Showing posts with label ೨೫-ಮಾರ್ಚ್-೨೦೧೧ ಕುವೈತಿನ ಬಿರುಗಾಳಿ. Show all posts
Showing posts with label ೨೫-ಮಾರ್ಚ್-೨೦೧೧ ಕುವೈತಿನ ಬಿರುಗಾಳಿ. Show all posts

Saturday, March 26, 2011

ಕೆಂಪಾದವೋ ಎಲ್ಲಾ ಕೆಂಪಾದವೋ...



ಶುಕ್ರವಾರ ಸಂಜೆ ಕುವೈತ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರೋ ಸ್ನೇಹಿತರ ಮನೆಗೆ ೬ ಗಂಟೆಗೆ ಹೋಗಿದ್ದೆವು.... ೬.೩೦ರವೇಳೆಗೆ ೮ನೇ ಮಹಡಿಯಲ್ಲಿರುವ ಅವರ ಮನೆಯಲ್ಲಿ ಮಣ್ಣಿನ ವಾಸನೆ ಬರುತ್ತಿದ್ದು ನೋಡಿ ಹೋ ಎಂದಿನಂತೆ ಎಲ್ಲೋ ಧೂಳು ಎದ್ದಿರಬೇಕು (ಕುವೈತಿನಲ್ಲಿ ವಾರದ ಕೊನೆಯಲ್ಲಿ ಸಾಮಾನ್ಯವಾಗಿ ಧೂಳಿನ ದಿನವೇ ಆಗಿರುತ್ತದೆ) ಎಂದುಕೊಂಡೆ. ಸುಮಾರು ೭.೩೦ ಇರಬೇಕು ಹೊರಡೋಣ ಎಂದು ಬಂದಾಗ ಲಿಫ್ಟ್ ಕೆಲಸ ಮಾಡುತ್ತಿಲ್ಲವೆಂದು ೯ ಮಹಡಿ ಇಳಿದೇ ಬಂದೆವು... ಹೊರಗೆ ಬಂದಕೂಡಲೆ ೪/೫ ಹೆಜ್ಜೆಯ ಅಂತರದಲ್ಲಿ ಮಾತ್ರ ಕಾಣುತ್ತಿತ್ತು ಮುಂದಕ್ಕೆ ಏನೂ ಕಾಣುತ್ತಿಲ್ಲ..... ಅಯ್ಯೋ ಏನಾಗಿದೆ ಇಷ್ಟು ವಿಚಿತ್ರವಾಗಿದೆಯಲ್ಲ ಎಂದುಕೊಂಡೆವು.... ಸರಿ ಎಂದು ನನ್ನತ್ತಿರವಿದ್ದ ಬಟ್ಟೆಯಿಂದ ತಲೆಗೆ ಕಟ್ಟಿ ಮುಂದೆ ಹೋದೆವು... ಕಾರನ್ನು ಎಲ್ಲೋ ನಿಲ್ಲಿಸಿ ಬಂದಿದ್ದೆವೋ ಗೊತ್ತೇ ಆಗುತ್ತಲ್ಲ....... ಸುತ್ತಾಡಿ ಸುತ್ತಾಡಿ ಆ ಧೂಳಿನಲ್ಲಿ ಸಾಕಾಯ್ತು ಸರಿ ಕೊನೆ ಪ್ರಯತ್ನವೆಂದು ಇನ್ನೊಂದು ಕಡೆ ಹೋಗೋಣ ಎಂದು ಹೋಗ್ತಾ ಇದ್ದರೆ ಈ ವಾಯುದೇವ ಸುಮ್ಮನಿರಬೇಕಲ್ಲ........ ಎಂತಾ ಭಯಾನಕ ಗಾಳಿ, ಇಷ್ಟು ತೂಕದ ದೇಹವನ್ನೇ ಬೀಳಿಸೋಕೆ ನೋಡ್ತಾ ಇದ್ದಾ ಹೋ ಇವಳು ಬಿದ್ದರೆ ಕಷ್ಟ ಹೊತ್ತುಕೊಂಡು ಹೋಗೋಕೆ ಆಗೋಲ್ಲ ಎಂದು ನನ್ನವರು ಕೈ ಹಿಡಿದುಕೊಂಡು ಕರೆದುಕೊಂಡು ಹೋಗ್ತಾ ಇದ್ದರು..... ಅಯ್ಯೋ ಮಗನ್ನ ಬೇರೆ ಕರೆದುಕೊಂಡು ಬಂದಿಲ್ಲ ಒಂದು ಕಡೆ ಒಳ್ಳೆದೇ ಆಯ್ತು ಇನ್ನೊಂದು ಕಡೆ ನಮಗೇನಾದರೂ ಆದ್ರೆ ಅವನೊಬ್ಬನೇ ಮನೆನಲ್ಲಿದ್ದಾನೆ ಎಂಬ ಯೋಚನೆ...... ಈ ಆರ್ಭಟಿಸುವ ಗಾಳಿಗೆ ಅವನೇನಾದರೂ ಹೆದರಿದ್ದಾನೇನೋ ಎಂದು ಕರೆ ಮಾಡಿದರೆ... ಅಯ್ಯೋ ಇಲ್ಲಿ ಏನು ಗಾಳಿ ಶಬ್ಧನೂ ಇಲ್ಲ ಎಂತದೂ ಇಲ್ಲ ಸುಮ್ಮನಿರಪ್ಪ... ನಾನು ಕ್ರಿಕೆಟ್ ನೋಡ್ತಾ ಆರಾಮಾಗಿ ಇದ್ದೀನಿ ನೀವು ಬೇಗ ಬನ್ನಿ... ಸರಿ ನಾವು ಇಲ್ಲಸಲ್ಲದನ್ನ ಯೋಚಿಸಿ ಮಗ ಗಾಬರಿಯಾಗ್ತಾನೆ ನಾವಿಲ್ಲ ಎಂದರೆ ಎಂದು ಯೋಚಿಸಿದರೆ ಕ್ರಿಕೆಟಿನ ಆರ್ಭಟದಲ್ಲಿ ಅವನ ನೆಚ್ಚಿನ ಟೀಂ ನ್ಯೂಜಿಲೆಂಡ್ ಗೆಲ್ಲುತ್ತಿರುವ ಸಂಭ್ರಮದಲ್ಲಿದ್ದ......

