Tuesday, June 19, 2012

ಯಾಕೆ...ಹೀಗೆ..!??


ಯಾಕೆ ಮನುಷ್ಯ ಹೀಗೆ
ಮನಸು ಪೂರ ಕೆಡಕೇ
ಹಾಲಿನಂತ ಮನಸಿಗೆ 
ಹುಳಿ ಹಿಂಡುವುದು ಏತಕೆ...


ಇಂದು ಇರುವುದು
ನಾಳೆ ಕಳೆವುದು
ನಾವೇ ದುಡಿದ ಆ ಹಣ
ವ್ಯಯಿಸುವುದಕೆ ಬೆಲೆಯ ಕಟ್ಟುವುದು ಏತಕೆ...ಈ ಜನ. 


ಊರು ಊರು ಸುತ್ತಿ
ಕಷ್ಟ ನಷ್ಟ ಎಲ್ಲ ಜಯಿಸಿ
ಇರುವ ಎರಡು ದಿನದ ಬದುಕಲಿ
ಮನಸಿಗೆ ಕಸಿವಿಸಿ ಕೊಡುವುದು ಏತಕೆ...ಈ ಜನ 


ಹೋದ ನೆನ್ನೆಗೂ 
ಬರುವ ನಾಳೆಗೂ
ಇಂದು ಹೋಲಿಕೆ ಏತಕೆ
ಇದ್ದಲ್ಲೇ ಇರುವ ಮನಸಿಗೆ 
ಒತ್ತಡದ ಬಿಸಿಯೇಕೆ ನೀಡುವರು...ಈ ಜನ.


ಅರ್ಥವಿರುವ ಜೀವನಕೆ
ವ್ಯರ್ಥ ಕಾಲಹರಣ 
ಕೊಳಕ ತುಂಬಿಸಿ
ಗಂಗೆಯ ಕದಡಿದಂತೆ
ಶುದ್ಧ ಮನಸ ಹೊಲಸು ಮಾಡುವುದು ಏತಕೆ...ಈ ಜನ.

Thursday, June 7, 2012

ಬ್ಯೂಟಿ ಮತ್ತು ಪಾರ್ಲರ್

ಒಳಗೊಳಗೇ ಏನೋ ಕೌತುಕ...ಆಗಿನ್ನು ಕುವೈತ್ ನಗರ ಹೊಸದು. ಕುವೈತಿಗೆ ಬರುವ ಮೊದಲು ಬೇರೆ ಅರಬ್ ದೇಶ ನೋಡಿದ್ದರೂ, ಇಲ್ಲಿನ ವಾತಾವರಣ, ಜನ, ಸ್ಥಳ ಎಲ್ಲವೂ ಬೇರೆ ತರಹವೇ ಇದೇ ಎನ್ನಿಸಿತ್ತು.  ನಗರವನ್ನು ಒಮ್ಮೆ ಸುತ್ತಾಡಿದೊಡೆ ಕಣ್ಣಿಗೆ ಕಾಣೋದು ಹೆಚ್ಚುಕಡಿಮೆ ಒಂದೊಂದು ಅಪಾರ್ಟ್ ಮೆಂಟ್ಗಳಲ್ಲೂ ಒಂದು ಅಥವಾ ಎರಡು ಬ್ಯೂಟಿ ಪಾರ್ಲರ್ ಗಳೇ ಕಾಣ್ತಾವೇ... ಯಪ್ಪಾ..!!! ಕುವೈತ್ ಹೆಂಗಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚೇ ಇರಬೇಕು ಅಂದುಕೊಂಡಿದ್ದೆ. ಬ್ಯೂಟಿ ಪಾರ್ಲರ್ ಜಾಸ್ತಿ ಆದಷ್ಟು ಅಲಂಕಾರ ಪ್ರಿಯರೂ ಜಾಸ್ತಿ ಆಗ್ತನೇ ಇರ್ತಾರೆ ಅಲ್ವಾ..??.



ಕುವೈತಿಗೆ ಹೊಸದಾಗಿ ಬಂದಾಗ ಬೆಂಗಳೂರಿನ ಸ್ನೇಹಿತ ಒಬ್ಬ ಕೇಳಿದ್ದ "ಕುವೈತಿ ಹುಡುಗೀರು ಹೇಗಿದ್ದಾರೆ. ಎಲ್ಲಾ ಹೇಳ್ತಾರೆ ಸಕತ್ ಬ್ಯೂಟಿಗಳಾಗಿರ್ತಾರೆ ಅಂತಾ ಹೌದಾ..?" ಎಂದಿದ್ದ. ನಾನು ಹೌದ..!! ನಾನು ಅಷ್ಟು ನೋಡೇ ಇಲ್ಲವೇ, ಎಂದು ಅಂದಿನಿಂದಲೇ ಕುವೈತಿ ಹೆಂಗಳೆಯರತ್ತ ಕಣ್ಣಾಯಿಸಿದೆ.... ವಾಹನ ಓಡಿಸುವಾಗ ಅವರ ಕರಗಳನ್ನು ನೋಡಿ ವಾಹ್ ಎಷ್ಟು ನುಣುಪಾಗಿದೆ ಕೈ. ಅವರ ಕೈಗಳೇ ಅಷ್ಟು ಚೆಂದವಿರುವಾಗ  ಇನ್ನು ಮುಖವೇಗೆ ಇರುತ್ತೆ ಎಂದುಕೊಳ್ಳುತ್ತಿದ್ದೆ.  

ನಿಜ ಕುವೈತಿನ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿರುತ್ತಾರೆ. ಇಲ್ಲಿನ ಹೆಂಗಳೆಯರು ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡ್ತಾರೆ ಎಂದೆನಿಸಿತು. ಮೊದಲೇ "ಹೆಣ್ಣು ಎಂದರೆ ಸೌಂದರ್ಯ" ಎಂಬಂತೆ ಪ್ರಪಂಚ ಬಿಂಬಿಸಿದೆ ಅದರೊಳಗೆ ಇಲ್ಲಿನ ಹೆಂಗಳೆಯರು ಇನ್ನೂ ವಿಭಿನ್ನ.   ಇಲ್ಲಿನವರು ಪಾಶ್ಚಿಮಾತ್ಯರ ರೀತಿಯೂ ಉಡುಗೆಗಳನ್ನು ತೊಡುವವರೂ ಇದ್ದಾರೆ, ಅಂತೆಯೇ ತಮ್ಮದೇ ಸಂಸ್ಕೃತಿಯ ಬುರುಕವನ್ನು ತೊಡುವವರೂ ಇದ್ದಾರೆ. ಬುರುಕವನ್ನು ತೊಟ್ಟಿರುವಂತ ಹೆಂಗಳೆಯರನ್ನು ನೋಡಿದ್ದೇನೆ. ಆಹಾ..!! ಏನು ಹೇಳ್ತೀರಾ ಕಣ್ಣಿಗೆ ತೀಡಿದ ದಟ್ಟನೆಯ ಕಾಡಿಗೆ ನಮ್ಮನ್ನ ಆಕರ್ಷಿಸುತ್ತವೆ. ಇನ್ನು ಇಲ್ಲಿನ ಹೆಂಗಳೆಯರು ಮೃದು ಕೋಮಲ ತ್ವಚೆಯ ಸ್ವಚ್ಚ ಬೆಳ್ಳನೆಯ ಚರ್ಮಕ್ಕೆ ಹೊಂದುವಂತಾ ಅಲಂಕಾರ ಜೊತೆಗೆ ಕೇಶರಾಶಿ... ನಾನು ಎಷ್ಟೋ ದಿನ ಯೋಚಿಸಿದ್ದೇನೆ, ಈ ಹೆಂಗಳೆಯರಿಗೆ ಸಮಯ ಎಲ್ಲಿ ಸಿಗುತ್ತೆ, ಯಾವಾಗ ಈ ರೀತಿ ಅಲಂಕಾರ ಮಾಡಿಕೊಳ್ಳುತ್ತಾರೆ ಎಂದು. ಕುವೈತಿನ ಇಂತಹ ಸುಡುಬಿಸಿಲಿನಲ್ಲೂ ಅವರ ಸೌಂದರ್ಯ ಸ್ವಲ್ಪವೂ ಮಾಸಿರುವುದಿಲ್ಲ ಆ ರೀತಿ ಅಲಂಕರಿಸಿರುತ್ತಾರೆ.

ಅಲಂಕಾರ ಎಂದರೆ ಬರಿ ಬಣ್ಣ ಬಳಿದುಕೊಳ್ಳುವುದಕ್ಕೆ ಅಷ್ಟೇ ಮೀಸಲಿಡದೆ, ತನ್ನ ರೂಪಕ್ಕೆ ತಕ್ಕಂತಹ ವಸ್ತ್ರಗಳನ್ನು ತೊಟ್ಟು, ಅದಕ್ಕೆ ಸೂಕ್ತವಾಗಿ ಬೆರಳುಗಳಿಗೆ ಉಂಗುರ, ಕಿವಿ ಓಲೆ, ಕೊರಳಿಗೆ ಸರ, ಚಪ್ಪಲಿ ಇವೆಲ್ಲಾ ಅಲ್ಲದೆ ತನ್ನ ಕೈಗಳಲ್ಲೂ ಮೇಕಪ್ ಗೆ ತಕ್ಕಂತ ಬ್ಯಾಗಳನ್ನೂ ಸಹ ದಿನದಿನಕ್ಕೂ ಬದಲಿಸಿ ಬರ್ತಾರೆ. ಈ ಸೌಂದರ್ಯ ಸುಗಂಧವಾಗಿಸಲು ಅವರು ಬಳಸೋ ಸುಗಂಧ ದ್ರವ್ಯಗಳಂತೂ ಹೇಳತೀರದು ಸದಾ ಘಮಘಮಿಸುತ್ತಲೇ ಇರ್ತಾರೆ. ಇವೆಲ್ಲವುಗಳ ಜೊತೆ ಕೆಲವು ಹೆಣ್ಣು ಮಕ್ಕಳು ವಿವಿಧ  ಕಾರುಗಳು ಅದು ಹೆಸರಾಂತ  ಐಷಾರಾಮಿ ಕಾರುಗಳನ್ನ ಆಗಾಗ ಬದಲಿಸುತ್ತಾ ಓಡಾಡುವುದನ್ನ ಕಂಡಿದ್ದೇವೆ.



ಕುವೈತ್ ಹೆಂಗಳೆಯರು ಬರಿ ಸೌಂದರ್ಯಕ್ಕಷ್ಟೇ ಮೀಸಲಿಡದೆ, ಅವರುಗಳಲ್ಲಿ ಬಹಳಷ್ಟು ವಿದ್ಯಾವಂತೆಯರು ಸಹ ಇದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನು ಅಲಂಕರಿಸಿ ಸದಾ ಎಲ್ಲಾ ಕಾರ್ಯಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಷಯ. 

ಐಷಾರಾಮಿ ಕುವೈತ್ ನಗರಿಯಲ್ಲಿ ಹೆಂಗಳೆಯರ ಪಾರ್ಲರ್ ಎಷ್ಟು ಐಷಾರಾಮಿಯಿಂದ ಕೂಡಿರುತ್ತದೋ ಅಷ್ಟೇ ಐಷಾರಾಮಿಯಿಂದ ಗಂಡಸರ ಪಾರ್ಲರ್ ಗಳೂ ಸಹ ಇರುತ್ತವೆ (ಗಂಡಸರೇನು ಕಮ್ಮಿ ಮೇಕಪ್ ಮಾಡ್ತಾರೇ ಅಂದುಕೋ ಬೇಡಿ).  ಜಗಮಗಿಸೋ ದೀಪಗಳು, ಅದ್ಧೂರಿ ಆಸನಗಳು, ವಿಭಿನ್ನ ರೀತಿಯ ಕನ್ನಡಿಗಳ ಶೃಂಗಾರ ನೋಡೋಕ್ಕೆ ಎರಡು ಕಣ್ಣು ಸಾಲದೆ ಕೃತಕ ಎರಡು ಕಣ್ಣುಗಳನ್ನ(ಕನ್ನಡಕ) ತೆಗೆದುಕೊಂಡಿದ್ದೇನೆ. ನಾನು ಹೇಳುವುದಕ್ಕಿಂತ ನೀವೆಲ್ಲಾ ಒಮ್ಮೆ ಬಂದು ನೋಡಿದರೆ ಚೆನ್ನಾಗಿರುತ್ತೆ. ಬೆಂಗಳೂರಲ್ಲಿ ಚಿಲ್ಲರೆ ಅಂಗಡಿಗಳು ಇದ್ದ ಹಾಗೆ ಈ ಪಾರ್ಲರ್ ಗಳು ಇವೆ ಎಂದರೆ ನೀವು ನಂಬಲೇ ಬೇಕು.

ಕುವೈತಿನ ಪ್ರತಿ ಅಪಾರ್ಟ್ ಮೆಂಟ್ ಗಳಲ್ಲಿ ಕಾಣಿಸೋ ಬ್ಯೂಟಿ ಪಾರ್ಲರ್ ನೋಡಿದ್ರೇ ಇವರು ವಾರಕ್ಕೆ ಅದೆಷ್ಟು ಬಾರಿ ಕುಳಿತು ಶೃಂಗಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೋ ಎನಿಸುತ್ತದೆ. ಒಟ್ಟಲ್ಲಿ ಏನೇ ಹೇಳಿ ಕುವೈತಿನ ಹೆಂಗಳೆಯರಲ್ಲಿ ಸೌಂದರ್ಯ ಪ್ರಜ್ಞೆ ಮೆಚ್ಚಲೇ ಬೇಕು ಜೊತೆಗೆ ಆ ಸೌಂದರ್ಯ ವರ್ಧಕಗಳ ಜೊತೆಗೆ ಸಮಯ ತಳ್ಳುತ್ತ ಸಮಯ ಮೀಸಲಿಡುವ ಅವರ ತಾಳ್ಮೆಗೆ ಜೈ ಎನ್ನಲೇ ಬೇಕು.

