Sunday, February 28, 2016

ಮಿತಿಗೂ ಸಡ್ಡುಹೊಡೆದ ಪ್ರತಿಭೆಗಳು...


ಇದೇ ಶುಕ್ರವಾರ ನಡೆದ ತಮಿಳುನಾಡು ಇಂಜಿನಿರ್ಯರ್ಸ್ ಪೋರ್ಮ್ ಕಾರ್ಯಕ್ರಮದಲ್ಲಿ "Proud of Being an Indian" ಎಂಬ ಶೀರ್ಷಿಕೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮ ಹೆಮ್ಮೆಯ ಸೈನಿಕರಿಗೆ ಗೌರವ ಸಲ್ಲಿಸುವ ಒಂದು ಕಾರ್ಯಕ್ರಮ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮನಸೆಳೆದದ್ದು ನನಗೆ ಮಾರ್ಷಲ್ ಅವರ ಮಾತು ಹಾಗೂ "Ability Unlimited" ತಂಡದ ಮನಮೋಹಕ ನೃತ್ಯಪ್ರದರ್ಶನ. 

ಮಾರ್ಷಲ್ ಕೃಷ್ಣಸ್ವಾಮಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ಕಂಡ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು ಅಲ್ಲದೇ ನೆರೆದಿದ್ದ ಮಕ್ಕಳಿಗೆ ಸ್ಪೂರ್ತಿದಾಯಕವಾದರು. "ನಾವೆಲ್ಲ ಸೈನಿಕರು ಅಷ್ಟೇ..!! ಅಲ್ಲಿ ಯಾವುದೇ ಜಾತಿ, ಧರ್ಮ ಸಂಸ್ಕೃತಿ ಎಂಬ ಭಾವನೆಗಳು ಎಂದಿಗೂ ಬರುವುದೇ ಇಲ್ಲ"  ನಮ್ಮೊಳಗೆ ದೇಶಭಕ್ತಿ, ದೇಶ ಇಷ್ಟೇ ಬೇರಾವುದೂ ಸುಳಿಯಲು ಸಾಧ್ಯವೇ ಇಲ್ಲ". 


ಯುದ್ಧ ನಡೆಯುತ್ತಲಿದ್ದರೆ ನಮ್ಮೊಡನಿರುವ ಸ್ನೇಹಿತ ಸತ್ತು ಮಲಗಿರುತ್ತಾನೆ, ಅವನನ್ನು ಕಂಡು ನಾವು ದುಃಖಿಸುವುದಕ್ಕೆ ಜಾಗವೇ ಇಲ್ಲ, ನಮ್ಮೊಳಗೂ ಭಾವುಕತೆಯಿದೆ ಹಾಗೆಂದ ಮಾತ್ರಕ್ಕೆ ಸತ್ತವನ ಎದುರು ನಾವು ಅಳುತ್ತ ಕೂತರೆ, ವೀರಮರಣ ಹೊಂದಿದ ನಮ್ಮ ಸ್ನೇಹಿತನಿಗೆ ನಾವು ಮಾಡಿದ ದ್ರೋಹ, ಆ ವ್ಯಕ್ತಿಗೆ ನಾವು ಸಲ್ಲಿಸಬೇಕಾದ ನಮನವೆಂದರೆ ಶತ್ರುಗಳೊಂದಿಗೆ ಸೆಣಸಾಡುವುದು. ಆತನ ಆತ್ಮಕ್ಕೆ ಶಾಂತಿ ಕೋರುವುದೇ ನಮ್ಮೆಲ್ಲರ ಗುರಿ. ನಮ್ಮ ಮನಸ್ಸುಗಳು ಎಲ್ಲವನ್ನೂ ಹತೋಟಿಯಲ್ಲಿಡುವಷ್ಟರ ಮಟ್ಟಕ್ಕೆ ಬೆಳೆದಿರುತ್ತದೆ. ಹೀಗೆ ಒಂದೇ ಸಮನೆ ಸೈನಿಕರ ಮನದಾಳವನ್ನು ತೆರೆದಿಟ್ಟವರು ಮಾರ್ಷಲ್ ಶ್ರೀನಿವಾಸಪುರಂ ಕೃಷ್ಣಸ್ವಾಮಿ.("Honor, Pride and Need of Serving Our Nation with True Patriotism” - Mr. Srinivasapuram Krishnaswamy  PVSM, AVSM, VM and Bar, 19th Chief of Air Staff of India - INDIAN ARMED FORCES).

