ಐ.ಎ.ಎಸ್ ಪರೀಕ್ಷೆ ಜೊತೆಗೆ ಅಧಿಕಾರಿಗಿರಿಯೂ ಅವಳ ಗುಡಿಸಲ ಬಾಗಿಲಿನವರೆಗೂ ಹುಡುಕಿಕೊಂಡು ಬಂದಿತು. ಅಧಿಕಾರಿ ಪಟ್ಟ ಬಂದದ್ದೆ, ಓಹ್..!!! ಹೇಳಬೇಕೆ ಅಮ್ಮನಿಗೆ ಆಕಾಶ ಎರಡೇ ಗೇಣು ಎಂಬಂತೆ ಚಿಕ್ಕ ಮಕ್ಕಳಂತೆ ಚೆನ್ನಯ್ಯನ ಕೈ ಹಿಡಿದು ಎಳೆದಾಡಿ ಮಗಳನ್ನು ಬಾಚಿ ತಬ್ಬಿದಳು. ತುತ್ತು ಅನ್ನಕ್ಕೂ ಕಷ್ಟ ಪಡುವವರಿಗೆ ಅರಮನೆಯ ವೈಭೋಗ ಅದಾಗೆ ಹುಡುಕಿಕೊಂಡು ಬಂದಾಗ ಆಗುವ ಸಂತಸ ಈ ಬಡ ಕುಟುಂಬದಲ್ಲಿ ಕಾಣುತ್ತಿತ್ತು. ಸರ್ಕಾರಿ ಹಣದಲ್ಲಿ ಓದಿದವಳಿಗೆ ಸರ್ಕಾರದ ಋಣ ತೀರಿಸಲು ಸರ್ಕಾರಿ ಕೆಲಸ ದೇವರ ಕೆಲಸವೆಂದೇ ಸ್ವೀಕರಿಸಿದಳು.

ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿತ್ತು. ಗುಡಿಸಲಿಂದ ದೊಡ್ಡ ಮನೆಗೆ ಹೋಗಲೇ ಬೇಕಿತ್ತು. ಅಪ್ಪ ಅಮ್ಮನಿಗೂ ಸಂತಸ, ಆದರೆ ಈ ಪುಟ್ಟ ಗುಡಿಸಲು ಅವಳಿಗೆ ಏನೆಲ್ಲಾ ಕೊಟ್ಟಿತ್ತು ತನ್ನ ಜೀವನವನ್ನೇ ಇಷ್ಟು ಕಾಲ ಕಳೆದೆ ಇಂದು ಈ ಜೀವನದ ಗುಡಿಸಲು ಬಿಟ್ಟು ಹೋಗಲು ಮನಸಾಗದಿದ್ದರೂ ತನ್ನ ಕೆಲಸಕ್ಕೆ ತಕ್ಕಂತಿರಲು ತೆರಳಬೇಕಾಯ್ತು. ಸರ್ಕಾರ ಇವಳಿಗೆಂದೆ ಬಣ್ಣದ ಬಂಗಾರದ ಮನೆಯನ್ನು ಸಜ್ಜುಗೊಳಿಸಿತ್ತು, ಕಾರಿನಲ್ಲಿ ಕುಳಿತು ಹೋದ ದಾರಿ ಅದು ಪೆನ್ನು ಕದ್ದು ಮನೆಯೊಡತಿ ಆಚೆಕಳಿಸಿದ್ದ ಮನೆಯೆದುರೇ ಇವರ ವಾಸವಾಗಿತ್ತು. ನಮ್ಮ ಕಾಲ ಚೆನ್ನಾಗಿದೆಯೆಂದು ನಮಗಿಂತ ಕೀಳಾದವರ ಮೇಲೆ ದರ್ಪ ಸಾಧಿಸಬಾರದೆಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ಎದುರುಬದುರು ಮನೆ ಇವರನ್ನು ಕಂಡಾಗ ಆ ಮನೆಯೊಡತಿ ಶಾಂತಮ್ಮನಿಗೂ ಕಸಿವಿಸಿ. ಆದರೆ ಶಬರಿಯವರ ಮನೆ ಮನದಲ್ಲಿ ಯಾವ ಕಸಿವಿಸಿ ಇರಲಿಲ್ಲ.

ಇತ್ತ ಶಾರದೆ ಮತ್ತೊಂದು ಮನೆಯೊಡತಿ ಶಬರಿಗೆ ಮನೆ ಎಲ್ಲವೂ ವ್ಯವಸ್ಥೆಯಾದ ಮೇಲೆ ಚೆನ್ನಮ್ಮನನ್ನು ಕೆಲಸಕ್ಕೆ ಬರಬೇಡವೆಂದಾಗ ಬೇಸರಗೊಂಡ ಚೆನ್ನಮ್ಮ "ಏಕೆ!!?? ನಾನು ನಿಮ್ಮ ಮನೆಕೆಲಸ ಮಾಡಬಾರದು" ಎಂದ ಕೂಡಲೆ, ಒಂದು ಅಮೋಘ ಉತ್ತರವನ್ನೇ ಕೊಡುತ್ತಾರೆ. ನೀನು ಈಗ ಮಗಳಿಗೆ ಸೇವೆ ಮಾಡಿ ಮಗಳನ್ನು ನೋಡಿಕೊಂಡಿರು. ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಮಾತು ಹೇಳಿದರಾದರೂ ಕೇಳುವುದಿಲ್ಲ. ನೀವು ಅಂದಿನಿಂದ ನಮಗೆ ಆಸರೆ. ನನ್ನ ಮಗಳು ಶ್ರೀಮಂತೆಯಾಗುತ್ತಲಿದ್ದರೇನು..?? ಆ ವಿದ್ಯೆಯ ಸಿರಿ ನಿಮ್ಮ ವರದಾನ ದಯವಿಟ್ಟು, ನಾನು ಬದುಕಿರುವವರೆಗೂ ನಿಮ್ಮ ಮನೆಗೆಲಸ ಮಾಡುತ್ತೇನೆಂದು ಬೇಡುತ್ತಾಳೆ........ ಶಬರಿಗೂ ಈ ವಿಷಯ ತಿಳಿದು ಅಮ್ಮ ನೀನು ಬೇರೆಲ್ಲ ಕಡೆ ಕೆಲಸ ಮಾಡುವುದನ್ನು ಬಿಟ್ಟು ಬಿಡು. ಶಾರದಮ್ಮನವರ ಮನೆಯಲ್ಲಿ ನಿನ್ನ ಕೈಲಾದಷ್ಟು ಕೆಲಸ ಮಾಡು ಎಂದು ಹೇಳುತ್ತಾಳೆ ಚೆನ್ನಮ್ಮನಿಗೂ ಸರಿ ಎನಿಸುತ್ತೆ. ನಾನು ಆಗಾಗ ಬಿಡುವಿರುವಾಗ ನಿನಗೂ ಸಹಾಯ ಮಾಡಲು ಶಾರದಮ್ಮನವರ ಮನೆಯಲ್ಲಿ ಕೆಲಸಕ್ಕೆ ಬರುತ್ತೇನೆಂದ ಮಾತು ಮಾತ್ರ ಶಾರದಮ್ಮನ ಮನಸ್ಸು ಮರುಳಾಗುವಂತೆ ಮಾಡಿಬಿಡುತ್ತೆ. ತಕ್ಷಣ ಈ ವಿಷಯ ತಿಳಿದ ಶಾರದಮ್ಮ ಗಂಡ ಮಕ್ಕಳೊಂದಿಗೆ ಮಾರುಕಟ್ಟೆಗೆ ಹೋಗಿ ತನ್ನಿಷ್ಟವಾದ ವಸ್ತುಗಳನ್ನೆಲ್ಲಾ ತೆಗೆದುಕೊಂಡು. ಚೆನ್ನಮ್ಮನ ಮನೆಯತ್ತ ದಾವಿಸುತ್ತಾರೆ. ಕುಟುಂಬ ಸಮೇತರಾಗಿ ಬಂದವರಿಗೆ ಶಬರಿಯ ಕುಟುಂಬ ಸ್ವಾಗತಿಸಿ ಉಪಚಾರ ಮಾಡುತ್ತಾರೆ.

