Tuesday, April 28, 2009

ಬಸವಜಯಂತಿ ಆಚರಣೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ..

ದಟ್ಸ್ ಕನ್ನಡ ಹಾಗು ಕೆಂಡ ಸಂಪಿಗೆಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ... ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..
ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..


ಕೆಲವು ಆಯ್ದ ವಚನಗಳ ಸಾಲುಗಳುಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು

Sunday, April 12, 2009

ಹೊರಾಂಗಣ ವಿಹಾರ..

ದಾಸಜಯಂತಿಯ ನಂತರ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೧೦.೪.೨೦೦೯ ಕುವೈಟ್ ಸಿಟಿಯ ಶರ್ಕ್ ಉದ್ಯಾನವನದಲ್ಲಿ (sharq garden) ವಿಹಾರವನ್ನು ಏರ್ಪಡಿಸಿದ್ದರು... ಕೂಟದ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಕುಣಿದು ನಲಿದು ಆಟವಾಡಿ ತಮ್ಮ ಸಮಯ ಕಳೆಯಲೆಂಬುದೇ ಈ ವಿಹಾರದ ಉದ್ದೇಶ..ಹಾಗೆಯೆ ನಾವೆಲ್ಲ ಅಪ್ಯಾಯಮಾನವಾಗಿ ಆ ಕುಶಿಯನ್ನು ಅನುಭವಿಸಿ ಬಂದೆವು..
ಶುಭಶುಕ್ರವಾರ ಬೆಳ್ಳಗ್ಗೆ ೭.೩೦ಕ್ಕೆ ಎಲ್ಲ ಕೂಟದ ಸದಸ್ಯರಿಗೆ ನೆಡಿಗೆ ಸ್ಪರ್ಧೆ(walkathon) ಏರ್ಪಡಿಸಿದ್ದರು ಈ ಸ್ಪರ್ಧೆಗೆ ಕೊಟದ ಸದಸ್ಯರು ಅತಿ ಹೆಚ್ಚು ಅಲ್ಲದಿದ್ದರು ಸುಮಾರು ಮಂದಿ ಭಾಗವಹಿಸಿದ್ದರು.... ಈ ನೆಡಿಗೆ ಬರಿ ದೊಡ್ದವರಿಗೆ ಅಲ್ಲದೆ ಚಿಕ್ಕ ಮಕ್ಕಳಿಗು ಏರ್ಪಡಿಸಿದ್ದರು ಆ ಮಕ್ಕಳಲ್ಲಿದ್ದ ಉತ್ಸಾಹ ಹೇಳ ತೀರದು ಎಲ್ಲರು ನಾ ಮುಂದು ತಾ ಮುಂದು ಎಂದು ಅತಿ ಸಂತೋಷದಿ ಭಾಗವಹಿಸಿದರು...ಸುಮಾರು ೮.೩೦ಕ್ಕೆ ಮುಕ್ತಾಯವಾಗುವಷ್ಟರಲ್ಲಿ ಎಲ್ಲರು ನೆಡೆದು ತುಂಬಾ ಸುಸ್ತಾಗಿದ್ದರೆಂದು ಎಲ್ಲರಿಗು ಉಪಹಾರದ ಏರ್ಪಾಟು ಮಾಡಿದ್ದರು...ಎಲ್ಲರು ಉಪಹಾರದ ನಂತರ ಇನ್ನೆನು ಆಟೋಟಗಳನ್ನು ಪ್ರಾರಂಭಿಸಬೇಕಲ್ಲ ಅದಕ್ಕೆಂದೆ ನೇಮಿಸಿರುವ ತಂಡಗಳನ್ನು ಎಲ್ಲರು ಹುಡುಕುವ ಯೋಚನೆಯಲ್ಲಿದ್ದರು ನಮ್ಮಲ್ಲಿ ನೇತ್ರಾವತಿ(ಹಳದಿಬಣ್ಣ), ಕಾವೇರಿ(ನೀಲಿ), ಶರಾವತಿ(ಹಸಿರು), ಹೇಮಾವತಿ(ಕೆಂಪು) ಎಂದು ನಾಲ್ಕು ಗುಂಪುಗಳನ್ನಾಗಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮಾಡಲಾಗಿದೆ ಇಲ್ಲಿ ಎಲ್ಲ ಮಕ್ಕಳು ಹೆಂಗಸರು, ಗಂಡಸರನ್ನು ಒಂದೊಂದು ಗುಂಪಿಗು ಇಷ್ಟು ಜನರೆಂದು ವಿಂಗಡಿಸಲಾಗಿದೆ.. ಈ ಸಮಯಕ್ಕಾಗಲೇ ಉಳಿದೆಲ್ಲಾ ಕುಟುಂಬಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು, ಎಲ್ಲರು ಅವರವರ ಟೀಮ್ ನಲ್ಲಿ ನಿಂತು ಆಟೋಟ ಕಾರ್ಯಕ್ರಮ ಚಾಲನೆಗೆಂದು ಕಾದು ನಿಂತಿದ್ದರು.. ಟೀಮ್ ಕ್ಯಾಪ್ಟನ್ ಎಲ್ಲರು ಪಂಜು ಹಿಡಿದು ನೆಡೆದು ನಂತರ ಕಾರ್ಯಕಾರಿ ಸಮಿತಿಯವರಿಗೆ ವರ್ಗಾಯಿಸಿದರು ಕಾರ್ಯಕಾರಿ ಸಮಿತಿಯವರು ಕುಟುಂಬ ಸಮೇತರಾಗಿ ಆ ಪಂಜನ್ನು ಹಿಡಿದು ಉದ್ಯಾನವನ್ನು ಒಂದು ಸುತ್ತುವರಿದು ಬಂದು ಜ್ಯೋತಿ ಬೆಳಗಿಸಿದರು...ನಂತರ ಬೆಲೂನ್ ಹಾಗು ಪಾರಿವಾಳಗಳನ್ನು ಆಗಸಕ್ಕೆ ತೇಲಿಬಿಟ್ಟರು.....ಇತ್ತ ಕೂಟದ ಸದಸ್ಯರು ಜೋರಾಗಿ ಚಪ್ಪಾಳೆಯೊಂದಿಗೆ ನಗುವಿನ ಹೊಳೆ ಹರಿಸುತ್ತಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು........ ಇಷ್ಟೆಲ್ಲ ನೆಡೆಯುವವರೆಗು ನೇಸರ ಬಲು ಶಾಂತಿಯಿಂದ ಮೋಡದಲ್ಲಿ ಮನೆಮಾಡಿ ಕುಳಿತಿದ್ದ ನಾವೆಲ್ಲ ಕುಣಿದು ಕುಪ್ಪಳಿಸುವವರೆಗು ನೀ ಹಾಗೆ ಇದ್ದುಬಿಡು ಶಾಂತಿಯಿಂದ ಎಂದು ಹೇಳಿಬಿಟ್ಟೆ ಆದರೆ ಅವನು ಕೇಳಬೇಕಲ್ಲ ಅವನಿಗು ಅವನ ಕೆಲಸ ಮಾಡುವಾಸೆ ಬಿಸಿಲ ತಾಪ ಸ್ವಲ್ಪ ಸ್ವಲ್ಪ ಭುವಿಗೆ ಇಳಿಯಲುಬಿಡುತ್ತಿದ್ದ...ಈ ಕಾರ್ಯಕ್ರಮದ ನಂತರ ಮಕ್ಕಳಿಗೆಂದೇ ಆಟಗಳನ್ನು ಏರ್ಪಡಿಸಿದ್ದರು೧. ೫ ವರ್ಷಕ್ಕಿಂತ ಕಡಿಮೆ ಇರುವಂತ ಮಕ್ಕಳಿಗೆ ದೊಡ್ಡ ಶೊ ಧರಿಸಿ ನೆಡೆಯುವುದು.. (Big Shoe Walk), ಮತ್ತೊಂದು ವಕ್ರ ನೆಡಿಗೆ (Zigzag Walk)೨. ೫ ರಿಂದ ೮ ವರ್ಷದ ಮಕ್ಕಳಿಗೆ ಕೋಲಿ(ಕಡ್ಡಿ)ನೊಂದಿಗೆ ಉಂಗುರ (Pole with Rings) ಹಾಗು ಕುಂಟು ಓಟ (One leg Race)೩. ೮ ರಿಂದ ೧೨ ಮತ್ತು ೧೨ರಿಂದ ೧೮ ವರ್ಷದ ಮಕ್ಕಳಿಗೆ ಓಟ (Relay) ಹಾಗು ರಿಂಗ್(ಉಂಗುರ) ಓಟ (Ring Race). ಎಲ್ಲ ಆಟೋಟಗಳಲ್ಲಿ ಎಲ್ಲ ಮಕ್ಕಳು ಮನಸೋ ಇಚ್ಚೆ ಸಂತೋಷದಿಂದ ಭಾಗವಹಿಸಿ ಕೆಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾದರು ಇನ್ನು ಕೆಲವು ಮಕ್ಕಳು ಬೇಸರಪಟ್ಟರು ಪ್ರಶಸ್ತಿ ಬರಲಿಲ್ಲವೆಂದು ಆದರು ಅವರೆಲ್ಲ ಪಾಲ್ಗೊಂಡಿದ್ದರಲ್ಲ ಅದೇ ಮುಖ್ಯ...ಈ ಎಲ್ಲ ಆಟಗಳು ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದು ಕುಟುಕುತಲಿದ್ದ....ಆದರು ನಮಗೆ ಸಮಾಧಾನವಿರಲಿಲ್ಲ ಭಾಸ್ಕರನು ದಿನವೆಲ್ಲ ಬಂದೇ ಬರುತ್ತಾನೆ ಆದರೆ ನಾವು ಈ ವಿಹಾರಕ್ಕೆ ಬಂದಿರುವುದು ಈ ದಿನ ಮಾತ್ರವಲ್ಲವೇ ದೊಡ್ಡವರು ಸ್ವಲ್ಪ ಆಟೋಟಗಳನ್ನು ಆಡಿಬಿಡೋಣವೆಂಬ ಬಯಕೆ ಇತ್ತು ಅದಕ್ಕೆಂದೆ ಕ್ರೀಡಾಸಮಿತಿ ಮಕ್ಕಳಿಗೆ ಆಟೋಟಗಳು ಇದ್ದಮೇಲೆ ದೊಡ್ಡವರು ಏನು ಮಾಡಬೇಕು ಎಂದು ನಮ್ಮೆಲ್ಲರಿಗು ಆಟಗಳನ್ನು ಏರ್ಪಡಿಸಿದ್ದರು ಖೋ-ಖೋ ಮಹಿಳೆಯರಿಗೆ (ಈ ಆಟ ನಮ್ಮ ಹಳೆಯ ಹಾಗು ರಾಜ್ಯಮಟ್ಟದ ಆಟ) ಹಾಗು ವಾಲಿಬಾಲ್ ಗಂಡಸರಿಗೆಂದು ನಿಶ್ಚಯವಾಗಿತ್ತು. ಕ್ರಿಕೆಟ್ ಎಂಬ ಆಟ ಬಂದು ಹಳೆಯ ನಮ್ಮದೇ ಆದ ಆಟಗಳು ನಶಿಸುವಂತೆ ಮಾಡಿದೆ ಕ್ರಿಕೆಟಿಗೆ ಏನು ಹೇಳುವಂತಿಲ್ಲ ಆಡುವವರು ನಾವುಗಳಲ್ಲವೇ ನಾವುಗಳು ನಮ್ಮ ಆಟಗಳನ್ನು ಮರೆತು ಬೇರೆ ಆಟೋಟಗಳನ್ನು ಪ್ರೀತಿಸಲು ಮುಂದಾಗಿ ನಮ್ಮದನ್ನು ನಶಿಸಿಸುವಂತೆ ಮಾಡಿಬಿಡುತ್ತಲಿದ್ದೇವೆ ಅಲ್ಲವೆ?... ಆದರೆ ನಮ್ಮ ಕೂಟದಲ್ಲಿ ಹಳೆಯದನ್ನು ಮೆಲುಕು ಆಕಲಿಕ್ಕೆಂದು ಈ ಎಲ್ಲಾ ಆಟೋಟಗಳನ್ನು ನೆರೆವೇರಿಸಿದರು... ಖೋ-ಖೋವೇನೋ ಎಲ್ಲಾ ಮಹಿಳೆಯರು ಅತಿ ಪ್ರೀತಿಯಿಂದ ಬಿದ್ದು ಎದ್ದು... ಮಣ್ಣಲ್ಲಿ ಮಿಂದು ಬಂದರು ಅತಿ ಆಸೆಯಿಂದ ಬಾಲ್ಯದಿನಗಳಲ್ಲಿ ಆಡುತ್ತಲಿದ್ದ ಖೋವನ್ನು ನೆನೆದು ಅನುಭವಿಸಿ ಆಡಿದರು...