Sunday, January 5, 2014

ನೆನಪುಗಳ ಸುತ್ತ - ಜಿ.ಎಸ್.ಎಸ್

 1
೧೯೭೦ರಲ್ಲಿ ಬೆಂಗಳೂರಿನಲ್ಲಿದ್ದ ಸಮಯ ಆಗ ಡಾ. ಚಿದಾನಂದಮೂರ್ತಿ, ಡಾ. ಕೆ ಮರಳಸಿದ್ದಪ್ಪ ಮುಂದಾದವರು ಶಿವರುದ್ರಪ್ಪನವರೊಂದಿಗೆ ಸಹಉದ್ಯೋಗಿಗಳು. ಎಲ್ಲರೂ ಒಮ್ಮೆ ಕರಗ ನೋಡುವ ಆಸೆಯಿಂದ ಧರ್ಮರಾಯ ಗುಡಿಯ ಹತ್ತಿರ ಬರುತ್ತಾರೆ. ಅಲ್ಲಿ ನಿಂತು ನೋಡಿದರೆ ಸುತ್ತಲೂ ಜನ, ಕರಗ ಹೋದ ಕಡೆಯೆಲ್ಲಾ ಹೋಗಲು ಆಗದು ಎಂದು ಅಲ್ಲೇ ಇದ್ದ ಒಂದು ಮಹಡಿ ಮನೆಯ ಮೇಲೆ ಹತ್ತಿ ಕೂತು ನೋಡೋಣವೆಂದುಕೊಳ್ಳುತ್ತಾರೆ. ಎಲ್ಲರೂ ಮಹಡಿ ಮನೆ ಹತ್ತಿರ ಹೋಗಿ ಏಣಿ ಹಾಕಿದ್ದನ್ನು ನೋಡಿ ಹತ್ತಲು ಹೋಗುತ್ತಾರೆ. ಅಲ್ಲೇ ಇದ್ದ ವ್ಯಕ್ತಿ ೨೫ಪೈಸೆ ಕೊಟ್ಟರೆ ಹತ್ತಲು ಬಿಡುತ್ತೇನೆ. ಎಂದು ಕಾಸು ತೆಗೆದುಕೊಂಡು ಮಹಡಿ ಹತ್ತಿಸುತ್ತಾನೆ.

ಮಹಡಿ ಮೇಲೆ ಕುಳಿತಿದ್ದರಿಂದ ಕರಗವನ್ನು ಆ ಜನಸಂದಣಿಯಲ್ಲಿ ಕುತೂಹಲದಿಂದ ನೋಡುತ್ತಿದ್ದಾರೆ. ಮಧ್ಯರಾತ್ರಿ ಕರಗ ಧರ್ಮರಾಯ ಗುಡಿಯಿಂದ ವಾದ್ಯಗಳೊಂದಿಗೆ ಹಾದಿಯುದ್ದಕ್ಕೂ ಸಾಗಿಹೋಗುತ್ತಿದೆ. ಜನ ಕರಗ ಬಂತು ಕರಗ ಎಂದು ಕೂಗುತ್ತಿದ್ದಾರೆ. ಇವರಿಗೂ ಕುತುಹಲ ಕರಗ ನೋಡಲು ತುದಿಗಾಲಲ್ಲಿ ನಿಂತಿದ್ದವರು. ಈ ಕರಗ ಸಂಶೋಧನೆಗೆ ಒಂದು ಒಳ್ಳೆಯ ವಸ್ತು ಎಂದು ಡಾ. ಮೂರ್ತಿಯವರು ಯೋಜನೆ ಮಂಡಿಸುತ್ತಿದ್ದರಂತೆ. ನೋಡಿ ನಾವುಗಳು ಯಾವುದಾದರು ಜಾತ್ರೆ, ಕರಗ ನೋಡಿದರೆ ಅಲ್ಲಿರುವ ದೇವರಿಗೆ ಕೈಮುಗಿಯುವುದು ಇಲ್ಲವೇ ಆ ವರ ಕೊಡು, ಇದು ಕೊಡು ಎಂದು ಕೇಳುವುದರಲ್ಲೇ ಮಗ್ನ. ಸಾಹಿತಿಗಳಿಗೆ ದೇವರಿಗಿಂತ ಅಧ್ಯಯನದತ್ತ ಗಮನ ಎಂಬುದಕ್ಕೆ ಇದು ಉದಾಹರಣೆ. 