ಶಾರದಮ್ಮ ಶಬರಿಯಲ್ಲಿ ಬಂದು ನೀನು ಇನ್ನು ಆ ಗುಡಿಸಲು ಮರೆತಿಲ್ಲವಂತೆ...!!!!!! ದಿನಾ ಸಂಜೆ ದೀಪ ಹಚ್ಚಿ ಬರುವೆಯಂತೆ ಎಂದಾಗ ಚೆನ್ನಮ್ಮ ಆಶ್ಚರ್ಯದಿಂದ ನೋಡುತ್ತಾಳೆ. ಯಾರಿಗೂ ಈ ವಿಷಯ ತಿಳಿದಿರಲಿಲ್ಲ... ಗುಡಿಸಲನ್ನು ಗುಡಿಯಾಗಿ ಪೂಜಿಸುವ ಈ ಶಬರಿಯ ದೈವ ಭಕ್ತಿ.......... ಅಮ್ಮ ಅಪ್ಪನ ಕಂಗಳು ಮಾತ್ರ ಆ ವಿಷಯ ಕೇಳಿ ಜ್ಯೋತಿ ಬೆಳಗಿದಂತೆ ಬೆಳಗುತ್ತಿತ್ತು....

ಇತ್ತ ಬಂದವರತ್ತ ಗಮನಿಸುತ್ತ... ಚೆನ್ನಮ್ಮ, ನೀವು ಬಂದದ್ದು ನಮಗೆ ಖುಷಿಯಾಯಿತು. ಶಾರದಮ್ಮ ನೀವು ನಮ್ಮೊಂದಿಗೆ ಊಟ ಮಾಡಿಯೇ ಹೋಗಬೇಕು, ಶಬರಿಯೇ ಇಂದು ಅಡಿಗೆ ಮಾಡುತ್ತಾಳಂತೆ ಇದ್ದು ಬಿಡಿ ಎಂದು ಒತ್ತಾಯ ಹೇರುತ್ತಾರೆ.......... ಊಟವೇನು ನಾನು ಇಂದು ಇಲ್ಲೇ ಇರುತ್ತೇನೆ ನನ್ನಾಸೆ ಒಂದಿದೆ ಅದನ್ನು ಪೂರೈಸಬೇಕು ಇದರಲ್ಲಿ ಒತ್ತಡವೇನಿಲ್ಲ....... ನಿಮ್ಮ ಅಭಿಪ್ರಾಯ ತಿಳಿಸಬೇಕು ಎಂದಾಗ ಚೆನ್ನಮ್ಮ ಗಂಡನ ಮುಖ ನೋಡುತ್ತಾಳೆ. ಅತ್ತ ಶಬರಿಯೂ ಅವಕ್ಕಾಗಿಬಿಡುತ್ತಾಳೆ. ಏನೆಂಬ ಕುತೂಹಲ!!! ಮೆದು ದನಿಯಲ್ಲೇ ಶಾರದಮ್ಮ ನನ್ನ ಮನೆಯವರೆಲ್ಲ ಒಪ್ಪಿ ಈ ನಿರ್ಧಾರಕ್ಕೆ ಬಂದಿದ್ದೇವೆ ಚೆನ್ನಮ್ಮ ನನ್ನ ಮನೆ ಕೆಲಸ ಬಿಡೋಲ್ಲವಂತೆ ಅದಕ್ಕೆ ನಾನು ಒಂದು ಮಾತನ್ನು ಕೇಳಬೇಕು....ಹಾ!!! ಹೇಳಿ ಶಾರದಮ್ಮ ನೀವು ಏನು ಹೇಳಿದರೂ ಕೇಳುವೆ ಎಂದಾಗ ಸರಿ............ ನೀನು ಇನ್ನು ಮೇಲೆ ನಮ್ಮ ಮನೆ ಕೆಲಸ ಮಾಡುವುದು ಬೇಡ!!!!!!!!!! ಅಯ್ಯೋ ಅದು ಆಗದ ಕೆಲಸ ನಾವೆಲ್ಲ ಒಪ್ಪಿಕೊಂಡೆ ನಿಮ್ಮ ಮನೆ ಕೆಲಸಕ್ಕೆ ಬರ್ತಾ ಇರೋದು, ಅದು ಬದಲಾಗುವುದಿಲ್ಲ ಎಂದಾಗ ಇಲ್ಲ ಚೆನ್ನಮ್ಮ, ನಿನ್ನ ಬದಲು ನಿನ್ನ ಮಗಳು ನನ್ನ ಮನೆ ಕೆಲಸಕ್ಕೆ ಸಮಯವಿದ್ದಾಗ ನಿನಗೆ ಸಹಾಯ ಮಾಡ್ತೀನಿ ಎಂದಳಲ್ಲಾ ಅದಕ್ಕೆ... ಅದಕ್ಕೆ.... ಶಬರಿಯೇ ನಮ್ಮ ಮನೆಯಲ್ಲಿ ಪೂರ್ಣ ಕೆಲಸ ಮಾಡಿಕೊಂಡಿರಲಿ ಎಂದು ಒತ್ತಾಯವಾಗಿ ಹೇಳಿದಾಗ ಚೆನ್ನಮ್ಮನಿಗೇಕೋ ಕಸಿವಿಸಿ, ಇದೇನು ಅವಳು ಅಂತಾ ದೊಡ್ಡ ಹುದ್ದೆ ವಿದ್ಯಾವಂತೆ ಇಷ್ಟೆಲ್ಲಾ ಇದ್ದು ಹೀಗೆ ಕೇಳ್ತಾರಲ್ಲ ಎಂದು ತಟ್ಟನೆ ಶಬರಿ ಕ್ಷಮಿಸಿ ಬೇಸರವಾಗಬೇಡಿ ನನಗೆ ಗೊತ್ತು ಅಮ್ಮನಿಗೆ ವಯ್ಯಸ್ಸಾಗಿದೆ ಶ್ರಮ ಬೇಡವೆಂದು ನಿಮ್ಮ ಮಾತು, ನನಗೆ ಕಚೇರಿ ಕೆಲಸ ಜಾಸ್ತಿ, ಅದು ಮುಗಿಸಿ ಬರುವುದೇ ತಡವಾಗುತ್ತೆ ಬೇಕಾದರೆ ನನ್ನ ತಂಗಿಯನ್ನು ಕಳಿಸುವೆ ನಾ ಬಿಡುವಿರುವಾಗ ಬರುವೆ ಎಂದು ಕೇಳಿಕೊಳ್ಳುತ್ತಾಳೆ ಶಾರದೆಯ ಅಂದಿನ ಸಹಾಯಕ್ಕೆ ಇಂದು ಈ ಕೃತಜ್ಞತಾ ಭಾವ!!!!!!!!!!