ಈ ಸಮಯಕ್ಕಾಗಲೇ ನಾಲ್ಕು ತಂಡಗಳಲ್ಲಿ ಕಾವೇರಿ ಹಾಗು ನೇತ್ರಾವತಿ ತಂಡಕ್ಕೆ ಹಣಹಣಿ ನೆಡೆದು ಅವರು ಅಂತಿಮ ಸುತ್ತಿಗೆ ನೇತ್ರಾವತಿ ಸಚ್ಚಾಗಿತ್ತು ಇನ್ನೋಂದು ತಂಡ ಶರಾವತಿ ಹಾಗು ಹೇಮಾವತಿ ಇವರಲ್ಲಿ ತೀವ್ರ ಪೈಪೋಟಿ ನೆಡೆದು ಹೇಮಾವತಿ ತಂಡ ಅಂತಿಮ ಸುತ್ತಿಗೆ ಬಂದಿದ್ದರು ಆಗ ತಾನೆ ಆಟವಾಡಿದ್ದ ತಂಡಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಗಂಡಸರ ತಂಡಗಳತ್ತ ವಾಲುವ ಮನಸು ಮಾಡಿದರು ಕ್ರೀಡಾ ಸಮಿತಿ...ವಾಲಿಬಾಲ್ ಆಟವನ್ನು ಎಲ್ಲರು ಸಂತಸದಿ ಹಿರಿಯರು ಕಿರಿಯರು ಎನ್ನದೇ ಇಲ್ಲಿಯು ಸಹ ತಂಡಗಳು ಮನಸೋ ಇಚ್ಚೆ ಕುಣಿದು ನಲಿದರು... ಇಲ್ಲಿ ನೇತ್ರಾವತಿ ಹಾಗು ಹೇಮಾವತಿ ತಂಡಗಳ ಹಣಾಹಣಿಯಲ್ಲಿ ನೇತ್ರಾವತಿಯದೆ ಮೇಲುಗೈ ಹಾಗು ಕಾವೇರಿ ಮತ್ತು ಶರಾವತಿಯವರ ತಂಡದಿಂದ ಶರಾವತಿಯವರದೇ ಮೇಲುಗೈ. ಕೊನೆಯ ಹಾಗು ಅಂತಿಮ ಹಣಾಹಣಿಯಲ್ಲಿ ಶರಾವತಿಯವರ ಮೇಲುಗೈ ಸಾಧಿಸಿ ಮೊದಲ ಸ್ಥಾನಕ್ಕೆ ಪಾತ್ರರಾದರು...ನೇತ್ರಾವತಿ ಎರಡನೇ ಸ್ಥಾನಕ್ಕೆ ಪಾತ್ರರಾದರು..
ಇಷ್ಟೆಲ್ಲ ನೆಡೆಯುವಷ್ಟರಲ್ಲಿ ಹೊಟ್ಟೆಯು ಕರೆದಿತ್ತು ಸೂರ್ಯನು ಬಿಸಿಲ ತಾಪವನ್ನು ಚುರುಗುಟ್ಟಿಸುತ್ತಲಿದ್ದನು ಮಧ್ಯೆ ಮಜ್ಜಿಗೆಯನ್ನು ಕುಡಿದು ಮತ್ತೆ ಖೋ-ಖೋ ಅಂತಿಮ ಹಣಾಹಣಿ ನೋಡಲು ಎಲ್ಲರು ಅಲ್ಲಿ ನೆರೆದಿದ್ದರು ಹೇಮಾವತಿ ತಂಡ ಟಾಸ್ ಗೆದ್ದು ನೇತ್ರಾವತಿಯವರು ಕುಳಿತು ಆಡಲು ಬಿಟ್ಟರು ಅವರು ಮೈದಾನವನ್ನು ಆಯ್ಕೆ ಮಾಡಿದರು ಇಬ್ಬರ ಹಣಾಹಣಿ ಬಲು ಜೋರೆ ನೆಡೆದಿತ್ತು ಎಲ್ಲೋ ಒಲಂಪಿಕ್ಸ್ ಗೆ ಆಡುತ್ತಲಿದ್ದಾರೇನೋ ಎನ್ನುವ ಹಾಗೆ ಎರಡು ಟೀಮಿನ ಆಟಗಾರರು ಬಲು ಶ್ರಮದಿಂದ ಮೈದಾನಕ್ಕೆ ಮೈ ಒಡ್ಡಿ ಬಟ್ಟೆಗೆಲ್ಲ ಮಣ್ಣು ಮುಕ್ಕಿಸಿಕೊಂಡು ಆಡಿದರು ಎನೇಆಗಲಿ ಅವಿಸ್ಮರಣೀಯ ಆಟವೇ ಸರಿ.. ದೇಹ ಭಾರವಾದರು ಮೈಕೈ ನೋವಾದರು ಅದ ಲೆಕ್ಕಿಸದೇ ಎಲ್ಲರು ಆಟದಲ್ಲಿ ಮುಳುಗಿಬಿಟ್ಟಿದ್ದರು ಅಂತೆಯೇ ಪ್ರೋತ್ಸಾಹದ ಚಪ್ಪಾಳೆಗಳು ಹುರಿದುಂಬಿಸುವ ಮಾತುಗಳು ಅತ್ತಕಡೆಯಿಂದ ಕೇಳಿಬರುತ್ತಿದ್ದ ಧ್ವನಿಗಳಲ್ಲಿ ಚಿಣ್ಣರು ದೊಡ್ಡವರು ಕರುನಾಡಿಂದ ಬಂದಿದ್ದ ಅಪ್ಪ ಅಮ್ಮಂದಿರು ಎಲ್ಲರು ಸೇರಿದ್ದರು... ಕೊನೆಗೆ ಅತಿ ಹೋರಾಟದಿ ನೇತ್ರಾವತಿ ತಂಡ ಮೊದಲ ಸ್ಥಾನಕ್ಕೆ ಪಾತ್ರರಾದರು ಹಾಗು ಹೇಮಾವತಿ ತಂಡ ಎರಡನೇ ಸ್ಥಾನಕ್ಕೆಪಾತ್ರರಾದರು..
ಇದರ ನಂತರ ಎಲ್ಲರಿಂದ ಹೋಗಳಿಕೆ ನಂತರ ವನಭೋಜನಕ್ಕೆಂದು ಸಾಲು ಸಾಲಗಿ ನಿಂತೆವು ಎಲ್ಲರು ವೃಕ್ಷರಾಶಿಯಲಿ ಅಲ್ಲೊಂದು ಇಲ್ಲೊಂದು ಕಾಣುವ ಪಕ್ಷಿಗಳು,ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಊಟವನ್ನು ಸವಿದೆವು...ಇಷ್ಟರನಂತರ ಕೇಳಬೇಕೆ ಊಟವಾಯಿತು ನಿದ್ದೆ ಜೋಂಪೆತ್ತುವ ಸಮಯ ಆಗಲೇ ಅತ್ತಕಡೆಯಿಂದ ಬಿಂಗೋ ಆಡುವ ಬನ್ನಿ ಎಂದು ಕೋಗುವ ಕರೆಕೇಳಿ ಎಲ್ಲರು ಹುಲ್ಲಿನ ಮೇಲೆ ಆಸೀನರಾಗಿ ನಮ್ಮಲ್ಲಿದ್ದ ಬಿಂಗೋ ಚೀಟಿ ಹಿಡಿದು ಈಗ ನನ್ನ ಅಂಕಿ ಬರಬಹುದು.....ಬರಬಹುದು........ಎಂದು ಕಾಯುತ್ತ ಯಾರದೋ ಅಂಕಿಗಳಲ್ಲಿ ಮೊದಲ ಐದು ಅಂಕಿ ಆಯ್ತು(quick five), ಮೊದಲನೇ,ಎರಡನೇ,ಮೂರನೇ ಲೈನ್ ಆಯ್ತು(first,second, third line) ಎಂದು ಅವರಿಗೆ ದೊರೆಯಬೇಕಿದ್ದ ಎಲ್ಲ ಬಳುವಳಿ ಕೊಟ್ಟುಬಿಟ್ಟಿದ್ದರು ಇನ್ನೆನು ಪೂರ್ತಿ ಮನೆಯ ಅಂಕಿಗಳಲ್ಲಾದರು ನನ್ಗೆ ಸಿಗುತ್ತೆಂದು ಕಾಯುವಷ್ಟರಲ್ಲಿ ೩,೪ ಜನ ಮುಗಿಬಿದ್ದು ನನಗೆ ಬಂದಿದೆ ಪೂರ್ತಿ ಮನೆಅಂಕಿ(full house) ಹ ಹ ಹ ಹ...ಇರಲಿ ಇಷ್ಟು ಜನರಲ್ಲಿ ಯಾರು ಅದೃಷ್ಟವಂತರೋ ಅವರಿಗೆ ದೊರಕಿದೆ ಅಲ್ಲವೆ...? ಇನ್ನೇನು ಮುಗಿದುಬಿಟ್ಟಿತು ಎನ್ನುವಷ್ಟರಲ್ಲಿ ಕಾಫಿ,ಟೀ ಬಿಸ್ಕೇಟ್ ಬಂದುಬಿಟ್ಟಿತು ಎಲ್ಲರು ಸಂಜೆಸವಿಯಲ್ಲಿ ಕಾಫಿಟೀ ಸವಿಯುತ್ತಾ ಪ್ರಶಸ್ತಿ ಸಮಾರಂಭಕ್ಕೆ ಅಣಿಯಾಗಿ ಕುಳಿತೆವು ಎಲ್ಲಾ ಮಕ್ಕಳ ಪ್ರಶಸ್ತಿ ದೊಡ್ಡವರಿಗೆ ಎಲವನ್ನು ಇತ್ತು ಎಲ್ಲರ ಮನ ತಣಿಸಿಬಿಟ್ಟರು ಕಾರ್ಯಕಾರಿ ಸಮಿತಿಯವರು...ಆಟ, ಊಟ...ಮುಗಿಯಿತು ಈಗ ಮನೆಕಡೆ ಓಟ....
ಚಾಚು ತಪ್ಪದೇ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಸಾಂಘವಾಗಿ ನೇರವೇರಿಸಿದ ಕ್ರೀಡಾ ಸಮಿತಿಗೆ ಹಾಗು ಅವರಿಗೆ ಕೈ ಜೋಡಿಸಿ ಆಟೋಟಾಗಳನ್ನು ನೇರೆವೇರಿಸಿಕೊಟ್ಟ ಹಲವಾರು ಮಂದಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು...
ಮತ್ತೊಂದು ಕೊನೆಯ ಮಾತು ಖೋ-ಖೋ ಆಟವಾಡಿ ಮೈ ಕೈ ತುಂಬಾ ನೋವಾಗಿತ್ತು ಆದರೊ ಮೈಕೈ ನೋವಿಗೆ ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ ನಮ್ಮ ಆಟವನ್ನು ನೆನಪಿಸಿ ನಮಗೆ ಖುಷಿ ನೀಡಿದ ಆ ರಸಘಳಿಗೆ ಮಾತ್ರ ಶಾಶ್ವತವಾಗಿರುತ್ತೆಂದು ಹೇಳಬಯಸುತ್ತೇನೆ........ಎಲ್ಲಾ ಕ್ರೀಡಾ ಮನೋಲ್ಲಾಸಿಗಳಿಗೆ ಹಾಗು ಕ್ರೀಡಾ ಪ್ರಿಯರಿಗೆ ಮನತಣಿಸಿದ ಕ್ರೀಡಾಸಮಿತಿಗೆ ಮತ್ತೊಮ್ಮೆ ಮಗದೊಮ್ಮೆ ಆತ್ಮೀಯವಾಗಿ ವಂದನೆಗಳನ್ನ ಸಲ್ಲಿಸುತ್ತೇವೆ...
ವಂದನೆಗಳು..
ಶುಭದಿನ..
ವಿಹಾರದಲ್ಲಿ ತಣಿದ ಎಲ್ಲರ ಮನಸು..

