Thursday, May 28, 2009

ಪಯಣ

ಮುಸುಕು ಕವಿದ ಬಾಳಿಗೆ
ನೀನಿಲ್ಲದೆ ಪ್ರಯಾಣ ಬೇಸರಿಕೆ
ವಿಷಾದ ಮೂಡಿಸಿದೆ ಮನಸಿಗೆ
ನಿನ್ನನೊ ಕರೆದೊಯ್ಯುವ ಅನಿಸಿಕೆ
ಬರುವೆಯಾ ನಲ್ಲ ನನ್ನೊಂದಿಗೆ..!!?


ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು


ಮಳೆಗಾಲದ ಜಡಿ ಹಿಡಿದಂತಿದೆ ಕಣ್ಣಿಗೆ
ಬಳಲಿಕೆಯಲಿ ತೊಡಲಾಡುವಳೀ ಮಲ್ಲಿಗೆ
ಪ್ರಿಯಾ!! ಒಮ್ಮೆ ಹೇಳಿಬಿಡು ಮೆಲ್ಲಗೆ
ಬರುವೆ ಚಿನ್ನ ನಿನ್ನೊಂದಿಗೆ!!!


ಬರುವುದಾದರೆ ನಲ್ಲ ಊರಿಗೆ
ನಡೆ ಪಯಣಿಸೋಣ ಜೊತೆ ಜೊತೆಗೆ
ಹೊವಿನ ಹಾದಿ ಸೊರ್ಯ ಚುಂಬನದೆಡೆಗೆ
ನಮ್ಮ ದಾರಿ ನಮ್ಮೂರ ಕರುನಾಡಿಗೆ!!!

Saturday, May 23, 2009

ಮೌನ-ಕಣ್ಣೀರು

ದುಃಖ ಉಮ್ಮಳಿಸಿ ಕಣ್ಣೀರು ಬರಿಸಿದೆ.
ನೋವ ಕರಗಿಸುವುದೇ ಈ ಕಣ್ಣೀರು...?
ಬೇಸರ ಬರ ಸೆಳೆದು ಮಾತಿಗೆ ಕಡಿವಾಣವಾಗಿದೆ.
ಮೌನ ಮರೆಸುವುದೆ ಈ ಬೇಸರ....?

ಹೃದಯದ ಭಾರ ಇಳಿಸುವುದೇ ಈ ಕಣ್ಣೀರು
ಮನದ ಬೇಸರ ನಿಲ್ಲಿಸುವುದೇ ಈ ಮೌನ
ಕಣ್ಣು ಕಣ್ಣು ಕಲೆತು ಕಣ್ಣೀರಿಗೆ ಶರಣು
ಮಾತು ಮಾತಿಗೆ ಬೆರೆತು ಮೌನಕ್ಕೆ ಮರುಳು

ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ
ವಿಶಾಲ ಮನಕೆ ನಗುವ ಸುಂದರ ಮೊಗಕೆ
ಮೌನದಿ ಮಾತು ಮರೆಮಾಚಿಸುವೇಕೆ

ದುಃಖ ದುಮ್ಮಾನ ಎಲ್ಲರ ಜೀವನದ ಕರಿನೆರಳು
ಅದ ನಿಭಾಯಿಸಲು ಕಲಿಯಬೇಕಿದೆ ಜೀವನದ ತಿರುಳು
ನಿನ್ನ ಕಣ್ಣ ರೆಪ್ಪೆಗೆ ಕರಿನೆರಳು ತಾಕದಿರಲಿ
ಮೌನ ಮನಕೆ ಜೀವನದ ತಿರುಳು ಅರಿತಿರಲಿ

ಮನದ ತುಡಿತಕೆ ಕಣ್ಣಿಗೇಕೆ ಕಣ್ಣೀರ ಸೆಳೆತ
ಮನದ ಮಿಡಿತಕೆ ಮಾತಿಗೇಕೆ ಮೌನದ ತುಳಿತ
ಕಣ್ಣ ನೋಟಕೆ ಕಾಣುವುದೆಲ್ಲವೊ ಹಸಿರ ನಿಸರ್ಗ
ಮೌನ ದೂಡಿ ಮುತ್ತಂತ ಮಾತಾನಾಡಿದೊಡೆ ಅಲ್ಲೇ ಸ್ವರ್ಗ....

Tuesday, May 19, 2009

ಓ ಮನಸೇ!!!

ಹೀಗೇಕೆ ಅಳುವೇ ಮನಸೇ ತಿಳಿದಿದೆಯೆ ನಿನಗೆ
ತುಸು ಕಷ್ಟ ಸಹಿಸದೆ ನಲುಕಿ ಕೋರಗುವೆಯಲ್ಲೆ
ಜಗದ ನಿಯಮಕೆ ಯಾರು ವಿರುದ್ದ ನಿಲರು
ನೀ ಎಲ್ಲ ಸಾಂತ್ವಾನಿಸಿ ಎದೆಗುಂದದೆ ನಿಲ್ಲು!!ಓ ಮನಸೇ!!

ಬೀಸುವ ಗಾಳಿಯ ತಡೆದವರುಂಟೇನು
ಬಿಸಿಲ ಬೇಗೆಯ ನಿಲ್ಲಿಸಲಾಗುವುದೇನು?
ಓಡುವ ಕಾಲಕೆ..ಬರುವ ಕಷ್ಟಕೆ ತಡೆಯೇನು
ಎಲ್ಲವನು ನೀ ಅರಿತು ಧೈರ್ಯದಿ ನಡೆ ಮುಂದೆ!! ಓ ಮನಸೇ!!

ಎಂದೊ ಬರುವ ಕಷ್ಟಕೆ ಇಂದೇಕೆ ಅಳುವೇ
ಇಂದಿನ ಸುಸವಿಯ ಸವಿದು ಕಾಲ ಕಳೆ
ಕಷ್ಟದಿನಕೆ ದಾರಿ ತೋರಲು ಪರಿಸ್ಥಿತಿಯಿದೆ
ಕಾಲವೇ ಎಲ್ಲದಕು ಉತ್ತರ ನಿಶ್ಚಿಂತೆಯಿಂದಿರು!!ಓ ಮನಸೇ!!

ಮನದ ತುಡಿತಕೆ ಸಂತೋಷವ ಮುಚ್ಚಿಡದಿರು
ಅಳುವ ಮನಕೆ ಬಿಸುಅಪ್ಪುಗೆಯ ನೀಡುತಿರು
ನಿನಗೆ ನೀನೆ ಸಾಟಿ ಅಳು ಮೊಗದಿ ನೀನಿರದಿರು
ಎಲ್ಲವನು ನಿಗ್ರಹಿಸುವ ಗಣಿ ನೀನಾಗಿರು !!ಓ ಮನಸೇ!!

ಮಿನುಗುವ ಆ ಕಣ್ಣಿಗೇಕೆ ನೋವುಣಿಸುವೆ
ಸುಂದರ ಮೂಗಕೆ ಕಣ್ಣೀರಧಾರೆ ಕಪ್ಪುಕಲೆ
ಒಮ್ಮೆಲೆ ತೊಯ್ ಎಂದು ಸುರಿಸಿಬಿಡು ಮಳೆ
ತಿರುಗಿ ಬಾರದಿರಲಿ ಆ ಕಣ್ಣೀರ ಮಳೆ !! ಓ ಮನಸೇ!!

ಪ್ರೇಮಕೆ ಸಿಲುಕಿ ಒಳ ಮನವ ಪ್ರೇಮಿಸು
ಮೋಹದಿ ಮನವ ಚೇಡಿಸಿ ಕಾಮಿಸು
ಮನಕೆ ಪ್ರೇಮಿಯಾಗಿ ಸಂತಸದಿ ನಲಿಸು
ಮೂಗದಿ ನಲಿವ ನಗುವನ್ನು ತರಿಸು !! ಓ ಮನಸೇ!!

Sunday, May 17, 2009

ಮಸುಕಿನಲ್ಲಿದ್ದ ಮುಖ ತೆರೆದ ಮುಖಪುಟ.

ನಾವೆಲ್ಲ ಜೀವನದಲ್ಲಿ ಕೊನೆವರೆಗೊ ಹೀಗೆ ಇರುತ್ತೇವೆ, ಸುಖ ಸಂತೋಷ, ಆಸ್ತಿ ಪಾಸ್ತಿ, ಆರೋಗ್ಯ ಎಲ್ಲವೊ ನಮ್ಮೊಂದಿಗೆ ಈಗ ಇಂದು ಹೇಗಿದೆಯೋ ಕೊನೆವರೆಗು ಇರುತ್ತೆಂದು ಭಾವಿಸುತ್ತೇವೆ ಆದರೆ ಅದು ಅಕ್ಷರ ಸಹ ಸುಳ್ಳು. ಇಂದು ಇದ್ದ ಜೀವ ನಾಳೆಗಿರದು ಇರುವ ಎರಡು ದಿನಕೆ ಎನೆಲ್ಲಾ ಮಾಡುತ್ತೇವೆ ಅಲ್ಲವೆ... ಏಕೀ ಪುರಾಣವೆಂದು ಭಾವಿಸುತ್ತೀರ ಈ ಭಾವನೆ ನನ್ನ ಮನದಾಳದಲ್ಲಿ ಹುಟ್ಟಿದವು ಬರವಣಿಗೆಗೆ ಮೀಸಲಿದ್ದವಹುದಲ್ಲ.