ಚಿತ್ರಗಳು: ನೆಟ್ ಲೋಕ

Sunday, May 6, 2012

ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ - ಬಸವ ಜಯಂತಿ

 ಶರಣರ ಬರವೆನಗೆ ಜೀವಾಳವಯ್ಯ... ಎಂದು ಬಾಗಿಲಲ್ಲೇ ಕಾದು, ಬರಲಿರುವ ಶರಣ ಶರಣೆಯರನ್ನ ಸ್ವಾಗತಿಸಲು ನಿಂತಿದ್ದ ಮನೆಯೊಡೆಯ ಮತ್ತು ಮನೆಯೊಡತಿ ‘ಇನ್ನೂ ಯಾಕ ಬರಲಿಲ್ಲವ್ವ ನಮ್ಮ ಮಂದಿ’ ಎಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತನೇ ಇದ್ರು....  ‘ಭಜನಾ ಮಂಡಳಿಯವರು ಬಂದ್ರೆ ನೋಡಿ ನಮ್ಮ ಕಾರ್ಯಕ್ರಮ ಚಲೂ ಆಗೋದು’ ಅಂತ ಮಾತಾಡ್ಕೋತಾ ಇದ್ರು. ೬.೩೦ರ ಆಸುಪಾಸು ಇರಬೇಕು ಒಬ್ಬೊಬ್ಬರೇ ಬರಲಿಕ್ಕೆ ಪ್ರಾರಂಭಿಸಿದ್ರು. ಮನೆಯೊಳಗಣ ಗುಡಿಯೊಳಗೆ ಕುಳಿತಿದ್ದ ಬಸವಣ್ಣನಿಗೆ ನಮಿಸಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

೧೨ನೇ ಶತಮಾನದ ಕ್ರಾಂತಿ ಇಂದಿಗೂ ಮಾದರಿಯಾಗಿದೆ,  ಜಾತಿ ಭೇದ, ಮೇಲು-ಕೀಳು, ಲಿಂಗ ಭೇದ ಇಂತಹುವುಗಳು ಅಂದು-ಇಂದಿನದಲ್ಲ ತಲತಲಾಂತರಗಳಿಂದ ಬಂದಿರುವಂತಹ ಈ ಅಸ್ಪೃಶ್ಯತೆಯ ಭಾವನೆಗಳನ್ನು ತೊಳೆದು ಹಾಕಲು ಬಸವಣ್ಣ ರೂಪಿಸಿಕೊಂಡ ಮಾರ್ಗ ಮಾತ್ರ ಅದ್ವಿತೀಯ. ಬಸವಣ್ಣ ತನ್ನ ಜೀವನದ ಎಲ್ಲಾ ಆಯಾಮಗಳಲ್ಲಿ ಮಿಂದು ಬಂದವರು ಜೀವನದ ಎಲ್ಲಾ ಬೇಕು ಬೇಡಗಳನ್ನು ಸಮಾನಾಗಿ ಸ್ವೀಕರಿಸಿದಂತಹ ಅಣ್ಣ ನಮ್ಮ ಜೀವನದ ಧರ್ಮ ಗುರು, ಭಕ್ತಿ ಭಂಡಾರಿ, ದಾಸೋಹ, ಕಾಯಕಗಳ ಗುರು. “ಕಾಯಕದಲ್ಲಿ ಕೈಲಾಸವನ್ನು ಕಾಣು ದಾಸೋಹದ ಮುಖೇನ ನೀಡುವ ಕೈ ಮುಂದಾಗಲಿ” ಎನ್ನುವಂತಹ ಬಸವಣ್ಣನ ಧ್ಯೇಯ ಮಾರ್ಗವನ್ನು ಹಿರಿಯರಾದ, ತೀರ್ಥರೂಪು ಸಮಾನರಾದ ಶ್ರೀಯುತ ಅಪ್ಪಾ ರಾವ್ ಅಕ್ಕೋಣಿಯವರು  “ಬಸವ ಜಯಂತಿಯ ಆಚರಣೆ ಇದೇ ವರ್ಷಕ್ಕೆ ೧೦೦ ವಸಂತಗಳನ್ನು ಕಂಡಿದೆ,... ಮನುಷ್ಯ ದೇವರಲ್ಲ.. ಆದರೆ ದೇವರಂತೆ ಪೂಜಿಸಬಹುದು.. ಅದು ಮನುಷ್ಯ ದೇವರ ಸ್ಥಾನವನ್ನು ಪಡೆದುಕೊಂಡರೆ ಎಲ್ಲವೂ ಸಾಧ್ಯ...  ಆ ಸ್ಥಾನ ನಾವು-ನೀವೆಲ್ಲಾ ಗಳಿಸಬಹುದು ನಮ್ಮ ಮನಸ್ಸು ಒಳ್ಳೆಯ ಚಿತ್ತದಲ್ಲಿದ್ದರೆ” ಎಂಬಂತೆ ಅಪ್ಪಾಜಿ ತಿಳಿಸಿದಾಗ ನನಗೆ ನೆನಪಾದ ವಚನ...
ಕಲ್ಲ ದೇವರು ದೇವರಲ್ಲ, ಮಣ್ಣ ದೇವರು ದೇವರು ದೇವರಲ್ಲ, 
ಮರ ದೇವರು ದೇವರಲ್ಲ,  ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ 
ಸೇತುಬಂಧ ರಾಮೇಶ್ವರ, ಗೋಕರ್ಣ,  ಕಾಶಿ, ಕೇದಾರ, 
ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯಕ್ಷೇತ್ರಂಗಳಲ್ಲಿಯ ದೇವರು ದೇವರಲ್ಲ 
ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ ಬಾಲಸಂಗಯ್ಯ ಅಪ್ರಮಾಣ ದೇವ....

ಹೀಗೊಂದು ವಚನವಿದೆ ಕಲ್ಲ ದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ, ಮರ ದೇವರಲ್ಲ ಹಾಗೆ ಮನುಷ್ಯನು ದೇವರಲ್ಲ ತನ್ನ ತಾನರಿತು ನಾನು ಯಾರು ಎಂದು ತಿಳಿದು ನೆಡೆದ್ರೇ ದೇವರಾಗಬಹುದು ಎಂಬಂತಿದೆ.. ಈ ವಚನದಲ್ಲಿ ಇರುವ ಆಶಯವನ್ನೇ ಅಪ್ಪಾಜಿ ನಮ್ಮೆಲ್ಲರಿಗೂ ಮನವರಿಕೆಯಾಗುವಂತೆ ತಿಳಿಸಿದರು. ಅವರ ನುಡಿ ನಮ್ಮೆಲ್ಲರ ಮನದಲ್ಲಿ ಬೆಳಕು ಮೂಡಿಸಿದ್ದಂತೂ ಸತ್ಯ.  ನಾನೂ ದೇವರಾಗಲು ಸಾಧ್ಯವಾದರೆ ಪ್ರಯತ್ನಿಸು ಎಂದು ಎಲ್ಲೋ ಒಳ ಮನಸ್ಸು ಹೇಳಿದ ಹಾಗಾಯಿತು. ೧೨ನೇ ಶತಮಾನದ ವಿಚಾರ ಧಾರೆಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಅನುಭವ ಮಂಟಪದಂತಹ ಸ್ಥಳ ಈಗಲೂ ಇದ್ದಿದ್ದರೆ ಎಲ್ಲರೂ ದೈವದೆಡೆಗೆ, ಸದ್ ಬುದ್ಧಿಯೆಡೆಗೆ ನೆಡೆಯಬಹುದಿತ್ತೇನೋ...!! ಅಲ್ಲಮ, ಸಿದ್ಧರಾಮ, ಅಕ್ಕ, ಆಯ್ದಕ್ಕಿ ದಂಪತಿಗಳು, ಚೆನ್ನಬಸವಣ್ಣ, ನೀಲಾಂಬಿಕೆ, ಮಾದಲಾಂಬಿಕೆ ಎಲ್ಲರ ಬಗೆಗೂ ಪುಟ್ಟ ವಿವರಗಳನ್ನು ನೀಡಿದ್ದು ಖುಷಿಕೊಟ್ಟಿತು. ಇನ್ನೂ ಮತ್ತಷ್ಟು ಹೇಳಿದ್ದರೆ ಚೆಂದವೆನಿಸುತ್ತಿತ್ತು ಆದರೆ ಮಾತು ಮೊಟುಕಾಗಿದ್ದು ಸಮಯದ ಅಭಾವದಿಂದಷ್ಟೇ... ಅವರೊಂದಿಗೆ ಮತ್ತಷ್ಟು ವಿಚಾರಧಾರೆ ತಿಳಿಯೋ ಆಶಯ ನನ್ನದಾಗಿದೆ.



ನುಡಿದರೆ ಮುತ್ತಿನ ಹಾರದಂತಿರಬೇಕು, ವಚನದಲ್ಲಿ ನಿನ್ನ ನಾಮಾಮೃತ ತುಂಬಿ,  ಸಕಲಕೆಲ್ಲಾ ನೀನೇ ಅಕಳಂಕ ಗುರುವೆಂದು.... ಹೀಗೆ ಸಾಲು ಸಾಲು ವಚನಗಳು ದಿಬ್ಬಣವೇರಿ ಕಿವಿಯಲ್ಲಿ ಕೇಳುತ್ತಲಿದ್ದಂತೆ. ವಚನಕಾರರಲ್ಲಿ ಮಹಿಳೆಯರಿಗೆ ನೀಡಿದ ಪ್ರಾಶಸ್ತ್ಯ, ೧೨ನೇ ಶತಮಾನದಲ್ಲಿಯೇ ಹೆಣ್ಣು ಪ್ರಪಂಚದ ಕಣ್ಣು ತೆರೆಸ ಹೊರಟಂತಹ ಹಲವು ವಚನಗಾರ್ತಿಯರ ವಿಶೇಷತೆಯನ್ನು ಮತ್ತು ನಮ್ಮ ನಮ್ಮ ಕ್ರಿಯೆಯಲ್ಲಿ ಆಚಾರವಿರಬೇಕು ಎಂಬ ತತ್ವವಾದಿಗಳ ವಚನಕಾರ್ತಿಯರ ವಚನಗಳೊಂದಿಗೆ ಶ್ರೀಮತಿ ಸಂಧ್ಯಾಅರುಣ್ ಬಹಳಷ್ಟು ಸವಿವರವಾಗಿ ತಿಳಿಸಿದರು. ನಂತರ ಅಕ್ಕ ಮಹಾದೇವಿಯವರ ತನುಕರಗದವರಲಿ... ವಚನದೊಡನೆ ಮತ್ತಷ್ಟು ವಚನ ಗಾಯನ ಸಾಗಿತು.

ಸಾರೀ ಚೆಲ್ಲಿದ ಮುಕುತಿ... ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ...  ಇವೆಲ್ಲ ವಚನಗಳೊಂದಿಗೆ ಶಿವನ ಕುರಿತ ಬೋಲೋ ಓಂ ನಮಃ ಶಿವಾಯ, ಹರ ಓಂ... ಬ್ರಹ್ಮ ಮುರಾರಿ ಹೀಗೆ ಸಾಲುಸಾಲುಗಳೇ ಇವೆ, ಇದೆಲ್ಲದರೊಟ್ಟಿಗೆ ತಂದೆ ನೀನು ತಾಯಿ ನೀನು....ಹಸಿವಾದೊಡೆ .... ಇವನಾರವ ಇವನಾರವ .... ಹೀಗೆ ಹಲವು ವಚನಗಳಿಗೆ ಧ್ವನಿಯಾಗಿದ್ದು ಪುಟಾಣಿಗಳು. ಆ ವಚನಗಳನ್ನು ಕೇಳಿದ ನಾವೇ ಪುಣ್ಯವಂತರು. ಆ ಮಕ್ಕಳಲ್ಲಿದ್ದ ಹುಮ್ಮಸ್ಸು ವಚನ ಗಾಯನ ನಮಗೆ ಪ್ರೇರಣೆ.





ಇಷ್ಟು ವಿಜೃಂಭಣೆಯಲ್ಲಿ ವಚನ ಸಾಹಿತ್ಯದ ಒಂದು ಬೆಳವಣಿಗೆಗೆ  ೧೨ನೇ ಶತಮಾನ ಹೇಗೆ ಪೂರಕವಾಗಿತ್ತು ಎಂಬುದನ್ನು ತಿಳಿಸಲು ಗೋಕುಲಾಷ್ಟಮಿಯ ಇಮಾಮ್ ಸಾಬ್ ರನ್ನು ನೆನಪುಮಾಡಿಕೊಳ್ಳುತ್ತ ಡಾ. ಅಜಾದ್ ಮೈಕ್ ಹಿಡಿದು ನಿಂತರು.. ಅದೇಕೋ ತಂಪು ಹವಾ ಗಾಳಿ ಇದ್ದರೂ ಬೆವರುತ್ತಲೇ (ಗೋಕುಲಾಷ್ಟಮಿಗೆ ಇಮಾಮ್ ಸಾಹೇಬರನ್ನ ಕರೆಸಿ, ತಾನು ತಯಾರಿ ಮಾಡಿ ಬಂದಿದ್ದೆಲ್ಲವನ್ನ ಹಿರಿಯರು ಹೇಳಿ ಮುಗಿಸಿದ್ದರು.. ಇನ್ನೇನಪ್ಪಾ ಹೇಳಲಿ ಅನ್ನೋ ಟೆನ್ಶನ್ ಆಗಿತ್ತಂತೆ...ಪಾಪ....!!) ಸರ್ವಜ್ಞರ ವಚನಗಳನ್ನೇ ಉದಾಹರಣೆಯನಿಟ್ಟು ವಚನ ಸಾಹಿತ್ಯ ಜನ ಸಾಮಾನ್ಯರಿಗೂ ಅರ್ಥವಾಗುವಂತೆ, ಲೋಕದ ಆಗುಹೋಗುಗಳ ಜೊತೆ ಚಿಂತನೆಗಳನ್ನು ಸೃಷ್ಟಿಸಿದ್ದು ವಚನಗಾರರುಗಳ ಸಾಹಿತ್ಯ. ಅದು ಬಹುಬೇಗ ಜನರತ್ತ ತಲುಪಿ ಸ್ಪಂದಿಸಿದ್ದೂ ಇದೆ. ೧೨ನೇ ಶತಮಾನಕ್ಕೂ ಮುಂಚೆ ವಿದ್ವಾಂಸರು, ಆಸ್ಥಾನ ಕವಿಗಳು ರಚಿಸುವ ಸಾಲುಗಳು ಹಳೆಗನ್ನಡ, ಸಂಸ್ಕೃತ ಇವುಗಳಿಂದಲೇ ಕೂಡಿದ್ದವು, ಇವು ಅಷ್ಟು ಬೇಗ ಜನರನ್ನ ಒಲಿಸುವಂತಹವುಗಳಾಗಿರಲಿಲ್ಲ ಇಂತಹ ಸಮಯದಲ್ಲಿ ಹೊಸ ರೂಪವನ್ನು ಕೊಟ್ಟಿದ್ದು ವಚನ ಸಾಹಿತ್ಯ ಜೊತೆಗೆ ಕನ್ನಡ ಬೆಳವಣಿಗೆಗೂ ಒಂದು ವೇದಿಕೆ ನಿರ್ಮಾಣವಾಗಿದೆ ಎಂದು ಡಾ. ಅಜಾದ್ ಸವಿಸ್ತಾರವಾಗಿ ತಿಳಿಸಿದರು....    


ಮುಕ್ತಾಯದ ಹಂತಕ್ಕೆ ಬಂದಾಗ ಬಸವ ಚಿತ್ರ ಪಟಕ್ಕೆ ವಂದಿಸುತ್ತಾ ಶರಣ ಶರಣೆಯರು ಬಿಲ್ವಾಕ್ಷತೆಯನ್ನು ಪೇರಿಸಿ ಕೈಮುಗಿದು ಹೊರನೆಡೆದಾಗ ಕಣ್ ಕೋರೈಸಿದ್ದು ಉತ್ತರ ಕರ್ನಾಟಕ ಶೈಲಿಯ ದಾಸೋಹ ಸಂಭ್ರಮ... ಬಸವಣ್ಣನ ಮನನ ಮಾಡಿ ಮರುದಿನದ ಕಾಯಕ ನೆನೆದು ಬಂದಿದ್ದ ಶರಣರೆಲ್ಲರೂ ದಾಸೋಹದಲ್ಲಿ ಪಾಲ್ಗೊಂಡರು ... ಹೋಳಿಗೆ ಮಾವಿನ ಹಣ್ಣಿನ ಸೀಕರಣೆ, ಬಕ್ರಿ ಭಾಳ್ ತಿಂದ್ವಿ ನೋಡ್ರಿ (ಜೋಳದ ರೊಟ್ಟಿ )ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ ಪುಡಿಗಳು... ಅದು ಇದು ಪುಡಿಗಳೆಲ್ಲಾ ಇದ್ದವೂ ನನ್ಗೆ ಮರೆತು ಹೋಗಿದೆ ಹಹಹಹ... ಖರೆ ಉತ್ತರ ಕರ್ನಾಟಕದವ್ರನ್ನೇ ಕೇಳ್ಬೇಕ್ರಿ... ಭಾಳ್ ಛಲೋ ಅಡಿಗೆ ಮಾಡಿದ್ರಿರೀ.. ಹೊಟ್ಟೆ ತುಂಬ ತಿಂದು ಮನಸ್ಸು ದೇಹ ಸಂತುಷ್ಟಿಯಾಯಿತು. 