ಒಮ್ಮೆ ಎದ್ದು ನಿಂತ ಶಾರದೆ ಕ್ಷಮಿಸು ಶಬರಿ, ನೀನು ನನ್ನ ಮನೆಕೆಲಸದವಳಂತೆ ಬೇಡ ನನಗೆ ನೀನು ಮನೆಮಗಳಂತೆ ಸೊಸೆಯಾಗಿ ಬರಬೇಕು........!!!!!!!!!!! ಎಂದಿದ್ದೇ ಎಲ್ಲರು ದಿಗ್ಭ್ರಾಂತರಾಗುತ್ತಾರೆ. ಇದು ಸಹಜ, ಶಾರದಮ್ಮ ಅದ್ಧೂರಿ ಶ್ರೀಮಂತೆ, ಇವರ ಸ್ಥಾನವೇ ಬೇರೆ, ಅವರೆಲ್ಲಿ ನಾವೆಲ್ಲಿ ಎಂಬ ಭಾವನೆ. ಆದರೆ ಶ್ರೀಮಂತ ಮನಸಿನಲ್ಲಿ ತೀರ್ಮಾನ ಮಾಡಿದ ಶಾರದಮ್ಮನ ಮಾತಿಗೆ ಚೆನ್ನಮ್ಮ, ಚೆನ್ನಯ್ಯ ಇಬ್ಬರೂ ಒಪ್ಪುತ್ತಾರೆ.........ಆದರೆ ಶಬರಿ ಒಪ್ಪುವುದಿಲ್ಲ........ನನ್ನನ್ನು ನೀವು ಋಣಕ್ಕೆ ಸಿಕ್ಕಿಸುತ್ತಿದ್ದೀರಾ... ಅದೂ ಅಲ್ಲದೆ ನಾನು ಮದುವೆಯಾದರೆ ನನ್ನ ಮನೆ ನೆಡೆಸುವುದು ಅವರಿಗೆ ಕಷ್ಟ. ಅಪ್ಪ ಅಮ್ಮ ಸುಖವಾಗಿರಬೇಕು, ತಂಗಿ ತಮ್ಮನ ವಿದ್ಯಾಭ್ಯಾಸಕ್ಕೆ ಕುಂದು ಬರುವುದೆಂದಾಗ ಶಾರದಮ್ಮ ಇಲ್ಲ ಶಬರಿ ನಾನು ಯಾವ ಋಣಕ್ಕೂ ತಳ್ಳುತ್ತಿಲ್ಲ ನಿನ್ನಂತ ಮಗಳು ನನಗಿಲ್ಲ ಸೊಸೆಯೇ ಮಗಳೆಂಬುದಾಸೆ, ಇನ್ನು ನಿನ್ನ ಕುಟುಂಬಕ್ಕೆ ನಿನ್ನ ದುಡಿಮೆ ಮೀಸಲಿಡು ನಮ್ಮತ್ತ ಸ್ವಲ್ಪವೂ ಬಾರದಿರಲಿ, ಅವರ ಆಗುಹೋಗುಗಳೆಲ್ಲ ನಿನ್ನಿಂದಲೇ ಸಾಗಲಿ......... ಎಂದೇಳಿ ಮಾರುಕಟ್ಟೆ ಇಂದ ಹೊತ್ತು ತಂದಿದ್ದ ರೇಷ್ಮೇ ಸೀರೆ ಒಡವೆ, ಹಣ್ಣು ಹೂ ಎಲ್ಲವನ್ನು ಬ್ಯಾಗಿನಿಂದ ತೆಗೆದು ಆ ಪುಟ್ಟ ಕಂಗಳ ಮುಂದಿಟ್ಟು ಇದು ನನ್ನ ಆಸೆ, ಪೂರೈಸು ಎಂದು ಕರಮುಗಿದು ಕೇಳಿಕೊಳ್ಳುತ್ತಾಳೆ. ಅಪ್ಪ ಅಮ್ಮ ಮಗಳನ್ನು ಒಪ್ಪಿಸಿ.....ಕೊನೆಗೆ ಆ ಶ್ರೀಮಂತ ಮನೆಗೆ ಗುಡಿಸಿಲಿನ ನಂದಾದೀಪ ಬೆಳಕಾಗುವಂತೆ ಮಾಡುತ್ತಾರೆ.

Monday, March 7, 2011

ದೂರದ ಬೆಟ್ಟ-1

ನನ್ನದು ದೊಡ್ಡ ಸಂಸಾರ ಬಾಂಗ್ಲಾ ದೇಶದ ಪುಟ್ಟ ಹಳ್ಳಿಲಿ ನನ್ನ ಅಪ್ಪ ಅಮ್ಮ ೪ ತಂಗಿಯರು ೩ ತಮ್ಮಂದಿರು ಇದ್ದಾರೆ..... ಜೀವನ ಸಾಗಿಸೋದೆ ಕಷ್ಟ ಹಾಗಿಬಿಟ್ಟಿದೆ ಯಾರೋ ಹೇಳಿದ್ರು ಅರಬಿ ದೇಶಕ್ಕೆ ಹೋದರೆ ಒಳ್ಳೆ ದುಡ್ಡು ಮಾಡಬಹುದು ಎಂದು, ಅದಕ್ಕೆ ಈ ಏಜೆಂಟರುಗಳಿಗೆ ಲಕ್ಷ ಕಕ್ಕಿ, ಆಕಾಶದಲ್ಲಿ ಹಾರಾಡಿಕೊಂಡು ಬಂದೆ...... ಈ ಬೃಹತ್ ನಗರ ಎಲ್ಲೆಲ್ಲೂ ಬಣ್ಣ ಬಣ್ಣ ಕಟ್ಟಡ, ಐಷಾರಾಮಿ ಜೀವನ ಜನ ನೋಡಿ ನನ್ನ ಜೀವನವೂ ಇವರಂಗೆ ಚೆನ್ನಾಗಿ ಹಾಗುತ್ತೆ, ನನ್ನ ತಂಗೀರ ಮದುವೆ ಮಾಡಬಹುದು ಎಂದು ಮರುಭೂಮಿ ಪ್ರವೇಶಿಸಿದೆ. ನನ್ನವರು ಯಾರು ಇಲ್ಲ ಏಜೆಂಟ್ ಕೊಟ್ಟಿದ್ದ ವಿಳಾಸಕ್ಕೆ ಹೇಗೋ ಬಂದು ಕೂತೆ..... ಆ ವಿಳಾಸ ಕೂಡ ಏಜೆಂಟ್ ತರಹವೇ ಇವರ ಮೂಲಕ ಯಾವುದಾದ್ರು ಒಂದು ಕಂಪನಿ ಕೆಲಸಕ್ಕೆ ಸೇರಿಸ್ತಾರೆ ಎಂದುಕೊಂಡು ಅಲ್ಲೇ ಇದ್ದ ಅಧಿಕಾರಿ ಹತ್ತಿರ ಮಾತಾಡಿದೆ, ಅವರು ನಾಳೆ ಬರಲು ಹೇಳಿದ್ರು......ನಾಳೆ...ನಾಳೆ... ಓ ಈ ನಾಳೆಯ ಪ್ರಶ್ನೆ ನನ್ನ ಕಾಡಿತು..? ನಾಳೆವರೆಗು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿತ್ತು. ಉಳಿಯಲು ಮನೆ, ಮಠ ಏನಿಲ್ಲ.......... ಅಲ್ಲೇ ಪಕ್ಕದಲ್ಲಿದ್ದವನ ಕೇಳಿದೆ ರಾತ್ರಿ ಉಳಿಯಲು ಏನು ಮಾಡಬೇಕಿಲ್ಲಿ.... ಎಂದಾಗ ಪುಣ್ಯಾತ್ಮ ಹಸುನಗೆಯಿಂದ ನನ್ನ ಮಾತನಾಡಿಸಿ ಅವನೊಟ್ಟಿಗೆ ಕರೆದುಕೊಂಡೋಗಿ ಅವನ ಮನೆಯಲ್ಲಿಯೇ ಇರಿಸಿಕೊಂಡ, ನಂತರ ಬೆಳಗ್ಗೆ ತನ್ನೊಟ್ಟಿಗೆ ಕರೆದುಕೊಂಡು ಅದೇ ಕಛೇರಿಗೆ ತಲುಪಿಸಿದ.... ಬಾಯಾರಿಕೆಗೆ ಒಂದು ಗುಟುಗು ನೀರು ದಣಿವಾರಿಸುವುದು ಎಂದೆನಿಸಿತು...!!!!