ದಾರಿ ಉದ್ದಕ್ಕು ಸಾಗಿ ಹೋದ ಕರಗದ ಸಂಭ್ರಮವನ್ನು ಕಣ್ ತುಂಬಿಕೊಂಡ ಜಿ ಎಸ್ ಎಸ್ ಮತ್ತು ಸಂಗಡಿಗರು ಇನ್ನೇನು ಮುಗಿಯಿತು, ಮನೆ ಕಡೆ ಹೊರಡಲು ಅನುವಾದಾಗಲೇ ತಿಳಿದಿದ್ದು. ಮಹಡಿ ಏರಲು ಏಣಿ ಹಾಕಿದ್ದರು ಇಳಿಯಲು ಏಣಿ ಇರಲೇ ಇರಲಿಲ್ಲ. ಈಗ ಇಳಿಯಲು ಏಣಿ ಬೇಕು ನಾಲ್ಕಾಣೆ ಕೊಟ್ಟಿದ್ದು ಬರಿ ಹತ್ತಲು ಮಾತ್ರ ಕೊಟ್ಟಿದ್ದಂತೆ ಆಯಿತು.  ಆ ಮನೆಯ ತಾರಸಿನ ಮೇಲೆ ಇವರುಗಳ ಜೊತೆ ಬಹಳಷ್ಟು ಜನರು ನಾಲ್ಕಾಣೆ ಕೊಟ್ಟು ಹತ್ತಿದ್ದರು. ಆ ರಾತ್ರಿ ಪೂರ ಅಲ್ಲೇ ಕಳೆಯುವ ಪರಿಸ್ಥಿತಿ ಬಂದೊದಗಿತ್ತು. ಆ ಸಮಯಕ್ಕೆ ಸರಿಯಾಗಿ ತಾರಸಿಯ ಕೆಳಗಿನ ಮನೆಗೆ ಇಳಿದು ಹೋಗುವ ಬಾಗಿಲನ್ನು ಪತ್ತೆ ಹಚ್ಚಿದರು. ಆನಂತರ ಎಲ್ಲರೂ ಆ ಮನೆಯ ಬಾಗಿಲು ಬಡಿಯುತ್ತಿದ್ದದ್ದು ಆ ಮನೆಯವರಿಗೂ ಅರ್ಥವಾಗಿರಬಹುದು ನಾಲ್ಕಾಣೆ ಏರುವುದಕ್ಕೆ ಇಳಿಯುವುದಕ್ಕಲ್ಲಾ ಯಾರೋ ಮಾಡಿದ್ದ ಕೆಲಸಕ್ಕೆ ಇವರುಗಳನ್ನು ಹೊರಗೆ ಕಳುಹಿಸಲು ಬಾಗಿಲು ತೆರೆಯಬೇಕಾಯ್ತು. ಹೀಗೆ ಮಹಡಿ ಮೇಲೆ ಜಾಗರಣೆಯನ್ನು ತಡೆಯಲು ಆ ಮನೆಯವರ ಸಹಾಯವಾಯ್ತು ಎಂದು ಜಿ ಎಸ್ ಎಸ್ ಹೇಳುತ್ತಾರೆ. (ಇದೊಂದು ಹಾಸ್ಯ ಸನ್ನಿವೇಶದ ನೆನಪು)
---------
2