Wednesday, April 8, 2009

ನಿನ್ನ-ಸ್ನೇಹ

ಸ್ನೇಹದ ಹೆಸರಲ್ಲಿ ನೀ ಒಲಿದು ಬಂದೆ
ನಿನ್ನ ಸ್ನೇಹಕೆ ನಾ ಸೋತು ನಿಂದೆ
ಕೆಲವೇ ದಿನವಾದರು ಸ್ನೇಹ
ಅದು ಭದ್ರಬುನಾದಿಯಾಗಿದೆ

ಅದೇಕೊ ಇಷ್ಟುಕಾಲ ಜೊತೆಗಿದ್ದು
ಇಂದು ದೂರ ಸರಿವ ಮಾತಾಡಿದೆ
ನನ್ನ ಮನಕೆ ಚೂರಿ ಚುಚ್ಚಂತಾಯಿತು
ಹೃದಯ ಒಮ್ಮೆಲೆ ಮಮ್ಮಲ ಮರುಗಿತು...

ನಾನೆಲ್ಲೊ ಸೋತೆ ಸ್ನೇಹದ ಆಯ್ಕೆಯಲಿ
ಎಂದು ಭಾವಿಸಿ ಮೂಕಳಾದೆ
ಕಡಲ ಅಲೆಯ ಅಬ್ಬರಕೆ
ಕೊಚ್ಚುಹೋದಂತೆ ಭಾಸವಾಯ್ತು..

ಹೋದ ರಭಸಕೆ ಕಣ್ಣೀರ ಧಾರೆ
ಧರೆಗಿಳಿಸಿ ಭುವಿಯ ತೊಯಿಸಿಬಿಟ್ಟೆ
ಮತ್ತದೆ ಕಡಲ ಅಲೆಯು ನಿನ್ನ
ಭಾಚಿ ತಬ್ಬಿ ನಾನಿರುವ ದಡಕೆ
ತಂದೆಸೆಯಿತು.....

ನೀ ಬಂದಿದ ಕಂಡು ಮನಹಗುರಾಯಿತು
ನೀ ಸಿಗುವುದಿಲ್ಲದ ಮಾತು ಮರೆಮಾಚಿಸಿತು
ಮತ್ತೊಮ್ಮೆ ಹೇಳಿದೆ ಮನವೇಕೋ ಭಾರ
ಕೆಲವರ ಮಾತು ಕೇಳಿ ನಿಂತಿದೆ ಸ್ವರ...

ನೀ ಮಾಡಿದು ತಪ್ಪಲ್ಲವೇ ಸ್ನೇಹಿ
ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ...
ಸ್ನೇಹದ ಮನ ಕ್ಷಣದಲೇ ನೋಯಿಸಿಬಿಟ್ಟೆಯಲ್ಲಾ...

ನಿನ್ನ ನೋವೆನಿತಿದ್ದರು ತಿಳಿಸಿಬಿಡು
ನಿನ್ನ ಮನವ ಹಗುರಾಗಲು ಬಿಡು
ನೀನು, ನಾನು ಶಾಶ್ವತವಲ್ಲ ಅಲ್ಲವೆ ...?
ಸ್ನೇಹ ಮಾತ್ರ ಚಿರಾಯು.. ಅದ ಅರಿತುಬಿಡು

ಮತ್ತೆಂದು ದೂರಸರಿವ ಮಾತಾಡದಿರು
ಹೃದಯ ವಿದ್ರಾವಕೆ ಸ್ನೇಹಿಯ ತಳ್ಳದಿರು
ಸ್ನೇಹ ಸಿಂಚನದ ಸಿಹಿ ನೀ ಅರಿತಿರು
ನೀ ಎಂದಿದ್ದರು ಸ್ನೇಹ ಜೀವಿ.. ಅದ ಮರೆಯದಿರು
ಸ್ನೇಹದ ಹೆಸರಲ್ಲಿ ಕೆಲವು ಏರುಪೇರು ನೆಡೆಯುತ್ತವೆ ಸ್ನೇಹ ಕೈಜಾರಿ ಹೋಗಲು ಬಿಡದೆ ಕಾಪಡಿಕೊಳ್ಳಬೇಕು...ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.....ಮನವೆಂಬ ಮಂಟಪದಿ ಮನುವೆಂಬ ಜೀವಿಯಿರಲು ಅದೇ ನಮಗೆ ಸ್ನೇಹಿ ಆ ಸ್ನೇಹಿಗೆ ಕೈಜೋಡಿಸುವ ಸ್ನೇಹಿ ಸಿಕ್ಕರೆ ಅವರು ಧನ್ಯರು. ಸ್ನೇಹ ಮಾಡುವುದು ನಿಮಿಷದಲ್ಲಿ ಅದ ನಿಭಾಯಿಸುವುದು ಜೀವನಪರ್ಯಂತದಲ್ಲಿ....ಯಾರು ಎಷ್ಟು ನಿಭಾಯಿಸುತ್ತೆವೊ ತಿಳಿಯದು.... ಒಳ್ಳೆ ಸ್ನೇಹಿ ಎಂದು ತಿಳಿದರೆ ಅವರು ನಿಮ್ಮಿಂದ ದೂರಾಗಲು ಬಿಡದಿರಿ....
ಶುಭದಿನ
ಮನಸು...

Wednesday, April 1, 2009

ನಡೆದಾಡುವ ದೇವರಿಗೆ ನಮ್ಮ ಶುಭಾಶಯಗಳು..

ಇಂದು ಶ್ರಿ ಶಿವಕುಮಾರ ಸ್ವಾಮಿಗಳಾ ಜನ್ಮದಿನ ಅವರನ್ನು ನೆನೆಯುತ್ತ ಸಾಧನಾ ಶೀಲರಾದ, ಯಾವುದೆ ಹೆಸರು, ಬಿರುದು ಬಯಸದ ಶ್ರಿಗಳಿ ನಮ್ಮ ಹೃತ್ಪೂರ್ವಕ ನಮನಗಳು..
ಅವರ ಜನನ ಏಪ್ರಿಲ್ ೧ ೧೯೦೭, ಹುಟ್ಟೂರು ವೀರಾಪುರ.
ನಮ್ಮ ಮನೆಯಲ್ಲಿ ಪೂಜಿಸೊ ಶ್ರಿಗಳ ಪಾದುಕೆ


ಶ್ರಿಗಳ ಆಸನ ಅವರು ಮಲಗೊ ಕೊಠಡಿ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೊ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೊ ಸಲ್ಲರಯ್ಯ
ಕೂಡಲಸಂಗಮದೇವ.... ಬಸವಣ್ಣನವರ ವಚನದಂತೆ ಶ್ರಿಗಳು ಎಲ್ಲೆಲ್ಲಿಯು ಸಲ್ಲುವರು ಎಲ್ಲರಿಗು ಸಲ್ಲುವರು
ಅವರ ಜೀವನದ ಸಾಧನೆ ಅವರ ಧ್ಯೇಯ ಎಲ್ಲವೊ ಒಳಿತಿನೆಡೆಗೆ ಸಮಾಜದ ಉದ್ದಾರಕ್ಕಾಗೇ ಮೀಸಲು..ಇಂತಹ ಮಹಾನ್ ಚೇತನರನ್ನು ನಾನು ಮನಸಾರೆ ನೆನೆದು ಅವರ ಸಾಧನೆ ನಮಗೆ ದಾರಿದೀಪವಾಗಲೆಂದು ಬಯಸುತ್ತಾ ಅವರ ಪಾದಾರವಿಂದಕ್ಕೆ ಮನದಲ್ಲೇ ಎರಗುತ್ತಾ ನಮಿಸುತ್ತೆನೆ...
ಗುರುಗಳಿಗೆ ನಮಿಸುತ್ತಾ
ನಿಮ್ಮೆಲ್ಲರಿಗು ವಂದನೆಗಳು
ಶುಭದಿನ..

Thursday, March 26, 2009

ಯುಗಾದಿ


ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು....

ಚೈತ್ರ ರಥವೇರಿ ಬರುವಾಗ
ಹೊಸಬಾಳ ಹೊಸ್ತಿಲಲಿ ನಿಂತಾಗ
ಹಳೆಯದನೆಲ್ಲ ಹಿಂದಿಕ್ಕಿ.....
ನಿಸರ್ಗದ ಹೊಸತನ್ನು ಸ್ವೀಕರಿಸು
ಎಂದೇಳುವ.. ಈ ದಿನವೇ...ಯುಗಾದಿ

ಮೈಗೆ ಎಣ್ಣೆ ಹಚ್ಚಿ, ಬೇವಿನನೀರಿಂದ
ಮೈಯ ಕಲ್ಮಶ ತೊಳೆದು
ಬೇವು-ಬೆಲ್ಲ ಸಿಹಿ-ಕಹಿಯನು
ಸಮನಾಗಿ ಎಲ್ಲರಿಗೆ ಹಂಚುತ್ತ
ಸುಖ-ದುಃಖದ ಸಂಕೇತವಾಗಿರುವುದೇ ಯುಗಾದಿ...