ಇತ್ತ ನಾವು ಸುತ್ತಾಡುವುದ ಕಂಡು ಕಾರಿನಲ್ಲಿ ಬರುತ್ತಲಿದ್ದವರೊಬ್ಬರು ನಿಮನ್ನು ಎಲ್ಲಿ ಬಿಡಬೇಕು ಎಂದು ಕೇಳುತ್ತಲಿದ್ದರೆ ನನಗೆ ಭಯವಾಗುತ್ತಿತ್ತು... ಸುತ್ತಲೂ ಸ್ಮಶಾನ ಮೌನ ರಸ್ತೆ ಬದಿ ಯಾರೂ ಇಲ್ಲ... ಯಾರೋ ಸಹಾಯ ಹಸ್ತ
ಚಾಚುವಂತೆ
ಬಂದು ತೊಂದರೆ ಕೊಟ್ಟು ಬಿಡುವರೇನೋ(ಹಲವು ಸಂಗತಿಗಳನ್ನು ಕೇಳಿದ್ದ ನಮಗೆ ಭಯ ತರಿಸಿತ್ತು ಆ ಕ್ಷಣ)... ಎಂದು ಪುಣ್ಯಕ್ಕೆ ಯಾವ ಅವಘಡವಾಗಲಿಲ್ಲ... ಪಾಪ ಅವರು ಕನಿಕರದಿಂದ ಸಹಾಯ ಕೇಳಿದ್ದಕ್ಕೆ ತಪ್ಪು ತಿಳಿಯೋ ಮನಸ್ಸು ಮಾಡ್ತೀವಿ.