ಹಾಗೆ ಪ್ರಶ್ನೆಗಳಿಗೆ ಉತ್ತರಿಸುತ್ತಿವವರಿಗೆ ಮತ್ತೊಂದು ಪ್ರಶ್ನೆ, ದೇಶದಲ್ಲಿ ನಡೆವ ರಾಜಕೀಯಕ್ಕೆ ಬೇಸತ್ತೋ ಏನೋ ಶಾಲಾ ಹೆಣ್ಣು ಮಗು ಕೇಳಿದ್ದು "ನಮ್ಮ ದೇಶದಲ್ಲಿ ಏಕೆ ಮಿಲಿಟರಿ ಅಧಿಕಾರ ತರಬಾರದು...?" ಎಂಬ ಪ್ರಶ್ನೆಗೆ ಮಾರ್ಷಲ್ ರವರ ತಟ್ಟನೆ ಉತ್ತರ "ಹಾಗೇನಾದ್ರು ಆದರೆ ಅದೊಂದು ದುರ್ದೈವವೇ ಸರಿ".  "ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಮಾಡಬೇಕು ಅದು ಬಿಟ್ಟು ಬೇರೆ ಮಾಡಬಾರದು. ನಾನು ಸೈನಿಕ ನನ್ನ ಕೆಲಸವನಷ್ಟೇ ನಾನು ಮಾಡಬೇಕು ಅದು ಬಿಟ್ಟು ರಾಜಕೀಯ ಮಾಡುತ್ತ ಕುಳಿತರೆ ದೇಶಕಾಯುವ ಕೆಲಸ ಯಾರು ಮಾಡುತ್ತಾರೆ". 
ಸೈನಿಕರ ಮನಸ್ಸು ಮತ್ತು ಮನೋಭಾವ ಹೇಗಿರುತ್ತದೆ ಎಂಬುದಕ್ಕೆ ಮಾರ್ಷಲ್ ಅವರೇ ಸಾಕ್ಷಿಯಾದರು, ತಮ್ಮ ವೃತ್ತಿ ಬದುಕಿನ ಬಹಳಷ್ಟು ಅನುಭವವಗಳನ್ನು ಹಂಚಿಕೊಂಡರು. ಅವರು ೧೬ರನೇ ವರ್ಯಸ್ಸಿಗೆ ವಿಮಾನ ಚಾಲನೆ, ೨೨ನೇ ವರ್ಷಕ್ಕೆ ಕಾರ್ಗಿಲ್ ಯುದ್ಧ, ಸೈನ್ಯದಲ್ಲಿ ಹೆಣ್ಣುಮಕ್ಕಳೂ ಯಾರಿಗೇನು ಕಡಿಮೆಯಿಲ್ಲ ಎಂಬಂತೆ ತಮ್ಮ ಸಾಹಸ ಪ್ರದರ್ಶನ ಮಾಡುವವರ ಬಗೆಗಿನ ಮಾಹಿತಿ - ಹೀಗೆ ಹತ್ತು ಹಲವಾರು ಅನುಭವವಗಳನ್ನು ಹಂಚಿಕೊಂಡರು.

ಯೋಧರಿಗೆ ನಮನ ಸಲ್ಲಿಸಲು ಹೀಗೂ ನಾವು ಮಾಡಬಹುದು ಅವರೊಂದಿಗೆ ಮಾತುಕತೆ, ಸಂವಾದಗಳು ನಡೆದರೆ ಇಲ್ಲಿರುವ ಮಕ್ಕಳಿಗೂ ಸ್ಪೂರ್ತಿದಾಯಕ ಎಂದೆನಿಸಿತು.

---------------

ಇದೇ ವೇದಿಕೆಯಲ್ಲಿ ಮತ್ತೊಂದು ಕಣ್ಮನ ಸೆಳೆದದ್ದು Ability Unlimited ತಂಡದ ಮನೋಜ್ಞ ನೃತ್ಯ. ನಾನು ಇಲ್ಲಿ ಈ ಮಕ್ಕಳು ಅಂಗ ವಿಕಲರು ಎಂದರೆ ನನ್ನೊಳಗಿನ ಅಂಗ ವೈಕಲ್ಯತೆ ಎದ್ದು ಕಾಣುತ್ತದೆ ಅಥವಾ ಅಯ್ಯೋ ಪಾಪ ಎಂಬ ಕರುಣೆ ತೋರಿಸದರೆ ನನ್ನ ಮನಸ್ಸಿನ ನ್ಯೂನತೆ ಎದ್ದು ಕಾಣುತ್ತದೆ. ಇಲ್ಲ ನಾನು ಇದಾವುದನ್ನು ಸಂಭೋದಿಸಲು ಇಷ್ಟಪಡುವುದಿಲ್ಲ ಈ ಶುಕ್ರವಾರ ನಾ ಕಂಡಿದ್ದು ಒಂದು ದೈವೀ ಕಳೆಯ ನೃತ್ಯರೂಪಕ, ಅದು ವಿಭಿನ್ನ ಶೈಲಿಯಲ್ಲಿ. ಸಾಧನೆ ಎಂಬುದು ಎಲ್ಲರ ಸ್ವತ್ತು, 'ನಾನು ಯಾವಾಗಲು ನಂಬಿರುವುದು ಎಲ್ಲರಲ್ಲೂ ಒಂದೊಂದು ರೀತಿಯ ಕಲೆ ಇದ್ದೇ ಇರುತ್ತದೆ ಆದರೆ ಅದನ್ನು ಹೊರತರುವುದು ಮಾತ್ರ ನಮ್ಮಗಳ ಕರ್ತವ್ಯ ಜೊತೆಗೆ ಮತ್ತೊಬ್ಬರೊಂದಿಗೆ ಹಂಚಿಕೊಂಡರೆ ಅದು ಬೆಳಕಿಗೆ ಬರುವುದಷ್ಟೇ ಅಲ್ಲಾ ಹೊಸತನವನ್ನು ಕಲಿಯಲು ಪ್ರೋತ್ಸಾಹಿಸುತ್ತದೆ’. 

