Sunday, September 8, 2013

-ಹಬ್ಬದ ತವರು-


ಗೌರಿ ನೆಪದಲಿ ನಮಗೆ ಔತಣ
ತವರ ಉಸಿರು ಸೆಳೆವ
ಸಂಬಂಧ ಬೆಸುಗೆ ಬೆಸೆವ
ಅನುಬಂಧವೇ ಈ ಹಬ್ಬದ ಚಿತ್ರಣ 

ಗಂಡ ಮನೆ ಮಕ್ಕಳು
ಸಿರಿವಂತ ಬಾಂಧವ್ಯದಲೂ 
ತವರು ಬಡತನದಲಿದ್ದರೂ 
ಸೆಳೆತ ಮಾತ್ರ ರೋಮಾಂಚನ

ಹುಟ್ಟಿದ ಮನೆ ಜನನಿ ಮಾತೆ
ಅದು ಬಿಡಿಸದ ಕರುಳ ಕೊಂಡಿ
ಕುಂಕುಮಾರಿಶಿನ ಹಸಿರು ಬಳೆ
ಇದು ಭಾವ ತುಂಬಿದ ಬಾಗಿಣ

ಭಾಗ್ಯದ ಮಳೆ ತವರು ಮನೆ
ಅಂಬಲಿಯ ಒಲೆ ಉರಿಸಿ
ರಕ್ತ ಸಂಬಂಧಿಗಳ ಬೆರೆತು
ತುತ್ತು ಹಂಚಿಕೊಂಡ ಅರಮನೆ

 ಕಾಂತಿ ಕೊಟ್ಟ ತವರ ಮಡಿಲು
ಹರುಷ ತುಂಬುವ ಹಬ್ಬ ಹರಿದಿನ
ಪ್ರತಿಮನಕೆ ಬರಲಿ ಅನುದಿನ
ತಣಿಸುತಿರಲಿ ಹೆತ್ತಮ್ಮನ ಒಡಲು


ಎಲ್ಲರಿಗೂ ಗೌರೀ ಮತ್ತು ಗಣೇಶ ಹಬ್ಬದ ಶುಭಾಶಯಗಳು... 


Monday, September 2, 2013

"ಬಣ್ಣ" ತವರಿನ ಬಣ್ಣ -ಕಥೆ

"ಗೌರಿ ಹಬ್ಬದ ಕಳೆ ಮನೆ ಬಾಗಿಲಲ್ಲೇ ಕಾಣ್ತಾ ಇದೆ. ಅತ್ತಿಗೆ ಎಷ್ಟ್ ಚೆಂದಾಗಿ ರಂಗೋಲಿ ಬಿಡಿಸಿದ್ದಾಳೆ." ಏನೋ ಅಣ್ಣ ಅತ್ತಿಗೆ ಅಂತ ಇದ್ದಿದ್ದಕ್ಕೆ ನನ್ಗೂ ತವರಿನ ಋಣ ಇನ್ನೂ ಉಳಿದುಕೊಂಡಿದೆ.  "ಅಮ್ಮ ಇದ್ದಿದ್ರೇ ಇನ್ನೂ ಚೆನ್ನಾಗಿ ಇರೋದು" ಮನಸ್ಸು ಒದ್ದೆಯಾಗಿತ್ತು. ತಕ್ಷಣ ಆಟೋದವ ಮೇಡಮ್ ಮನೆ ಬಂದಿದೆ ನೋಡಿ.. ಎಂದು ಎಚ್ಚರಿಸಿದಾಗಲೇ ನಾನು ವಾಸ್ತವಕ್ಕೆ ಬಂದೆ. ಆಟೋದವನಿಗೆ ಕಾಸು ಕೊಟ್ಟು ಒಳಗೆ ಹೆಜ್ಜೆ ಇಟ್ಟೆ.!!!. 

ಓಹ್..!! ಬಂದ್ಯಾ ಕುಸುಮ, "ಸಾರಿ ಕಣೋ, ಕಾರ್ ಡ್ರೈವರ್ ಲೇಟ್ ಮಾಡಿಬಿಟ್ನಾ?, ಏನು ಕಥೆ ಎಲ್ಲಿ ಅಳಿಯಂದಿರು ಬರ್ಲಿಲ್ವಾ??, ಅಲ್ಲೇ ನಿಂತಿಕೋ" ಎಂದು ಕಳೆದ ವರ್ಷ ಅಮ್ಮ ಸಡಗರದಿಂದ ಆರತಿ ಹಿಡಿಕೊಂಡು ಬರಬರ ಬರ್ತಾ ಇದ್ಲು... ಆದರೆ ಈ ಸರಿ ನಾನು ಒಳಗೆ ಹೆಜ್ಜೆ ಇಟ್ಟರೂ ಏನೂ ಎತ್ತ ಎನ್ನುವವರು ಇಲ್ಲದೆ ಯಾಕೋ ಮನೆ ಮೌನವಾಗಿತ್ತು. ಎಲ್ಲಿ ಯಾರು ಕಾಣ್ತಾನೇ ಇಲ್ಲ ಎಂದುಕೊಂಡು, ಅಲ್ಲೇ ಸೋಫಾದ ಮೇಲೆ ನನ್ನ ಮಗನನ್ನ ಮಲಗಿಸಿದೆ. ಅತ್ತ ನೋಡಿದೆ, ಡ್ಯಾಡಿ ಪೇಪರ್ ಓದುತ್ತಾ ಅದರಲ್ಲೇ ಮಗ್ನರಾಗಿಬಿಟ್ಟಿದ್ದಾರೆ.

ಡ್ಯಾಡಿ ಏನು ಯಾರದ್ರು ಕಳ್ಳರು ಮನೆಗೆ ಬಂದು ಏನು ಬೇಕಾದರೂ ಸಲೀಸಾಗಿ ಹೊತ್ತುಕೊಂಡು ಹೋಗಬಹುದು ಅಲ್ವಾ? ಎಂದಾಗಲೇ ಡ್ಯಾಡಿ ನನ್ನತ್ತ ನೋಡಿ ನಕ್ಕು, ಹೋ ಬಂದ್ಯಾ ಬಾ ಕೂತ್ಕೋ, ಎಂದು ಮಾತಿನ ಶಾಸ್ತ್ರ ಮಾಡಿದರು. ಯಾಕೋ ಡ್ಯಾಡಿ ಅಮ್ಮನಿದ್ದಾಗ ಇದ್ದ ತರಹ ಇಲ್ಲ. ಮಗು ಬಗ್ಗೆನೂ ಕೇಳಲಿಲ್ಲ, ಎನೂ ವಿಚಾರಿಸಲೇ ಇಲ್ಲ ಕೂತ್ಕೋ ಅನ್ನೋ ಮಾತು ಬಿಟ್ಟು ಬೇರೇನು ಇಲ್ಲ... 

ಏನು ಕರ್ಮ ನಾನು ಬಂದು ೧೫ ನಿಮಿಷ ಆದರೂ ಯಾರೂ ಕಾಣುತ್ತಿಲ್ಲ, ಡ್ಯಾಡಿ ಎಲ್ಲಿ ಅಣ್ಣ, ಅತ್ತಿಗೆ, ಮಕ್ಕಳು ಯಾರು ಕಾಣ್ತಾನೇ ಇಲ್ಲ..??

ಇಲ್ಲಮ್ಮ, ಅವರು ಎಲ್ಲಾ ಊರಿಗೆ ಹೋಗಿದ್ದಾರೆ.  ಗೌರಿ ಹಬ್ಬ ಅಲ್ವಾ ನಿನ್ನ ಅತ್ತಿಗೆನೂ ಅವಳ ತವರು ಮನೆಗೆ ಹೋದಳು??

ಓಹ್ ಹೌದಾ ಡ್ಯಾಡಿ, ಮತ್ತೆ ಅಣ್ಣ ಪೋನ್ ಮಾಡಿದಾಗ ಹೇಳಲೇ ಇಲ್ಲ. ನನ್ನ ಹಬ್ಬಕ್ಕೆ ಕರೆದ ಅಂತಾ ಬಂದೆ.

ಹೌದಾ, ಕುಸುಮ ನನಗೆ ಗೊತ್ತಿಲ್ಲ ಅವೆಲ್ಲಾ, ಬಂದಿದ್ದೀಯಲ್ಲ ಒಳ್ಳೆದಾಯ್ತು ಬಿಡು ಹೋಗಿ ಅಡುಗೆ ಏನಾದ್ರು ಇದೆಯಾ ನೋಡು ಊಟ ಮಾಡೋಣ ಒಟ್ಟಿಗೆ. ಡ್ಯಾಡಿ ಹೇಳಿದ ಕೂಡಲೇ ಕೈಕಾಲು ತೊಳೆದು ದೇವರ ಕೋಣೆಗೆ ಹೋದೆ ಪೂಜೆ ಮಾಡಿದ್ದರು . ಇನ್ನೂ ದೀಪ ಉರಿಯುತ್ತಲಿತ್ತು. ಅಮ್ಮನ ನಗುವ ಪೋಟೋಕ್ಕೆ ಮಲ್ಲಿಗೆ ಹಾರ ಚೆನ್ನಾಗಿ ಕಾಣ್ತಾ ಇತ್ತು. ಅಮ್ಮ ನೀನು ಇರಬೇಕಿತ್ತಮ್ಮ ಯಾಕೋ ನನ್ನ ಕತ್ತು ಹಿಡಿದು ದಬ್ಬಿದಂಗೆ ಆಗ್ತಾ ಇದೆ. ನನ್ನ ಅಣ್ಣ ಬಾ ಅಂತ ಕರೆದಾ, ನಾನು ಕೇಳಿದ್ದೇ ಕೂಡ, ಅತ್ತಿಗೆ ಊರಿಗೆ ಹೋಗೋಲ್ವಾ ಅಂದಿದ್ದಕ್ಕೆ "ಇಲ್ಲ ಹೋಗೋಲ್ಲಾ ಮಕ್ಕಳು ಎಲ್ಲರೂ ಮನೆನಲ್ಲೇ ಇರ್ತಾರೆ ಬಾ" ಎಂದು ಹೇಳಿದ್ದ...!! ಈಗ ನೋಡಿದ್ರೇ ನನಗೆ ಯಾಕೋ ಮುಜುಗರ ಅನ್ನುಸ್ತಾ ಇದೆ ಅಮ್ಮಾ... ಎಂದು, ಒಂದೆರಡು ಕಣ್ಣ ಹನಿ ಹಾಗಿದೆ. ತಕ್ಷಣವೇ ಅಮ್ಮನ ಪೋಟೋದಿಂದ ಬಲಗಡೆ ಹೂ ಬಿತ್ತು.... 

ಅಮ್ಮನಿಗೂ ಬೇಸರವಾಗಿತ್ತೇನೋ ಪಾಪ, ಈ ಹೂ ಮುಡಿದು ಕೋ ಎಂದು ಕೊಟ್ಟಳೇನೋ ಎಂದೆನಿಸಿ ಆ ಹೂವನ್ನು ನನ್ನ ತಲೆಗೆ ಮುಡಿದೆ. ನಾನು ತಂದಿದ್ದ ಮಲ್ಲಿಗೆ ದಿಂಡಿನ ಹೂವನ್ನು ಅಮ್ಮನ ಪೋಟೋಗೆ ಹಾಕಿದೆ. ಹಣ್ಣುಕಾಯಿ ಸಿಹಿತಿಂಡಿ ಎಲ್ಲಾ ಅಲ್ಲೇ ದೇವರ ಮುಂದಿಟ್ಟು ಕೈ ಮುಗಿದೆ.
----
ಅಡುಗೆ ಕೋಣೆಯೊಳಗೆ ಘಮಘಮಿಸೋ "ಹೋಳಿಗೆ ಹೂರಣ, ಮೈದಾ ಹಿಟ್ಟಿನ 'ಕನ್ನಕ' ಕಲೆಸಿದ್ದು ಹಾಗೇ ಇದೆ. ಸಾರು ತಯಾರಾಗಿದೆ ಆದರೆ ಅನ್ನ ಇರಲಿಲ್ಲ ಮತ್ತು ಹೋಳಿಗೆ ತಟ್ಟಿದ್ದು ಕಾಣುತ್ತಲೇ ಇಲ್ಲ ಸುತ್ತಲೂ ಕಣ್ಣಾಡಿಸಿ. ಅಕ್ಕಿ ಹುಡುಕಿ ಅನ್ನಕ್ಕೆ ತಯಾರಿಟ್ಟೆ. ಹೋಳಿಗೆ ಸ್ವಲ್ಪ ಅಪ್ಪನಿಗೂ, ನನಗೂ ಬೇಕಾಗುವಷ್ಟು ತಟ್ಟಿ ಬಿಸಿ ಬಿಸಿ ಊಟಕ್ಕೆ ತಯಾರಾಗುವ ಮುನ್ನ ಅಮ್ಮನಿಗೆ ಸ್ವಲ್ಪ ಎಡೆ ಇಟ್ಟು ಡ್ಯಾಡಿಯನ್ನು ಊಟಕ್ಕೆ ಕರೆದೆ. 

"ಮಲಗಿದ್ದ ಸುಮುಖನನ್ನು ಎಬ್ಬಿಸಲಿಲ್ಲ..!!" ಮೊದಲು ಊಟ ಮಾಡಿಬಿಡುವ ಎಂದೆನಿಸಿ ಇಬ್ಬರೂ ಊಟಕ್ಕೆ ಕುಳಿತುಕೊಂಡೆವು. ಡ್ಯಾಡಿ ಮಾತೇ ಕಡಿಮೆ, ಮೊದಲೇ ಮೌನಿ ಈಗ ಇನ್ನೂ ಕೇಳುವ ಹಾಗಿಲ್ಲ... ನಾನೇ ಮಾತಿಗೆಳೆದೆ. 

ಡ್ಯಾಡಿ ಬೆಳ್ಳಿಗ್ಗೆ ತಿಂಡಿ ಏನು ತಿಂದ್ರಿ..?

ಉಪ್ಪಿಟ್ಟು ತಿಂದೆ ಅಮ್ಮಿ (ಅಪ್ಪಾ ನನ್ನ ಪ್ರೀತಿಯಿಂದ ಹಾಗೆ ಕರೆಯೋದು), ಎಲ್ಲಿ ನಿಮ್ಮ ಯಜಮಾನರು ಬರಲೇ ಇಲ್ಲಾ...?
ಸದ್ಯ ನನ್ನ ಗಂಡ ಬರಲಿಲ್ಲ. ಮೊನ್ನೆ ಅಣ್ಣ ಕರೆದಾಗ ಅವರು ಹೇಳಿದ್ರು. "ಅಮ್ಮಾ, ಇಲ್ಲ ಏನಿಲ್ಲ ಅವರು ಏನೋ ಕಾಟಚಾರಕ್ಕೆ ಕರೆದಿರ್ತಾರೆ ನೀನು ಕುಣ್ ಕೊಂಡು ಹೋಗಬೇಡ. ಅಮ್ಮನಿಗೆ ಹೇಳ್ತೀನಿ ಇಲ್ಲೇ ಅಡುಗೆ ಮಾಡಿ ಊಟಮಾಡಿದ್ರೇ ಆಯ್ತು" ಎಂದು ಮೂಗು ಮುರುದು ಕೊಂಕಾಗಿ ಮಾತಾಡಿದ್ದರು.  

