ರಜತ ಮಹೋತ್ಸವದ ಸಂಭ್ರಮತೆಯ ಸಭಾಂಗಣಕ್ಕೆ ಹೂಕ್ಕುವ ಮುನ್ನವೇ ಎದ್ದು ಕಾಣುತ್ತಿತ್ತು ಒಳಗಿನ ಅದ್ದೂರಿ ಮುಂಭಾಗಿಲ ರಂಗೋಲಿಯಲಿ, ಗಣಪನ ಮೂರ್ತಿ, ಹೆಂಗಳೆಯರ ನಗು ನಗುವಿನೊಂದಿಗೆ ಸಾಂಪ್ರದಾಯಕ ಆಹ್ವಾನ ಎಲ್ಲವೂ ಎಲ್ಲರ ಮನಸಿಗೆ ಸಂತಸ ನೀಡಿತ್ತು, ಹಾಗೆ ಮುಂದೆ ಸಾಗಿದರೆ ಅಲ್ಲೇ ಮಕ್ಕಳ ಸೈನ್ಯ ಕಾದಿತ್ತು ಏನಿದು ಈ ಮಕ್ಕಳು ಹೀಗೆ ತರತರನಾದ ವೇಷಭೂಷಣಗಳಲ್ಲಿ ಮಿಂಚುತ್ತಿರುವರೆಂದು ನೋಡ ನೋಡುತ್ತಲಿದ್ದಂತೆ ಭಾರತದ ರಾಯಭಾರಿಗಳಾದ ಅಜಯ್ ಮಲ್ಹೋತ್ರರವರನ್ನು ಹಾಗೂ ಹಲವಾರು ಗಣ್ಯರ ಆಗಮನ ಕೋರಲು ಈ ಮುದ್ದು ಮಕ್ಕಳು ಕನ್ನಡನಾಡ ಕಲೆ ಸಂಸ್ಕೃತಿಯನ್ನು ತಮ್ಮ ವೇಷಭೂಷಣದಲ್ಲೇ ಬಿಂಬಿಸುತ್ತ ಎಲ್ಲರನ್ನು ಆಹ್ವಾನಿಸಿದರು ಆ ಮೆರವಣಿಗೆ ದಸರಾ ಮೆರವಣಿಗೆಯಂತೆ ಕಂಡದ್ದು ನಿಜವೇ ಸೈ.
ಮುಖ್ಯ ಅತಿಥಿಗಳೆಲ್ಲ ಆಸೀನರಾಗುತ್ತಲಿದ್ದಂತೆ ಸಮಾರಂಭವು ಕುವೆಂಪುರವರ ನಾಡಗೀತೆ ಭಾರತ ಜನನಿಯ ತನುಜಾತೆ.... ಎಂಬ ಹಾಡಿನಿಂದ ಮೊಳಗುತ್ತಿದ್ದಂತೆ ಎಲ್ಲಿದ್ದರೋ ಬಸವಣ್ಣ, ವಿದ್ಯಾರಣ್ಯ, ರನ್ನ,ಪೊನ್ನ, ಹಿಂದೊ ಕ್ರೈಸ್ತ, ಮುಸಲ್ಮಾನ, ಗೌತಮ, ಹೌಯ್ಸಳ ಎಲ್ಲರೂ ಒಮ್ಮೆಲೆ ಬಂದು ನಮ್ಮಮುಂದೆ ನಿಂತು ಬಿಟ್ಟರು...ಹಾಗೆ ನೆರೆದಿದ್ದ ಸಭಿಕರೆಲ್ಲ ನಾಡಗೀತೆಗೆ ಕೊಟ್ಟ ಗೌರವ ಅಭಿನಂದನಾರ್ಹ... ನಂತರದಿ ಅವಾಹನೆಯನ್ನು (ದೇವರ ಪ್ರಾರ್ಥನೆ) ನೃತ್ಯಗೀತೆಯೊಂದಿಗೆ ಕೂಟದ ಮಕ್ಕಳು ನೆರೆವೇರಿಸಿದರು.ತದನಂತರ ಗಣ್ಯರು ಹಾಗೂ ಕೂಟದ ಕಾರ್ಯಕಾರಿ ಸಮಿತಿಯೂಂದಿಗೆ ಜ್ಯೋತಿಬೆಳಗಿಸಿ ಉಪಕಾರ್ಯಕಾರಿ ಸಮಿತಿ ಸದಸ್ಯ ಸದಸ್ಯೆಯರೆಲ್ಲರೂ ಒಟ್ಟಾಗಿ ಡಿ. ಎಸ್ . ಕರ್ಕಿ ರವರ ಹಚ್ಚೇವು ಕನ್ನಡದ ದೀಪ.... ಹಾಡಿಗೆ ಸೊಡರೊತ್ತುರಜತಮಹೋತ್ಸವದ ವೇದಿಕೆ ಹಾಗೂ ಕನ್ನಡಿಗರ ಮನ-ಮನಗಳಿಗೆ ಒಲವ ಬೆಳಕನು ಹರಿಸಿದರು.