ಅಧಿಕಾರಿ ಎಲ್ಲವನ್ನು ವ್ಯವಸ್ಥೆ ಮಾಡಿದ್ದೇನೆ....... ಒಂದು ಕಂಪನಿಯವರು ಬರ್ತಾರೆ ಅವರ ಜೊತೆ ಹೋಗು ನಿನ್ಗೆ ಕೆಲಸ ಕೊಡ್ತಾರೆ ಎಂದೇಳಿ ಅಲ್ಲೇ ಕೂರಲು ಹೇಳಿದ್ರು......ಸುಮಾರು ೧೦ ಗಂಟೆ ಇರಬೇಕು ದಢೂತಿ ಮನುಷ್ಯ ಬಂದ ಅಧಿಕಾರಿಯತ್ತಿರ ಅರಬಿನಲ್ಲಿ ಬಡ ಬಡನೇ ಮಾತಾಡಿ......ನನ್ನ ಕೈ ಸನ್ನೆ ಮಾಡಿ ಕರೆದುಕೊಂಡು ಹೋದ ನಾನು ಅವನನ್ನೇ ಹಿಂಬಾಲಿಸಿ ನಾಯಿ ಕೈಯ್ಯಲ್ಲಿರೋ ಬಿಸ್ಕತ್ತಿಗೆ ಓಡಿದಂತೆ....ನಡೆದೆ......... ಅವನ ಕಾರಿನಲ್ಲಿ ಕುಳಿತಿರುವಂತೆ.. ವಾಹ್..!!! ಒಳ್ಳೆಯ ಕಾರು ಎಷ್ಟು ಚೆನ್ನಾಗಿದೆ. ಎಂತಾ ಅದೃಷ್ಟವಂತ ಎಂದುಕೊಳ್ಳುತ್ತಲಿದ್ದೆ ಅಷ್ಟರಲ್ಲಿ ಆ ಕಛೇರಿ ಬಂತು. ಒಳಗೆ ಕರೆದೊಯ್ದವನೇ ಅಲ್ಲಿ ಯಾರೋ ಕುಳಿತಿದ್ದವರತ್ತ ಬೆರಳು ಮಾಡಿತೋರಿಸಿ ನಡೆಯೆಂದ..........ಅಲ್ಲಿ ಅವರತ್ತ ಹೋಗಿ ನಮಸ್ಕಾರವೆಂದು ಹೇಳಿದೆ....ಅವನು ಸಹ ಬಾಂಗ್ಲಾ ದೇಶದವನಾದ್ದರಿಂದ ನನಗೆ ಭಾಷೆ ತೊಂದರೆಯೆನಿಸಲಿಲ್ಲ...... ನೀನು ಉಳಿದುಕೊಳ್ಳಲು, ಮತ್ತೆ ಊಟ ಕೆಲಸಕ್ಕೆ ಕರೆದೊಯ್ಯುವ ವಾಹನ ಎಲ್ಲ ವ್ಯವಸ್ಥೆ ಇದೆ. ಬೆಳ್ಳಿಗ್ಗೆ ೫ ಗಂಟೆಗೆ ಮನೆಯತ್ತಿರ ವ್ಯಾನ್ ಬರುತ್ತೆ ತಯಾರಾಗಿರಬೇಕು. ಈಗ ಹೊರಡು ನಿನಗೆ ನಿನ್ನ ರೂಂ ತೋರಿಸುವೆನೆಂದು ಅಲ್ಲೇ ಇದ್ದ ಬ್ಯಾಚುಲರ್ ಮನೆಗಳತ್ತ ಕರೆತಂದು ಬಿಟ್ಟರು.......

ಇತ್ತ ಮನೆಯಲ್ಲಿ ಯಾರೂಬ್ಬರು ಇರಲಿಲ್ಲ, ಕೆಲವು ಬಟ್ಟೆಬರೆಗಳು ಮಾತ್ರ ಇದ್ದವೂ. ಆಗ ಅನ್ನಿಸಿತು ಬೇರೊಬ್ಬರೂ ಇರಬಹುದೆಂದು.... ಸಂಜೆಯಾಗುತ್ತಲಿದ್ದಂತೆ ೪ ಜನ ಅದೇ ರೂಮಿನಲ್ಲುಳಿದರು ಆಗಲೇ ಅರ್ಥವಾಗಿದ್ದು ಈ ಪುಟ್ಟ ಕೋಣೆಯಲ್ಲಿ ೫ ಜನರಿಗೆ ವಾಸವೆಂದು.... ನನ್ನ ಜೊತೆಯಿದ್ದವರು ಪರಿಚಯವಾಯ್ತು ಅವರೆಲ್ಲರೂ ನನ್ನೂರಿನ ಕಡೆಯವರೆಂದು ತಿಳಿದು ಕುಷಿಯಾಯಿತು...... ಬೆಳ್ಳಿಗ್ಗೆ ೪ ಗಂಟೆಗೆ ಎದ್ದು ತಯಾರಾದೆ ಏನೋ ದೊಡ್ಡ ಕೆಲಸವೆಂದು ಅಮ್ಮ ಕೊಡಿಸಿದ್ದ ಗರಿ ಗರಿಯಾದ ಬಿಳಿ ಶರ್ಟ್ ತೊಟ್ಟು ಎಲ್ಲರ ಜೊತೆ ನಡೆದೆ........... ಯಾವುದೋ ನಿರ್ಜನ ಪ್ರದೇಶದ ತರವಿತ್ತು. ರಸ್ತೆ ಬದಿಯಲ್ಲಿ ಯಾರೊಬ್ಬರೂ ಇರಲಿಲ್ಲ, ಸುತ್ತ ನೋಡುತ್ತಿದ್ದಂತೆ ನನ್ನ ಕಣ್ಣಾಯಿಸ ದೂರಕ್ಕೂ ಢಾಂಬರಿನ ರಸ್ತೆ ಮಾತ್ರ ಕಾಣುತ್ತಿತ್ತು. ನನ್ನ್ ವ್ಯಾನಿಂದ ಇಳಿಸಿದವರೇ ಇವನಿಗೆ ಕೆಲಸ ಏನೆಂದು ತಿಳಿಸಿಕೊಡು ಎಂದೇಳಿ ನಡೆದೇ ಬಿಟ್ಟನು ವ್ಯಾನಿನ ಚಾಲಕ......