ಇತ್ತೀಚೆಗಷ್ಟೆ ಕುವೈಟ್ ಕನ್ನಡ ಕೂಟದಲ್ಲಿ ಒಂದು ದಿನದ ಕಾರ್ಯಕ್ರಮ ಏರ್ಪಡಿಸಿದ್ದರು ಅಂದು ಸುಮಾರು ೨ ಗಂಟೆಗಳ ಕಾಲ ಒಂದು ಚಿತ್ರವನ್ನು ನೋಡುವ ಭಾಗ್ಯ ನನ್ನದಾಯಿತು. ಮೂದಲ ಹಂತಕ್ಕೆ ಏನಿದು ಚಿತ್ರ ಎಳೆಯುತ್ತಿದ್ದಾರಲ್ಲ ಎಂಬ ಭಾವನೆ ಮೊಡಿದ್ದಂತು ನಿಜ. ಒಂದು ಸಣ್ಣ ಹಳ್ಳಿ ಅಲ್ಲಿ ಒಬ್ಬರು ಶಿಕ್ಷಕರು ಅವರಿಗೆ ಪ್ರೀತಿ ಪಾತ್ರರಳಾದ ಶಿಷ್ಯೆ, ಗುರುವಿಗೆ ತಕ್ಕ ಶಿಷ್ಯೆ ಎಂದೇಳಿದರೆ ತಪ್ಪಾಗಲಾರದು. ಗುರು ಶಿಷ್ಯೆಯ ಜೀವನ ಜೊತೆ ಜೊತೆ ಸಾಗುತ್ತದೆ. ಶಿಷ್ಯೆಯ ಪ್ರತಿ ಹೆಜ್ಜೆಗು ಮಾರ್ಗದರ್ಶಿ ಗುರು, ಈ ಶಿಷ್ಯೆ ಗುರುವಿಗೆ ಪ್ರೇರಣಾತೀತೆ ಇವಳು ನಾಟ್ಯ ಪ್ರವೀಣೆ, ವಿದ್ಯಾ ಸಂಪನ್ನೇ, ವಿದ್ಯೆ ಕಲಿತರೆ ಅದರಿಂದ ತೊಂದರೆ ಇಲ್ಲ ಅದು ನಮ್ಮ ಜೀವನದ ಏಳ್ಗೆಗೆ ಮೆಟ್ಟಿಲು ಎಂಬ ನಿಲುವು ಗುರು ಶಿಷ್ಯೆದು(ಗೌರಿ).......... ಇವರಿಬ್ಬರ ಜೀವನದಲ್ಲಿ ಒಂದು ಅನಾಥ ಮಗುವಿಗೆ ಆಸರೆ ನೀಡೋ ಸ್ಥಿತಿ, ಜೊತೆಗೆ ಸ್ಲಮ್ ಮಗುವಿಗೆ ವಿದ್ಯೆಯ ಅರಿವು ಮೊಡಿಸಿದವರು.

ಇಷ್ಟೆಲ್ಲ ಸುಖ ಜೀವನದಲ್ಲಿ ಒಂದು ಆಘಾತಕಾರಿ ಎಂದರೆ ಗುರುವಿನ ಮರಣ ಇವಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ...ಇಂತಹ ಸಮಯದಲ್ಲಿ ಪರ ಊರಿನಲ್ಲಿದ್ದ ಗುರುವಿನ ಸಂಸಾರದೊಂದಿಗೆ ಜೀವನ ಸಾಗಲು ತೆರಳುತ್ತಾಳೆ ಅಲ್ಲೂ ಸಹ ಯಾವ ಕೊರತೆಯಿಲ್ಲದೆ..........ಗೌರಿ ಜೊತೆಗೆ ಆ ಪುಟ್ಟ ಮಗುವಿಗೆ ಆನಂದಪೂರ್ವಕ ಸ್ವಾಗತ... ಒಮ್ಮೆ ಇದ್ದಕ್ಕಿದ್ದ ಹಾಗೆ ಆ ಪುಟ್ಟ ಪೋರಿ ಜ್ವರವೆಂದು ಮಲಗಿದಾಗ ಇದು ಸಾಮಾನ್ಯ ಜ್ವರವೆಂದು ಭಾವಿಸಿ ಮನೆಯಲ್ಲೇ ಇದ್ದ ಮಾತ್ರೆಯನ್ನು ನೀಡಿ ಸಾಂತ್ವಾನಿಸಿದ್ದಳು ಗೌರಿ, ಆದರೆ ಅದು ಯಾವುದೇ ಗುಣಕಾಣದಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿ ಬಂದೊದಗಿತು ಅಲ್ಲಿ ಒಂದು ವಿಚಿತ್ರ ರೋಗದ ಸುಳಿವಿರುವುದು ತಿಳಿದು ಬೇರೆ ಆಸ್ಪತ್ರೆಗೆ ತೆರಳಬೇಕೆಂದು ಸೊಚಿಸಿದರು ಅಲ್ಲಿಂದ ಆ ಮಗುವನ್ನು ಗುರುವಿನ ಮಗ ಹಾಗು ಗೌರಿಯು ಬೆಂಗಳೂರಿಗೆ ಕರೆತಂದಾಗ ಅಲ್ಲಿ ಎಲ್ಲಾ ತಪಾಸಣೆಯ ನಂತರ ತಿಳಿದಿದ್ದು ಅಲ್ಲೊಂದು ಆಘಾತಕಾರಿ ಸಂಗತಿ!!!! ಎಂತವರೊ ದಿಗ್ಭ್ರಮೆಗೊಳ್ಳುವ ಮಾಹಿತಿ ವೈದ್ಯರು ಬಿಚ್ಚಿಟ್ಟಾಗ ಹೃದಯಾಘಾತವಾಗದಿರುವುದು ಹೆಚ್ಚು!!!!!!!!! ಗೌರಿಯ ಮಮತೆಯ ಕೊಸು ಕನರಿಹೋಗುವುದೆಂಬ ಭಯ ಬೆಂಬಿಡದೆ ಅವಳ ಮನದಲ್ಲೇ ಕೊತುಬಿಟ್ಟಿತ್ತು ಆದರೊ ಸ್ಥಾವರಿಸಿ ದಿಟ್ಟ ಹೆಜ್ಜೆ ಇಟ್ಟು ಹೊರ ಬಂದು ಆ ಮಗುವಿಗೆ ಆಸರೆಯಾಗಿ ಕೊನೆವರೆಗಿರುವ ನಿರ್ಧಾರಕ್ಕೆ ಬಂದಳು. ಇವಳಿಗೆ ಜೊತೆಯಾದವನು ಗುರುವಿನ ಮಗ.

ಎಲ್ಲವನ್ನು ಎದುರಿಸುವೆ ಎಂದು ಏಡ್ಸ್ ಎಂಬ ಮಹಾಮಾಯಿಯನ್ನು ಹೊತ್ತು ತಂದ್ದ ಮಗುವಿಗೆ ಇದು ಹೇಗೆ ಅಂಟಿತೆಂದು ತಿಳಿಯುವಲ್ಲಿ ಸಫಲಾದಳು ಆ ಮಗು ಇವಳ ಕೈಸೇರುವ ಮುನ್ನ ಆ ಮಗುವಿನ ಅಪ್ಪ ಅಮ್ಮ ಆತ್ಮಹತ್ಯೆಗೆ ಶರಣಾಗಿದ್ದರು........ನೃತ್ಯಶಾಲೆಗೆ ಬರುತ್ತಿದ್ದ ಈ ಮಗು ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅಪ್ಪ ಅಮ್ಮ ಇಲ್ಲದಾಗ ಆಪ್ತಳಾದವಳು ಗೌರಿ ಆ ಮಗುವಿಗೆ ತಾಯಿಯಾಗಿ ನೆಲೆಯಾದವಳು ಈಕೆ.

