Tuesday, August 17, 2010

ಮೀನಿನ ಮೇಸ್ಟ್ರು ಮತ್ತು ಕಣ್ಣಿನ ಡಾಕ್ಟರ್


ನಮಗೆ ತೀರಾ ಆತ್ಮೀಯರೆನಿಸಿಕೊಂಡಂತಹ ಇಬ್ಬರೂ ಬಹಳ ವಿಶೇಷ ವ್ಯಕ್ತಿಗಳು, ತಮ್ಮ ವೃತ್ತಿಯಲ್ಲಿ ಅತಿ ಪ್ರಬುದ್ಧತೆಯನ್ನು ಸಾಧಿಸಿರುವಂತಹವರು.

ಮೊದಲು ಅವರೂರಿನಲ್ಲೇ ಇರುವ ಕೆರೆ, ಕುಂಟೆಗಳಲ್ಲಿ ಬೆಸ್ತರಂತೆ ಮೀನನ್ನು ಹಿಡಿದು ಅದರ ಬಗ್ಗೆ ಹೆಚ್ಚು ಹಳ್ಳಿ ಜನರಿಗೆ ತಿಳಿಸುತ್ತಿದ್ದರೇನೋ.... ನಂತರ ಹಳ್ಳಿಯಿಂದ ಪೇಟೆಗೆ ಬಂದು ಮೀನಿನ ಮಾರ್ಕೆಟ್ ಗೆ ಬಂದಂತಹ ಮೀನುಗಳ ಬಗ್ಗೆ ಬಾರಿ ಅಭ್ಯಾಸ ಮಾಡಿ ಮಾಡಿ..... ನಂತರ ಕಡಲ ತೀರಕ್ಕೆ ಹೋಗಿ ಅಲ್ಲೂ ಕಡಲ ದಡದಲ್ಲಿ ಕೂತು ಮೀನಿಗಾಗಿ ಗಾಳ ಹಾಕಿ ಅಲ್ಲೂ ಯಶಸ್ವಿಯಾಗಿ ಎಲ್ಲರಿಗೂ ಪಾಠ ಪ್ರವಚನ ಮಾಡಿರಬೇಕು....... ಆನಂತರ ಊರು, ಕೇರಿ ಬಿಟ್ಟು ದೂರದಲ್ಲಿರೋ ಕಡಲ ಅಲೆಗಳು ರಾತ್ರೋರಾತ್ರಿ ನಿಶಬ್ಧ ನಿದ್ರೆಯಲ್ಲೂ ಕೇಳುವಂತಿರಬೇಕೆಂದು ಅರಬೀ ಸಮುದ್ರದ ದಡದಲ್ಲೇ ಇರೋ ಮೀನಿನ ಸಂಸಾರಕ್ಕೆ ಸೇರಿ ಬಿಟ್ಟಿರುವ ಮೀನಿನ ಮೇಸ್ಟ್ರು..... ಮೊದ ಮೊದಲು ಕೊಡದಲ್ಲಿದ್ದ ಮೀನಿನಂತೆ ಸಾಹಿತ್ಯ ಕೃಷಿಯನ್ನು ಅಕ್ಕಪಕ್ಕ ಇದ್ದ ಮೀನುಗಳಿಗೆ ನೀಡುತ್ತಲಿದ್ದರು ಈಗ ನೋಡಿ ಕಡಲ ಅಬ್ಬರಕ್ಕೆ ಜಿಗಿದಿದ್ದಾರೆ. ಯಾವ ಅಲೆಗಳ ಅಡೆತಡೆಯೂ ಇಲ್ಲದೆ ಸಾಹಿತ್ಯದ ಹೊನಲನ್ನು ನಮ್ಮಂತಹ ಸಹಸ್ರಾರು ಜನರಿಗೆ ನೀಡಲು ಸಜ್ಜಾಗಿರುವ..... ಮಾತಿನ ಜಾದು........ ಮೀನಿನ ಮೇಸ್ಟ್ರು, ನೀರು ವಿಜ್ಞಾನಿಗಳಾದಂತ ಇವರು ಡಾ. ಅಜಾದ್, ಅವರಿಗೆ ನಮ್ಮ ಅಭಿನಂದನೆಗಳು.......

ಅಂತೆಯೇ ನಮ್ಮ ಕಣ್ಣಿನ ಡಾಕ್ಟರ್ ....... ಡಾಕ್ಟರ್ ಎಂದರೆ ಯಾರು ಎಂದುಕೊಂಡಿರಿ ಸ್ಟೆತಸ್ಕೋಪ್ ಹಿಡಿದರೆನೇ ಡಾಕ್ಟರಾ...? ಇಲ್ಲ ಇವರೂ ಒಂತರ ಡಾಕ್ಟರೇ ಸರಿ ಒಂದೇ ಕಣ್ಣಿನಲ್ಲಿ ಮತ್ತೊಂದು ಕಣ್ಣಿಟ್ಟು ಸೃಷ್ಟಿಯ ಸೌಂದರ್ಯವನ್ನು ನಮಗೆಲ್ಲರಿಗೂ ವಿಧವಿಧವಾಗಿ ಬಣ್ಣ ಬಣ್ಣದ ಚಿತ್ರಗಳ ಮೂಲಕ ನೀಡುತ್ತ ನಮ್ಮನೆಲ್ಲಾ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿರುವ.... ಹಾಗೂ ದಿನಬೆಳಗಾದರೆ ಬೆಂಗಳೂರಿಗರಿಗೆ ದೇಶ ವಿದೇಶದ ಸುದ್ದಿ ಸಾರಾಂಶವನ್ನು ನೀಡುತ್ತಲಿರುವ..... ವೆಂಡರ್ ಕಣ್ಣಿನ ಶ್ರೀ ಶಿವು ಅವರಿಗೂ ನಮ್ಮ ಅಭಿನಂದನೆಗಳು.

ಎಲ್ಲಾ ಬ್ಲಾಗಿಗರ ಪರವಾಗಿ ...... ತಮ್ಮ ಸಾಹಿತ್ಯದ ಕೂಸುಗಳನ್ನು ಹೊರ ಜಗತ್ತಿಗೆ ನೀಡುತ್ತಲಿರುವ ಮೀನಿನ ಮೇಸ್ಟ್ರಿಗೆ ಹಾಗೂ ಕಣ್ಣಿನ ಡಾಕ್ಟರ್ ಗೆ ಹೃದಯಪೂರ್ವಕ ಅಭಿನಂದನೆಗಳು.

ಯಾರು ಯಾರು ಬರುವವರು:?
೧. ಬಾಲ್ಕನಿ ಸೀಟ್ ಬೇಕಿದ್ದವರು ಪಕ್ಕು ಮಾಮ, ದಾದ, ಬ್ಯಾಚುಲರ್ಸ್ ಗೆ ಹೆಣ್ಣು ಹುಡುಕುವ ಹಿರಿಯಣ್ಣ, ಮರಳು ಮತ್ತು ಸಿಮೆಂಟ್ ಮಧ್ಯದಲ್ಲೇ ಸೆಂಟಿಮೆಂಟ್ ತೋರಿಸುವ ಶ್ರೀ ಪ್ರಕಾಶ್ ಹೆಗಡೆಯವರಿಗೆ ಹೇಳಿ ಟವಲ್ ಹಾಕಿಸಬಹುದು....
೨. ಇನ್ನು ಗಾಂಧಿ ಕ್ಲಾಸ್ ನಲ್ಲಿ ಕೂರಲು ಬಯಸುವವರು ನನ್ನ ಪ್ರೀತಿಯ ತಮ್ಮ, ಅಮಾಯಕ, ಶಿಪ್ರ, ಮದುಮಗ ಶಿವಪ್ರಕಾಶ್ ಗೆ ಹೇಳಿ ಟವಲ್ ಹಾಕಿಸಬಹುದು......

ಸೂಚನೆ: ಒಬ್ಬೊಬ್ಬರಿಗೂ ಒಂದೊಂದು ಬಣ್ಣದ ಟವೆಲ್ ಇರುತ್ತೆ ...... ಯಾರು ಹೆದರಬೇಕಿಲ್ಲ ಮೊದಲೇ ನಿಮ್ಮ ಬಣ್ಣದ ಟವೆಲ್ ಹೇಳಿರುತ್ತಾರೆ.....

ಸ್ಥಳ : ಕನ್ನಡ ಭವನ
ದಿನಾಂಕ: ೨೨ ಆಗಸ್ಟ್ ೨೦೧೦
ಪ್ರಾರಂಭ: ಬೆಳ್ಳಿಗ್ಗೆ ೧೦ಕ್ಕೆ
ಮುಕ್ತಾಯ: ಮುಗಿಯುವುದು ನಮ್ಗೆ ಗೊತ್ತಿಲ್ಲ......
ಪುಸ್ತಕಗಳ ಹೆಸರು : ಜಲನಯನ ಮತ್ತು ಗುಬ್ಬಿ ಎಂಜಲು


Sunday, August 15, 2010

ಸ್ವತಂತ್ರ - ಅತಂತ್ರ


ಆಂಗ್ಲರ ಕಣ್ಣಿಗೆ ಗುರಿಯಾಗಿದ್ದ ಭರತ ಭೂಮಿಯಲಿ
ಸ್ವತಂತ್ರವೇ ಇಲ್ಲದೆ ಕೂಲಿಯಾಳುಗಳಾಗಿದ್ದರು
ತಮ್ಮ ತನವನ್ನೇ ಮರೆತು ಬಾಳು ಸಾಗಿಸುತ್ತಿದ್ದರು
ಅಂದು ಸ್ವತಂತ್ರ ಬರುವ ಮೊದಲು...........