ಅಮ್ಮಿ... ಎಲ್ಲಿದ್ದೀಯಾ..!! ಯಾಕೆ ಮಾತಿಲ್ಲ ...ಎಂದಾಗಲೇ ಬೆಚ್ಚಿ ಮಾತಿಗಿಳಿದೆ.

ಇಲ್ಲ ಡ್ಯಾಡಿ ಅವರಿಗೆ ರಜೆ ಇಲ್ಲ ಅದಕ್ಕೆ ಬಂದಿಲ್ಲಾ.. ನಾವಿಬ್ಬರು ಬಂದೆವು ಅಷ್ಟೇ.. ಮೌನಕ್ಕೆ ಶರಣಾಗಿ ಕೈ ಮತ್ತು ಬಾಯಿಗೆ ಕೆಲಸ ಕೊಟ್ಟೆ. 

ಊಟ ಮುಗಿಯುವ ಹೊತ್ತಿಗೆ ಸುಮುಖ ಎದ್ದು "ಅಮ್ಮಾ ಮಾವ ಎಲ್ಲಿ" ಎಂದು ಕೇಳಲು ಶುರುವಿಟ್ಟ. ಡ್ಯಾಡಿ ಅವನನ್ನು ಸಮಾಧಾನ ಮಾಡುತ್ತ ಮಾಮ ಎಲ್ಲೋ ಹೋಗಿದ್ದಾನೆ. ನೀನು ಮಲಗಿದ್ದಲ್ಲಾ ಅದಕ್ಕೆ ಕಾದು ಸುಸ್ತಾಗಿ ಎಲ್ಲೋ ಆಚೆ ಹೋದ ಬರುತ್ತಾನೇ ಬಿಡು ಸುಮು ಎಂದರು...

ಅಮ್ಮೀ... ಸ್ವಲ್ಪ ಮಗುಗೆ ಊಟ ತೆಗೆದುಕೊಂಡು ಬಾ, ಎಂದು ಹೇಳಿ ಮಗುವನ್ನು ಆಚೆ ಓಡಾಡಿಸಲು ಹೊರಟರು. ನಾನು ಅವರನ್ನು ಹಿಂಬಾಲಿಸಿ ಆಚೆ ಮಗುವಿಗೆ ಊಟ ಮಾಡಿಸಿ ಮನೆ ಒಳಗೆ ಹೆಜ್ಜೆಯಿಡುವಾಗ..!!?? 

ಮನೆ ಬಿಕೋ ಎನ್ನುತ್ತಿದೆ, ಜೊತೆಗೆ ನನ್ನ ಮನಸ್ಸು ಕೂಡ, "ಅಮ್ಮನಿಲ್ಲದ ಮನೆ ಮನೆಯಲ್ಲ ಬಿಡು..." ಕಳೆದ ವರ್ಷ ಇದೇ ಸಮಯದಲ್ಲಿ ಅತ್ತಿಗೆ ಊರಿಗೆ ಹೋಗಿದ್ದಳು, ನಾನು ಬಂದಿದ್ದೆ ಮನೆಯೆಲ್ಲಾ ಗಲಗಲಾ ಅನ್ನುತ್ತಿತ್ತು. "ಅಮ್ಮನದೋ ದೊಡ್ಡ ಕೈ ಊರಲ್ಲಿ ಇರೋಬರೋರಿಗೆಲ್ಲ ಕರೆದು ಊಟಕ್ಕೆ ಹಾಕುವುದೇ ಕೆಲಸ". ಏ ಸುಮ್ಮನಿರು ಅಮ್ಮಿ, ನಮ್ಮ ಕೈನಲ್ಲಿ ನಡೆಯುವಾಗ ನಾಲ್ಕು ಜನಕ್ಕೆ ಅನ್ನ ಹಾಕಬೇಕು ಎಂದು ಹೇಳುತ್ತಿದ್ದ ಅಮ್ಮ ಇಂದು ಇಲ್ಲ. 

ಗೌರಿ ಹಬ್ಬ ಅಳಬಾರದು. ಅಮ್ಮನ ಮನೆಗೆ ಬಂದು "ಅತ್ತು-ಕರೆದು ಅಮ್ಮನ ಮನೆ ಏಳಿಗೆ ಆಗದ ಹಾಗೆ ಮಾಡ್ತೀಯಾ" ಎಂದು ಯಾರೋ ಹಿಂದಿನಿಂದ ಹೇಳಿದಂತಾಯ್ತು...... ಹಿಂದಿರುಗಿ ನೋಡಿದೆ ಯಾರೂ ಇಲ್ಲ.

 ಓಹ್..!! ಹೋದ ವರ್ಷ ಅಮ್ಮ ನನಗೆ ಹೇಳಿದ್ಲು, "ನಾನು ಇಲ್ಲದಿದ್ದರೂ ನೀನು ಬಂದು ಹೋಗಬೇಕು, ಇದು ನೀನು ಹುಟ್ಟಿ ಬೆಳೆದ ಮನೆ, ಅತ್ತಿಗೆ ಅನ್ನಿಸಿಕೊಂಡವಳು ಮಧ್ಯದಲ್ಲಿ ಬಂದವಳು. ನಿನಗೂ ಸ್ವಾತಂತ್ರವಿದೆ ಯಾರೂ ಇಲ್ಲದಿದ್ದರೇನು ಸೀದ ಅಡಿಗೆ ಕೋಣೆಗೆ ಹೋಗು ನಿನಗೆ ಬೇಕಾದ್ದು ತಗೋ, ಕೈಲಾದ ಕೆಲಸ ಮಾಡು, ಇದ್ದದ್ದು ಉಂಡುಟ್ಟು, ಬಂದು-ಹೋಗಿ ಮಾಡು, ಅತ್ತುಕರೆದು ಹೋಗಬೇಡ" ಎಂದಿದ್ದು, ಈಗ ಹೇಳಿದಂತಿದೆ. 

ಅಡುಗೆ ಕೋಣೆ ಎಲ್ಲಾ ಸ್ವಚ್ಚ ಮಾಡಿದೆ, ಡ್ಯಾಡಿ ಸುಮುಖನನ್ನು ಕೈಗೆ ತಂದುಕೊಟ್ಟು ಹಾಸಿಗೆ ಸೇರಿದರು... ಹತ್ತೆ ನಿಮಿಷಕ್ಕೆ ಗೊರಕೆ ಹೊಡಿತಾ ಇದ್ದಾರೆ. ನನಗೋ ಬೇಸರ, ಇರು ಆಚೆ ಮಗನನ್ನು ಆಟ ಆಡಿಸೋಣ ಎಂದು ಆಚೆ ಕುಳಿತೆ ಬಾಗಿಲು ಭದ್ರ ಮಾಡಿ. 

ಸಪ್ಪಗೆ ಕುಳಿತಿದ್ದ ನನ್ನನ್ನು ಪಕ್ಕದ ಮನೆ ಸುಮಿ ಆಂಟಿ ಕರೆದರು. ಏಹ್!! ಅಮ್ಮಿ ಯಾವಾಗ ಬಂದೋ, ಬಾ ಬಾ ನಿನ್ನ ಸ್ನೇಹಿತೆಯರು ಬಂದಿದ್ದಾರೆ ಎಂದು ಮನೆಗೆ ಎಳೆದುಕೊಂಡು ಹೋದರು.

ಆಹಾ..!! ಆ ಮನೆಯ ಸಂತೋಷ ಹೇಳತೀರದು. ಸೊಸೆ ಮಗ, ಹೆಣ್ಣುಮಕ್ಕಳು ಎಲ್ಲರೂ ತುಂಬಿ ತುಳುಕುತ್ತಿತ್ತು. 
ಏಕೆ ಸೊಸೆ ಊರಿಗೆ ಹೋಗಿಲ್ವಾ ಎಂದು ಕೇಳಿದ್ರೇ,  ಅವಳು ಹೋಗಿಲ್ಲ ಹೆಣ್ಣು ಮಕ್ಕಳು ಇಲ್ಲಿ ಬರುತ್ತಾರೆ ನಾನು ಹೇಗೆ ಹೋಗಲಿ, ಹಬ್ಬ ಮುಗಿಸಿ ಶನಿವಾರ, ಭಾನುವಾರ ಹೋಗ್ತಾಳಂತೆ ಎಂದರು. 

ನನಗೆ ಒಳಗೊಳಗೆ ಸಂಕಟವಿದ್ದರೂ ತೋರಿಸಿಕೊಳ್ಳಲಿಲ್ಲ. ಆಂಟಿ ಮಾತ್ರ ಅಂದು ಹೇಗೆ ನನ್ನನ್ನೂ ಅವರ ಮಗಳಂತೆ ನೋಡುತ್ತಿದ್ದರೋ ಇಂದು ಸಹ ಅದೇ ಭಾವನೇ. ಬೇಡವೆಂದರೂ ಬಿಸಿ ಬಿಸಿ ಹೋಳಿಗೆ ಮಾಡಿಕೊಟ್ಟರು. ಹೆಣ್ಣು ಮಕ್ಕಳು ಯಾಕೆ ಬರ್ತೀರಾ ಹಾಯಾಗಿ ಒಂದೆರಡು ದಿನ ಇರಲು ಅಲ್ಲವೇ..? ಇಂತಹದರಲ್ಲಿ ನಿನ್ನ ಅತ್ತಿಗೆ ಊರಿಗೆ ಹೋಗಿದ್ದಾಳೆ ನೋಡು, ಬೆಳಿಗ್ಗೆ ತಾನೇ ಕೇಳಿದೆ ನೀನು ಬರ್ತಿದ್ದೀಯ ಅಂತಾ... ಅದಕ್ಕೆ ಅವಳು... "ಕರೆದ್ವಿ ಕುಸುಮನೇ ಬರೋಲ್ಲಾ" ಎಂದಳು ಅದಕ್ಕೆ ನಾನು ಊರಿಗೆ ಹೋಗ್ತೀನಿ ಅಂದಳು. ನೀನು ನೋಡಿದರೆ ಬಂದಿದ್ದೀಯಾ..!!?

ಆಂಟಿ, ಅವರಿಗೂ ತವರು ಮನೆ ಆಸೆ ಅಲ್ವಾ..? ಹೋಗಿಬರಲಿ ಎಂದು, ನಾನು ಬರೋಲ್ಲಾ ಎಂದು ಹೇಳಿದ್ದೆ. ನನ್ನ ಮೇಲೆ ನಾನೇ ಸುಳ್ಳು ಹೇಳುತ್ತಿದ್ದು ಆಂಟಿಗೆ ಅರಿವಿಗೆ ಬಂತು. 

ಏನು ತವರು ಮನೆ ಅವಳು ಕಳೆದವಾರ ಎಲ್ಲಾ ಅಲ್ಲೇ ಇದ್ದಳು, ಮಕ್ಕಳು ರಜೆ ಬಂದರೇ ಅಲ್ಲೇ ಇರ್ತಾಳೆ ನೀನಂತು ಕೆಲಸಕ್ಕೆ ಹೋಗುವವಳು ಏನೋ ಎಂದೋ ಬಂದು ಹೋದರೆ ಅವಳಿಗೇನು ತೊಂದರೆ. ಅವಳಿಗೂ ಅಣ್ಣನೋ ತಮ್ಮನೋ ಇರಬೇಕಿತ್ತು ಗೊತ್ತಾಗೋದು ೫ ಜನ ಹೆಣ್ಣು ಮಕ್ಕಳ ಜೊತೆ ಹುಟ್ಟಿ ಅವರದೇ ಪ್ರಪಂಚ. ನಿನ್ನ ನೋವು ಅವಳಿಗೇನು ಗೊತ್ತಾಗುತ್ತೆ. ಬರಿ ನಾಟಕದ ಮಾತುಗಳೇ ಅವಳದು. ನೀನು ಇಷ್ಟು ವಿದ್ಯಾವಂತೆ ದೇಶಗಳನ್ನು ಸುತ್ತಿ ಬಂದಿದ್ದೀಯಾ ಸ್ವಲ್ಪವೂ ಅಹಂಕಾರ ಇಲ್ಲ. ನಿನ್ನ ನಾದಿನಿಯರನ್ನು ದೀಪಾವಳಿಗೆ ಕರೆದು ಹೇಗೆ ಉಪಚಾರ ಮಾಡ್ತೀಯಾ ಆ ದೇವರು ನಿನ್ಗೆ ಯಾಕೆ ಹಿಂಗೆ ಮಾಡಿದ ಎಂದು ದೇವರನ್ನು ಶಪಿಸುತ್ತಿದ್ದವರನ್ನು ನಾನೇ ಮೊಟುಕುಗೊಳಿಸಿದೆ ಇನ್ನೊಂದು ಹೋಳಿಗೆ ಕೇಳುವ ಮೂಲಕ.

ಇಷ್ಟವಾಯ್ತಾ ಒಬ್ಬಟ್ಟು ತಿನ್ನು ಮಗಳೇ... ಎಂದು ಉಪಚರಿಸಿ... ನಂತರ ಗೌರಿ ಪೂಜೆ ಮಾಡಿಸಿ ನನಗೆ ಅರಿಶಿನ ಕುಂಕುಮ ಬಾಗಿನ ಕೊಟ್ಟು ಸೀರೆ, ಹಣ ಕೊಟ್ಟರು. ನನ್ನ ಕಣ್ಣುಗಳು ತಡೆಯದೆ ಬಾಗಿನದ ಮೇಲೆ ತೊಟ್ಟುಗಳನ್ನು ಚುಮುಕಿಸಿದವು. ಎಲ್ಲರು ನನ್ನನ್ನೇ ಸಮಾಧಾನ ಮಾಡಿ "ನೋಡು ಇನ್ನು ಮೇಲೆ ನಮ್ಮ ಮನೆ ಮಗಳು ನೀನು ಅವರಂತೆ ನೀನು ಬಂದು ಹೋಗಬೇಕು". ನಿನ್ನ ತಾಯಿ ನಾನೇ ಎಂದುಕೋ’, ನಿನ್ನಮ್ಮ ಬದುಕಿರುವಾಗ ಎಷ್ಟು ಜನರನ್ನು ಸಾಕಿ ಸಲಹಿದ್ದಾಳೆ. ನೀನು ಒಂದು ದಿನ ಬಂದು ಹೋದರೆ ನೋಡಿಕೊಳ್ಳುವವರಿಲ್ಲ. ನಿನ್ನ ಅತ್ತಿಗೆಯದು ಯಾವಾಗಲು ಕೋಣೆಯಲಿದ್ದು ಅದೇ ಬುದ್ದಿ. "ಮಕ್ಕಳಿಗೆ ಗಟ್ಟಿ ಮೊಸರನ್ನು ಕೊಡಲು ಅಕ್ಕಿಡಬ್ಬದಲ್ಲೋ ಪಬ್ಬದಲ್ಲೋ ಮುಚ್ಚಿಟ್ಟು ಆ ವಯಸ್ಸಾದ ಅಜ್ಜಿತಾತನಿಗೆ ನೀರು ಸುರಿಯುತ್ತಿದ್ದವಳು" ನಾನೇ ಕಣ್ಣಾರೇ ನೋಡಿದ್ದೀನಿ. ಮುಚ್ಚುಮರೆಯ ಜೀವನ ಅವಳದು. ನೀನು ತಲೆ ಕೆಡಿಸಿಕೊಳ್ಳಬೇಡ ಅವಳಿಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರಲ್ಲ ಗೊತ್ತಾಗುತ್ತದೆ ಮುಂದೆ. 