ಆ ಮಗುವಿಗೆ ಮಹಾಮಾರಿ ತಗುಲುವುದೇನೋ ತಗುಲಿತು ದೇವರ ಜೊತೆ ತಂದೆತಾಯಿಯು ದೂರ ಸರಿದರು ಇಂತಹ ಸ್ಥಿತಿಯಲ್ಲಿ ಆ ಮಗು ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನಿಂದನೆಗಳನ್ನು ಇಂಚಿಂಚು ಅನುಭವಿಸುವಂತಾಯಿತು ಇದನ್ನೆಲ್ಲಾ ಕಂಡ ಗೌರಿ ನೂರಾರು ಜನಸ್ತೊಮ ನೆರೆದಲ್ಲೇ ತನ್ನ ಅಳಲನ್ನು ತೋಡಿಕೊಂಡಳು... ಏನು ಅರಿಯದ ಮಗು ಆ ಮಗುವೇಕೆ ಈ ಶಿಕ್ಷೆ ಅದಕ್ಕೆ ಅದರ ಖಾಯಿಲೆಯ ಅರಿವಿದೆ ನೀವೆಲ್ಲ ಜೊತೆಗೊಡಿ ಆ ಮಗು ಇರುವಷ್ಟು ದಿನ ಸಂತಸದಿ ಬಾಳಲು ಬಿಡಿ ಎಂದು ಭಾರದ ಹೃದಯದಲ್ಲಿ ದುಃಖದ ಮಡುವಿನಲ್ಲಿ ಬೇಡಿದಳು ಅವಳ ಮಾತು ನೆರೆದಿದ್ದವರನೆಲ್ಲಾ ಮಮ್ಮಲ ಮರುಗುವಂತೆ ಮಾಡಿತು........
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.

ರೂಪ ಐಯ್ಯರ್ ಅವರ ಚಿತ್ರ ನೋಡಿದ ಮೇಲೆ ಹಾಗು ಮುಖಮುಖಿ ಅವರ ಮನದಾಳದ ಮಾತು ಕೇಳಿದ ಮೇಲೆ ನಾವು ನಮ್ಮತನವನ್ನು ನಶಿಸದಂತೆ ನಾವು ನಮ್ಮಲಾಗೋ ಸಹಾಯ ಹಸ್ತ ಚಾಚಬೇಕೆಂಬ ನಿಲುವಿಗೆ ಬಂದೆನು.
ಈ ಚಿತ್ರ ಎಲ್ಲರೊ ನೋಡ ಬೇಕಾದ್ದೆ ಹಾಗೆ ಹೊಸ ಜೀವನದ ಹೊಸ್ತಿಲಲ್ಲಿ ನವ್ಯಪ್ರಜ್ಞೆ ಮೂಡಿಸಬೇಕಾದ್ದದೇ ಹೊರತು ಮೂಢರಂತೆ ವರ್ತಿಸಬೇಕಾದದ್ದು ಅಲ್ಲವೇ ಅಲ್ಲ.

ಧನ್ಯವಾದಗಳು

Sunday, May 10, 2009

ಅಮ್ಮನೇ ದೈವ!!!!

ನಿನ್ನುಸಿರ ತವಕ
ಬಲು ದೂರವಿದೆ.....
ನಿನ್ನ್ ಬಿಸಿ ಉಸಿರು
ತಾಕಲು ಸಮುದ್ರ ಅಡ್ಡವಿದೆ....
ನಿನ್ನ್ ಪ್ರೀತಿ ಪುಳಕ
ನನಗರಿವಿದೆ......
ನಿನ್ನ್ ಪ್ರೀತಿ ಹಾರೈಕೆ
ಹೃದಯಸ್ಪರ್ಶಿಸಿದೆ......
ಅಮ್ಮ ನಾನಿನ್ನ
ಪ್ರೇಮಸುಧೆ .....
ನೀ ಎನ್ನ ದೈವ
ಎಂದು ಮನ ಪೂಜಿಸುತಿದೆ.....
ನಿನ್ನ್ ಪೂಜೆಗೆ ಹೂ,ಗಂಧ
ಕಡ್ಡಿ,ಕರ್ಪೂರ ತರುವಾಸೆ ಎನಗಿಲ್ಲ....
ಹೂವಾಗಿ ಎನ್ನ
ಹೃದಯ ಕಮಲವಿದೆ.....
ಗಂಧವಾಗಿ ಎನ್ನ
ಮುದ ಪ್ರೇಮವಿದೆ....
ಕಡ್ಡಿ,ಕರ್ಪೂರವಾಗಿ ಎನ್ನ
ಕರವು ಕಾದಿದೆ.....
ಎನ್ನ ದೇಹದ ದೇಗುಲಕೆ
ನೀನೇ ದೈವ.....
ಅಂದು ನಿನ್ನ ಮಡಿಲು
ಕೊಟ್ಟ ಜೀವ.....
ಎನ್ನಮ್ಮ ನೀ
ಕರುಣಾಮಯಿ.....
ನಿನ್ನ್ ಒಡಲ
ಹರಸು ತಾಯಿ.....
ನನ್ನ್ ಪ್ರಾಣ ಪಕ್ಷಿ
ಹಾರುವ ಮುನ್ನ....
ನಿನ್ನ ಪಾದಕೆ
ಎರಗುವೆನಮ್ಮ.....
ಕೊನೆಯ ನನ್ನುಸಿರು
ಬಂದು ಸೇರುವುದು ನಿನ್ನೊಂದಿಗೆ....
ಅಲ್ಲಿವರೆಗು ಸಲ್ಲಿಸುವೆ
ಪ್ರೇಮಗುಚ್ಚ ನಿನ್ನ ಪಾದಕೆ.....
ನಿನ್ ಪ್ರೀತಿ ಎನಗೆ ಆಸರೆ
ನಾನು ನಿನ್ನ ಕೈ ಸೆರೆ....
**************
ಅಮ್ಮನಿರೊ ಊರಿಂದ ದೂರವಿದ್ದು ಅಮ್ಮನ ಹಾರೈಕೆ, ಅಮ್ಮನೊಂದಿಗೆ ಬೆರೆಯಲು ಕಾಲ,ಸಮಯ,ಜೀವನ ಎಲ್ಲವೊ ಅಡ್ಡವಿದೆ ನನ್ನಮ್ಮನ ಪ್ರೀತಿಗೆ ಸಣ್ಣದೊಂದು ಕವನ ಶೈಲಿ ಅಷ್ಟೆ...ಅಮ್ಮನ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ ಆದರು ನನ್ನ ಮನದಾಳದ ಮಾತು ನಿಮ್ಮೊಂದಿಗೆ.
ಇಲ್ಲಸಲ್ಲದ ದೇವರ ಹುಡುಕುವದ ಬಿಟ್ಟು...... ಇಷ್ಟು ದೊಡ್ಡ ದೇಹಕೊಟ್ಟ ನನ್ನಮ್ಮನೇ ದೈವ, ನನಗೆ ಅಮ್ಮನೇ ಸರ್ವಸ್ವ, ನಾ ನನ್ನ ಮಗುವಿಗೆ ಅಮ್ಮನಾದರೊ ನನಗೆ ನನ್ನ ಅಮ್ಮನೇ ಎಲ್ಲ...ಇಷ್ಟು ಒಳ್ಳೆ ಜೀವನ ನೆಡೆಸಲು, ನನ್ನ ಬೇಕು ಬೇಡಗಳನ್ನು ನೀಗಿಸಿದ ನನ್ನಮ್ಮನೇ ದೈವ. ಅಂತ ಅಮ್ಮನಿಗೆ ಹೃದಾಯಂತಾರಾಳದಲಿ ಸಲ್ಲಿಸುವೆ ಪೂಜ್ಯಭಾವ...ಅಮ್ಮ ನೊರುಕಾಲ ಬಾಳಲಿ ಅವಳ ಪ್ರೀತಿ ನನ್ನೊಂದಿಗೆ ಸದಾ ಇರಲೆಂದು ಬಯಸುತ್ತೆನೆ.
ವಂದನೆಗಳು
ಶುಭಮಸ್ತು.

Tuesday, May 5, 2009

ಮತ್ತಷ್ಟು ಮನಕೆ ತೋಚಿದ್ದು.....

ನಿನ್ನ ಆಸರೆ ಬೆಚ್ಚಗಿತ್ತು..
ಅಂದು ನಾ ಬೆಚ್ಚನೆ ಉಡುಪು
ಮರೆತುಬಿಟ್ಟಿದ್ದೆನಲ್ಲ ಅದಕೆ ಬೆಚ್ಚಗಿತ್ತು...
**************************
ಕುಂತಲ್ಲಿ ಕೂರಂಗಿಲ್ಲ
ನಿಂತಲ್ಲಿ ನಿಲ್ಲಂಗಿಲ್ಲ...
ಅದೇನೋ ದೊಡ್ಡ ರೋಗವಿರಬೇಕಲ್ಲ
**************************
ನೀ ನಿಲ್ಲದೇ ನನಗೇನಿದೆ...
ನನಗಿಂತ ಮುಂಚೆ....
ಗಾಳಿ, ನೀರು ಎಲ್ಲ ಇದೆ...
ಅವಿಲ್ಲದೆ ನೀನಿಲ್ಲ...
*******************
ಕಣ್ಣ ರೆಪ್ಪೆಯಲಿ ಬಚ್ಚಿಡುವೆ...
ಬಚ್ಚಿಟ್ಟರೆ..
ಕಣ್ಣು ಕಾಣದಾಗುವುದೆ..?
*******************
ಪ್ರೇಮಭಿಕ್ಷೆ ಕೊಡೂ
ಎಂದವನ ಕೇಳಿದೆ...
ಎಷ್ಟು ಜನಕೆಂದು ಕೊಡಲಿ
ಅವರಿಗೆಲ್ಲ ಕೊಟ್ಟುಳಿದರೆ
ನೋಡೋಣ......
***************
ಬಾ ಹೋಟಲಿಗೆ ಹೋಗೂಣ
ಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...
ಕ್ಷಮಿಸು, ನಾ ಎಂಜಲು ಕುಡಿಯೂಲ್ಲ
ಹಾಗಾದರೆ, ನಿನ್ನದೆಂತ ಪ್ರೇಮ!!!
ನನ್ನದು ಎಂಜಲಲ್ಲದ ಪ್ರೇಮ....
*************** *********

Saturday, May 2, 2009

ಕರುಳ ಕುಡಿಗೆ ಹುಟ್ಟುಹಬ್ಬದ ಸಂಭ್ರಮ...