ಸ್ವತಂತ್ರ ಪಡೆಯುವ ದಿಟ್ಟ ಹೆಜ್ಜೆಯಲ್ಲಿ
ಎಷ್ಟೋ ಹಳ್ಳಿಗಳು ಗುಡಿಸಿ ಗುಂಡಾಂತರ
ಜೊತೆಗೆ ಹೆಣ್ಣು ಮಕ್ಕಳಿಗೆ ಹಲವು ಅವಾಂತರ
ಗಂಡು ದಿಕ್ಕಿಲ್ಲದಂತೆ ಬರಡು ಜೀವನ ಮಾಡಿಬಿಟ್ಟಿದ್ದರಂದು.........

ಸ್ವತಂತ್ರ ಪೂರ್ವಾದಿನಗಳು ಕರಿ ನೆರಳಿನಂತೆ
ಸಾಗಿಸಿದ ಅದೆಷ್ಟೋ ಜನಸ್ಥೋಮ
ಒಲವಿನ ಹಸೆಮಣೆಯನ್ನೇ ಮರೆತು
ಸೇಡಿನ ಧಗೆಯಲಿ ಮಿಂದಿದ್ದರು ಅಂದು.....

ಹೆಣ್ಣು ಗಂಡು ಭೇದವಿಲ್ಲದಂತೆ ಹೀನಾಯ ಸ್ಥಿತಿಗೆ ತಳ್ಳಿ
ಆಂಗ್ಲ ದೊರೆಗಳು ರಾಜಠೀವಿಯಲ್ಲಿ ಮೆರೆದರು
ದುಃಖಕೆ ಸ್ಪಂದಿಸದೆ ಕಾಲ್ತುಳಿತಕೆ ಬಿದ್ದ
ಹತಾಷಾ ಜನರ ನೋವು ನರಗಟ್ಟಿದ್ದವಂದು........

ಸ್ವತಂತ್ರದ ಮುನ್ನಾದಿನಗಳ ನೋವಿನ ಕಹಳೆಗೆ
ಜಲಿಯನ್ ವಾಲಾ ಬಾಗ್ ನ ಮಾರಣಹೋಮವೇ
ಸಾಕು ನರಕಯಾತನೆ ಅನುಭವಿಸಿದ ಅಂದಿನ
ಅಮಾಯಕ ಜನರಿಗೆ ನೀಡಿದ ಆಂಗ್ಲರ ಕೊಡುಗೆ.........

ಹೋರಾಟ, ಬಡಿದಾಟ, ಕಾದಾಟ ಯಾವುದಕ್ಕೂ
ಬಗ್ಗದ ಆಂಗ್ಲರಿಗೆ ಕೊನೆಗೊಂದು ಹುಟ್ಟಿತೊಂದು ತಂತ್ರ
ಅದುವೇ ಶಾಂತಿಯುತ ಅಹಿಂಸಾ ಮಾರ್ಗದ ಮಂತ್ರ
ಮಂತ್ರ-ತಂತ್ರದಲೇಗೋ ಮೊಳಗಿತು ಸ್ವತಂತ್ರದ ಕಹಳೆ ...........

ಸ್ವತಂತ್ರ ಬಂದರೇನು ಪ್ರಜಾಪ್ರಭುತ್ವ ಇದ್ದರೇನು
ರಾಜಕೀಯದ ಹೆಸರಲಿ ಆಂಗ್ಲರಿಗಿಂತ ಕೀಳಾಗಿ
ಬಾಳುತಿಹರು ನಾವೇ ಆಯ್ಕೆ ಮಾಡಿದ
ದೇಶ, ರಾಜ್ಯ ಕಾಯುವ ಬದಲು...ನುಂಗೋ ಭಟರು........

ರಾಜಕೀಯದ ದಬ್ಬಾಳಿಕೆಯಲಿ ಬಿದ್ದೇಳುತಿರುವ
ಖಾದಿ ಬಟ್ಟೆಯ ಭ್ರಷ್ಟ ರಾಜಕಾರಣಿಗಳಿಗೆ
ಅಹಿಂಸಾ ಮಾರ್ಗ ಬಿಟ್ಟು ಬೇರಾವ ಮಾರ್ಗ
ಹುಡುಕಿ ತಳಿಸಬೇಕಿದೆಯೋ ತಿಳಿಯದು.........

ಎಂದು ಈ ಭ್ರಷ್ಟತೆ ಹೋಗಿ ನಿಷ್ಟತೆ ಬರುವುದೋ
ಮತ್ತೊಮ್ಮೆ ಗಾಂಧಿಯಂತ ಮಹಾನುಭಾವಿಗಳು
ಹುಟ್ಟಿ ಬರಬೇಕಿದೆ, ಸ್ವತಂತ್ರದ ಹೆಸರಲಿ
ಅತಂತ್ರವನ್ನು ಹೊರದೋಡಿಸ ಬೇಕಿದೆ.......



ಭಾರತ ಭೂಮಿಗೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕದಿದ್ದರೆ ಚೆನ್ನಾಗಿರುತ್ತಿತ್ತು ಮತ್ತು ಬ್ರಿಟೀಷರ ಆಳ್ವಿಕೆಯಲ್ಲಿಯೇ ನಾವೆಲ್ಲರೂ ಇರಬೇಕಿತ್ತು......?

ಬ್ರಿಟೀಷರ ಆಳ್ವಿಕೆಯಲ್ಲಿದ್ದಿದ್ದರೆ ನಮಗೆ ಹೊರದೇಶದಾದ್ಯಂತ ಒಳ್ಳೆಯ ಮರ್ಯಾದೆ ಇರುತ್ತಿತ್ತು. ನಮ್ಮಗಳಿಗೆಲ್ಲಾ ಬ್ರಿಟೀಷ್ ಪಾಸ್ ಪೋರ್ಟ್ ಸಿಗುತ್ತಿತ್ತು. ಅನುಕೂಲಗಳು ಹೆಚ್ಚಿನವಾಗುತ್ತಿತ್ತು, ಈಗ ನಮ್ಮ ದೇಶದಲ್ಲಿ ಮೋಸ, ವಂಚನೆ,ಧಗ, ಕಳ್ಳತನ, ಕೊಲೆ, ಅತ್ಯಾಚಾರ ಎಲ್ಲವೂ ಮಿತಿಮೀರಿದೆ......... ರಾಜಕೀಯದವರು ಅತಿಯಾಗಿ ವರ್ತಿಸುತ್ತಾರೆ - ಎಂಬುದು ನಮ್ಮ ಸಹದ್ಯೋಗಿಯೊಬ್ಬರ ವಾದ.....

ನಮಗೆ ನಮ್ಮತನ ಎನ್ನುವುದು ಸ್ವತಂತ್ರ ಬಂದಿದ್ದರಿಂದಲೇ ಸಾಧ್ಯ.... ನಮ್ಮನ್ನು ನಾವು ಗುರುತಿಸಿಕೊಳ್ಳಲು ಸ್ವತಂತ್ರವೇ ಸರಿಯಾದ ದಾರಿ...... ಅವರ ಆಳ್ವಿಕೆಯಲಿದ್ದರೆ ನಾವುಗಳು ಕೆಲಸ ಮಾಡಿ ಬ್ರಿಟೀಷರು ಹೆಸರು ತೆಗೆದುಕೊಳ್ಳುತ್ತಲಿದ್ದರು. ಅವರ ಪಾಸ್ ಪೋರ್ಟ್ ನಿಂದ ನಮಗ್ಯಾವುದೇ ಅನುಕೂಲವಾದರೂ ನಮ್ಮ ಸ್ವಂತಿಕೆ ಇರುವುದಿಲ್ಲ. ಎಲ್ಲಾ ದೇಶದಲ್ಲಿ ಮೋಸ ವಂಚನೆ, ಕೊಲೆ ದರೋಡೆ ಇದ್ದೇ ಇರುತ್ತೆ ದೂರದಲ್ಲಿರುವವರಿಗೆ ಕಾಣುವುದಿಲ್ಲ ನಮ್ಮ ದೇಶದ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುತ್ತೇವೆ ಆದ್ದರಿಂದ ನಮ್ಮ ದೇಶದಲ್ಲೇ ಹೆಚ್ಚು ತಪ್ಪು ನೆಡೆಯೋದು ಎಂದು ತಪ್ಪು ಭಾವಿಸುತ್ತೇವೆ - ಎಂಬುದು ನನ್ನ ವಾದ

ನೀವು ಸಹ ನಿಮ್ಮ ನಿಮ್ಮ ವಾದಗಳನ್ನು ಮಂಡಿಸಿ.... ನಿಮಗೇನನ್ನಿಸುತ್ತೋ ಅದನ್ನು ತಿಳಿಸಿ.....

Thursday, August 5, 2010

ಹೀಗೆಲ್ಲಾ ಆಗುತ್ತಾ.....

ಆಫೀಸಿಗೆ ಬೆಳ್ಳಿಗ್ಗೆ ಬೆಳ್ಳಿಗ್ಗೆ ಎದ್ದು ರೆಡಿಯಾಗಿ ಹೋಗೋದು ಇದೆಯಲ್ಲಾ.... ಒಂದು ತರಾ ಬೇಜಾರು....... ಏನು ಮಾಡೋದು ಹೊಟ್ಟೆಪಾಡು... ಹೋಗ್ಲೇಬೇಕು.......