ಪಕ್ಕದಲ್ಲಿದ್ದವ್ನು ಹಳದಿ ಬಣ್ಣದ ಮೇಲಿಂದ್ದ ಕೆಳಗೆ ಒಂದೇ ಬಣ್ಣದ ಶರ್ಟ್ ಪ್ಯಾಂಟ್ ಒಂದೇ ಒಲಿಗೆಯಲ್ಲಿರುವಂತ ಬಟ್ಟೆ ಕೊಟ್ಟು ನೀನು ಇದನ್ನ ನಿನ್ನ ಬಟ್ಟೆ ಮೇಲೆ ತೊಟ್ಟಿಕೋ ಎಂದ ಎಲ್ಲರೂ ಅದೇ ಸಮವಸ್ತ್ರದಲ್ಲಿದ್ದರೂ........ನಾನು ತೊಟ್ಟುಕೊಂಡು ಏನು ಕೆಲಸವೆಂದು ಕೇಳಿದೆ ಕೈಗೆ ಕಸ ಗುಡಿಸುವ ಪೊರಕೆ ತರಹದ್ದು....ಜೊತೆಗೊಂದು ಮೊರವನ್ನು ಕೊಟ್ಟು ನೋಡು......... ಈ ರಸ್ತೆಯನ್ನೆಲ್ಲಾ ಗುಡಿಸಿ, ಆನಂತರ ಅದೋ ಅಲ್ಲಿ ಕಾಣುತ್ತಲ್ಲ ದೊಡ್ಡ ಕಸದ ಬುಟ್ಟಿಗೆ ಹಾಕಬೇಕೆಂದ...........ಏನೋ ಆಫೀಸಿನ ಕೆಲಸ, ಘನತೆ, ಗೌರವ ಇರುತ್ತೆ, ನಾನು ಒಂದು ಡಿಗ್ರಿ ಮಾಡಿದ್ದೇನೆ ಅದಕ್ಕೆ ತಕ್ಕಂತೆ ಕೊಡುತ್ತಾರೆಂದು ಭಾವಿಸಿ ಬಂದರೆ ನನಗೆ ಇದು ಆಘಾತವೇ ಸರಿ......... ಮನಸ್ಸು ಒಮ್ಮೆಲೇ ಕದಡಿ ಹೋಯ್ತು........ ಗೊತ್ತಾಯ್ತ ನಿನ್ನ ಕೆಲಸವೇನೆಂದು...?? ಜೋರು ಧ್ವನಿ ಆ ಕಡೆಯಿಂದ ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದದ್ದು.......... ಆಗಲೆನ್ನುವಂತೆ ಕತ್ತಾಡಿಸಿ ಸುಮ್ಮನೆ ಮುಂದೆ ನೆಡೆದೆ............ ರಸ್ತೆ ಬದಿ ಗುಡಿಸುತ್ತಾ........... ನನ್ನಪ್ಪನ ಜಮೀನು ಕಡಿಮೆಯಿದ್ದರೂ, ಭೂಮಿ ತಾಯಿ ಸೇವೆ ಮಾಡಿ ನಾನು ಒಡೆಯನಂತಿದ್ದೆ........ ನಗುವ ಅಮ್ಮ, ಸಲಹುವ ತಂಗಿಯರು, ಸ್ನೇಹದ ಸ್ನೇಹಿತರು, ಹಾರೈಸೋ ಅಪ್ಪ ಎಲ್ಲರೂ ಒಮ್ಮೆಲೇ ನನ್ನ ಕಣ್ಣ ಮುಂದೆ ಬಂದರು.......... ನನ್ನ ಕಣ್ಣು ಒದ್ದೆಯಾಗಿ ಹನಿ ಹನಿಯಾಗಿ ನಾ ಗುಡಿಸುತ್ತಿದ್ದ ಕಸದಲ್ಲಿ ಬೆರೆತು ಹೋಯ್ತು....

ಅಮ್ಮ ನಿನ್ನ ಕೈ ತುತ್ತಿಲ್ಲ, ನಾ ರಾಜನಂತಿದ್ದ ಹಾವಭಾವವಿಲ್ಲ........... ನನ್ನ ಮನೆ ಉದ್ದರಿಸಲು ಇಲ್ಲಿ ಬಂದೆ ಇಲ್ಲಿಯೂ ನಾನಂದುಕೊಂಡಂತಿಲ್ಲ........... ಮನಸ್ಸಲ್ಲೇ ಊರಿನ ಚಿತ್ರಣವನ್ನು ಚಿತ್ರಿಸುತ್ತಾ............ಆ ರಸ್ತೆಯ ಉದ್ದಗಲ ಗುಡಿಸಿ ಕಣ್ಣೀರಿನಲ್ಲೇ ಸಾರಿಸಿಬಿಟ್ಟೆ.......... ಇದೆಲ್ಲದರ ನೆನಪಲ್ಲಿ ಮರುಭೂಮಿಯ ಉರಿಬಿಸಿಲು ನನ್ನ ಸುಟ್ಟು ಕರಕಲು ಮಾಡಿತ್ತು. ಯಾವ ಕಡೆ ಗಮನವೇ ಇರಲಿಲ್ಲ......... ಅಷ್ಟು ನೊಂದುಬಿಟ್ಟಿತ್ತು ನನ್ನ ಮನಸ್ಸು......... ಹಾಗಿದ್ದು ಆಯ್ತು ಇನ್ನೇನು ಮಾಡುವುದು ಇರುವ ಕೆಲಸವೇ ಚೆನ್ನ ಎಂದು ಜೀವಿಸೋಣ ನನಗೆ ಬೇರೆ ಈ ಊರು ಹೊಸದು ಏನು ಮಾಡಲಾಗದು, ಅದೂ ಅಲ್ಲದೆ ನನ್ನ ಪಾಸ್ ಪೋರ್ಟ್ ಬೇರೆ ಕೆಲಸ ಕೊಟ್ಟಿರುವವ ಹತ್ತಿರವಿದೆ.....ನಾ ಊರಿಗೆ ಓಡಿಹೋಗುವ ಹಾಗೂ ಇಲ್ಲ.!?? ಹೃದಯವೇಕೋ ಭಾರವಾಗಿತ್ತು, ಉಸಿರಾಡಲು ಜೀವ ಏಕೋ ಮನಸುಮಾಡ್ತಾನೇ ಇಲ್ಲ ಅನ್ನಿಸ್ತಾ ಇತ್ತು. ರಾತ್ರಿ ಕೆಲಸವೆಲ್ಲ ಮುಗಿಸಿ ಹೋದಾಗ ರಾತ್ರಿ ಹತ್ತೊವರೆಯಾಗಿತ್ತು.......ಊಟವೇನು ಬೇಡವೆನಿಸಿ ಮಲಗಿಬಿಟ್ಟೆ ........... ಬೆಳಿಗ್ಗೆ ಮಾಮೂಲಿ ಕೆಲಸ ಜೊತೆಗಾರರಿಂದ ಹಿತವಚನ ಇಲ್ಲಿನ ಜೀವನವೇ ಹೀಗೆ ............... ಸ್ವಲ್ಪದಿನ ಎಲ್ಲ ಸರಿಹೋಗುವುದು.....ಎಂದು ಸಮಾಧಾನ ಮಾಡಿದರು.........ನಾನು ನನ್ನನ್ನೇ ಸಮಾಧಾನಿಸಿದೆ ನಿನ್ನ ಹಣೆಬರಹದಂತಾಗುವುದೆಂದು ನನ್ನ ದುಃಖಕ್ಕೆ ನಾನೇ ಸಂತೈಸಿಕೊಂಡೆ.