ವಚನಗಳು ಸರ್ವಕಾಲಿಕ ವಚನಗಳಲ್ಲಿನ ಆಶಯ ನಿಜಕ್ಕೂ ಹಲವು ಅರ್ಥಗಳನ್ನು ನೀಡುತ್ತೆ ಇಂತಹ ವಚನಗಳ ನೆನಪಿಗೆ ಮತ್ತು ವಚನ ಸಾಹಿತ್ಯದ ವಿಚಾರ ಧಾರೆಗೆ ಬಸವ ಜಯಂತಿ ಒಂದು ವೇದಿಕೆಯಾಗಿದ್ದಂತೂ ಸತ್ಯ. ಹಿತವಚನಗಳು ನಂತರ ವಚನ ಗಾಯನ ಗಂಡಸರು ಮತ್ತು ಹೆಂಗಸರ ತಂಡ ಮತ್ತು ಪುಟಾಣಿಗಳ ಮನೋಜ್ಞವಾಗಿ ಇಂಪಾದ ವಚನಗಳು ಎಲ್ಲವನ್ನೂ ನಮಗೆ ಉಣಬಡಿಸಿ ತಮ್ಮ ಮನೆಯಲ್ಲಿ ಇಷ್ಟೆಲ್ಲಾ ಸಂತೃಪ್ತಿ ನೀಡಿ ಕಾರ್ಯಕ್ರಮ ಏರ್ಪಡಿಸಿದ ಕಾಯಕ ದಾಸೋಹಿಗಳಾದ ಸಂಗೀತ ಮತ್ತು ಅಮೃತ್ ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತೇನೆ. ಸದಾ ಕಾಯಕದ ಕೈಲಾಸ ನಿಮ್ಮದಾಗಲಿ ವಿಚಾರ ವಿನಿಮಯಗಳಿಗೆ ನಿಮ್ಮ ಮನೆ ಮನಸ್ಸು ವೇದಿಕೆಯಾಗಲಿ.  ಒಂದು ಸವಿನೆನಪಿನ ವೇದಿಕೆಯಾಗಲೂ ಈ ಕುಟುಂಬಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು...

ಹಿರಿಯರ ಮಾರ್ಗದರ್ಶನ ನಮ್ಮಂತ ಕಿರಿಯರಿಗೆ ದಾರಿದೀಪ ಎಂಬಂತೆ ಅಮೃತ್ ರಾಜ್ ರವರ ಅಪ್ಪ ಅಮ್ಮರಾದ ಶ್ರೀಮತಿ ಸುಲೋಚನ ಮತ್ತು ಶ್ರೀಯುತ ಅಪ್ಪಾ ರಾವ್ ಅವರಿಗೆ ನಮ್ಮ ಅಭಿನಂದನಾ ಪೂರ್ವಕ ಧನ್ಯವಾದಗಳು ಅವರ ಮಾರ್ಗದರ್ಶನವೇ ಈ ಕಾರ್ಯಕ್ರಮದ ಯಶಸ್ಸು...


ಶರಣು ಶರಣಾರ್ಥಿ...

Monday, April 23, 2012


ಭಕ್ತಿ ಭಾವದ ಪೈರ ನೆಟ್ಟು
ಭವಂಗಳಲಿ ಪ್ರೀತಿಯೆಂಬ 
ಬೀಜಾಂಕುರತೆ  ಬೆಳೆಸಿ
ಲಿಂಗಭೇದಕೆ ಕೊನೆಯನಿಟ್ಟು
ದಯವೇ ಧರ್ಮದ ಮೂಲವೆಂತೆಂಬ ಮಂತ್ರವ ಭಿತ್ತಿ
ಅಕ್ಷಯ ಬೆಳಕನ್ನು ಬದುಕಿನುದ್ದಕೂ ನೀಡಿ
ಕೂಡಲ ಸಂಗನಲಿ ಐಕ್ಯಗೊಂಡಾತನ
ಜನ್ಮ ಜನ್ಮಾಂತರ ಕಳೆದರೂ
ವಚನಗಳ ನುಡಿಬೆಳಕು 
ಮನುಕುಲವ ತಿದ್ದಿತೀಡಬೇಕಿದೆ.......
ಹೇ ಬಸವ... 
ಗೋಮುಖವ್ಯಾಘ್ರಾದಿಗಳು
ಲೋಕವ ಹದೆಗೆಡಿಸುತಿವೆ
ಶತಮಾನಗಳೇ ಉರುಳಿದರೂ
ಬದಲಾಗುವ ಲಕ್ಷಣಗಳು ಕಾಣದು
ಪ್ರಕೃತಿಯೇ ಮುನಿದು ಬೀಳುವ ಮುನ್ನ
ನೀ ಮತ್ತೊಮ್ಮೆ ಹುಟ್ಟಿಬರಬೇಕಿದೆ ನೋಡೋ
ಹೇ ....!!ವಿಶ್ವಗುರು, ಜಗದ ಅಣ್ಣ.... ಬಸವಣ್ಣ..... 
 -----------------



ಮೌಢ್ಯದ ಮಡಿಲಿಗೆ  ಕುಶಲತೆಯ ನೇಗಿಲು
ಹತ್ತಿಯ ಹುಂಡೆಗೆ ತುಪ್ಪದ ದೀವಿಗೆ
ದುಂಬಿಯ ಝೇಂಕಾರಕೆ ಜೇನಿನ ಹೊಳೆ
ವಿಜಾತಿಯ ಬಂಧನಕೆ ಪ್ರೇಮ ಸಂಬಂಧ
ಸಂಸ್ಕೃತಿ ಬೆಳಕಿಗೆ ರಾಜದರ್ಬಾರು
ಆಸೆಯ ಮಂತ್ರಕೆ ದೈವದ ಮೊರೆ
ಮೇಲು-ಕೀಳಿನ ಬದುಕಿಗೆ ಸಮಾನತೆಯ ಬೀಜಮಂತ್ರ
ಎಲ್ಲಕೂ  ಜಗದ ಜ್ಯೋತಿಯಾದ ಅಣ್ಣ ಬಸವಣ್ಣ....
----------

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು... 

ಆಚರಣೆ ಪೂಜೆ ನೈವೇದ್ಯಗಳಿಗೆ ಮೀಸಲಿಡದೆ ವಚನ ಸಾಹಿತ್ಯದ ಧ್ಯೇಯದ ಗುಟ್ಟನ್ನು ಅರಿತು ಬಾಳುವೆಡೆ ಮನಸು ಮಾಡೋಣ


@ಚಿತ್ರ: ನೆಟ್ ಲೋಕ


Sunday, April 1, 2012

ದಾಸೋಹ ಯೋಗಿ ಶ್ರೀ ಶ್ರೀಗಳು.....

"ಎಷ್ಟೋ ರಾತ್ರಿಗಳು ನಾನು ಬೀದಿ ದೀಪಗಳಿಗೆ ನನ್ನ ಪಾಠ ಒಪ್ಪಿಸಬೇಕಿತ್ತು". ಆದರೆ ಆ ದಿನಗಳು ನನ್ನ ಜೀವನದಲ್ಲಿ ಬರದಂತೆ ಮಾಡಿದ್ದು "ಶ್ರೀಮಠ" - ಹೀಗೆ ಎಷ್ಟೋ ಜನರು ತಮ್ಮ ಮನದಲ್ಲಿ ಕೃತಜ್ಞತೆಯ ಭಾವದಿಂದ ಅನ್ನ, ನಿದ್ರೆ, ವಿದ್ಯೆ, ಜಾಗ ಕೊಟ್ಟು ನಮ್ಮ ನೆಲೆಯನ್ನು ಸಾರ್ಥಕಗೊಳಿಸಿದ ಆ ದೇವರಸ್ಥಾನಕ್ಕೆ ನಮಿಸುತ್ತಲೇ ಇದ್ದಾರೆ.

ವಿದ್ಯಾದಾನ, ದಾಸೋಹ ಇಂತಹ ವಿಶಿಷ್ಟ ಕೈಂಕರ್ಯಗಳನ್ನು ಸುಮಾರು ವರುಷಗಳಿಂದ ನಡೆಸುಕೊಂಡು ಬಂದಿರುವಂತಹ  ಈ ದೇಗುಲ ತುಮಕೂರು ಸಮೀಪದ ಕ್ಯಾತಸಂದ್ರ ಎಂಬಲ್ಲಿ "ಸಿದ್ಧಗಂಗಾ ಮಠ" ಎಂದು ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದಲ್ಲಿ ಬಹಳ ಹಿಂದೆ "ಗೋಸಲಸಿದ್ಧೇಶ್ವರ" ಎಂಬ ಸಿದ್ಧಪುರುಷರು ಹಾಗೂ ಶ್ರೀ ಮಠ ಸ್ಥಾಪಕರು ತಮ್ಮ ತಪೋಬಲದಿಂದ ಗಂಗೆಯ ಉದ್ಭವ ಮಾಡಿಸಿದ್ದರಿಂದ ಈ ಸ್ಥಳಕ್ಕೆ "ಸಿದ್ದಗಂಗೆ" ಎಂದು ಹೆಸರು ಬಂದಿತು. ಮೊದಲು ಸಿದ್ಧಲಿಂಗ ಸ್ವಾಮಿಗಳಿಂದ ಪ್ರಾರಂಭಗೊಂಡ ದಾಸೋಹ ಕಾರ್ಯ ಮುಂದೆ "ಅಟವಿ ಸ್ವಾಮಿಗಳು" ದಾಸೋಹದಿಂದ ವಿದ್ಯಾರ್ಜನೆಗಾಗಿ ಸಂಸ್ಕೃತ ಪಾಠಶಾಲೆಗಳನ್ನು ಪ್ರಾರಂಭಿಸಿದರು. ಅಟವಿ ಸ್ವಾಮಿಗಳ ನಂತರ "ಉದ್ಧಾನ ಶಿವಯೋಗಿಗಳು" ಸಹ ಮತ್ತಷ್ಟು ಅಭಿವೃದ್ಧಿಗೊಳಿಸಿ ಶಿವರಾತ್ರಿ ಹಬ್ಬದ ಸಮಯದಲ್ಲಿ ಜಾತ್ರೆಯನ್ನು ಪ್ರಾರಂಭಿಸಿ ಬಂದುಹೋಗುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ನೀಡುವ ಯೋಜನೆ ಪ್ರಾರಂಭಿಸಿದರು.... ಒಬ್ಬರಾದನಂತರ ಮತ್ತೊಬ್ಬರು ತಮ್ಮದೇ ವಿಶಿಷ್ಠ ರೀತಿಯಲ್ಲಿ ಶ್ರೀ ಕ್ಷೇತ್ರವನ್ನು ಮೆರುಗುಗೊಳಿಸುತ್ತಾ ಬಂದರು. 



ಉದ್ಧಾನ ಶಿವಯೋಗಿಗಳು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಿವಣ್ಣ(ಶ್ರೀ ಶ್ರೀ ಶಿವಕುಮಾರ ಸ್ವಾಮಿ) ಎಂಬ ವಿದ್ಯಾರ್ಥಿಯಯನ್ನು ಕಂಡೊಡನೆ ಮುಂದೆ ಸಿದ್ಧಗಾಂಗಾ ಕ್ಷೇತ್ರವನ್ನು ಅತ್ಯುನ್ನತ ಶಿಖರಕ್ಕೆ ಏರಿಸುವರು ಎಂದು ತಿಳಿದಿತ್ತೋ ಏನೋ ಶಿವಣ್ಣ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡರು. ನಂತರದ ದಿನಗಳೇ ಅದ್ಭುತ ವರ್ಣಿಸಲಾಗದಷ್ಟು ಹಿರಿಮೆಯಲ್ಲಿ ಶ್ರೀ ಕ್ಷೇತ್ರ ಬೆಳೆದು ನಿಂತಿತು. 

ಶ್ರೀ ಶಿವಕುಮಾರಸ್ವಾಮಿಗಳು ಮಾಗಡಿಗೆ ಹತ್ತಿರವೇ ಇರುವ ವೀರಾಪುರ ಎಂಬ ಪುಟ್ಟ ಗ್ರಾಮದಲ್ಲಿ ೧೯೦೮ ಏಪ್ರಿಲ್ ೧ರಂದು ಜನಿಸಿದರು. ಪಾಟೀಲ್ ಹೊನ್ನಪ್ಪ ಮತ್ತು ಗಂಗಮ್ಮ ಶಿವಕುಮಾರಸ್ವಾಮಿಗಳ ತಂದೆ ತಾಯಿ. ಇವರು ಪ್ರೇಮರಿ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿ ಎಂಬ ಗ್ರಾಮದಲ್ಲಿ ಮುಗಿಸಿ ನಂತರ ಸೆಕೆಂಡರಿ ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವೀಧರರಾದರು.

ಬಸವ ತತ್ವವನ್ನು ಬರಿ ಮಾತಿನಲ್ಲಿ ಹೇಳದೆ ಅದನ್ನೇ ತಮ್ಮ ರೂಢಿಗತವಾಗಿ ಮಾಡಿಕೊಂಡು ಬಂದಿರುವಂತ ಶ್ರೀಗಳು ಮಠದ ಉದ್ಧಾರಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಕಟ್ಟಡ ನಿರ್ಮಾಣದ ಸಮಯದಲ್ಲಿ ತಾವೇ ಇಟ್ಟಿಗೆ, ಕಲ್ಲು ಮಣ್ಣು ಹೊತ್ತು ನೆಡೆಯುತ್ತಿದ್ದು, ತಾವೇ ಎಲ್ಲಾ ಕೆಲಸಗಳಲ್ಲಿ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿದ್ದದ್ದು, ಗದ್ದೆ, ಹೊಲಗಳಲ್ಲಿ ಭತ್ತ ನಾಟಿ ಮಾಡುವುದು ಕಳೆ ಕೀಳುವುದು ಇಂತಹ ಎಷ್ಟೋ ಕೆಲಸಗಳನ್ನು ಸ್ವಆಸಕ್ತಿಯಿಂದ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ನಮ್ಮ ಕುಟುಂಬದ ಹಲವಾರು ಮಂದಿ ಈಗಲೂ ಹೇಳುತ್ತಾರೆ.  ಶ್ರೀಗಳು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ದವಸ ದಾನ್ಯ ಎಲ್ಲವನ್ನೂ ವರ್ಷದ ದಾಸೋಹಕ್ಕೆ ದಾನಿಗಳ ಮೂಲಕ ಪಡೆದು ಬಂದದ್ದೂ ಇದೆ. ಈಗಲೂ ಸಹ ಸುತ್ತಮುತ್ತಲ ಹಳ್ಳಿಗಳು ದವಸದಾನ್ಯಗಳನ್ನು ಊರಿನ ಜನರೆಲ್ಲ ಕೂಡಿ ತಂದು ಮಠದಲ್ಲಿ ಕೊಡುವ ವಾಡಿಕೆಯನ್ನೂ ರೂಢಿಸಿಕೊಂಡಿದ್ದಾರೆ.



ಸಿದ್ಧಗಂಗಾ ಮಠದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿದ್ದಾರೆ. ಉದ್ದಾನ ಶಿವಯೋಗಿಗಳು ಅಂದು ಪ್ರಾರಂಭಿಸಿದಾಗ ಕೇವಲ ೨೦೦ ವಿದ್ಯಾರ್ಥಿಗಳಿದ್ದರು ಈಗ ಸುಮಾರು ೧೦,೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲಿದ್ದಾರೆ. ಸುಮಾರು ೧೨೮ ವಿದ್ಯಾಸಂಸ್ಥೆಗಳನ್ನೊಳಗೊಂಡಿದೆ. ಈ ಸಂಸ್ಥೆಗಳು ನರ್ಸರಿಯಿಂದಿಡಿದು ತಾಂತ್ರಿಕ ವಿದ್ಯಾಲಯದವರೆಗೂ ಹಬ್ಬಿವೆ. 