ಯಾವಾಗಲೂ ಬೆಳ್ಳಿಗ್ಗೆ ೬.೪೦ ಅಷ್ಟರಲ್ಲಿ ನನ್ನವರು ರೆಡಿಯಾಗಿ ನಿಲ್ಲಿಸಿದ್ದ ಕಾರನ್ನು ಸ್ವಲ್ಪ ಹೊತ್ತು ಸ್ಟಾರ್ಟ್ ಮಾಡಿ ಆನಂತರ ಮನೆ ಮುಂದಕ್ಕೆ ತಂದು ನನಗಾಗಿ ಕಾಯೋ ವಾಡಿಕೆ... ಏನು ಮಾಡೋದು ನಾವು ಹೆಂಗಳೆಯರು ಸ್ವಲ್ಪ ಹಾಗೆ ಕನ್ನಡಿ ಎಂಬ ಭೈರವನ ಜೊತೆ ಒಡನಾಟ ಜಾಸ್ತಿ..... ಅಂದು ಹೊರಗಡೆ ನನಗಾಗಿ ಕಾರ್ ನಿಲ್ಲಿಸಿ ಕಾಯುತ್ತಿದ್ದ ನನ್ನವರು ಬೈಯ್ದಾರು ಎಷ್ಟೊತ್ತು ಶೃಂಗಾರ ಮಾಡಿಕೊಂಡು ಬೇಗ ಬರೋದಿಕ್ಕೆ ಆಗೋಲ್ಲವಾ..... ಎಂದರೆ..!!? ಎಂದು ಲಘುಬಗೆಯಿಂದ ಮನೆಗೆ ಬೀಗ ಜಡಿದು ಓಡುತ್ತಿದ್ದೆ..... ಅಷ್ಟರಲ್ಲಿ ನನ್ನ ಮುಂದೆ ಒಬ್ಬಾಕೆ ಹೋಗ್ತಾ ಇದ್ದಳು ನಾನು ಅವಳನ್ನೂ ಹಿಂದಿಕ್ಕಿ ಬರಬರನೇ ಹೋದವಳೇ ಎದುರೇ ಇದ್ದ ಕೆಂಬಣ್ಣದ ಕಾರನ್ನು ಹತ್ತಲು ಹತ್ತಿರವಾಗುತ್ತಿದ್ದಂತೆ ನನಗೆ ಕಾರಿನಲ್ಲಿರೋರು ಯಾರು ಅಂತ ಅನ್ನಿಸ್ತಾ ಇತ್ತು......... ಅಯ್ಯೋ ಇದೇನು ನನ್ನವರು ಗಡ್ಡ ಬಿಟ್ಟಿಲ್ಲ... ಶೇವ್ ಮಾಡ್ತಾರಲ್ಲಾ ಯಾವಾಗಲೂ, ಇಂದು ಅವರ ಮುಖ ನೋಡಿದ್ನಾ ಇಲ್ವಾ........ ಮಬ್ಬು ಮಬ್ಬಾಗಿ ಕಾರಿನೊಳಗಿರುವ ವ್ಯಕ್ತಿ ಕಾಣ್ತಾ ಇದ್ರು....... ಕನ್ನಡಕ ಬೇರೆ ಹಾಕಿರ್ಲಿಲ್ಲ..... ಏನೋ ಬಿಡು ಎಂದು ಮತ್ತೂ ಹತ್ತಿರ ಹೋಗ್ತಾ ಇದ್ದ ಹಾಗೆ ಕಾರ್ ಒಳಗಿಂದ ಕೈ ಅಲುಗಾಡಿದ ರೀತಿ ಕಾಣುಸ್ತಾ ಇತ್ತು ............ ಭಿಕ್ಷೆಗೆ ಬಂದವರನ್ನ ಮುಂದಕ್ಕೆ ಹೋಗು ಅಂತಾರಲ್ಲ ಹಾಗೆ ಸನ್ನೇ ಮಾಡುತ್ತಿರುವ ಹಾಗೆ ಕಾಣಿಸಿತು ಆದರು........ ನಾನು ಕಾರಿನ ಫ್ರೆಂಟ್ ಸೀಟ್ ಬಾಗಿಲು ತೆಗೆದೆ ಆಗಲೇ ಗೊತ್ತಾಗಿದ್ದು ನೋಡೀ..........

ಅಬ್ಬಾ..!!!! ಇದು ನನ್ನವರಲ್ಲ ನಮ್ಮ ಕಾರಲ್ಲಾ ನಾನು ಯಾವುದೋ ಕಾರಿಗೆ ......... ಹತ್ತಿಕೊಳ್ಳಲು ಬಂದುಬಿಟ್ಟಿದ್ದೀನಿ ಎಂದು. ಆಮೇಲೆ ಮುಂದೆ ನೋಡಿದ್ರೆ ಅಲ್ಲೇ ಇದೆ ನಮ್ಮ ಕಾರ್ ........ (ಆತ ಕೈ ಸನ್ನೆ ಮಾಡಿದ್ದು ಮುಂದಿರುವ ಕಾರ್ ನಿಮ್ಮದು ಎಂದು ಆಗ ಅರ್ಥವಾಯ್ತು) ನನ್ಗೆ ನಾಚಿಕೆಯಾಗಿ ಸಾರಿ ಕೇಳಿದೆ.......... ಕಾರಿನಲ್ಲಿ ಕುಳಿತಿರುವವ ಏನೋ ಸುಮ್ಮನಾದ ನಾನು ಒಬ್ಬಾಕೆನ ಹಿಂದಿಕ್ಕಿ ಬಂದಿದ್ದೆನಲ್ಲಾ .....!!! ಆಕೆ ಗುರ್ ಎಂದಾಳು ಎಂದು ಹಿಂತಿರುಗಿ ಅವಳಿಗೂ ಸಾರಿ ಹೇಳಿದೆ..........ಆಕೆ ಏನೂ ಮಾತನಾಡಿದ್ದು ಕೇಳಿಸಲಿಲ್ಲ, ಜೊತೆಗೆ ಅವರ ಮುಖಭಾವವೂ ತಿಳಿಯಲಿಲ್ಲ ಕಾರಣ ಅವರ ಕಣ್ಣು ಮಾತ್ರ ಕಾಣುವಂತಿದ್ದ ಉಡುಪು.....ಆದ್ರೂ ಅವರ ಕಣ್ಣಿನಲ್ಲೇ ಗೊತ್ತಾಯ್ತು ಪರವಾಗಿಲ್ಲ ಎಂದಿದ್ದು..........

ಅಯ್ಯೋ....... ಅವರಿರ್ಲಿ ಇಲ್ಲಿ ನನ್ನವರು ಕಾರಿನಲ್ಲೇ ಕೂತು..... ಹಿಂಬದಿ ಬರುವ ಕಾರುಗಳ ಕಾರುಬಾರು ನೋಡುವ ಕನ್ನಡಿಯಲ್ಲೇ ನನ್ನನ್ನು ನೋಡ್ತಾ ಇದ್ದಾರೆ..... ಹುಸಿ ಹುಸಿ ನಗುವಿನಲ್ಲಿ ನಿನ್ಗೆ ಅಷ್ಟು ಗೊತ್ತಾಗೋಲ್ವ ನಮ್ಮ ಕಾರು ಯಾವ್ದು ಅಂತಾ...!!!!

ಅಯ್ಯೋ ಇಲ್ಲಪ್ಪ ನಾನು ಆತುರವಾಗಿ ಬರ್ತಾ ಇದ್ದೇ ಅಲ್ಲದೇ ಆ ಕಾರು LANCER.... ಒಂದೇ ಬಣ್ಣ.... ಕನ್ನಡಕ ಬೇರೆ ಹಾಕಿರ್ಲಿಲ್ಲ... ಮಬ್ಬು ಮಬ್ಬು ಒಳಗಿರೋರು ನೀವಲ್ಲ ಅಂತಾ ತಿಳಿಲಿಲ್ಲ....

ಕನ್ನಡಕ ಹಾಕ್ಕೊಳ್ಳೊದು ಅಲ್ವಾ....?

ಅಯ್ಯೋ ಕನ್ನಡಕ ಮತ್ತೆ ವಾಚ್ ಇವೆಲ್ಲಾ ಹಾಕಿಕೊಳ್ಳೋಸ್ಟರಲ್ಲಿ ಟೈಮ್ ಆಗುತ್ತೆ ಅದರ ಬದಲು ಕಾರಿನಲ್ಲಿ ಕುಳಿತಾಗ ಸಮಯ ಇರುತ್ತೇ ಅಂತಾ ದಿನಾ ಹಾಗೆ ತರ್ತೀನಲ್ಲ ಇವತ್ತು ಹಾಗೇ ಬಂದೆ...... ನೀವು ನಿಲ್ಲಿಸೋ ಜಾಗದಲ್ಲಿ ಆ ಕಾರು ತಂದು ಅದು ಅಲ್ಲದೆ ಒಂದೇ ತರಹದ ಕಾರು ನಿಲ್ಲಿಸಿದ್ರೆ ಹಿಂಗೆ ಆಗುತ್ತೆ....... ಏನು ಮಾಡೋದು...... ಆ ಗಂಡ ಹೆಂಡತಿ ಏನು ತಿಳಿದಿದ್ದ್ರೆ ಸಾಕು.... ಎಂದು........ ನಾ ಏನೇ ಬಡಬಡಾಯಿಸಿದರೂ ನನ್ನವರಿಗೆ ನಗುನೋ ನಗು....

ಇಷ್ಟೆಲ್ಲಾ ಮಾತಾಡುವಷ್ಟರಲ್ಲಿ ಆ ಕಾರ್ ನಮ್ಮ ಮುಂದೆ ಹಾರಿ ಹೋಯ್ತು ಅಷ್ಟರಲ್ಲಾಗಲೇ ಕನ್ನಡಕ ಕಣ್ಣಿಗೆ ಬಂದಿತ್ತು ಅಗೋ ನೋಡಿ ಆ ಕಾರಿನ ನಂಬರ್ ಕೂಡ ಹೆಚ್ಚು ಕಮ್ಮಿ ನಮ್ಮ ಕಾರಿನ ನಂಬರ್ ತರವೇ ಇದೇ......... ಏನು ಕರ್ಮನೋ ಬೆಳಿಗ್ಗೆ ಬೆಳಿಗ್ಗೆ ....... ನನ್ಗೆ ನಾಚಿಕೆಯಾಗೋ ಹಾಗೆ ಈ ಕೆಲಸ ಮಾಡಿದ್ದೆ ... ಅಂದು !!!...........

