ಜಿ. ಎಸ್. ಎಸ್ ರವರಿಗೆ ಚಿಕ್ಕಂದಿನಲ್ಲಿ ಸಾಹಿತ್ಯ ಒಲವು ಹುಟ್ಟಿಸಿದ್ದು ಶಿವರಾಮ ಕಾರಂತರ "ಬಾಲಪ್ರಪಂಚ", ತಂದೆಯವರೊಂದಿಗೆ ಊರೂರು ಸುತ್ತುತ್ತಲಿದ್ದರಿಂದ ಅಲ್ಲಿನ ಪರಿಸರ. ಚಿಕ್ಕಂದಿನಲ್ಲಿ ಕಥೆಗಳನ್ನು ಓದುತ್ತಿದ್ದ ಇವರಿಗೆ ಕಥೆ ಬರೆಯುವ ಹುಚ್ಚಾಗಿ ಪುಟಗಟ್ಟಲೆ ಬರೆದು ಅದನ್ನು ಹರಿದು ಹಾಕಿದ್ದರಂತೆ. ತಾವು ದಾವಣಗೆರೆಯಲ್ಲಿ ಓದುತ್ತಿರುವಾಗ ಅವರ ಗಣಿತ ಟೀಚರ್ ಸಾಹಿತ್ಯದ ಹುಚ್ಚು ಹೆಚ್ಚಿಸಿದ್ದರು. ಕಾವ್ಯಾಸಕ್ತಿ ಹೆಚ್ಚು ಬೆಳೆಯಲು ಕುವೆಂಪುರವರೇ ಸ್ಪೂರ್ತಿ ಎಂದು ಹೇಳುತ್ತಾರೆ.
ಬಿಡುವಿನ ಸಮಯದಲ್ಲಿ ಗಣಿತ ಟೀಚರ್(ರೇವಣ್ಣ) ನೀಡುತ್ತಿದ್ದ ವಿಷಯದ ಮೇರೆಗೆ ಏನನ್ನಾದರು ಬರೆಯುವುದು, ಅದರ ಬಗ್ಗೆ ಚರ್ಚಿಸುವುದು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಜಿ. ಎಸ್. ಎಸ್ ಒಂದು ಕಥೆಯನ್ನು ಪದ್ಯವಾಗಿಸಿದ್ದರು
ಇರುವೆಯೊಂದು ತನ್ನ ಮರಿಗೆ
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು
- ಸಾಲುಗಳನ್ನು ಕೇಳಿದ ಮೇಷ್ಟ್ರು ಖುಷಿಯಿಂದ ಶಿವರುದ್ರಪ್ಪನವನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದರು. ಈ ಸಾಲುಗಳು ಬರೆದಾಗ ಅವರಿಗೆ ೧೪ ವರ್ಷಗಳು.
೧೯೪೩ರಲ್ಲಿ ತುಮಕೂರಿನ ಕಾಲೇಜಿನಲ್ಲಿರುವಾಗ ಜಿ.ಪಿ ರಾಜರತ್ನಂ ಅವರು ಅಧ್ಯಾಪಕರು. ಒಮ್ಮೆ ರಾಜರತ್ನಂ ಅವರಿಗೆ ತಾವು ಬರೆದ ಕವಿತೆಗಳನ್ನು ಹಂಚಿಕೊಳ್ಳುತ್ತಾರೆ. ಅದೇ ಒಂದು ಸದಾವಕಾಶ ಎನ್ನಬಹುದು. ಅಲ್ಲಿಂದ ರಾಜರತ್ನಂ ಅವರು ಜಿ.ಎಸ್ .ಎಸ್ ಅವರಿಗೆ ಪದ್ಯ ಬರೆಯುವುದು, ಮತ್ತಷ್ಟು ಚೆನ್ನಾಗಿ ಬರೆಯುವುದು ಹೇಗೆ ಎಂದು ತಿದ್ದಿ ತೀಡುತ್ತಾರೆ. ಅಲ್ಲದೇ ಅವರ ಕವಿತೆಗಳನ್ನು ಓದಿದ ರಾಜರತ್ನಂ ಅವರು ಕೆಲವು ಕವಿತೆಗಳನ್ನು ಆರಿಸಿ ಮಾಸ್ತಿ ಅವರ ಸಂಪಾದಕತ್ವದ "ಜೀವನ" ಎಂಬ ಪತ್ರಿಕೆಗೆ ಕಳುಹಿಸುತ್ತಾರೆ. ಅದೇ ಮೊದಲು ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ನಂತರದ ದಿನಗಳಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.