ಆಂಟಿಗೆ ನನ್ನ ಮೇಲಿನ ಪ್ರೀತಿಗೆ ಇಷ್ಟೇಲ್ಲಾ ಮಾತು, ಇರಲಿ ಆಂಟಿ ಅವರ ಜೀವನ ಅವರದು ನಾನು ಹುಟ್ಟಿದಿಂದ ಅವರೇ ಇದ್ದರೇ. ನಾನು ಹುಟ್ಟಿದ ಮನೆ ನಾನು ಬಂದು ಹೋಗ್ತೀನಿ ಬೇರೆಯವರ ಅಪ್ಪಣೆ, ಉಪಚಾರ ನನಗೇಕೆ. ನಾನು ಇಂಜಿನಿಯರ್ ಹುಡುಗಿಯಾಗಿ ಅವರಂತೆ ಮಾತನಾಡಲಾಗದು. ವಾಸ್ತವ ಬದುಕನ್ನು ಅರ್ಥೈಸಿಕೊಳ್ಳಬೇಕು. ಎಲ್ಲರಿಗೂ ಅವರದೇ ಆಸೆ-ಆಕಾಂಕ್ಷೆಗಳಿರುತ್ತವೆ. ಅವರ ತವರಿಗೆ ಅವರು ಹೋಗಲು ನಾವು ಯಾಕೆ ಅಡ್ಡವಾಗಬೇಕು. ಎಂದು ನನ್ನನ್ನೇ ನಾನು ಸಮಾಧಾನಿಸಿಕೊಂಡು ಮಗನನ್ನು ಕರೆದುಕೊಂಡು ಬಂದೆ. 
---
ಅಪ್ಪಾ ಇನ್ನೂ ಮಲಗಿದ್ದಾರೆ ಆಗಲೇ ಸಂಜೆ ೬ ಗಂಟೆ, ಅಣ್ಣನೂ ಕರೆಮಾಡಲಿಲ್ಲ, ಅತ್ತಿಗೆಯೂ ಕರೆಮಾಡಲಿಲ್ಲ ನಾನು ಬಂದಿದ್ದಕ್ಕೆ ಸರಿಹೋಯ್ತು ಇಲ್ಲದಿದ್ದರೆ ಡ್ಯಾಡಿ ಏನು ಮಾಡ್ಕೋತಾ ಇದ್ರು ಊಟಕ್ಕೆ. ಎಂದೂ ಅಪ್ಪ ಅಡುಗೆ ಮನೆಗೆ ಬಂದವರಲ್ಲಾ... ದೇವರೆ ಅಪ್ಪನನ್ನು ಅಮ್ಮನೊಟ್ಟಿಗೆ ಬೇಗ ಕರೆದುಕೊಂಡುಬಿಡಪ್ಪಾ ಎಂದು ಬೇಡಿಕೊಂಡೆ. 

ದೇವರ ದೀಪ ಹಚ್ಚುವ ಸಮಯ ಡ್ಯಾಡಿಯನ್ನು ಎಬ್ಬಿಸಿ ಕಾಫಿ ಮಾಡಿಕೊಟ್ಟು, ದೇವರ ಪೂಜೆ ಮಾಡಿದೆ. ಸುಮುಖನದು ಅದೇ ಗಲಾಟೆ ಮಾಮ ಎಲ್ಲಿ ಎಂದು. ಅವನಿಗೆ ಕರೆ ಮಾಡಿದ್ರೆ ನಾಟ್ ರೀಚಬಲ್ ಅಂತಾ ಬರ್ತಾ ಇದೇ ಅತ್ತಿಗೆ ಊರೋ ಒಂದು ರೀತಿ ಕಾಡು ಇದ್ದಹಾಗೆ ಅಲ್ಲಿ ಸುತ್ತಮುತ್ತ ಮನೆಗಳೇ ಇಲ್ಲ ದೂರದಲ್ಲೆಲ್ಲೋ ಒಂದೊಂದೆ ಮನೆಗಳು ಇರುತ್ತವೆ... ಸಿಗ್ನಲ್ ಸಿಗೋದು ಕಷ್ಟ.

ಸರಿ ಸುಮುಖ ನಾಳೆ ಮಾಮ ಬರ್ತಾನೆ ಎಂದೇಳಿ ಅವನನ್ನು ಪಕ್ಕದ ಮನೆ ಮಕ್ಕಳ ಜೊತೆ ಆಟಕ್ಕೆ ಬಿಟ್ಟೆ. ಡ್ಯಾಡಿಯ ಹತ್ತಿರ ಮಾತನಾಡಬೇಕಾಗಿತ್ತು.

ಡ್ಯಾಡಿ ಯಾಕಿಷ್ಟು ಮೌನ, ನಾನು ಬರ್ತೀನಿ ಅಂದ್ರು ಊರಿಗೆ ಹೊರಟಿದ್ದಾರೆ ಅಣ್ಣ, ಅತ್ತಿಗೆ ಇದು ಒಂದು ರೀತಿ ಅವಮಾನ ಮಾಡಿದ ಹಾಗೆ ಅಲ್ವಾ ನನಗೆ?, ನನ್ನ ಕರೆಯದಿದ್ದರೆ ಬರುತ್ತಲೇ ಇರಲಿಲ್ಲ... ಕರೆದು ಮಂಗಳಾರತಿ ಮಾಡಿಸಿದ್ದಂತಾಯ್ತು... ಎಂದು ಅಳು ಮುಂದುಮಾಡಿದೆ.

ಡ್ಯಾಡಿಗೆ ಬೇಸರವಾಯ್ತೋ ಬಿಡ್ತೋ ಗೊತ್ತಿಲ್ಲ, ಇಂತಹವು ಜೀವನದಲ್ಲಿ ಬೇಜಾನ್ ಬರುತ್ತೆ ಅಮ್ಮಿ, ನೀನು ಎದುರಿಸಿ ನಿಲ್ಲಬೇಕು, ನೀನು ಮೊದಲೇ ಇಂಜಿನಿಯರ್ ಇಂತಹವು ಹೇಳಬೇಕ??

ಇಂಜಿನಿಯರ್ ಆದರೇನು ಮನಸ್ಸು ಇರೋಲ್ವಾ ನಮಗೆ? ಮೌನವೇ ಎಲ್ಲಕ್ಕೂ ಉತ್ತರವೆಂದು ಸುಮ್ಮನಾದೆ.

ರಾತ್ರಿ ಕಳೆದು ಬೆಳಗಾಯಿತು ಗಣೇಶನ ಹಬ್ಬ ಬಂದಿದೆ. ಅಣ್ಣ ಬಂದರು ಒಂದೇ, ಬರದಿದ್ದರೂ ಒಂದೇ ಎಂದೆನಿಸಿತು. ಸ್ನಾನ ಪೂಜೆ ಮುಗಿಸಿ ಸಿಹಿ ಕಡುಬು ಮಾಡಿ ನಾವು ಮೂವರು ತಿಂದೆವು. ನಾನು ನೆನ್ನೆಯೇ ಬೇಸರ ಮಾಡಿಕೊಂಡು ಹೊರಟು ಹೋಗಿದ್ದರೆ ಡ್ಯಾಡಿಗೆ ಇಂದಿನ ಊಟದ ವ್ಯವಸ್ಥೆ ಏನಾಗಬೇಕಿತ್ತು. ಮೊದಲೇ ಒಂದು ಮೂಲೆಯಲ್ಲಿ ಕೂತರೆ ಮುಗಿಯಿತು, ಎದ್ದು ತಿನ್ನುವ ಆಸಾಮಿಯೂ ಅಲ್ಲ.

ಮಧ್ಯಾಹ್ನದ ಊಟ ಮುಗಿಸಿ ಡ್ಯಾಡಿಗೆ ಹೇಳಿ ಹೊರಡೋಣ ಎಂದುಕೊಂಡೇ ಆದರೆ ಯಾಕೋ ಮನಸ್ಸು ಬೇಡವೆನಿಸಿತು. ಗಂಡನ ಮನೆಗೆ ಹೊರಟು ಹೋದರೆ "ಇಷ್ಟು ಬೇಗ ಬಿಟ್ಟುಬಿಟ್ಟಿತ ಅಪ್ಪನ ಮನೆ" ಎಂದಾರು, ಅಮ್ಮ ಇಲ್ಲ ಅಂತಾ ಆಗಲೇ ಅವರು ೨ನೇ  ದಿನಕ್ಕೆ ಮುಗಿಸಿ ಕಳಿಸಿದ್ರಾ ಎಂದು ಚುಚ್ಚು ಮಾತು ಆಡಿಯಾರು ಎಂದೆನಿಸಿತು. ಇಂದು ರಾತ್ರಿ ಕಳೆದರೆ ನಾಳೆ ಆಫೀಸ್ ಇರುತ್ತಲ್ಲಾ ಕಾರಣ ಕೊಡಬಹುದೆಂದು ಸುಮ್ಮನಾದೆ ಅಂದು ರಾತ್ರಿಯೂ ಬಾರದ ಅಣ್ಣನ ಬಗ್ಗೆ ಯಾವ ಭಾವವೂ ತುಂಬಿರಲಿಲ್ಲ.

ಬಂದ ಕೆಲಸ ಮುಗಿದಮೇಲೆ ನಮ್ಮದೇನು ನಮ್ಮ ನಮ್ಮ ಊರಿಗೆ ಹೊರಡಲೇ ಬೇಕಲ್ಲವೇ.'ಕೊಟ್ಟ ಹೆಣ್ಣು ಕುಲದಿಂದ ಹೊರಗೆ'. ನಾವು ಹುಟ್ಟಿ ಬೆಳೆದ ಮನೆ ನಮಗೊಂದು ದಿನ ಅನಾಥ ಪ್ರಜ್ಞೆ ಮೂಡಿಸುತ್ತದೆ ಎಂದರೆ ಇದೇನಾ..? "ಹೆಣ್ಣೇ ಏಕೆ ಬೇರೆ ಮನೆಗೆ ಹೋಗಬೇಕು, ಗಂಡು ನಾವಿರುವೆಡೆ ಇರಲು ಆಗದೆ. ನಮ್ಮ ವೇದನೆ ಅವನಿಗೂ ಗೊತ್ತಾಗಲಿ" ಏನೋ ಹುಚ್ಚು ಮನಸ್ಸು ತಡೆಯಲಾರದ ವೇದನೆ. ಅಮ್ಮ ತುಂಬಾ ನೆನಪಾಗ್ತಾಳೆ. 

ಪ್ರತಿ ಗೌರಿ ಹಬ್ಬ ಎಲ್ಲಾ ಮುಗಿಸಿ ಹೊರಡುವ ಮುನ್ನ ಅಮ್ಮ, ನಿನಗೆ ಮಲ್ಲಿಗೆ ಹೂವೆಂದರೆ ತುಂಬಾ ಇಷ್ಟ, ನಿನ್ನ ಉದ್ದನೆ ಕೂದಲಿಗೆ ೩ ಮೊಳ ಹೂ ಮುಡಿದುಕೋ ಚೆನ್ನಾಗಿ ಕಾಣುತ್ತೆ, ಅಮ್ಮಿ..!! ಅದೇನೋ ಆಫೀಸ್ ಗೆ ಫ್ಯಾಂಟ್ ಶರ್ಟ್ ಹಾಕ್ತೀಯ ಅದಕ್ಕೇನೋ ಪುಟ್ಟ ಬೊಟ್ಟು ಇಡುತ್ತಿದ್ದೆ. ಈಗೇನು ಸೀರೆ ಉಟ್ಟುಕೊಂಡಿದ್ದೀಯಾ, ಸ್ವಲ್ಪ ದೊಡ್ಡದಾದ ಬೊಟ್ಟು ಇಡಬಾರದ? ಹೋಗು ಅಲ್ಲೇ ನನ್ನ ಸ್ಟಿಕ್ಕರ್ ಇದೆ ಇಟ್ಟು ಕೋ, ಹಾ ಆಮೇಲೆ ತಗೋ ಈ ಸೀರೆ ನಿನಗೋಸ್ಕರ ಗೌರಿ ಹಬ್ಬಕ್ಕೆ ಅಂತಾ ತಂದಿದ್ದು, ರೇಷ್ಮೇ ಸೀರೆ ಹೊಸದಾಗಿ ಬಂದಿರೋ ಟೆಂಪಲ್ ಬಾರ್ಡರ್ ಕಣೆ... ಇದೇ ಸೀರೆಯಲ್ಲೇ ನಿಮ್ಮ ಅತ್ತೆ ಮನೆಗೆ ಹೋಗಬೇಕು. ಅತ್ತೆ ಮನೆಯವರು ಇವಳು ತವರು ಮನೆಯಿಂದ ಏನು ತಂದ್ಲು, ಹೆಂಗೆ ಬಂದ್ಲು ಅಂತಾ ನೋಡ್ತಾರೆ. ನಿನ್ನ "ತವರು ಏನು ನಿನಗೆ ಕೊರತೆ ಮಾಡಿಲ್ಲ" ಅನ್ನೋದು ಅವರಿಗೆ ಗೊತ್ತಾಗುತ್ತೆ. ಇದು ಬರಿ ತೋರಿಸಿಕೊಳ್ಳೋಕ್ಕಲ್ಲ ಅಮ್ಮಿ, ಇದರಲ್ಲಿ ನಿಮ್ಮ ಅಪ್ಪ ಅಮ್ಮನ ಪ್ರೀತಿನೂ ಇದೆ. ನಾನು ಸತ್ತರೂ ನಿಮ್ಮ ಅಪ್ಪ ಇರೋವರೆಗೂ ನಿನಗೆ ರೇಷ್ಮೆ ಸೀರೆನೇ ಕೊಡ್ಸಿಬೇಕು ಅಂತಾ ಹೇಳಿದ್ದೀನಿ, ಹಂಗೆ ನಿಮ್ಮ ಅಣ್ಣನಿಗೂ ಹೇಳಿದ್ದೀನಿ. ನಾನು ಇಲ್ಲಾ ಅಂದ್ರು ಏನು ಕೊರತೆ ಮಾಡೋಲ್ವೆ ನಿನ್ನ ಅಣ್ಣ ಹೆಣ್ಣುಗಳ್ಳು... ಹುಫ್..!! ಅಮ್ಮ ಏನೆಲ್ಲಾ ಬಡಬಡಾಯಿಸಿದ್ಲು ಅವತ್ತು ಈಗೇನಾಯ್ತು..? ಸದ್ಯ ನನಗೆ ಅವನೇನು ಕೊಡಿಸುವುದು ಬೇಡ ಒಂದು ಫೋನ್ ಮಾಡಿ ಮಾತಾಡಲೂ ಇಲ್ಲವೇ? 