ಇದೆಲ್ಲಾ ಅವಾಂತರವಾದಾಗಿನಿಂದ ದಿನ ಕಾರ್ ನಂಬರ್ ಪ್ಲೇಟ್ ನೋಡಿ.... ಕಾರಿನೊಳಗೆ ಇರುವವರು ನನ್ನವರೇ ಎಂದು ಖಾತ್ರಿ ಮಾಡಿಕೊಳ್ಳುತ್ತೇನೆ ... ಅದು ಏನಾದರು ತಡವಾಗಿ ಆಚೆ ಹೋದರೆ....... ಸಾಮಾನ್ಯವಾಗಿ ನನ್ನವರ ಜೊತೆಯಲ್ಲೇ ಹೆಜ್ಜೆ ಹಾಕೋಕ್ಕೆ ಪ್ರಾರಂಭಿಸಿದ್ದೀನಿ ಯಾಕೆ ಗೊತ್ತಾ...!!! ಪಕ್ಕದಲ್ಲೇ ಇದ್ದರೆ ಅವರು ಯಾವ ಕಾರಿನಲ್ಲಿ ಕೂರುತಾರೋ ನಾನೂ ಅದೇ ಕಾರಿನಲ್ಲಿ ಕೂರುತ್ತೇನೆ...... ಇದೆ ಸರಿಯಾದ ಐಡಿಯಾ ಅಲ್ಲವೆ.....

ಈಗ ಆ ಕಾರಿನವರು ಎದುರು ಸಿಕ್ಕಾಗ ನಾನು ಅವರುಗಳ ಮುಖವೇ ನೋಡೋಲ್ಲ ........... ಗೊತ್ತಿಲ್ಲದವಳಂತೆ ಇದ್ದು ಬಿಡ್ತೀನಿ.... ಹೀಗೂ ಆಗುತ್ತೆ ಕೆಲವೊಮ್ಮೆ ಏನು ಮಾಡೋದು ಅಲ್ವಾ....???

ಈ ಲೇಖನ ಯಾಕೆ ಬರೆದೆ ಅಂತೀರಾ...!!! ಇವತ್ತು... ನಾನು ನನ್ನ ಕನ್ನಡಕವನ್ನ ಮರೆತು ಆಫೀಸಿಗೆ ಬಂದಿದ್ದೀನಿ (ನನ್ನವರಿಗೆ ಹೇಳ ಬೇಡಿ ಆಮೇಲೆ ಬೈತಾರೆ...!!!) ಹಹಹಹ ಇಂದು ಇಲ್ಲಿ ಆಫೀಸಿನಲ್ಲಿ ಏನು ಫಜೀತಿ ಆಗುತ್ತೋ ಗೊತ್ತಿಲ್ಲ ..... ಮಬ್ಬು ಮಬ್ಬಿನಲ್ಲೇ ಟೈಪಿಸಿದ್ದೇನೆ... ತಪ್ಪಿದ್ದರೆ ತಿದ್ದಿಕೊಳ್ಳಿ ಹಹಹಹ......

Monday, July 12, 2010

ಪದ

ಪದಗಳಿಗೆ ಶಕ್ತಿ ಇದೆ
ಅದು ಜೀವನ ಮತ್ತು ಸಾವಿನ
ಸಂಬಂಧ ಸೃಷ್ಟಿಸುವಲ್ಲಿ..........

ಪದಗಳಿಗೆ ಹೊಳಪಿದೆ
ಜೀವನದ ನೆಲೆ
ಕಾಣುವಲ್ಲಿ.....

ಪದ ಬಳಕೆಗೆ ಮಿತಿಯಿದೆ
ಅದು ಎರಡು ಜೀವಗಳ
ಅರ್ಥ ಮಾಡಿಕೊಳ್ಳುವಲ್ಲಿ........

ಪದಗಳಲಿ ಭಯವಿದೆ
ಪದ ಬಳಸುವ
ಏರುಪೇರಿನಲ್ಲಿ........

ಪದಗಳಲಿ ನಗುವಿದೆ
ನಗೆಯ ಪದ
ಬಳಸಿದಲ್ಲಿ......

ಪದಗಳಲಿ ದ್ವೇಷವಿದೆ
ಪದಗಳು
ಇರುಸುಮುರುಸಿನಲ್ಲಿ....

Sunday, June 20, 2010

ಬಿಸಿಗಾಳಿ


ಬಿಸಿಗಾಳಿ ಸುಡು ಬಿಸಿಲಿನ ಗಾಳಿ
ಬೇಸರಿಕೆಯ ಮನಸಿನಲಿ
ತೋಯ್ಯ್ದಿದೆ ಮೈ ಉರಿ ಬಿಸಿಲಿನಲಿ......


ಒಮ್ಮೆ ಓಡಾಡಿ ಬಂದರೆ ಸಾಕು
ದಿನವೆಲ್ಲ ಸುದಾರಿಸಿಕೊಳ್ಳ ಬೇಕು

ಈ ಮರುಭೂಮಿಯ ಬಿಸಿಲ ಧಗೆಗೆ.......


ಬಾನಾಡಿಯ ಆ ನೇಸರ
ಭುವಿಗೆ ಉಗುಳುತಿರುವನು

ಬಿಸಿ ಬಿಸಿಯ ಕೆಂಡದೋಕುಳಿ......


ಕಡಲ ಅಬ್ಬರವೇ ಇದ್ದರೂ
ಅವಳೂ ತಣ್ಣಗಾಗಿಸಲಿಲ್ಲ

ನೇಸರನ ಧಗ ಧಗಿಸೋ ಕೋಪವ.......


ಮರುಭೂಮಿಗೆ ಮರುಳಾಗಿ
ಕ್ರೂರ ನೋಟವನೇ ಬೀರಿ
ಬಿಸಿ ಗಾಳಿಯಾಗಿ ಬೀಸುತಿಹನು ನೋಡಿ........


ಬಿಸಿಗಾಳಿಯೇ ನಾ ಕಾಡಿ ಬೇಡುವೆ
ನಿನ್ನ ದೂಡಿ ಸಿಹಿಗಾಳಿ
ತಂಪೆರಗಿ ತಟ್ಟುವುದೆಂದು ಹೇ
ಳು.....

ಬಿಸಿಗಾಳಿಗೆ ನಲುಕುತಿರುವೆವು
ಈ ಬಿಸಿಲ ಮೂರ್ನಾಲ್ಕು ತಿಂಗಳು

ಕಳೆವುದು ಹೇಗೋ ಏನೋ ಕಾಣೆನು........

------------

ಮರುಭೂಮಿಯಲ್ಲಿ ನೇಸರನೇಕೋ ಬಲು ಮುನಿಸಿಕೊಂಡುಬಿಟ್ಟಿದ್ದಾನೆ. ಅದಕ್ಕೆ ಈ ಬಿಸಿಲ ಧಗೆ ಎಲ್ಲೆ ಮೀರಿ ಸಾಗುತಿದೆ. ಇಲ್ಲಿನ ಬಿಸಿಲು ೫೨-೫೩ ಡಿಗ್ರಿಗೂ ಮೀರಿಬಿಟ್ಟಿದ್ದೆ. ಬಿಸಿಲಿಗೆ ಮೈ ಒಡ್ಡಿ ಕೆಲಸ ಮಾಡುವವರ ಕಂಡರೆ ಮನ ಕಲಕುತ್ತದೆ.... ಆದಷ್ಟು ಈ ಬಿಸಿಲ ಬೇಗೆ ಕಳೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

Thursday, June 10, 2010

ಬಹುಶಃ ಇದೇ ನನ್ನ ಕೊನೆಯ ಪತ್ರ.......

ಎಲ್ಲರಿಗೂ ನಮಸ್ಕಾರ...!!!!

ಮನಸಿಟ್ಟು ಓದಿ, ಮನಸ್ಸಲ್ಲೇ ಅನುಭವಿಸಿ, ಮನಸಲ್ಲೇ ಆಶಿಸಿ, ಮನದಾಳದಿಂದ ಉತ್ತರಿ.........

ನನ್ನ ಹೆಸರು ಕನ್ನಡಾಂಬೆ, ನನ್ನ ಊರು ಕರ್ನಾಟಕ, ನನ್ಗೆ ಸಾವಿರಾರು ಮಕ್ಕಳು, ಹೆತ್ತ ತಾಯಿ ನಿನ್ಗೂ ಗೊತ್ತಿಲ್ವಾ ಅಂತೀರಾ..!!! ಏನು ಮಾಡೋದು ವಯ್ಯಸ್ಸಾಗಿರೋ ತರ ಮಾಡಿದ್ದಾರೆ ನನ್ನ ಮಕ್ಕಳೆಲ್ಲರು.....ಎಷ್ಟು ಮಕ್ಕಳೆಂದು ನೆನಪಿಸಿಕೊಳ್ಳೋಕೆ ಹಾಗೋಲ್ಲ.....

ಇವತ್ತು ನಾನು ನನ್ನ ಮನಸಲ್ಲಿರೋದನ್ನ ಈ ಮೃದುವಾದ ಮನಸಿನಲ್ಲಿ ಹೇಳ್ಕೊಳೋಣ ಅಂತ ಬಂದೆ ನೀವೆಲ್ಲಾ ಓದಿ ಓಡಿಹೋಗದೆ. ಸ್ವಲ್ಪ ನನಗೋಸ್ಕರ ಏನಾದರು ಮಾಡಿ ಆಯ್ತಾ..?

ನನ್ನ ಮಕ್ಕಳು ತುಂಬಾ ಒಳ್ಳೆಯವರು, ಕೆಲವರು ವಿದ್ಯಾವಂತರು, ಕೆಲವರು ದಡ್ಡರು, ಕೆಲವರು ಕೆಲಸಕ್ಕೆಂದು ದೂರ ಹೋಗಿದರೆ, ಕೆಲವರು ನನ್ನ ಭೂಮಿ ತಾಯಿನ ಪೂಜಿಸ್ತಾ ಇದಾರೆ. ಹುಟ್ಟಿದ ಮಕ್ಕಳು ಎಲ್ಲಾ ಅಪ್ಪ ಅಮ್ಮನ್ನ ಚೆನ್ನಾಗಿ ನೋಡುಕೋತಾರಾ ಹೇಳಿ, ಹಾಗೆ ನನ್ನ ಮಕ್ಕಳೂ ಕೂಡ, ಕೆಲವರು ಹಾಗೆ, ಇನ್ನು ಕೆಲವರು ಹೀಗೆ ಎಂಬಂತೆ ಇರ್ತಾರೆ....