ತಮ್ಮ ಬಿ.ಎ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಕಾಲಿಟ್ಟ ನಂತರದ ದಿನಗಳು ಮಾತ್ರ ಅವಿಸ್ಮರಣೀಯ. ಜಿ.ಎಸ್.ಎಸ್ ಅವರ ಪದ್ಯಗೀಳನ್ನು ಮತ್ತಷ್ಟು ಹೆಚ್ಚಿಸಿದವರು ಅವರೇ ಹೇಳುವಂತೆ "ಪ್ರೇರಕ-ಪೋಷಕ-ಗುರು" ತ.ಸು ಶಾಮರಾಯರು. ಇಲ್ಲಿ ಮತ್ತೊಂದು ವಿಷಯ ಹೇಳಲೇ ಬೇಕು. ಜಿ.ಎಸ್.ಎಸ್ ಅವರ "ಎದೆ ತುಂಬಿ ಹಾಡುದೆನು ಅಂದು ನಾನು" ಈ ಜನಪ್ರಿಯ ಕವಿತೆಯನ್ನು ಬರೆದಿದ್ದು ಇದೇ ಶಾಮರಾಯರಿಗೆ. ಕಾರಣ ಶಾಮರಾಯರು ಸದಾ ಜಿ.ಎಸ್. ಎಸ್ ಎಂತಹುದೇ ಕವನಗಳನ್ನು ಬರೆಯಲಿ ಸ್ವಲ್ಪವೂ ಬೇಸರಿಸದೇ ಕೇಳುತ್ತಲಿದ್ದರಂತೆ. ಈ ಕೇಳುವಿಕೆಯೇ ಎದೆ ತುಂಬಿ...... ಹಾಡಿಗೆ ಸ್ಪೂರ್ತಿ.
ಶಾಮರಾಯರ ಕಣ್ಣಿಗೆ ಬಿದ್ದ ಕವನಗಳು ಕುವೆಂಪುರವರ ಗಮನ ಸೆಳೆದದ್ದು ಒಂದು ವಿಶೇಷ. ಒಮ್ಮೆ ಮಹಾರಾಜ ಕಾಲೇಜಿನ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕವಿತಾ ಸ್ಪರ್ಧೆಯಲ್ಲಿ ಬಹುಮಾನ ಜಿ ಎಸ್ ಎಸ್ ಅವರಿಗೆ ಬಹುಮಾನ ಬಂದಿರುತ್ತದೆ. ಜಿ ಎಸ್ ಎಸ್ ಅವರನ್ನು ಕಣ್ ಸನ್ನೇಯಲ್ಲೇ ಹತ್ತಿರ ಕರೆದು "ಏನೇನು ಬರೆದಿದ್ದೀಯಾ ಅದನ್ನೆಲ್ಲಾ ತಾ" ಎಂದು ಕುವೆಂಪುರವರು ಹೇಳುತ್ತಲಿದ್ದಂತೆ. ಗಾಬರಿ ಜೊತೆಗೆ ಸಂಕೋಚದಿಂದಲೇ ತಾವು ಬರೆದಿದ್ದ ಕವಿತೆಗಳನ್ನೆಲ್ಲವನ್ನು ತಂದುಕೊಡುತ್ತಾರೆ.
ಆ ಕವಿತೆಗಳ ಕಡತವನ್ನೆಲ್ಲಾ ಓದಿದ ಕುವೆಂಪುರವರ ಅನಿಸಿಕೆ ಹೀಗಿದೆ "ಇದೇನಿದು? ಬೆಳದಿಂಗಳ ವರ್ಣನೆ, ಒಳ್ಳೇ ಪ್ರಖರವಾದ ನಡುಹಗಲಿನ ಅನುಭವದ ಹಾಗೆ ಇದೆಯಲ್ಲ" ಮತ್ತಷ್ಟು ಕವನಗಳನ್ನು ನೋಡಿ "ಹೀಗೇ ಬರೆಯುತ್ತಲಿರಿ. ನಿಜವಾಯಿಯೂ ಚೆನ್ನಾಗಿವೆ" ಎಂದರಂತೆ. ಆಹಾ..!! ಎಂಥಾ ಅದೃಷ್ಟ ಪ್ರೀತಿಯ ಗುರು, ಪ್ರಸಿದ್ಧ ಕವಿ ಹೀಗೆ ಬೆನ್ನುತಟ್ಟಿದರೆ ಶಿಷ್ಯರಿಗೆ ಹುರುಪು ಹೆಚ್ಚುವುದಲ್ಲವೇ..? ಅಲ್ಲಿನ ನಂತರ ಕುವೆಂಪುರವರ ಮಾರ್ಗದರ್ಶನದ ಮೇರೆಗೆ ಇವರು ಬರೆದ ಕವಿತೆಗಳನ್ನು "ಪ್ರಬುದ್ಧ ಕರ್ಣಾಟಕ" ಪತ್ರಿಕೆಗಳಲ್ಲಿ ಸುಮಾರು ಕಾಲದವರೆಗೆ ಬಿತ್ತರಗೊಂಡವು.