ಬಾಗಿಲಿಗೆ ತೋರಣವ ಕಟ್ಟಿ
ನೆಲಕೆ ರಂಗೋಲಿಯ ಮೂಡಿಸಿ
ಹೊಸಬಟ್ಟೆ, ಸಿಹಿ ಊಟ
ಎಲ್ಲರ ಮನೆ ಮನೆಯಲಿ
ಹೊಸತು ಹರುಷ ತುಂಬಿಬರಲು...ಅದುವೇ ಯುಗಾದಿ

ವಸಂತಕಾಲದ ಹಸಿರ ಚಿಗುರು ಸವಿದ
ಕೋಗಿಲೆಯು ಸೊಸುವ ಹಿಂಪಾದ ಕಂಠನಾದ...
ಮೊಗ್ಗು ಹೂವಾಗಲು ದುಂಬಿಗೆ ಝೇಂಕಾರ
ನಿಸರ್ಗ ಸೃಷ್ಟಿಯೇ ಪ್ರಾಯತುಂಬಿ
ಮಿರಿಮಿರಿ ಬೆಳಕ ಸೂಸುವ ಈ ದಿನವೇ ಯುಗಾದಿ....

ದೇಗುಲಗಳಲಿ ಮುಂಜಾವಿನ ಪೂಜೆ
ಸುಗಂಧದ್ರವ್ಯಗಳೊಂದಿಗೆ ಘಂಟಾನಾದ
ರೈತ ತನ್ನ ಹಸು-ಕರುಗಳ ಸಿಂಗರಿಸಿ
ಮಿರಿ ಮಿರಿ ಮಿಂಚಿಸಿ ಪೂಜೆಗೈವನು..
ಮನುಕುಲಕೆ ಹೊಸ ಆಯಾಮ ನೀಡುವದಿನವೇ..ಈ ಯುಗಾದಿ...



ಹೊಸ ವರ್ಷದ ಹೊಸ್ತಿಲಿಗೆ ಕಾಲಿಡುತ್ತಲಿರುವ ತಮ್ಮೆಲ್ಲರಿಗು ನಮ್ಮ ಶುಭಾಶಯಗಳು... ನಗು ನಗುತ ಬಾಳೋಣ ದ್ವೇಷ ಅಸೊಯೆ ಎಲ್ಲವನು ಮರೆತು ಬೇವು-ಬೆಲ್ಲದಿ ಸುಖ ದುಃಖವ ಸಮನಾಗಿ ಭಾವಿಸಿ.... ಎಲ್ಲರಲಿ ಸಹೃದಯಿಗಳಾಗಿ ಬಾಳೋಣ..



ನಿಮ್ಮವರೆ ಆದ...
ಮನಸು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು...
ವಂದನೆಗಳು..ಶುಭದಿನ....

Tuesday, March 24, 2009

ಕನ್ನಡಿಗರಿಗೊಂದು ಮಾಹಿತಿ...

ಪ್ರಿಯ ಸ್ನೇಹಿತರೆ..
ನಾವು ಕನ್ನಡಿಗರು ನಮ್ಮ ಕನ್ನಡ ನಾಡು, ನುಡಿ ಸಂಸ್ಕೃತಿಯ ನಾವೆಲ್ಲ ತಿಳಿಯಬೇಕು,ನಮ್ಮ ಸಂಸ್ಕೃತಿಯನ್ನು ಬೆಳಗಿದ ಬೆಳಗುತ್ತಿರುವ ನಮ್ಮ ಕವಿವರ್ಯರ ಬಗ್ಗೆ ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ ಹೇಳಿ...ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ಜನ ಸಿಗಬಹುದೇನೋ... ನಮಗೆ ತಿಳಿಯದಿರುವುದು ಎಷ್ಟೊ ಈ ಜಗತ್ತಿನಲ್ಲಿದೆ...

ಕೆಲವು ದಿನಗಳ ಹಿಂದೆಯಷ್ಟೆ ಅಂತರ್ಜಾಲದಲ್ಲಿ ಕನ್ನಡ ಕವಿ ಎಂಬ ವೆಬ್ ಸೈಟ್ ನೋಡಿದೆ..ಅಲ್ಲಿನ ಮಾಹಿತಿ ಎಲ್ಲವೊ ಮನಸೂರೆ ಮಾಡಿತು.. ಈ ತಾಣದಲ್ಲಿ ನಮ್ಮ ಕನ್ನಡ ನಾಡ ಕವಿಗಳಲ್ಲಿ, ಜಾನಪದ ಸಾಹಿತಿಗಳು,ಹಳೆಗನ್ನಡ ಕವಿಗಳು, ಕಾದಂಬರಿಕಾರರು, ಹಾಸ್ಯ ಸಾಹಿತಿಗಳು ಇನ್ನು ಹತ್ತು ಹಲವು ವಿಚಾರ ವೇದಿಕೆ ಅಲ್ಲಿ ಬಿಂಬಿತವಾಗಿದೆ... ನಾವೆಲ್ಲರು ಆ ಸಾಹಸ ಪಥಕ್ಕೆ ಕಣ್ಣಾಡಿಸಿ ನಮ್ಮಿಂದಾಗೋ ಸೇವೆಯನ್ನು ಮೀಸಲಿಡುವ ಬನ್ನಿ....ನೀವು ಈ ತಾಣ ಕಂಡಕೂಡಲೆ ಮನಸೋಲಬಹುದು...

ಕನ್ನಡ ಸಂಸ್ಕೃತಿ,ನಾಡ ಹಿರಿಮೆ ಗರಿಮೆ ಎಲ್ಲದರ ಪರಿ ನಮಗೆ ಉಣಬಡಿಸಿದ ನಮ್ಮ ಈ ಮಹಾನ್ ಕವಿಶ್ರೇಷ್ಠರ ಸಾರ್ಥಕ ಬಾವವನ್ನೆಲ್ಲಾ ಸೂಸುವ ಈ ಅಂತರ್ಚಾಲ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಕನ್ನಡಿಗರೆಲ್ಲರು ಕೈ ಜೋಡಿಸೋಣ ಬನ್ನಿ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ
www.kannadakavi.com

ವಂದನೆಗಳು..

Tuesday, March 17, 2009

ಎಲ್ಲರು ಒಮ್ಮೆ ಸ್ಮರಿಸೋಣ ಬನ್ನಿ..

ಕನ್ನಡದ ಹಿರಿಮೆಗೆ ಮಹಾನ್ ಚೇತನರಾದವರನೊಮ್ಮೆ ನೆನೆದು ಪಾವನರಾಗುವ ಬನ್ನಿ..
ಸಾಹಿತ್ಯದ ಮೂಲಕ ನಮ್ಮ ಸಂಸ್ಕೃತಿ ಬೆಳೆಸಿದ ಇಂದಿಗೂ ಬೇಳೆಸುತ್ತಿರುವ ನಮ್ಮ ಮಹಾನ್ ಕವಿಗಳಿಗೆ ನಮ್ಮ ಹೃದಯಪೂರ್ವಕ ನಮನಗಳು. ಮಹಾನ್ ಚೇತನಗಳಲ್ಲಿ ಪು.ತಿ.ನ ಹಾಗು ಡಿ.ವಿ.ಜಿ ಎಂದೇ ಹೆಸರುವಾಸಿಯಾಗಿರುವ ಕನ್ನಡದ ಶ್ರೇಷ್ಠಕವಿಗಳಲ್ಲಿ ಇವರೂ ಸಹ ಅತ್ಯುತ್ತಮರು. ಇವರುಗಳ ಜನುಮದಿನದ ನೆನಪು ಇಂದು, ಅವರ ಸಾಹಿತ್ಯಗಳಿಂದ ಅವರು ಎಂದೆಂದಿಗೊ ಜೀವಂತರಾಗೇ ಇರುತ್ತಾರೆ......ಮತ್ತೊಮ್ಮೆ ಹುಟ್ಟಿಬರಲಿ ಈ ದಿಗ್ಗಜರು....ಕರುನಾಡ ಸಿರಿ ಬೆಳಗಲು..
ಪು.ತಿ.ನ- ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ಊರು-ಮೇಲುಕೋಟೆ
ಜನನ-ಮಾರ್ಚ್ ೧೭ ೧೯೦೫
ಅವರ ನೆನಪಿನಲಿ ಇಲ್ಲೊಂದು ಅವರೇ ಬರೆದ ಪುಟ್ಟ ಕವನ
ಲಘುವಾಗೆಲೆ ಮನ
ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು

ನನಗಂಟಲು ನೀನಾಗುವೆ ಕಶ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಶ್ಕಳ
ಹರಿಯು ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು
ಲಘುವಾಗೆಲೆ ಮನ

ನೀಲದಾಗಸದ ಅರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಷಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ
ಹಾರಿ ಹರಿಯ ಮುಟ್ಟು
ಹಾರಿ ಹರಿಯ ಮುಟ್ಟು
ಲಘುವಾಗೆಲೆ ಮನ

ಬೆಳಕಿಗೊಲಿದು ಬಿರಿದಲರಿ ನೆಲರುಬರೆ
ಪೋಗುಸಂಗಡೆಲೆ ನೀ ಮನವೆ
ಮುಗ್ಧರುಲಿವ ನಗೆ ಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೆ
ಲಘುವಾಗೆಲೆ ಮನ
***********************
ಮತ್ತೊಬ್ಬ ಮಹಾನ್ ಚೇತನ ಡಾ. ಡಿ.ವಿ.ಜಿ
ಡಿ.ವಿ.ಜಿ-ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಊರು-ದೇವನಹಳ್ಳಿ ಹತ್ತಿರದ ಸೋಮತ್ತನಹಳ್ಳಿ
ಜನನ-ಮಾರ್ಚ್ ೧೭,೧೮೮೭
ಕವನದೊಂದಿಗೆ ಅವರ ಮನನ
ಏನೀ ಭಯಭ್ರಾಂತಿಯೇ ನೀಲಾಂಬರೇ
ಏನಂಗವಿಭ್ರಾಂತಿಯೇ ಅಶಾಂತಿಯೇ
ನೀಲಾಂಬರದ ನಿರಿಯಾಲಯತನಗೆಂದು
ಚಳಿಗಾರರುಹಿದರೆ ಮನೋಹರೆ

ಹೇಮಾಂಬರಾಗಕೆ ಶಾಮಾಂಬರಚ್ಚನಿ
ರಮಣೀಯಕವೆಂದು ಭಾಮಿನಿಯಿಂಬಗೆದು
ಕ್ಷೌಮವ ಕೊಳ್ಳಲಿ ಭೀಮೋತ್ಪಾತವಿದೇನೆ
ಸೌಮ್ಯನಾಯಕಿ ವರಸ್ವಾಮಿಯೆ ಗತಿಯಲ್ತೆ

ಬೆಚ್ಚಿಸಿ ನಿನ್ನನು ನಿಶ್ಚೇಲಗೈದು
ತನ್ನಕ್ಷಿಗೆ ನಿನ್ನ ಸಿಂಗಾರದೂಟವನುಣಿಸೆ
ವ್ರುಶ್ಚಿಕಮಂತ್ರವನುಚ್ಚರಿಸಿದನೇನೆ
ಅಚ್ಚುಮೆಚ್ಚಿನ ನಿನ್ನ ಮಾಯಾವಿ ಕೇಶವ

Sunday, March 15, 2009

ಐಷಾರಾಮಿ ದೇಶದಲಿ ಐಷಾರಾಮಿ ಕಾರುಗಳು...