ಒಮ್ಮೆ ಪಿ.ಎಚ್.ಡಿ ಮಾಡುವ ಸಮಯ ಸ್ನೇಹಿತರೊಂದಿಗೆ ಕಾಶಿಗೆ ಪ್ರವಾಸಹೋಗಿದ್ದ ಸಂದರ್ಭ. ಎಲ್ಲರೂ ನದಿಯಲ್ಲಿ ಸ್ನಾನ ಮಾಡಬೇಕೆಂದು ಹೋರಾಟಾಗ ಅವರ ಸ್ನೇಹಿತರಾದ ಪ್ರಭುಶಂಕರರು ಬರುವುದಿಲ್ಲ ಎಂದು ಕುಳಿತರು. ಮಿಕ್ಕುಳಿದವರ ಜೊತೆ ಶಿವರುದ್ರಪ್ಪನವರು ಸ್ನಾನಕ್ಕೆ ತೆರಳಿದರು. ಸ್ವಲ್ಪ ಸಮಯವಾಗುತ್ತಿದ್ದಂತೆ ಈಜು ಬಾರದ ಪ್ರಭುಶಂಕರರು ನದಿಗೆ ಇಳಿದೇ ಬಿಟ್ಟರು. ಇದ್ದಕ್ಕಿದ್ದ ಹಾಗೆ ಮುಳುಗುತ್ತಿದ್ದ ಸ್ನೇಹಿತನನ್ನು ಹಿಡಿಯಲು ಹೋದ ಜಿ ಎಸ್ ಎಸ್ ಅವರೂ ಸಹ ನೀರಿನ ಸೆಳೆತಕ್ಕೆ ಸಿಕ್ಕಿಬಿಟ್ಟರು. ಇನ್ನು ಉಳಿಯುವುದಿಲ್ಲ ಎಂದು ಗಾಬರಿಯಲ್ಲಿದ್ದವರನ್ನು ಯಾರೋ ಒಬ್ಬ ವ್ಯಕ್ತಿ ಬಂದು ದಡಕ್ಕೆ ಎಳೆದು ತಂದು ಬಿಟ್ಟರಂತೆ ಆತ ಹೋಗುವ ಮುನ್ನ " ದೈವವಶಾತ್ ಉಳಿದಿದ್ದೀರಿ, ಹೋಗಿ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿ. ಊರಿಗೆ ಹೋದ ಮೇಲೆ ನಾಲ್ಕು ಜನರಿಗೆ ಅನ್ನ ಹಾಕಿ" ಎಂದು ಹೊರಟು ಹೋಗುತ್ತಾರೆ. 

ಒಂದೇ ಒಂದು ಕ್ಷಣ ಸಾವಿನ ದವಡೆಗೆ ಹೊರಟಿದ್ದ ಶಿವರುದ್ರಪ್ಪನವರು ಹೀಗೆ ಹೇಳುತ್ತಾರೆ.  ಕೇವಲ ಒಂದೇ ಕ್ಷಣ ಪ್ರವಾಹದಿಂದ ಸಾವು ಬಂದುಬಿಡುತ್ತಿತ್ತು, ಬದುಕಿನ ದಡಕ್ಕೆ ಬಂದಿದ್ದೆವು. ಇದನ್ನು ನೆನೆದಾಗ ಅನ್ನಿಸುತ್ತದೆ.  "ಸಾವಿಗೂ ಬದುಕಿಗೂ ಇರುವ ಅಂತರ ಕೇವಲ ಕೂದಲೆಳೆಯಷ್ಟು ಮಾತ್ರದ್ದು, ನಾವು ಬದುಕಿರುವುದೂ ಕೂಡಾ ಒಂದು ಆಕಸ್ಮಿಕವೋ ಏನೋ". 