ನನ್ನವರು ಯಾರು ನನ್ನ ನೋಡ್ಕೊತಾರೋ ಬಿಡ್ತಾರೋ ಅದು ಬೇರೆ ವಿಷಯ, ಆದರೆ ನನ್ನ ಮನಸಿಗೆ ನೋವಂತು ಮಾಡ್ತಾರೆ. ನನ್ನ ನೋಡಿಕೊಳ್ಳುವುದು ಬೇಡ, ಆದರೆ ನನ್ಗೆ ಅಮ್ಮ ಅನ್ನೋ ಗೌರವ ಕೊಟ್ಟರೆ ಸಾಕು....

ನನ್ನ ಇಷ್ಟು ಮಕ್ಕಳು ಹೇಗೆ ಬೇರೆ ಬೇರೆ ಆಗಿದಾರೆ ಗೊತ್ತೇ..? ಉತ್ತರ ಕನ್ನಡಿಗರು, ದಕ್ಷಿಣ ಕನ್ನಡಿಗರು, ಕರಾವಳಿ ಕನ್ನಡಿಗರು- ಹೀಗೆ ಏನೆಲ್ಲಾ ಆಗೋಗಿದೆ, ಊರು, ಮನೆ ಬದಲಾಗೋದು ಆಯ್ತು ಅವರ ಮಾತು ನೋಡಬೇಕು ಹೇಗೆ ಗೊತ್ತ..? ಈ ಬೆಂಗಳೂರು ಕಡೆಯವರು ಕನ್ನಡಮ್ಮನ ಜೊತೆ ತಮಿಳಮ್ಮನನ್ನು ಬೆರಿಸಿಕೊಂಡು ಮಾತಾಡ್ತಾರೆ, ಇನ್ನು ಉತ್ತರ ಕರ್ನಾಟಕಕ್ಕೆ ಹೋದರೆ ಅಲ್ಲಿ ಮರಾಠಿಯಮ್ಮ ಜೊತೆಗೆ ಹಿಂದಿಯಮ್ಮನ ಸೇರಿಸಿಕೊಂಡಿರ್ತಾರೆ, ಹಂಗೆ ಈ ಬಳ್ಳಾರಿ ಸೀಮೆಗೆ ಬಂದರೆ ಅವರೆಲ್ಲ ಮಾವಾಳ್ಳು-ಮೀವಾಳ್ಳು ಅಂತ ತೆಲುಗಮ್ಮನ್ನ ತುಂಬಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆಯ್ತ ಇನ್ನು ಕರಾವಳಿ ಕಡೆ ಹೋದರೆ ಅದೇನೋ ತುಳು, ಮತ್ತೆ ಕೊಂಕಣಿ ಅಮ್ಮಂದಿರ ಜೊತೆ ಬೆರೆತು ಬಿಟ್ಟಿದ್ದಾರೆ, ಕೆಲವು ಮಕ್ಕಳು ಉರ್ದು, ಇಂಗ್ಲೀಷಿಯಮ್ಮ ಎಂದುಕೊಂಡು ಕನ್ನಡಮ್ಮ ನೀ ಯಾರಮ್ಮ ಅಂತಾರೆ. ನೋಡಿ ಹೀಗೆ ನನ್ನೊಟ್ಟೆನಲ್ಲಿ ಹುಟ್ಟಿದ ಮಕ್ಕಳೇ ಹೀಂಗವ್ರೆ, ನಾ ಯಾರ ಹತ್ರಾ ಅಂತ ಹೋಗಿ ನನ್ನ ಉಳಿಸಿ, ಬೆಳೆಸಿ ಇರೋವಾಗ ಚೆನ್ನಾಗಿ ನೋಡ್ಕೊಳ್ಳಿ ಅಂತ ಬೇಡೋದು. ನಮ್ಮವರೇ ಇಲ್ಲದಾಗ ಬೇರೆಯವರು ಬರ್ತಾರ ನನ್ನ ಗೋಳಿನ ಕಥೆ ಕೇಳೋಕೆ.......

ನನ್ನ ಪಕ್ಕದ ಮನೆನಲ್ಲಿ ತಮಿಳಮ್ಮ ಅಂತಾ ಇದಾರೆ ಅವರ ಮಕ್ಕಳು ನೋಡಬೇಕು ಅಬ್ಬಾ!!! ಆಶ್ಚರ್ಯ ಆಗ್ತದೆ ಅವಳ ಮಕ್ಕಳೇನಾ ಇವೆಲ್ಲ ಅಂತಾ.... ಆ ಮಕ್ಕಳು ತಮ್ಮ ತವರೂರು ಬಿಟ್ಟು ಬೇರೆ ಊರಿಗೆ ಹೋಗವ್ರೆ ಆ ಊರಿನಲ್ಲಿ ಇರೋರಿಗೆಲ್ಲ ತಮಿಳಮ್ಮನ ಪ್ರೀತಿನೂ ತುಂಬವ್ರೆ ಗೊತ್ತಾ.... ಆಮೇಲೆ ಇನ್ನೊಂದು ಈ ಇಂಗ್ಲೀಷಮ್ಮ ಇದಾಳಲ್ಲ ಆಕೆ ಏನು ನಮ್ಮ ಪಕ್ಕದ ಮನೇಯವಳಲ್ಲ ಆದ್ರೂ ಎಷ್ಟೋಂದು ದೂರ ನಮ್ಗೂ ಅವರಿಗೂ ಆದರೆ ನನ್ನ ಮಕ್ಕಳೆಲ್ಲಾ ಮಾರು ಹೋಗಿದಾರೆ. ಆಕೆಯ ಮೈಮಾಟಕ್ಕೋ, ವಯ್ಯಾರಕ್ಕೋ ಗೊತ್ತಿಲ್ಲ. ಈಗ ಹೇಗಾಗಿದೆ ಗೊತ್ತ ನಾನು ಮಲತಾಯಿ, ಅವಳೇ ಹೆತ್ತತಾಯಿ..... ನನ್ನ ಪಾಡು ಯಾರಿಗೂ ಬೇಡ ಮುಂದೊಂದು ದಿನ ಏನು ಮಾಡ್ತಾರೋ ಅನ್ನೋ ಭಯ. ನಾ ಆ ತಮಿಳಮ್ಮನ ಮಕ್ಕಳಂತೆ ನೀವೂ ಆಗ್ರೋ ಅಂತ ಕೇಳೊಲ್ಲ, ಇಂಗ್ಲೀಷಮ್ಮನ ತರ ನಿನ್ನ ತಾಯಿನ ಎಲ್ಲೆಡೆ ಹಬ್ಬಿಸಿ ಅಂತ
ಕೇಳೊಲ್ಲ..........ಏನಾದರೂ ಆಗಲಿ ನಾನು ನಾನು ಅದೇ ನಾನು........ ಹೆತ್ತಮ್ಮ ಅಲ್ಲವಾ ನನ್ನನ್ನ ನಾನಾಗಿ ಸಾಯೋಕೆ ಬಿಡಿ ನಾನಾಗಿ ಸತ್ತರೆ ನನ್ನ ನೆನಪು ನಿರಂತರಾ ಅನ್ನೋ ಹಾಗೆ ಭಾಷೆನೂ ನಿರಂತರವಾಗಿ ಇರುತ್ತೆ......... ಇನ್ನು ಸಾಯುವ ವಯಸ್ಸು ಬಂದೇ ಇಲ್ಲ ಆಗಲೇ ನನ್ನ ಉಸಿರನ್ನ ಚಿವುಟು ಹಾಕಲಿಕ್ಕೆ ನನ್ನ ಹೊಟ್ಟೆನಲ್ಲಿ ಹುಟ್ಟಿದ ಕುಡಿಗಳೇ ಕಾದಿವೆ. ನನಗೆ ಇದಕ್ಕಿಂತಾ ಬೇಸರದ್ದು, ನೋವಿನ ಜೊತೆ ಸಂಕಟ ತರೋ ವಿಷಯ ಬೇರೇನಿದೆ ಹೇಳಿ ನೀವೆ...?

ಪರ ಮಾತೆಯನ್ನು ಪ್ರೀತಿಸಿರಿ, ನನ್ನನ್ನೂ ಸಹ ಉಳಿಸಿ, ನಾ ಎಂದೂ ನನ್ನೊಬ್ಬಳ ಸಂಗಡವೇ ಇರಿ ಎಂದು ನಾನೇಳುವುದಿಲ್ಲ ಇರುವ ಮನೆಯಲ್ಲಿ
ಎಲ್ಲರನ್ನು ಆಹ್ವಾನಿಸು, ಪ್ರೀತಿಸಿ ಹಾರೈಕೆ ಸಲ್ಲಿಸು...ಆದರೆ ನನ್ನ ಇರುವಿಕೆಯಲ್ಲೇ ಎಲ್ಲವನ್ನು ಸ್ವೀಕರಿಸು.....

ನನ್ನ ಉಸಿರು ಕೊನೆವರೆಗೂ, ನಿಮ್ಮ ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರು ಇ
ಗೆ ಈ ಭೂಮಿ ಇರುವವರೆಗೂ ನಾನು ರಾರಜಿಸಬೇಕೆಂದರೆ ನನ್ನ ಉಸಿರಿಗೆ ಹರ್ಷ ಕೊಡಿ ................ ಇಲ್ಲ ನೀ ಹೆತ್ತಮ್ಮ, ನನ್ನಮ್ಮ ನಿನ್ನೊಡಲ ಧಗ ಧಗಿಸಿ ಹುರಿಯುವಂತೆ ಮಾಡೋಲ್ಲವೆಂದರೆ ನಿಮ್ಮ ಪ್ರತಿ ಹೆಜ್ಜೆಯಲ್ಲೂ ನನ್ನೆಸರ ಉಸಿರಾಡಿ.........ಈ ತಾಯ ಪ್ರೀತಿಯನ್ನ ಉಳಿಸಿಕೊಂಡರೆ ನಾ ಕೊನೆವರೆಗೂ ನಿಮ್ಮೊಟ್ಟಿಗೆ......ಇಲ್ಲವೆ ನೀವು ಮಲತಾಯಿಯೊಟ್ಟಿಗೆ ನಿರ್ಧಾರ ನಿಮ್ಮದು ಬದುಕು ನನ್ನದು............