ಕುವೈಟಿನಲ್ಲಿ ಕಾರುಗಳದೆ ಕಾರುಬಾರು, ಪ್ರಪಂಚದ ಅತಿ ಹೆಚ್ಚು ಬೆಲೆಯ, ಅತಿ ಸುಂದರ, ವಿರಳವಾಗಿ ಕಾಣ ಸಿಗುವ ಎಲ್ಲ ತರಹದ ಕಾರುಗಳು ನಾವಿಲ್ಲಿ ಕಾಣಬಹುದು... ಇಲ್ಲಿಯವರಿಗೇನು ಹುಚ್ಚೊ, ಆಸೆಯೋ, ಹಣವಿದೆಯೆಂದು ಐಷರಾಮಿತನವನ್ನು ತೋರಿಸಲೋ ಯವುದಕ್ಕೊ ತಿಳಿಯದು ಒಟ್ಟಲ್ಲಿ ಒಂದೊಂದು ಮನೆಯಲ್ಲಿ ಸುಮರು ೮, ೧೦ ಕಾರುಗಳಂತು ಇದ್ದೇ ಇರುತ್ತೆ... ಹೊಸ ಹೂಸ ಕಾರುಗಳು ಬರುತ್ತಲೇ ಇರುತ್ತೆ ಅವರುಗಳು ಬದಲಾಯಿಸುತ್ತಲೇ ಇರುತ್ತಾರೆ...ಲಕ್ಷ್ಮಿ ನಾಟ್ಯವಾಡುತ್ತಿರುವ ಈ ನಾಡಲ್ಲಿ ಯಾವುದಕ್ಕೆ ಬರವೇಳಿ... ಬಯಸಿದ್ದನು ಅನುಭವಿಸುವರು.. ನಮಗೆ ಒಂದು ಕುಶಿಯೆಂದರೆ ನಮ್ಮ ಕಣ್ಣಾರೆ ಇವೆಲ್ಲವನ್ನು ನೋಡುತ್ತಿದ್ದೇವೆ...








ನಮ್ಮ ಕೈಗೆ ಎಟುಕದ್ದು ಕ್ಯಾಮರಾ ಸೆರೆಗೆ ಸಿಕ್ಕಿದೆ... ಇವೆಲ್ಲ ಕೊಳ್ಳೊ ಮನಸಿಲ್ಲ, ಮನಸಿದ್ದರು ಹಣವಿಲ್ಲ, ಹಣವಿದ್ದರೊ ಕಾರಿಗಾಗಿ ದುಡ್ಡಾಕಲು ಮನ ಒಪ್ಪುತ್ತಿಲ್ಲ ಹ ಹ ಹ ಹ ...ಎಲ್ಲವೊ ಸುಳ್ಳು...ದುಡ್ಡು ಇಲ್ಲ, ಮನವೊ ಇಲ್ಲ, ಮನಸ್ಸು ಇಲ್ಲ.... ಚೆನ್ನಾಗಿರುವುದನ್ನು ನೋಡಿ ಸವಿಯುವ ಮನಸ್ಸಂತು ಇದೆ..ಅಷ್ಟೆ.... ನಿಮಗು ಇಷ್ಟವಾದರೆ ಹಾಗೆ ಒಮ್ಮೆ ನೋಡಿಬಿಡಿ.

Sunday, March 8, 2009

ನೆನಪಿನಂಗಳದಿ ದೂರದಿಂದಲೇ ಶುಭಾಶಯ..


