Tuesday, January 13, 2015

ನೋ ನೋ ನೋವು



ಅಯ್ಯೋ ಶಿವ್ನೇ ಇತ್ತ ಹೊರಳಿದರೆ 
ಯಾಕೋ ಚುಳ್ ಎನ್ನುತಿದೆ ಈ ಮಂಡಿ
ನಾನೇನು ಕಮ್ಮಿ ಶಕ್ತಿ ಇದೆ
ಮೊಂಡು ಮಾಡಿ ಮಂಡಿ ಮಡಚಿ ಕೂತೆ  
ಏಳುವಾಗಲೇ ಗೊತ್ತಾಗಿದ್ದು
ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು...

ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ
ಗುಡಿಸೋಣ ಅಂತಾ ಬಗ್ಗಿದೆ ನೋಡಿ
ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ
ಯಪ್ಪಾ ವಯಸ್ಸಾಯಿತಾ ಎಂದು
ಹುಟ್ಟಿದ ವರ್ಷ ಲೆಕ್ಕ ಹಾಕಿದೆ
ಇಲ್ಲಾ ಇನ್ನೂ ನಲವತ್ತು ದಾಟಿಲ್ಲ...

ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು
ನಾನು ಕಾಶಿ-ರಾಮೇಶ್ವರ ಸುತ್ತೋದು ಹೇಗೆ
ವೈಷ್ಣೋದೇವಿಯನ್ನ ನಡಿಗೆಯಲಿ ಸಾಗಿ
ಮಾನಸ ಸರೋವವರನ್ನ ಮುಟ್ಟಿ
ಆ ಶಿವನ ಸಾನಿಧ್ಯದಲಿ ಮಂಜಾಗಿ ಕರಗದೆ
ಇನ್ನೊಂದಷ್ಟು ಪುಣ್ಯಕ್ಷೇತ್ರ ನೋಡುವಾಸೆ...

ಪರದೇಶ ಸುತ್ತುವ ಆಸೆಯಿಲ್ಲ ಸ್ವಾಮಿ
ನನ್ನ್ ದೇಶ ಸ್ವರ್ಗದ ಬೀಡು
ಆ ಕಲ್ಲು ಬಂಡೆಗಳಲಿ ಪ್ರಕೃತಿಯ ಮಡಿಲಲ್ಲಿ
ಒಂದಿಷ್ಟು ಹೆಜ್ಜೆ ಹಾಕುತ್ತ
ಒಂದಷ್ಟು ಇತಿಹಾಸ, ಚರಿತ್ರೆಗಳ ಮೆಲುಕು ಹಾಕಿ
ಭಾವ ಭಕ್ತಿ, ಜೀವನ ಶೈಲಿ ಅರಿಯುವಾಸೆ

ಈ ಚಳಿಗೆ ಕೈ ಕಾಲು ಹಿಡಿದು ಬಿಟ್ಟಿವೆ
ಹೆಜ್ಜೆ ಮುಂದೋಗುತ್ತಿಲ್ಲ ಅದ್ಯಾವ ದೇಹ ನಂದು
ಆಗೆಲ್ಲ ನಮ್ಮ ಹಿರಿಯರು ಮುದ್ದೆ, ಬಸ್ಸಾರು ಉಂಡು
ಗಟ್ಟಿ ಮೈಕಟ್ಟಿನಲಿ ಹೊಲಗದ್ದೆಗಳಲಿ ಮಿಂದು
ರಾಶಿ ಹಾಕುತ್ತಿರಲಿಲ್ಲವೇ..??
ಈಗ್ಯಾವ ಕೆಲಸ ಕಟ್ಟಿ ಹಾಕುತ್ತೇನೇ ಸ್ವಾಮಿ
ಈ ಸೋಮಾರಿ ಮಯ್ಯಿ ತಿರುಗಿದರೂ ನೋವು
ಕೂತರೂ ನಿಂತರೂ ನೋವೇ ನೋವು

ಮುಂದೆ ಕೂತಲ್ಲೇ ಕೈಲಾಸ ಸ್ವಾಮಿ
ಯಾವ ಪುಣ್ಯಕ್ಷೇತ್ರಗಳೂ ನನ್ನತ್ತ ಸರಿಯೋಲ್ಲ
ನಾನೇ ಕೂತಲ್ಲಿ ಕೈಮುಗಿದು
ಯೂಟೂಬ್ ನಲ್ಲೇ ಕೈಲಾಸ ಕಂಡು
ಆ ಮಾದೇಸ್ವರನಿಗೆ ದೀರ್ಘದಂಡವೇನೋ ಗೊತ್ತಿಲ್ಲ
ಅದ್ದುಪದ್ದು ಇಲ್ಲದ ಈ ನೋವಿಗೆ
ರುದ್ರನ ಮಂತ್ರ ಜಪಿಸಲು ರುದ್ರಾಕ್ಷಿ ತರಿಸಿಕೊಳ್ಳುವೆ
ಆಗಲಾದರೂ ಮುಕ್ತಿ ಸಿಗುವುದೇನೋ ಕಾಣೇ
ಈ ಬೆಂಬಿಡದ ನೋ..ನೋ ನೋವಿಗೆ..!! :) :)