ದೀಪ-೧

ಪುಟ್ಟ ಸಂಸಾರ ಗಂಡ ಹೆಂಡತಿ ಮೂರು ಮಕ್ಕಳು.......ಬೃಹತ್ ನಗರದ ಮಧ್ಯದಲ್ಲಿ ಪುಟ್ಟ ಗುಡಿಸಿಲಿನ ವಾಸ, ಸುತ್ತಲೂ ಅದ್ಧೂರಿ ಬಂಗಲೆಗಳಿದ್ದರೂ, ಅಲ್ಲಿ ಕೆಲವೇ ಕೆಲವು ಗುಡಿಸಲುವಾಸಿಗಳಿದ್ದರು. ಆ ಗುಡಿಸಲುಗಳೊಂದರಲ್ಲಿ ಈ ಪುಟ್ಟ ಚೆನ್ನಮ್ಮ ಮತ್ತು ಚೆನ್ನಯ್ಯನ ಕುಟುಂಬ ವಾಸವಾಗಿತ್ತು. ಚೆನ್ನಯ್ಯ ಅಂತ ಆರೋಗ್ಯವಂತನಲ್ಲ ವಾರಕ್ಕೆ ೪ ದಿನ ಕೆಲಸಕ್ಕೋದರೆ ಇನ್ನುಳಿದ ದಿನಗಳು ಮನೆಯಲ್ಲೇ ಆರೋಗ್ಯ ಕೆಟ್ಟು ಮಲಗುವಂತಹವನು ಇದನ್ನು ಕಂಡ ಚೆನ್ನಮ್ಮ ತನ್ನ ಗಂಡನನ್ನು ಮನೆಯಲ್ಲೇ ಉಳಿಯಲು ಬಿಟ್ಟು, ತಾನು ಕೆಲಸಕ್ಕೆ ಹೋಗುತ್ತಲಿದ್ದಳು. ಅಲ್ಲೇ ಸುತ್ತ ಮುತ್ತಲು ಇದ್ದ ಶ್ರೀಮಂತ ಮನೆಗಳಿಗೆ ಕೆಲಸ ಮಾಡುವುದು ಅವಳ ದಿನ ನಿತ್ಯದ ಕೆಲಸ...... ಈ ದಂಪತಿಗಳಿಗೆ ಮುದ್ದಾದ ಮೂರು ಮಕ್ಕಳು ಎರಡು ಹೆಣ್ಣು, ಒಂದು ಗಂಡು..... ದೊಡ್ಡ ಮಗಳು ಶಬರಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಲಿದ್ದಾಳೆ. ಈಕೆಗೆ ಅಮ್ಮನ ಕಷ್ಟ, ಅಪ್ಪನ ಆರೋಗ್ಯ ಎಲ್ಲದರ ಅರಿವಿದೆ. ಅದಕ್ಕಾಗೆ ಅಮ್ಮನೊಟ್ಟಿಗೆ ಕೈಜೋಡಿಸಿ ಅವಳೂ ಸಹ ಮನೆಗೆಲಸಕ್ಕೆ ಹೋಗುತ್ತಲಿರುತ್ತಾಳೆ. ಅಮ್ಮ ಮನೆ ಕಸಗುಡಿಸುತ್ತಿದ್ದರೆ ಶಬರಿ ಪಾತ್ರೆ ತೊಳೆಯುವ ಕೆಲಸ, ಈ ರೀತಿ ಇಬ್ಬರು ಹಂಚಿಕೊಂಡು ಕೆಲಸ ಮಾಡುತ್ತಿರುತ್ತಾರೆ.
ಶಬರಿ ಹೆಸರಿಗೆ ತಕ್ಕಂತೆ ಆ ರಾಮನಿಗಾಗಿ ಕಾದಿದ್ದ ಶಬರಿಯಂತೆ ಇವಳಲ್ಲೂ ಕಾಯುವ ಸಹನೆ ಬಹಳವಿತ್ತು. ಶಬರಿ ಓದುವ ಮನಸ್ಸು ಮಾತ್ರ ಅತಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಇವಳು ಶಾಲೆಯಲ್ಲೇ ಮೊದಲು, ಸಂಜೆ ಮನೆಗೆ ಬಂದೊಡನೆ ಅಮ್ಮನೊಟ್ಟಿಗೆ ಕೆಲಸ ಎಲ್ಲ ಕೆಲಸ ಮುಗಿಸಿ ಬರುವಷ್ಟರಲ್ಲಿ ರಾತ್ರಿ ೮ ಗಂಟೆ ಆನಂತರ ತನ್ನ ಓದಿನ ಕಡೆ ಗಮನ. ಸದಾ ಅಂದಿನ ಪಾಠವನ್ನು ತಪ್ಪದೇ ಓದುತ್ತಿದ್ದ ಶಬರಿಗೆ ಯಾವುದೇ ತೊಂದರೆ ಎದುರಿಸಲಿಲ್ಲ. ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಇನ್ನೇನು ದಿನಗಳೆಣಿಸುವಂತಾಗಿದೆ ಸೀಮೆ ಎಣ್ಣೆ ಬುಟ್ಟಿ ಇಟ್ಟು ರಾತ್ರಿ ಎಲ್ಲಾ ಓದುತ್ತಿದ್ದಾಳೇ ಶಬರಿ, ಅಮ್ಮ ಅಪ್ಪ ಮಗಳ ಶ್ರಮ ಕಂಡು ಬೇಸರವೆನಿಸಿದೆ ಪಕ್ಕದಲ್ಲಿರೋ ಶ್ರೀಮಂತ ಮನೆಗಳಲ್ಲಿ ನಾಯಿ ಮಲಗುವ ಕೋಣೆಗೂ ದೀಪಾಲಂಕಾರವಿದೆ, ನಮ್ಮಂತ ನಿರ್ಗತಿಕರಿಗೆ ಆ ನಾಯಿಗಿರುವಷ್ಟು ಸೌಲಭ್ಯವಿಲ್ಲದಾಯಿತೆ. ಎಂದು ಮರುಕ ಒಂದು ಕಡೆ, ನಮ್ಮ ಹಣೆ ಬರಹವೇ ಹೀಗೆಂಬ ಸಮಜಾಯಿಸಿ ಮತ್ತೊಂದೆಡೆ.
ಶಬರಿ ಪರೀಕ್ಷಾ ದಿನಗಳಲ್ಲಿ ಕೆಲಸಕ್ಕೆ ಬರದಿರಲು ಅಮ್ಮ ತಾಕಿತ್ತು ಮಾಡಿರುತ್ತಾಳೆ. ನೀನು ಮನೆಯಲ್ಲೇ ಇದ್ದು ಓದು, ಕೆಲಸವೆಲ್ಲಾ ನಾನೇ ಮುಗಿಸಿ ಬರುವೆ ಎಂದು.... ಅತ್ತ ಮನೆಗೆಲಸದಲ್ಲಿ ತೊಡಗಿರುವಾಗ ಮನೆಯೊಡತಿ ಗತ್ತಿನಿಂದ ನಿನ್ನ ಮಗಳು ಬಂದಿಲ್ಲ, ಕೆಲಸ ನಿಧಾನವಾಗುತ್ತೆ......ದಿನವೆಲ್ಲಾ ಕೆಲಸ ಮಾಡ್ತಾನೇ ಇರು, ನಾವು ನೀ ಮುಗಿಸೋವರೆಗೂ ಕಾದು ಕುಳ್ತಿರ್ತೀವಿ ಎಂದು ಜೋರು ಧನಿಯಲ್ಲಿ ಕೇಳುತ್ತಲೇ, ಇತ್ತ ಚೆನ್ನಮ್ಮ ಇಲ್ಲಮ್ಮ, ಮಗಳಿಗೆ ಪರೀಕ್ಷೆ ಇದೆ ಅದಕ್ಕೆ ಓದಲೆಂದು ಬಿಟ್ಟುಬಂದೆ ಎಂದ ಕೂಡಲೇ ಮನೆಯೊಡತಿ ಓಹೋ.... ಅವಳು ಓದಿ ಈ ದೇಶವೇನು ಉದ್ಧಾರವಾಗಬೇಕಿಲ್ಲ, ಬರೆದಷ್ಟು ಬರೆಯಲಿ ಮುಂದಿನ ವರ್ಷದಿಂದ ಓದು ಬಿಡಿಸಿ ನಮ್ಮ ಮನೆ ಕೆಲಸಕ್ಕೆ ಬಿಡು ನಿನಗೆ ವಯಸ್ಸಾಯಿತು..... ನಿನ್ನ ಕೈಲಾಗೋಲ್ಲ ಎಂದು ಗದರಿಬಿಡುತ್ತಾಳೆ.....ಚೆನ್ನಮ್ಮ ಮನಸಲ್ಲೇ ಅಳುತ್ತಾ ಅವರ ಮಕ್ಕಳಾದರೆ ಓದಬಹುದು, ಆ ಮಕ್ಕಳು ಓದುವಾಗ ಅವರು ಕುಳಿತಲ್ಲೇ ಸೇವೆ ಮಾಡಬೇಕು, ತಿನ್ನಲೂ ಸಹ ಎದ್ದು ಬರುವುದಿಲ್ಲ, ಓದುವ ಮೇಜಿಗೆ ಎಲ್ಲವನ್ನು ತೆಗೆದೊಯ್ಯಬೇಕು....ಅಂತಹದರಲ್ಲಿ ನಾವು ಬಡವರು ನಮ್ಮ ಮಕ್ಕಳೂ ಓದಲೇ ಬಾರದೆ....??