ಅವರು ವೃತ್ತಿಯಲ್ಲಿ ಶಿಕ್ಷಕರು ಅತಿ ಶಿಸ್ತಿನ ವ್ಯಕ್ತಿ... ದೇವನಹಳ್ಳಿ ಒಂದೇ ಊರಿನಲ್ಲಿ ಸುಮಾರು ೩೦ ವರ್ಷ ಕೆಲಸ ಮಾಡಿದ್ದರು. ಸಂಸಾರ ಬೆಂಗಳೂರಿಗೆ ಬಂದು ನೆಲೆಸಿದ್ದರಿಂದ ಅವರು ಆ ಶಾಲೆಯನ್ನು ಬಿಟ್ಟು ಬೇರೆಡೆಗೆ ಬರಬೇಕಾಯಿತು... ಆಗ ಬಂದದ್ದೇ ತಿಪ್ಪಗೊಂಡನ ಹಳ್ಳಿಯ ಹತ್ತಿರವಿರುವ ಮಸ್ಕಲ್ಲು ಎಂಬ ಗ್ರಾಮಕ್ಕೆ ಆ ಊರಿಗೆ ಹೆಚ್ಚು ಜನ ಸಂದಣಿ ಕಾಣದ ಊರು ಅಲ್ಲಿ ಹೆಚ್ಚು ಸಂಸಾರಗಳು ಲಂಬಾಣಿ ಕುಟುಂಬಗಳು ಆ ಮಾಸ್ತರು ಹೋಗುವವರೆಗೂ ಈ ಮೂದಲು ಬೇರಾವ ಶಿಕ್ಷಕರು ಅಲ್ಲಿ ಹೆಚ್ಚು ದಿನ ಕೆಲಸಮಾಡಿದವರು ಇರಲಿಲ್ಲ (ಅಲ್ಲಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ ಶಿಕ್ಷಕರೆ ತೀರಾ ವಿರಳ)... ಇವರು ಅಲ್ಲಿಗೆ ತೆರಳಿದಾಗ ಊರ ಜನರೂ ಕೂಡ ಇಷ್ಟುದಿನ ಬಂದು ಹೋದ ಶಿಕ್ಷಕರುಗಳ ಹಾಗೆ ಇವರು ಎಂದು ಓಡಿ ಹೋಗುತ್ತಾರೊ ಎಂದು ಭಾವಿಸಿದ್ದರು... ಮೂದಲು ಶಾಲೆಗೆ ಹೋದಾಗ ಇವರಿಗು ಕೂಡ ಕಷ್ಟವೆನಿಸಿತ್ತು ಹೇಗೆ ಈ ಹಳ್ಳಿಗೆ ಬಂದು ಹೋಗುವುದೆಂದು ಕಾರಣ ಆ ಹಳ್ಳಿಗೆ ಯಾವುದೆ ಬಸ್ ಸೌಕರ್ಯವಿರಲಿಲ್ಲ ತಿಪ್ಪಗೂಂಡನ ಹಳ್ಳಿಯವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೫ ಕಿ.ಮಿ ದೂರದಷ್ಟು ಕಾಲು ನೆಡಿಗೆಯಲ್ಲೇ ಸಾಗಬೇಕಿತ್ತು... ಬಿಸಿಲು ಮಳೆ ಎನ್ನದೆ ಆ ರಸ್ತೆಗೇನು ಅಚ್ಚುಕಟ್ಟಾದ ದಾರಿ ಇರಲಿಲ್ಲ ದಾರಿಯಲೆಲ್ಲಾ ಕಲ್ಲು ಮುಳ್ಳುಗಳದೇ ರಾಶಿ..ಅಂತಹ ದಾರಿಯಲ್ಲಿ ಓಡಾಡುವುದು ಬಲು ಕಷ್ಟದ ಕೆಲಸ ಕೂಡ... ಆದರು ಸ್ವಲ್ಪವೂ ಬೇಸರಪಡದೆ ಒಂದು ದಿನವೊ ತಪ್ಪದೇ ಶಾಲೆಗೆ ಹೋಗುತ್ತಿದ್ದರು ಇದನ್ನು ಕಂಡ ಆ ಊರ ಜನ "ಮಾಸ್ತರೆ ನೀವು ದಿನವೂ ಅಷ್ಟು ದೂರ ಎರಡು ಸಮಯಕ್ಕೂ ಸುಮಾರು ೧೦ ಕಿ. ಮಿ. ದೂರ ಓಡಾಡಲು ಕಷ್ಟವಾಗುತ್ತೆ ಇನ್ನು ಮುಂದೆ ಶನಿವಾರದಂದು ಶಾಲೆಗೆ ಬರಬೇಡಿ" ನೀವು ಇಷ್ಟು ಶ್ರದ್ಧೆಯಿಂದ ನಮ್ಮ ಮಕ್ಕಳಿಗೆ ವಾರವೆಲ್ಲ ಹೇಳಿಕೂಡುತ್ತೀರಿ ಒಂದು ದಿನ ಬರದಿದ್ದರೆ ಏನು ಆಗದು ಎಂದು ಹೇಳಿದ್ದರಂತೆ.... ಆ ಮಾತು ಕೇಳಿ ನನಗೂ ಖುಷಿಯಾಗಿತ್ತು ಇವರ ಕಷ್ಟ ನೋಡಲಾಗದೆ ಕನಿಕರವಿಟ್ಟ ಆ ಜನಕ್ಕೆ ನಾನು ಅಭಾರಿ... ಈ ಶಾಲೆಯ ಶಿಕ್ಷಕರು ನನ್ನ ತಂದೆ, ಅವರಿಗೆ ಜೀವನ ಪೂರ್ತಿ ಕಷ್ಟ ಪಟ್ಟೇ ಅಭ್ಯಾಸ, ಮಿತ ಭಾಷಿ, ಮೌನ ಬಂಗಾರ ಎಂಬಂತೆ ಅವರು ಮೌನಕ್ಕೆ ಹೆಚ್ಚು ಶರಣು.. ಆ ಊರನ್ನು ನಾನು ಒಮ್ಮೆ ನೋಡಿದಾಗಲೇ ಅವರ ಕಷ್ಟ ನನ್ಗೆ ಅರ್ಥವಾಗಿದ್ದು ಆ ರಸ್ತೆ ತುಂಬೆಲ್ಲ ಕಲ್ಲುಗಳು ಜೋರು ನೆಡೆದರೆ ಎಲ್ಲಿ ಬಿದ್ದು ಬಿಡುತ್ತೇವೋ ಎಂಬ ಭಯ ತುಂಬಾ ಇಕ್ಕಟ್ಟಾದ ಸ್ಥಳ... ಆ ಕಾಲು ದಾರಿಯಲ್ಲೇ ಹಾದು ಹೋಗಬೇಕಿತ್ತು ತಿಪ್ಪಗೊಂಡನ ಹಳ್ಳಿ ಡ್ಯಾಮ್ ಎಂದರೇ ಹೆಚ್ಚು ಹೆಸರುವಾಸಿ ಆ ಹಳ್ಳಿಗೆ ಹತ್ತಿರವಿದ್ದ ಊರಿಗೆ ಯಾವ ವ್ಯವಸ್ಥೆಯೂ ಇರಲಿಲ್ಲ.... ಸುಮಾರು ೭ ವರ್ಷ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿದರು... ಅಲ್ಲಿನ ಮಕ್ಕಳಿಗೆ ಅಕ್ಷರದ ಅರಿವು ಸಹ ಸರಿಯಾಗಿ ಇರಲಿಲ್ಲ....... ಆ ಜನರ ಮುಗ್ಧತೆ, ಅವರಿಗೆ ನಾಗರೀಕತೆ ಅರಿವು ಯಾವುದರ ಗಂಧವೂ ಇರಲಿಲ್ಲ ಕೂಡ... ಅಂತಹದರಲ್ಲಿ ನನ್ನ ತಂದೆ ಶಿಕ್ಷಕರಾಗಿ ತೆರಳಿದ ನಂತರ ಹಲವಾರು ಬದಲಾವಣೆಗಳು ಕಂಡರು... ಆ ಮಕ್ಕಳು ಒಳ್ಳೆ ವಿಧ್ಯಾಬ್ಯಾಸ ಮುಗಿಸಿ ಈಗ ಒಳ್ಳೂಳ್ಳೆ ಕೆಲಸದಲ್ಲಿದ್ದಾರೆ ಆಗಾಗ ನಮ್ಮ ತಂದೆಯವರನ್ನು ಬೇಟಿ ಮಾಡಲು ಬರುತ್ತಿರುತ್ತಾರೆ...
ಆ ಶಾಲೆಯಲ್ಲಿ ೧ ನೇ ತರಗತಿಯಿಂದ ೭ನೇ ತರಗತಿವರೆಗಿನ ಮಕ್ಕಳು ಆ ಮಕ್ಕಳಿಗೆ ಇವರು ಒಬ್ಬರೇ ಮಾಸ್ತರು... ಎಂತಹ ವಿಪರ್ಯಾಸ ನೋಡಿ ಮುಖ್ಯೋಪಾದ್ಯಯರು ಇವರೆ ಶಿಕ್ಷಕರು ಇವರೆ ಕಚೇರಿ ಕೆಲಸ ಮಕ್ಕಳ ವಿದ್ಯಾಬ್ಯಾಸ ಎಲ್ಲವು ಇವರ ಮೇಲೆ.... ಇವೆಲ್ಲ ಅವರಿಗೇನು ಕಷ್ಟದ ಕೆಲಸವಲ್ಲ ಬಿಡಿ ತನ್ನ ಒಂದು ಕಣ್ಣನ್ನು ಕಳೆದುಕೂಂಡು ತನ್ನ ವೃತ್ತಿ ಜೀವನಕ್ಕೆ ಸ್ವಲ್ಪವೂ ಕುತ್ತು ಬರದ ಹಾಗೆ ಸೇವೆ ಸಲ್ಲಿಸಿದ್ದಾರೆ... ದಿನವೂ ಬೆಳ್ಳಿಗ್ಗೆ ೭ ಗಂಟೆಗೆ ಮನೆ ಬಿಟ್ಟರೆ ರಾತ್ರಿ ೮ ಅಥವಾ ೯ ಕ್ಕೆ ಮನೆಗೆ ಬರುತ್ತಾ ಇದ್ದಿದ್ದು ಬೆಳ್ಳಿಗ್ಗೆ ಮುದ್ದೆ ಸಾರಿನ ಊಟ ವಾದರೆ ಮುಗಿಯಿತು ಮತ್ತೆ ರಾತ್ರಿಯೇ ಊಟ ಯಾರ ಮನೆಯಾಗಲಿ, ಯಾವುದೆ ಹೋಟೆಲ್ ಗಳಲ್ಲಾಗಲಿ ತಿಂದವರಲ್ಲ ೧ ಲೋಟ ನೀರು ಸಹ ಕುಡಿಯುತ್ತಲಿರಲಿಲ್ಲ ಅದು ಏಕೋ ತಿಳಿಯದು ನಾವು ಯಾವಾಗಲು ನಮ್ಮ ಅಪ್ಪಾಜಿಗೆ ರೇಗಿಸುತ್ತಿದ್ದೆವು... ಏಕೆ ಹಾಗೆ ಮಾಡ್ತೀರಿ ಆರೋಗ್ಯ ಹಾಳಾಗುತ್ತೆ ಎಂದರೆ ಕೇಳುತ್ತಲೇ ಇರಲಿಲ್ಲ..ಏನೋ ಅವರದೂಂದು ಕಟ್ಟು ನಿಟ್ಟಿನ ವಾದ..ಹ ಹ ಹ..
ಈ ಶಾಲೆಗೆ ಹೋದ ನಂತರ ಆ ಊರ ಜನವೆಲ್ಲ ನಮ್ಮ ಮನೆಗೆ ಬರುವಂತಾದರು ಅವರುಗಳಿಗೆ ಬೆಂಗಳೂರಲ್ಲಿ ಏನೇ ಕೆಲಸವಿರಲಿ, ಯಾವುದಾದರು ಕಚೇರಿಯಲ್ಲಿ ಕೆಲಸವಾಗಬೇಕೆಂದರೆ ಸಾಕು ನನ್ನ ತಂದೆಯ ಮುಖಾಂತರವೇ ನೆಡೆಯಬೇಕಿತ್ತು. ಊರಿನ ಜನರಿಗೆಲ್ಲ ಎಲ್.ಐ.ಸಿ. ಮಾಡಿಸೋ ವ್ಯವಸ್ಥೆ, ಮಕ್ಕಳ ಹೆಚ್ಚಿನ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಹೀಗಿ ಹಲವಾರು ಕೆಲಸಗಳು ಮಾಡುತ್ತಲಿದ್ದರು ನಾವು ಮೂಕರಂತೆ ಅವರ ನಡುವಿನ ಮಾತು ಕತೆ ನೋಡುತ್ತಲಿದ್ದೆವು.... ಬಂದವರಿಗೆಲ್ಲ ಅಮ್ಮ ಊಟ ತಿಂಡಿ ವ್ಯವಸ್ಥೆ ಜೊತೆ ಕೆಲವು ಸಮಯ ನಮ್ಮ ಮನೆಗಳಲ್ಲೆ ಉಳಿಯಲು ವ್ಯವಸ್ಥೆಯನ್ನು ನನ್ನ ಅಣ್ಣ ಮಹಡಿಯ ಮೇಲೆ ಒಂದು ಮನೆ ಹೀಗೆ ಬರುವವರಿಗೆಂದು ಇದ್ದ ಮನೆಯಲ್ಲಿ ವ್ಯವಸ್ಥೆ ಮಾಡುತ್ತಿದ್ದ... ಅಪ್ಪನ ಕಾರ್ಯದಲ್ಲಿ ಅಮ್ಮ ಅಣ್ಣ(ಅಣ್ಣ ಆ ಊರಿಂದ ಬಂದವರನ್ನು ಯಾವ ಕಚೇರಿಗೆ ಬೇಕೂ ಕರೆದುಕೊಂಡು ಹೋಗೋ ಕೆಲಸ ಹೆಚ್ಚು ಇರುತ್ತಿತು) ಇಬ್ಬರು ಹೆಚ್ಚು ಭಾಗಿಯಾಗುತ್ತಿದ್ದರು. ಅಪ್ಪನ ಪುಣ್ಯದಲ್ಲಿ ಅವರಿಗೂ ಪಾಲು. ಒಟ್ಟಲ್ಲಿ ಆ ಊರಿನ ಜನಕ್ಕೊ ನಮಗೊ ಏನೋ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿತ್ತು... ಅವರ ಪ್ರೀತಿಗೆ ಅಷ್ಟು ನೆಡೆದಾಡಿದ್ದೆಲ್ಲಾ ಕಡಿಮೆ ಅನ್ನಿಸೊ ಆಗಿತ್ತು... ಆ ಊರಿಂದ ಬೇರೆ ಊರಿಗೆ ವರ್ಗಾವಣೆ ಆಗಿ ಸ್ವಲ್ಪ ದಿನಗಳ ನಂತರ ಊರಿಗೆ ರಸ್ತೆ, ಊರಿಗೆ ಬಸ್ಸು ಎಲ್ಲದರ ವ್ಯವಸ್ಥೆಯೂ ಆಗಿತ್ತು ಹ ಹ ಹ ಹೇಗಿದೆ ನೋಡಿ ಇವರು ಇದ್ದಾಗ ಆ ವ್ಯವಸ್ಥೆಇದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು...ಇದು ಅವರ ಜೀವನದ ಸಣ್ಣ ತುಣುಕು ಹೆಚ್ಚು ಬರೆದರೆ ಓದುವವರಿಗು ಬೇಸರ....ಯಾರೋ ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ಅಷ್ಟು ತಿಳಿದುಕೊಳ್ಳುವ ಮನಸು ಇರೊಲ್ಲ ಕೆಲವರಿಗೆ, ಅಲ್ಲದೆ ನನ್ನಪ್ಪನೇನು ದೊಡ್ಡ ಕವಿಯಲ್ಲ, ಹೆಸರುವಾಸಿಯಾದ ವ್ಯಕ್ತಿಯಲ್ಲ.... ಆದರೆ ನನ್ನ ಆದರ್ಶವ್ಯಕ್ತಿ ಅಷ್ಟೆ....ಅವರ ತಾಳ್ಮೆ ನನಗೆ ದಾರಿದೀಪ...ಇಂದು ಅವರ "ಹುಟ್ಟುಹಬ್ಬ"........ಈ ದಿನದ ನೆನಪಿಗಾಗಿ ನನ್ನಿಂದ ಒಂದು ಪುಟ್ಟ ಲೇಖನ... ನನ್ನಪ್ಪನಿಗೆ ಒಳಿತು, ಉಲ್ಲಾಸ, ಆರೋಗ್ಯಭಾಗ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ...
ಒಲ್ಲದೆಯೋ ಸಲ್ಲದೆಯೋ ಕಣ್ಣಾಡಿಸಿದ ನಿಮಗೆಲ್ಲ ನನ್ನ ಹೃತ್ಪೂರ್ವಕ ವಂದನೆಗಳು....ಶುಭದಿನ.

Tuesday, March 3, 2009

ಕನಸು

ಕನಸು ಕಾಣಬೇಕೆಂದರೆ
ಕಲ್ಪನೆಯಲಿ ಮುಳುಗು!!

ಕನಸು ಕಲ್ಪನಾತೀತವಾದರೆ
ಕನಸೆಂಬುದೇ ಹುಸಿ!!

ಕನಸು ಮುದನೀಡುವುದಾದರೆ
ಕನಸಿನ ಜೊತೆ ಖುಷಿ

ಕನಸು ಆಶಾಗೋಪುರವಾದೂಡೆ
ಅದು ಆಕಾಂಕ್ಷೆಯೂಂದಿಗಿನ ಆಸೆ!!

ಕನಸು ನನಸಾದರೆ
ಆಸೆಯ ನಿಜ ನಿರೀಕ್ಷೆ

ಕನಸಲ್ಲಿ ದಿಗ್ಭ್ರಮೆಯಾದರೆ
ಅದು ಭಯಾನಕ

ಕನಸು ನುಚ್ಚುನೂರಾದರೆ
ಕನಸಿಗೆ ಬೆಲೆ ಇಲ್ಲ

ಕನಸು ರಮ್ಯತಾಣವಾದೊಡೆ
ಕನಸೆಂಬ ತಾಣದಿ ವಿಹಾರ

ಕನಸಿಗು ಮುನಿಸಾದರೆ
ಜೀವನವೇ ವ್ಯರ್ಥ

ಕನಸು ಮರುಕಳಿಸಿದರೆ
ಕನಸಲ್ಲೇ ಮರುಕ

ಕನಸು ಮರೆತುಹೋದರೆ
ಅದ ಮರೆತರೆ ಒಳಿತು

ಕನಸು ಕೆಡುಕೆನಿಸಿದೊಡೆ
ಕನವರಿಸುವುದ ಬಿಡುವುದೇ ಲೇಸು!!