ಮತ್ತೊಂದು ಕಡೆ ಹೇಳುತ್ತಾರೆ "ನಾವು ಇದ್ದೇವೆ ಅಥವಾ ಇಲ್ಲ ಎಂಬ ಕಾರಣಕ್ಕಾಗಿ, ಯಾವುದೂ ನಡೆಯುವುದೊ ಬಿಡುವುದೂ ವ್ಯತ್ಯಾಸವಾಗುವುದಿಲ್ಲ. ನಾವು ಯಾವುದನ್ನು ಮಹತ್ವದ್ದು ಹಾಗೂ ಮೌಲಿಕವಾದದ್ದು ಎಂದು ಅಂದುಕೊಳ್ಳುತ್ತೇವೋ ಅದನ್ನು ಒಂದು ಗುಬ್ಬಚ್ಚಿ ಕೂಡ ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೂ ನಾವು ನಮ್ಮ ಕೀರ್ತಿ-ಪ್ರತಿಷ್ಠೆ-ಸಾಧನೆ - ಸಿದ್ಧಿ ಇತ್ಯಾದಿಯಾಗಿ ಕೊಚ್ಚಿಕೊಳ್ಳುತ್ತೇವಲ್ಲ ಇದಕ್ಕೆ ಏನರ್ಥ? ನಮಗೂ ಈ ಜಗತ್ತಿಗೂ ಗಾಢವಾದ ಸಂಬಂಧವಿದೆ ಅಂದುಕೊಳ್ಳುತ್ತೇವಲ್ಲ ಅದು ಎಂಥ ಸಂಬಂಧ?".

ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ). ಸೌಂದರ್ಯ ಸಮೀಕ್ಷೆ ಈ ಗ್ರಂಥ ವಿಶಿಷ್ಟತೆಯಿಂದ ಕೂಡಿದೆ ಇದು ಕಾವ್ಯ ಸೌಂದರ್ಯವನ್ನೂ ಹೆಚ್ಚಿಸಿದೆ. ಪಿ ಎಚ್ ಡಿ  ಸಮಯದ ಪ್ರವಾಸದ  ಈ ಘಟನೆ ಅವರಲ್ಲಿ ಬದುಕಿನ ಬಗ್ಗೆಯೂ  ಒಂದು ಪಿ ಎಚ್ ಡಿಯನ್ನು  ನೀಡಿತು ಎಂದೇ ಹೇಳಬಹುದು.
----------
3
ಒಂದೆಡೆ ಜಿ. ಎಸ್ . ಎಸ್ ಅವರು ನಾ. ಕಸ್ತೂರಿ ಯವರನ್ನು ನೆನಪುಮಾಡಿಕೊಳ್ಳುತ್ತಾರೆ. ಅವರು ಕೇರಳ ಮೂಲದವರಾದರೂ ಕನ್ನಡ ಕಲಿತು, ಕನ್ನಡ ಶಬ್ದ ಭಂಡಾರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂಥ ವ್ಯಕ್ತಿಯನ್ನು ನಮ್ಮ ಕನ್ನಡ ಜನ ಸಲ್ಲಿಸಬೇಕಾದ ಗೌರವ ಸಲ್ಲಿಸಲಿಲ್ಲ ಎಂದು ಹೇಳುತ್ತಾರೆ. ನಾ. ಕಸ್ತೂರಿ ಅವರು ಜಿ ಎಸ್ ಎಸ್ ಅವರಿಗೆ ಸದಾ ಹುರುದುಂಬಿಸುತ್ತಿದ್ದರು. ಹಾಸ್ಯ ಕವನ, ಹಲವಾರು ಸಭೆಗಳಿಗೆ ಕರೆದುಕೊಂಡು ಹೋಗಿ ಭಾಷಣ ಮಾಡುವ ಕಲೆಯನ್ನು ಕಲಿಸಿಕೊಟ್ಟರಂತೆ. ಹಾಗೆ  ಶಿವರಾಮ ಕಾರಂತರ "ಕೊರವಂಜಿ" ಮಾಸ ಪತ್ರಿಕೆಯಲ್ಲಿ ದಿಬ್ಬಯ್ಯ ಎಂಬ ಕಾವ್ಯನಾಮದಲ್ಲಿ ಪ್ರಕಟಿಸುವಂತೆ ಮಾಡಿದ್ದರು. ಜಿ ಎಸ್ ಎಸ್ ಮತ್ತು ಅವರ ಸ್ನೇಹಿತರಾದ ಪ್ರಭುಪ್ರಸಾದರು ಸದಾ ದಾವಣಗೆರೆಯ ಊರಾಚೆಗಿನ ದಿಬ್ಬವೊಂದರ ಮೇಲೆ ಕೂರುತ್ತಿದ್ದರಿಂದ ನಾ.ಕಸ್ತೂರಿ ಅವರು ಜಿ ಎಸ್ ಎಸ್ ಅವರಿಗೆ ದಿಬ್ಬಯ್ಯ ಎಂದು ಕರೆದರೆಂದು ಹೇಳುತ್ತಾರೆ. 