ಅಂದು ಸಂಜೆ ಮನೆಗೆ ಬಂದವಳೆ ಮಗಳಿಗೆ ನೊಂದ ಮನಸಿನಿಂದಲೇ ಹೇಳುತ್ತಾಳೆ. "ಬಡತನವೇ ಒಂದು ಶಾಪ" ನಮಗೆ, ನೀನು ಆ ಶಾಪವನ್ನು ನಮ್ಮಿಂದ ದೂರ ಮಾಡಬೇಕು, "ನಾವು ಕೂಲಿ ಕೆಲಸಕ್ಕೆ ಮೀಸಲೆಂದು ಭಾವಿಸಿರುವವರ ಮಧ್ಯೆ ನಮಗೂ ಯಜಮಾನಿಕೆ ಮಾಡುವಷ್ಟು ಸಾಮರ್ಥ್ಯವಿದೆ" ಎಂಬಂತೆ ನೀನು ಸಾಧಿಸಿ ತೋರಿಸಬೇಕು . ನನಗೆ ಗೊತ್ತಿಲ್ಲ ಅದು ಹೇಗೆ ಓದುತ್ತೀಯೋ ಅಂತ ಒಟ್ಟಲ್ಲಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸು. ಎಂದು ಅಮ್ಮ ಮಗಳಲ್ಲಿ ಕಣ್ಣ ಕಂಬನಿಯೊಂದಿಗೆ ಬೇಡುತ್ತಾಳೆ......ಮಗಳಿಗೂ ಅಮ್ಮನಿಗೇನೋ ಬೇಸರವಾಗಿ ಹೀಗೆಳುತ್ತಲಿದ್ದಾಳೆ ಅವಳ ಆಸೆ ಹೇಗಾದರೂ ಮಾಡಿ ಪೂರೈಸಲೇ ಬೇಕು ಎಂಬ ಪಣ ತೊಡುತ್ತಾಳೆ.
ಇತ್ತ ಅಮ್ಮನದೂ ಮಾಮೂಲಿ ಕೆಲಸ ಅಪ್ಪ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕರೆತರುವುದು, ಮನೆ ಜವಾಬ್ದಾರಿ ವಹಿಸಿ ನೆಡೆಸುವುದು ಇದೇ ಕೆಲಸ.......ಜೊತೆಗೆ ಅಪ್ಪ ಮನೆಯಲ್ಲೇ ಇದ್ದು ಸಮಯ ಹಾಳು ಮಾಡದೆ ಬಿಸಾಡಿದ ನ್ಯೂಸ್ ಪೇಪರ್ ನಿಂದ ಪೊಟ್ಟಣವನ್ನು ಮಾಡಿ ಅಂಗಡಿಗೆ ಮಾರುತ್ತಲಿರುತ್ತಾನೆ. ಶ್ರಮದ ಜೀವನದಲ್ಲೂ ಸುಖಕಾಣುವುದು ಈ ಕುಟುಂಬದ ನಿಲುವು. ಶಬರಿಗೆ ಇನ್ನೇನು ಎರಡೇ ದಿನ ಪರೀಕ್ಷೆಗೆ.....ಪರೀಕ್ಷೆ ಬರೆಯಲು ಲೇಖನಿ ಇಲ್ಲ......ಅಮ್ಮನನ್ನು ಕೇಳಿದಳು ಅಮ್ಮ ಬರೆಯಲು ಪೆನ್ನು ಬೇಕಿತ್ತು ತಂದುಕೊಡುತ್ತೀಯಾ...? ಆಯ್ತು ಮಗಳೇ ಸಂಜೆ ಮನೆಗೆಲಸದವರ ಮನೆಯಲ್ಲಿ ಕೇಳಿ ತರುತ್ತೇನೆಂದಳು......