ಕನಸು ಹಾಸ್ಯಾಸ್ಪದವಾದರೆ
ಕನಸಲ್ಲಿ ಮಗುವಂತೆ ನಗು!!

ಕನಸಲ್ಲಿ ಧನಿಕನಾದೊಡೆ
ಆ ಕನಸು ಕ್ಷಣಿಕ!!

ಕನಸಲ್ಲಿ ಕಲವರಿಸಿದರೆ
ಅದುವೇ ಮನದ ಮಾತು!!

ಕನಸು ಬರದೆ ಹೋದರೆ
ಗಾಢವಾಗಿ ನಿದ್ರಿಸು!!

Saturday, February 21, 2009

ದಾಸರ ಆರಾಧನೆ

ಕುವೈಟ್ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೨೦.೨.೨೦೦೯ರಂದು ದಾಸರ ಆರಾಧನೆ ಜರುಗಿದ ವಿಶೇಷತೆಯ ಪರಿ ನಿಮ್ಮೆಲ್ಲರಿಗು ನೀಡೊ ನಮ್ಮ ಸಣ್ಣದೊಂದು ಪ್ರಯತ್ನ ನಿಮ್ಮ ಮುಂದೆ.


ಶುಕ್ರವಾರದ ಪೂಜೆಯವೇಳೆಗೆ ಎಲ್ಲಾ ಕೂಟದ ಸದಸ್ಯರು ತಮ್ಮ ತಮ್ಮ ಕುಟುಂಬ ಸಮೇತರಾಗಿ ಬರುತ್ತಿರುವುದು ಕಂಡರೆ ಎಲ್ಲೋ ಮದುವೆ ಸಮಾರಂಭ ನೆಡೆಯುತ್ತಿರಬೇಕು ಇಷ್ಟು ಚೆಂದವಾದ ಉಡುಗೆ ತೊಡುಗೆ ತೊಟ್ಟು ಸಾಲು ಸಾಲಾಗಿ ಬೆಳ್ಳಂಬೆಳ್ಳಗ್ಗೆ ಅದು ರಜೆಯ ದಿನ ತಮ್ಮ ನಿದ್ರೆ,ತಮ್ಮ್ ತಮ್ಮ ಕೆಲಸ ಎಲ್ಲವನ್ನು ಬದಿಗಿಟ್ಟು, ಹೆಂಗಳೆಯರು ರೇಷ್ಮೆ ಸೀರೆ, ಒಡವೆ, ಕೈಗೆ ಬಳೆಗಳ ಸಿಂಗಾರ, ಗಂಡಸರು ಪಂಚೆ, ಶಲ್ಯದಾರಿಗಳಾಗಿ ಬರುತ್ತಿದ್ದರೆ ಅದು ಮದುವೆ ಸಮಾರಂಭವೇ ಇರಬೇಕೆಂದು ಊಹಿಸುವಷ್ಟು ಬಲವಾಗಿತ್ತು ಈ ಸಮಾರಂಭದ ವಾತಾವರಣ ತವರೊರ ನೆನಪಿನ ದಿಬ್ಬಣವನ್ನೆ ತೇರಿನೊಂದಿಗೆ ಹೊತ್ತು ತಂದಿತ್ತು.

ಅಲ್ಲಿ ನೆರೆದಿದ್ದ ಸಾಲುಗಳು ಯಾವುದೆ ಮದುವೆ ಸಮಾರಂಭಕ್ಕೆ ಬರುತ್ತಿದ್ದವರಲ್ಲ ಅಲ್ಲಿ ನಮ್ಮ ಕನ್ನಡಿಗರೆಲ್ಲ ಸೇರಿ ದಾಸರ ಆರಾಧನೆಯನ್ನು ನೆರೆವೇರಿಸುತ್ತಿದ್ದರು. ನಮ್ಮ ಕನ್ನಡ ಕೂಟದ ಈ ವರ್ಷದ ಮೂದಲ ಸಮಾರಂಭ ಈ ವರ್ಷಕ್ಕೆ ೨೫ರ ಹರಯಕ್ಕೆ ಕಾಲಿಟ್ಟ ಕುವೈಟ್ ಕನ್ನಡ ಕೂಟವೆಂಬ ಕನ್ನಡ ಕನ್ಯೆಗೆ ಬಲು ಅಪರೂಪದ ಅವಿಸ್ಮರಣೀಯ ವರ್ಷ.. ಈ ವರ್ಷ ಎಂದಿಗೊ ಮರಯದ ವರ್ಷವೆಂದು ಮಾಡಲು ಅವಿರತ ಪ್ರಯತ್ನದಲ್ಲಿ ತೊಡಗಿರುವ ಈ ವರ್ಷದ ಸದಸ್ಯ ಸಮಿತಿಗೆ ಹಣದುಬ್ಬರದ ಒಡೆತ ತಾಗಿರುವುದು ಸಹಜ ಕೂಡ ಇದೆಲ್ಲವನ್ನು ಒರಿತು ಪಡಿಸಿ ಇಲ್ಲಿ ನೆಲೆಸಿರುವ ನಮ್ಮ ಭಾರತೀಯರು ಯಾವುದೆ ತೊಂದರೆ ಪಡದೆ ತಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲೆಂದು ಸತ್ಯನಾರಾಯಣ ಪೊಜೆಯೊಂದಿಗೆ ಸಮಾರಂಭವನ್ನು ಪ್ರಾರಂಭಿಸಿದರು .ಈ ಕಾರ್ಯಕ್ರಮಕ್ಕೆ ಸ್ವಾಗತ ವೇದಿಕೆ ಮಾತ್ರ ನಿಜಕ್ಕೊ ಖುಶಿ ಕೊಟ್ಟಿತು ಸಂಪ್ರದಾಯವಾಗಿ ಕುಂಕುಮ ಬಳೆ ಸಿಹಿ ಹಾಗು ಈ ಮರಳಲ್ಲಿ ಮಲ್ಲಿಗೆ ಹೂ ಎಲ್ಲೂ ಕಾಣ ಸಿಗದು ಅದರಲ್ಲೂ ತವರೂರಿಂದ ತರಿಸಿ ಎಲ್ಲರಿಗು ಮಲ್ಲಿಗೆಯ ಹೂ ಮಾಲೆ ನೀಡಿ ಎಲ್ಲರನ್ನು ಆಹ್ವಾನಿಸುತ್ತಿದ್ದ ಪರಿ ಬಲು ಪ್ರೀತಿಯ ಸಿರಿಯೇ ಸರಿ.

ಸುಮಾರು ೭.೩೦ ಕ್ಕೆ ಪ್ರಾರಂಭವಾದ ಪೂಜಾವಿಧಿಗಳು ಸರಾಗವಾಗಿ ನೆರೆವೇರಿತು. ಸತ್ಯನಾರಯಣ ಪೂಜೆಯನ್ನು ನಮ್ಮ ಊರುಗಳಲ್ಲಿ ಶಾಸ್ತ್ರೋಕ್ತವಾಗಿ ಹೇಗೆ ನೆರೆವೇರಿಸುತ್ತಾರೋ ಅದೇ ತರಹ ಎಲ್ಲಾ ವಿಧಿವಿಧಾನಗಳು ಕಂಡುಬಂದವು. ಈ ಪೂಜೆಯ ನಂತರ ದಾಸರ ಆರಾಧನ ಕಾರ್ಯಕ್ರಮ ಮೊದಲು ಪ್ರಾರಂಭ ಸಂಗೀತದೊಂದಿಗೆ ಆನಂತರ ವಾದ್ಯಗೋಷ್ಠಿ ಕೂಟದ ಮಕ್ಕಳು ಕಲಿತಿರುವ ವಾದ್ಯಗಳ ವೃಂದ ಬಲು ತಂಪನ್ನು ಬೀರಿತ್ತು...ಎಲ್ಲರು ತಲೆದೂಗುವಂತೆ ಮಾಡಿತ್ತು..


ಆನಂತರ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ಇಲ್ಲಂತು ಹೇಳ ತೀರದ ನಗೆ, ಕುತೊಹಲ, ಆಶ್ಚರ್ಯ, ಎಲ್ಲವನ್ನು ಒಟ್ಟಿಗೆ ಮೂಡಿಸಿತ್ತು ಆ ಮಕ್ಕಳು ದೇವರಲ್ಲಿ ಮನೆಮಾಡಿದಂತಿತ್ತು... ಅವರ ಆ ಬೆಳವಣಿಗೆ ಹಿಂದೆ ತಂದೆ ತಾಯಿಗಳ ಸಾರ್ಥಕತೆ ಎದ್ದು ಕಾಣುತ್ತಿತ್ತು.. ಹಾಲು ಕುಡಿಯುವ ಕಂದಮ್ಮನಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳ ವಿವಿಧ ದೇವರ ವೇಷ ಧರಿಸಿ ಬಂದ ಆ ಮಕ್ಕಳ ನೋಡಲು ಎರಡು ಕಣ್ಣು ಸಾಲಾದಗಿತ್ತು... ಆ ವೇಷ ಧರಿಸುವುದಲ್ಲಿರಲಿ ಆ ಭೂಷಣಕ್ಕೆ ತಕ್ಕ ಮಾತು ನಡೆ ಎಲ್ಲವು ಬೆರಗು ಮಾಡಿತ್ತು... ಈ ಸ್ಪರ್ಧೆಯ ನಂತರ ಕೃಷ್ಣನ ಬಾಲಲೀಲೆಯನ್ನು ನೃತ್ಯರೂಪದಲ್ಲಿ ಪ್ರದರ್ಶಿಸಿದರು ಆಡಿಸಿದಳೇಶೋಧೆ.......ಗಾನಸುಧೆಗೆ ಯಶೋಧಮಯಿ ಪಾತ್ರಧಾರಿ ಜೊತೆ ಪುಟ್ಟ ಕಂದಮ್ಮಗಳ ನೃತ್ಯ ಬಲು ಸೊಗಸೆನಿಸಿತು.
ಆನಂತರ ಚಿಣ್ಣರಿಗೆ ಮತ್ತೊಂದು ಸ್ಪರ್ಧೆ, ಒಂದೊಂದು ಪಂಥಗಳೆಂದು ವಿಂಗಡಿಸಿ ಆ ಮಕ್ಕಳು ದಾಸರ ಹಾಡುಗಳನ್ನು ಹೇಳುವಾಗೆ ಮಾಡಿದ್ದರು ಆ ಮಕ್ಕಳು ದಾಸರ ಪದ ಹೇಳುತ್ತಿದ್ದರೆ ನಮ್ಮಕ್ಕಳು ಇಷ್ಟು ಸುಲಲಿತವಾಗಿ ದಾಸರಪದಗಳನ್ನು ಬಾಯಿಪಾಠಮಾಡಿದ್ದ ರೀತಿ ನಿಬ್ಬೆರಗಾಗುವಂತೆ ಮಾಡಿತ್ತು. ಹಾಡಿಗೆ ತಕ್ಕ ವೇಶಭೂಷಣ, ತಾಳಮೇಳಗಳು ಕೂಡ ಜೊತೆಗೂಡಿತ್ತು... ಈ ಚಿಣ್ಣರ ಹಾಡಿಗೆ ಪ್ರೋತ್ಸಾಹಕ ನಿರ್ವಹಣೆ ಹೊಣೆ ಹೊತ್ತ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ಅರ್ಪಿಸಲೇಬೇಕು.