ನಿಮ್ಮ.......
ಕನ್ನಡಾಂಬೆ

Thursday, June 3, 2010

ಕುಡಿತ - ಕಾಂತಿಹೀನ

ಕುಡಿತ

ಸುಂದರ ಬದುಕಿದೆ
ನನ್ನವರೆಲ್ಲರೂ ಇದ್ದಾರೆ
ಯಾವ ಕೊರೆತೆಯೂ ಇಲ್ಲ
ಬಾಳುವಾಸೆ ಅತಿಯಾಗಿದೆ
ಆದರೆ........
ನನ್ನ ಜೀವ ದಿನ ಎಣಿಸುತಿದೆ
ಕಾರಣ.......
ವಯಸ್ಸಲ್ಲಿ ಕುಡಿದು ತೇಗಿದ್ದು....
ಇಂದು ಮರಣಕ್ಕೆ ಹತ್ತಿರವಾದೆ
ಇನ್ನೆಲ್ಲಿ ......
ಬಾಳುವಾಸೆ ನನ್ನವರೊಟ್ಟಿಗೆ.
ಚಟ್ಟವನ್ನೇ ......
ಬಯಸಬೇಕಿದೆ ಈ ಮಧ್ಯವಯಸ್ಸಿಗೆ..?!!!

________________


ಕಾಂತಿಹೀನತೆ


ಬಾಗಿಲಲಿ ಪೂಜೆಗೈದಿದೆ
ತೋರಣ ಹಚ್ಚಹಸಿರಾಗಿದೆ
ಮನೆಯೊಳಗಣ ದೀಪದ ಬೆಳಕಿದೆ
ಒಳಗೋಗುವಾಸೆ
ಹೋದರೆ.......
ಆ ದೀಪದ ಕಾಂತಿಗೆ
ಪ್ರಜ್ವಲತೆಯ ಮಿಂಚಿನ ಶಕ್ತಿಯೇ ಇಲ್ಲ
ಕಾರಣ..........
ಮನೆಯ ನಂದಾದೀಪದ ಕಾಂತಿ
ಕಳೆಗುಂದಿದೆ........

Tuesday, May 25, 2010

ಮರಳ ಮಲ್ಲಿಗೆಗೆ ನೀರೆರೆಯಬೇಕಿದೆ

ಏನು ಇದು ಮರಳ ಮಲ್ಲಿಗೆಗೆ ನೀರೆರೆಯಬೇಕಾ, ನಮ್ಮೂರಿಂದ ಅವರಿಗೆ ನೀರು ಹೇಗಪ್ಪಾ ಕಳಿಸೋದು. ಅದು ಅಲ್ಲದೆ ಆ ಮರುಭೂಮಿಗೆ ನಾವು ಎಷ್ಟು ನೀರು ಕಳಿಸಿದ್ರು ಸಾಲೋದಿಲ್ಲ, ಜೊತೆಗೆ ನಾವೇ ಇಲ್ಲಿ ನೀರಿಲ್ಲ ಅಂತ ಕಷ್ಟಪಡ್ತಾ ಇದ್ದೀವಿ, ಇವ್ರಿಗೆ ಬೇರೆ ಕಳಿಸ್ಬೇಕಾ...!!!? ಅಂತ ತಿಳ್ಕೊಂಡಿರಾ ಖಂಡಿತಾ ಇಲ್ಲ. ಮುಂದೆ ಹೇಳ್ತೀನಿ ನೋಡಿ ಯಾವ ನೀರು ಕಳಿಸಬೇಕು ಮರುಭೂಮಿಗೆ ಅಂತ.

ಈಗ ವಿಷಯಕ್ಕೆ ಬರೋಣವೇ...... ನಮ್ಮ ಕನ್ನಡ ಕೂಟದಲ್ಲಿ ಮರಳ ಮಲ್ಲಿಗೆ ಎಂಬ ಪತ್ರಿಕೆ ಇರುವುದು (ಈ ವಿಷಯ ಕೆಲವರಿಗಾಗಲೇ ತಿಳಿದಿದೆ) ವರ್ಷಕ್ಕೆ ೫ ಅಥವಾ ೬ ಪತ್ರಿಕೆಗಳನ್ನು ಮುದ್ರಿಸುತ್ತಲಿದ್ದೆವು. ಈ ಬಾರಿ ಮಾಸ ಪತ್ರಿಕೆಯಾಗಿ ಪ್ರತಿ ತಿಂಗಳು ಹೊರ ತರುತ್ತಲಿದ್ದೇವೆ. ಇಲ್ಲಿಯವರೆಗು ೫ ಸಂಚಿಕೆಗಳಾಗಿ ಹೊರಹೊಮ್ಮಿವೆ. ಮುಂಬರುವ ಸಂಚಿಕೆಗಳಲ್ಲಿ ಒಂದು ಅಥವಾ ಎರಡು ಸಂಚಿಕೆಗಳಲ್ಲಿ ಹೊರನಾಡು, ಕರುನಾಡ ಕನ್ನಡಿಗರ ಲೇಖನಕ್ಕೆ ಮೀಸಲಿಟ್ಟು ಸಂಚಿಕೆಯನ್ನು ಹೊರತರುವ ಆಶಯದಲ್ಲಿದ್ದೇವೆ.

ನಮ್ಮ ಕನ್ನಡ ಕೂಟದ ಮಲ್ಲಿಗೆ ಮರಳಿನಲ್ಲಿ ಹಬ್ಬಿ ರಾರಾಜಿಸುತ್ತಲಿದೆ ಕೂಡ, ನಿಮ್ಮ ಲೇಖನಗಳನ್ನು ಮತ್ತಷ್ಟು ನಮಗೆ ಕಳಿಸಿ. ನಮ್ಮ ಕನ್ನಡದ ಅರಿವು, ಕನ್ನಡ ಭಾಷಾ ಸಾಮರ್ಥ್ಯ, ಕರುನಾಡಿನ ಬಾಂಧವ್ಯ ಎಲ್ಲವನ್ನು ಹೆಚ್ಚಿಸಬೇಕೆಂದು ಕೋರುತ್ತೇವೆ..... ಮರಳ ಮಲ್ಲಿಗೆಗೆ ನಿಮ್ಮ ಲೇಖನಗಳು, ನಗೆಹನಿಗಳು, ಆರೋಗ್ಯ ಬಗೆಗಿನ ಲೇಖನ, ಕಾರ್ಟೂನ್, ಚುಟುಕುಗಳು, ಕವನಗಳು, ಹಾಸ್ಯ, ವಿಶೇಷ ವ್ಯಕ್ತಿಯ ಪರಿಚಯ, ವಿಶೇಷ ಸ್ಥಳದ ಪರಿಚಯ, ಸೌಂದರ್ಯ ಸಲಹೆ, ಅಡುಗೆ ವಿಶೇಷ ತಿನಿಸುಗಳ ಬಗ್ಗೆ, ಅತ್ಯುತ್ತಮ ಫೋಟೋಗಳು, ಸಣ್ಣ ಕಥೆ, ವಿಜ್ಞಾನ ಹಾಗೂ ತಾಂತ್ರಿಕ ಜಗತ್ತಿನ ಬಗೆಗಿನ ಲೇಖನ, ಇಷ್ಟೆಲ್ಲದರಲ್ಲಿ ನಿಮಗಾವುದು ಸರಿಹೊಂದುವುದೋ ಆ ಬರಹಗಳನ್ನು ನಮಗೆ ಕಳಿಸಿಕೊಡಿ. ನಮ್ಮ-ನಿಮ್ಮ ಹಾಗೂ ಹೊರನಾಡು-ಕರುನಾಡ ಭಾಷಾ ಬಾಂಧವ್ಯವನ್ನು ಬೆಳೆಸುವಲ್ಲಿ ನಿಮ್ಮ ಸಹಕಾರ ಅಗತ್ಯವಿದೆ.

ವಿಶೇಷ ಸೂಚನೆ :
. ಲೇಖನಗಳು ಒಂದು ಅಥವಾ ಎರಡು ಪುಟ ಮೀರದಂತಿರಲಿ.
೨. ಯೂನಿಕೋಡ್ ಬಳಸದೆ ಬರಹ ಫಾಂಟ್ ಹಾಗೂ ೧೨ ನಲ್ಲಿರಲಿ.
೩. ಜೂನ್ ೧೦ರೊಳಗೆ ನಮ್ಮ ಈ-ಮೈಲ್ ವಿಳಾಸಕ್ಕೆ ಕಳಿಸಿಕೊಡಿ. maralamallige@kuwaitkannadakoota.org

೪. ನಮ್ಮ ಕೆಲವು ಸಂಚಿಕೆಗಳನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ :
http://www.kuwaitkannadakoota.org/marala_mallige.html


ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಲೇಖನ ಅಥವಾ ಬರಹಗಳೊಂದಿಗೆ ನಮ್ಮ ಜೊತೆ ಕೈಜೋಡಿಸಿ, ಮರುಭೂಮಿಯ ಕನ್ನಡ ನುಡಿಗೆ ನೀರೆರೆದು ಸಹಕರಿಸುವಿರೆಂದು ನಾವು ಭಾವಿಸುತ್ತೇವೆ.