ಇಷ್ಟೆಲ್ಲ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸುಮಾರು ೧೧ ಗಂಟೆ ಇರಬಹುದು ಕರುನಾಡಿಂದ ಬರಬೇಕಾದಂತ ಕರುನಾಡಿನಿಂದ ಬಂದಂತಹ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದಂತಹ ಶ್ರೀ ಗಣೇಶ್ ಕಾರ್ಣೀಕ್ ರವರು ಸಮಾರಂಭಕ್ಕೆ ಮೆರುಗು ನೀಡಿದರು. ಇವರ ಬರುವಿಕೆಯಲ್ಲೆ ಸೂತ್ರದ ಬೊಂಬೆಯಾಟ ನೆಡೆಯುತ್ತಲಿದ್ದು. ವಶವರ್ತಿ(ಸೂತ್ರದ ಬೊಂಬೆಯಾಟ) ನೆರೆದಿದ್ದ ಎಲ್ಲ ಜನರ ಚಪ್ಪಾಳೆ ಗಿಟ್ಟಿಸಿತು.
ಕನ್ನಡ ಕೂಟ ಕುವೈಟ್ ೨೫ ವರ್ಷಗಳು ಸಾಗಿಬಂದ ಹಾದಿಯನ್ನು ದೃಶ್ಯಮಾಲಿಕೆಯಲ್ಲಿ ನಿರೂಪಿಸಿ ನೆರೆದಿದ್ದವರೆಲ್ಲರಿಗೂ ಮರಳು ಮಲ್ಲಿಗೆಯ ಕಂಪು ಸೂಸಿದರು...ತದನಂತರ ವೇದಿಕೆ ಅಲಂಕರಿಸಿದ ಹಳೆ ಬೇರೆಂಬಂತೆ ಕನ್ನಡಕೂಟ ಆರಂಭಿಸಿದ್ದ ಹಾಗು ಮಾಜಿ ಅಧ್ಯಕರುಗಳು ಮತ್ತು ಹೊಸ ಚಿಗುರು ಎಂಬಂತೆ ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಹಾಗೂ ಕರುನಾಡ ಪ್ರತಿನಿಧಿಗಳಾಗಿ ಬಂದಿದ್ದ ಕ್ಯಾಪ್ಟನ್ ಗಣೇಶ್ ಎಲ್ಲರೊ ವೇದಿಕೆಗೊಂದು ಮೆರುಗು ನೀಡಿದರು. ಹಳೆ ಬೇರುಗಳ ಭಾಷಣ ಅವರ ಅನುಭವ ಅವರ ಅಭಿಪ್ರಾಯ ಎಲ್ಲವೂ ಮನಸೂರೆಕೊಂಡಿತು... ನಂತರದಿ ಕ್ಯಾಪ್ಟನ್ ಗಣೇಶ್ ರವರ ಸರದಿ ನೋಡು ನೋಡುತ್ತಲಿದ್ದಂತೆ ಅವರ ಭಾಷಣ ಅವರ ಧ್ಯೇಯ, ಆಸಕ್ತಿ, ಒಲವೂ ಎಲ್ಲವೂ ಮೆಚ್ಚನಾರ್ಹವೆನಿಸಿತು... ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಲಿಟ್ಟು ೩ ವರ್ಷಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಮಾಡುವೂದಿಲ್ಲವೆಂದು ಖಡಾಖಂಡಿತವಾಗಿ ಸಭೆಯಲ್ಲಿ ಸಾರಿ ಹೇಳಿದರೂ ಅದು ಅಲ್ಲದೆ ಅನಿವಾಸಿ ಭಾರತೀಯರಿಂದಾಗುವ ಅನುಕೂಲ, ಅವರುಗಳ ತೊಂದರೆ, ಅನಿವಾಸಿ ಭಾರತೀಯರಿಂದ ದೊರಕುವ ಅನಿಸಿಕೆ ಅಭಿಪ್ರಾಯ, ಕರುನಾಡ ಏಳ್ಗೆಗೆ ಅನಿವಾಸಿ ಭಾರತೀಯರ ಪಾತ್ರ ಎಲ್ಲಕ್ಕೊ ಸ್ಪಂದಿಸುವುದಾಗಿ ಹೇಳಿದರು. ಇವರ ಭಾಷಣ ಮುಗಿಯುತ್ತಿದ್ದಂತೆ ಸ್ಮರಣ ಸಂಚಿಕೆಯನ್ನು ಸಾಂಸ್ಕೃತಿಕ ರೀತಿಯಲ್ಲಿ ಬಿಡುಗಡೆಮಾಡಲಾಯಿತು. ಈ ಕಾರ್ಯಕ್ರಮಗಳೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು ಎಲ್ಲರು ತಮ್ಮ ಊಟ ಮುಗಿಸಿ ಮಧ್ಯಾಹ್ನದ ಕಾರ್ಯಕ್ರಮಗಳತ್ತ ಹೊರಡುವತ್ತಲಿದ್ದಂತೆ ಕ್ಯಾ.ಗಣೇಶ್ ಅವರ ಆಶಯದ ಮೇರೆಗೆ ಮತ್ತೊಮ್ಮೆ ನಾಡಗೀತೆ ಹಾಡುವವರಿಗೆ ಆಹ್ವಾನವಿತ್ತರು.
ಬೆಳಗಿನ ಸಮಾರಂಭವೇಕೋ ತುಸು ಮಂದಗತಿಯಲ್ಲಿ ಸಾಗುತ್ತಿದೆಯೆಂದೆನಿಸಿತು ಆದರೆ ಅಪರಾಹ್ನದ ಸಮಾರಂಭ ಕ್ಯಾ.ಗಣೇಶ್ ರವರ ಆಸೆಯಂತೆ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಅಲ್ಲದೆ ಅವರೂ ಸಹ ನಮ್ಮೆರಲ್ಲೊಬ್ಬರಾಗಿ ಹಾಡಿದರು ಇವರೊಟ್ಟಿಗೆ ಕುವೈಟ್ ಅತಿಥಿಗಳು ಮಾಜಿ ಹಾಗೂ ಹಾಲಿ ಅಧ್ಯಕ್ಷರು ಕೂಡಿ ನಾಡಗೀತೆ ಸುಸೂತ್ರ ಸುಮಧುರವಾಗಿ ನೆರೆವೇರಿದ ನಂತರ ೨೫ ವರ್ಷಗಳ ಹುಟ್ಟುಹಬ್ಬದ ಸಂಭ್ರವನ್ನು ಸಿಹಿ ಕೇಕ್ ಕತ್ತರಿಸುವ ಮೂಲಕ ಮಧ್ಯಾಹ್ನದ ಮನರಂಜನ ಕಾರ್ಯಕ್ರಮಕ್ಕೆ ಸಿಹಿಸಂತಸದ ಹೊನಲಾಯಿತು. ಇವರೆಲ್ಲರೊಟ್ಟಿಗೆ ಉದಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಅವರ ನುಡಿಮುತ್ತುಗಳು ಸಭೆಗೆ ಕಳೆಯನ್ನು ತರಿಸಿತ್ತು
ಇನ್ನು ಕನ್ನಡಕೂಟದ ಹಿರಿ ಕಿರಿಯರ ಮನರಂಜನಾ ಕಾರ್ಯಕ್ರಮದ ಸಮಯ ಮೂದಲಿಗೆ ಅಷ್ಟಲಕ್ಷ್ಮಿ ರೂಪದ ನೃತ್ಯ
ರೂಪಕವನ್ನು ಕೂಟದ ಹೆಂಗಳೆಯರು ಅತಿ ಉತ್ಸಾಹ, ಮನಪೂರ್ವಕವಾಗಿ ದೇವಿಯನ್ನು ನೆನೆದರೆ ಲಕ್ಷಿ ದಯಪಾಲಿಸದೇ ಇರುತ್ತಾಳೆಯೇ ವೇದಿಕೆಯು ಲಕ್ಷ್ಮಿ ಕಟಾಕ್ಷವಾಗಿ ಮಾರ್ಪಟ್ಟಿತ್ತು, ಲಕ್ಷ್ಮಿ ಬಂದುಹೋಗುತ್ತಲಿದ್ದಂತೆ ಅದೆಲ್ಲಿದ್ದವೋ ಗುಬ್ಬಿಗಳು ನಮ್ಮ ಮುದ್ದು ಚಿಣ್ಣರು ಗುಬ್ಬಿ ಗುಬ್ಬಿ ಎಂದು ಗುಬ್ಬಿಗಳನ್ನೇ ಸಭಾಂಗಣಕ್ಕೆ ಕರೆತಂದುಬಿಟ್ಟಿದ್ದರು ವೇದಿಕೆ ಅಲಂಕರಿಸಿದ ಗುಬ್ಬಿಗಳು ಬಣ್ಣ ಬಣ್ಣದ ದೀಪಗಳು ಜಗಮಗಿಸುವುದ ಕಂಡು ಅಲ್ಲೇ ನಿಂತು ಬಿಟ್ಟಿದ್ದವು ಗುಬ್ಬಿಗಳನ್ನು ಕಂಡ ಹಳ್ಳಿ ಮಕ್ಕಳು ಮತ್ತೊಂದು ಜಾನಪದ ನೃತ್ಯವನ್ನು ಎಲ್ಲರ ಮುಂದಿಟ್ಟು ಹಳ್ಳಿಗೆ ಕರೆದೋಯ್ದರು, ಇನ್ನು ಹಲವು ಮಕ್ಕಳು ನಾವೇನು ಕಮ್ಮಿ ಎಂಬಂತೆ ಕೋಲಾಟದಿ ನೃತ್ಯ ಮಾಡಿ ನಲಿಸಿದರು, ಲಕ್ಷ್ಮಿ, ಗುಬ್ಬಿ, ಹಳ್ಳಿ ಜಾನಪದರು, ಕೋಲಾಟ ಎಲ್ಲವನ್ನು ಕಂಡ ಅದೆಲ್ಲೋ ಇದ್ದ ಎರಡು ನವಿಲುಗಳು ನೃತ್ಯವಾಡುತ್ತ ಬಂದೇ ಬಿಟ್ಟವು ಇನ್ನು ಸ್ವಲ್ಪಹೊತ್ತು ನೃತ್ಯನೋಡೋಣವೆಂದರೆ ತೊಗಲುಗೊಂಬೆಯ ನೃತ್ಯವಾಡಲು ಮಕ್ಕಳ ಹಿಂಡು ಬಂದೇ ಬಿಟ್ಟಿತು...