ಡಾ. ಸೈಯದ್ ಸಲ್ಲುದ್ದೀನ್ ಪಾಷ  ಈ ವ್ಯಕ್ತಿಯ ಬಗ್ಗೆ ಕೇಳಿರುವವರು ಕೆಲವೇ ಮಂದಿ ಇರಬಹುದು ಆದರೆ ಅದ್ಭುತ ಸಾಧಕ ಸುಮಾರು ೩೦ ವರ್ಷಗಳಿಂದ ವಿಶಿಷ್ಟ ಮಕ್ಕಳಿಗೆ ತಮ್ಮೆಲ್ಲಾ ಜ್ಞಾನದ ಬೆಳಕನ್ನು ಹಂಚುತ್ತಿರುವ ಪ್ರಬುದ್ಧ ವ್ಯಕ್ತಿ. Ability Unlimited ತಂಡದ ಮೂಲಕ ಹಲವಾರು ಮಕ್ಕಳು ನೃತ್ಯಪ್ರದರ್ಶನ ನೀಡಿದರು, ಅದರಲ್ಲಿ ತಮಗೆ ಕಾಲಿಲ್ಲ, ಕಿವಿ ಕೇಳುವುದಿಲ್ಲ ನನಗೆ ಆ ತೊಂದರೆ ಈ ತೊಂದರೆ ಎಂದು ಎಲ್ಲಿಯೂ ಕಿಂಚಿತ್ತು ಕಾಣದಂತೆ ನಮ್ಮೆಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದರು. ಹೇಗಿದ್ದರೂ ಸರಿ ನಾವು ಮುಂಜಾವಿನ ಯೋಗವನ್ನು ತಮ್ಮ ಗಾಲಿ ಕುರ್ಚಿಯ ಮೇಲೂ ಮಾಡಬಹುದು, ಭರತನಾಟ್ಯ, ಕಥಕ್ ನೃತ್ಯ, ಯಾವುದಾದರೂ ಸರಿ ಎಲ್ಲವನ್ನೂ ಸೈ ಎನಿಸಿಕೊಳ್ಳುವಂತೆ ನರ್ತಿಸಬಲ್ಲೆವು ಎಲ್ಲದಕ್ಕಿಂತಲೂ ವಿಭಿನ್ನವಾಗಿರುತ್ತದೆ ಎಂದು ತೋರಿಸಿಕೊಟ್ಟವರು ಈ ಮಕ್ಕಳು.  
ಆಯ್ದ ಕೆಲವು ವಿಡಿಯೋಗಳನ್ನು ಇಲ್ಲಿ ಹಂಚಿಕೊಂಡಿರುವೆ.....

ಗಾಲಿ ಕುರ್ಚಿ ರಥವಾದಾಗ 

 ಕತ್ತಿವರಸೆ

 ಬಾಲಿವುಡ್ ಹಾಡಿಗೆ ನೃತ್ಯ 

- ಈ ವಿಡಿಯೋಗಳನ್ನೊಮ್ಮೆ ನೋಡಿ, ನಮಗೆ ಅರಿವಿಲ್ಲದೆ ಸಂತಸ ಹುಟ್ಟುತ್ತದೆ.