ಅಂದು ನೀ ಬಂದು ನನ್ನ ಜೀವನಕೆ ಹೊಸ ಆಯಾಮವನ್ನೇ ಮೂಡಿಸಿಬಿಟ್ಟೆ ಏನೋ ಪುಳಕ, ತನು ಮನವೆಲ್ಲಾ ಹೊಸ ಅನುಭವದತ್ತ ದಾಪುಗಾಲು ಅಂದೆನಗೆ ಎಲ್ಲವೊ ಹೊಸದು ಹೆಣ್ತನ ಹೀಗೆಲ್ಲ ಭೊರಮಿಸುತ್ತೆನುವ ಭಾವನೆ ನನ್ನಲಿಲ್ಲದ ದಿನ ನೀ ಬಂದು ನನ್ನ ಬಾಳ ಹಸನಾಗಿಸಿಬಿಟ್ಟೆ.
ಮುಸ್ಸಂಜೆಯ ಹೊತ್ತು ನಾನಲ್ಲಿ ನೋವಿಂದ ನಲುಗಿದ್ದೆ ಒಡಲ ಉರಿಗೆ ಬಾಡಿದ ಹೂವಂತಿದ್ದೆ ನೀ ಪುಟಿದು ಬಂದ ಕ್ಷಣ ಎಲ್ಲಾ ನೋವು ಮಾಯವಾಗಿತ್ತು. ನಿನ್ನೊಡನೆ ನನ್ನ ಬಾಲ್ಯ, ಅಮ್ಮನ ಹಾರೈಕೆ ಎಲ್ಲವನು ಅರಿತೆ, ನಿನ್ನ ಪುಟ್ಟ ಪುಟ್ಟ ಹೆಜ್ಜೆ ನನ್ನ ಜೀವನದ ಉನ್ನತಿಯ ಮೆಟ್ಟಿಲಿಗೆ ನಾಂದಿಯಾಡಿತು.. ನಿನ್ನ ತೊದಲ ನುಡಿ, ನಿನ್ನ ತುಂಟತನ, ಮೃದುತ್ವ ಎಲ್ಲವೊ ಮನೆ,ಮನ ಸೂರೆಮಾಡಿತ್ತು. ನಿನ್ನಿಂದ ದೊರವಿದ್ದ ದಿನಗಳಂತು ನರಕಯಾತನೆಯಂತಿತ್ತು ಅಂದಿನ ಒಡಲ ಉರಿ ಇಂದು ನೆನೆದರೆ ಕಣ್ಣೀರ ಧಾರೆ ಹರಿದುಬಿಡುವುದು. ನಿನ್ನಿಂದ ದೂರವಿದ್ದ ಕಹಿಮರೆತು ಮತ್ತೊಮ್ಮೆ ಸೇರಿದಾಗ ನೀ ತೋರಿದ ಮುನಿಸು ಸ್ವಲ್ಪ ಇರಿಸುಮುರಿಸು ಜೊತೆಗೆ ಮತ್ತೆಂದು ನನ್ನ ಸ್ವೀಕರಿಸುವುದಿಲ್ಲವೇನೆಂಬ ಭಯದ ಛಾಯೆ ಹೃದಯಾಂತರಾಳದಲ್ಲಿತ್ತು ಅದನಾರಲ್ಲೊ ತೋರ್ಪಡಿಸದೆ ಭಂಡಳಂತ್ತಿದ್ದೆ. ಆ ಕಹಿದಿನಗಳೆಲ್ಲ ಕಳೆದು ನನ್ನೊಡಲ ಉರಿ ತಣ್ಣಗಾಗಿಸಿ ನೀ ಎನ್ನ ಮಡಿಲು ಸೇರಿದೊಡೆ ನಾನು ನಿರಾಳವಾಗಿಬಿಟ್ಟೆ. ಅಂದಿನಿಂದ ನಾ ನಿನಗಾಸರೆ ನೀ ನನಗಾಸರೆಯಾಗಿಬಿಟ್ಟೆವು.......
ನಿನ್ನದು ಮುದ್ದು ಮನಸು ನನ್ನದು ಪೆದ್ದು ಮನಸು ಇಂತಹದರಲ್ಲಿ ಇಬ್ಬರು ನಲಿದ ಕ್ಷಣಗಳೆಲ್ಲಾ ಹುಚ್ಚು ತರಿಸಿದವೆಲ್ಲವು..... ಆ ಮುದ್ದು ಮನಸಿಗೆ ಮುದ ನೀಡೋ ಕನಸು ಎಷ್ಟೋ ಇದೆ ನಿನಗದು ಖುಷಿ ನೀಡುತ್ತೋ ಇಲ್ಲವೋ ಎಲ್ಲವನು ಕಾದು ನೋಡಬೇಕಿದೆ.
ನಿನ್ನ ಹಾರೈಕೆ ಮಾಡುವಲ್ಲಿ ಕಡಿಮೆಯೇನೋ ನಾ ತಿಳಿಯೇ ಎಲ್ಲರಂತೆ ನಾನಿಲ್ಲವೇನೋ, ನೀ ಬಯಸಿದಂತೆ ನಿನ್ನ ಹಾರೈಕೆ, ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲವೇನೋ ತಿಳಿಯೇ, ಅಂದು ನಿನ್ನೊಬ್ಬನೇ ಬಿಟ್ಟು ಹೋದಾಗ ಕಣ್ಣೀರ ನೀ ತುಂಬಿಕೊಂಡಾಗ ನಿನಗಾದ ದುಃಖದಲಿ ನನ್ನ ಶಪಿಸಿಬಿಟ್ಟೆಯೇನೋ ನಾ ತಿಳಿಯೇ ಆದರೆ ಒಂದಂತೂ ನಿಜ ನಿನ್ನೊಬ್ಬನನ್ನೇ ಬಿಟ್ಟು ನಾ ಹೋದಾಗ ಅನಾಥ ಪ್ರಜ್ಞೆ ನಿನ್ನಲ್ಲಿ ಎಲ್ಲಿ ಮೂಡಿಬಿಡುತ್ತೋ ಎಂಬ ಭಾವ ನನ್ನ ಮನಕೆ ಕಾಡದಿರಲಿಲ್ಲ...ನನ್ನ ಕರುಳ ಸಂಕಟ ಹೇಳಿಕೊಳ್ಳಲು ನೀನ್ನಿನ್ನು ಪುಟ್ಟ ಮಗು...ನನ್ನ ಮಾತನ್ನೆಲ್ಲಾ ಅರಿವ ವಯಸ್ಸು ನಿನ್ನದಲ್ಲ..... ಆದರೊ ಇಷ್ಟು ಪುಟ್ಟ ವಯಸ್ಸಿನಲ್ಲಿ ನಿನ್ನ ನೀ ನಿಭಾಯಿಸಿ ಆತ್ಮಬಲ, ಧೈರ್ಯ,ಶಿಸ್ತು, ನಿಲುವು, ಸ್ವಂತಕಾರ್ಯ ಎಲ್ಲವನು ರೂಢಿಸಿಕೊಂಡು ಬಿಟ್ಟೆಯಲ್ಲಾ ಕಂದ ನಿನಗೆ ನನ್ನ ಸಲಾಮು. ನಿನಗೆ ನಾ ಎಂದೆಂದು ಚಿರಋಣಿ ನೀ ಎಲ್ಲಾ ಮಕ್ಕಳಂತಲ್ಲ ನಿನ್ನಲ್ಲಿನ ವಿಶೇಷತೆ ಹೇಳತೀರದು. ಕಾಣದ ದೇಶದಲ್ಲಿ ನನ್ನವರೆಂಬವರು ಇಲ್ಲದ ಊರಲ್ಲಿ ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ ಬಾಗಿಲ ಬಳಿ ಬಂದೊಡೆ ಓಹ್!!! ಅಮ್ಮನಿಲ್ಲ ಕೆಲಸಕ್ಕೆ ತೆರೆಳಿದ್ದಾಳೆ ನನ್ಗೆ ನಾನೇ ಎಲ್ಲ ಎಂದು ಭಾವಿಸಿ ಬಾಗಿಲು ತೆರೆದು ಮತ್ತೆ ಬಾಗಿಲು ಭದ್ರಪಡಿಸಿ ನಿನ್ನ ಉಡುಪು ಬದಲಿಸಿ, ಮುಖ ತೊಳೆದು ಟೆಬಲಿನ ಮೇಲಿದ್ದ ಊಟ ತೆಗೆದು ತಿನ್ನುವಾಗ ನೀನೆಸ್ಟು ದಿನ ನೊಂದುಕೊಂಡೆಯೋ ನಾ ಅರಿಯೇ ನನಗೆ ಯಾರಿಲ್ಲ ನನಗಾಗಿ ನಾನೆ ಎಲ್ಲ ಎಂದು ನೊಂದು ತುತ್ತು ತುತ್ತಿಗು ತುತ್ತು ಕೊಡುವವಳ ಶಪಿಸಿದ್ದೆಯೇನೋ ನಾ ತಿಳಿಯೇ ನೀ ಏನೇ ತಿಳಿ ಇದು ನಿನ್ನಮ್ಮ ಎಂದೊ ನಿನ್ನ ಒಳಿತು ಬಯಸೋ ಅಮ್ಮ...........
ನನ್ನ ಉಸಿರ ಒಂದು ಭಾಗ ನೀ..........ನೀ ನನ್ನ ಸ್ನೇಹಿ, ನೀ ನನ್ನ ಪ್ರಾಣ, ನೀನೇ ಎನಗೆ ಎಲ್ಲಾ......ಕಂದ ಈ ನಿನ್ನ ಪೆದ್ದು ಮನಸಿನ ಅಮ್ಮ ಏನೇ ಮಾಡಿದ್ದರೊ ಮನ್ನಿಸಿ ಕ್ಷಮಿಸಿಬಿಡು ಮುಕುಂದ...... ನೀ ಎಲ್ಲವನು ಸಹಿಸಿ, ಎಲ್ಲದಕೊ ಪ್ರೋತ್ಸಾಹಿಸಿ ನನ್ನ ಜೀವನದ ಏಳ್ಗೆಗೆ ಬೆಳಕ ಹಿಡಿದ ಬೆಳಗಿನ ನೇಸರ.....ರಾತ್ರಿಯ ಚಂದ್ರಮ ಎಲ್ಲವೊ ನೀನೇ...ನನ್ನ ಒಡಲ ಚಂದ್ರಮಕೆ ಇಂದು ಎಂಟರ ಮುದ್ದು ಮಯಸ್ಸು...ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಸಂತಸದ ಚಂದ್ರಮ........ನನಗೋ ಬೆಳಕನೊಗಳುವ ಸಂಭ್ರಮ.............