ಇವರನ್ನೆಲ್ಲ ನೋಡಲು ನಾಗರಹೊಳೆಯಲ್ಲಿದ್ದ ಕಾಡುಜನರೂ ಓಡೋಡಿ ಬರುವುದೇ ಅಬ್ಬಾ ಕಾಡುಜನವೆಂದು ಯಾರು ಅವರನ್ನು ಹೇಳುವುದು ಅಷ್ಟು ಮನೋಘ್ನ ನೃತ್ಯವನ್ನು ನೀಡಿ ಕುಣಿದು ಕುಪ್ಪಳಿಸಿದರು.... ಇವರೆಲ್ಲರ ಮಧ್ಯೆ ಕೃಷ್ಣ ಕೊಳನೂದುತ ಸ್ನೇಹ ವೃಂದದೊಂದಿಗೆ ಕುಣಿದುನಲಿದನು, ನಂತರ ಕನ್ನಡದ ಹುಡುಗರೆಲ್ಲ ನಮ್ಮ ಜೀವನ ಕನ್ನಡ ಎಂದು ನೃತ್ಯ ನೀಡಿ ಸಿಳ್ಳೆ ಗಿಟ್ಟಿಸಿದರು, ನಂತರ ನಾದಸ್ವರೂಪದ ಬೆಸುಗೆಯೊಂದಿಗೆ ಹೆಂಗಳೆಯರು ನೃತ್ಯ ನೀಡಿ ಮನತಣಿಸಿದರು, ನೃತ್ಯ ಲೋಕದಿಂದ ಹೊರಬರುತ್ತಿದ್ದ ಹಾಗೇ ಒಂದು ಮುನ್ಸೊಚನೇ ಇಲ್ಲದೆಯೇ ಆಶ್ಚರ್ಯದ ವೇದಿಕೆಯಲ್ಲಿ ಸೃಷ್ಟಿಯಾಗಿತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೂಟದ ಹಾಲಿ ಅಧ್ಯಕ್ಷರಾದ ಶ್ರೀಮತಿ ಶ್ರೀ ಸತೀಶ್ ಚಂದ್ರ ಶೆಟ್ಟಿ ದಂಪತಿಗಳ ೨೫ ವರ್ಷದ ವಿವಾಹ ಮಹೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ದಂಪತಿಗಳಿಗೆ ಬೆರಗು ಮೂಡಿಸಿದರು. ಕೂಟದ ಕಾರ್ಯಕ್ರಮ ಹೇಗಿತ್ತೆಂದರೆ ತವರೂರಲ್ಲಿ ಮದುವೆ ಸಮಾರಂಭ ನೆಡೆದಂತಿತ್ತು ಹೆಂಗಳೆಯರು ಮದುವೆಮನೆಯಲ್ಲಿ ಶಾಸ್ತ್ರಕ್ಕೊಂದು ಉಡುಗೆ ಮುಹೂರ್ತಕ್ಕೂಂದು ಬೆರಗುಗೊಳಿಸೋ ಉಡುಗೆ ಹೀಗೆ ಸಾಂಪ್ರದಾಯಕ ಉಡುಗೆತೂಡುಗೆಯೂಂದಿಗೆ ಸಭಾಂಗಣವನ್ನು ಹೆಣ್ಣುಮಕ್ಕಳು ಅಲಂಕರಿಸಿಬಿಟ್ಟಿದ್ದರು.