ದೇಹದ ಭಾರಕ್ಕಿಂತ ಮನಸ್ಸಿನ ಭಾರವೇ ಹೆಚ್ಚು ಎನ್ನಿಸಲಿಕ್ಕೆ ಶುರುವಾಯಿತು. ಮಗನನ್ನು ತಯಾರು ಮಾಡಿದೆ ಅವನದು "ಮಾಮ ಎಲ್ಲಿ?" ಎಂಬ ಪ್ರಶ್ನೆ ಮುಗಿಯಲಿಲ್ಲ... ಇನ್ನು ಮನೆಗೆ ಹೋದರೆ ನನ್ನ ಅತ್ತೆ ಮೊಮ್ಮಗನಲ್ಲಿ ವಿಷಯ ಸಂಗ್ರಹ ಮಾಡುತ್ತಾರೆ. ಇನ್ನು ಮುಗಿದ ಕಥೆ ನಾನು ಆಟಿಕೆಯ ವಸ್ತು ಆಗುವುದೂ ಖಂಡಿತಾ..!! ಸುಮುಖನಿಗೆ ಮುದ್ದು ಮಾಡಿ ನೋಡು ಮಾಮ ಬಂದಿದ್ದಾ ನೀನು ಎದ್ದೇಳಲೇ ಇಲ್ಲ, ನಾಳೆ ಮತ್ತೆ ಬರೋಣ ಅಷ್ಟರಲ್ಲಿ ಮಾಮ ಕೆಲಸ ಮುಗ್ಸಿ ಬರ್ತಾನಂತೆ ಈಗ ನಮ್ಮ ಮನೆಗೆ ಹೋಗೋಣ ಎಂದು ಸುಳ್ಳು ಸಮಜಾಯಿಸಿ ಕೊಟ್ಟಿದ್ದು ಅವನಿಗೆ ಖುಷಿ ಕೊಟ್ಟಿತು. ಡ್ಯಾಡಿ ಮತ್ತದೇ ನ್ಯೂಸ್ ಪೇಪರ್ ಗೆ ಮೊರೆ ಹೋಗಿದ್ದಾರೆ. ಮಾಡಿಟ್ಟಿದ್ದ ಊಟವನ್ನು ಮಧ್ಯಾಹ್ನಕ್ಕೆ ತಿಂದುಬಿಡಿ ನನಗೆ ಆಫೀಸ್ ಇದೆ ಹೊರಡ್ತೀನಿ ಎಂದು  ಹೇಳಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೊರಬಂದೆ. "ಅಮ್ಮೀ, ಹೇಗೆ ಹೋಗ್ತೀಯಾ" ಎಂದು ಕೇಳಿದರು ನನ್ನ ಕಣ್ಣಾಲೆ ತುಂಬಿತ್ತು ಮಾತು ಹೊರಡಲಿಲ್ಲ... ಸಾವರಿಸಿಕೊಂಡು "ಬಸ್ ಸ್ಟಾಪ್ ಗೆ ಹೋದರೆ ಆಟೋ ಸಿಗುತ್ತೆ" ಬರ್ಲಾ ಬಾಯ್ ಎಂದೇಳಿ ಗೇಟ್ ದಾಟಿ ಹಿಂದುರಿಗಿದೆ ಬಾಗಿಲವರೆಗೂ ಬಾರದ ಅಪ್ಪನಿಗಾಗಿ ಕಣ್ಣು ಹುಡುಕುತ್ತಿತ್ತು... ದುಃಖ ದುಮ್ಮಿಕ್ಕಿ ಬರುತ್ತಿತ್ತು. 

ಸೊಂಟದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ನೋಡುತ್ತಲಿದ್ದ ಕೂಸು, ಕೈಯಲ್ಲಿ ಬ್ಯಾಗ್ ಹೊತ್ತು ನಡೆವಾಗ ಹೆಜ್ಜೆಗಳು ನಿಧಾನಗತಿಗೆ ಇಳಿದವು. ಸುತ್ತಲೂ ಕಣ್ಣಾಡಿಸಿದೆ ಯಾವುದಾದರು ಬಟ್ಟೆ ಅಂಗಡಿ ಕಾಣುವುದೇನೋ ಎಂದು, ಅಮ್ಮ ಅಂದು ಹೇಳಿದ್ದಳು "ತವರು ಮನೆಯ ಹೆಸರು ಕುಂದಿಸಬಾರದು. ಕೆಲವೊಮ್ಮೆ ನಾವು ಕೊಡುವ ವಸ್ತುಗಳು ನಿನ್ನ ಗಂಡನ ಮನೆಯಲ್ಲಿ ಹೆಸರು ತರುತ್ತವೆ. ಜೊತೆಗೆ ನಿನ್ನ ಮರ್ಯಾದೆ ಉಳಿಸುತ್ತದೆ" ಯಾಕೋ ಒಂದು ಕಡೆ ನಿಜ ಎನ್ನಿಸುತ್ತಿದೆ ಇನ್ನೊಂದು ಕಡೆ ಇವೆಲ್ಲ ಗೊಡ್ಡು ಸಂಪ್ರದಾಯ ಎನ್ನಿಸುತ್ತಿದೆ. ಆದರೂ ನನ್ನ ಅತ್ತೆ ಸ್ವಲ್ಪ ಸಂಕುಚಿತ ಮನೋಭಾವ. ನನ್ನ ಮನೆಯನ್ನು ಬೆರಳು ಮಾಡಿ ತೋರಿಸಬಾರದು ಎಂದೆನಿಸುತ್ತಿತ್ತು. ಕೈಯಲ್ಲಿ ಹಣವಿಲ್ಲ ಅಷ್ಟು ಸಂಪಾದನೆ ಮಾಡುತ್ತೇನೆ ಹಣವಿಲ್ಲ ಎಂದು ಹೇಳಿಕೊಳ್ಳೊಕ್ಕೆ ಆಗುತ್ತಾ?, ಯಾರಾದರು ಕೇಳಿದರೆ ನಕ್ಕಾರು ಎಂದು ಒಳಮನಸ್ಸು ನಗುತ್ತಿತ್ತು. ನಿಜ, "ನನ್ನ ಸಂಬಳ ಎಲ್ಲವೂ ನನ್ನವರಿಗೆ ಕೊಟ್ಟು ಬಿಡುವೆ ನನಗೆ ಏನಾದರು ಬೇಕೆಂದರೆ ಅವರೇ ಕೊಡಿಸುತ್ತಾರೆ". ನನಗೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಅದರ ಅರಿವೂ ಆಗಿರಲಿಲ್ಲ, ಯಾಕೆ ಅಂದರೆ ಅಮ್ಮನೇ ಕಾರಣ ಬಂದಾಗಲೆಲ್ಲಾ ಕೈಯಲ್ಲಿಷ್ಟು ದುಡ್ಡು, ಹೂ ಹಣ್ಣು ತಿಂಡಿಗಳು ಎಂದೇಳಿ ಕಳುಹಿಸೋಳು ಈಗ ಬರಿಗೈ ಹೇಗೆ ಹೋಗೋದು.... ಮೊನ್ನೆ ನನ್ನವರು ಕೊಟ್ಟಿದ್ದು ೨೦೦ ರುಪಾಯಿ ಆಟೋದಲ್ಲಿ ಹೋಗಿಬರಲು ಸಾಕೆಂದಿದ್ದರು ಅದರಲ್ಲೇ ಹೂಹಣ್ಣು ಬರುವಾಗ ತಂದಿದ್ದೆ ಇನ್ನು ೫೦ ರುಪಾಯಿ ಇದೆ ಅದು ಆಟೋಗೆ ಆಗುತ್ತೆ. ಏನು ಮಾಡಲಿ ಎಂದು ನನ್ನ ಪರ್ಸ್ ಹುಡುಕಾಡಿದೆ. ಬ್ಯಾಗ್ ಹುಡುಕಿದೆ ಎಲ್ಲಾದರು ಮರೆತು ಇಟ್ಟ ಹಣವೇನಾದರೂ ಇದೆಯೇ ಎಂದು ತಕ್ಷಣಕ್ಕೆ ೩ ಸಾವಿರ ರುಪಾಯಿ ಕಾಣಿಸಿತು. ಓಹ್..!! ಅದೇ ಆ ಪಕ್ಕದ ಮನೆ ಸುಮಿ ಆಂಟಿ ಕೊಟ್ಟಿದ್ದ ದುಡ್ಡು. ಅಬ್ಬಾ ನನ್ನ ಪುಣ್ಯಕ್ಕೆ ಈ ಹಣ ಸರಿ ಸಮಯಕ್ಕೆ ಬಂದಿದೆ. ನಿಜ ನಮಗೂ ನಮ್ಮದೂ ಎಂಬ ಆಸೆ ಇರುತ್ತೆ ಗಂಡನಿಗೂ ಹೇಳಲಾರದಂತ ಖರ್ಚುಗಳು ಇರುತ್ತವೆ ದುಡ್ಡಿನ ಅವಶ್ಯಕತೆ ಇದೆ ಎಂದೆನಿಸಿತು. 

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಪಕ್ಕದ ಮನೆಯವರು ಕುಂಕುಮಕ್ಕೆ ದುಡ್ಡು ಕೊಟ್ಟಿದ್ದರಲ್ಲಿ ಹೂ ಹಣ್ಣು, ಮಗನಿಗೆ ಒಂದು ಜೊತೆ ಬಟ್ಟೆ, ಸಾವಿರ ರುಪಾಯಿಯ ಒಂದು ಕಾಟನ್ ಸೀರೆ ನನಗಾಗಿ ತೆಗೆದುಕೊಂಡು ಹೊರ ಬಂದಾಗ ಏನೋ ನಿರಾಳ ಮನಸ್ಸು. ಅಲ್ಲೇ ಇದ್ದ ಆಟೋದವರನ್ನು ಕರೆದು ಬನಶಂಕರಿಗೆ ಬರುವಿರೆಂದು ಕೇಳಿ ಮನೆಕಡೆಗೆ ಬಂದೆ. ಮುಖ ಬಾಡಿರಲಿಲ್ಲ ನಗುವನ್ನು ತುಂಬಿಕೊಂಡಿದ್ದೆ ಅತ್ತೆಗೆ ನಗುವಿಂದಲೇ ಬ್ಯಾಗ್ ನಲ್ಲಿದ್ದ ಹಣ್ಣು ಹೂ ಅವರ ಕೈಗಿತ್ತು ಒಳ ನಡೆಯುವಷ್ಟರಲ್ಲಿ ಮೊಮ್ಮಗನ ಯೋಗಕ್ಷೇಮದತ್ತ ಹೊರಟ ಅತ್ತೆ, "ಮಾಮ ಅತ್ತೆ ಏನಂದರೋ, ಏನು ಹಬ್ಬ ಜೋರಾಯಿತಾ" ಎನ್ನುವಷ್ಟರಲ್ಲಿ ನನ್ನ ಕೂಸು ಹೂ..ನಜ್ಜಿ ಸಕ್ಕತ್ತಾಗಿತ್ತು ಗಣೇಶ, ಗೌರಿ ಎಲ್ಲಾ ಇದ್ರು ಸ್ವೀಟುಗಳು ಎಷ್ಟೋಂದು ಇತ್ತು, ಹುಡುಗರು ಎಷ್ಟೋಂದು ಜನ ಇದ್ರು ಆಟ ಆಡಿದೆ ಚೆನ್ನಾಗಿ ಎಂದು ಹುಮ್ಮಸ್ಸಿನಿಂದ ಹೇಳುತ್ತಿದ್ದ. ಅವನು ಆಟವಾಡಿ ಕುಣಿದಿದ್ದು ಪಕ್ಕದ ಮನೆಯವರೊಂದಿಗೆ. ಆ ಕೂಸಿನ ಮಾತು ನನ್ನ ತವರನ್ನೂ ಉಳಿಸಿತ್ತು ಒಂದೆಡೆ ಅತ್ತೆಗೂ ಖುಷಿ ತರಿಸಿತ್ತು ಮಗುವಿನ ಮಾತಲ್ಲಿ.

'ಮನೆಗೆ ಬಂದರೂ ಅಣ್ಣನದು ಒಂದು ಕರೆ ಇಲ್ಲ, ಡ್ಯಾಡಿಯೋ ದೇಹವೊಂದು ಇದೆ ಆತ್ಮವೆಲ್ಲಾ ಅಮ್ಮನಲ್ಲಿಗೆ ಹೊರಟು ಬಿಟ್ಟಿದೆ'. ಏನೇ ಆಗಲಿ, ಅಮ್ಮನ ಕರುಳು ಬಾದಿಸುವುದು ಮಕ್ಕಳಿಗೆ ಮಾತ್ರ ತಂದೆಯ ಭಾವನೆಗಳೆಲ್ಲವೂ ಅವರಲ್ಲೇ ಹುದುಗಿಬಿಡುತ್ತವೆ  "ಭಾವುಕತೆ  ಇರಬೇಕು ಸಂಬಂಧಗಳನ್ನ ಹಿಡಿದಿಡಲು" ಎಂದೆನಿಸುತ್ತದೆ. ತವರಿನಲ್ಲಿ ತಾಯಿ ಇರುವವರೆಗೂ ಬಣ್ಣ ತುಂಬಿ ನಗುತ್ತಿರುತಿತ್ತು. ತಾಯಿಯ ನಂತರದ ದಿನಗಳು ತುಂಬಿದ ಬಣ್ಣಗಳು ಮಾಸುತ್ತಾ ಹೋಗುತ್ತದೆ. ಎಲ್ಲ ಬೇಸರಗಳ ಬದಿಗಿತ್ತು ತೋರಿಕೆಯ ನಗುವಿದ್ದರೂ ಒಳಗೆಲ್ಲೋ ಅಮ್ಮನ ಇಲ್ಲದಿರುವಿಕೆ ಸಹಿಸಿಕೊಳ್ಳಲಾಗುತ್ತಿಲ್ಲ. "ಅಣ್ಣನ ಮನೆಗೆ ತಿಲಾಂಜಲಿ ಇಡಲೂ ಆಗುತ್ತಿಲ್ಲ, ಅದು ನನ್ನ ತವರು" ಎಂದು ಮನಸ್ಸು ಕೂಗಿ ಹೇಳುತ್ತಿದೆ. ಇತ್ತ ಎಫ್ ಎಂ ನಲ್ಲಿ ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ ... ಎಂಬ ಹಾಡು ನನಗೋಸ್ಕರ ಹಾಕಿರುವ ಹಾಗಿದೆ ಎಂದೆನಿಸ್ತಾ ಇದೆ. 

ಅಮ್ಮನಿಲ್ಲದ ಮನೆಯು
ಮಬ್ಬು ಕವಿದಿದೆ

ಬೆಳಕು ಹರಿಸುವ
ದೀಪಕೆ ಕಾದು ಕುಳಿತಿದೆ

ಹಗಲೋ ಇರುಳೋ
ಎರಡು ಒಂದೇ ಎನಿಸಿದೆ
ಅವಳಿಲ್ಲದ ಮನೆಯು 
ಬಿಕೋ ಎನುತಿದೆ...!!!

ಪೋಟೋ ಕೃಪೆ : ಮನು ವಚನ್

ಇದು ನಾ ಕಂಡ ಪರಿಚಿತಳ ಕಥೆ... 