ಇಂದ್ರಭವನದಲಿ ಚಂದ್ರ ಮೂಡಿತೋ
ದೋಸೆ ಹಂಚಿನಲ್ಲಿ.
ಮೂಡಿತೆಂಬೆಯೊ, ಮತ್ತೆ ಮುಳುಗಿತೋ
ಉದರ ಗಗನದಲ್ಲಿ! 

- ಈ ಸಾಲುಗಳು ಶಿವರಾಮ ಕಾರಂತ ಮೆಚ್ಚುಗೆ ಪಡೆದಿದ್ದವು. 

----------
4
ಒಮ್ಮೆ ಜಿ ಎಸ್ ಎಸ್ ಅವರು ಪುಟ್ಟಪರ್ತಿಗೆ ಭೇಟಿ ನೀಡಿದಾಗ ನಡೆದ ಘಟನೆ..

ಪುಟ್ಟಪರ್ತಿ ಸಾಯಿ ಬಾಬ ಅವರ ಕೋಣೆಗೆ ಹೋದಾಗ, ಬಾಬರಲ್ಲಿ ಏನು ಕೇಳಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರ ಮೌನವನ್ನು ಕಂಡ ಬಾಬ ಅವರೇ ಪ್ರಶ್ನಿಸುತ್ತಾರೆ.

 "ನನಗೆ ಎಲ್ಲಾ ಗೊತ್ತು. ನೀನು ಹೇಳದಿದ್ದರೇನು..? ನೀನು ಚಿಕ್ಕಂದಿನಿಂದ ತುಂಬಾ ಕಷ್ಟಪಟ್ಟಿದ್ದೀಯಾ"  ಬಾಬಾ ಹೇಳುತ್ತಾರೆ.

ಹೌದು, ಎಂದು ಜಿ ಎಸ್ ಎಸ್ ಹೇಳುತ್ತಾರೆ (ಆ ಕಷ್ಟದಿಂದ ಪಾರು ಮಾಡು ಎಂದು ಕೇಳುತ್ತೇನೆ ಎಂದುಕೊಂಡರೇನೋ ಆದರೆ ಕೇಳಲೇ ಇಲ್ಲ).

'ಚಿಂತೆಯಿಲ್ಲ, ನಿನ್ನ ಕಷ್ಟಗಳನ್ನು ನಾನು ನೋಡಿಕೊಳ್ಳುವೆ. ಎಲ್ಲವೂ ಸರಿ ಹೋಗುವುದು' ಎಂದು ಬಾಬಾ ಆಶ್ವಾಸನೆ ನೀಡುತ್ತಾರೆ.