ಈ ಮಧ್ಯೆ ಬಿ ಎ ಮುಗಿದ ನಂತರ ದಾವಣಗೆರೆ ಕಾಲೇಜಿಗೆ ಉಪನ್ಯಾಸಕರಾಗಿ ತೆರಳಿದ್ದ ಸಮಯ. "ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ" ಹೆಸರಿನಲ್ಲಿ ತ ಸ ಶಾಮರಾಯರು ಪ್ರಕಾಶನ ಪ್ರಾರಂಭಿಸಿದ್ದರು. ಇದೇ ಪ್ರಕಾಶನದಲ್ಲಿ ಜಿ ಎಸ್ ಎಸ್ ಅವರ "ಸಾಮಗಾನ" ಕವನ ಸಂಕಲವನ್ನು ಪ್ರಕಟಿಸಿದ್ದರು. ಇದೇ ಕವನಸಂಕಲನಕ್ಕೆ ಶ್ರೀ ಕುವೆಂಪುರವರು ಮುನ್ನುಡಿಯನ್ನು ಸಹ ಬರೆದಿದ್ದರು.
ಸಾಮಗಾನ ಕವನಸಂಕಲ ಪ್ರಕಟವಾದಾಗ ಮತ್ತು ಅದೇ ಸಮಯದಲ್ಲಿ ಇವರ ಸ್ನೇಹಿತರಾದ ಬಿಳಿಗಿರಿ ಅವರ ಕವನಸಂಕಲನವೂ ಬಿಡುಗಡೆಯಾಗಿತ್ತು. ಇವರೀರ್ವರ ಕವನ ಸಂಕಲನಗಳ ಬಗ್ಗೆ ಒಂದು ಪತ್ರಿಕೆಯಲ್ಲಿ ವಿಮರ್ಶೆ ವಿಮರ್ಶೆಯಾಗದೆ, ಒಬ್ಬ ಕವಿಯ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವಂತೆ ಬರೆದಿದ್ದರು. ಇದನ್ನು ಕಂಡ ಸ್ನೇಹಿತರಾದ ಬಿಳಿಗಿರಿ ಅವರು ಹೀಗೆ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾರೆ "ವಿಮರ್ಶೆಯ ನೆಪದಲ್ಲಿ ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಳುತ್ತ ನಿಮ್ಮ ಬೇಳೆ ಬೇಯಿಸಿಕೊಳ್ಳ ಬೇಡಿ ಎಂದು ಖಾರವಾಗಿ ಬರೆದಿದ್ದರಂತೆ" ಇಂತಹ ಸ್ನೇಹಿತರು ಈಗ ಸಿಗುತ್ತಾರೆಯೇ ಎಂದು ಜಿ.ಎಸ್.ಎಸ್ ಸ್ನೇಹಿತರನ್ನು ನೆನಪುಮಾಡಿಕೊಂಡಿದ್ದಾರೆ.
ಇವರ ಕವಿತೆಗಳನ್ನು ಪತ್ರಿಕೆಯಲ್ಲಿ ಓದಿದ ಪ್ರೋ.ತೀ.ನಂ.ಶ್ರೀ, ಪು.ತಿ.ನ ಎಲ್ಲರೂ ಬೆನ್ನುತಟ್ಟಿದ್ದಾರೆ. ೧೯೫೩ರಲ್ಲಿ ಎರಡನೇ "ಚೆಲುವು-ಒಲವು" ಕವನ ಸಂಗ್ರಹಕ್ಕೆ ಪು.ತಿ.ನ ಅವರು ಮುನ್ನುಡಿಯನ್ನು ಬರೆದು ಹಾರೈಸಿದ್ದರು. ನಂತರ ೧೯೫೭ರಲ್ಲಿ "ದೀಪದಹೆಜ್ಜೆ" ಕವನ ಸಂಗ್ರಹ ಪ್ರಕಟವಾಯಿತು. ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿ ಹೆಚ್ಚಿದ್ದ ಇವರಿಗೆ "ವಿಮರ್ಶೆಯ ಪೂರ್ವ-ಪಶ್ವಿಮ" ಎಂಬ ಕೃತಿ ರಚನೆ ಸಾಧ್ಯವಾಯಿತು.