ಕಂದ ನಿನಗೆ ನಿನ್ನ ಅಮ್ಮನಿಂದ ಹೃದಾಯಾಂತರಾಳದಿಂದ ಹುಟ್ಟುಹಬ್ಬದ ಶುಭಾಶಯಗಳು....
ಹಾಗು ನಿನ್ನಪ್ಪ ಮೋಟಗೊರಿಲ್ಲಾನಿಂದಲೂ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು....
ನಿನ್ನ ದಿನ ಸುಸವಿದಿನ
ವರುಷಪೂರ್ತಿ.......ಶುಭದಿನ

Tuesday, April 28, 2009

ಬಸವಜಯಂತಿ ಆಚರಣೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ..

ದಟ್ಸ್ ಕನ್ನಡ ಹಾಗು ಕೆಂಡ ಸಂಪಿಗೆಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ... ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..
ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..


ಕೆಲವು ಆಯ್ದ ವಚನಗಳ ಸಾಲುಗಳುಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು

Sunday, April 12, 2009

ಹೊರಾಂಗಣ ವಿಹಾರ..

ದಾಸಜಯಂತಿಯ ನಂತರ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೧೦.೪.೨೦೦೯ ಕುವೈಟ್ ಸಿಟಿಯ ಶರ್ಕ್ ಉದ್ಯಾನವನದಲ್ಲಿ (sharq garden) ವಿಹಾರವನ್ನು ಏರ್ಪಡಿಸಿದ್ದರು... ಕೂಟದ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಕುಣಿದು ನಲಿದು ಆಟವಾಡಿ ತಮ್ಮ ಸಮಯ ಕಳೆಯಲೆಂಬುದೇ ಈ ವಿಹಾರದ ಉದ್ದೇಶ..ಹಾಗೆಯೆ ನಾವೆಲ್ಲ ಅಪ್ಯಾಯಮಾನವಾಗಿ ಆ ಕುಶಿಯನ್ನು ಅನುಭವಿಸಿ ಬಂದೆವು..
ಶುಭಶುಕ್ರವಾರ ಬೆಳ್ಳಗ್ಗೆ ೭.೩೦ಕ್ಕೆ ಎಲ್ಲ ಕೂಟದ ಸದಸ್ಯರಿಗೆ ನೆಡಿಗೆ ಸ್ಪರ್ಧೆ(walkathon) ಏರ್ಪಡಿಸಿದ್ದರು ಈ ಸ್ಪರ್ಧೆಗೆ ಕೊಟದ ಸದಸ್ಯರು ಅತಿ ಹೆಚ್ಚು ಅಲ್ಲದಿದ್ದರು ಸುಮಾರು ಮಂದಿ ಭಾಗವಹಿಸಿದ್ದರು.... ಈ ನೆಡಿಗೆ ಬರಿ ದೊಡ್ದವರಿಗೆ ಅಲ್ಲದೆ ಚಿಕ್ಕ ಮಕ್ಕಳಿಗು ಏರ್ಪಡಿಸಿದ್ದರು ಆ ಮಕ್ಕಳಲ್ಲಿದ್ದ ಉತ್ಸಾಹ ಹೇಳ ತೀರದು ಎಲ್ಲರು ನಾ ಮುಂದು ತಾ ಮುಂದು ಎಂದು ಅತಿ ಸಂತೋಷದಿ ಭಾಗವಹಿಸಿದರು...ಸುಮಾರು ೮.೩೦ಕ್ಕೆ ಮುಕ್ತಾಯವಾಗುವಷ್ಟರಲ್ಲಿ ಎಲ್ಲರು ನೆಡೆದು ತುಂಬಾ ಸುಸ್ತಾಗಿದ್ದರೆಂದು ಎಲ್ಲರಿಗು ಉಪಹಾರದ ಏರ್ಪಾಟು ಮಾಡಿದ್ದರು...ಎಲ್ಲರು ಉಪಹಾರದ ನಂತರ ಇನ್ನೆನು ಆಟೋಟಗಳನ್ನು ಪ್ರಾರಂಭಿಸಬೇಕಲ್ಲ ಅದಕ್ಕೆಂದೆ ನೇಮಿಸಿರುವ ತಂಡಗಳನ್ನು ಎಲ್ಲರು ಹುಡುಕುವ ಯೋಚನೆಯಲ್ಲಿದ್ದರು ನಮ್ಮಲ್ಲಿ ನೇತ್ರಾವತಿ(ಹಳದಿಬಣ್ಣ), ಕಾವೇರಿ(ನೀಲಿ), ಶರಾವತಿ(ಹಸಿರು), ಹೇಮಾವತಿ(ಕೆಂಪು) ಎಂದು ನಾಲ್ಕು ಗುಂಪುಗಳನ್ನಾಗಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮಾಡಲಾಗಿದೆ ಇಲ್ಲಿ ಎಲ್ಲ ಮಕ್ಕಳು ಹೆಂಗಸರು, ಗಂಡಸರನ್ನು ಒಂದೊಂದು ಗುಂಪಿಗು ಇಷ್ಟು ಜನರೆಂದು ವಿಂಗಡಿಸಲಾಗಿದೆ.. ಈ ಸಮಯಕ್ಕಾಗಲೇ ಉಳಿದೆಲ್ಲಾ ಕುಟುಂಬಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು, ಎಲ್ಲರು ಅವರವರ ಟೀಮ್ ನಲ್ಲಿ ನಿಂತು ಆಟೋಟ ಕಾರ್ಯಕ್ರಮ ಚಾಲನೆಗೆಂದು ಕಾದು ನಿಂತಿದ್ದರು.. ಟೀಮ್ ಕ್ಯಾಪ್ಟನ್ ಎಲ್ಲರು ಪಂಜು ಹಿಡಿದು ನೆಡೆದು ನಂತರ ಕಾರ್ಯಕಾರಿ ಸಮಿತಿಯವರಿಗೆ ವರ್ಗಾಯಿಸಿದರು ಕಾರ್ಯಕಾರಿ ಸಮಿತಿಯವರು ಕುಟುಂಬ ಸಮೇತರಾಗಿ ಆ ಪಂಜನ್ನು ಹಿಡಿದು ಉದ್ಯಾನವನ್ನು ಒಂದು ಸುತ್ತುವರಿದು ಬಂದು ಜ್ಯೋತಿ ಬೆಳಗಿಸಿದರು...ನಂತರ ಬೆಲೂನ್ ಹಾಗು ಪಾರಿವಾಳಗಳನ್ನು ಆಗಸಕ್ಕೆ ತೇಲಿಬಿಟ್ಟರು.....ಇತ್ತ ಕೂಟದ ಸದಸ್ಯರು ಜೋರಾಗಿ ಚಪ್ಪಾಳೆಯೊಂದಿಗೆ ನಗುವಿನ ಹೊಳೆ ಹರಿಸುತ್ತಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು........ ಇಷ್ಟೆಲ್ಲ ನೆಡೆಯುವವರೆಗು ನೇಸರ ಬಲು ಶಾಂತಿಯಿಂದ ಮೋಡದಲ್ಲಿ ಮನೆಮಾಡಿ ಕುಳಿತಿದ್ದ ನಾವೆಲ್ಲ ಕುಣಿದು ಕುಪ್ಪಳಿಸುವವರೆಗು ನೀ ಹಾಗೆ ಇದ್ದುಬಿಡು ಶಾಂತಿಯಿಂದ ಎಂದು ಹೇಳಿಬಿಟ್ಟೆ ಆದರೆ ಅವನು ಕೇಳಬೇಕಲ್ಲ ಅವನಿಗು ಅವನ ಕೆಲಸ ಮಾಡುವಾಸೆ ಬಿಸಿಲ ತಾಪ ಸ್ವಲ್ಪ ಸ್ವಲ್ಪ ಭುವಿಗೆ ಇಳಿಯಲುಬಿಡುತ್ತಿದ್ದ...ಈ ಕಾರ್ಯಕ್ರಮದ ನಂತರ ಮಕ್ಕಳಿಗೆಂದೇ ಆಟಗಳನ್ನು ಏರ್ಪಡಿಸಿದ್ದರು೧. ೫ ವರ್ಷಕ್ಕಿಂತ ಕಡಿಮೆ ಇರುವಂತ ಮಕ್ಕಳಿಗೆ ದೊಡ್ಡ ಶೊ ಧರಿಸಿ ನೆಡೆಯುವುದು.. (Big Shoe Walk), ಮತ್ತೊಂದು ವಕ್ರ ನೆಡಿಗೆ (Zigzag Walk)೨. ೫ ರಿಂದ ೮ ವರ್ಷದ ಮಕ್ಕಳಿಗೆ ಕೋಲಿ(ಕಡ್ಡಿ)ನೊಂದಿಗೆ ಉಂಗುರ (Pole with Rings) ಹಾಗು ಕುಂಟು ಓಟ (One leg Race)೩. ೮ ರಿಂದ ೧೨ ಮತ್ತು ೧೨ರಿಂದ ೧೮ ವರ್ಷದ ಮಕ್ಕಳಿಗೆ ಓಟ (Relay) ಹಾಗು ರಿಂಗ್(ಉಂಗುರ) ಓಟ (Ring Race). ಎಲ್ಲ ಆಟೋಟಗಳಲ್ಲಿ ಎಲ್ಲ ಮಕ್ಕಳು ಮನಸೋ ಇಚ್ಚೆ ಸಂತೋಷದಿಂದ ಭಾಗವಹಿಸಿ ಕೆಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾದರು ಇನ್ನು ಕೆಲವು ಮಕ್ಕಳು ಬೇಸರಪಟ್ಟರು ಪ್ರಶಸ್ತಿ ಬರಲಿಲ್ಲವೆಂದು ಆದರು ಅವರೆಲ್ಲ ಪಾಲ್ಗೊಂಡಿದ್ದರಲ್ಲ ಅದೇ ಮುಖ್ಯ...ಈ ಎಲ್ಲ ಆಟಗಳು ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದು ಕುಟುಕುತಲಿದ್ದ....ಆದರು ನಮಗೆ ಸಮಾಧಾನವಿರಲಿಲ್ಲ ಭಾಸ್ಕರನು ದಿನವೆಲ್ಲ ಬಂದೇ ಬರುತ್ತಾನೆ ಆದರೆ ನಾವು ಈ ವಿಹಾರಕ್ಕೆ ಬಂದಿರುವುದು ಈ ದಿನ ಮಾತ್ರವಲ್ಲವೇ ದೊಡ್ಡವರು ಸ್ವಲ್ಪ ಆಟೋಟಗಳನ್ನು ಆಡಿಬಿಡೋಣವೆಂಬ ಬಯಕೆ ಇತ್ತು ಅದಕ್ಕೆಂದೆ ಕ್ರೀಡಾಸಮಿತಿ ಮಕ್ಕಳಿಗೆ ಆಟೋಟಗಳು ಇದ್ದಮೇಲೆ ದೊಡ್ಡವರು ಏನು ಮಾಡಬೇಕು ಎಂದು ನಮ್ಮೆಲ್ಲರಿಗು ಆಟಗಳನ್ನು ಏರ್ಪಡಿಸಿದ್ದರು ಖೋ-ಖೋ ಮಹಿಳೆಯರಿಗೆ (ಈ ಆಟ ನಮ್ಮ ಹಳೆಯ ಹಾಗು ರಾಜ್ಯಮಟ್ಟದ ಆಟ) ಹಾಗು ವಾಲಿಬಾಲ್ ಗಂಡಸರಿಗೆಂದು ನಿಶ್ಚಯವಾಗಿತ್ತು. ಕ್ರಿಕೆಟ್ ಎಂಬ ಆಟ ಬಂದು ಹಳೆಯ ನಮ್ಮದೇ ಆದ ಆಟಗಳು ನಶಿಸುವಂತೆ ಮಾಡಿದೆ ಕ್ರಿಕೆಟಿಗೆ ಏನು ಹೇಳುವಂತಿಲ್ಲ ಆಡುವವರು ನಾವುಗಳಲ್ಲವೇ ನಾವುಗಳು ನಮ್ಮ ಆಟಗಳನ್ನು ಮರೆತು ಬೇರೆ ಆಟೋಟಗಳನ್ನು ಪ್ರೀತಿಸಲು ಮುಂದಾಗಿ ನಮ್ಮದನ್ನು ನಶಿಸಿಸುವಂತೆ ಮಾಡಿಬಿಡುತ್ತಲಿದ್ದೇವೆ ಅಲ್ಲವೆ?... ಆದರೆ ನಮ್ಮ ಕೂಟದಲ್ಲಿ ಹಳೆಯದನ್ನು ಮೆಲುಕು ಆಕಲಿಕ್ಕೆಂದು ಈ ಎಲ್ಲಾ ಆಟೋಟಗಳನ್ನು ನೆರೆವೇರಿಸಿದರು... ಖೋ-ಖೋವೇನೋ ಎಲ್ಲಾ ಮಹಿಳೆಯರು ಅತಿ ಪ್ರೀತಿಯಿಂದ ಬಿದ್ದು ಎದ್ದು... ಮಣ್ಣಲ್ಲಿ ಮಿಂದು ಬಂದರು ಅತಿ ಆಸೆಯಿಂದ ಬಾಲ್ಯದಿನಗಳಲ್ಲಿ ಆಡುತ್ತಲಿದ್ದ ಖೋವನ್ನು ನೆನೆದು ಅನುಭವಿಸಿ ಆಡಿದರು...ಈ ಸಮಯಕ್ಕಾಗಲೇ ನಾಲ್ಕು ತಂಡಗಳಲ್ಲಿ ಕಾವೇರಿ ಹಾಗು ನೇತ್ರಾವತಿ ತಂಡಕ್ಕೆ ಹಣಹಣಿ ನೆಡೆದು ಅವರು ಅಂತಿಮ ಸುತ್ತಿಗೆ ನೇತ್ರಾವತಿ ಸಚ್ಚಾಗಿತ್ತು ಇನ್ನೋಂದು ತಂಡ ಶರಾವತಿ ಹಾಗು ಹೇಮಾವತಿ ಇವರಲ್ಲಿ ತೀವ್ರ ಪೈಪೋಟಿ ನೆಡೆದು ಹೇಮಾವತಿ ತಂಡ ಅಂತಿಮ ಸುತ್ತಿಗೆ ಬಂದಿದ್ದರು ಆಗ ತಾನೆ ಆಟವಾಡಿದ್ದ ತಂಡಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಗಂಡಸರ ತಂಡಗಳತ್ತ ವಾಲುವ ಮನಸು ಮಾಡಿದರು ಕ್ರೀಡಾ ಸಮಿತಿ...ವಾಲಿಬಾಲ್ ಆಟವನ್ನು ಎಲ್ಲರು ಸಂತಸದಿ ಹಿರಿಯರು ಕಿರಿಯರು ಎನ್ನದೇ ಇಲ್ಲಿಯು ಸಹ ತಂಡಗಳು ಮನಸೋ ಇಚ್ಚೆ ಕುಣಿದು ನಲಿದರು... ಇಲ್ಲಿ ನೇತ್ರಾವತಿ ಹಾಗು ಹೇಮಾವತಿ ತಂಡಗಳ ಹಣಾಹಣಿಯಲ್ಲಿ ನೇತ್ರಾವತಿಯದೆ ಮೇಲುಗೈ ಹಾಗು ಕಾವೇರಿ ಮತ್ತು ಶರಾವತಿಯವರ ತಂಡದಿಂದ ಶರಾವತಿಯವರದೇ ಮೇಲುಗೈ. ಕೊನೆಯ ಹಾಗು ಅಂತಿಮ ಹಣಾಹಣಿಯಲ್ಲಿ ಶರಾವತಿಯವರ ಮೇಲುಗೈ ಸಾಧಿಸಿ ಮೊದಲ ಸ್ಥಾನಕ್ಕೆ ಪಾತ್ರರಾದರು...ನೇತ್ರಾವತಿ ಎರಡನೇ ಸ್ಥಾನಕ್ಕೆ ಪಾತ್ರರಾದರು..