ಆಗ ತಟ್ಟನೇ ಜಿ ಎಸ್ ಎಸ್ ಹೇಳುತ್ತಾರೆ 'ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳುವುದೆಂದರೇನು? ಕಷ್ಟಗಳು ಬಂದಿವೆ. ಹಾಗೆ ಮುಂದೆಯೂ ಬರುತ್ತವೆ. ಪ್ರತಿ ಬಾರಿ ಕಷ್ಟಬಂದಾಗಲೆಲ್ಲಾ ನಿಮ್ಮಲ್ಲಿಗೆ ಬರಬೇಕು. ಅದು ಎಷ್ಟರಮಟ್ಟಿಗೆ ಸರಿ.?'

ನಾನಿರುವುದು ಏಕೆ?- ಎಂದು ಬಾಬ ಉತ್ತರಿಸುತ್ತಾರೆ.

ನನ್ನ ಕಷ್ಟ ನೀವು ನೋಡಿಕೊಳ್ಳುವುದು ಬೇಡ. ಆದರೆ ನನಗೆ ಬರುವ ಕಷ್ಟಗಳೆಲ್ಲವನ್ನೂ ಎದುರಿಸುವ ಶಕ್ತಿ ಮಾತ್ರ ನನಗೆ ಕೊಡುವುದಾದರೆ ಕೊಡಿ ಎಂದು ಹೇಳಿಬಿಡುತ್ತಾರೆ.

ಕ್ಷಣ ಮೌನವಾಗಿದ್ದ ಕೋಣೆಯಲ್ಲಿ ಜಿ ಎಸ್ ಎಸ್ ಅವರೇ ಒಂದು ಪ್ರಶ್ನೆ ಕೇಳುತ್ತಾರೆ. "ನನಗೊಂದು ಅನುಮಾನವಿದೆ". ನಿಮ್ಮನ್ನು ಕೇಳಲೆ ಎಂದು.

ಆಗಲಿ ಎಂದರು ಬಾಬ 

'ನೀವು ಪವಾಡ ಮಾಡುತ್ತೀರಲ್ಲ ಏಕೆ?' ಎಂದರು ಜಿ ಎಸ್ ಎಸ್ 

ನೋಡಪ್ಪ, ಜನರನ್ನು ಸನ್ಮಾರ್ಗದಲ್ಲಿ ನಡೆಸೋದಕ್ಕೆ ಈ ಪವಾಡಗಳು ಬೇಕಾಗುತ್ತವೆ. ಭಕ್ತಿ ಶ್ರದ್ಧೆ ಕಡೆಗೆ ತರಲು ಇದು ಸಹ ಒಂದು ದಾರಿ. ಎಂದು ಹೇಳಿ ಮುಂದಕ್ಕೆ ಜಿ ಎಸ್ ಎಸ್ ಮಾತನಾಡಲೂ ಬಿಡದೆ ಮತ್ತೆ ನೋಡೋಣ, ಆಗಾಗ ಬರುತ್ತಲಿರಿ ಎಂದರಂತೆ. ಹಾಗೆ ಹೇಳಿದರೆ ಅಲ್ಲಿಗೆ ಮುಕ್ತಾಯ ಎಂಬಂತೆ ಎಂದುಕೊಂಡು ಜಿ ಎಸ್ ಎಸ್ ಹೊರಗಡೆ ಬಂದರು.

ಈ ಸಂಭಾಷಣೆಯಿಂದಲೇ ಪವಾಡಗಳನ್ನು ಜಿ ಎಸ್ ಎಸ್ ಅವರು ನಂಬುತ್ತಿರಲಿಲ್ಲವೆಂದು ತಿಳಿಯುತ್ತದೆ. 