Monday, July 29, 2013

ಇದು ಯಾರ ಲಿಖಿತಾ..!!!???


ಸಾರ್ ನಮಸ್ಕಾರ, ಹೇಗಿದ್ದೀರಿ ನಿನ್ನೆ ರಾತ್ರಿ ಊರಿಂದ ಬಂದೆ ಸಾರ್...

ತಗೊಳ್ಳಿ ಇದು ನಮ್ಮ ಕೇರಳ ಚಿಪ್ಸ್ ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ.

ಓಹ್..!! ಥ್ಯಾಂಕ್ಸ್ ಶಿವ ಏನಕ್ಕೆ ಇದೆಲ್ಲಾ ತರೋಕ್ಕೆ ಹೋದೆ.. ಮತ್ತೆ ನಿನ್ನ ಹೆಂಡತಿಗೆ ಆಪರೇಷನ್ ಎಲ್ಲಾ ಆಯ್ತಾ..? ಹೇಗಿದ್ದಾರೆ ಈಗ .. ??

ಹೂ ಸರ್ ಚೆನ್ನಾಗಿದ್ದಾರೆ. ನೀವು ದೇವರಿದ್ದಂಗೆ, ನಾನು ಇದ್ದಕ್ಕಿದ್ದಂತೆ ಊರಿಗೆ ಹೋಗ್ಬೇಕಾದ್ರೆ ನನಗೆ ಹಣದ ಸಹಾಯ ಮಾಡಿದ್ರಿ ನಿಮ್ಮನ್ನ ಮರೆಯೋಕ್ಕೆ ಆಗೋಲ್ಲ. ಕ್ಷಮಿಸಿ ಈ ತಿಂಗಳ ಸಂಬಳ ಬಂದಾಗ ನಿಮಗೆ ಖಂಡಿತಾ ನಿಮ್ಮ ದುಡ್ಡು ಕೊಟ್ಟುಬಿಡ್ತೀನಿ...

ಹೇ..!! ಇರ್ಲಿ ಬಿಡು ಏನು ಅರ್ಜೆಂಟ್ ಇಲ್ಲಾ... ಸದ್ಯಕ್ಕೆ ಆರೋಗ್ಯವಾಗಿದ್ದಾರಲ್ಲ ಅದು ಮುಖ್ಯ. ಇವತ್ತೇ ಆಫೀಸಿಗೆ ಬಂದಿದ್ದೀಯಾ ಎಲ್ಲಾ ಕೆಲಸಗಳು ನಿನಗೇ ಕಾದಿದೆಯೇನೋ ಎಲ್ಲಾ ನೋಡು ಹೇಗೆ ನಡಿತಾ ಇದೆಯೆಂದು. 

ಸರಿ ಸರ್.. 

ಹೀಗೆ ಶಿವ ಸುಮಾರು ೧೧ ಗಂಟೆಯಲ್ಲಿ ತನ್ನ ಕಛೇರಿ ಬಾಸ್ ನೊಂದಿಗೆ ಮಾತನಾಡಿ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಮಾತನಾಡಿಕೊಂಡು ರಮದಾನ್ ಆದ್ದರಿಂದ ಕುವೈತಿನಲ್ಲಿ ಕಛೇರಿ ಸಮಯ ಕೇವಲ ೬ ಗಂಟೆಗಳ ಕೆಲಸವಾದ್ದರಿಂದ ಮಧ್ಯಾಹ್ನ ೧೨ ಗಂಟೆಗೆ ಮನೆ ಕಡೆ ಹೊರಟ.

ಇತ್ತ ಬಾಸ್ ತಮ್ಮ ಮನೆಕಡೆ ಹೊರಟರು ಮಧ್ಯದಲ್ಲಿ ಅಂಗಡಿಯೊಂದಕ್ಕೆ ತೆರಳಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ತೆಗೆದುಕೊಂಡು ತನ್ನ ಹೆಂಡತಿಯನ್ನ ಕರೆದೊಯ್ಯಲು ಬಂದರೆ.. ಆತನಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತು ಮೌನವಾಗಿತ್ತು ನಿಟ್ಟುಸಿರಿನ ಶಬ್ದ ಕೇಳುತ್ತಿತ್ತು. ಏಕೆ ಏನಾಯಿತು ಎಂದು ಕೇಳುತ್ತಿದ್ದಂತೆ.!! 

"ಊರಿಗೆ ತೆರಳಿದ್ದ ಒಬ್ಬ ಆಫೀಸಿನವ ಇವತ್ತು ಬಂದು ನನಗೆ ಪೆನ್ ಗಿಫ್ಟ್ ಕೊಟ್ಟ ಆದರೆ... ಆದರೇ..... ಈಗ ೧ ಗಂಟೆಗೆ ಕಂಪನಿಯ ಕ್ಯಾಂಪ್ ಇಂದ ಕರೆ ಬಂತು ಅವನು ಊಟ ಮುಗಿಸಿ ಹೊರಗಡೆ ಕೈ ತೊಳೆಯಲು ಬಂದವನು ಕುಸಿದು ಬಿದ್ದನಂತೆ. ತಕ್ಷಣ ಎಲ್ಲರೂ ಆಸ್ಪತ್ರೆಗೆ ಕರೆದೊಯ್ದರೆ ಇಲ್ಲ... ಸತ್ತು ಹೋಗಿದ್ದಾರೆ ಎಂದರಂತೆ..!!"

ಇಷ್ಟು ಹೇಳಿ ಮೌನವಹಿಸಿದವರ ಕಣ್ಣಲ್ಲಿ ಸ್ತಬ್ಧ ಚಿತ್ರಣ ಎದ್ದು ಕಾಣುತ್ತಿತ್ತು.... ತಡೆಯಲಾರದ ಸಂಕಟವೊಂದು ಮನಸಲ್ಲಿ ಎದ್ದು ಕಾಣುತ್ತಿತ್ತು.

- ಇದು ನಡೆದದ್ದು ನನ್ನವರ ಕಛೇರಿಯಲ್ಲಿ ನನಗೂ ಮಾತು ಹೊರಳಲಿಲ್ಲ... ನನಗೇ ಅರಿವಿಲ್ಲದೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಇನ್ನೂ ವಿದ್ಯಾಭ್ಯಾಸ ಮುಗಿಸದ ಇಬ್ಬರು ಮಕ್ಕಳು. ಆಪರೇಷನ್ ಆಗಿ ಹಾಸಿಗೆ ಹಿಡಿದಿರುವ ಹೆಂಡತಿ... ಇತ್ತ ಮನೆ ಯಜಮಾನನ ಸಾವು. 

ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು ಈ ಮರುಭೂಮಿಯಲ್ಲಿ ಕಾದಿತ್ತೇ... ಸಾವು ಬಂದರೂ ಇಲ್ಲಿಗೆ ಯಾಕೆ ಕರೆತಂದ... ಅಲ್ಲೇ ಇಷ್ಟು ದಿನ ಊರಲ್ಲೇ ಇದ್ದಾಗ ಏಕೆ ಏನೂ ಆಗಲಿಲ್ಲ..?? ದೇವರೇ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಸಾಯುವ ವಯಸ್ಸಲ್ಲದಾಗ ಸಾವು ಬರುವುದು ಎಷ್ಟು ನ್ಯಾಯವೋ ಅರಿವಿಲ್ಲ.!!  

ಇದು ವಿಧಿ ಲಿಖಿತವೋ... ಏನೋ..??!! ಆದರೆ ಮನಸ್ಸು ಮಾತ್ರ ಮರುಗುತ್ತದೆ. ಕಾಣದ ದೇಶದಲ್ಲಿ ಕಷ್ಟಕ್ಕೆಂದು ಬಂದು ದುಡಿಯುವಾಗ ಅವರನ್ನೇ ನಂಬಿದ ಕುಟುಂಬವನ್ನು ನೆನೆದಾಗ ಮಾತು ನಿಂತು ಹೋಗುತ್ತದೆ.

ಜೀವವಿಲ್ಲದಾಗ ಆ ಆತ್ಮಕ್ಕೆ ಶಾಂತಿ ಕೋರುವುದೊಂದೇ ದಾರಿ... ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 


ಇನ್ನು ಆತನ ಉಸಿರಿಲ್ಲದ ದೇಹ ಊರು ಮುಟ್ಟುಲು ಎಷ್ಟು ದಿನಗಳೋ... ಈ ವಿಷಯ ತಿಳಿದ ಮನೆಮಂದಿ ಮನಸ್ಸಿನ ಪರಿಸ್ಥಿತಿ ಹೇಗೋ..?

ಎಲ್ಲಿ ಯಾವಾಗ.. ಏನು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ... :( 


ಅವನ ಇರುವಿಕೆಯೇ ಅವನು ಕೊಟ್ಟ ಪೆನ್ನು..!!!

Monday, July 15, 2013

- ವೈಷಮ್ಯತೆ -

ಎಲ್ಲರಿಗೂ ಅವರದೇ ಸಂಪ್ರದಾಯ
ಅವರದೇ ನೀತಿ ನಿಯಮಗಳು
ಅವುಗಳ ದೂಷಣೆ, ಧೋರಣೆ
ನಮ್ಮದಲ್ಲದ ಪಾತ್ರಗಳು....

ಸಂಬಂಧ, ಸಂಸ್ಕೃತಿ
ಬೆಳೆದು ಬಂದ ಹಾದಿ
ಅವರೇ ಪೋಣಿಸಿಕೊಂಡ
ದಾರದೊಳಗಿನ ಮಣಿಗಳು..

ತನ್ನ ಇರುವಿಕೆ ಪರರ ಬದುಕಾಗದೆ
ಸ್ವಇಚ್ಚೆ, ಸ್ವಸಾಮರ್ಥ್ಯ ಗುರುತು
ಹಚ್ಚಿ ಬಾಳು ಬೆಳಗುವ ಹಸ್ತ
ಎಲ್ಲರೊಳಗು ಹುದುಗಬೇಕಿದೆ....

ಮೇಲ್ದರ್ಜೆ, ಕೀಳುದರ್ಜೆ
ಎಲ್ಲ ಹಳತು ಮಾಡಿ
ಹೊಸ ಹೆಜ್ಜೆಯ ಸೂತ್ರದಿ
ನಡೆವ ವಿದ್ಯಾವಂತನಾಗಲಿ...

ಬದುಕು ಬವಣೆಗಳ ಪಟ್ಟಿ
ಇಲ್ಲಿ ಜಾತಿ ವೈಷಮ್ಯ
ಭಾವನೆಗಳ ಶೋಷಣೆ
ಎಲ್ಲ ಬಲ್ಲವನಿಗೆ ಸಲ್ಲದು...

ಯಾರೋ ಬಿತ್ತಿದ ವಿಷ ಬೀಜವನು
ಫಸಲು ಮಾಡುವ ಹೊಣೆ ಹೊತ್ತಂತೆ
ಹಸಿವಿಗೆ ಆಹಾರವಾಗದೆ
ದ್ವೇಷದಾ ಕೊಳ್ಳಿಗೆ ಆಹುತಿಯಾಗದಿರಲಿ..

ಮನುಕುಲದ ವೈಷಮ್ಯ
ಪ್ರಕೃತಿ ದಹಿಸೋ ಸಾಮರ್ಥ್ಯ
ಭುಗಿಲೇಳುವ ಕ್ರೋಧಕೆ
ಹೊಲಸು ಮರೆತು; ಅಳಿಸಿ ತಾರತಮ್ಯ...

ಯಾವುದೋ ಜಾತಿ ಯಾರದೋ ನೀತಿ
ಉಸಿರು, ಹೃದಯ ಬಡಿತಕೆ ಯಾವ ಜಾತಿ
ಏನೊಂದು ಎಣಿಸದೆ ಸಾಗುತಿರುವ ದಿನಚರಿಗೆ
ವಿಚಾರವಾದಿಗಳು ನೆಡುವ ದ್ವೇಷ ಸಸಿಗಳು
ಹೆಮ್ಮರವಾಗಿ ಬೆಳೆಯದಂತೆ ಕಟಾವು ಮಾಡಲಿ...!!!


ನನ್ನ "ಮೃದುಮನಸು" ಕೂಸಿಗೆ ಐದು ವರ್ಷಗಳು ಕಳೆದಿವೆ. ಈ ಪಂಚವಾರ್ಷಿಕ ಬ್ಲಾಗಿನಡಿ ಈ ಪುಟ್ಟ ಸಾಲುಗಳು. ಇತ್ತೀಚೆಗೆ ಜನರಲ್ಲಿ ವೈಷಮ್ಯಗಳು ಮತ್ತು ನಮ್ಮನಮ್ಮಲ್ಲೇ ಇರುಸುಮುರುಸುಗಳು ಹೆಚ್ಚುತ್ತಿವೆ. ಅವೆಲ್ಲವನ್ನೂ ದೂಡಿ ವಿದ್ಯಾವಂತ ಜನರು ಸಂತೃಷ್ಟಿ ನೆಲೆ ಕಾಣಲೆಂಬುದೇ ನನ್ನ ಈ ಕವನದ ಆಶಯ.  

ವಂದನೆಗಳು
ಮನಸು

Sunday, July 7, 2013

"ಪವರ್ ಸ್ಟಾರ್ ಪುನೀತ್" ಜೊತೆ ಅಭಿನಯ - ಖುಷಿ ತಂದ ಕ್ಷಣ..!!


ಹಿಂದೆಯೊಮ್ಮೆ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆ. ಆತ್ಮೀಯ ಮಾತುಕತೆಗಳೊಂದಿಗೆ ಆತ್ಮೀಯರಾಗಿದ್ದರು. ಅದೇ ಕಾರಣಕ್ಕೆ ಅವರ ಚಲನ ಚಿತ್ರದಲ್ಲಿ ನನಗೊಂದು ಆಫರ್ ಬಂದಿತ್ತು. ನನ್ಗೂ ಖುಷಿ "ಪವರ್ ಸ್ಟಾರ್" ಜೊತೆ ಅಭಿನಯಿಸುವುದೆಂದರೆ ಏನು ಸಾಮಾನ್ಯನಾ..? ಎಂದು ಒಪ್ಪಿಕೊಂಡೆ. ಶೂಟಿಂಗ್ ದಿನವೂ ಬುಕ್ ಆಯ್ತು.

ಅಂದು ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಎಲ್ಲವನ್ನು ಸವಿವರವಾಗಿ ತಿಳಿಸಿದರು ನಾನು ಮೇಕಪ್ ಇಲ್ಲದೆ ಸ್ವಲ್ಪ ಬಡತನದ ಹೆಣ್ಣು ಮಗಳಂತಿರಬೇಕಿತ್ತು..

ಅದೋ ಅಲ್ಲಿ ಕಾಣುವ ಮೂಲೆಯಲ್ಲಿ ನೀವು ಹಳೆಯ ಬಟ್ಟೆ ಕಾಣುತ್ತಲ್ಲಾ ಅದನ್ನು ಹೊದ್ದುಕೊಂಡು ಮಲಗಿ ... ಸ್ವಲ್ಪ ದೂರದಿಂದ ಪುನೀತ್ ನಿಮ್ಮ ಕೊಠಡಿಗೆ ಬರುತ್ತಾರೆ. ನಿಮ್ಮನ್ನು ನೋಡಿ ಮಾತನಾಡಿಸುತ್ತಾರೆ. - ಇಷ್ಟು ಸಾಕು ನಂತರ ಮುಂದಿನದು ಹೇಳುವೆ ಎಂದರು ನಿರ್ದೇಶಕರು.