ಹಳ್ಳಿಗೋಗಿದ್ದ ಸಭಿಕರೆಲ್ಲರೂ ಧರ್ಮಭೂಮಿ ಕಡೆಗೊರಟರು, ಅಬ್ಬಾ!!! ಅದೆಂತಹ ನಾಟಕ ಎಲ್ಲರೂ ಈ ನಾಟಕವನ್ನು ನೋಡಲೇಬೇಕು... ಎಲ್ಲರಿಗು ತಿಳಿದಂತೆ ಗ್ರೀಕ್ ದೊರೆ ಅಲೆಗ್ಸಾಂಡರ್ ಅತಿ ಬಲಿಷ್ಟ ಶೌರ್ಯ ದೊರೆ, ಈ ದೊರೆ ಭಾರತದ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ತನ್ನ ಗುರುಗಳಾದ ಅರಿಸ್ಟಾಟಲ್ ಹಾಗು ಅಲೆಗ್ಸಾಂಡರ್ ನಡುವಿನ ಸಂಭಾಷಣೆ ಹಾಗು ಅರಿಸ್ಟಾಟಲ್ ನಮ್ಮ ಭವ್ಯ ಭಾರತ ಬಗೆಗಿದ್ದ ಅತಿಯಾದ ಗೌರವ, ಪ್ರೀತಿ ಎಲ್ಲವನ್ನು ತಿಳಿಸಿ ಅಲೆಗ್ಸಾಂಡರ ರಾಜನಿಗೆ ದಂಡಯಾತ್ರೆಗೆ ಹೋಗುವ ಬದಲು ಶಾಂತಿಯಾತ್ರೆಗೆ ಹೋಗುವಂತೆ ಸೂಚಿಸಿದ್ದರು ಅಂತೆಯೇ ಭರತ ಭೊಮಿಗೆ ಬಂದ ರಾಜ ಹಿಂತಿರುಗಿ ಹೋಗುವಾಗ ಆರೋಗ್ಯ ಏರುಪೇರಿನಿಂದ ಅಸುನೀಗುತ್ತಾನೆ ತಾನು ಸಾಯುವ ಮುನ್ನ ತನ್ನ ದೇಹವನ್ನು ಪೆಟ್ಟಿಗೆಯಲ್ಲಿಡಿ ಆದರೆ ತನ್ನ ಎರಡು ಕೈಗಳನ್ನು ಹೊರಗಿಡಿ ಏಕೆಂದರೆ ನಾನು ೩೩ ವರ್ಷಕ್ಕೆ ಹತ್ತು ಹಲವು ದೇಶಗಳನ್ನು ಗೆದ್ದು ದಿಗ್ವಿಜಯಿಯಾಗಿದ್ದೆ ಆದರೆ ಸತ್ತ ನಂತರ ನನ್ನ ಕೈ ಏನನ್ನೊ ತೆಗೆದುಕೊಂಡೋಗುತ್ತಿಲ್ಲ, ಬರಿಗೈನಲ್ಲಿ ಹೋಗುತ್ತಿರುವೆ ಎಂದು ಎಲ್ಲರಿಗೂ ಸಂದೇಶವನಿತ್ತು ಅವನು ಅಮರನಾದನು... ಇದೆಲ್ಲದರ ಮಧ್ಯೆ ಅರಿಸ್ಟಾಟಲ್ ಭಾರತ ಭೂಮಿಯ ಗಂಗಾ ಜಲ, ರಾಮಾಯಣ, ಮಹಾಭಾರತ, ಕೃಷ್ಣ ಹಾಗೂ ಅವನ ಕೊಳಲ ಪ್ರಾಮುಖ್ಯತೆ, ಭಗವದ್ಗೀತೆಯ ವಿಶೇಷತೆಯನ್ನು ನಮ್ಮ ಮುಂದಿಟ್ಟರು.. ಅಬ್ಬಾ ಎಂತಹ ವೈಭವೋತೀತ ಭರತಖಂಡ ಪರಿಚಯವನ್ನು ನಾಟಕರೂಪದಲ್ಲಿ ನಮ್ಮ ಮುಂದಿಟ್ಟರು ಎಂದೆನಿಸಿತು.