ಅಂದಿನ ಪ್ರಯಾಣದಿಂದ ಇಂದಿನ ಪ್ರಯಾಣದವರೆಗೂ ಬಲು ಸಿಹಿಹೊನಲನ್ನೇ ಸೃಷ್ಟಿಸಿ ಬಂದಿರುವ ಶ್ರೀ ಮಠದ ದೇಗುಲಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳೇ ದೇವರು ಅವರಲ್ಲಿರುವ ಗುರುಭಕ್ತಿ, ನಿಸ್ವಾರ್ಥತತೆ, ದೇವರ ಶಕ್ತಿ ಎಲ್ಲವೂ ಹಲವು ಕೆಲಸಗಳಿಗೆ ಸಕಾರಗೊಳಿಸಿದೆ. ಮಠದಲ್ಲಿ ಅಷ್ಟೇ ಶಿಸ್ತುಬದ್ಧತೆಯನ್ನು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲೂ ಕಲಿಸುತ್ತಾ ಬಂದಿದ್ದಾರೆ. ಬೆಳಗ್ಗೆ ಸುಮಾರು ೫ ಗಂಟೆ ಬೆಳಗಿನ ಜಾವ ತಣ್ಣೀರು ಸ್ನಾನಮುಗಿಸಿ ೬ಗಂಟೆಗೆ ನೆಡೆಯುವ ಸಾಮೂಹಿಕ ಪ್ರಾರ್ಥನೆ ನಂತರ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಸಂಸ್ಕೃತ ಪಾಠ, ಆನಂತರ ಶಾಲೆಗೆ ಹೋಗುವ ಪರಿಪಾಠವನ್ನೆಲ್ಲ ಕಲಿಸಿದ್ದಾರೆ. ಅದೇ ರೀತಿ ಸಂಜೆ ೬ಗಂಟೆ ಸಾಮೂಹಿಕ ಪ್ರಾರ್ಥನೆಯೂ ಸಹ ಜರುಗುತ್ತದೆ. ಬೆಳ್ಳಗ್ಗೆ ಮತ್ತು ಸಂಜೆ ಜರುಗುವ ಪ್ರಾರ್ಥನೆಯಲ್ಲಿ ಶಿವಕುಮಾರ ಸ್ವಾಮಿಗಳು ಭಾಗಿಗಳಾಗಿ ಮಕ್ಕಳಿಗೆ ದಿನವೂ ಒಂದೂಂದು ನೀತಿಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಮಕ್ಕಳಿಗೆ ವಸತಿ, ಊಟ, ವಿದ್ಯೆ ಕಲ್ಪಿಸಿದರೆ ಸಾಲದು ಉತ್ತಮ ಮಾನವೀಯ ಪ್ರಜೆಗಳನ್ನಾಗಿ ಬೆಳೆಸಬೇಕು ಎಂಬುದು ಶ್ರೀಗಳ ಧ್ಯೇಯ.

ಅಂದಿನಿಂದ ಇಂದಿಗೂ ಕೊಪ್ಪರಿಗೆಗಳಲ್ಲಿ ಅಡಿಗೆ ತಯಾರಿ ಸಾಂಘವಾಗಿ ಜರುಗುತ್ತಲೇ ಇರುತ್ತದೆ. ಪ್ರತಿನಿತ್ಯ ಶ್ರೀಗಳು ಭೇಟಿ ನೀಡಿ ಪ್ರತಿಯೊಂದನ್ನೂ ಪರಿಶೀಲಿಸಿ ಬಂದಿರುವ ಭಕ್ತಾದಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಅಡುಗೆ ಒಲೆ ಎಂದು ಉರಿಯಲು ಪ್ರಾರಂಭಿಸಿತೋ ಈಗಲೂ ಅದೇ ಮಂದಹಾಸದಲ್ಲಿ ಸಾವಿರಾರು ಜನರಿಗೆ ಪ್ರಸಾದವನ್ನು ನೀಡುತ್ತಲೇ ಬಂದಿದೆ. 



ಕಾಯಕವೇ ಕೈಲಾಸ ಎಂದು ನಂಬಿರುವ ಶ್ರೀಗಳು ತಮ್ಮ ದಿನನಿತ್ಯ ನಿದ್ರೆಮಾಡುವುದು ರಾತ್ರಿ ೧೧ರಿಂದ ಬೆಳಗಿನ ಜಾವ ೨ರವರೆಗೆ ಮಾತ್ರ. ಅವರು ಬೆಳ್ಳಗಿನ ಜಾವ ೨ರಿಂದ ೩ಗಂಟೆಯವರೆಗೆ ಓದುತ್ತಾರೆ. ೩ರಿಂದ ೩.೩೦ರವರೆಗೆ ಸ್ನಾನ, ೩.೩೦ರಿಂದ ೫.೩೦ರವರೆಗೆ ಧ್ಯಾನ,ಪೂಜೆ,ಭಜನೆ ಇತ್ಯಾದಿಗಳನ್ನು ಮುಗಿಸಿ ಬೆಳಗಿನ ಉಪಹಾರ ನಂತರ ಮಕ್ಕಳ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ನಂತರ ಶ್ರೀಗಳ ದರುಶನಕ್ಕೆ ಬಂದಿರುವ ಭಕ್ತಾದಿಗಳ ಭೇಟಿ, ಮನೆಗಳಲ್ಲಿ ಪೂಜಾವಿಧಿವಿಧಾನಗಳಿಗೆ ತೆರಳುತ್ತಾರೆ ಸಂಜೆ ೮ರಿಂದ ರಾತ್ರಿ ೧೧ರವರೆಗೆ ತತ್ವಜ್ಞಾನಿಗಳ ಭಂಡಾರಗಳ ಓದುವುದು ಅವರ ಹವ್ಯಾಸ. ಕಲಿಯುಗ ತಪಸ್ವಿಗೆ ಭಕ್ತವೃಂದ ಎಲ್ಲೆಲ್ಲೂ ಹರಡಿದೆ ಅಂತೆಯೇ ಭಕ್ತಿ ಮನೆಮಾಡಿಸಿದ ಶ್ರೀಗಳಿಗೆ ಭಕ್ತವೃಂದ ನೆಡೆದಾಡುವ ದೇವರು, ಕಾಯಕ ಯೋಗಿ, ಕಲಿಯುಗ ದೇವರು ಎಂದು ಪೂಜಿಸುತ್ತಲೇ ಬಂದಿದ್ದಾರೆ. ಮಹಾಸ್ವಾಮಿಗಳನ್ನು ಭಕ್ತರು "ಬುದ್ದಿ" ಎಂದೇ ಕರೆಯುವ ವಾಡಿಕೆ. ಮಹಾಸ್ವಾಮಿಗಳ ಕಾಯಕ, ದಾಸೋಹ ಸೇವೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ಇಂತಹ ಮಹಾನ್ ಶಿವಯೋಗಿಗಳ ಪೂಜಾಕೈಂಕರ್ಯಗಳನ್ನು ನಾವು ಸದಾ ನೋಡುತ್ತಲೇ ಬಂದಿದ್ದೇವೆ ಅವರ ಚಟುವಟಿಕೆ ನಿಜಕ್ಕೊ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುವುದಂತೂ ಸತ್ಯ. ಶ್ರೀಗಳಿಗೆ ಮೌನವೇ ಆಭರಣ, ಕೆಲಸ-ಕಾರ್ಯಗಳೇ ಭೂಷಣ ಎಂಬಂತೆ ಅಂದಿನಿಂದ ಇಂದಿಗೂ ಶ್ರೀಮಠವನ್ನು ಬೆಳಗುತ್ತಲೇ ಬಂದಿದ್ದಾರೆ.... ಬೆಳಕಿನ ಜ್ಯೋತಿ ಸದಾ ಎಲ್ಲರ ಬಾಳನ್ನು ಬೆಳಗುತ್ತಲಿರಲಿ ಎಂದು ಆಶಿಸುತ್ತೇವೆ.  

ಇಂದಿಗೂ ಚುರುಕು ಕಣ್ಣೋಟ, ಸ್ವಚ್ಚಮಾತು, ದಿಟ್ಟ ನೆಡೆ.... ಹೊಂದಿರುವ ಕಾಯಕ ಯೋಗಿ ಈಗಷ್ಟೆ ೧೦೫ ರ ಹರಯದಲ್ಲಿದ್ದಾರೆ ಇಂತಹ  ಮಹಾನ್ ಯೋಗಿ ಸದಾ ನಮ್ಮೊಂದಿಗಿರಲಿ....ಶ್ರೀಗಳ ಬಗ್ಗೆ ಬರವಣಿಗೆ ಅಥವಾ ಮಾತಿನಲ್ಲಿ ಹೇಳಲಾರದಷ್ಟು ಅತಿ ಎತ್ತರಕ್ಕೆ ಬೆಳೆದಿರುವುದಕ್ಕೆ ಉದಾಹರಣೆ ಸಿದ್ಧಗಂಗೆ ಕ್ಷೇತ್ರ ಬೆಳೆದು ನಿಂತಿರುವುದೇ ಸಾಕ್ಷಿ.  


ಮಾಹಿತಿ: ನನ್ನ ತಂದೆ ಶ್ರೀಮಠದ ವಿದ್ಯಾರ್ಥಿ, ಅವರೇ ಹೆಚ್ಚು ನನಗೆ ಶ್ರೀಮಠದ ಬಗ್ಗೆ ಹೇಳಿದ್ದರು... 

ಪೋಟೋ: ಮನಸು

Monday, March 12, 2012

ಎಕ್ಕದ ಹೂ (ಅರ್ಕ)


ಎಕ್ಕದ ಹೂ (ಅರ್ಕ)


ಎಕ್ಕವನ್ನು ಅರ್ಕವೆಂದೇ ಕರೆಯುವುದು, ನಮ್ಮಗಳ ಆಡುಭಾಷೆಯಲ್ಲಿ ಎಕ್ಕ ಎಂದು ಕರೆಯುತ್ತೇವೆ. ಸಂಸ್ಕೃತದಲ್ಲಿ "ಅಲರ್ಕ" ಎಂದಿದ್ದಾರೆ. ವೈಜ್ಞಾನಿಕವಾಗಿ ಕೊಲ್ಟ್ರಾಪಿಸ್ ಪ್ರೋಸಿರ (Calotropis Procera) ಎಂದು ಗುರುತಿಸಿದ್ದಾರೆ. ಎಕ್ಕದಲ್ಲಿ ಎರಡು ತರನಾದ ವಿಧಗಳಿವೆ ಒಂದು ಬಿಳಿ ಬಣ್ಣದ (ಶ್ವೇತಾವರ್ಕ) ಎಕ್ಕ ಮತ್ತೊಂದು ತಿಳಿನೇರಳೆ ಬಣ್ಣದ ಎಕ್ಕ. ಇವೆರಡೂ ಒಂದೇ ಜಾತಿಯ ಗಿಡಗಳು ಹಾಗೂ ಇವೆರಡರಲ್ಲೂ ಔಷಧಿಯ ಗುಣಗಳಿರುತ್ತವೆ. ಈ ಎಕ್ಕದ ಗಿಡಗಳು ಹೆಚ್ಚು ಖಾಲಿ ಮತ್ತು ಪಾಳು ಜಾಗದಲ್ಲಿ ಬೆಳೆಯುವುದು.

 ಈ ಗಿಡ ಒಂದು ರೀತಿ ಪೊದೆಯಂತೆ ಬೆಳೆದಿರುತ್ತದೆ. ಬುಡದಲ್ಲಿಯೇ ಕವಲುಗಳೊಡೆದು ಹಾಗೆ ಮುಂದಕ್ಕೆ ಬೆಳೆದು ಎಲೆಗಳು ಮತ್ತು ಹೂವಿನ ಗೊಂಚಲನ್ನು ಹೊಂದಿರುತ್ತದೆ.  ಆಕರ್ಷಕವಾದ ಈ ಗೊಂಚಲು ದಪ್ಪನಾದ ದಳಗಳಿಂದ ಎದ್ದು ಕಾಣುತ್ತೆ, ಕೊಳವೆಯಂತಹ ಶಲಾಕೆಯನ್ನು ಹೊಂದಿರುತ್ತದೆ. ಈ ಹೂ ಗೊಂಚಲಿನ ಪ್ರತಿ ಹೂವಿನ ತಳಭಾಗದಲ್ಲಿ ಗಣಪತಿಯ ಆಕಾರವಿರುತ್ತದೆ. ಈ ಆಕಾರದಿಂದಲೇ ಗಣಪತಿಗೆ ಶ್ರೇಷ್ಟವೆಂದು ಭಾವಿಸಿದೆವೋ ಏನೋ ಗೊತ್ತಿಲ್ಲ. ಗಣಪತಿಗೆ ಎಷ್ಟು ಶ್ರೇಷ್ಟವೋ ಈಶನಿಗೂ ಅಷ್ಟೇ ಶ್ರೇಷ್ಠ ಎಂಬ ನಂಬಿಕೆಯಿದೆ.


ಎಕ್ಕದ ಹೂವಿಗೆ ಪೂಜನೀಯ ಭಾವನೆಯಿದೆ. ರಥಸಪ್ತಮಿಯಂದು ಎಕ್ಕದ ಎಲೆಗಳನ್ನು ಭುಜದಮೇಲೆ ಇಟ್ಟು ಗಂಡಸರು ಮಂತ್ರ ಪಟಣೆಯ ಮೂಲಕ ಸ್ನಾನ ಮಾಡುತ್ತಾರೆ ಎಂದು ಕೇಳಿದ್ದೇನೆ. ಬಿಳಿಯ ಎಕ್ಕದ ಬುಡದಲ್ಲಿ ’ಗಣೇಶ’ ನೆಲೆಸಿರುತ್ತಾನೆ ಆದ್ದರಿಂದಲೇ ಗಿಡದಿಂದ ಬೀಳುವ ಹೂಗಳೆಲ್ಲವೂ ಅದರ ಬುಡಕ್ಕೆ ಬೀಳುತ್ತವೆ ಎಂದು ನಂಬುತ್ತಾರೆ. ಎಷ್ಟೋ ದೇಗುಲಗಳಲ್ಲಿ ಬಿಳಿ ಎಕ್ಕದ ಗಿಡಗಳನ್ನು ಕಾಣುತ್ತೇವೆ ಅಂತೆಯೇ ಅದಕ್ಕೆ ಪೂಜೆ ಸಲ್ಲಿಸಿರುವುದನ್ನೂ ನೋಡಬಹುದು. ಮನೆ ಕಟ್ಟುವ ಜಾಗಳಲ್ಲೇನಾದರೂ ಬಿಳಿ ಎಕ್ಕದ ಗಿಡವಿದ್ದರೆ ತಮ್ಮ ಅದೃಷ್ಟವೆಂದು ಭಾವಿಸುತ್ತಾರೆ ಅಂತೆಯೇ ಆ ಗಿಡ ಮನೆ ಕಟ್ಟುವ ಸ್ಥಳದ ಮಧ್ಯೆ ಭಾಗದಲ್ಲಿದ್ದರೆ ಅದನ್ನು ಕತ್ತರಿಸಿ ಹಾಕಲು ಜನರು ಹಿಂದುಮುಂದು ನೋಡುತ್ತಾರೆ ಅಂದರೆ ಅದರಲ್ಲಿ ಅಷ್ಟು ದೈವ ಭಕ್ತಿಯನಿಟ್ಟಿದ್ದಾರೆ ನಮ್ಮ ಜನರು. 