ಸರಿ ಈಗ ನನ್ನ ಸರದಿ ನಾನು ಅಲ್ಲಿ ಕಾಣುವ ಪಾಳು ಬಿದ್ದ ಮನೆಯಲ್ಲಿ ಹೋಗಿ ಅಲ್ಲೇ ಕಾಣುತ್ತಿದ್ದ ಬಟ್ಟೆಯನ್ನು ಹೊದ್ದುಕೊಂಡು ಮಲಗಿದೆ - ಆ ಕಡೆಯಿಂದ ನಿರ್ದೇಶಕರು ಕ್ಯಾಮರಾ ಸ್ಟಾರ್ಟ್ ಆಕ್ಷನ್ ಎಂದರು... ನನ್ನದು ತೀವ್ರ ಮೌನ, ಆಸೆ ಬತ್ತಿದ ಕಣ್ಣುಗಳು, ನಿರಾಶೆಯ ಬದುಕು ಎಂಬಂತೆ ನೆಲದಲ್ಲಿ ಬಿದ್ದುಕೊಂಡಿರುವಂತ ಪರಿಸ್ಥಿತಿ.... ನನ್ನತ್ತ ಕ್ಯಾಮರ ಜ಼ೂಮ್
ಮಾಡಿ...ಮಾಡಿ ಇಟ್ಟರು ನಾನು ಮಾತ್ರ ಆಸೆಗಳೇ ಬತ್ತಿಹೋದಂತೆ ಮುಖ ತೆರೆದಿಟ್ಟು ಹರುಕಲು ಬಟ್ಟೆ ಹೊದ್ದು ಮಲಗಿದ್ದೆ... 

ನನ್ನ ಅಭಿನಯ ನಿರ್ದೇಶಕರಿಗೆ ಖುಷಿ ನೀಡಿತ್ತು .. ಎಕ್ಸಲೆಂಟ್, ಗುಡ್ ಹೀಗೇ ಮಲಗಿರಿ ಎಂದು ಅತ್ತ... ಪುನೀತ್ ಸರ್ ರೆಡಿನಾ..!! ಆಕ್ಷನ್ ಎಂದರು..

ಪುನೀತ್ ಬೂಟಿನ ಸದ್ದು ಟಪ್......ಟಪ್......ಟಪ್.......ಸದ್ದು ಮಾಡುತ್ತ ಬರುತ್ತಿದ್ದಾರೆ..... ಹಾಗೇ ಬನ್ನಿ ಇನ್ನೂ ಮುಂದಕ್ಕೇ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.....ಸುತ್ತಲೂ ಇದ್ದ ನಾಲ್ಕಾರು ಜನ್ರಲ್ಲಿ ಎಲ್ಲಿ... ಆ ಹೆಣ್ಣು ಮಗಳು ಎಂದು ನಾನಿದ್ದ ಕಡೆಗೆ ಬಂದು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ... ಇನ್ನೇನು ಮಾತನಾಡಬೇಕು ಎನ್ನುವಾಗ ಅತ್ತ ನಿರ್ದೇಶಕ ಕಟ್..ಕಟ್ ಎಂದು ಬಿಟ್ಟರು....

ಪುನೀತ್ ಸರ್, ಎಕ್ಸಲೆಂಟ್...ಆಕ್ಟಿಂಗ್ ವಾಹ್..!!  ಎಂದು ನಿರ್ದೇಶಕರು ಬೆನ್ನು ತಟ್ಟಿದರು...

ನಾನು ಎದ್ದು ಇದೇನು ಇಷ್ಟೇನಾ..? ಎಂದು ಕೇಳಿದೆ. ಪುನೀತ್ ಸಹ ನನ್ನ ಜೊತೆಯೇ ಇದ್ದವರು ಏನು ಅವರಿಗೆ ಡೈಲಾಗ್ ಎಲ್ಲಾ ಏನಿಲ್ಲ ಯಾಕೆ..? ಎಂದು ಕೇಳುತ್ತಿದ್ದಂತೆ... ಇಲ್ಲ ಸರ್, ಇದೆ ಈಗ ಸದ್ಯಕ್ಕೆ ಇಷ್ಟೇ ಇರಲಿ ಮಿಕ್ಕಿದ್ದು ಮಧ್ಯಾನ್ಹ ಎಂದರು.... ಸರಿ ಎಂದು ಪುನೀತ್ ಅತ್ತ ಸರಿಯುತ್ತಿದ್ದಂತೆ..........

ನಿರ್ದೇಶಕರು ನೋಡಿಮ್ಮಾ ನೀವು ಹೋಗಿ ಮೇಕಪ್ ಮಾಡಿಕೊಂಡು ಬನ್ನಿ ಇನ್ನೊಂದು ಸನ್ನಿವೇಶವಿದೆ ಅದನ್ನು ಚಿತ್ರೀಕರಿಸೋಣ ಎಂದರು ನನಗೆ ಏನೂ ತೋಚಲಿಲ್ಲ ಸುಮ್ಮನೇ ತಲೆಯಾಡಿಸಿದೆ.

೩೦ ನಿಮಿಷಗಳ ನಂತರ ಮೇಕಪ್ ಮಾಡಿಕೊಂಡು ಪುನೀತ್ ಜೊತೆ ಕುಳಿತಿದ್ದೆ ಅತ್ತ ಮತ್ತೊಂದು ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು...

(ಸನ್ನಿವೇಶ)
ಇಬ್ಬರು ಚಿಕ್ಕ ಮಕ್ಕಳು ಮರದ ತೊಲೆಗಳು ಮೂರು, ನಾಲ್ಕನ್ನು ಒಟ್ಟೊಟ್ಟಿಗೆ ಹೊತ್ತು ತರುತ್ತಿದ್ದಾರೆ... ಮಣ ಭಾರ...!! ಭುಜದ ಮೇಲಿಟ್ಟುಕೊಂಡು ಒಂದು ಕೊನೆಯಲ್ಲಿ ಒಬ್ಬ ಹುಡುಗ ಮತ್ತೊಂದು ಕೊನೆಯಲ್ಲಿ ಇನ್ನೊಬ್ಬ ಹುಡುಗ ..ಕಷ್ಟಪಟ್ಟು ತರುತ್ತಿದ್ದಾರೆ ಎಂಬಂತೆ ಬಾಸವಾಗುವಂತೆ ಅವರ ಮುಖದಲ್ಲಿ ಕಾಣುತ್ತಿದೆ...ಸ್ವಲ್ಪ ದೂರ ಬಂದ ನಂತರ ವಿಶಾಲ ಮೈದಾನದಲ್ಲಿ ರಪ್ಪ್ ಎಂದು ಭಾರವೇ ಇಲ್ಲದಂತೆ ಎಸೆದುಬಿಟ್ಟರು...!!!!.

ಅಯ್ಯೋ, ಇದೇನು ಅಲ್ಲಿಂದ ಹೊತ್ತುಕೊಂಡು ಬಂದಿದ್ದು ನೋಡಿದರೆ ಭಾರವಿದ್ದಂತೆ ಇತ್ತು, ಈಗ ಒಳ್ಳೆ ಹೂವಿನ ಕಡ್ಡಿ ಹಿಡಿದಂತೆ ಎಸೆಯುತ್ತಿದ್ದಾರೆ. ನಿರ್ದೇಶಕರೆ ಯಾವುದೇ ಸನ್ನಿವೇಶವನ್ನು ಚಿತ್ರಿಸುವಾಗ ಅದು ಸ್ವಲ್ಪ "ವಾಸ್ತವಕ್ಕೆ ಹತ್ತಿರ" ಇರುವಂತೆ ಚಿತ್ರಿಸಿ... ಇಲ್ಲವಾದರೆ ಜನರಿಗೆ ಸುಮ್ಮನೆ "ಬಂಡಲ್" ತೋರಿಸಬೇಡಿ ಎಂದುಬಿಟ್ಟೆ.

ನಿರ್ದೇಶಕರಿಗೆ ಅದೆಲ್ಲಿತ್ತೋ ಕೋಪ ಒಂದೇ ಸಮನೆ ಬೈಯ್ಯುತ್ತ ನಿನ್ನನ್ನು ಈ ಸಿನಿಮಾದಿಂದ ಕಿತ್ತು ಹಾಕಲಾಗಿದೆ. ನಿನ್ನಂತವರು ಬೇಡವೇ ಬೇಡ ಎಂದುಬಿಟ್ಟ... ಇತ್ತ ಪುನೀತ್ ಸಮಾಧಾನ ಮಾಡುತ್ತಲೇ ಇದ್ದಾರೆ. ಅದೆಲ್ಲಿತ್ತೋ ನನ್ನ ಮೊಬೈಲಿನ ಕರೆಗಂಟೇ ಒಂದೇ ಸಮನೇ ಬಡಿದುಕೊಳ್ಳುತ್ತಿದೆ. ಬೇಸರದಿಂದಲೇ ಮೊಬೈಲ್ ಕೈಗೆತ್ತುಕೊಂಡು ನೋಡಿದೆ ಆಗ ತಿಳಿಯಿತು ಬೆಳಗ್ಗೆ ೬ ಗಂಟೆ ...ಎದ್ದೇಳು ಎಂದು ಶುಭಸೂಚಿಸುತ್ತಿದ್ದದ್ದು.

ಇಷ್ಟೆಲ್ಲಾ ಕಥೆಗೆ ಕಾರಣ ನೆನ್ನೆಯ ಉದಯಾ ಟೀವಿಯ ಪೃಥ್ವಿ ಚಿತ್ರ.

Tuesday, April 23, 2013

ಹುಟ್ಟು ಬದುಕು


                                     ಪೋಟೋ:  ಗಿರೀಶ್
 (ಈ ಪೋಟೋ ನೋಡಿದೊಡನೆ  ನನ್ನೂಳಗೆ "ಹುಟ್ಟು" ಹುಟ್ಟಿಸಿದ ಸಾಲುಗಳು)


-ಹುಟ್ಟು  ಬದುಕು-

ನಾ ಬಯಸಿದ ಜೀವನ
ನೀರ ಗರ್ಭದಲಿ
ತೆಪ್ಪದ ತೊಟ್ಟಿಲಿನಲಿ
ಹುಟ್ಟು ಹಾಕುತ
ದಡವ ಮುಟ್ಟಿಸುವ ಬದುಕು...

ನೀರ ಆಳದಲಿ
ಬಂಡೆಗಳ ಒಡೆತ
ಪ್ರಯಾಣಿಕರ ನಡುಕ
ಎದೆ ಝಲ್ ಎನಿಸಿದರೂ
ಕೈಯೊಳಗಿನ ಹುಟ್ಟು ಜಾರದಿರುವ ಜೀವನ

ಶಾಂತ ಅಲೆಗಳು
ಅಬ್ಬರಿಸುವ ಮೊದಲು
ಭಯದ ನೆರಳ ಸರಿಸಿ
ಮರಗೋಲ ಹಿಡಿದು
ಉದಕವ ಹಿಂದಿಕ್ಕಿ ಸಾಗುವ ಬದುಕು....

Wednesday, April 10, 2013

ಆದಿ ಪರ್ವ



ಸಿಹಿಯ ಮಡಿಲು ನಗುವಿನೊಳಗೆ ಸುಖ
ಕಹಿಯ ಕಡಲು ಅಳುವಿನೊಡನೆ ದುಃಖ
ಬೇವು-ಬೆಲ್ಲದ ಬದುಕು ಕಂಡಷ್ಟು
ಕುಲುಮೆಯೊಳಗೆ ಬೆಂದ ಚಿನ್ನದಂತೆ  

ಚಿಗುರು ಮಾವು, ಮೈಯ್ಯ ಕೊಳೆ ಕಳೆವ ತೈಲ
ಕಿರಣ ರಾಶಿಯಡಿ ಮನಸು ಪಕ್ಷಿಕಾಶಿ
ಹಸಿರಿನೊಡನೆ ಒಗರು ಅಂಟಿನೊಳಗೆ ವಾಯು
ಎಲ್ಲ ಕಂಡ ಬದುಕು ಸಿಹಿ ಹೂರಣದಂತೆ  

ಹಿರಿಯರಿಗೆ ಧೂಪ, ಗೋವಿನ ಪೂಜೆ
ನೇಗಿಲ ಯೋಗಿಯದು ಭೂಮಿ ಉಳುವಿಕೆ 
ದಾನ ಧರ್ಮದೊಡನೆ ಪಂಚಾಂಗ ಶ್ರವಣ
ವಿವಿಧ ರೂಪ ಕಂಡ ಬದುಕು ಯುಗಾದಿ   

ಚಿಗುರಿನೊಡನೆ ಕನಸು ಬೆಳಗಲು
ಬಿಸಿಲ ಬೆಳಕು ಮನವ ತಣಿಸಲು
ಚೈತ್ರದ ಚಿಲುಮೆಯ ಯುಗಾದಿ
ವರುಷ ವರುಷ ತರಲಿ ಹರುಷದ ಹೋಳಿಗೆ 

 ಎಲ್ಲರಿಗೂ "ಯುಗಾದಿ" ಹಬ್ಬದ ಶುಭಾಶಯಗಳು ... 


ಚಿತ್ರ: ನೆಟ್ ಲೋಕ


Thursday, March 21, 2013

-ತೈಲವಿದ್ದಂತೆ ಹಣ-


 -ತೈಲವಿದ್ದಂತೆ ಹಣ-

                         ಚಿತ್ರ: ಮನಸು

ತೈಲ ಇರುವ ಬಾವಿಯಲ್ಲಿ
ಹಣದ ಹೊಳೆಯೇ ಹರಿವುದು
ಆರ್ಥಿಕ ನೆಲೆಯ ನೀಡುವಲ್ಲಿ
ದೇಶ ಶಾಂತಿ ನಿಲುವುದು...!!

ಹಳ್ಳ ತೋಡಿ ಬಾವಿ ಮಾಡಿ
ಹಿಂಡಿ ಹಿಪ್ಪೆ ಮಾಡಿ ಹೀರುತ
ದೇಶದ ಸಂಪತ್ತು ಹೆಚ್ಚಿಸವಲ್ಲಿ
ಭೂಮಿ ತಾಯಿ ನಲುಗುವಳು..!!

ತೈಲದಂತೆ ಮನುಜನಾರು
ಕಷ್ಟಗಳ ಹೊರುವನೋ
ಬೆಲ್ಲದುಂಡೆಯಾಗಿ ತಾನು
ಇರುವೆ ಮಧ್ಯೆ ನಿಲುವನು...!!!

ಎಣ್ಣೆ ಇರುವ ದೀಪದಂತೆ
ಸದಾ ಬೆಳಗುತಿರುವರು
ಮನೆಮಂದಿಗೆ ಬೆಳಕಾಗಿ
ಹೊರೆಗಳ ತಾ ಹೊರುವನು...!!