ಹೀಗೆ ಕೆಲಸ ಸಾಗಿಸಿದೆ..... ಅಮ್ಮನ್ನಿಗೆ ಆಗೊಮ್ಮೆ ಈಗೊಮ್ಮೆ ಕರೆಮಾಡಿ ಸಂತಸದಿ ಹೇಳಿದೆ ಅಮ್ಮ, ನನ್ನ ಕೆಲಸ ದೊಡ್ಡದು ನನಗೆ ಒಂದು ದೊಡ್ಡ ಕಛೇರಿ ಕೊಟ್ಟಿದ್ದಾರೆ. ನನ್ನ ರಸ್ತೆಗೆ ನಾನೇ ರಾಜನಮ್ಮ???!!! ಯಾವ ಕೊರತೆಯಿಲ್ಲ ನೀ ಸಂತಸದಿರು ಮುಂಬರುವ ತಿಂಗಳು ಬರುವ ಸಂಬಳದಿ ನಿನಗೆ ಹಣ ಕಳಿಸುವೆ ....... ತಮ್ಮ, ತಂಗಿಯರಿಗೆ ಶಾಲೆಗೆ ಕಳಿಸು ಎಂದೇಳಿ ಫೋನ್ ಕೆಳಗಿಟ್ಟು.... ಗಳಗಳನೇ ಗಂಡ್ಸು, ಹೆಣ್ಣು ಅಳುವಂತೆ ಅತ್ತು ಬಿಟ್ಟೆ.......... ಹೀಗೆ ದಿನಗಳು ಉರುಳಿ ತಿಂಗಳು ಬಂದಿತು ಮೊದಲ ಸಂಬಳ ಮನಸ್ಸಲ್ಲಿ ಎಷ್ಟು ಸಂಬಳ ಕೊಡುವರೆಂದು ಯೋಚಿಸುತ್ತಿದ್ದೆ...........ನಾವು ಬರುವಾಗ ಊರಲ್ಲಿ ಏಜೆಂಟ್ ಹೇಳಿದ್ದ ಸಂಬಳ ತಿಂಗಳಿಗೆ ೨೦ ಸಾವಿರ ಕೊಡುತ್ತಾರೆಂದು ಅಬ್ಬಾ...!!!!!!!!! ಈ ದುಡ್ಡಲ್ಲಿ ಅರ್ಧ ಕಳಿಸಿದರೆ ನಮ್ಮ ಮನೆಮಂದಿ ತಿಂದು ತೇಗಬಹುದೆಂದುಕೊಂಡೆ ಆದರೆ ಇವರು ಬರಿ ೮ ಸಾವಿರ ಕೊಟ್ಟಾಗಲೇ ಅರಿತಿದ್ದು........ ಮೋಸ ಹೋದೆನೆಂದು ಬಡವ ಬೇರೆ, ಊರಿಗೆ ಹೊಸಬ ಏನು ಮಾತನಾಡುವುದು ಕಂಡೋರ ದೇಶದಲ್ಲಿ ನಮ್ಮದೇನು ದರ್ಬಾರು ನಡೆಯೋಲ್ಲ.......ಎಂದು ಅಲ್ಲೂ ನನ್ನ ಹೃದಯ ಸಾವರಿಸಿಕೊಳ್ಳ ಬೇಕಾಯಿತು.........

ಬಂದ ದುಡ್ಡಲ್ಲಿ ಕೇವಲ ೫೦೦ ರುಪಾಯಿಯಷ್ಟು ನನ್ನತ್ತಿರ ಇಟ್ಟುಕೊಂಡು ಉಳಿದದ್ದೆಲ್ಲಾ ಊರಿಗೆ ಕಳಿಸಿಬಿಟ್ಟೆ.........ಮನೆಮಂದಿ ಸಂತಸವಾಗಿರಲಿ.......ಎಲ್ಲರೂ ಚೆನ್ನಾಗಿರಲೆಂದು ಇದು ವರ್ಷಗಟ್ಟಲೆ ನೆಡೆಯಿತು.........ನಾನು ಬಂದ ಎರಡು ವರ್ಷಕ್ಕೆ ತಂಗಿ ಇಬ್ಬರ ಮದುವೆಯಾಯಿತು. ಇನ್ನೊಬ್ಬಳ ತಂಗಿಯ ಮದುವೆ ತಯಾರಿಯಲ್ಲಿದೆ ಯಾರೊಬ್ಬರೂ ನೀನು ಬರಬೇಕು ಮದುವೆಗೆ ಎನ್ನಲಿಲ್ಲ.....ಅಮ್ಮನಿಗೆ ಕರೆ ಮಾಡಿದರೆ ನೀನು ವಿಮಾನದಲ್ಲಿ ಬರುವ ಖರ್ಚಿಗೆ ನಿನ್ನ ಇನ್ನೊಬ್ಬಳ ತಂಗಿ ಮದುವೆ ಮುಗಿಸಬಹುದು ನೀನು ಅಲ್ಲಿದ್ದೇ ಹಣ ಕಳಿಸೆಂದಾಗ ನನ್ನ ಎದೆಭಾರ ಇಳಿಸಲು ಸಾಧ್ಯವೇ ಹಾಗಲಿಲ್ಲ.......ಅಮ್ಮನರ್ಥ ಬೇರೆ ಇದ್ದರೂ, ಮೂರುವರ್ಷ ಊರಿಗೆ ಹೋಗಿಲ್ಲ ನನ್ನವರ ಮುಖ ನೋಡಿಲ್ಲ....ನನ್ನೂರ ಗಾಳಿ ಕುಡಿದಿಲ್ಲ, ಎಂಬ ಆಸೆ ಅಲ್ಲದೆ ನನ್ನ ಒಡಹುಟ್ಟಿದ ತಂಗಿ ಮದುವೆ ನೋಡುವಾಸೆ ಎಲ್ಲವೂ ನಶಿಸಿ ಹೋಯ್ತು.............
ಅಮ್ಮನಾಸೆಯಂತೆ ನಾನು ನೆಡೆದುಕೊಂಡೆ.......... ಈಗಾಗಲೇ ೫ ವರ್ಷಕ್ಕೆ ಬಂತು ನಾನು ಊರು ಬಿಟ್ಟು.......ಈಗ ಊರಿನ ಜನ, ಮನೆವಾತಾವರಣ ಎಲ್ಲಾ ನೆನಪು ಮಾತ್ರ .... ನನಗೀಗಾಗಲೇ ೩೫ ವರ್ಷ ಮಿಕ್ಕ ಒಬ್ಬ ತಂಗಿಯ ಮದುವೆಯೂ ಮುಗಿಯಿತು ಈಗಲಾದರೂ ಊರಿಗೆ ಹೋಗಿ ನನ್ನ ಮದುವೆಯಾಗೋಣ ಎಂದಿನಿಸ್ತಾ ಇದೆ....... ಮದುವೆ ಈಗಲ್ಲದೆ ಇನ್ನು ಎಷ್ಟು ದಿನ ಕಾಯಲಿ............ನಾ ಇಲ್ಲಿ ಕಷ್ಟ ಪಟ್ಟಿರುವೆ ಇನ್ನಾದರೂ ಮದುವೆ ಮಾಡಿಕೊಳ್ಳೋಣ ಹೇಗೋ ಕಸ ಗುಡಿಸೋ ಕೆಲಸದಿಂದ ಜನರ ಕೈ ಕಾಲು ಹಿಡಿದು ಇಂದು ಆಫೀಸ್ ಬಾಯ್ ಕೆಲಸಕ್ಕೆ ಬಂದು ಬಿಟ್ಟೆ. ಇದೇ ನನ್ನ ದೊಡ್ಡ ಸಾಧನೆ....... ಈ ಕೆಲಸ ಮುಗಿಸಿ ರಾತ್ರಿ ಹೊತ್ತು ಕೆಲಸವೂ ಮಾಡಿದೆ. ಎರಡು ಕಡೆ ದುಡಿದಿದ್ದಕ್ಕೆ ನನ್ನ ಮನೆ ಒಂದು ದಾರಿಗೆ ಬಂದಿದೆ ಎಂದು ಊರಲ್ಲಿ ಜನರು ಭಾವಿಸುತ್ತಾರೆ.....ಬಡತನದ ಕರಿ ನೆರಳು ಕಾಡುತ್ತಿದ್ದ ದಿನಗಳು ಕಳೆದಿವೆ ...........ನನ್ನ ಮನಸ್ಸು ಈಗ ಹಗುರಾಗಿದೆ............ಅಮ್ಮ ಅಪ್ಪನಿಗೆ ಕರೆಮಾಡಿ ಮಾತನಾಡಿ ಊರಿಗೆ ಬರುತ್ತೀನಿ ಅಂತೇಳಿ ಬಿಡ್ತೀನಿ ಖುಷಿ ಆಗ್ತಾರೆ...........