ಈ ಅರ್ಕ ಹೂ ಬಿಟ್ಟಾಗ ಅದರ ಬೀಜಗಳು ಸುತ್ತ ಮುತ್ತಲೆಲ್ಲ ಗಾಳಿಯಲ್ಲಿ ಹತ್ತಿಯ ಹುಳುಗಳಂತೆ ಓಡಾಡುತ್ತಿರುತ್ತವೆ ಇದೇ ರೀತಿ ಬೀಜ ಪ್ರಸಾರದ ಪ್ರಕ್ರಿಯೆಯಿಂದ ಮತ್ತಷ್ಟು ಗಿಡಗಳು ಹುಟ್ಟಿಕೊಳ್ಳುತ್ತವೆ.

ಈ ಗಿಡದ ಬೇರು, ತೊಗಟೆ, ಎಲೆ, ಹೂ ಮತ್ತು ಅದರಲ್ಲಿರುವ ಲೇಟೆಕ್ಸ್ ಹಾಲನ್ನು ಔಷಧಿಗಳಿಗೆ ಬಳಸುತ್ತಾರೆ: 

  • ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. - ಇದು ನನ್ನ ಸ್ವಂತ ಅನುಭವ.
  • ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ  ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
  • ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
  • ಪುಡಿಮಾಡಿದ ಒಣಗಿದ ಎಕ್ಕದ ತೊಗಟೆಯನ್ನು  ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.
  • ಚೇಳುಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆಂದು ಕೇಳಿದ್ದೇನೆ.
  • ಮುಖದಲ್ಲಿ ಬಂಗು, ಅಜೀರ್ಣ, ಮಹಿಳೆಯ ಋತುಚಕ್ರ ತೊಂದರೆಗಳಿಗೆ, ಗಾಯ, ಮೂಲವ್ಯಾದಿ, ಹಲ್ಲು ನೋವಿಗೆ ಹೀಗೆ ಅನೇಕ ತೊಂದರೆಗಳಿಗೆ ಎಕ್ಕದ ಹಲವು ಭಾಗಗಳನ್ನು ಔಷಧಿಯಾಗಿ ಬಳಸುತ್ತಾರೆ. 


 ಎಕ್ಕದ ಗಿಡದಲ್ಲಿರುವ ಹಾಲಿನಂತಹ ದ್ರವ ಕಣ್ಣಿಗೇನಾದರು ಬಿದ್ದರೆ ಕಣ್ಣು ಹೋಗುತ್ತೆ ಎಂದು ನಾವು ಚಿಕ್ಕವರಿದ್ದಾಗ ಹೇಳಿ ಹೆದರಿಸುತ್ತಿದ್ದರು... ಆದರೆ ನಿಜವೋ ಸುಳ್ಳೋ ಇದುವರೆಗು ತಿಳಿದಿಲ್ಲ. ಯಾರಿಗಾದರೂ ತಿಳಿದಿದ್ದರೆ ತಿಳಿಸಿ.
---
ಪೋಟೋ: ಅಂತರ್ಜಾಲ


Thursday, March 1, 2012

ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ....ಹೂ


ತ್ರಿದಲಂ ತ್ರಿಗುಣಕಾರಂ
ತ್ರಿನೇತ್ರಂ ಚ ತ್ರಯಾಯುಧಂ 
ತ್ರಿಜನ್ಮಪಾಪ ಸಂಹಾರಮ್
ಏಕ ಬಿಲ್ವಮ್ ಶಿವಾರ್ಪಣಂ||

ಈ ಶ್ಲೋಕ ಎಲ್ಲರೂ ಕೇಳಿರಲೇ ಬೇಕಲ್ಲವೇ.. 
ಮೂರು ದಳದಂತಿರುವ ಈ ಪತ್ರೆಯನ್ನು ತ್ರಿನೇತ್ರನಾದವನು, ತ್ರಿಗುಣಗಳಂತಿರುವ ಮೂರು ನಯನಗಳುಳ್ಳವನೂ ಆದ ಹಾಗೂ ಅತಿ ಚೂಪಾದ ಮೂರು ಭಾಗಗಳಿರುವ ಆಯುಧವಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುತ್ತಾನೋ ಅವನು ನನ್ನೇಲ್ಲಾ ಮೂರು ಜನ್ಮದ ಪಾಪಗಳನ್ನು ನಾಶ ಮಾಡೆಂದು ಬೇಡುತ್ತ ಈ ಬಿಲ್ವಪತ್ರೆಯನ್ನು ಸರ್ಪಿಸುತ್ತೇನೆ.. ಎಂಬುದೇ ಈ ಶ್ಲೋಕದ ಅರ್ಥ....

ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದೆ ಮನಃಶಾಸ್ತ್ರದ ಕಾರಣಗಳೂ ಇವೆಯೆಂದು ಹೇಳುತ್ತಾರೆ.. ಸತ್ತ್ವ,ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಉತ್ಪನ್ನವಾಗುತ್ತದೆ. ಬಾಲ್ಯಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ.



ಬಿಲ್ವ ಪತ್ರೆಯ ತೊಟ್ಟು ಲಿಂಗದ ಕಡೆಯೂ ಮತ್ತು ಎಲೆಗಳ ತುದಿಗಳು ನಮ್ಮೆಡೆಗೂ ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕೆಂಬ ಪ್ರತೀತಿ ಇದೆ.

ಬಿಲ್ವಪತ್ರೆ ಶಿವನಿಗೆ ಹಾಗೂ ಗಣಪನಿಗೂ ಪ್ರಿಯವಾದದ್ದು ಎಂದು ಹೇಳುತ್ತಾರೆ. ಬಿಲ್ವಪತ್ರೆ ಮರ ರುಟಾಸಿಯ (Rutaceae) ಕುಟುಂಬಕ್ಕೆ  ಸೇರಿದ್ದು. ಅಜಿಲ್ ಮರ್ಮೆಲಾಸ್ (Aegle Marmelos) ಎಂದು ವೈಜ್ಞಾನಿಕ ಸಸ್ಯಶಾಸ್ರ್ರೀಯ ಹೆಸರು. ಸಂಸ್ಕೃತದಲ್ಲಿ ಮಹಾಫಲ, ಶಿವದ್ರುಮ, ಶ್ರೀಫಲ, ಬಿಲ್ವ, ಶಾಂಡಿಲ್ಯ ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕನ್ನಡದಲ್ಲಿ ಬೆಲ್ಲಪತ್ರೆ, ಬಿಲ್ವ ಎಂದು ಕರೆಯುತ್ತಾರೆ.

ಇದು ಹೂ ಬಿಡುವ ಸಸ್ಯ ಜೊತೆಗೆ ಮಧುರ ರಸವುಳ್ಳದ್ದು, ಹೂ ಸುವಾಸನೆಯನ್ನು ಬೀರುತ್ತದೆ  ಬಿಳಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಬಿಲ್ವದ ಮರದ ಕೊಂಬೆಗಳಲ್ಲಿ ಮುಳ್ಳುಗಳಿದ್ದು (ಸುಮಾರು ಒಂದು ಅಂಗುಲ), ತೊಗಟೆ ಬೂದು ಬಣ್ಣದಾಗಿದ್ದು ಬೆಂಡು ಬೆಂಡಾಗಿರುವುದು, ಬೇಸಿಗೆಯಲ್ಲಿ  ಎಲೆಗಳೆಲ್ಲಾ  ಉದುರಿ ಹೋಗುತ್ತವೆ. ಫೆಬ್ರವರಿಯಿಂದ ಎಪ್ರಿಲ್ ತಿಂಗಳವರೆಗೆ ಹೂಕಾಯಿ ಬಿಡುವ ಕಾಲವಾಗಿದೆ. ಎಲೆಗಳು ತ್ರಿಪರ್ಣಿ (trifoliate) ಹಾಗೂ ಸುವಾಸಿತವಾಗಿರುತ್ತವೆ. ಇದರಲ್ಲಿ ತಿಳಿ ಹಳದಿ ಬಣ್ಣದ ಗಡುಸಾಗಿರುವಂತ ಕಾಯಿ ಬಿಡುತ್ತದೆ. ಈ ಮರ ಸುಮಾರು ೧೦ ರಿಂದ ೧೮ ಮೀಟರಿನಷ್ಟು ಎತ್ತರ ಬೆಳೆಯುತ್ತದೆ. ಬಿಲ್ವದ ಮರಗಳನ್ನು ಬಳಸಿ ಮನೆ ಸಾಮಾನುಗಳು, ಆಟಿಕೆಗಳು, ಗಾಡಿಗಳನ್ನು ತಯಾರಿಸಿ ಬಳಸುತ್ತಾರೆ.

"ಬ್ಯಾಲದ ಹಣ್ಣು" ನೋಡಿದ್ದೀರಾ, ಹೆಚ್ಚು ಕಡಿಮೆ ಬಿಲ್ವದ ಹಣ್ಣು ಸಹ ಅದೇ ರೀತಿ ಇರುತ್ತದೆ. ಬ್ಯಾಲದ ಹಣ್ಣಿನ ಸಿಪ್ಪೆ ಒಡೆದು ಒಳಗಿರುವ ತಿರುಳಿಗೆ ಬೆಲ್ಲವನ್ನು ಮಿಶ್ರಣ ಮಾಡಿ ನಾವುಗಳು ಹೆಚ್ಚು ತಿನ್ನುತ್ತಿದ್ದೆವು. ಇದು ಒಗರಿನ ಅಂಶ ಜಾಸ್ತಿ ಹೊಂದಿರುತ್ತದೆ. ಇದೇ ರೀತಿ ಬಿಲ್ವದ ಕಾಯಿಯ ತೊಗಟೆ ತೆಗೆದು ಅದರೊಳಗಿರುವ ತಿರುಳಿಗೆ ಬೆಲ್ಲ ಮಿಶ್ರಣ ಮಾಡಿ ತಿನ್ನುತ್ತಾರೆ. ಈ ಹಣ್ಣಿನಲ್ಲಿ ಬೀಜಗಳೂ ಸಹ ಇದ್ದು ಅದರ ಸುತ್ತಲೂ ಅಂಟುದ್ರವ ಇರುತ್ತದೆ. ತಿರುಳು ಹಾಗೂ ಬೀಜ ಪಕ್ಷಿಗಳಿಗೆ ತುಂಬಾ ಇಷ್ಟ. 

ಬಿಲ್ವದ ಹಣ್ಣಿನಲ್ಲಿ ಮ್ಯುಸಿಲೇಜ, ಪೆಕ್ವಿನ್, ಸಕ್ಕರೆ, ಟೆನಿನ್, ತೈಲಾಂಶ ಹಾಗೂ ತಿಕ್ತಾಂಶಳಿರುತ್ತವೆ. ಈ ಹಣ್ಣು ಆಮ್ಲರಸ. ಬಿಲ್ವಪತ್ರೆಯ ಕಷಾಯ, ಬಿಲ್ವಾದಿ ಚೂರ್ಣ, ಬಿಲ್ವಾದಿ ಘೃತ, ಬಿಲ್ವ ತೈಲ, ಬಿಲ್ವ ಮೂಲಾದಿ ಗುಟಿಕಿ ಇತ್ಯಾದಿ ಔಷಧಗಳನ್ನು ತಯಾರಿಸುತ್ತಾರೆ. ಇದನ್ನು ಆಯುರ್ವೇದ, ಯುನಾನಿ ಹಾಗೂ  ಸಿದ್ಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಬಿಲ್ವದ ಹಣ್ಣಿನಿಂದ ಗೋಡೆಗೆ ಬಳಿಯುವ ಪಾಲಿಶ್ ತಯಾರಿಸುತ್ತಾರಂತೆ ಇದು ಗೊತ್ತೇ ನಿಮಗೆ..? ಹಾಗೂ ಕಾಯಿಯಲ್ಲಿನ ತಿರುಳನ್ನು ತೆಗೆದು ಹಳದಿ ಬಣ್ಣವನ್ನು ಕ್ಯಾಲಿಕೋ ಮುದ್ರಣಕ್ಕೆ ಬಳಸುತ್ತಾರೆಂದು ಕೇಳಿದ್ದೇನೆ.

ಬಿಲ್ವದ ಮರ ಅಥವಾ ಪತ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಹೆಚ್ಚು ಕಡಿಮೆ ದೇವಾಲಯಗಳ ಆವರಣದಲ್ಲಂತು ಇದ್ದೇ ಇರುತ್ತದೆ. ಈ ತ್ರಿಪರ್ಣಿಕೆ ಕಿರುಎಲೆಗಳ ಮೇಲೆ ಪಾರದರ್ಶಕ ಚುಕ್ಕೆಗಳಿರುತ್ತವೆ. ಮೂರು ಎಲೆಗಳ ದಳ ಹೆಚ್ಚು ನೋಡಿದ್ದೇವೆ ಆದರೆ ಒಂದರಿಂದ ಒಂಭತ್ತು  ದಳಗಳೂ (ಕಿರು ಎಲೆಗಳು) ಸಹ ಬಿಡುತ್ತವೆಂದು ಕೇಳಿದ್ದೇನೆ. ಭಾರತ, ಬರ್ಮಾ, ಬಾಂಗ್ಲಾ, ಪಾಕಿಸ್ಥಾನ, ಈಜಿಪ್ಟ್, ಫಿಲಿಪೈನ್ಸ್, ಜಾವಾ, ಸುರಿನಾವ್ ಹಾಗೂ ಟ್ರೆನಿಡಾಡ್ ದೇಶಗಳಲ್ಲಿ ಈ ಮರವನ್ನು ಹೆಚ್ಚು ಕಾಣಬಹುದು. ಉತ್ತಮ ಮರಳು ಮಿಶ್ರಿತ ಮೆತ್ತನೆ ಮಣ್ಣು ಇದರ ಬೆಳೆಗೆ ಸೂಕ್ತ. ಒಣಹವೆ ಇದಕ್ಕೆ ಮುಖ್ಯವಾಗಿ ಬೇಕು. ಹೆಚ್ಚಿನ ವೇಳೆ ಒಣಹವೆಯಿದ್ದಲ್ಲಿ ಮಾತ್ರ ಇದು ಹಣ್ಣು ಬಿಡುವುದು. ಯಾವುದೇ ಹಣ್ಣು ಬೆಳೆಯಲಾರದ ಭೂಮಿ ಹಾಗೂ ಹವೆಯಲ್ಲಿ  ಇದು ಬೆಳೆಯುತ್ತದೆ.

ಬಿಲ್ವದ ಔಷಧೀಯ ಗುಣಗಳು:
ಬಿಲ್ವ ಮರದಲ್ಲಿನ ಬೇರು, ತೊಗಟೆ, ಪತ್ರೆ, ಹೂ, ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತದೆ. ಇದು ವಾತಹರ, ಅತಿಸಾರ, ಜ್ವರ, ಮೂತ್ರ ಸಂಬಂಧಿತ ರೋಗಗಳಿಗೆ ಸಿದ್ಧೌಷಧಿ. ಉಷ್ಣಗುಣ ಹೊಂದಿದ ಈ ಹಣ್ಣು ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚು ಮಾಡುತ್ತದೆ.... ರಕ್ತಭೇದಿ, ಹೊಟ್ಟೆ ನೋವು ಉಪಶಮನ -  ಹೀಗೆ ದೇಹದ ಒಳ ಮತ್ತು ಬಾಹ್ಯ ರೋಗಕ್ಕೆ ಮದ್ದಾಗಿ ಬಳಸುತ್ತಾರೆ. ಒಸಡಿನಲ್ಲಿನ ರಕ್ತಶ್ರಾವ. ಕೆಮ್ಮು, ನೆಗಡಿ, ಹೊಟ್ಟೆಯ ತೊಂದರೆಗಳು, ಗರ್ಭಿಣಿಯರಲ್ಲಾಗುವ ವಾಕರಿಕೆಗಳಿಗೆ ಬಿಲ್ವ ಹಣ್ಣು ಬಹಳಷ್ಟು ಔಷಧಿಯ ಗುಣವನ್ನು ಹೊಂದಿದೆ. ಬಿಲ್ವದ ಹಣ್ಣಿನಿಂದ ಪಾನಕವನ್ನು ಮಾಡಿ ಕುಡಿಯುತ್ತಾರೆ, ಇದು ಬೊಜ್ಜು ಕರೆಗಿಸುತ್ತದೆ, ಕಿವುಡುತನ, ಕಣ್ಣಿನ ಕಾಯಿಲೆಗಳು, ಹೀಗೆ ಎಲ್ಲಾ ರೋಗಕ್ಕೂ ಔಷಧಿಯ ರೀತಿ ಬಳಸುತ್ತಾರೆ.