ಇಷ್ಟೆಲ್ಲ ನೆಡೆಯುವಷ್ಟರಲ್ಲಿ ಹೊಟ್ಟೆಯು ಕರೆದಿತ್ತು ಸೂರ್ಯನು ಬಿಸಿಲ ತಾಪವನ್ನು ಚುರುಗುಟ್ಟಿಸುತ್ತಲಿದ್ದನು ಮಧ್ಯೆ ಮಜ್ಜಿಗೆಯನ್ನು ಕುಡಿದು ಮತ್ತೆ ಖೋ-ಖೋ ಅಂತಿಮ ಹಣಾಹಣಿ ನೋಡಲು ಎಲ್ಲರು ಅಲ್ಲಿ ನೆರೆದಿದ್ದರು ಹೇಮಾವತಿ ತಂಡ ಟಾಸ್ ಗೆದ್ದು ನೇತ್ರಾವತಿಯವರು ಕುಳಿತು ಆಡಲು ಬಿಟ್ಟರು ಅವರು ಮೈದಾನವನ್ನು ಆಯ್ಕೆ ಮಾಡಿದರು ಇಬ್ಬರ ಹಣಾಹಣಿ ಬಲು ಜೋರೆ ನೆಡೆದಿತ್ತು ಎಲ್ಲೋ ಒಲಂಪಿಕ್ಸ್ ಗೆ ಆಡುತ್ತಲಿದ್ದಾರೇನೋ ಎನ್ನುವ ಹಾಗೆ ಎರಡು ಟೀಮಿನ ಆಟಗಾರರು ಬಲು ಶ್ರಮದಿಂದ ಮೈದಾನಕ್ಕೆ ಮೈ ಒಡ್ಡಿ ಬಟ್ಟೆಗೆಲ್ಲ ಮಣ್ಣು ಮುಕ್ಕಿಸಿಕೊಂಡು ಆಡಿದರು ಎನೇಆಗಲಿ ಅವಿಸ್ಮರಣೀಯ ಆಟವೇ ಸರಿ.. ದೇಹ ಭಾರವಾದರು ಮೈಕೈ ನೋವಾದರು ಅದ ಲೆಕ್ಕಿಸದೇ ಎಲ್ಲರು ಆಟದಲ್ಲಿ ಮುಳುಗಿಬಿಟ್ಟಿದ್ದರು ಅಂತೆಯೇ ಪ್ರೋತ್ಸಾಹದ ಚಪ್ಪಾಳೆಗಳು ಹುರಿದುಂಬಿಸುವ ಮಾತುಗಳು ಅತ್ತಕಡೆಯಿಂದ ಕೇಳಿಬರುತ್ತಿದ್ದ ಧ್ವನಿಗಳಲ್ಲಿ ಚಿಣ್ಣರು ದೊಡ್ಡವರು ಕರುನಾಡಿಂದ ಬಂದಿದ್ದ ಅಪ್ಪ ಅಮ್ಮಂದಿರು ಎಲ್ಲರು ಸೇರಿದ್ದರು... ಕೊನೆಗೆ ಅತಿ ಹೋರಾಟದಿ ನೇತ್ರಾವತಿ ತಂಡ ಮೊದಲ ಸ್ಥಾನಕ್ಕೆ ಪಾತ್ರರಾದರು ಹಾಗು ಹೇಮಾವತಿ ತಂಡ ಎರಡನೇ ಸ್ಥಾನಕ್ಕೆಪಾತ್ರರಾದರು..
ಇದರ ನಂತರ ಎಲ್ಲರಿಂದ ಹೋಗಳಿಕೆ ನಂತರ ವನಭೋಜನಕ್ಕೆಂದು ಸಾಲು ಸಾಲಗಿ ನಿಂತೆವು ಎಲ್ಲರು ವೃಕ್ಷರಾಶಿಯಲಿ ಅಲ್ಲೊಂದು ಇಲ್ಲೊಂದು ಕಾಣುವ ಪಕ್ಷಿಗಳು,ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಊಟವನ್ನು ಸವಿದೆವು...ಇಷ್ಟರನಂತರ ಕೇಳಬೇಕೆ ಊಟವಾಯಿತು ನಿದ್ದೆ ಜೋಂಪೆತ್ತುವ ಸಮಯ ಆಗಲೇ ಅತ್ತಕಡೆಯಿಂದ ಬಿಂಗೋ ಆಡುವ ಬನ್ನಿ ಎಂದು ಕೋಗುವ ಕರೆಕೇಳಿ ಎಲ್ಲರು ಹುಲ್ಲಿನ ಮೇಲೆ ಆಸೀನರಾಗಿ ನಮ್ಮಲ್ಲಿದ್ದ ಬಿಂಗೋ ಚೀಟಿ ಹಿಡಿದು ಈಗ ನನ್ನ ಅಂಕಿ ಬರಬಹುದು.....ಬರಬಹುದು........ಎಂದು ಕಾಯುತ್ತ ಯಾರದೋ ಅಂಕಿಗಳಲ್ಲಿ ಮೊದಲ ಐದು ಅಂಕಿ ಆಯ್ತು(quick five), ಮೊದಲನೇ,ಎರಡನೇ,ಮೂರನೇ ಲೈನ್ ಆಯ್ತು(first,second, third line) ಎಂದು ಅವರಿಗೆ ದೊರೆಯಬೇಕಿದ್ದ ಎಲ್ಲ ಬಳುವಳಿ ಕೊಟ್ಟುಬಿಟ್ಟಿದ್ದರು ಇನ್ನೆನು ಪೂರ್ತಿ ಮನೆಯ ಅಂಕಿಗಳಲ್ಲಾದರು ನನ್ಗೆ ಸಿಗುತ್ತೆಂದು ಕಾಯುವಷ್ಟರಲ್ಲಿ ೩,೪ ಜನ ಮುಗಿಬಿದ್ದು ನನಗೆ ಬಂದಿದೆ ಪೂರ್ತಿ ಮನೆಅಂಕಿ(full house) ಹ ಹ ಹ ಹ...ಇರಲಿ ಇಷ್ಟು ಜನರಲ್ಲಿ ಯಾರು ಅದೃಷ್ಟವಂತರೋ ಅವರಿಗೆ ದೊರಕಿದೆ ಅಲ್ಲವೆ...? ಇನ್ನೇನು ಮುಗಿದುಬಿಟ್ಟಿತು ಎನ್ನುವಷ್ಟರಲ್ಲಿ ಕಾಫಿ,ಟೀ ಬಿಸ್ಕೇಟ್ ಬಂದುಬಿಟ್ಟಿತು ಎಲ್ಲರು ಸಂಜೆಸವಿಯಲ್ಲಿ ಕಾಫಿಟೀ ಸವಿಯುತ್ತಾ ಪ್ರಶಸ್ತಿ ಸಮಾರಂಭಕ್ಕೆ ಅಣಿಯಾಗಿ ಕುಳಿತೆವು ಎಲ್ಲಾ ಮಕ್ಕಳ ಪ್ರಶಸ್ತಿ ದೊಡ್ಡವರಿಗೆ ಎಲವನ್ನು ಇತ್ತು ಎಲ್ಲರ ಮನ ತಣಿಸಿಬಿಟ್ಟರು ಕಾರ್ಯಕಾರಿ ಸಮಿತಿಯವರು...ಆಟ, ಊಟ...ಮುಗಿಯಿತು ಈಗ ಮನೆಕಡೆ ಓಟ....
ಚಾಚು ತಪ್ಪದೇ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಸಾಂಘವಾಗಿ ನೇರವೇರಿಸಿದ ಕ್ರೀಡಾ ಸಮಿತಿಗೆ ಹಾಗು ಅವರಿಗೆ ಕೈ ಜೋಡಿಸಿ ಆಟೋಟಾಗಳನ್ನು ನೇರೆವೇರಿಸಿಕೊಟ್ಟ ಹಲವಾರು ಮಂದಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು...
ಮತ್ತೊಂದು ಕೊನೆಯ ಮಾತು ಖೋ-ಖೋ ಆಟವಾಡಿ ಮೈ ಕೈ ತುಂಬಾ ನೋವಾಗಿತ್ತು ಆದರೊ ಮೈಕೈ ನೋವಿಗೆ ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ ನಮ್ಮ ಆಟವನ್ನು ನೆನಪಿಸಿ ನಮಗೆ ಖುಷಿ ನೀಡಿದ ಆ ರಸಘಳಿಗೆ ಮಾತ್ರ ಶಾಶ್ವತವಾಗಿರುತ್ತೆಂದು ಹೇಳಬಯಸುತ್ತೇನೆ........ಎಲ್ಲಾ ಕ್ರೀಡಾ ಮನೋಲ್ಲಾಸಿಗಳಿಗೆ ಹಾಗು ಕ್ರೀಡಾ ಪ್ರಿಯರಿಗೆ ಮನತಣಿಸಿದ ಕ್ರೀಡಾಸಮಿತಿಗೆ ಮತ್ತೊಮ್ಮೆ ಮಗದೊಮ್ಮೆ ಆತ್ಮೀಯವಾಗಿ ವಂದನೆಗಳನ್ನ ಸಲ್ಲಿಸುತ್ತೇವೆ...
ವಂದನೆಗಳು..
ಶುಭದಿನ..
ವಿಹಾರದಲ್ಲಿ ತಣಿದ ಎಲ್ಲರ ಮನಸು..