ಭಗವದ್ಗೀತೆ ಗಾಲಿ ಕುರ್ಚಿಯ ಮೇಲೆ ಎಂದಾಗ ನಾನು ಬೆರಗು ಕಣ್ಣಿಂದ ನೋಡುತ್ತಿದ್ದವಳಿಗೆ ಕಣ್ಣಾಲೆಗಳು ಕೆಂಪಾಗಿದ್ದವು. ಕತ್ತಿ ವರಸೆ ಗಾಲಿ ಕುರ್ಚಿಯಲಿ ಸಾಗುತ್ತಿದ್ದರೆ ಮೈ ಝುಮ್ ಎನಿಸುತ್ತಿತ್ತು. ಬಾಲಿವುಡ್ ನಾಟ್ಯ ಗಾಲಿಯಲಿ ತಿರುಗುತ್ತಿದ್ದರೆ ನನಗೆ ಅರಿವಿಲ್ಲದೆ ದುಃಖ ಉಮ್ಮಳಿಸಿತ್ತು... ನಿಜ ನಾವು ಎಲ್ಲ ಸರಿಯಿದೆ ನಮಗೆ ಯಾವ ನ್ಯೂನತೆಯಿಲ್ಲ ಎಂದು ಬೀಗುತ್ತಿದ್ದರೆ ನಮ್ಮೊಳ ಮನಸ್ಸು ನ್ಯೂನತೆಯಲ್ಲಿದೆ ಹೊರಗಿನ ಪ್ರಪಂಚವನ್ನು ನೋಡುವುದರಲ್ಲಿ ನಾವು ಸೋತಿದ್ದೇವೆ ಪ್ರತಿಭೆಯನ್ನು ಗುರುತಿಸುವುದರಲ್ಲಿ ಹಿಂದುಳಿದಿದ್ದೇವೆ ಎಂದೆನಿಸುತ್ತದೆ. ಆದರೆ ಇದೆಲ್ಲವನ್ನು ಹಿಂದಿಟ್ಟು ಡಾ. ಸೈಯದ್  ತೆರೆದ ಮನಸ್ಸಿನಿಂದ ಮಾಡುತ್ತಿರುವ ಸೇವೆ ಅಪಾರ. ಅವರಿಗೊಂದು ನನ್ನ ಸಲಾಮ್. 

ಡಾ. ಸೈಯದ್ ಹೇಳುತ್ತಾರೆ ಈ ಮಕ್ಕಳು ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಲೇ ಬಂದಿದ್ದಾರೆ. ಈ ಮಕ್ಕಳು ಎಲ್ಲಿಯೇ ಹೋದರೂ ಮೇಕಪ್ ಮಾಡಿಕೊಳ್ಳಲು ಯಾರೊಬ್ಬರ ಸಹಾಯ ಪಡೆಯುವುದಿಲ್ಲ ತಮ್ಮಷ್ಟಕೆ ತಾವೇ ತಯಾರಾಗಿ ಬರುತ್ತಾರೆ, ಅವರವರ ಸಾಮಗ್ರಿಗಳು ಅವರದೇ ಜವಾಬ್ದಾರಿಯಲಿರುತ್ತದೆ, ನೃತ್ಯ ಮಾಡುತ್ತಿದ್ದರೆ ಮಕ್ಕಳು ತಮ್ಮ ಗಾಲಿಯನ್ನು ಯಾವ ಬೈಕ್ ಸವಾರ ೧೫೦ ಕಿ ಮಿ ವೇಗಕ್ಕೆ ಓಡಿಸುತ್ತಾನೋ ಅದೇ ವೇಗದಲ್ಲಿ ಈ ಗಾಲಿಚಕ್ರವೂ ಓಡುತ್ತದೆ. ವಿಶಿಷ್ಟ  ಗಾಲಿ ಕುರ್ಚಿಯ ವಿನ್ಯಾಸದ ಹಿಂದೆಯೂ ಡಾ.ಸೈಯದ್ ಕೈವಾಡವಿದೆ ಆ ವ್ಯಕ್ತಿ ದೈವೀಸಂಭೂತನೆಂದರೆ ತಪ್ಪಾಗಲಾರದು.  ಹೀಗೆ ಹೇಳುತ್ತ ಹೋದರೆ ಆ ತಂಡದ ವಿಶಿಷ್ಟತೆ ಹೆಚ್ಚುತ್ತಲೇ ಹೋಗುತ್ತದೆ. 

ಡಾ.ಸೈಯದ್ ಕೊನೆಗೊಂದು ಮಾತು ಹೇಳುತ್ತಾರೆ "ನಿಜವಾಗಿಯೂ ಏಳು ಜನ್ಮ ಎಂಬುದೊಂದಿದ್ದರೆ ನಾನು ಖಂಡಿತವಾಗಿಯೂ ಈ ಭರತ ಭೂಮಿಯಲ್ಲಿಯೇ ಜನಿಸಬೇಕು" ಎಂದು, ಈ ಮಾತನ್ನು ಕೇಳಿದಮೇಲೆ ನಿಜ ಅದು ಸತ್ಯವೇ ಆದರೆ ಇಂತಹ ಮಹಾನ್ ವ್ಯಕ್ತಿಗಳು ಭರತ ಭೂಮಿಯಲ್ಲೇ ಜನ್ಮತಾಳಲೆಂದು  ಆಶಿಸುತ್ತೇನೆ.


ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದ  TEF ಕಾರ್ಯಕಾರಿ ಸಮಿತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.