ಧನ್ಯವಾದಗಳು
ಮನಸು
http://www.kuwaitkannadakoota.org/

Sunday, April 18, 2010

ಪ್ರತಿಭಾ ಕಾರಂಜಿ



ಅಂದು ಶುಕ್ರವಾರ (೧೬--೧೦) ಸುಮಾರು ಸಂಜೆ ಗಂಟೆ ಇರಬಹುದು, ವೇದಿಕೆ ಪ್ರತಿಭೆಗಳ ಹುಡುಕಾಟಕ್ಕೆ ಸಜ್ಜಾಗಿತ್ತು.... ಅತ್ತಕಡೆಯಿಂದ ಸಾಲು ಸಾಲಾದ ಇರುವೆಗಳಂತೆ ಜನರು ಬರುತ್ತಲಿದ್ದರು..... ಜನರಾಗಮನ ಕುವೈತ್ ಕನ್ನಡ ಕೂಟದ ಕಾರ್ಯಕಾರಿಸಮಿತಿಯ ಸಹಯೋಗದೊಂದಿಗೆ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯ ವತಿಯಿಂದ ಪುಟ್ಟ ಸಮಾರಂಭವನ್ನು ಏರ್ಪಡಿಸಿದ್ದರು. ವೇದಿಕೆ ಕನ್ನಡ ಕೂಟದ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಂತು ಖಂಡಿತಾ ನಿಜ.......


ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಪ್ರಾರಂಭವಾಗಿ ಕೂಟದ ಗೀತೆಯೊಂದಿಗೆ ಶುಭಕೋರಿ ಅಧ್ಯಕ್ಷದಂಪತಿಗಳೊಂದಿಗೆ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿತು. ನಂತರದಿ ಅಧ್ಯಕ್ಷರ ಹಿತನುಡಿಯೊಂದಿಗೆ ಸಾಂಸ್ಕೃತಿಕಕಾರ್ಯದರ್ಶಿಗಳು ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯವರ ಮುಖೇನ ಸಮಾರಂಭದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆನೀಡಲು ಅನುವು ಮಾಡಿದರು......




ನಂತರದಿ ಸಮಿತಿಯ ಸಂಚಾಲಕರಿಂದ ಕಾರ್ಯಕ್ರಮಗಳ ವಿವರದೊಂದಿಗೆ ಪ್ರಾರಂಭಿಸಿ, ಮರಳ ಮಲ್ಲಿಗೆ ಸಮಿತಿ ಬಳಗದಸದಸ್ಯೆಯಿಂದ ಮುದ್ದು ಕೆ.ಕೆ.ಕೆ ನಿರ್ವಹಣೆಯತ್ತ ಮುನ್ನುಗಿತು.... ಪುಟ್ಟ ಕಂದಮ್ಮಗಳು ಪುಟಾಣಿ ಹೆಜ್ಜೆಯನಿಡುತ್ತಾ ಎಲ್ಲರತ್ತ ಗಮನಸೆಳೆಯುತ್ತ ಅಲ್ಲೇ ಇದ್ದ ಆಟಿಕೆಗಳಲ್ಲಿ ಕುಣಿಯುತ್ತ ವೇದಿಕೆಯನ್ನು ತುಂಬಿ ಬಿಟ್ಟಿದ್ದರು... ಇದನ್ನೆಲ್ಲಾ ವೀಕ್ಷಿಸಿದ ತೀರ್ಪುಗಾರರಂತುತೀರ್ಪುನೀಡಲು ಸ್ವಲ್ಪ ಸಮಯ ಯೋಚಿಸುವಂತಾಯಿತು....ಪುಟ್ಟ ಹೆಜ್ಜೆ ಕಂಡು ಮುಂದೆ ಸಾಗುತ್ತಲಿದ್ದಂತೆ ಕಂಡಿದ್ದು ದಂಪತಿಗಳುಅವರವರ ಗಂಡ ಹೆಂಡತಿಯರ ಹುಡುಕಾಟ ಯಾಕೆ ಜೊತೆನಲ್ಲಿ ಬಂದಿರಲಿಲ್ಲವಾ ಅಂತೀರಾ ಹಾಗಲ್ಲ ಜೊತೆಯಲ್ಲಿ ಬಂದವರು ಅವರಸ್ನೇಹಿತರೊಟ್ಟಿಗೆ ಕೂತುಬಿಟ್ಟಿದ್ದರು....ದಂಪತಿಗಳಿಗೆ ಪರೀಕ್ಷೆ ಇತ್ತು ನೋಡಿ ಕನ್ನಡದಲ್ಲಿ ಬರಿಬೇಕು ಕೆಲವು ಪ್ರಶ್ನೆ ಹೆಂಡತಿಗೆ ಗೊತ್ತಿಲ್ಲ, ಕೆಲವು ಗಂಡಂದಿರಿಗೆ ಗೊತ್ತಿಲ್ಲ ಒಬ್ಬರಿಗೊಬ್ಬರು ಯೋಚಿಸಿ ಬರೆಯಲು ಅಷ್ಟೆ ಪೆನ್ನು ಪೇಪರ್ ತಗೊಂಡು ಸುಮಾರು ೮೨ದಂಪತಿಗಳು ಉತ್ತರಿಸಿದರು........ಎಲ್ಲರಿಗೂ ಸಂತಸ ಕೂಡ...... ಇವೆಲ್ಲ ಮುಗಿದ ನಂತರ ನೋಡಿ ಮಿಕ್ಕುಳಿದ ಆಯಾವಯೋಮಿತಿಗೆ ತಕ್ಕಂತೆ ಕೆಲವು ಮಕ್ಕಳು ಅಪ್ಪ ಅಮ್ಮನೇನಾ ಕನ್ನಡ ಬರೆಯೋದು ನಾವು ಕನ್ನಡ ಪದಜೋಡಿಸ್ತೀನಿ ಅಂತಹೋದರು, ಇನ್ನು ಕೆಲವು ಮಕ್ಕಳು ನಮ್ಮದೇ ಶೈಲಿಯಲ್ಲಿ ಗ್ರೀಟಿಂಗ್ ಕಾರ್ಡ್ ಮಾಡಿ ತೋರುಸ್ತೀವಿ ನೋಡಿ ಅಂತ ಹೊರಟರು.... ಇನ್ನು ಸ್ವಲ್ಪ ದೊಡ್ಡ ಮಕ್ಕಳು ಇದಾರಲ್ಲಾ ಅವರು ಅಯ್ಯೋ ಇವರೆಲ್ಲ ಸುಮಾರಾದ ಸ್ಪರ್ಧೆಯಲ್ಲಿದ್ದಾರೆ ನಾವು ರಸವತ್ತಾಗಿರೋರಸಪ್ರಶ್ನೆಗೆ ಉತ್ತರ ಬರೆದುಕೊಂಡು ಫೈನಲ್ಸ್ ಗೆ ಬರ್ತೀವಿ ಕಾದು ನೋಡಿ ಅಂತ ಆಯಾ ಸ್ಪರ್ಧಾ ಸ್ಥಳಕ್ಕೆ ಹೊರಟೇ ಬಿಟ್ಟರು. ಇನ್ನುಅಮ್ಮಂದಿರು ಮಕ್ಕಳು ಹೊರಗಡೆ ಹೊರಟರೆ ನಾವು ಏನು ಕಡಿಮೆ ಇಲ್ಲ ಅಂತ ರಂಗೋಲಿ ಹಾಕಲಿಕ್ಕೆ ಹೊರಟರು ಅಲ್ಲಿ ಹೋದರೆ ನೀರೆಯರಿಗೆ ಕಾಂಪಿಟ್ ಮಾಡೋಕೆ ರಂಗೋಲಿ ಹಿಡಿದು ಧೀರರೂ ಸಹ ನಿಂತಿದ್ದರು.........









ಅಲ್ಲಿ ಅಪ್ಪ ಅಮ್ಮ ಅಣ್ಣ, ಅಕ್ಕಂದಿರು ಪರೀಕ್ಷೆಗಳಿಗೆ ಹೊರಟರೆ ಇತ್ತ ಗರಿಗೆದರಿ ಹಕ್ಕಿಗಳಂತೆ ಹಾರಾಡುವ ಪುಟ್ಟ ಪುಟಾಣಿಗಳ ತೊದಲು ನುಡಿಯಲ್ಲಿ ಕನ್ನಡದ ಹಾಡುಗಳು ಸರಾಗವಾಗಿ ಹಾಡಿ ಎಲ್ಲರೆದು ನಾಯಿಮರಿ, ಆನೆ, ಚಂದಮಾಮ, ರೊಟ್ಟಿಯ ಕಿಟ್ಟ, ಒಂದು ಎರಡು, ಬಾಳೆ ಎಲೆ ಎಲ್ಲವನ್ನು ವೇದಿಕೆಗೆ ತಂದೇ ಬಿಟ್ಟಿದ್ದರು ನೋಡಿ ನಮ್ಮೆಲ್ಲರಿಗೂ ಕಷ್ಟವಾಗಿತ್ತು ಕೂಡ ಹೇಗೆ ಇವರನ್ನೇಲ್ಲ ಪುಟ್ಟವೇದಿಕೆಯಲ್ಲಿ ಕೂರಿಸೋದಾ ಹೇಳಿ..... ನಮಗೆ ಸ್ವಲ್ಪ ಭಯ ಆಯ್ತು ಏನಪ್ಪಾ ಅಷ್ಟು ದೊಡ್ಡ ಆನೆ ಬಂದರೇಗೆ ಅಂತಾ..........ಬಂದಿದ್ದ ಕಾಡು, ಊರಿನ ಪ್ರಾಣಿ, ಪಕ್ಷಿ ಎಲ್ಲವನ್ನು ಕಳಿಸೋಸ್ಟರಲ್ಲಿ ಹಲವು ಸ್ಪರ್ಧೆ ಮುಗಿಸಿ ಎಲ್ಲರೂ ವೇದಿಕೆ ಸೇರಿದರು.