ಸಕ್ಕರೆ ರೋಗಕ್ಕೆ ರಾಮ ಬಾಣವಿದ್ದಂತೆ. ರಕ್ತದಲ್ಲಿ ಸಕ್ಕರೆ ಕಾಯಿಲೆ ಇದ್ದು ಬಿಲ್ವದ ಎಲೆ ದಿನಕ್ಕೊಂದು ಸೇವಿಸುವುದು ಅಥವಾ  ಬಿಲ್ವದ ಹಣ್ಣಿನ ಪಾನಕ (ಸಕ್ಕರೆ ಹಾಕದೇ) ಕುಡಿಯುತ್ತ ಬಂದರೆ ಖಂಡಿತಾ ಸಕ್ಕರೆ ರೋಗ ಉಪಶಮನವಾಗುತ್ತದೆ.

ಬಿಲ್ವದ ಎಲೆ, ಕಾಯಿ, ಬೇರು ಈ ಮೂರು ಅಂಗಗಳನ್ನು ಔಷಧಕ್ಕಾಗಿ ಹೆಚ್ಚು ಬಳಸುತ್ತಾರೆ. ಎಲೆಗಳನ್ನು ಅರೆದು ಮುದ್ದೆ ಮಾಡಿ, ಇಲ್ಲವೆ ರಸ ತೆಗೆದು, ಅಥವಾ ಒಣಗಿಸಿ ಪುಡಿ ಮಾಡಿ ಉಪಯೋಗಿಸುತ್ತಾರೆ. ಬೇರನ್ನು ಪುಡಿ ಮಾಡಿ ಅಥವಾ ತೇಯ್ದು ಉಪಯೋಗಿಸುತ್ತಾರೆ. ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ, ಇಲ್ಲವೆ ಕಷಾಯ ಮಾಡಿ ಉಪಯೋಗಿಸಲಾಗುತ್ತದೆ. ಬಿಲ್ವವವು ಹೃದಯಕ್ಕೆ ಬಲ ನೀಡುತ್ತೆಂದೂ ಸಹ ಹೇಳುತ್ತಾರೆ. 

ಬಿಲ್ವವೃಕ್ಷದ "ಬೇರಿನ ಮತ್ತು ಮರದ ನಡುವಿನ ತಿರುಳಿನ ಭಸ್ಮದಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಲೋಹ, ರಂಜಕ, ಸಿಲಿಕಾಗಳು" ಇರುತ್ತವೆ.

ಬಿಲ್ವ ಎಷ್ಟು ಉಪಯೋಗ ಅಲ್ವಾ:
೧. ಬಿಲ್ವದ ತೈಲ ಇದನ್ನು ೪ ಅಥವಾ ಐದು ಡ್ರಾಪ್ ಕಿವಿಗೆ ಬಿಡುವುದರಿಂದ ಕಿವುಡುತನ ಉಪಶಮನವಾಗುತ್ತದೆ.
೨. ಸುಮಾರು ೧೦ ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ನಿವಾರಣೆಯಾಗುತ್ತದೆ.
೩. ೫ ಚಮಚ ಕಷಾಯ ಕುಡಿದರೆ ಜ್ವರ, ಗಂಟಲು ನೋವು ನಿವಾರಣೆಯಾಗುತ್ತದೆ.
೪. ೧೦ ಗ್ರಾಂ ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.
೫. ಬಿಲ್ವದ ಎಲೆಗಳನ್ನು ನೀರು ಮಿಶ್ರಿತದಿಂದ ಅರೆದು ಕಣ್ಣುಗಳ ರೆಪ್ಪೆಯ ಮೇಲೆ ಲೇಪನ ಮಾಡಿದರೆ ಒಳ್ಳೆಯ ಪರಿಣಾಮ  ನೀಡುತ್ತದೆ.
೬. ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ, ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.

  - ಬಿಲ್ವ ಮರದ ತೈಲ, ಬೇರಿನ ಪುಡಿ, ಲೇಹ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಕಷ್ಟ ಆದರೆ ಇಂತಹವು ಹೆಚ್ಚು ಗ್ರಂಧಿಗೆ ಅಂಗಡಿಗಳಲ್ಲಿ ಹೆಚ್ಚು ದೊರೆಯುತ್ತವೆ.




ಬಿಲ್ವ ಮರ ಬೆಳೆಸ ಬಯಸುವವರಿಗೆ ಸೂಕ್ತ ಮಾಹಿತಿ: (ನಮ್ಮ ಪರಿಚಿತರೊಬ್ಬರು ಸುಮಾರು ೨೦ ಮರಗಳನ್ನು ಬೆಳೆಸಿದ್ದಾರೆ ಅವರಿಂದ ಈ ಮಾಹಿತಿ ಪಡೆದೆ) :
೧. ಮರದ ಅಭಿವೃದ್ಧಿ  ಬೇರು ಹಾಗೂ ಬೀಜ ಎರಡರಿಂದಲೂ ಸಾಧ್ಯ. 
೨. ಜೂನ್, ಜುಲೈ ತಿಂಗಳಲ್ಲಿ ಬೀಜ ಬಿತ್ತಬೇಕು. ಬಿತ್ತಿದ ಬೀಜ ನಾಟಿ ಮಾಡಲು ಒಂದು ವರ್ಷದ ಸಮಯ ಬೇಕಾಗುತ್ತದೆ. 
೩. ಬಿಲ್ವದ ಗಿಡವನ್ನು ಮಳೆಗಾಲದಲ್ಲಿ  ನಾಟಿ ಮಾಡಬೇಕು. ನಾಟಿ ಮಾಡುವಾಗ ೧೦ರಿಂದ ೧೩ ಮೀಟರ್‌ಗಳ ಅಂತರ ಇಡಬೇಕಾಗುತ್ತದೆ. ಕಸಿ ವಿಧಾನವಾದ ಗಿಡವಾದರೆ ೫ ವರ್ಷಗಳಲ್ಲಿ  ಹಣ್ಣನ್ನು ನೀಡುತ್ತದೆ. ಬೀಜದ ಮೂಲಕ ಕನಿಷ್ಟ ೮ ವರ್ಷಗಳು ಬೇಕಾಗುತ್ತದೆ.
೪. ಆರಂಭದಲ್ಲೇ ಗೊಬ್ಬರ ಹಾಕಬೇಕು. ವಾರಕ್ಕೊಮ್ಮೆ ನೀರನ್ನು ಹಾಕಿದರೂ ತೊಂದರೆ ಇಲ್ಲ. ಗಿಡ ಬಲಿತ ಮೇಲೆ ಗೊಬ್ಬರವನ್ನು ಹಾಕಿ ಸ್ವಲ್ಪ ನೀರು ಹಾಕಬೇಕಾಗುತ್ತದೆ.
೫. ಮರದ ಎಲೆಗಳನ್ನು ಆಗಸ್ತ್ ತಿಂಗಳಲ್ಲಿ ಕೂಯ್ಲು ಮಾಡುತ್ತರೆ.
೬. ಇದರಲ್ಲಿ ಕಾಯಿ ಹಣ್ಣಾಗಲು ಸುಮಾರು ೮ ರಿಂದ ೧೦ ತಿಂಗಳು ಬೇಕಾಗುತ್ತದೆ.
೭. ಕಾಯಿ ಹಳದಿ ಬಣ್ಣಕ್ಕೆ ಬಂದಾಗ ಕತ್ತರಿಸಿ ಗೋಣಿಚೀಲದಲ್ಲಿಟ್ಟರೆ ಹಣ್ಣಾಗುತ್ತವೆ.  


ಮಾಹಿತಿ: ನನ್ನಿಂದ ಮತ್ತು ಹಲವಾರು ಜನರಿಂದ...  (ಮಾಹಿತಿಯಲ್ಲಿ ತಪ್ಪಿದ್ದಲ್ಲಿ ತಿದ್ದಿ ಮತ್ತಷ್ಟು ತಿಳಿದಿದ್ದರೆ ತಿಳಿಸಿ)

ಚಿತ್ರಗಳು: ಅಂತರ್ಜಾಲ

ಧನ್ಯವಾದಗಳು
ಮನಸು

Sunday, February 19, 2012

ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ

ಇತ್ತೀಚೆಗೆ ಮಗನಿಗೆ ಶಿವರಾತ್ರಿ ಹಬ್ಬವಿದೆ ಉಪವಾಸ ಜಾಗರಣೆ ಎಲ್ಲಾ ಮಾಡುತ್ತಾರೆ. ಊರಲ್ಲಿ ಇದ್ದಿದ್ದರೆ ನಾವೂ ಸಹ ಆಚರಿಸಬಹುದಿತ್ತು ಆದರೆ ಕುವೈತಿನಲ್ಲಿ ಇದ್ದೀವಿ ಕೆಲಸದ ದಿನ ಬೇರೆ ಉಪವಾಸವಂತೂ ಮಾಡುತ್ತೇವೆ, ಜಾಗರಣೆ ಕಷ್ಟವೇನೋ ಎಂದು ಹೇಳಿದಾಗ ಮಗ ಶಿವನ ಬಗ್ಗೆ ಏನಾದರು ಇದ್ದರೆ ಹೇಳು ಎಂದ ಅವನಿಗಾಗಿ ಈ ಲೇಖನ ಬರೆದೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಲಿದ್ದೇನೆ....

ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಸಮುದ್ರ ಮಥನದ ಸಂದರ್ಭದಲ್ಲಿ ಸಮುದ್ರದಿಂದ ಹಾಲಾಹಲ ಹೊರಬಂದು ಸೃಷ್ಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಸಾಧ್ಯತೆಗಳು ಹೆಚ್ಚಾದ್ದರಿಂದ ದೇವತೆಗಳು ಈ ಸಂಕಷ್ಟದಿಂದ ಪಾರುಮಾಡಲು ಭಗವಾನ್ ವಿಷ್ಣುವಿನ ಮೊರೆ ಇಟ್ಟಾಗ, ವಿಷ್ಣು ಶಿವನನ್ನು ಭೇಟಿಯಾಗುವಂತೆ ಸಲಹೆ ನೀಡುತ್ತಾನೆ. ನಂತರ ದೇವತೆಗಳು ಶಿವನ ಬಳಿಗೆ ತೆರಳಿ ಕಷ್ಟದಿಂದ ಪಾರು ಮಾಡೆಂದು ಬೇಡಿಕೊಳ್ಳುತ್ತಾರೆ. ದೇವತೆಗಳ ಕಷ್ಟವನ್ನು ಅರಿತ ಶಿವ ಹಾಲಾಹಲ ಕುಡಿದು ಅದು ಹೊರಗೆ ಬರದಂತೆ ಹಾವಿನಿಂದ ಸುತ್ತಿಕೊಂಡನೆಂದು ಹೇಳಲಾಗುತ್ತದೆ. ಆದುದರಿಂದ ಶಿವನ ಕಂಠ ನೀಲಿಯಾಗಿರುತ್ತದೆ ಇದೇ ಕಾರಣಕ್ಕೆ ಶಿವನನ್ನು ನೀಲಕಂಠ ಎಂದೂ ಸಹ ಕರೆಯುತ್ತಾರೆ. 

ಒಮ್ಮೆ, ಇಡೀ ಜಗತ್ತೇ ಪ್ರಳಯದ ಅಂಚಿನಲ್ಲಿದ್ದಾಗ ಪಾರ್ವತಿ ದೇವಿ ಈ ಜಗತ್ತನ್ನು ಉಳಿಸಲು ಶಿವನ್ನಲಿ ಮೊರೆಯಿಟ್ಟು ಬೇಡಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಶಿವನು ಪ್ರಳಯದಿಂದ  ಜೀವಸಂಕುಲಗಳನ್ನೆಲ್ಲಾ ಪಾರು ಮಾಡಿದ ರಾತ್ರಿಯನ್ನು ಮಹಾಶಿವರಾತ್ರಿ ಎಂದು ಪಾರ್ವತಿ ದೇವಿ ಕರೆದರೆಂದು ಹೇಳಲಾಗುತ್ತದೆ. ಪ್ರಳಯದ ನಂತರ ಪಾರ್ವತಿ ಶಿವನ ಪೂಜೆ ಸಲ್ಲಿಸಲು ಇಷ್ಟವಾದ ದಿನ ಯಾವುದೆಂದು ಕೇಳಿದಾಗ, ಮಾಘ ತಿಂಗಳಿನ ೧೪ರ ರಾತ್ರಿ ನನ್ನ ಇಷ್ಟದ ರಾತ್ರಿ, ಅದನ್ನು ಶಿವರಾತ್ರಿ ಎಂದು ಹೇಳಿದ ಕೂಡಲೆ ಪಾರ್ವತಿ ಈ ಹಬ್ಬವನ್ನು ಪ್ರಚಲಿತಪಡಿಸಿದಳು ಎಂದು ಪುರಾಣಕಥೆಗಳು ಹೇಳುತ್ತವೆ.

ನನ್ನ ತಂದೆ ಚಿಕ್ಕವಳಿದ್ದಾಗ ಹೇಳಿದ ಕಥೆ: (ಅಲ್ಪಸ್ವಲ್ಪ ನೆನಪಿದೆ ಪೂರ್ಣ ತಿಳಿದಿದ್ದವರು ತಿಳಿಸಬಹುದು) : 
ಕೋಳೂರ ಕೊಡಗೂಸು