ಅಪ್ಪ ನಾನು ಊರಿಗೆ ಬರೋಣ ಅಂತ ಇದ್ದೀನಿ ........... ಆದಷ್ಟು ಬೇಗ ಬರ್ತೀನಿ ಎಂದರೆ ಅಪ್ಪನ್ಯಾಕೋ ಬೇಸರ ಪಟ್ಟುಕೋತಾ ಇದ್ದಂಗೆ ಅನ್ನಿಸಿತು...ಏನಾಯ್ತು....ಎಂದರೆ ಮಗನೇ ನಾನೇ ಫೋನ್ ಮಾಡೋಣ ಎಂದಿದ್ದೇ ಏನು ಗೊತ್ತ ಸ್ವಲ್ಪ ದುಡ್ಡು ಬೇಕಾಗಿತ್ತು.... ನಿನ್ನ ತಮ್ಮ ಇದ್ದಾನಲ್ಲ, ಅವನು ಯಾರನ್ನೋ ಪ್ರೀತಿಸಿದ್ದಾನಂತೆ ಮದುವೆ ಮಾಡಿಬಿಡೋಣ ಎಂದು ಹಂಗೆ ಇನ್ನೊಬ್ಬ ಚಿಕ್ಕ ತಮ್ಮನಿಗೂ ಹುಡುಕಿದ್ದೇವೆ. ಇಬ್ಬರ ಮದುವೆ ಮುಗಿಸಿಬಿಡುವೆವು........ ಸ್ವಲ್ಪ ದುಡ್ಡು ಕಳಿಸು ನಿನ್ಗೆ ಬರೋಕ್ಕಾದರೆ ಬಾ ಇಲ್ಲವೆಂದರೆ ತೊಂದರೆ ಇಲ್ಲ......ನಾವಿದ್ದು ಎಲ್ಲಾ ನಿಭಾಯಿಸುತ್ತೇವೆ. ಎಂದಾಗ ನನ್ನ ಹೃದಯಕ್ಕೆ ಹೇಗಾಗಿರಬೇಡ ............. ಕೈಕಾಲು ಕುಗ್ಗಿ ಬಿದ್ದಂತೆನಿಸಿತು....... ನಾನು ನನ್ನವರಿಗಾಗಿ ಮಾಡಿದ್ದು ಏನು ಫಲಿಸಲಿಲ್ಲ.........೫ ವರ್ಷ ಕಳೆದರೂ ಯಾರೊಬ್ಬರೂ ನನ್ನ ನೋಡುವ ಹಂಬಲ ತಿಳಿಸಲಿಲ್ಲ......ಬರುವೆನಮ್ಮ ನಿನ್ನ ಮಡಿಲಿಗೆಂದರೂ ಯಾರೊಬ್ಬರೂ ಬಾ ಕಂದ ನಿನಗಾಗಿ ಕಾದಿರುವೆ ನಾನಿಲ್ಲಿ ಎನ್ನಲಿಲ್ಲ.......... ವಿಧಿಯೇ ನನ್ನಲ್ಲಿ ಸಂಬಂಧಗಳನ್ನ ಜೋಡಿಸಲು ಸೋತಿರುವೆಯಾ.........ನನ್ನವರು ನನಗಾಗಿ ಯಾರು ಇಲ್ಲವೇ......... ನಾ ಇಷ್ಟು ದಿನ ನನ್ನತನವನ್ನೆಲ್ಲಾ ಬಿಟ್ಟು ದುಡಿದದ್ದು ಯಾರಿಗಾಗಿ........ಏಕೆ ಹೀಗೆ ಎಲ್ಲ ದುಡ್ಡಿನಿಂದೆ ನನಗಾಗಿ ನನ್ನ ಒಳಿತಿಗಾಗಿ ಯಾರೊಬ್ಬರೂ ಆಶಿಸುತ್ತಿಲ್ಲ.....ನಾನಿಲ್ಲಿ ಹೊತ್ತೊತ್ತಿಗೆ ಊಟ ಮಾಡದೆ, ಬಿಸಿಲ ಬೇಗೆಯಲಿ ಬೆಂದು, ಅದನ್ನು ಕೊಂಡುಕೊಂಡರೆ ಖರ್ಚು, ಇದನ್ನು ತಿಂದರೆ ಖರ್ಚು, ಎಂದು ಉಳಿಸಿದ್ದು ಆ ನನ್ನ ಮನೆಗಾಗಿ ಅಲ್ಲವೆ..? ಏಕೆ ಇಂದು ಆ ಮನೆಯೇ ನನ್ನನ್ನೇ ಬಯಸದಾಗಿದೆ.......ನನ್ನ ಮನ ಬೇಸತ್ತು ಕಣ್ಣು ಧೋ ಎಂದು ಮಳೆಯನ್ನೇ ಸುರಿಸಿಬಿಟ್ಟಿತು............