ದಾವಣಗೆರೆಯಲ್ಲಿ ಒಮ್ಮೆ ದಿಬ್ಬದ ಮೇಲೆ ಕುಳಿತಿರುವಾಗ ಅಲ್ಲಿನ ಪರಿಸರ ಕಂಡು "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಎಂಬ ಸಾಲು ಹುಟ್ಟಿಕೊಂಡವು, ಒಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಒಬ್ಬ ಹೆಣ್ಣು ಮಗಳ ಜಡೆ ಇವರಿಗೆ ಆಕರ್ಷಿಸಿದೆ. ಆ ಜಡೆಯ ಆಕರ್ಷಣೆ "ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವಜಡೆ" ಸಾಲನ್ನು ರಚಿಸುವಂತೆ ಮಾಡಿತು. ಹಾಗೆ ಒಂದು ರಾತ್ರಿ ಕನಸಿನಲ್ಲಿ "ಚಂದ್ರ ಜೇಡ ಬಲೆ ನೇಯುತ್ತಿತ್ತು ಬೆಳದಿಂಗಳ ನೂಲಿನಲಿ" ಎಂಬ ಸಾಲು ಹೊಳೆದಿತ್ತು ಅದೆ ಸಾಲಿನ ಜಾಡು ಹಿಡಿದು ಹೊರಟವರು ಪೂರ್ಣಕವನವನ್ನು ಬರೆಯಲು ಸುಮಾರು ವರ್ಷಗಳೇ ತೆಗೆದುಕೊಂಡಿದೆ.
ಶಿವರುದ್ರಪ್ಪನವರನ್ನು ಯಾವ ಪಂಥಕ್ಕೆ ಸೇರಿಸಬೇಕೆಂದು ತಿಳಯದೆ ಗೊಂದಲಕ್ಕೀಡ ಕೆಲವರು "ಸಮನ್ವಯ ಕವಿ" ಎಂದು ಕರೆದರು ಆದರೆ ನಾನು ಅದಲ್ಲ. ಯಾಕೆಂದರೆ ಯಾವುದೇ ಹಣೆ ಚೀಟಿಗಳಿಂದ ನಿರ್ದೇಶಿತವಾಗುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳುತ್ತರೆ.
ಕವಿತೆಗಳು ಸಮಯವಲ್ಲದ ಸಮಯಗಳಲ್ಲಿ ಮೈಪಡೆದು ಕೂತುಬಿಡುತ್ತಾ ಹೊಸ ಹೊಸ ರೂಪಕೊಡುವಂತ ಕಾವ್ಯವನ್ನು ನೀಡುತ್ತಲಿದ್ದ ಶಿವರುದ್ರಪ್ಪನವರು "ಕವಿತೆ ಕಾಲಬದ್ಧವಾದ ಕ್ರಿಯೆಯಲ್ಲ, ಕಾಲಾತೀತದಲ್ಲಿ ಸಂಭವಿಸುವ ಒಂದು ವಿಸ್ಮಯ" ಎಂದು ಹೇಳುತ್ತಾರೆ.
ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ/ಶಿಲ್ಪ, ದೀಪದ ಹೆಜ್ಜೆ, ಅನಾವರಣ, ತೆರೆದ ಬಾಗಿಲು/ತೆರೆದ ದಾರಿ, ಗೋಡೆ, ವ್ಯಕ್ತಮಧ್ಯ ಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗತಿ - ಜಿ ಎಸ್ ಶಿವರುದ್ರಪ್ಪನವರು ತಮ್ಮದೇ ಶೈಲಿಯಲ್ಲಿ ಹೀಗೆ ಹಲವಾರು ಕವನ ಸಂಕಲಗಳನ್ನು ಬಿಡುಗಡೆ ಮಾಡಿದ್ದಾರೆ.
ಘಟನೆಗಳ ಸುತ್ತಾ... ಮುಂದಿನ ಭಾಗ