ಕೋಳೂರು ಎಂಬ ಊರಲ್ಲಿ ಒಬ್ಬ ಶಿವಭಕ್ತ ದಿನವೂ ಶಿವ ದೇವಸ್ಥಾನಕ್ಕೆ ತೆರಳಿ, ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯವನಿಟ್ಟು ನಮಸ್ಕರಿಸಿ ಬರುತ್ತಲಿದ್ದನು. ಒಮ್ಮೆ ಹೆಂಡತಿ ಜೊತೆಯಲ್ಲಿ ಎಲ್ಲೋ ಹೋಗಬೇಕಾದ ಕಾರಣ ದೇವರಿಗೆ ಪೂಜೆ ಸಲ್ಲಿಸುವುದು ಬಿಡವುದು ಬೇಡವೆಂದು ಮಗಳಿಗೆ ಆ ಕೆಲಸವನ್ನು ವಹಿಸುತ್ತಾನೆ. ಅಪ್ಪ ಹೇಳಿದಂತೆ ಪುಟ್ಟ ಬಾಲೆ ದಿನವೂ ಶಿವನಿಗೆ ನೈವೇದ್ಯವನ್ನಿತ್ತು ಪೂಜೆ ಸಲ್ಲಿಸಲು ಹೋಗುತ್ತಲಿರುತ್ತಾಳೆ. ಅಪ್ಪ ದಿನವೂ ನೇವೇದ್ಯವನ್ನು ದೇವರಿಗೆ ಅರ್ಪಿಸಿ ಬರುತ್ತಲಿದ್ದರು ಆದರೆ ಈಗ ನಾನು ನೇವೇದ್ಯ ದೇವರಿಗೆ ಕೊಡಲಿಲ್ಲವೆಂದರೆ ಅಪ್ಪ ನನ್ನನ್ನು ಸುಮ್ಮನೇ ಬಿಡುವರೇ ಎಂದು ದೇವರಲ್ಲಿ ಮೊರೆ ಇಟ್ಟು, "ನನ್ನ ಅಪ್ಪ ಬಂದಿಲ್ಲವೆಂದು ಕೋಪವೇ... ದೇವ ದಯವಿಟ್ಟು ಈ ಪ್ರಸಾದವನ್ನು ಸ್ವೀಕರಿಸಿ", ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಹಟ ಮಾಡಿ ಕುಳಿತುಕೊಳ್ಳುತ್ತಾಳೆ. ಈ ಪುಟ್ಟ ಬಾಲಕಿಯ ಹಟವನ್ನು ಕಂಡು ಶಿವನು ಪ್ರತ್ಯಕ್ಷನಾಗಿ ತಂದಿದ್ದ ನೇವೇದ್ಯವನ್ನು ಸ್ವೀಕರಿಸುತ್ತ ಇರುತ್ತಾನೆ. ಅಪ್ಪ ಅಮ್ಮ ಮರಳಿ ಬಂದಾಗ ಮಗಳು ನೇವೇದ್ಯ ಏನು ಮಾಡಿದಳು ಎಂದು ಕೇಳಿದಾಗ ಶಿವನಿಗೆ ಕೊಟ್ಟೆನಪ್ಪ...!! ಎಂದು ಹೇಳುತ್ತಲಿದ್ದ ಪುಟ್ಟ ಬಾಲಕಿಯ ಮೇಲೆ ಅನುಮಾನ ಮೂಡಿ ಸುಳ್ಳು ಹೇಳುತ್ತಲಿರುವೆ, ನಿಜವನ್ನೇ ಹೇಳು ಇಲ್ಲದಿದ್ದರೆ ನಿನಗೆ ಶಿಕ್ಷೆಯಾಗುತ್ತದೆ ಎಂದನು. ಅಪ್ಪ ಎಷ್ಟು ಕೇಳಿದರೂ ಶಿವನೇ ತಿಂದನೆಂದು ಹೇಳಿದಾಗ ಕೋಪಗೊಂಡ ಅಪ್ಪ ಮಗಳಿಗೆ ಪೆಟ್ಟು ನೀಡಲು ಮುಂದಾದಾಗ ಬಾಲೆ ಓಡುತ್ತ ಶಿವನ ಸನ್ನಿದಿಗೆ ಬಂದು ನನ್ನ ಕಾಪಾಡು ಶಿವನೇ....... ಎಂದು ಅಳುತ್ತ ಬರುತ್ತಿದ್ದ ಕೂಸನ್ನು ದೇವ ತನ್ನ ಶಿವಲಿಂಗ ಬಾಯಿತೆರೆದು ಲಿಂಗದೊಳಗೆ ಸೇರಿಕೊಳ್ಳುವ ಸಮಯಕ್ಕೆ ಸರಿಯಾಗಿ ಅಪ್ಪ ಆ ಮಗುವಿನ ಕೂದಲನ್ನು ಕೈಯಲ್ಲಿ ಹಿಡಿದನಂತೆ ಅದು ಹಾಗೇ  ಈಗಲೂ ಕೂದಲು ಶಿವಲಿಂಗುವಿನಿಂದಾಚೆ ಇದೆ ಎಂದು ಹೇಳುತ್ತಾರೆ. 


(ಋಷಿಗಳ ಬಗೆಗಿನ ಪುಸ್ತಕ ಓದಿದಾಗ ತಿಳಿದ ಸಂಗತಿ)
ಒಮ್ಮೆ ಅಷ್ಟಾವಕ್ರ ಋಷಿಗಳು ಜಂಬೂದ್ವೀಪವನ್ನಾಳುತ್ತಿದ್ದ  ಇಕ್ಷ್ವಾಕು ವಂಶದ ಚಿತ್ರಭಾನು ಎಂಬ ರಾಜನ ಭೇಟಿಮಾಡಿದಾಗ ಶಿವರಾತ್ರಿ ಪ್ರಯುಕ್ತ ರಾಜ ಉಪವಾಸಕ್ಕೆ ತೊಡಗಿದ್ದನ್ನು ಕಂಡು ಕಾರಣಗಳನ್ನು ಕೇಳುತ್ತಾರೆ. ಆಗ ರಾಜ ತನ್ನ ಹಿಂದಿನ ಜನ್ಮದ ಬಗ್ಗೆ ಋಷಿಗಳಿಗೆ ಹೇಳುತ್ತಾನೆ.

ಹಿಂದಿನ ಜನ್ಮದಲ್ಲಿ ಸುಸ್ವರ ಎಂಬ ಹೆಸರಿನಲ್ಲಿ ಹುಟ್ಟಿ, ವಾರಾಣಾಸಿಯಲ್ಲಿ ಬೇಟೆಗಾರನಾಗಿದ್ದ. ಪಶುಪಕ್ಷಿಗಳನ್ನು ಬೇಟೆಯಾಡಿ ಅವುಗಳನ್ನು ಮಾರುವುದೇ ಅವನ ಕಸುಬಾಗಿತ್ತು. ಒಮ್ಮೆ ಹೀಗೆ ಅರಣ್ಯದಲ್ಲಿ ಬೇಟೆಯಾಡಲು ತೆರಳಿದ ದಿನ ರಾತ್ರಿಯಾದರೂ ಯಾವುದೇ ಬೇಟೆಗೆ ಸಿಗದಿದ್ದಾಗ ಘೋರಾರಣ್ಯದೊಳಗೆ ರಾತ್ರಿಯೆಲ್ಲಾ ಕಳೆಯಬೇಕಾಯ್ತು. ಅಂದು ಜಿಂಕೆ ಎದುರುಗೆ ಬಂದರೂ ಸುಸ್ವರ ದುಃಖದಲ್ಲಿದ್ದ ಜಿಂಕೆಯ ಪರಿವಾರ ಕಂಡು ಕೊಲ್ಲಲು ಮನಸಾಗದೇ ಹಾಗೆ ಸುಮ್ಮನಾಗಿದ್ದ. ಪ್ರಾಣಿಗಳು ಬಂದು ಕೊಂದಾವು ಎಂಬ ಭಯದಿಂದ ಅಲ್ಲೇ ಇದ್ದ ಬಿಲ್ವಪತ್ರೆ ಮರವನ್ನೇರಿ ರಾತ್ರಿ ಕಳೆಯ ಬಹುದೆಂದುಕೊಂಡು ಹತ್ತಿ ಕುಳಿತ. ಬೆಳಗಿನಿಂದ ಬೇಟೆಗಾಗಿ ಓಡಾಡಿ ದಣಿದಿದ್ದ ಸುಸ್ವರ  ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಹಸಿವಿನಿಂದ ಬಳಲಿ ತನಗಾಗಿಯೇ ಕಾಯುತ್ತಿರುತ್ತಾರೆ ಜೊತೆಗೆ ದುಃಖ ಪಡುತ್ತಾರೆ ಎಂದುಕೊಂಡು, ತಾನೂ ಕಣ್ಣೀರು ಸುರಿಸುತ್ತಾ ರಾತ್ರಿಯೆಲ್ಲ ನಿದ್ರೆ ಬಾರದೆ ಮರದಲ್ಲಿದ್ದ ಬಿಲ್ವಪತ್ರೆಗಳನ್ನು ಒಂದೊಂದಾಗಿ ಗಿಡದಿಂದ ಕೆಳಗೆ ಹಾಕುತ್ತಾ ಆ ರಾತ್ರಿ ಕಳೆದಿದ್ದನು. ನಂತರ ಬೆಳಗಾದ ಕೂಡಲೆ ಪತ್ನಿ ಮತ್ತು ಮಕ್ಕಳಿಗೆ ಆಹಾರವನ್ನು ತೆಗೆದುಕೊಂಡು ಹೋಗಿ ಊಟಕ್ಕೆ ಕುಳಿತಿರುವ ಸಮಯದಲ್ಲಿ ಹಸಿವಿನಿಂದ ಬಳಲಿದ್ದ ವ್ಯಕ್ತಿ ಬಂದು ಆಹಾರ ನೀಡಲು ಬೇಡಿದಾಗ ಅವನಿಗೂ ಸ್ವಲ್ಪ ನೀಡಿ ನಂತರ ಎಲ್ಲರೂ ಕೂಡಿ ಊಟ ಮಾಡಿದರು.

ಸ್ವಲ್ಪ ದಿನಗಳಾದ ಮೇಲೆ ಸುಸ್ವರ ಮರಣಹೊಂದಿ ಅವನ ಆತ್ಮವು ಶಿವನ ಬಳಿಗೆ  ಸಂದೇಶಕರು ಕೊಂಡೊಯ್ಯುಲು ಬಂದಾಗ. "ಕಾಡಿನಲ್ಲಿ ಅಂದು ಇಡಿ ರಾತ್ರಿ ನಿನಗೇ ಅರಿವಿಲ್ಲದೇ ಬಿಲ್ವಪತ್ರೆ ಮರದ ಮೇಲೆ ಹತ್ತಿ, ಕೆಳಗೆ ಹಾಕಿದ ಬಿಲ್ವಪತ್ರೆಗಳು ಮರದ ಅಡಿಯಲ್ಲಿದ್ದ ಶಿವಲಿಂಗಕ್ಕೆ ಅರ್ಚನೆ ಮಾಡಿ, ನೀನು ಹಾಕಿದ ಕಣ್ಣೀರು ಲಿಂಗವನ್ನು ಶುದ್ದಿಗೊಳಿಸಿದೆ. ಅಂದೇ ನೀನು ಉಪವಾಸ ವ್ರತ ಆಚರಿಸಿದ್ದರಿಂದ ಶಿವನು ಪ್ರಸನ್ನರಾಗಿ ತಮ್ಮನ್ನು ಕಳುಹಿಸಿದ್ದಾರೆ" ಸಂದೇಶಕರು ಈ ಎಲ್ಲಾ ಸಂಗತಿಗಳನ್ನು ಸುಸ್ವರನಲ್ಲಿ ಹೇಳುತ್ತಾರೆ. ಶಿವನ ಸ್ಮರಣೆಯಿಂದ ರಾಜನಾಗಿ ಈ ಜನ್ಮದಲ್ಲಿ ಜನ್ಮತಾಳಿದ್ದೇನೆಂದು ಚಿತ್ರಭಾನು ಋಷಿಗಳಲ್ಲಿ ವಿವರಿಸಿ ಹೇಳುತ್ತಾನೆ. ಈ ಜನ್ಮ ನೀಡಿದ ಆ ಶಿವನಿಗೆ ಉಪವಾಸಾದಿಗಳಿಂದ ಪೂಜೆಗೈಯುತ್ತ ಬರುತ್ತಾನೆ.

ಇನ್ನು ಬೇಡರ ಕಣ್ಣಪ್ಪ ಎಲ್ಲರಿಗೂ ಈ ಕಥೆ ಗೊತ್ತಿರುವಂತಹುದೇ ಒಂದು ದಿನ ಕಣ್ಣಪ್ಪನೆಂಬ ಬೇಟೆಗಾರ ಬಿಲ್ವ ಪತ್ರೆ ಮರದ ಮೇಲೆ ಕುಳಿತು, ದಿನವಿಡೀ ಉಪವಾಸವಿದ್ದು, ಅಕಸ್ಮಿಕವಾಗಿ ಶಿವರಾತ್ರಿಯಂದು ಬಿಲ್ವದ ಎಲೆಗಳನ್ನು ಕೆಳಗಿದ್ದ ಶಿವಲಿಂಗಕ್ಕೆ ಹಾಕುತ್ತಿದ್ದನು. ಈ ಮೂಲಕ ಶಿವಪೂಜೆ ನಡೆಸಿದನು. ಆತನ ಭಕ್ತಿಗೆ ಮಾರುಹೋದ ಶಿವನು ಆತನ ಎಲ್ಲ ಪಾಪ ಕರ್ಮಗಳನ್ನು ಕ್ಷಮಿಸಿ ಮುಕ್ತಿ ದೊರಕಿಸಿದನು. ಆದ್ದರಿಂದ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಪುರಾಣಗಳಲ್ಲಿ ತಿಳಿಸಲಾಗಿದೆ. ಹೀಗೆ ಹಲವು ಕಥೆಗಳು ಶಿವರಾತ್ರಿಯ ಬಗ್ಗೆ ಕೇಳಿದ್ದೇವೆ

ಸರ್ವಶಕ್ತ ಶಿವನ ನಾಮ ಜಪಿಸಿ ಭವಭಾರ ಹಗುರಮಾಡಿಕೊಳ್ಳಲು ಆಸ್ಪದ ನೀಡುವ ದೈವಶ್ರದ್ಧೆಯ ಮಹತ್ವದ ದಿನವೇ ಶಿವರಾತ್ರಿ. ಮಹಾಶಿವರಾತ್ರಿ "ಮಾಘ ಮಾಸ""ಬಹುಳ ಚತುರ್ದಶಿ"ಯಂದು ಆಚರಿಸುತ್ತಾರೆ, ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರತ್ತದೆಂದು ಹೇಳಿದ್ದಾರೆ. ಉತ್ತರ ಭಾರತಗಳಲ್ಲಿ ಶಿವರಾತ್ರಿಯಂದು ಭಂಗಿ ಮತ್ತು ಲಸ್ಸಿ ಕುಡಿದು ಹಬ್ಬ ಆಚರಿಸುತ್ತಾರೆಂದು ಕೇಳಿದ್ದೇನೆ.  ನನ್ನ ಸ್ನೇಹಿತ ದೆಹಲಿಯಲ್ಲಿದ್ದಾಗ ಅಲ್ಲಿನ ಭೈರವ ದೇವರಿಗೆ ಸಾರಾಯಿ ಅಭಿಷೇಕ ಮಾಡುತ್ತಲಿದ್ದದ್ದನ್ನು ಕಂಡಿದ್ದಾನೆ, ಆತ ಹೇಳುವ ಪ್ರಕಾರ ಅಲ್ಲಿನ ಶಿವನ ದೇವಸ್ಥಾನಗಳಲ್ಲಿ ಹೆಚ್ಚು ಕಡಿಮೆ, ಮಧ್ಯಪಾನಾಭಿಷೇಕವೇ ಹೆಚ್ಚು... ಜೊತೆಗೆ ತೀರ್ಥವಾಗಿ ಸಾರಾಯಿಯನ್ನೇ ನೀಡುತ್ತಾರಂತೆ.... ಈ ರೀತಿ ಮಾಡುವುದರಿಂದ ಶಿವನಿಗೆ ಪ್ರಿಯವೆಂದೂ ಸಹ ಹೇಳುತ್ತಾರೆ.  ಇದು ಎಷ್ಟರ ಮಟ್ಟಿಗೆ ಸರಿ ತಪ್ಪು ಗೊತ್ತಿಲ್ಲ.. ಆದರೆ ಆಚರಣೆಗಳು ಮಾತ್ರ ವಿಭಿನ್ನವಾಗಿ ನೆಡೆಯುತ್ತವೆ. 

ನಾವುಗಳು ಅಂದರೆ ಕರ್ನಾಟಕದಲ್ಲಿ ಈ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ ಪೂಜೆಮಾಡುತ್ತೇವೆ. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಶ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಾಗುತ್ತೇವೆ ಎಂದು ನಂಬಿಕೆ ಇಟ್ಟಿದ್ದೇವೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡುತ್ತೇವೆ. ಉಪವಾಸ ಮಾಡಲು ಆಗದಿದ್ದವರು ಫಲಹಾರಗಳನ್ನು ಸೇವಿಸುತ್ತಾರೆ. ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆಮಾಡುತ್ತಾರೆ. (ಬೆಳಗಿನ ಜಾವ) ಜಾವ (ಯಾಮ) ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕೆಂದು ಹಿರಿಯರು ಹೇಳಿದ್ದಾರೆ.  