Wednesday, April 8, 2009

ನಿನ್ನ-ಸ್ನೇಹ

ಸ್ನೇಹದ ಹೆಸರಲ್ಲಿ ನೀ ಒಲಿದು ಬಂದೆ
ನಿನ್ನ ಸ್ನೇಹಕೆ ನಾ ಸೋತು ನಿಂದೆ
ಕೆಲವೇ ದಿನವಾದರು ಸ್ನೇಹ
ಅದು ಭದ್ರಬುನಾದಿಯಾಗಿದೆ

ಅದೇಕೊ ಇಷ್ಟುಕಾಲ ಜೊತೆಗಿದ್ದು
ಇಂದು ದೂರ ಸರಿವ ಮಾತಾಡಿದೆ
ನನ್ನ ಮನಕೆ ಚೂರಿ ಚುಚ್ಚಂತಾಯಿತು
ಹೃದಯ ಒಮ್ಮೆಲೆ ಮಮ್ಮಲ ಮರುಗಿತು...

ನಾನೆಲ್ಲೊ ಸೋತೆ ಸ್ನೇಹದ ಆಯ್ಕೆಯಲಿ
ಎಂದು ಭಾವಿಸಿ ಮೂಕಳಾದೆ
ಕಡಲ ಅಲೆಯ ಅಬ್ಬರಕೆ
ಕೊಚ್ಚುಹೋದಂತೆ ಭಾಸವಾಯ್ತು..

ಹೋದ ರಭಸಕೆ ಕಣ್ಣೀರ ಧಾರೆ
ಧರೆಗಿಳಿಸಿ ಭುವಿಯ ತೊಯಿಸಿಬಿಟ್ಟೆ
ಮತ್ತದೆ ಕಡಲ ಅಲೆಯು ನಿನ್ನ
ಭಾಚಿ ತಬ್ಬಿ ನಾನಿರುವ ದಡಕೆ
ತಂದೆಸೆಯಿತು.....

ನೀ ಬಂದಿದ ಕಂಡು ಮನಹಗುರಾಯಿತು
ನೀ ಸಿಗುವುದಿಲ್ಲದ ಮಾತು ಮರೆಮಾಚಿಸಿತು
ಮತ್ತೊಮ್ಮೆ ಹೇಳಿದೆ ಮನವೇಕೋ ಭಾರ
ಕೆಲವರ ಮಾತು ಕೇಳಿ ನಿಂತಿದೆ ಸ್ವರ...

ನೀ ಮಾಡಿದು ತಪ್ಪಲ್ಲವೇ ಸ್ನೇಹಿ
ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ...
ಸ್ನೇಹದ ಮನ ಕ್ಷಣದಲೇ ನೋಯಿಸಿಬಿಟ್ಟೆಯಲ್ಲಾ...

ನಿನ್ನ ನೋವೆನಿತಿದ್ದರು ತಿಳಿಸಿಬಿಡು
ನಿನ್ನ ಮನವ ಹಗುರಾಗಲು ಬಿಡು
ನೀನು, ನಾನು ಶಾಶ್ವತವಲ್ಲ ಅಲ್ಲವೆ ...?
ಸ್ನೇಹ ಮಾತ್ರ ಚಿರಾಯು.. ಅದ ಅರಿತುಬಿಡು

ಮತ್ತೆಂದು ದೂರಸರಿವ ಮಾತಾಡದಿರು
ಹೃದಯ ವಿದ್ರಾವಕೆ ಸ್ನೇಹಿಯ ತಳ್ಳದಿರು
ಸ್ನೇಹ ಸಿಂಚನದ ಸಿಹಿ ನೀ ಅರಿತಿರು
ನೀ ಎಂದಿದ್ದರು ಸ್ನೇಹ ಜೀವಿ.. ಅದ ಮರೆಯದಿರು
ಸ್ನೇಹದ ಹೆಸರಲ್ಲಿ ಕೆಲವು ಏರುಪೇರು ನೆಡೆಯುತ್ತವೆ ಸ್ನೇಹ ಕೈಜಾರಿ ಹೋಗಲು ಬಿಡದೆ ಕಾಪಡಿಕೊಳ್ಳಬೇಕು...ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.....ಮನವೆಂಬ ಮಂಟಪದಿ ಮನುವೆಂಬ ಜೀವಿಯಿರಲು ಅದೇ ನಮಗೆ ಸ್ನೇಹಿ ಆ ಸ್ನೇಹಿಗೆ ಕೈಜೋಡಿಸುವ ಸ್ನೇಹಿ ಸಿಕ್ಕರೆ ಅವರು ಧನ್ಯರು. ಸ್ನೇಹ ಮಾಡುವುದು ನಿಮಿಷದಲ್ಲಿ ಅದ ನಿಭಾಯಿಸುವುದು ಜೀವನಪರ್ಯಂತದಲ್ಲಿ....ಯಾರು ಎಷ್ಟು ನಿಭಾಯಿಸುತ್ತೆವೊ ತಿಳಿಯದು.... ಒಳ್ಳೆ ಸ್ನೇಹಿ ಎಂದು ತಿಳಿದರೆ ಅವರು ನಿಮ್ಮಿಂದ ದೂರಾಗಲು ಬಿಡದಿರಿ....
ಶುಭದಿನ
ಮನಸು...

Wednesday, April 1, 2009

ನಡೆದಾಡುವ ದೇವರಿಗೆ ನಮ್ಮ ಶುಭಾಶಯಗಳು..

ಇಂದು ಶ್ರಿ ಶಿವಕುಮಾರ ಸ್ವಾಮಿಗಳಾ ಜನ್ಮದಿನ ಅವರನ್ನು ನೆನೆಯುತ್ತ ಸಾಧನಾ ಶೀಲರಾದ, ಯಾವುದೆ ಹೆಸರು, ಬಿರುದು ಬಯಸದ ಶ್ರಿಗಳಿ ನಮ್ಮ ಹೃತ್ಪೂರ್ವಕ ನಮನಗಳು..
ಅವರ ಜನನ ಏಪ್ರಿಲ್ ೧ ೧೯೦೭, ಹುಟ್ಟೂರು ವೀರಾಪುರ.
ನಮ್ಮ ಮನೆಯಲ್ಲಿ ಪೂಜಿಸೊ ಶ್ರಿಗಳ ಪಾದುಕೆ


ಶ್ರಿಗಳ ಆಸನ ಅವರು ಮಲಗೊ ಕೊಠಡಿ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೊ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೊ ಸಲ್ಲರಯ್ಯ
ಕೂಡಲಸಂಗಮದೇವ.... ಬಸವಣ್ಣನವರ ವಚನದಂತೆ ಶ್ರಿಗಳು ಎಲ್ಲೆಲ್ಲಿಯು ಸಲ್ಲುವರು ಎಲ್ಲರಿಗು ಸಲ್ಲುವರು
ಅವರ ಜೀವನದ ಸಾಧನೆ ಅವರ ಧ್ಯೇಯ ಎಲ್ಲವೊ ಒಳಿತಿನೆಡೆಗೆ ಸಮಾಜದ ಉದ್ದಾರಕ್ಕಾಗೇ ಮೀಸಲು..ಇಂತಹ ಮಹಾನ್ ಚೇತನರನ್ನು ನಾನು ಮನಸಾರೆ ನೆನೆದು ಅವರ ಸಾಧನೆ ನಮಗೆ ದಾರಿದೀಪವಾಗಲೆಂದು ಬಯಸುತ್ತಾ ಅವರ ಪಾದಾರವಿಂದಕ್ಕೆ ಮನದಲ್ಲೇ ಎರಗುತ್ತಾ ನಮಿಸುತ್ತೆನೆ...
ಗುರುಗಳಿಗೆ ನಮಿಸುತ್ತಾ
ನಿಮ್ಮೆಲ್ಲರಿಗು ವಂದನೆಗಳು
ಶುಭದಿನ..