ಹಣದ ಹೊಳೆ ಹರಿದರಂತೂ
ಮನೆ-ಮನಗಳು ತಾ ಕುಣಿವವು
ಇದ್ದರೆ ಇರುವ ಬಂಧಗಳೆಲ್ಲಾ
ಇರದಿರೆ ತಾ ಕಿತ್ತು ಹರಿವವು..!!

ಮನುಜನ ಹಣ ತೈಲದಂತೆ
ಬೆಳಕಿಗೂ ಬೇಕು ತೈಲವಂತೆ
ಪ್ರಗತಿ, ಚಲನೆ ಸಕಲಕೂ ಬೇಕು
ಹಣವಿದ್ದವ ತೈಲ ಬಾವಿಯಂತೆ..!!

                        ಚಿತ್ರ: ಅಂತರ್ಜಾಲ

Thursday, March 7, 2013

ಮುಸುಕಿನಿಂದೊರಗೆ


ಮುಸುಕಿನಿಂದೊರಗೆ



ಹಸಿರ ಹೊದಿಕೆಯಲಿ
ಬೆಚ್ಚಗಿದ್ದವಳ ಬಿಚ್ಚಿ
ಕೆಂಡದೋಕುಳಿಯಲಿ
ಸುಟ್ಟು ಬೇಯಿಸಿದರು
ಇಂಗಳದ ಕಾವು 
ತಡೆಯುವ ಮುನ್ನ
ಉಪ್ಪು-ಖಾರ ಬೆರೆಸಿ
ಸೇವಿಸಿದರೆನ್ನ...

ಬೆಂದ ಮೈಯ್ಯಿ
ಖಾರದುರಿಯ
ಬೇನೆಯಲಿದ್ದವಳನು
ಸವಿದು ಸವಿದು
ಜಗಿದು ಜಗಿದು
ತಿನ್ನುತಲಿದ್ದರು....

ಹೊಟ್ಟೆ ಹೊರೆಯಲು
ಬಾಯಿ ರುಚಿಸಲು
ನಾನು ಬೇಕು
ನನ್ನ ಸುಡಲೇಬೇಕು
ಬದುಕು ಬಯಸಿದಾಗಲ್ಲ
ಇನ್ನೊಬ್ಬರ ಜೀವನಕೆ
ಮತ್ತೊಬ್ಬರು ಸಾಯಲೇಬೇಕು...

ಚಿತ್ರ ಕೃಪೆ: ಅಮೋಲ್ ಪಾಟೀಲ್

Wednesday, February 13, 2013

ಪರಿಸರ ಸುಂದರ, ನಾವು ಬೆಳೆಸಿದರೆ..!!?


Indian Institute of Engineers (Kuwait)ನ ವತಿಯಿಂದ ಒಂದು ದಿನದ ಪರಿಸರ ಸಂರಕ್ಷಣೆಯತ್ತ ಎಲ್ಲರನ್ನೂ ಕೊಂಡೊಯ್ಯುವ ವಿಚಾರವಾಗಿ ಒಂದು ಮೈಲ್ ಬಂದಾಗ ಶುಕ್ರವಾರ ಬೆಳಿಗ್ಗೆ ಬೇಗ ಎದ್ದು ಹೋಗಲು ಆಗುತ್ತಾ? ಎಂದು ಯೋಚಿಸಿ ಕೊನೆಗೆ ಹೋಗೋಣ ಸದಾ ಬರ್ತ್ ಡೆ, ಮದುವೆ ಅದು ಇದು ಅಂತೇಳಿ ಪಾರ್ಟಿಗಳಿಗೆ ಹೋಗ್ತೀವಿ ಇಂತಹದಕ್ಕೆ ಹೋಗಬಾರದೆ ಎನ್ನಿಸಿ, ಕೊನೆಗೆ ಬೆಳಗ್ಗೆ ೬ಕ್ಕೆ ಎದ್ದು ತಯಾರಾಗಿ ಸಾಲ್ಮಿಯ (ಕುವೈತಿನ ಒಂದು ಸ್ಥಳ) ಅಲ್ಲಿಗೆ ಎಲ್ಲರೂ ಬರುವಂತೆ ಹೇಳಿದ್ದರು ನಮ್ಮ ಮನೆಯಿಂದ ೩೦ ಕಿ.ಮೀ ದೂರವಿದ್ದರೂ ನಮಗೇನು ಪರಿಸರದೊಡನೆ ಒಡನಾಟ ಬೇಕಿತ್ತು ಹೊರಟೇಬಿಟ್ಟೆವು. 

೭.೩೦ರಷ್ಟರಲ್ಲಿ ಎಲ್ಲರೂ ಒಂದು ಬಸ್ ನಲ್ಲಿ ಮೆಸ್ಸಿಲ್ಲಾ ಮಾರ್ಗವಾಗಿ ಹೋಗುತ್ತಲೇ ಅಲ್ಲೇ ಕಾದಿದ್ದ K'S PATH (Kuwait Society for the Protection of Animals and Their Habitat) ಈ ಸಂಸ್ಥೆಯ ಮೂಲಕವೇ ಪರಿಸರ ಸಂರಕ್ಷಣೆಯ ಸ್ಥಳವೊಂದನ್ನು ಸ್ವಚ್ಚಗೊಳಿಸುವ ವ್ಯವಸ್ಥೆ ನೆಡೆದಿದ್ದು. K'S PATH ಸಂಸ್ಥೆಯ ಸ್ವಯಂಸೇವಕರು ನಮ್ಮೆಲ್ಲ ಹೆಸರುಗಳನ್ನು ನೊಂದಾಯಿಸಿಕೊಂಡು ೬ನೇ ರಿಂಗ್ ರಸ್ತೆಯ ಮೂಲಕ ಅವರನ್ನು ಹಿಂಬಾಲಿಸುವಂತೆ ಬಸ್ ಡ್ರೈವರ್ ಗೆ ಹೇಳಿದರು. ನಾವು ಏನು ಮಹಾ ಘನಂದಾರಿ ಕೆಲಸ ಮಾಡುತ್ತೇವೋ ಗೊತ್ತಿಲ್ಲ. ಅದು ಎಂತಹ ಸ್ಥಳವೋ, ಅಚ್ಚುಕಟ್ಟಾಗಿ ಮಲಗಬಹುದಿತ್ತೇನೋ ಎಂದು ಮನಸಲ್ಲೇ ಗೊಣಗಿಕೊಳ್ಳುತ್ತಿದ್ದೆ.

 ಕುವೈತ್ ಸಿಟಿಯಿಂದ ಸುಮಾರು ೫೦ ಕಿ.ಮೀ ದೂರವಿರುವ ಅಬ್ದಲ್ಲಿಯ (Abdelliya) ಎಂಬ ಹೊರವಲಯದಲ್ಲಿರುವ ಒಂದು ಏರಿಯಾಗೆ ಹೋಗುವ ಮಾರ್ಗ ಮಧ್ಯ ಒಂಟೆಗಳು, ಕುದುರೆ, ಕುರಿಗಳ ಹಿಂಡು ಜೊತೆಗೆ  ಹೀಗೆ ಒಂದೊಂದೆ ನೋಡಿಕೊಂಡು ಹೋಗುತ್ತಾ ಇದ್ದಂತೆ ದಾರಿಯ ಮಧ್ಯದಲ್ಲಿ ಫಾತಿಮಾ ಮಹಲ್ ಎಂದು ಯಾರೋ ಕುವೈತಿ ಕುಟುಂಬದವರು ಕಟ್ಟಿಸಿರುವ ಮಾಸ್ಕ್ ಕಣ್ಣಿಗೆ ಬಿತ್ತು. ತಾಜ್ ಮಹಲ್ ಮಾದರಿಯಲ್ಲೇ ಇದೆ ಅದೇ ವಿನ್ಯಾಸವುಳ್ಳ ಈ ಮಾಸ್ಕ್ ನೋಡಿ ತಾಜ್ ಮಹಲ್ ಕಂಡಂತಾಯ್ತು... 
ಮಂಜು ಮುಸುಕಿದ ಹಾದಿಯಲ್ಲಿ ಕಂಡ ಮಹಲ್ 

ಸ್ವಲ್ಪ ಸಮಯದ ನಂತರ ಫೇಸ್-೧ ಹೆಬ್ಬಾಗಿಲಿನಲ್ಲಿ ಸೆಕ್ಯುರಿಟಿ ಜನರೊಂದಿಗೆ  K'S PATH ಸ್ವಯಂ ಸೇವಕರು ಮಾತನಾಡಿ ನಮ್ಮೆಲ್ಲರನ್ನು ಒಳಗೆ ಕರೆದುಕೊಂಡು ಹೋದರು ಒಳ ಹೋಗುತ್ತಿದ್ದಂತೆ ಅದೇನೋ ಸ್ವಚ್ಚಂದ, ಗಿಡ ಮರಗಳು ಹೂಬಿರಿದು ನಗುವ ಭಾವ ನಮ್ಮನ್ನೆಲ್ಲಾ ತುಂಬು ಹೃದಯದಿಂದ ಬರಮಾಡಿಕೊಂಡವು.
                             
ಕುವೈತಿಗೆ ಬಂದು ಏಳು ವರ್ಷಗಳಾದರು ನಾನು ಈ ಸ್ಥಳದ ಬಗ್ಗೆ ನಿಜಕ್ಕೂ ಕೇಳಿರಲಿಲ್ಲ. ಕುವೈತಿ ದೇಶದ ಅತಿ ಪ್ರಸಿದ್ಧ ಕಂಪನಿ ಕುವೈತ್ ಆಯಿಲ್ ಕಂಪನಿಗೆ ಸೇರಿದ ಭೂಮಿಯಲ್ಲಿ ಸುಮಾರು ಒಂದು ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಫೇಸ್-೧ಗೆ ಮೀಸಲಿಟ್ಟು ಫೇಸ್-೨ಗೆ ಸುಮಾರು ೨ ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಸ್ಥಳವನ್ನು ಪ್ರಕೃತಿಗೆಂದೇ ಮೀಸಲಿಟ್ಟಿದ್ದಾರೆ. ಈ ಪ್ರದೇಶವನ್ನು K'S PATH (Kuwait Society for the Protection of Animals and Their Habitat)ಇವರ ಸಹಯೋಗದೊಂದಿಗೆ ಇಡೀ ಭೂಪ್ರದೇಶವನ್ನು  ಸೂಕ್ಷ್ಮರೀತಿಯಲ್ಲಿ ಪರಿಶೀಲಿಸಿ ಸ್ವಚ್ಚತೆಯನ್ನು ಮಾಡುತ್ತಲೇ ಬಂದಿದ್ದಾರೆ.

 ಹಿಂದೆ ಹಲವು ಬಾರಿ ಕುವೈತ್ ಮತ್ತು ಇರಾಕ್ ಯುದ್ಧದ ಸಂದರ್ಭದಲ್ಲಿ ಬಿದ್ದಿದ್ದ ಗುಂಡು ಮದ್ದುಗಳನ್ನು ಸಹ ಹೊರತೆಗೆದು, ಕಸಕಡ್ಡಿಗಳನ್ನನ್ನೆಲ್ಲಾ ಬೇರ್ಪಡಿಸಿ ಒಂದು ಸ್ವಚ್ಚಂದ ನೆಲೆಯನ್ನಾಗಿ ಸೃಷ್ಟಿಸಿದ್ದಾರೆ. ಈ ಪ್ರದೇಶದಲ್ಲಿ (ಫೇಸ್-೧) ಇಲ್ಲಿ ಎರಡು ಕೃತಕ ಕೊಳಗಳನ್ನು ನಿರ್ಮಿಸಿದ್ದಾರೆ. ಈ ಕೊಳದಲ್ಲಿ ಲೀಲಾಜಾಲವಾಗಿ ನಗುವ ಆ ನೀರೆಯನ್ನು ಕಂಡರೆ ಈ ಕೊಳ ಕೃತಕವಾದದ್ದಲ್ಲ ನೈಸರ್ಗಿಕವಾಗೇ ಈ ಮರುಭೂಮಿಯಲ್ಲಿ ಹುಟ್ಟಿದವಳೇನೋ ಎಂದೆನಿಸುತ್ತದೆ. ಇದೇ ಕೊಳಕ್ಕೆ ಹಲವಾರು ಪಕ್ಷಿಗಳು ವಲಸೆ ಬಂದು ಹೋಗುತ್ತಿರುತ್ತವೆ. ಈ ಕೊಳದ ಈ ಕೊಳದ ಸುತ್ತಲೆಲ್ಲ ಹಸಿರು ಜಿನುಗುಡುತ್ತಲಿವೆ ಜೊತೆಗೆ ದುಂಬಿಗಳ ಕಲರವ ಎಲ್ಲರ ಕಿವಿಯನ್ನು ಇಂಪುಗೊಳಿಸುತ್ತದೆ.



ಮೊಟ್ಟ ಮೊದಲಿಗೆ ಕಂಡ ಕೊಳ ಮನಸ್ಸಿಗೆ ಮುದ ನೀಡಿತ್ತು ಸ್ವಲ್ಪ ಸಮಯದ ನಂತರ ಎಲ್ಲರಿಗೂ ಕೈ ಚೀಲಗಳು, ಕಸವನ್ನು ತುಂಬುವ ಚೀಲಗಳನ್ನು ಸಹ ಕೊಟ್ಟರು. ಇಲ್ಲಿ ಈಗಾಗಲೇ ಸ್ವಚ್ಚಂದವಾಗಿರುವ ಸ್ಥಳ. ಅದನ್ನು ಏಕೆ ಸ್ವಚ್ಚಗೊಳಿಸಬೇಕು ಎಂದುಕೊಳ್ಳುತ್ತಿರಬಹುದು. ಈ ಮರುಭೂಮಿಯಲ್ಲಿ ಗಾಳಿ ಹೆಚ್ಚು ಒಮ್ಮೊಮ್ಮೆ ಬಿರುಗಾಳಿ ಎಲ್ಲಿಯೋ ಇರುವ ಕಸಕಡ್ಡಿಗಳನ್ನು ಹೊತ್ತು ಇನ್ನೊಂದೆಡೆ ಸರಾಗವಾಗಿ ತಂದು ಬಿಸುಡುವಂತ ಕೆಲಸ ಈ ವಾಯುದೇವ ಮಾಡಿಮುಗಿಸುತ್ತಾನೆ. ಈ ಗಾಳಿಯ ಜೊತೆಗೆ ನೇಸರನ ತೊಟ್ಟಿಲನ್ನಾಗಿಸಲು ಹೊರಟಿರುವ ಈ ಸ್ಥಳದಲ್ಲಿ ಮನುಷ್ಯನೂ ಕೆಲಸ ಮಾಡಬೇಕಾಗುತ್ತದೆ ಅಲ್ಲವೇ? ಅಲ್ಲಿ ಹಲವು ಗಿಡ ಮರಗಳನ್ನು ನೆಟ್ಟು, ಅದಕ್ಕೆಂದೇ ಹನಿ ನಿರಾವರಿಯ  ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ ಇವೆಲ್ಲಾ ಕೆಲಸಗಳನ್ನು ಮಾಡುವಾಗ ಈ ಮೂಢ ಮಾನವ ತಾನು ತಂದಿದ್ದ ಹೂಗಿಡಗಳ ಪಾಟ್, ಪ್ಲಾಸ್ಟಿಕ್ ಚೀಲಾ ಎಲ್ಲವನ್ನೂ ತನ್ನ ಕೆಲಸ ಮುಗಿದ ಮೇಲೆ ಅಲ್ಲೇ ಬಿಟ್ಟು ಹೋಗಿದ್ದ, ಜೊತೆಗೆ ಟೈಂ ಪಾಸ್ಗೆ ಸಿಗರೇಟ್, ಪೆಪ್ಸಿ ಎಂದು ಇವೆಲ್ಲವನ್ನು ತಿಂದು ಕುಡಿದು ಅಲ್ಲಿಯೇ ಬಿಸಾಕಿದ್ದರು. ಇಂತಹವನ್ನೆಲ್ಲಾ ನಾವುಗಳು ಸ್ವಚ್ಚಗೊಳಿಸುವ ಸಣ್ಣ ಪ್ರಯತ್ನ ಮಾಡಿದೆವು.