ಓಂ ಶಿವಾಯ ನಮಃ
----
ಶಿವ ಸ್ತೋತ್ರ

ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ |
ನ ಜಾನಾಮೀತಿ ನೋ ಬ್ರೂಯಾತ್ ಸರ್ವಜ್ಞಪದಭಾಗ್ ಯತಃ ||


ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂ ಪತಿಂ ||


ವಂದೇ ಸೂರ್ಯಶಶಾಂಕವಹ್ನಿ ನಯನಂ ವಂದೇ ಮುಕುಂದಪ್ರಿಯಂ |
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ ||

Tuesday, February 14, 2012

ರುದ್ರಾಕ್ಷಿ

"ರುದ್ರಾಕ್ಷಿ" ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ. "ರುದ್ರ್ಚ ಮತ್ತು ಅಕ್ಷ" ಎಂಬ ಎರಡು ಶಬ್ಧಗಳಿಂದಾದ  ರೂಪವೇ ರುದ್ರಾಕ್ಷಿ. "ರುದ್ರ" ಎಂದರೆ ಶಿವನ ಮತ್ತೊಂದು ಹೆಸರು. "ಅಕ್ಷ" ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ. 

ರುದ್ರ್ಚ ಅಕ್ಷ ಎಂಬುದಕ್ಕೆ ಬಹಳ ಅರ್ಥಗಳೇ ಇವೆ... "ರುದ್ರ ಎಂದರೆ! 'ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ' ಅಂದರೆ ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ' ಎಂಬ ಅರ್ಥ"  ಶಿವ ತನ್ನ ಮೂರನೇ ಕಣ್ಣಿನಿಂದ ಎಲ್ಲವನ್ನೂ ನೋಡಬಲ್ಲ ಆ ಕಣ್ಣು ಅಕ್ಷರೇಖೆಯ ಸುತ್ತ ಸುತ್ತುತ್ತಲಿರುತ್ತದೆ ಆದ್ದರಿಂದಲೇ "ಅಕ್ಷ" ಎಂದು ಕರೆಯುತ್ತಾರೆ. ಮತ್ತೊಂದು ಅರ್ಥವನ್ನು ಎಲ್ಲೋ ಓದಿದ ನೆನಪು ಅ- ಎಂದರೆ ತೆಗೆದುಕೊಳ್ಳುವುದು ಮತ್ತು ಕ್ಷ- ಎಂದರೆ ಕೊಡುವುದು ಎಂದರ್ಥ, "ಅಕ್ಷ" ಎಂದರೆ ತೆಗೆದುಕೊಳ್ಳುವುದು ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ನಮ್ಮ ದುಃಖವನ್ನು ತೆಗೆದುಕೊಂಡು ಸುಖವನ್ನು ಕೊಡುವ ಕ್ಷಮತೆ ಇರುವುದೆಂದು ಸಹ ಹೇಳುತ್ತಾರೆ.

ತಾರಕಾಕ್ಷ ಮತ್ತು ಕಮಲಾಕ್ಷರೆಂಬ ತಾರಕಪುತ್ರರು ಅಧರ್ಮಗಳ ಆಚರಣೆಯಲ್ಲಿ ತೊಡಗಿಸಿಕೊಂಡಿರುವಾಗ ಅತಿ ವಿಷಾದದಿಂದ ಅಶ್ರುಗಳಿಂದ ತುಂಬಿದ್ದ ಶಿವನ ನೇತ್ರದಿಂದ ಕೆಲವು ಕಂಬನಿಗಳು ಭುವಿಯ ಮೇಲೆ ಬಿದ್ದ ಪರಿಣಾಮದಿಂದಲೇ "ರುದ್ರಾಕ್ಷಿ ವೃಕ್ಷ" ಹುಟ್ಟಿತೆಂದು ಹೇಳಲಾಗುತ್ತದೆ. 

                      

ರುದ್ರಾಕ್ಷಿ ಮರ ನಿತ್ಯ ಹರಿದ್ವರ್ಣ ವೃಕ್ಷ, ವರ್ಷ ಪೂರ್ಣ ಎಲೆಗಳು ಬಲಿತು ಉದುರುತ್ತವೆ ಹಾಗೂ ಹೊಸ ಚಿಗುರಿನಿಂದ ಕಂಗೊಳಿಸುತ್ತದೆ. ಈ ರುದ್ರಾಕ್ಷಿ ವೃಕ್ಷಗಳು ಸಮತಟ್ಟ ಪ್ರದೇಶಗಳಲ್ಲಿ ಬೆಳೆಯದೆ ಯಾವಾಗಲೂ ತಗ್ಗು ಪ್ರದೇಶದಲ್ಲೇ ಬೆಳೆಯುತ್ತವೆ. ಇದು ಹಿಮಾಲಯದ ಪರ್ವತಗಳಲ್ಲಿ, ಕಾಶ್ಮೀರ, ನೇಪಾಳ ಈ ಪ್ರದೇಶಗಳಲ್ಲೇ ಹೆಚ್ಚು ಕಾಣುತ್ತೇವೆ (ದಕ್ಷಿಣ ಏಷಿಯಗಳಲ್ಲಿ ಹೆಚ್ಚು ದೊರಕುವುದು).   ಇದರ ಎಲೆಗಳು ಮಾವಿನ ಮರದ ಎಲೆಯಂತಿರುತ್ತೆ, ರುದ್ರಾಕ್ಷಿ ವೃಕ್ಷದಲ್ಲಿ ಬಿಡುವ ಹಣ್ಣುಗಳನ್ನು ಹಲವಾರು ಯತಿಗಳು ತಿನ್ನುತ್ತಾರೆ, ಇದರಿಂದ ಬಾಯಾರಿಕೆ ಆಗುವುದಿಲ್ಲವೆಂದು ಸಹ ಹೇಳುತ್ತಾರೆ. ರುದ್ರಾಕ್ಷಿ ಮರದ ಹಣ್ಣುಗಳು (ನೀಲಿ ಬಣ್ಣದಲ್ಲಿರುತ್ತದೆ) ತುಂಬಾ ಹಣ್ಣಾಗಿ ಕೆಳಗೆ ಬಿದ್ದನಂತರ ಒಳಗಿರುವ ಬೀಜಗಳು ಒಣಗುತ್ತವೆ. ಬಿದ್ದ ಹಣ್ಣುಗಳನ್ನು ಕೆಲ ದಿನ ನೀರಿನಲ್ಲಿ ನೆನೆಸಿಟ್ಟರೆ ಸಿಪ್ಪೆ ಬೀಜದಿಂದ ಬೇರ್ಪಡುತ್ತದೆ. ಒಂದೇ ಹಣ್ಣಿನಲ್ಲಿ ಸುಮಾರು ೧೦ ರಿಂದ ೧೫ ಬೀಜಗಳಿರುತ್ತವೆ (ಹಣ್ಣಿನೊಳಗೆ ಬೀಜಗಳು ಹೆಚ್ಚಾದಂತೆ ಬೀಜಗಳ ಆಕಾರ ಕೂಡ ಕಡಿಮೆ ಇರುತ್ತದೆ ಅಂದರೆ ಚಿಕ್ಕ ರುದ್ರಾಕ್ಷಿ ಬೀಜಗಳು). ನಿಮಗೇ ಗೊತ್ತೆ ರುದ್ರಾಕ್ಷಿ ಬೀಜದಲ್ಲಿ ಮೊದಲೇ ರಂಧ್ರವಿರುತ್ತದೆ ಅದಕ್ಕೆ ವಾಹಿನಿ ಎನ್ನುತ್ತಾರೆ... ಆ ರಂಧ್ರ ಮೊದಲೇ ಇರುವುದರಿಂದ ಪೋಣಿಸಲು ಸುಲಭವಾಗುತ್ತದೆ ಅಲ್ಲವೇ....? ಈ ರುದ್ರಾಕ್ಷಿಗಳಲ್ಲಿ "ಎಲೆಕ್ಟ್ರೋಮ್ಯಾಗ್ನಟಿಕ್" ಗುಣಧರ್ಮ ಹೊಂದಿರುತ್ತದೆ.   

ರುದ್ರಾಕ್ಷಿಯಲ್ಲಿ  "೧ ರಿಂದ ೩೫" ಮುಖಗಳಿರುವ ರುದ್ರಾಕ್ಷಿ ಇರುತ್ತವೆ (ಸಾಮಾನ್ಯವಾಗಿ ೧ ರಿಂದ ೧೪ ಮುಖದ ರುದ್ರಾಕ್ಷಿಗಳೇ ಹೆಚ್ಚು ಸಿಗುತ್ತವೆ). ಆದರೆ ಏಕಮುಖ ರುದ್ರಾಕ್ಷಿ ಬಲು ಅಪರೂಪ ದೊರಕುವುದು ಅದರ ಆಕಾರವೂ ಸಹ ವಿಭಿನ್ನವಾಗಿರುತ್ತದೆ. ರುದ್ರಾಕ್ಷಿ ನಸು ಕೆಂಪಿನ ಬಣ್ಣದಾಗಿರುತ್ತದೆ, ಅದರ ಮೇಲೆ ಹಳದಿ ಬಣ್ಣದಂತಹ ಪಟ್ಟೆಗಳನ್ನು ನಾವು ಕಾಣಬಹುದು. ರುದ್ರಾಕ್ಷಿಗಳಲ್ಲಿ ಹಲವು ಬಣ್ಣಗಳೂ ಸಹ ಇವೆ ಬಿಳಿ, ಹಳದಿ, ಕೆಂಪು, ಕಪ್ಪು ಇವೆಲ್ಲವೂಗಳಲ್ಲಿ ಬಿಳಿ ಬಣ್ಣದ ರುದ್ರಾಕ್ಷಿ ಶ್ರೇಷ್ಠವೆಂದು ನಂಬಿದ್ದಾರೆ. ಈ ರುದ್ರಾಕ್ಷಿಗಳನ್ನು ಕೊರಳಿನ ಮಾಲೆ ಮತ್ತು ಜಪ ಮಾಲೆಯಾಗಿ ಧರಿಸುತ್ತಾರೆ.  ಮಾಲೆಯಲ್ಲಿ ಸಾಮಾನ್ಯವಾಗಿ ೧೦೮ ರುದ್ರಾಕ್ಷಿಗಳನ್ನು ಪೋಣಿಸಿದ ಮಾಲೆಯನ್ನು ಹೆಚ್ಚು ಧರಿಸಿದ್ದನ್ನ ನಾನು ನೋಡಿದ್ದೇನೆ ಆದರೆ ೨೪೯, ೧೦೦೦ ಹಾಗೂ ೧೧೦೦ ಇರುವ ರುದ್ರಾಕ್ಷಿಮಾಲೆಯನ್ನೂ ಸಹ ಧರಿಸುತ್ತಾರೆಂದು ಕೇಳಿದ್ದೇನೆ.

ರುದ್ರಾಕ್ಷಿ ಬೀಜ ಮತ್ತು ಮರದ ಸಿಪ್ಪೆಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ವಾತ, ಪಿತ್ತ, ಕಫಾ, ಚರ್ಮರೋಗ, ರಕ್ತದ ಒತ್ತಡ ಇಂತಹ ಹಲವಾರು ತೊಂದರೆಗಳಿಗೆ ಔಷಧಿ ತಯಾರಿಸಲು ಮನೆಮದ್ದಾಗಿ ರುದ್ರಾಕ್ಷಿ ಬೀಜದ ಪುಡಿಯನ್ನು ಬಳಸುತ್ತಾರೆ.  ಇನ್ನು ರುದ್ರಾಕ್ಷಿ ಮರಗಳನ್ನು ಪೀಠೋಪಕರಣ ತಯಾರಿಕೆಗಳಿಗೆ ಹಾಗೂ ಹಣ್ಣು ಪ್ಯಾಕ್ ಮಾಡಲು ಬಳಸುತ್ತಾರೆ.  



ಸೂಚನೆ: ಮಾಹಿತಿಯಲ್ಲೇನಾದರು ತಪ್ಪಿದ್ದರೆ ಮತ್ತು ಮತ್ತಷ್ಟು ಮಾಹಿತಿಗಳು ಗೊತ್ತಿದ್ದರೆ ತಿಳಿಸಿ...


ಚಿತ್ರಗಳು: ನೆಟ್ ಲೋಕ 

Thursday, February 9, 2012

ಯಾರು..?



ಯಾರು..?

ರಾಜ್ಯ ಆಳುವ ದೊರೆಯೇ ಭ್ರಷ್ಟಾಚಾರದಲಿ ಮುಳುಗಿರುವಾಗ
ಸಾಮಾನ್ಯರ ತಪ್ಪುನೆಪ್ಪುಗಳ ಕೇಳುವವರು ಯಾರು.....?

ಸಿರಿವಂತಿಕೆಯಲಿ ಮೃಷ್ಟಾನ ಭೋಜನದಿ ದಿನವ ಕಳೆಯುವಾಗ
ದಿಕ್ಕುಗೆಟ್ಟು ಅನ್ನಕಾಗಿ ಅಲೆವ ಅಲೆಮಾರಿಯ ಕೇಳುವವರ್ಯಾರು..?

ಬೂದಿಮುಚ್ಚಿದ ಕೆಂಡದಲಿ ಜಾತಿ-ಮತಗಳು ಹೊರಳಾಡುವಾಗ
ಪ್ರಕೃತಿಯ ಜಾತಿ ತಿಳಿಯುವವರು ಯಾರು..?

ಕಡಲೇ ಎದ್ದು ಊರ ನುಂಗಿ ನೀರು ಕುಡಿಯುವಾಗ
ಪ್ರವಾಹದ ದಾಹ ನೀಗಿಸುವವರು ಯಾರು..?

ದಿನಕೆ ಸಾವಿರಾರು ಕೂಸುಗಳು ಹುಟ್ಟುತಿರುವಾಗ
ಎಲ್ಲೆ ಮೀರಿ ಬೆಳೆವ ಜನಸಂಖ್ಯೆಯ ತಡೆಯುವವರು ಯಾರು..?

ಎಲ್ಲಕೂ ಯಾರು ಯಾರು ಎಂದು ಕೇಳುವಾಗ
ಉತ್ತರ ಹುಡುಕಿ ಕೊಡುವವರು ಯಾರು...?


Wednesday, January 18, 2012

-ಬದುಕು ಸುಭೀಕ್ಷೆ-




ಬದುಕುವ ಆಸೆ
ನೀಡದಿರಲಿ ನಿರಾಸೆ
ಅದಕೆ ಬಯಸಿ ಹೊರಟೆ
ದುಡಿಮೆಯೆಂಬ ಹೊಟ್ಟೆ ಪಾಡಿಗೆ ...

ಬಡತನಕೆ ನೂರು ಮಕ್ಕಳು
ಕೆಸರಿಗೆ ಸಾವಿರಾರು ಹುಳಗಳು
ಎಂಬಂತೆ ಬೆಳೆದು ನಿಂತ ಸಂಸಾರ
ದೂಡಬೇಕಿದೆ ದುಡಿದು ಗೇಣು ಬಟ್ಟೆಗೆ....

ಭುವಿಯ ಹಾಸಿಗೆಯಲಿ ನಿದ್ರೆ
ನೇಸರನ ಬಿಸಿಲೊಡಲೇ ಛತ್ರ
ಹರಿದು ಹೋದರವರ ಪಾದರರಕ್ಷೆ 
ನಮ್ಮ ಬದುಕಿಗೆ ಶ್ರೀರಕ್ಷೆ...

ಬಡತನದ ಭಿಕ್ಷೆ
ಆ ದೈವ ಕೊಟ್ಟ ಶಿಕ್ಷೆ
ಅದನ ಮೆಟ್ಟಿ ನಿಂತರೇ
ಅದುವೆ ನಮ್ಮಗಳ ಸುಭೀಕ್ಷೆ...


@ಚಿತ್ರ ದಿಗ್ವಾಸ್