ತದನಂತರ ದಶಾವತಾರ ನೃತ್ಯರೂಪಕವು ಮನಸೂರೆಗೊಂಡಿತು, ವಿಷ್ಣುವಿನ ದಶ ಅವತಾರಗಳನ್ನು ಪ್ರಭಾತ್ ಕಲಾವಿದರಾದ ಹರೀಶ್ ಸಭಿಕರೆಲ್ಲರಿಗೂ ಅರ್ಥವಾಗುವಂತೆ ಮನಮುಟ್ಟುವಂತೆ ನೃತ್ಯರೂಪಿಸಿದರು. ಕೊನೆಯ ನೃತ್ಯರೂಪಕ ಪುಣ್ಯಕೋಟಿ ಆಹಾ!!! ದಟ್ಟಅಡವಿಯಲ್ಲಿ ಹುಲಿಯ ಬಾಯಿಗೆ ಸಿಕ್ಕಿಕೊಂಡ ಆ ಪುಣ್ಯಕೋಟಿ ಹಸುವಿನ ಮನಕಲಕುವ ದೃಶ್ಯ, ಆ ಕರುವಿನ ತಬ್ಬಲಿತನ ಎದ್ದು ಕಾಣುವಂತೆ ಮನೋಘ್ನ ಅಭಿನಯವನ್ನು ಪ್ರಭಾತ್ ಕಲಾವಿದರಾದ ದೀಪಶ್ರೀಹರೀಶ್ ಹಾಗೂ ಕೂಟದ ಸದಸ್ಯರ ಮಗು ನೀತಾ ತಬ್ಬಲಿಯ ಕರುವಾಗಿ ಬಹಳ ವಿಶೇಷವಾಗಿ ಅಭಿನಯಿಸಿದರು ಪುಣ್ಯಕೋಟಿಯ ನಾಟಕ ನೋಡ ನೋಡುತ್ತಲಿದ್ದ ಹಾಗೆ ಕೆಲವರ ಕಣ್ಣುಗಳು ಒದ್ದೆಯಾದವು....ಪುಣ್ಯಕೋಟಿ ಮರಳಿ ತಾಯಮಡಿಲು ಸೇರುವ ದೃಶ್ಯದೊಂದಿಗೆ ಮನಸು ಹಗುರಾಗಿ ಸಂತಸದಿ ನಾವುಗಳೆಲ್ಲ ಸಭಾಂಗಣ ತೊರೆದು ರಾತ್ರಿ ಊಟಕ್ಕೆ ತೆರೆಳಿದೆವು. ಮೃಷ್ಟಾನ್ನ ಭೋಜನದಿ ಎಲ್ಲರೂ ಊಟ ಸವಿದು ಮನೆಯ ಕಡೆ ಮುಖ ಮಾಡಿದೆವು.
ಪ್ರಭಾತ್ ಕಲಾವಿದರ ನೀಡಿದ ಸುಮಾರು ೨ ಗಂಟೆಯ ಕಾರ್ಯಕ್ರಮಗಳು ಬೆಂಗಳೂರಿನಲ್ಲಾಗಿದ್ದರೆ ಸುಮಾರು ೪೦ ಜನರೂಡಗೂಡಿ ನಿರೂಪಿಸುತ್ತಿದ್ದ ಕಲಾವಿದರು ಇಂದು ಸುಮಾರು ೧೫ ಕಲಾವಿದರೂಂದಿಗೆ ಒಬ್ಬೂಬರು ೩, ೪ ಪಾತ್ರಗಳನ್ನು ಅಭಿನಯಿಸಿ ಅದ್ಭುತ ಅಭಿನೇತ್ರಿಗಳಾಗಿ ನಮ್ಮೆಲ್ಲರಿಗೂ ಮನವನ್ನು ತಣಿಸಿದರು.
ಒಟ್ಟಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ನಮನ, ಮನನ ಎಲ್ಲವೂ ಸರಾಗವಾಗಿ ಯಾವ ಅಡೆತಡೆಯಿಲ್ಲದೆ ನೆರೆವೇರಿತು ಯಾವ ರಾಜಕಾರಿಣಿಗಳಾಗಲಿ, ಚಲನಚಿತ್ರ ತಾರೆಗಳಾಗಲಿ ಯಾರ ಅನುಪಸ್ಥಿತಿಯೂ ಕನ್ನಡಾಂಬೆಯ ವೈಭವೋತೀತ ಹುಟ್ಟುಹಬ್ಬದ ಆಚರಣೆಗೆ ಸ್ವಲ್ಪವೂ ಕುತ್ತುಬರದೆ ಕರುನಾಡ ಸಿರಿ ಮರಳುಗಾಡಿನಲ್ಲಿ ರಾರಾಜಿಸಿತು.
ಈ ಕಾರ್ಯಕ್ರಮಕ್ಕೆ ರುವಾರಿಗಳಾದ ಕಾರ್ಯಕಾರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಹಲವು ಉಪಸಮಿತಿಗಳೆಲ್ಲರಿಗೂ,ಮತ್ತು ಪ್ರಭಾತ್ ಕಲಾವೃಂದದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.