ಅಂತೂ ಇಂತೂ ಸುಮಾರು ೧೫ ನಿಮಿಷಗಳ ನಂತರ ನಾವು ನಿಲ್ಲಿಸಿದ್ದ ಕಾರು ಸಿಕ್ಕಿತು. ಅದು ಕೆಂಪು ಬಣ್ಣದ ಕಾರೋಗಿ ಕಂದು ಬಣ್ಣಕ್ಕೆ ತಿರುಗಿತ್ತು ಹಹಹ...... ಸದ್ಯ ಸಿಕ್ಕಿತಲ್ಲಾ ಎಂದು ಕಾರೊಳಗೆ ಕೂತೆವು.... ರಸ್ತೆ ಕಾಣುತ್ತಲೇ ಇಲ್ಲ ನಿಧಾನ ಗತಿಯಲ್ಲಿ ಚೆಲಿಸುತ್ತ ಸದ್ಯಕ್ಕೆ ಹೆದ್ದಾರಿಗೆ ಬಂದೆವು ಇನ್ನು ಧೈರ್ಯ ಬಿಡು ಹೇಗೋ ಮನೆ ತಲುಪುತ್ತೇವೆ ಎಂದುಕೊಂಡು ಬರ್ತಾ ಇದ್ದರೆ ಏನು ರಸ್ತೆಯಲ್ಲಿ ಯಾರದೋ ಬಟ್ಟೆ, ಮಕ್ಕಳ ಆಟಿಕೆಗಳು ಎಲ್ಲಾ ಬಿದ್ದು ಒದ್ದಾಡ್ತಾ ಇದ್ದವು... ನಿಧಾನವಾಗೇ ಸಾಗುತ್ತಿದ್ದ ಕಾರಿನಲ್ಲಿ ತೆಪ್ಪಗೆ ಕೂರದೇ ಏನೇನೋ ಅವಾಂತರಗಳನ್ನ ಯೋಚಿಸುತ್ತಿದ್ದೆ........ ಈ ಗಾಳಿ ಸುನಾಮಿಯ ಸೂಚನೆಯೇ... ಸುನಾಮಿಯಾದರೇ ಏನು ಗತಿ... ನಾನು ಈ ಗಾಳಿಗೆ ಭಯ ಬಿದ್ದೆ ಇನ್ನು ಜಪಾನಿನ ಜನ ಎಷ್ಟರ ಮಟ್ಟಿಗೆ ಭಯ ಬಿದ್ದಿರಬೇಡ ಎಂದುಕೊಳ್ಳುತ್ತ ಸುತ್ತ ಮುತ್ತ ಕಣ್ಣಾಡಿಸಿದರೆ ಎಷ್ಟೋ ಮರಳು ಸೊಂಟ ಮುರಿದುಕೊಂಡಿದ್ದವು ಇನ್ನು ಕೆಲವು ತರಗೆಲೆಗಳಂತೆ ಹಾರಿಹೋಗಿದ್ದವು.... ಬಿರುಗಾಳಿಯ ರಭಸಕ್ಕೆ ಕಬ್ಬಿಣದ ಸಲಾಕೆಗಳೂ ಸಹ ಮುರಿದು ಬಿದಿದ್ದವು....ಏನೋ ಭಯದ ಅನುಭವ, ಗಾಳಿಗೆ ಕಾರುಗಳೆಲ್ಲಿ ತೂರಿಹೋಗುತ್ತೋ ಎನ್ನುವಂತೆ ಭಾಸವಾಯಿತು. ಇಷ್ಟು ದಿನ ನಾನು ಕುವೈತಿನ ಬಿರುಗಾಳಿಯನ್ನು ನೋಡಿದ್ದೆ ಆದರೆ ಇಷ್ಟು ರಭಸದ ಗಾಳಿಯನ್ನು ಅನುಭವಿಸಿರಲಿಲ್ಲ.....

ನಾವು ಹೆದ್ದಾರಿಯಲ್ಲಿ ಸಾಗುವಾಗ ಅಕ್ಕಪಕ್ಕ ಅಷ್ಟು ಸ್ಪಷ್ಟವಾಗಿ ಕಾಣುತ್ತಲಿರಲಿಲ್ಲ ಅಲ್ಲೇ ಇದ್ದ ಬಸ್ ನಿಲ್ದಾಣದಲ್ಲಿ ೪,೫ ಜನ ಬಸ್ಸಿಗಾಗಿ ಕಾಯುತ್ತಲಿದ್ದರು ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಗೂಡರಿಸಿಕೊಂಡು ನಿಂತಿದ್ದ ಕಂಡು ಬೇಸರವಾಯಿತು ಇನ್ನು ಆ ಬಸ್ ಬರುವವರೆಗೂ ಇವರೆಲ್ಲಾ ಮಣ್ಣಿನ ಮನುಷ್ಯರಾಗುವುದೂ ಖಂಡಿತಾ ಎಂದುಕೊಂಡೆ... ಬೃಹತ್ ಬಂಗಲೆಗಳನ್ನು ಸಹ ಮರಳು ಆವರಿಸಿಬಿಟ್ಟಿತ್ತು.... ಪ್ರಕೃತಿ ಮಾತೆಗೆ ಇಲ್ಲಿ ಬಡವ ಬಲ್ಲಿದ ಎಂಬ ಯಾವ ಅಂತರವೂ ಇಲ್ಲ ನೋಡಿ ಎಲ್ಲವನ್ನೂ, ಎಲ್ಲರನ್ನೂ ಸಮನಾಗಿಸಿ ಧೊಳೆಬ್ಬಿಸಿಬಿಟ್ಟಿದ್ದಳು........ಒಂದೆಡೆ ಬೆಂಕಿಯ ಜ್ವಾಲೆಯೂ ಹಬ್ಬಿರುವ ತರಹವೂ ಭಾಸವಾಗುತ್ತಿತ್ತು. ವಾಯುದೇವ, ಜ್ವಾಲಾಮುಖಿ, ಎಲ್ಲರೂ ಪ್ರಕೃತಿ ಮಾತೆಗೆ ಜೊತೆಯಾಗಿದ್ದರೆಂದೆನಿಸಿತು.