ಇವೆಲ್ಲದರ ಮದ್ಯೆ ದಾಸರು ಶರಣರು ಸಂತರು ಸಹ ಬಂದು ಹೋಗಿದ್ದರು ಅಂದರೆ ಎಷ್ಟೊ ಜನರಿಗೆ ದಾಸಶರಣಸಂತರೆಂದರೆ ೧ ಅಥವಾ ೨ ಹೆಸರುಗಳು ಮಾತ್ರ ತಿಳಿದಿತ್ತು ಆದರೆ ಇಲ್ಲಿ ಹೆಚ್ಚು ದಾಸರುಗಳು ಶರಣರುಗಳನ್ನು ಎಲ್ಲರಿಗು ತಿಳಿಸೊ ಒಂದು ನಿರೂಪಣೆ ಕೂಡ ನೆರೆವೇರಿಸಿದ್ದರು ಈ ನಿರೂಪಣೆ ಎಲ್ಲರಿಗು ಹೆಚ್ಚು ಮಾಹಿತಿಯನ್ನು ಒದಗಿಸಿದೆಯೆಂದು ಹೇಳಲು ಬಯಸುತ್ತೇನೆ.
ಇಷ್ಟೆಲ್ಲರ ನಂತರ ಮಹಿಳೆಯರ ಭಜನೆ, ಅಲ್ಲೂ ಸಹ ಸಂಗೀತ ಗಂಧವೇ ಅರಿಯದ ಕೆಲವು ಮಹಿಳೆಯರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಡಿನ ತರಬೇತಿ ಪಡೆದು ಆ ಕುವೈಟ್ ಕನ್ನಡ ಕೂಟವೆಂಬ ವೇದಿಕೆಗೆ ಮೆರುಗು ಮೂಡಿಸಿದರು.. ಇಷ್ಟೆಲ್ಲ ನೆಡೆದರು ಸ್ವಲ್ಪವೂ ಬೆಸರವಿಲ್ಲದೆ ಕುಳಿತ ಎಲ್ಲಾ ಕನ್ನಡ ಕೂಟ ಸದಸ್ಯರು ಎಲ್ಲಾ ಕಾರ್ಯಕ್ರಮಕ್ಕೆ ಪೋತ್ಸಾಹ ಪೂರ್ವಕ ಚಪ್ಪಾಳೆ ಪ್ರೇರಣಾಪೂರ್ವಕವಾಗಿತ್ತು.

ಹತ್ತು ಹಲವಾರು ಕಾರ್ಯಕ್ರಮಗಳು ಜರುಗಿದ ನಂತರ ಕುವೈಟ್ ನಲ್ಲಿ ಹಿಂದೊ ದೇವರುಗಳು ಬಂದುಬಿಟ್ಟಿದ್ದರು ನಮ್ಮನ್ನೆಲ್ಲಾ ಆಶೀರ್ವದಿಸಲು ಹಾಗೆಂದು ನಿಜವೆಂದುಕೊಳ್ಳಬೇಡಿ ಇಲ್ಲಿ ಆ ದೇವರು ಪ್ರತ್ಯಕ್ಷವಾಗಲು ನಾವೇನು ಅಂತಹ ನಿಷ್ಟಾವಂತ ಭಕ್ತರೇನಲ್ಲ, ನಿಜ ದೇವರನ್ನು ಕರೆಸಿಕೊಳ್ಳೊದು ಕಷ್ಟವೆಂದು ಇಲ್ಲಿ ಕೃಷ್ಣನ ದಶಾವತಾರ ರೂಪವನ್ನು ಹಲವು ಮಕ್ಕಳು ವೇಷಧಾರಿಯಾಗಿ ಬಂದಿದ್ದರು ಅವರೆಲ್ಲರು ಬರುತ್ತಿದ್ದ ಹಾಗೆ ಗಂಡಸರಿಂದ ಭಜನಾ ನೃತ್ಯ ಕೂಡ ಮೂಡಿಬಂತು. ಹಾಡಿಗೆ ತಕ್ಕ ತಾಳ ತಾಳಕ್ಕೆ ತಕ್ಕ ನೃತ್ಯ ಬಲು ಮೋಡಿ ಮಾಡಿತ್ತು.. ಇಷ್ಟೆಲ್ಲಾ ನೃತ್ಯ, ಗಾಯನ,ಭೂಷಣಗಳೊಂದಿಗೆ ನಮ್ಮ ಕೂಟದ ಭಜನ ಮಂಡಳಿಯ ಗಂಡಸರಿಂದ ಸುಮಾರು ೬ ದಾಸರ ಹಾಗು ದೇವರ ಹಾಡುಗಳು ಕೇಳಿಬಂದವು ಈ ಹೊತ್ತಿಗಾಗಲೇ ಊಟದ ಸಮಯಾ ಮೀರಿತ್ತು ಆದರು ಎಲ್ಲ ಕೂಟದ ಸದಸ್ಯರು, ಮಕ್ಕಳು ಸ್ವಲ್ಪವೂ ಬೇಸರ, ತಾತ್ಸರವಾಗಲಿ ತೊರದೆ ಎಲ್ಲವನ್ನು ಮನಪೂರ್ವಕವಾಗಿ ಮನತಣಿಸಿಕೊಂಡಿದ್ದು ಮಾತ್ರ ಬಲು ಸಂತೋಷಕರ, ಇನ್ನು ಮುಕ್ತಾಯ ಸಮಾರಂಭಕ್ಕೆ ಬರುವ ಹೊತ್ತು ಈ ಭಜನ ಕಾರ್ಯಕ್ರಮದೊಂದಿಗೆ ಪೂಜಾವಿಧಿಯು ಕೂಡ ನೆರೆವೇರುತ್ತಿತ್ತು ಕೊನೆಯಲ್ಲಿ ಮಂಗಳಾರತಿಯ ಗಾಯನದೊಂದಿಗೆ ದಾಸರ ಪೂಜೆ ಕೂಡ ನೆರವೇರಿತು ಎಲ್ಲ ಸದಸ್ಯರು ದೇವರ ಕೃಪೆಗೆ ಪಾತ್ರರಾಗಿ ದೇವರಿಗೆ ವಂದಿಸುತ್ತಾ ನಡೆದರು...ಇಷ್ಟು ಸಾಂಘವಾಗಿ ನೆಡೆದ ಸಮಾರಂಭಕ್ಕೆ ಮತ್ತೂಂದು ಭಾರಿ ಭೂಷಣವೆಂದರೆ ಭೂರಿ ಭೋಜನ... ಇದು ಬರಿ ಭೋಜನವಲ್ಲ ಮೃಸ್ಟಾನ್ನ ಭೋಜನ....ಎಲ್ಲರ ಹೊಟ್ಟೆ ಸಂತೃಪ್ತಿ ಪಡಿಸಿದ ಭೋಜನ ಹಬ್ಬದೂಟ ಮಾಡಿಸಿತು ಕನ್ನಡ ಕೂಟ...ಊಟವೆಲ್ಲ ಪೂರೈಸಿ ಎಲೆ ಅಡಿಕೆ (ಬೀಡಾ) ಸವಿದು ಹೊರಡೊ ಹೊತ್ತಿಗೆ ಮತ್ತದೆ ಸ್ವಾಗತ ವೇದಿಕೆ ಬದಲಿಗೆ ಬೀಳ್ಕೊಡಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು ಮತ್ತೊಮ್ಮೆ ಅವರ ಪ್ರೀತಿ ಪೂರ್ವಕ ನಗು, ವಂದನೆಗಳು ಎಲ್ಲರೊಟ್ಟಿಗೆ ತಾಂಬೂಲದೊಂದಿಗೆ ಬೀಳ್ಕೊಟ್ಟರು. ಇವೆಲ್ಲಕ್ಕೂ ರುವಾರಿಗಳಾದ ಈ ವರ್ಷದ ಕಾರ್ಯನಿರ್ವಾಹಕ ಸಮಿತಿಗೆ ನಾವೆಲ್ಲ ಆಭಾರಿಗಳು ಇವರ ಜೊತೆ ಕಾರ್ಯನಿರ್ವಹಿಸಿದ ಸಾರ್ವಜನಿಕ ಸಂಪರ್ಕ ಸಮಿತಿಯ ಕೆಲಸಗಳು ಕೂಡ ಚಾಚು ತಪ್ಪದೆ ಎಲ್ಲರಿಗು ಸಮಯ ಸಂದರ್ಭ,ಎಲ್ಲದರ ಮಾಹಿತಿಯನ್ನು ಮನೆಗೆ ಮುಟ್ಟಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರು, ಎಲ್ಲಾ ಪೂಜಾವಿಧಿ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಲು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡ ಸಾಂಸ್ಕೃತಿಕ ಸಮಿತಿಯ ಶ್ರಮ ಕೂಟದ ಸಮಾರಂಭಕ್ಕೆ ಗರಿ ಮೂಡಿಸಿದ್ದಾರೆ, ಹಾಗು ಮರಳ ಮಲ್ಲಿಗೆಯ ಸ್ವರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಹಾಗು ಈ ಭಾರಿ ಸುಮಾರು ೨೦ ಪುಟಕ್ಕು ಮೀರಿ ದಾಸ ಸಂಚಿಕೆಯ ಬಿಡುಗಡೆಗೆ ಸಾಧ್ಯರಾಗಿ ಮರಳಲ್ಲೇ ಹುದುಗಿದ್ದ ಪ್ರತಿಭೆಗಳಿಗೆ ಬರವಣಿಗೆ ಮೂಲಕ ಹೆಸರು ಸ್ಪೂರ್ತಿ ತರಿಸಿಕೊಟ್ಟ ಮರಳ ಮಲ್ಲಿಗೆಯ ವೃಂದವೊ ಸಹ ಈ ಸಮಾರಂಭದ ಮಿನುಗು ತಾರೆ ಎಂದೇಳಿದರೆ ತಪ್ಪಾಗಲಾರದು ಹಾಗು ವೇದಿಕೆಯನ್ನು ಶೃಂಗಾರದಿ ಬಣ್ಣದ ಚಿತ್ತಾರಗಳು ಮೂಡಿಸಿದ ತಾಂತ್ರಿಕ ಸಮಿತಿಯ ಮೆರುಗು ಕೂಡ ಸೇರಿದೆ. ಇವೆಲ್ಲದರ ಹಿಂದೆ ಹಲವು ಕಾಣದ ಕೈಗಳು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಕೆಲಸ ಕಾರ್ಯಗಳನ್ನೆರವೇರಿಸಿದ ಎಲ್ಲ ಸದಸ್ಯ ಬಳಗವು ಸಹ ಈ ಸಮಾರಂಭಕ್ಕೆ ರುವಾರಿಗಳೆಂದರೆ ತಪ್ಪಾಗಲಾರದು. ಕಾರ್ಯಕಾರಿ ಸಮಿತಿ ಎಲ್ಲಾ ಉಪ ಸಮಿತಿಯ ಸದಸ್ಯರು ಹಾಗು ಕಾಣದ ಹಸ್ತಗಳಿಗು ನಮ್ಮ ಹೃದಯಪೂರ್ವಕ ಧನ್ಯವಾದಗಳು.