ಹಾಗೆ ನಾವು ಸುಮಾರು ೩೦ ಜನರಲ್ಲಿ ೩ ಗುಂಪು ಮಾಡಿ ಸುತ್ತುವರೆದೆವು. ಮುಂದೆ ಸಾಗಿದಂತೆ ನೆಲದಲ್ಲಿ ಹೆಜ್ಜೆ ಇಡಲೂ ಭಯ ಪಾಪ ಈ ಹುಳಹುಪ್ಪಟಗಳು ತಮಗಾಗೇ ಗೂಡುಕಟ್ಟಿಕೊಂಡಿರುವವನ್ನು ಎಲ್ಲಿ ತುಳಿದು ಬಿಡುತ್ತೇವೋ ಎಂಬ ಭಯ. ಹಾವುಗಳು, ಹಲ್ಲಿಗಳು, ಇರುವೆ, ಇಲಿ, ಹೆಗ್ಗಣ ಹೀಗೆ ಹಲವಾರು ಪ್ರಾಣಿಗಳು ತಮ್ಮ ತಮ್ಮ ಮನೆಗಳನ್ನು ಸ್ವತಂತ್ರದಿಂದ ಸುಂದರವಾಗಿ ಕಟ್ಟಿ ಕೊಂಡಿದ್ದವು.  ಸುತ್ತಲಿನ ಭೂಪ್ರದೇಶವನ್ನು ಸುತ್ತುವರಿದು ಕೈಗೆ ಸಿಕ್ಕಿದ ಗಾಜು,ಚೀಲಗಳು, ಕಬ್ಬಿಣ ಸಲಾಕೆಗಳು, ಟೈಯರ್,ಪ್ಲಾಸ್ಟಿಕ್ ಸಾಮಾನುಗಳು ಹೀಗೆ ಸುಮಾರು ಕಸವನ್ನು ಶೇಖರಿಸಿದೆವು. 
ಸಿಗರೇಟ್ ಸೇದಿ ಉಳಿದ ತುಂಡು ಮಣ್ಣಿನೊಳಗೆ ಬೆರೆತುಹೋಗಲು ಸುಮಾರು ೪೦೦ ವರ್ಷಗಳು ಬೇಕಾಗುತ್ತದೆ ಎಂದರೆ ಊಹಿಸಿಕೊಳ್ಳಿ. ಅಂತಹ ವಸ್ತುಗಳು ಮಣ್ಣಿನಲ್ಲಿ ಸೇರಿಕೊಂಡು ಮಣ್ಣಿನಲ್ಲಿರುವ ಸತ್ವವನ್ನೇ ನುಂಗಿಬಿಡುತ್ತವೆ. ಇಷ್ಟೆಲ್ಲಾ ಕೆಡಕಿನಲ್ಲೂ ಪ್ರಕೃತಿಗೆ ಮೀಸಲಿಟ್ಟ ಸ್ಥಳವನ್ನು ಬಿಡಲಾರರು. ಸದಾ ಅಲ್ಲಿ ಬರುವ ಪಕ್ಷಿಗಳನ್ನು ಬೇಟೆಯಾಡಲು ಬೇಲಿ ನುಸುಳಿ ಬರುವಂತ ಬೇಟೆಗಾರರೂ ಹೆಚ್ಚೆಂದು ಅಲ್ಲಿನ ನಿರ್ವಾಹಕರು ಹೇಳುತ್ತಿದ್ದು ಕೇಳಿ ಬೇಸರವೆನಿಸಿತು. 
                                          
ಬೇಟೆಗಾರರು ಹಾರಿಸಿದ್ದ ಗುಂಡು ನನ್ನ ಕೈಗೆ ಸಿಕ್ಕಿತು.
 


KOC ಎಂಬ ಕಂಪನಿ K’S Path ಸಹಯೋಗದೊಂದಿಗೆ ಪ್ರಾಣಿಗಳ ಸಹಜ ವಾಸಸ್ಥಾನ ಮಾಡಬೇಕೆಂದು ಈ ಭೂ ಪ್ರದೇಶವನ್ನು ಅಚ್ಚುಕಟ್ಟಾದ ಸ್ಥಳವನ್ನಾಗಿಸಿ ಪ್ರಾಣಿ, ಪಕ್ಷಿ, ಜೀವಜಂತುಗಳಿಗೆ ಅನುವು ಮಾಡಿಕೊಟ್ಟಿದೆ. ಇಂತಹ ಯೋಜನೆಯನ್ನು ಹಮ್ಮಿಕೊಂಡಿರುವು ಪ್ರಪಂಚದಲ್ಲೇ ಇದೇ ಮೊದಲ ಕಂಪನಿ ಎಂದು ಹೇಳುತ್ತಾರೆ. KOC ನೈಸರ್ಗಿಕವಾಗಿ ದೊರೆಯುವ ತೈಲ ಸಿರಿಯನ್ನು ತೆಗೆದು ಬಳಸುತ್ತಿರುವುದರಿಂದ ಈ ಭೂಮಿಯ ಫಲವತ್ತತೆ ನಶಿಸಿ ಹೋಗುವುದನ್ನು ಮತ್ತೊಂದೆಡೆ ನೈಸರ್ಗಿಕ ಸವಲತ್ತುಗಳನ್ನು ಸೃಷ್ಟಿಸುತ್ತಿವೆ ಇದು ಶ್ಲಾಘನೀಯ. ಎಲ್ಲರೂ ಹೇಳಬಹುದು ಆಯಿಲ್ (ತೈಲ) ದುಡ್ಡು ಇನ್ನೇನು ಮಾಡುತ್ತಾರೆ  ಮಾಡಲಿ ಬಿಡಿ ಎಂದು, ನಿಜ ಒಪ್ಪಬೇಕಾದ್ದೆ ಆದ್ರೆ ದುಡ್ಡು ಇದ್ದು ಎಷ್ಟು ಜನ ಯಾರು ಯಾರು ಏನು ಮಾಡುತ್ತಾರೆ ಹೇಳಿ. ಇಲ್ಲಿ ಕೆಲಸಗಳಿಗೆಂದೆ ಹಲವಾರು ವಿಜ್ಞಾನಿಗಳು, ಪರಿಸರ ತಜ್ಞರು, ಇಂಜಿನಿಯರುಗಳು ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯ ಮಲೆನಾಡಾಗುವುದಂತೂ ಸತ್ಯ.
   
ಪ್ರಾಣಿ,ಪಕ್ಷಿ, ಗಿಡಮರಗಳ ನೆಲೆವೀಡಾಗಲೆಂದು ಮಾಡಹೊರಟಿರುವ ಈ ಸ್ಥಳವನ್ನು ಒಂದೆರಡು ಘಂಟೆಗಳ ಕಾಲ ಸ್ವಚ್ಚಗೊಳಿಸಿ ಬಂದಿದ್ದಕ್ಕೇನು ನಮ್ಮಗಳಿಗೆ ತೊಂದರೆಯಾಗಿಲ್ಲ ಅಲ್ಲಿರುವ ಗಿಡ ಮರ, ಜೀವಜಂತುಗಳು, ಎಲ್ಲ ವಾಸಸ್ಥಾನ ಹೇಗಿದೆ ಯಾವರೀತಿ ಬೆಳೆಯುತ್ತಿವೆ. ಪ್ರಕೃತಿ ಒಂದು ಪಾಠವಿದ್ದಂತೆ ನಮಗೆ ಗೊತ್ತಿಲ್ಲದನ್ನು ಕಲಿಸುತ್ತದೆ. ಅಂದು ನಮ್ಮ ಜೊತೆಯಲ್ಲಿ ಹಲವು ಕುವೈತಿ ಜನರೂ ಕೂಡಾ ಬಂದಿದ್ದರು ಅವರೊಂದಿಗಿನ ಒಡನಾಟ ಒಂದೊಳ್ಳೆ ಅನುಭವವನ್ನು ಕೊಟ್ಟಿತು.


ಗೂಡುಗಳು...

ಕೊನೆಯಲ್ಲಿ ಎಲ್ಲರೂ ಹೊರಡುವ ಮುನ್ನ ನಮ್ಮ ಜೊತೆಗೆ ಇದ್ದ ಕುವೈತಿ ಇಂಜಿನಿಯರ್ ಒಂದು ಮಾತು ಹೇಳಿದರು "ಮನುಷ್ಯ ಈ ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಅವನು ಒಂದಿಲ್ಲೊಂದು ದಿನ ಭೂಮಿಯ ಒಳಗೆ ಹೂತುಹೋಗುತ್ತಾನೆ ಅಂತಹದರಲ್ಲಿ ಎಲ್ಲಿದ್ದರೂ ನಮ್ಮ ಜೊತೆ ಇರುವ ಪ್ರಕೃತಿಗೆ ನಮ್ಮ ಕೈಲಾದ ಕೆಲಸ ಮಾಡಲೇಬೇಕು" ಎಷ್ಟು ನಿಜ ಅನ್ನಿಸಿತು. ಇದು ನಮ್ಮ ಊರಲ್ಲ ಆದರೂ ನಮಗೆ ಅನ್ನ ಕೊಡುತ್ತಿರುವ ಊರು ಗೌರವಿಸಲೇಬೇಕು ನಮ್ಮ ಕೈಲಾದದ್ದನ್ನು ಮಾಡಲೇಬೇಕು ಎಂದೆನಿಸಿತು. 
 ಕಡಿಮೆ ಸಿಹಿಯುಳ್ಳಂತಹ ಖರ್ಜೂರದ ಮರಗಳು
ನಾವು ಎಲ್ಲಿದ್ದರೇನು, ಹೇಗಿದ್ದರೇನು ಪ್ರಕೃತಿ ಎಂಬವಳ ಮಡಿಲಲ್ಲೇ ಬದುಕಬೇಕು. ಆ ಪ್ರಕೃತಿಗೆ ಹಾರೈಕೆ ಮಾಡುತ್ತಲೇ ಇರಬೇಕು ಇಲ್ಲವಾದರೆ ಒಮ್ಮೆ ಮುನಿಸ್ಯಾಳು ಸುನಾಮಿ, ಭೂಕಂಪ ತಂದ್ಯಾಳು.


KOCಗೆ ಒಳಪಟ್ಟ ಭೂಪ್ರದೇಶದಲ್ಲಿ ಸುಮಾರು ೧೨% ಭೂಭಾಗವನ್ನು ಪರಿಸರಕ್ಕೆ ಮೀಸಲಿಟ್ಟಿರುವುದು ಖುಷಿಯ ವಿಷಯ. ಇಂತಹುದೇ ಕೆಲಸಗಳನ್ನು ಸರ್ಕಾರ ಮತ್ತು ಕಂಪನಿಗಳು ಮಾಡುತ್ತ ಬಂದರೆ ನಿಜಕ್ಕೂ ಸಂತಸ ಮತ್ತು  ಪ್ರಕೃತಿ ಮಾತೆಗೆ ಕೊರತೆ ಎಂಬುದು ಬರುವುದಿಲ್ಲ ಎಂದೆನಿಸುತ್ತದೆ. 

Tuesday, January 22, 2013

ಮನಸು-ಕನಸು ಇವೆರಡರ ನಡುವೆ

ನನ್ನ ಪ್ರೀತಿಯ ತಮ್ಮ ಡಾ.ಲೋಹಿತ್ ತೆಗೆದ ಕೆಲವು ಚಿತ್ರಗಳಿಗೆ ನನ್ನ ಸಾಲುಗಳು :)

-ಮುಗ್ಧ ಮನಸು-


ಛಳಿಯಲಿ ಬೆಚ್ಚಗೆ ಮಲಗಿದ್ದೆ
ಅಮ್ಮನೋ ಬಿಡದೆ ಮುದ್ದಿಸಿ
ನನ್ನ ಎಬ್ಬಿಸಿ ಬುತ್ತಿ ಕಟ್ಟಿ
ಶಾಲೆಗೆ ಕಳುಹಿಸಿಹಳು....

ಬೆನ್ನಿಗೆ ಬಿದ್ದ 
ಪುಸ್ತಕದ ಹೊರೆ ಹೊತ್ತು
ಮನೆ ಬಿಟ್ಟು ದೂರ ನೆಡೆದರೂ 
ತೂಗಡಿಕೆ ಏಕೋ ಕಾಡಿದೆ ...

ಬಿಸಿಲು ಎಳಸಾಗಿ
ಕಾಲುವೆಯು ಹೊಳಪಾಗಿ
ಗಾಳಿಯು ತಂಪೆರಗಿ
ನನ್ನ ಚುಂಬಿಸುತಿವೆ
ಎಳೆ ಮನಸಿಗೆ ಸುಖವೆನಿಸಿದೆ...

ರಸ್ತೆ ಬದಿ, ಸೇತುವೆ, ಯಾವುದಾದರೇನು
ಕೊಂಚ ವಿಶ್ರಮಿಸುವ 
ಆಸೆಯಲಿ ಹೊಟ್ಟೆ ತುಂಬುವ
ಬುತ್ತಿ ಆಶ್ರಯಿಸಿ 
ಮಂಪರಿಗೆ ಜಾರಿರುವೆ 

-------------

-ಭವಿಷ್ಯದ ಕನಸು-


ಬುತ್ತಿಗಿಂತ ಅತಿ ಹೆಚ್ಚು
ಕನಸುಗಳನು ಹೊತ್ತು
ಭವಿಷ್ಯ ಹುಡುಕ ಹೊರಟ
ಕೂಸು ಯಾ ಒಡಲ ಮುತ್ತು


ಹಾದಿ ಸವೆಸಿದ ಹೆಜ್ಜೆಗಳು
ಸದಾ ನವಿರಾದ ಗೆಜ್ಜೆಗಳಲಿ
ಮುಂಬರುವ ಬದುಕಿಗೆ
ಹೊಸ ಭಾಷ್ಯ ಬರೆಯಲಿದೆ.. 

ನೇಸರ ಬೆಳಕಿಗೆ
ಹೊಳೆವ ಕಣ್ಣು
ಯಶಸ್ಸಿನ ಆಗರ
ಬೆಳೆಸುವಳು ಈ ಹೆಣ್ಣು...