ನಿಧಾನವಾಗಿ ಮನೆ ಹತ್ತಿರ ಬರುತ್ತಿದ್ದಂತೆ ಮನೆ ಮುಂದೆ ರಾಶಿ ರಾಶಿ ಕಸದ ತೊಟ್ಟಿಯಂತಿದದ್ದನ್ನು ಕಂಡು ಸರಿ ಬಿಡು ನೆನ್ನೆಯಷ್ಟೆ ಮನೆಯಲ್ಲಿದ್ದ ಧೂಳನ್ನೆಲ್ಲಾ ಕೊಡವಿ ಸ್ವಚ್ಚಗೊಳಿಸಿದ್ದೆ ಇನ್ನು ಇವತ್ತು ಅದೇ ಕೆಲಸ ಮಾಡಬೇಕೆಂದುಕೊಂಡು ಒಳಗೆ ಕಾಲಿಟ್ಟರೆ ಬರಿ ಮಣ್ಣು ಮನೆಯನ್ನೇ ಆವರಿಸಿತ್ತು ಹೇಗೆ ಅಂತೀರಾ ಕಪ್ಪು ಬಣ್ಣದ ಸೋಫಾ ಕಂದು ಬಣ್ಣಕ್ಕೆ ತಿರುಗಿತ್ತು... ಟಿವಿ, ಪಾತ್ರೆ,ಪಡಗ ಎಲ್ಲವೂ ಮಣ್ಣಿನತ್ತಿದ್ದವು.... ಆದರೆ ಮಗರಾಯ ಮಾತ್ರ ಯಾವ ಗಾಳಿ ಗಂಧದ ಅರಿವಿಲ್ಲದೇ ಟಿವಿಯಲ್ಲಿ ಮಗ್ನನಾಗಿದ್ದ ಇದೂ ಒಂತಾರ ಒಳ್ಳೆಯದೆ ಗಾಳಿಯ ಆರ್ಭಟಕ್ಕೆ ಹೆದರದೆ ಚಿಂತೆ ಇಲ್ಲದವಳು ಸಂತೆಯಲ್ಲಿ ನಿದ್ರೆ ಮಾಡಿದಂತೆ ಆರಾಮಾಗಿದ್ದ.


ಕೆಂಪಾದವೋ ಎಲ್ಲಾ ಕೆಂಪಾದವೋ... ಎಂಬ ಹಾಡಿನಂತೆ .......... ಕಪ್ಪಿದ್ದ ಗಂಡನೂ ಕೆಂಪಾದನೋ ಕೆಂಪಾದನೋ... ಹಹ್ಹಾ - ನನ್ನವರು ಧೂಳ್ ಮಯವಾದದ್ದು ಹೀಗೆ


ವಾಯುದೇವನಿಗೆ ಯಾರೊಡನೆ ಮುನಿಸಿತ್ತೋ ಗೊತ್ತಿಲ್ಲ ನಮ್ಮ ಮೇಲೆ ತೀರಿಸಿಕೊಂಡ. ಅಂತೂ ಈ ಧೂಳಿಗೆ ನಾವು ಧೂಳಿಪಟದಂತೆ ತೂರಾಡಿದ್ದಂತೂ ಸತ್ಯ...... ಒಂದು ಹೊಸ ಅನುಭವ ಇಷ್ಟವಾಯ್ತು.... ಕಷ್ಟದ ಅರಿವಾಯ್ತು.... ಒಮ್ಮೆ ಕಷ್ಟದ ಮೇಲೂ ಒಲವಾಯ್ತು. ತೂರಾಡುತ್ತಿದ್ದ ನನಗೆ ಗಂಡನ ಕೈ ಆಸರೆಯಾಯ್ತು. ಎಲ್ಲಾ ಅನುಭವ ಒಮ್ಮೆಲೆ ಮನಸು ಅನುಭವಿಸಿತು.