ಆಮೇಲೆ ಬಂದರು ನೋಡಿ ಒಂದು ಪುಟಾಣಿ ಕೃಷ್ಣ ಯಶೋದೆ ಇಬ್ಬರ ಪಾತ್ರ ನಾನೇ ಮಾಡ್ತೀನಿ ಅಂತ, ಮತ್ತೊಂದು ಬಬ್ರುವಾಹನ ಅರ್ಜುನರ ಸಂಭಾಷಣೆ, ಕಿತ್ತೂರು ರಾಣಿ ಇಂಗ್ಲೀಷರ ಜೊತೆ ಮಾತುಕತೆ.... ಅಮ್ಮ ಮಗಳ ನಡುವೆ ಸಂಭಾಷಣೆ........ಟಿವಿ ಧಾರಾವಹಿಯ ಪಾರ್ವತಿ, ಸುಬ್ಬು, ರೇಡಿಯೋ ನಾದದ ವೇದ, ಅಪ್ಪ ಮೊಮ್ಮಗನ ಪಾತ್ರ, ಅಜ್ಜ ತಾತನ ಇಂಗ್ಲೀಷ್ ಮಾತು.....ಹೀಗೆ ಎಷ್ಟೊಂದು ಅಂತೀರಾ (ಕೆಲವು ಮರೆತೆ ಬಿಟ್ಟಿರುವೆ ನೋಡಿ) ಏಕಪಾತ್ರಾಭಿನಯ ಮಾಡಿ ತೋರಿಸಿದ್ರು ಗೊತ್ತಾ........
ಪಾತ್ರಗಳನ್ನ ನೋಡಿದ್ವಾ ಆಮೇಲೆ ಅದೆಲ್ಲಿತ್ತೋ ಗುಂಪುಗಳು ಬಂದರು ನೋಡಿ ಮಾತಿನಚಕಮಕಿಗೆ ಎಲ್ಲಾ ಹೆಣ್ಣು ಕೆಲಸಕ್ಕೆ ಹೋಗಬೇಕು ಗಂಡು ಮನೆನಲ್ಲಿರಬೇಕು ಅಂತ ಕೆಲವರು ಅದಕ್ಕೆ ವಿರುದ್ಧ ಹೀಗೆ ಜಟಾಪಟಿ ನೆಡಿದು ಕೊನೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಹೇಳಿದ್ರು........

ಇವರನ್ನೆಲ್ಲ ನೋಡಿದಮೇಲೆ ಅದೆಲ್ಲಿದ್ದರೋ ಕವಿಗಳು ಸಾಲುಸಾಲಾಗಿ ವೇದಿಕೆಯನ್ನು ಅಲಂಕರಿಸಿಬಿಟ್ಟರು.... ಪುಟ್ಟ ಮಕ್ಕಳಿಂದಿಡಿದುದೊಡ್ಡವರೆಲ್ಲ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ತಮ್ಮ ಕವನವಾಚನ ನೀಡಿ ನೆರೆದಿದ್ದವರೆಲ್ಲರಿಗೂ ಖುಷಿ ನೀಡಿದರು.

ಕವಿಗಳನ್ನು ಕಳಿಸಿ ನಂತರ ಬಂದವರೇ ರಸಪ್ರಶ್ನೆಗೆ ಉತ್ತರಿಸುವ ಚಿಣ್ಣರು ವೇದಿಕೆಯಲ್ಲಿ ನೀರವ ಮೌನ ಎಲ್ಲರೂ ಪ್ರಶ್ನೆಗಳತ್ತ ಗಮನಕೆಲವರಿಗೆ ಪ್ರಶ್ನೆಗಳಿಗೆ ಉತ್ತರ ತಿಳಿದಿರಲಿಲ್ಲ ಕೆಲವರಿಗೆ ತಿಳಿದಿತ್ತು ..........ತಿಳಿದಿಲ್ಲದವರಿಗೆ ಯೋಚಿಸಲೂ ಬಿಡದೆ ನೆರೆದಿದ್ದ ಜನಗಳಲ್ಲಿಯಾರಾದರೊಬ್ಬರು ತಟ್ ಅಂತ ಉತ್ತರ ಹೇಳೋರು ನೋಡಿ.......ಅವರಿಗೂ ಖುಷಿ ಅಲ್ವಾ ನಮ್ಗೆ ಉತ್ತರಗೊತ್ತಿದೆ ಅಂತ ಹೇಳೇಬಿಡೋರು.

ಸೀರಿಯಸ್ ಕ್ವಿಜ್ ಮುಗಿಸಿ ಸತಿ-ಪತಿಗಳು ಮೊದಲೇ ಪರೀಕ್ಷೆ ಬರೆದಿದ್ದರಲ್ಲ ಅವರಲ್ಲಿ ಡಿಸ್ಟಿಂಗ್ಷನ್ ತಗೊಂಡು ಬಂದ ಜೋಡಿಗಳುವೇದಿಕೆಯನ್ನೇರಿದರು. ಸಪ್ತಪದಿ ತುಳಿದ ಜೋಡಿಗಳು ಉತ್ತರಿಸಿ, ಅದೇನೆನೋ ಹಾವಭಾವ ಮಾಡಿ ಗಂಡ ಹೆಂಡತಿಗೆ, ಹೆಂಡತಿಗಂಡನಿಗೆ ಸನ್ನೆಗಳನ್ನು ಮಾಡಿ ಗಾದೆ ಹೇಳಿಸಿ.... ಉತ್ತರಿಸದ ಗಂಡನ ಮೇಲೆ ಸಿಡುಕಿ ಸೆಟೆದು ಹೋಗಿ ಕುಳಿತರು........ಆನಂತರ ಹೆಂಡತಿ ಸಮಾಧಾನ ಮಾಡೋಕ್ಕೆಂತಾ ಒಂದು ಡಾನ್ಸ್ ಝಲಕ್ ಇತ್ತು ನೋಡಿ ಎಂತಾ ಸ್ಟೆಪ್ ಅಂತೀರ ಕೆಲವರನ್ನುಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನಕ್ಕೂ ಕರೆದರು.... ಇನ್ನು ಕೆಲವರು ಅಪ್ಪಾಳೆ ತಿಪ್ಪಾಳೆ ಅಂತಾ ನಾವು ಊರಲ್ಲಿ ಆಡ್ತಾ ಇದ್ದವಲ್ಲಾ ಹಾಗೆ ಕುಣಿದರು ಗೊತ್ತಾ........ಎಲ್ಲರು ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಂಡರು........ಗೆದ್ದವರುನಾವೇ ಅಪರೂಪದ ಜೋಡಿಗಳು ಎಂದು ಬೀಗಿದರು.......


ವೇದಿಕೆ ಖಾಲಿ ಮಾಡಿಸೋಕೆ ಕಷ್ಟ ಆಯ್ತು ನೋಡಿ ಯಾಕೆ ಅಂತೀರಾ ಮತ್ತೆ ಸಪ್ತಪದಿ ಜೋಡಿಗಳು ಕುಣಿತ ಬಿಟ್ಟು ಬರೋಲ್ಲಾಅಂತಾರೆ ಆದರೆ ಏನು ಮಾಡೋದು ಗಂಟೆಗಳ ಮುಳ್ಳು ಮುಂದೆ ಹೋಗ್ತಾನೆ ಇತ್ತು ಅದಕ್ಕೆ ಅವರನ್ನ ವೇದಿಕೆಯಿಂದಕೆಳಗಿಳಿಸಿದೆವು........ಆನಂತರ ಕೂಟದ ಹಿರಿಯರಿಂದ ವೈಶಾಖ ಮಾಸದ ಸಂಚಿಕೆ ಬಿಡುಗಡೆ, ಮಾಜಿ ಅಧ್ಯಕ್ಷರ ಹಿತನುಡಿ, ನಂತರಅದೇನೋ ಬಾಗಿಲ ಬಹುಮಾನವನ್ನ ವೇದಿಕೆ ಮೇಲೆ ಕೊಟ್ಟರಪ್ಪಾ........ಹಹಹ.....ತದನಂತ ಸ್ಪರ್ಧಾ ವಿಜೇತರಿಗೆಬಹುಮಾನ......ಇದಿಷ್ಟು ನೆಡೆಯುತ್ತಲಿದ್ದಂತೆ ಖಜಾಂಜಿ ಯವರಿಂದ ವಂದನಾರ್ಪಣೆ ಕೇಳೋಕ್ಕೂ ಆಗದೆ ಸುಸ್ತಾಗಿದ್ದ ಜನಹೊಟ್ಟೆಯತ್ತ ಗಮನವರಿಸಿ ಊಟದತ್ತ ನಡೆದರು............


ಇವಿಷ್ಟು ಕಾರ್ಯಕ್ರಮ ಕಂಡ ಕಂಗಳು ಖುಷಿಯಾದವು......... ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿ, ಉಪ ಸಮಿತಿಗಳು, ಮೇಲ್ವಿಚಾರಕರು, ಮಕ್ಕಳು, ಹಿರಿಯರು, ಅತಿಥಿಗಳು, ತೀರ್ಪುಗಾರರು, ಹಲವು ಕಾಣದ ಹಸ್ತಗಳು, ಧ್ವನಿವರ್ಧಕಕ್ಕೆ ಸಹಕಾರಿಸಿದವರು, ಕ್ಯಾಮರಾ ಕಣ್ಣಿಗೂ ಹಾಗೂ ಕ್ಯಾಮಾರಾ ಕ್ಲಿಕ್ಕಿಸಿದವರಿಗೂ, ಸವಿ ಊಟ ನೀಡಿದವರಿಗೂಎಲ್ಲರಿಗೂ ಹಾಗೂ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿ ಬಳಗದ ಸದಸ್ಯರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು.

ಪೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ : http://picasaweb.google.com/yogee.tumkur/PrathibaKaranji?feat=directlink#

ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಂತೆಯೇ ಮರಳ ಮಲ್ಲಿಗೆ ಮಾಸ ಪತ್ರಿಕೆಗಳನ್ನು ಓದಿ ನಿಮ್ಮ ಅನಿಸಿಕೆ ತಿಳಿಸಿ.
http://www.kuwaitkannadakoota.org/



ವಂದನೆಗಳು
ಮನಸು