ಯಾವುದೋ ಆಸೆಗೆ ಬಂದು ಏನೂ ಬೇಡ ಎನ್ನುವಂತಾಯಿತು ......... ಇನ್ನು ಅವರಾಗೆ ಕರೆಯಲಿ ನನ್ನ ನೋಡುವಾಸೆ ಇದ್ದರೆ ಎಂದೆನಿಸಿತು..........ಆದರೆ ಹುಟ್ಟೂರು ನೋಡಬೇಕು ಅವರಿಗೆ ಬೇಡವಾದರೇನು ನಾನು ಹೋಗಬೇಕೆಂದು ಹೋದರೆ.........ಅಲ್ಲಿ ಎರಡು ಅಂತಸ್ಥಿನ ಮನೆ ಕಟ್ಟಿ ತಮ್ಮಂದಿರಿಬ್ಬರೂ ಒಂದೊಂದು ಮನೆಯಲಿದ್ದರೂ, ಅಪ್ಪ ಅಮ್ಮ ಹಳೆ ಮನೆಯನ್ನೇ ಹೊಸ ಮೆರುಗು ಕೊಟ್ಟು ಮೊಮ್ಮೊಕ್ಕಳೊಂದಿಗೆ ಸಂತಸದಿಂದಿದ್ದರು, ತಂಗಿಯರೆಲ್ಲ ತಮ್ಮ ತಮ್ಮ ಸಂಸಾರದಲ್ಲಿ ಮುಳುಗಿದ್ದರು......... ನಾನು ಬಂದೆನೆಂದು ಎಲ್ಲರೂ ನನ್ನ ಮುತ್ತಿಕೊಂಡರು.........ನನಗೂ ಸಂತೋಷವಾಯ್ತು.......ಎಲ್ಲರಿಗೂ ಉಡುಗೊರೆಯೆಲ್ಲವನ್ನಿತ್ತು, ಊರೂರು ಸುತ್ತಿ, ಅಪ್ಪ ಅಮ್ಮನೊಂದಿಗೆ ಕಾಲ ಕಳೆದು, ಇನ್ನೇನು ಒಂದು ವಾರವಿದೆ ಮರಳಿ ಮರುಭೂಮಿ ಕಡೆ ಹೊರಡಬೇಕಿದೆ............. ಮನೆಯಲ್ಲಿ ಮದುವೆ ಪ್ರಸ್ತಾಪವೇ ಇಲ್ಲ..... ಪಕ್ಕದ ಮನೆಯವರು ಅಪ್ಪ ಅಮ್ಮನಲ್ಲಿ ಕೇಳಿದರು ಇವನ ಮದುವೆ ಮುಗಿಸಿದ್ದರೆ ಚೆನ್ನಾಗಿರುತ್ತಿದ್ದೆಂದು ಆಗ ಅಪ್ಪ ಬಾಯಿ ಬಿಟ್ಟರು..........ಅವನಿಗಾಗಲೇ ೩೬ ದಾಟಿದೆ ಇನ್ನು ಹೆಣ್ಣು ಯಾರು ಕೊಡುವುದಿಲ್ಲ, ಅರ್ಧ ಜೀವ ಸಾಗಿದೆ ಇನ್ನುಳಿದ ಜೀವನ ಹೇಗೋ ನೆಡೆಯುತ್ತೆ ಬಿಟ್ಟು ಬಿಡಿ .............. ಏನೋ ತಿಳುವಳಿಕೆಯಿಲ್ಲ...... ಮಾತನಾಡಿಬಿಟ್ಟರೆಂದು ಮನಸು ಭಾರವಾದರೂ ಊರ ಬಿಟ್ಟು ಮರುಭೂಮಿ ಸೇರಿದೆ....... ಅಂದಿನಿಂದ ಅಪ್ಪ ಅಮ್ಮನಿಗೆ ಪ್ರತೀ ತಿಂಗಳು ದುಡ್ಡು ಕಳಿಸುತ್ತಿದ್ದೆ. ಅವರ ಆರೋಗ್ಯದ ಖರ್ಚು ವೆಚ್ಚ ಭರಿಸುತ್ತಿದ್ದೆ........... ನನ್ನ ಹೆತ್ತು ಹೊತ್ತ ಋಣ ತೀರಿಸಲು ಕೊನೆವರೆಗೂ ಹೀಗೆ ಇದ್ದುಬಿಡೋಣವೆಂದುಕೊಂಡೆ. ಕೊನೆಗೆ ಒಂದು ದಿನ ಕರೆ ಮಾಡಿ ನಿಮ್ಮ ಕೈಲಾಗದಿದ್ದಾಗ ನನ್ನ ಕರೆಯಿರಿ ನಿಮ್ಮ ಸೇವೆ ಮಾಡುವೆ ಎಂದಾಗ ಅಮ್ಮ ಅಪ್ಪ ಇಬ್ಬರದೂ ಒಂದೇ ಮಾತು...... ಇಲ್ಲಿ ನಮ್ಮ ನೋಡಲು ಬಹಳಷ್ಟು ಜನರಿದ್ದಾರೆ. ನೀನು ದುಡಿದು ನಿನ್ನ ತಂಗಿ ತಮ್ಮಂದಿರಿಗೇನಾದರೂ ಸಹಾಯವಾಗುತ್ತೋ ಏನೋ ನೋಡಿಕೊಳ್ಳುತ್ತಿರು. ನಾವು ಸತ್ತರೂ ಅವರನ್ನು ಕೈಬಿಡಬೇಡ ಎಂದು ಆಣೆ, ಪ್ರಮಾಣಗಳೇ ಸಾಗಿದವು...........ಆದರೆ ತಮ್ಮ ತಂಗಿಯರಾರೂ ನಾನೊಬ್ಬನಿರುವೆ ಎಂಬ ಪರಿಜ್ಞಾನವೂ ಇರಲಿಲ್ಲ. ಇಷ್ಟು ವರ್ಷವಾದರೂ ಒಂದು ಯೋಗಕ್ಷೇಮದ ಪತ್ರವನ್ನೂ ಕಳಿಸಿರಲಿಲ್ಲ, ಅಣ್ಣ ತಂಗಿ ತಮ್ಮಂದಿರ ನಡುವೆ ಮಾತುಕತೆಯೇ ಇಲ್ಲದಂತಾಗಿ ಹೋಗಿ ಬಹಳ ವರುಷಗಳೇ ಕಳೆದಿದ್ದವು.........

ನನ್ನ ದಾರಿ ನನ್ನದು, ಅವರ ಜೀವನ ಅವರದು ಬದುಕಿಗೆ ಹಣವೊಂದೇ ಸಾಕೆಂಬುವವರಿಗೆ ದುಡ್ಡು ಮಾತ್ರ ಕೊಟ್ಟು ಪ್ರೀತಿ ಹುಟ್ಟಿಸುವಾಸೆ ನನ್ನ ಜೀವನದಲ್ಲಿ ನಶಿಸಿ ಹೋಯ್ತು.........ಅಂದು ಮನೆಗಾಗಿ ಹೊರಬಂದೆ ಇಂದು ನಾ ಆ ಮನೆ ಪ್ರೀತಿಯನ್ನೇ ಕಳೆದುಕೊಂಡೆ. ಇನ್ನು ನಾನು ವಯಸ್ಸಾಗಿ ನನ್ನ ಕೈಲಾಗದಿದ್ದಾಗ ನನಗೆ ಸಲಹೋ ಜೀವ ಹುಡುಕಬೇಕಾಗಿದೆ. ಇನ್ನು..!! ಹುಡುಕುತ್ತಲೇ ಇದ್ದೇನೆ......... ನನಗಾಗಿ ಮರುಗೋ ಪ್ರೀತಿ, ನನ್ನತನವನ್ನು ಪ್ರೀತಿಸೋ ಪ್ರೀತಿಯನ್ನು ಹುಡುಕುತ್ತಲಿರುವೆ ಸಿಗುವುದೆಂಬ ಭರವಸೆಯಲ್ಲಿ.....???!!!

ಅಂದು ದೂರದ ಬೆಟ್ಟ ನುಣ್ಣಗಿರುವುದು ಕಂಡು ನನ್ನವರ ಜೀವನ ಸೊಗಸುಗೊಳಿಸಲು ಬಂದೆ. ದೂರದ ಬೆಟ್ಟ ಹತ್ತಿರವಾಗುತ್ತಿದ್ದಂತೆ ನುಣುಪು ಹಾರಿತು...... ಮರಳಿ ನನ್ನ ಗೂಡಿಗೆ ಬಂದರೂ ಅಲ್ಲಿನ ಪ್ರೀತಿಯನ್ನೂ ಕಳೆದುಕೊಂಡೆ.............ಮುಂದೆ ಯಾವ ಬೆಟ್ಟ ಸಿಗುವುದೋ....... ಅದು ನುಣುಪೋ ನಾಜೂಕೋ ಗೊತ್ತಿಲ್ಲ............ಕಾಯುವ ಕಹಿ ಅನುಭವಿಸಿ ಅನುಭವವಿದೆ.....ಕಾಯುವೆ ನನಗಾಗಿ ಸಿಗುವ ಅಜಾತ ಪ್ರೀತಿಗಾಗಿ..............!!!!!!!!?

ಮುಂದುವರಿಯುವುದು.........

ಚಿತ್ರ: ಶಿವಪ್ರಕಾಶ್