ಹೀಗೆ ಓದುತ್ತ ಹೋದಂತೆ ಹಲವಾರು ವಿಷಯಗಳು ತೆರೆದುಕೊಳ್ಳುತ್ತವೆ. ಮತ್ತಷ್ಟು ಓದಲು ಸ್ನೇಹಿತರು ಜಿ ಎಸ್ ಎಸ್ ಅವರ ಪುಸ್ತಕಗಳನ್ನು ಕೊಟ್ಟಿದ್ದಾರೆ ಓದಿದ್ದೇನೆ ಅಲ್ಲದೆ ಮತ್ತೊಮ್ಮೆ ಓದಲು ಪ್ರಾರಂಭಿಸಿದ್ದೇನೆ. ಅವುಗಳಲ್ಲಿ ಬಹಳಷ್ಟು ವಿಷಯಗಳು ತಿಳಿಯುತ್ತವೆ. ಶರಣರಾದ ಸಿದ್ಧರಾಮ ಜೀವನ ಚರಿತ್ರೆ ಇದು ಬಹಳಷ್ಟು ಮನಸ್ಸಿಗೆ ಮುದ ನೀಡಿದ ಪುಸ್ತಕ ಎಂದೇ ಹೇಳಬಹುದು, ಗುರುಗಳಾದ ಕುವೆಂಪು ಅವರ ಮೇಲೆ ಬರೆದ ಗದ್ಯ ಪುನರವಲೋಕನ, ಸಮಗ್ರ ಗದ್ಯ ಇವುಗಳೆಲ್ಲವೂ ಒಂದು ರೀತಿ ನಮ್ಮಲ್ಲಿ ಹೊಸ ವಿಚಾರಧಾರೆಯತ್ತ ತೆಗೆದುಕೊಂಡೋಗುತ್ತದೆ. 

ಬಹಳಷ್ಟು ಪುಸ್ತಕಗಳು ಓದುವ ಆಸೆಯಿದೆ ಅವುಗಳಲ್ಲಿ.... ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ, ವಿಮರ್ಶೆಯ ಪೂರ್ವ ಪಶ್ಚಿಮ, ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಬೆಡಗು, ನವೋದಯ ಹೀಗೆ ಉದ್ದನೆಯ ಪಟ್ಟಿ ಬೆಳೆಯುತ್ತದೆ. 

ಸದ್ಯಕ್ಕೆ ಇಷ್ಟು.... ಮುಂದೇ ಮತ್ತೆ ಯಾವಾಗಲಾದರೂ ಬರುವೆ, ಜಿ.ಎಸ್.ಎಸ್ ಅವರ ಪುಸ್ತಕಗಳ ಓದಿನೊಂದಿಗೆ.

2 comments:

sunaath said...

ಈ ಸನ್ನಿವೇಶಗಳನ್ನು ಓದುತ್ತ, ಮನಸು ಹಗುರಾಯಿತು. ಜಿ.ಎಸ್.ಎಸ್. ಅವರ ಬಗೆಗಿನ ಗೌರವ ಮತ್ತಿಷ್ಟು ಹೆಚ್ಚಾಯಿತು.
ಅಂದ ಹಾಗೆ, ಕನ್ನಡದಲ್ಲಿ ಸಾಹಿತ್ಯ ರಚಿಸಿದ ನಾ. ಕಸ್ತೂರಿಯವರು ಕೇರಳದಲ್ಲಿ ಹುಟ್ಟಿ ಬೆಳೆದವರಾದರೂ ಸಹ ಅವರ ಮನೆಮಾತು ತಮಿಳು ಎಂದು ಎಲ್ಲೋ ಓದಿದ ನೆನಪು.

Badarinath Palavalli said...

ನಾ. ಕಸ್ತೂರಿಯವರು ತಮ್ಮ ಜೀವನದ ಕಡೆಯಲ್ಲಿ ಪುಟ್ಟಭರ್ತಿಯ ಶ್ರೀ ಸತ್ಯ ಸಾಯಿ ವಿಶ್ವವಿದ್ಯಾನಿಲಯದ ಉಪ ಕುಲುಪತಿಯಾಗಿ ಸೇವೆ ಸಲ್ಲಿಸಿದರು ಎನ್ನುವುದು ಕೇಳಿದ್ದೇ.

ಮತ್ತೊಮ್ಮೆ ಸಂಗ್ರಹ ಯೋಗ್ಯ ಬರಹ.