ಮನೆಗೆಲಸಕ್ಕೆ ಹೋಗಿದ್ದಾಗ ಮನೆಯೊಡತಿಯನ್ನು ಕೇಳಿದರೆ ಎಲ್ಲಿ ಅಪಶಕುನದ ಮಾತಾಡುವಳೋ ಎಂದು ಯೋಚಿಸಿ ಕೇಳಲೋ ಬೇಡವೆಂದು ಯೋಚಿಸುತ್ತಾ ಮಕ್ಕಳ ಕೋಣೆ ಸ್ವಚ್ಚಗೊಳಿಸಲು ಹೋದಾಗ ಆ ಮನೆಯ ಮಕ್ಕಳ ಪೆನ್ನುಗಳು, ಪೆನ್ಸಿಲ್ ಗಳನ್ನು ಕಂಡು ಮನದಲ್ಲೆಲ್ಲೋ ಆಸೆ ಮೂಡಿ, ಇಷ್ಟು ದುಬಾರಿ ಪೆನ್ನು ನನ್ನ ಮಗಳು ಜನ್ಮದಲ್ಲೂ ಕಾಣಲಾರಳು..........ಈ ಪೆನ್ನುಗಳನ್ನು ಉಪಯೋಗಿಸಿ ಬರೆದರೆ ನನ್ನ ಮಗು ಪರೀಕ್ಷೆಯಲ್ಲಿ ಚೆಂದಾಕಿ ಬರೆಯಬಹುದೆಂದು ಏನೋ ಆಸೆ ಪಟ್ಟು ಅಲ್ಲಿದ್ದ ಎರಡು ಪೆನ್ನು, ಎರಡು ಪೆನ್ಸಿಲ್ ಗಳನ್ನು ತೆಗೆದು ತನ್ನ ಸೆರಗಿನಲ್ಲಿ ಕಟ್ಟುಕೊಳ್ಳುತ್ತಿರವಾಗಲೇ...... ಆ ಮನೆಯೊಡತಿ ಬಂದು ಬಿಡುತ್ತಾಳೆ..........ಹೌಹಾರಿದ ಮನೆಯೊಡತಿ ಏನು ಕೆಲಸ ಮಾಡುತ್ತಲಿದ್ದೀಯಾ, ಕಳ್ಳತನ ಮಾಡ್ತಾ ಇದ್ದೀಯಾ..?!!! ಹಿಂಗೆ ಎಷ್ಟು ದಿನ ಏನೇನು ತಗೊಂಡು ಹೋಗಿದ್ದೀಯಾ... ನಿಮ್ಮಂತವರಿಂದ ನಾವು ನೆಮ್ಮದಿಯಾಗಿರೊಕ್ಕೆ ಆಗೋಲ್ಲ.....ಎಂದ ಕೂಡಲೇ ಕಾಲಿಗೆ ಬಿದ್ದ ಚೆನ್ನಮ್ಮ ಅಮ್ಮ, ಕ್ಷಮಿಸಿ, ನಾನು ಇದೇ ಮೊಟ್ಟ ಮೊದಲು ನಿಮ್ಮ ಮನೆ ವಸ್ತು ಮುಟ್ಟಿದ್ದು ನಾನಾಗಿ ಎಂದೂ ಒಂದು ಹುಲ್ಲುಕಡ್ಡಿಯನ್ನೂ ನಿಮ್ಮ ಮನೆಯಿಂದ ತಗೊಂಡು ಹೋಗಿಲ್ಲಮ್ಮ...ದಯವಿಟ್ಟು ಕ್ಷಮಿಸಮ್ಮ.....ಈ ಪೆನ್ನುಗಳ ಕೊಡದಿದ್ದರೂ ಪರವಾಗಿಲ್ಲ ........ ವಾಪಸ್ ಇಟ್ಟುಬಿಡುತ್ತೇನೆ. ದಯವಿಟ್ಟು ನನ್ನ ಕ್ಷಮಿಸಮ್ಮ.......ನಿನ್ನ ಕ್ಷಮಿಸೋದಾ ಇಂದು ಚಿಕ್ಕದು ನಾಳೆ ದೊಡ್ಡದು....ಹೀಗೆ ಕಳ್ಳತನ ಮಾಡ್ತೀಯಾ.ಹೋಗು ನಮ್ಮ ಮನೆಗೆ ಕೆಲಸಕ್ಕೆ ಬರ್ಕೂಡದು ................ ಇನ್ನು ಯಾವತ್ತೂ ಈ ಕಡೆ ತಲೆ ಹಾಕ್ಬೇಡ ಎಂದು ಒಮ್ಮೆಲೇ ಆಚೆ ತಳ್ಳಿ ಬಾಗಿಲು ಜಡಿದು ಬಿಡುತ್ತಾಳೆ......
ಚೆನ್ನಮ್ಮ ತನ್ನ ಮಗಳಿಗೆ ಪೆನ್ನುಗಳು ತೆಗೆದುಕೊಂಡು ಬರುವಳೇ...?
ಆ ಮನೆ ಕೆಲಸದವಳು ಮತ್ತೆ ಮನೆಗೆ ಸೇರಿಸಿಕೊಳ್ಳುವಳೇ ಇಲ್ಲವೇ..?
ಕ್ಷಮಿಸಲಾರದಂತ ತಪ್ಪೇ ಇದು ....? ಮುಂದೇನಾಗುವುದೆಂದೆ ದೀಪ-೨ ರಲ್ಲಿ ನೋಡೋಣ..